ರಾಮನ ಪ್ರತಿಷ್ಠಾಪನೆ ಮತ್ತು ರಾಮಮಂದಿರದ ಉದ್ಘಾಟನೆ ಬಿಜೆಪಿಯವರ ರಾಜಕೀಯ ಚಾಣಾಕ್ಷತನವೇ ಹೊರತು ದೇಶೋದ್ಧಾರದ ಬದ್ಧತೆಯಲ್ಲ

ಮೂರನೇ ಕಣ್ಣು : ರಾಮನ ಪ್ರತಿಷ್ಠಾಪನೆ ಮತ್ತು ರಾಮಮಂದಿರದ ಉದ್ಘಾಟನೆ ಬಿಜೆಪಿಯವರ ರಾಜಕೀಯ ಚಾಣಾಕ್ಷತನವೇ ಹೊರತು ದೇಶೋದ್ಧಾರದ ಬದ್ಧತೆಯಲ್ಲ : ಮುಕ್ಕಣ್ಣ ಕರಿಗಾರ

ನನ್ನ ಆತ್ಮೀಯರೂ,ಪ್ರಗತಿಪರ ಚಿಂತಕರೂ ರೈತಮುಖಂಡರೂ ಮತ್ತು ಬಿಜೆಪಿಯ ಹಿರಿಯ ಮುಖಂಡರಾಗಿರುವ ಆರ್ ಎಸ್ ಪಾಟೀಲ್ ನಾಗಡದಿನ್ನಿಯವರು ಈ ದಿನ ನನಗೆ ಒಂದು ಮಹತ್ವದ ಪ್ರಶ್ನೆಯನ್ನು ಕೇಳಿದ್ದಾರೆ.ಈ ಪ್ರಶ್ನೆಗೆ ಉತ್ತರಿಸುವುದೋ ಬಿಡುವುದೋ ಎನ್ನುವ ಗೊಂದಲವಿತ್ತು ಬೆಳಿಗ್ಗೆಯಿಂದ.ಯಾಕೆಂದರೆ ಈಗ ರಾಮಮಂದಿರದ ಬಗ್ಗೆ ಯಾರು ಏನೇ ಮಾತನಾಡಿದರೂ ಅದಕ್ಕೊಂದು ಬಣ್ಣ ಕಟ್ಟುವ ಕೆಲಸ ನಡೆಯುತ್ತಿದೆ.ಹಾಗಾಗಿ ಸುಮ್ಮನೆ ಇರುವುದೇ ಬುದ್ಧಿವಂತಿಕೆ ಎಂದು ನಾನು ಇದುವರೆಗೆ ಆ ಬಗ್ಗೆ ಬರೆಯುವ ಗೊಡವೆಗೆ ಹೋಗಿರಲಿಲ್ಲ.ಆದರೆ ಈಗ ಬಿಜೆಪಿಯ ಹಿರಿಯ ಮುಖಂಡರಾದ ಆರ್ ಎಸ್ ಪಾಟೀಲ್ ಅವರೇ ಪ್ರಶ್ನೆ ಕೇಳಿದ್ದರಿಂದ ಮತ್ತು ಅವರು ರಾಮಮಂದಿರದ ಕುರಿತಾದ ನನ್ನ ನಿಲುವನ್ನೇ ಪ್ರಶ್ನಿಸುವಂತಹ ಸಂದೇಶ ಕಳಿಸಿದ್ದರಿಂದ ನಾನು ಉತ್ತರಿಸಲೇಬೇಕಾಗಿದೆ.ಆರ್ ಎಸ್ ಪಾಟೀಲರು ಮತ್ತು ನನ್ನ ನಡುವೆ ನಿಡುಗಾಲದ ಸ್ನೇಹವಿದೆಯಾದ್ದರಿಂದ ಅವರ ಪ್ರಶ್ನೆ ನನ್ನನ್ನು ಪೇಚಿಗೆ ಸಿಲುಕಿಸಲಿಲ್ಲ ಮತ್ತು ನಾನು ಈಗ ಬರೆಯುತ್ತಿರುವ ಉತ್ತರವೂ ಅವರನ್ನು ಕೆರಳಿಸುವುದಿಲ್ಲ.ನಾವಿಬ್ಬರೂ ಪ್ರಬುದ್ಧಭಾರತೀಯರು ಹೇಗಿರಬಹುದು ಎನ್ನುವುದಕ್ಕೆ ಉತ್ತಮ ನಿದರ್ಶನ ಎಂದುಕೊಳ್ಳುತ್ತೇನೆ ನಾನು.ಈ ಲೇಖನವನ್ನು ಓದುವವರು ಮೊದಲೇ ಒಂದು ವಿಷಯವನ್ನು ಸ್ಪಷ್ಟವಾಗಿ ಗಮನಿಸಿ ಲೇಖನ ಓದಬೇಕು,ನಾನೊಬ್ಬ ಪ್ರಬುದ್ಧ ಭಾರತೀಯನೇ ಹೊರತು ಯಾವುದೇ ರಾಜಕೀಯ ಪಕ್ಷದ ತತ್ತ್ವ ಸಿದ್ಧಾಂತಗಳ ಒತ್ತೆ ಆಳು ಅಲ್ಲ.ನನ್ನ ಭಾರತ ಲಕ್ಷಾಂತರ ವರ್ಷಗಳಿಂದ ಪ್ರವಹಿಸುತ್ತ ಬಂದಿರುವ ಜನಸಮೂಹದ,ವಿಚಾರ ಧಾರೆಯ ಭಾರತ.ನನ್ನ ಭಾರತದಲ್ಲಿ ಋಷಿಗಳು ಆಗಿಹೋಗಿದ್ದಾರೆ,ಸಂತರು,ಶರಣರು ,ಮಹಾತ್ಮರುಗಳು ಆಗಿ ಹೋಗಿದ್ದಾರೆ.’ ವಸುದೈವ ಕುಟುಂಬಕಂ’ ಕಲ್ಪನೆಯ ವಿಶ್ವಬಂಧುತ್ವದ ಭಾರತ ನನ್ನದು.ನನ್ನ ಭಾರತದಲ್ಲಿ ರಾಮ ಕೃಷ್ಣರು ಬಂದಿರುವಂತೆ ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ಮೊದಲಾದವರು ಬಂದಿದ್ದಾರೆ.ನನ್ನ ಭಾರತದಲ್ಲಿ ಕಿತ್ತೂರರಾಣಿ ಚೆನ್ನಮ್ಮ,ಸಂಗೊಳ್ಳಿ ರಾಯಣ್ಣ,ಝಾನ್ಸಿರಾಣಿ ಲಕ್ಷ್ಮೀಬಾಯಿ,ಶಿವಾಜಿ ಮೊದಲಾದವರು ಬಂದಂತೆ ಅಶೋಕ,ಅಕ್ಬರ್ ಮತ್ತು ಟಿಪ್ಪು ಸುಲ್ತಾನ್ ಕೂಡ ಬಂದಿದ್ದಾರೆ.ಈ ಎಲ್ಲ ವಿಭಿನ್ನ ನೆಲೆಯ ವ್ಯಕ್ತಿತ್ವಗಳು ಅಖಂಡಭಾರತ ಎನ್ನುವ ಒಂದು ಪರಂಪರೆಯನ್ನು ನಿರ್ಮಿಸಿವೆ; ಪ್ರಬುದ್ಧ ಭಾರತನಿರ್ಮಾಣದ ಕನಸಿಗೆ ಕಸುವನ್ನು ಒದಗಿಸಿವೆ.

ಈಗ ಚಿಂತಕ ಸ್ನೇಹಿತ ಆರ್ ಎಸ್ ಪಾಟೀಲ್ ಅವರ ಪ್ರಶ್ನೆಗೆ ಬರುವೆ.ರಾಮಮಂದಿರ ನಿರ್ಮಾಣವನ್ನು,ರಾಮಲಲ್ಲಾನ ಪ್ರತಿಷ್ಠಾಪನೆಯನ್ನು ಕಾಂಗ್ರೆಸ್ಸಿನವರು ಮತ್ತು ಅದೇ ಮನೋಸ್ಥಿತಿಯವರು ವಿರೋಧಿಸುತ್ತಿದ್ದಾರೆ.ಈ ಮನೋಸ್ಥಿತಿಯವರು ಜನೆವರಿ ೨೨ ರಂದು ಉದ್ಘಾಟನೆಗೊಳ್ಳಲಿರುವ ರಾಮಮಂದಿರವು ದೇಶದ ಅರ್ಥವ್ಯವಸ್ಥೆಗೆ ಬೂಸ್ಟರ್ ಡೋಸ್ ನಂತೆ ಪರಿಣಾಮಕಾರಿಯಾಗಿದ್ದು ನಮ್ಮ ಅರ್ಥವ್ಯವಸ್ಥೆಯನ್ನು ಸುಧಾರಿಸಲಿದೆ,ನಮ್ಮ ಎಕನಾಮಿಯು ಇಪ್ರೂವ್ ಆಗಲಿದೆ ಎನ್ನುವ ಬಗ್ಗೆ ಆಲೋಚಿಸುವುದೇ ಇಲ್ಲ.ಅಯೋಧ್ಯೆಗೆ ಜನೆವರಿ 22 ರಿಂದ ಪ್ರತಿದಿನ ಐದುಲಕ್ಷ ಜನರು ಭೇಟಿ ನೀಡಲಿದ್ದಾರಂತೆ.ಬರಿ ಒಂದು‌ ಲಕ್ಷ ಜನ ಪ್ರವಾಸಿಗರು ತಲಾ 1000 ರೂಪಾಯಿಗಳನ್ನು ಖರ್ಚು ಮಾಡಿದರೆ ವಾರ್ಷಿಕವಾಗಿ ₹3650 ಕೋಟಿ ರೂಪಾಯಿಗಳ ಆದಾಯ ಬರುತ್ತದೆ.ಅಯೋಧ್ಯೆಯ ಮನೆಮನೆಗಳು ಈಗ‌ ಪ್ರವಾಸೋದ್ಯಮಕ್ಕೆ ಸಿದ್ಧಗೊಳ್ಳುತ್ತಿವೆಯಂತೆ.ಅಯೋಧ್ಯೆಯ ಭೂಮಿಗೆ ಚಿನ್ನದ ಬೆಲೆ ಬರಲಿದೆಯಂತೆ,ರಿಯಲ್ ಇಂಡಸ್ಟ್ರಿ ಬೆಳೆಯಲಿದೆಯಂತೆ. ನಿರುದ್ಯೋಗಿ ಯುವಕರುಗಳಿಗೆ ಉದ್ಯೋಗಾವಕಾಶಗಳು ದೊರೆಯಲಿವೆಯಂತೆ.ಇನ್ನು ಏನೇನೋ ಅದ್ಭುತಗಳ ಸ್ವರ್ಗವನ್ನೇ ಸೃಷ್ಟಿಸಲಿದೆಯಂತೆ ಎಂದಿರುವ ಆರ್ ಎಸ್ ಪಾಟೀಲ್ ಅವರು ಈ ಕಾರಣದಿಂದಲೇ ನಮ್ಮ‌ ದೇಶವನ್ನಾಳಿದ ರಾಜ ಮಹಾರಾಜರುಗಳು ಟೆಂಪಲ್ ಎಕನಾಮಿ ರೂಪಿಸಲೆಂದೇ ದೊಡ್ಡದೊಡ್ಡ ದೇವಸ್ಥಾನಗಳನ್ನು‌ಕಟ್ಟಿ ರಾಜ್ಯ ಬೊಕ್ಕಸಕ್ಕೆ ಆದಾಯ ಬರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರಂತೆ.ಆದರೆ ಇತಿಹಾಸಕಾರರು ಇದನ್ನು ಸರಿಯಾಗಿ ಗ್ರಹಿಸಿಲ್ಲವಂತೆ ! ರಾಜ ಮಹಾರಾಜರುಗಳು ಟೆಂಪಲ್ ಎಕನಾಮಿಯನ್ನು ಪ್ರಧಾನಮಂತ್ರಿಯವರು ಟೆಂಪಲ್ ಇಂಡಸ್ಟ್ರಿಯನ್ನಾಗಿ ಪರಿವರ್ತಿಸಿ ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯಿಸಿರುವ ಆರ್ ಎಸ್ ಪಾಟೀಲ್ ಅವರು ‘ ಈ ಕುರಿತು ಕಲ್ಯಾಣ ಅರ್ಥಶಾಸ್ತ್ರಜ್ಞರಾದ ನಿಮ್ಮ ಅಭಿಪ್ರಾಯವೇನು ?’ ಎಂದು ಪ್ರಶ್ನಿಸಿದ್ದಾರೆ.

ಈಗ ನನ್ನ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುವೆ ; ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ರಾಮಮಂದಿರವನ್ನು ಉದ್ಘಾಟಿಸುತ್ತಿದ್ದಾರೆಯೇ ಹೊರತು ರಾಮನ ಮೇಲಿನ ನಿಜ ಭಕ್ತಿಯಿಂದಲ್ಲ.ಬಿಜೆಪಿ,ಆರ್ ಎಸ್ ಎಸ್ ಗಿಂತಲೂ ಪ್ರಬಲ ಹಿಂದುತ್ವದ ಪ್ರತಿಪಾದಕರುಗಳಾಗಿರುವ ಶಂಕರಾಚಾರ್ಯರ ಪರಂಪರೆಯ ಇಬ್ಬರು ಜಗದ್ಗುರುಗಳು ಈಗಾಗಲೇ ಅಪೂರ್ಣಸ್ಥಿತಿಯಲ್ಲಿರುವ ರಾಮಮಂದಿರವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸುತ್ತಿರುವುದು ಶಾಸ್ತ್ರಸಮ್ಮತವಲ್ಲವಾದ್ದರಿಂದ ನಾವು ಅದರಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರಲ್ಲದೆ ಶಂಕರಾಚಾರ್ಯ ಪರಂಪರೆಯ ನಾಲ್ಕು ಜನ ಜಗದ್ಗುರುಗಳಲ್ಲಿ ಯಾರೊಬ್ಬರೂ ಜನೆವರಿ ೨೨ ರ ರಾಮಲಲ್ಲಾನ‌ಪ್ರತಿಷ್ಠಾಪನೆಗೆ ಹಾಜರಾಗುತ್ತಿಲ್ಲ.ಹಾಗೆಂದು ಶಂಕರಾಚಾರ್ಯ ಪರಂಪರೆಯ ಜಗದ್ಗುರುಗಳನ್ನು ಕಾಂಗ್ರೆಸ್ ಮನೋಸ್ಥಿತಿಯವರು,ಎಡವಿಚಾರಧಾರೆಯುಳ್ಳವರು ಎನ್ನಬಹುದೆ ? ರಾಮಮಂದಿರವು ಅಪೂರ್ಣ ಕಟ್ಟಡವಾಗಿದ್ದರಿಂದ ಅದನ್ನು ಅವಸರದಲ್ಲಿ ಉದ್ಘಾಟಿಸುವುದು ‘ಶಾಸ್ತ್ರವಿರೋಧಿ ಕೃತ್ಯ’ ಎಂದರೆ ಅದು ಬಿಜೆಪಿಯ ಚುನಾವಣಾ ತಂತ್ರಗಾರಿಕೆ ಎಂದೇ ಅರ್ಥವಲ್ಲವೆ ? ಒಂದು ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಿಂದೂ ಧರ್ಮದಲ್ಲಿ ಅಷ್ಟು ಗಾಢನಂಬಿಕೆ ಇದ್ದರೆ ಬಿಜೆಪಿ ಪಕ್ಷಕ್ಕೆ ಹಿಂದು ಶಾಸ್ತ್ರ ಸಂಸ್ಕೃತಿಯಲ್ಲಿ ನಿಜ ಬದ್ಧತೆ ಇದ್ದರೆ ಶಂಕರಾಚಾರ್ಯರುಗಳಿಬ್ಬರ ಶಾಸ್ತ್ರಸಮ್ಮತವಲ್ಲದ ಉಪದೇಶವನ್ನು ಕೇಳಿ ರಾಮಮಂದಿರದ ಉದ್ಘಾಟನೆಯನ್ನು ಮುಂದೂಡಬಹುದಿತ್ತು.ಆದರೆ ಹಾಗೆ ಆಗುತ್ತಿಲ್ಲವಲ್ಲ! ಜನೆವರಿ ೨೨ ರಂದು ರಾಮನ ವಿಗ್ರಹದ ಪ್ರತಿಷ್ಠೆಗೆ ಸರ್ವವಿಧದ ಸಿದ್ಧತೆಯನ್ನು ಮಾಡಿಕೊಂಡಿರುವ ಪ್ರಧಾನಮಂತ್ರಿಗಳು ಹನ್ನೊಂದು ದಿನಗಳ ಕಾಲ ಉಪವಾಸ ಇರುವುದಲ್ಲದೆ ನೆಲದ ಮೇಲೆ ಕಂಬಳಿ ಹಾಸಿಕೊಂಡೇ ಮಲಗುತ್ತಿದ್ದಾರಂತೆ !ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದಲೇ‌ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಬಿಜೆಪಿ ಪಕ್ಷದ ಮುಖಂಡರುಗಳು ರಾಮಮಂದಿರದ ಉದ್ಘಾಟನೆಯನ್ನು ಹಮ್ಮಿಕೊಂಡಿದ್ದಾರೆಯೇ ಹೊರತು ಅದರ ಹಿಂದೆ ರಾಮನಲ್ಲಿ ನಿಜಭಕ್ತಿಯಾಗಲಿ,ರಾಷ್ಟ್ರದ ಕಾಳಜಿಯಾಗಲಿ ಇಲ್ಲ.

ಇನ್ನು ಟೆಂಪಲ್ ಎಕನಾಮಿ,ಟೆಂಪಲ್ ಇಂಡಸ್ಟ್ರಿ ಎನ್ನುವುದು ಅರ್ಥಶಾಸ್ತ್ರದ ಓನಾಮ ಗೊತ್ತಿಲ್ಲದ ಮಹಾನುಭಾವರುಗಳು ಟಂಕಿಸಿದ ಪದಗಳು,ಅರ್ಥವ್ಯವಸ್ಥೆಯ ಅಪಮೌಲ್ಯೀಕರಣದ ಪ್ರತೀಕಗಳು.ಅದ್ಯಾರೋ ಪುಣ್ಯಾತ್ಮ ಸ್ವಯಂಘೋಷಿತ ಅರ್ಥಶಾಸ್ತ್ರಜ್ಞ ಸಾವಿರಾರು ಕೋಟಿರೂಪಾಯಿಗಳ ಆದಾಯ ಬರುತ್ತದೆ ಎಂದು ಲೆಕ್ಕಹಾಕಿದನೋ.ಭಾರತದ ಬಜೆಟಿನಲ್ಲಿ ವಾರ್ಷಿಕ ಮೂರುವರೆಸಾವಿರಗಳ ಆದಾಯ ಯಾವ ಲೆಕ್ಕ ? ನಮ್ಮ ದೇಶದಲ್ಲಿ ತಿರುಪತಿ ಅತಿ ಹೆಚ್ಚು ಆದಾಯ ತರುವ ದೇವಸ್ಥಾನವಾಗಿದ್ದರೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನಗಳು ತಿರುಪತಿಯ ನಂತರ ಅತಿಹೆಚ್ಚು ಆದಾಯವನ್ನು ಕೊಡುತ್ತಿರುವ ದೇವಸ್ಥಾನಗಳು.ಹಾಗಂತ ತಿರುಪತಿ,ಕುಕ್ಕೆ ಸುಬ್ರಹ್ಮಣ್ಯ,ಶಿರಡಿಗಳಲ್ಲಿ ಸ್ವರ್ಗವೇನು ಧರೆಗೆ ಇಳಿದಿಲ್ಲವಲ್ಲ ! ಅಲ್ಲೂ ಭಿಕ್ಷುಕರುಗಳಿದ್ದಾರೆ,ಬಡತನ ಇದೆ,ನಿರುದ್ಯೋಗ ಸಮಸ್ಯೆಯೂ ಇದೆ.ನೂರಾರು ವರ್ಷಗಳಿಂದ ಸಾವಿರಾರು ಕೋಟಿಗಳ ಆದಾಯ ಕೊಡುತ್ತ ಬಂದಿರುವ ಈ ಮೂರುದೇವಸ್ಥಾನಗಳ ಆವರಣದ ಸುತ್ತಮುತ್ತಲೇ ನಿರುದ್ಯೋಗವಿದೆ,ಬಡತನವಿದೆ ಎನ್ನುವ ನಗ್ನ ಸತ್ಯವನ್ನು ನೋಡಿಯೂ ಆರ್ ಎಸ್ ಪಾಟೀಲ್ ಅವರ ಪ್ರೀತಿಯ ಅರ್ಥಶಾಸ್ತ್ರಜ್ಞರು ಅಯೋಧ್ಯೆಯಲ್ಲಿ ಅದು ಹೇಗೆ ಸ್ವರ್ಗವನ್ನು ನಿರ್ಮಿಸುತ್ತಾರೋ ! ಪ್ರಧಾನಮಂತ್ರಿ ನರೇಂದ್ರಮೋದಿಯವರು ಕಾಶಿಯಲ್ಲಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದರಲ್ಲ,ಅದರಿಂದ ಕಾಶಿಯಲ್ಲಿ ಲಕ್ಷಗಳ ಲೆಕ್ಕದಲ್ಲಿ ಬೇಡ ಎಷ್ಟು ಸಾವಿರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ? ವಿಶ್ವನಾಥ ಕಾರಿಡಾರಿನಿಂದ ಎಷ್ಟು ಜನ ಬಿಲಿಯನೇರುಗಳಾಗಿದ್ದಾರೆ? ಎಷ್ಟು ಜನ ಮಿಲಿಯನೇರುಗಳಾಗಿದ್ದಾರೆ ? ವಿಶ್ವನಾಥ ಕಾರಿಡಾರ್ ನಿರ್ಮಾಣಕ್ಕಾಗಿ ಇದ್ದ ತುಂಡುಜಾಗವನ್ನು ಕಳೆದುಕೊಂಡವರಿಗೆ ಸಮರ್ಪಕ ಪರಿಹಾರ ನೀಡಿಲ್ಲ ಇದುವರೆಗೂ ! ಸತ್ತಮೇಲೆ ಎಲ್ಲ ಜೀವರುಗಳಿಗೂ ಮೋಕ್ಷಕರುಣಿಸುವ ವಿಶ್ವನಾಥನ ಸನ್ನಿಧಿಯಲ್ಲಿಯೇ ಇದ್ದ ತುಂಡು ನೆಲವನ್ನು ಕಳೆದುಕೊಂಡ ಸಾವಿರಾರು ಕುಟುಂಬಗಳು ನಿತ್ಯನರಕವನ್ನು ಅನುಭವಿಸುತ್ತಿದ್ದಾರೆ.

ಇನ್ನು ಟೆಂಪಲ್ ಎಕನಾಮಿ,ಟೆಂಪಲ್ ಇಂಡಸ್ಟ್ರಿ ಎನ್ನುವುದು ಭಾರತೀಯ ಸಂಸ್ಕೃತಿಗೆ ಮಾಡುತ್ತಿರುವ ಅನ್ಯಾಯ,ಅಪಚಾರ.ಭಾರತದಲ್ಲಿ ಹಿಂದೆ ಎಂದೂ ಈಗಿನಷ್ಟು ಧರ್ಮವು ಅವನತಿಯನ್ನು ಕಂಡಿರಲಿಲ್ಲ,ಆಧ್ಯಾತ್ಮಿಕ ಮೌಲ್ಯಗಳು ಈಗಿನಷ್ಟು ಅಪಮೌಲ್ಯಗೊಂಡಿರಲಿಲ್ಲ.ಭಾರತದಲ್ಲಿ ದೇವಸ್ಥಾನಗಳ ನಿರ್ಮಾಣವು ಸಂಸ್ಕೃತಿಯ ಒಂದು ಅಂಗವಾಗಿ ನಡೆಯಿತೇ ಹೊರತು ಯಾವ ಅರಸರೂ ದೇವಾಲಯಗಳಿಂದ ಆರ್ಥಿಕ ಲಾಭ ನಿರೀಕ್ಷಿಸಿರಲಿಲ್ಲ.ಉದಾತ್ತಮನೋಭಾವದ ರಾಜ ಮಹಾರಾಜರ ಆಲೋಚನೆಗಳು ಇಷ್ಟು ಚಿಲ್ಲರೆ ಆಗಿರಲಿಲ್ಲ.ಯುದ್ಧಗೆದ್ದ ಸಂತಸಕ್ಕೆ ,ಆತ್ಮ ಸಂತೃಪ್ತಿಗೆ ಇಲ್ಲವೆ ಪ್ರಜೆಗಳ ಆರಾಧನೆಗೆ ಅನುಕೂಲವಾಗಲೆಂದು ರಾಜರುಗಳು ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದರೇ ಹೊರತು ಆರ್ ಎಸ್ ಪಾಟೀಲ್ ಅವರ ಸ್ನೇಹಿತ ಬುದ್ಧಿಜೀವಿ(?) ಯೋಚಿಸಿದಂತೆ ದೇವಸ್ಥಾನಗಳಿಂದ ಲಾಭ ಪಡೆಯುವ ವಿಚಾರ ಅವರ ಕನಸಿನಲ್ಲಿಯೂ ಬಂದಿರಲಿಲ್ಲ.ಒಂದು ವೇಳೆ ದೇವಸ್ಥಾನಗಳಿಂದ ರಾಜ ಮಹಾರಾಜರುಗಳು ಲಾಭ ನಿರೀಕ್ಷಿಸಿದ್ದರೆ ದೇವಸ್ಥಾನಗಳಿಗೆ ನೂರಾರು ಎಕರೆಗಳ ಭೂಮಿಯನ್ನು ಏಕೆ ದಾನ ಮಾಡುತ್ತಿದ್ದರು ? ದೇವಸ್ಥಾನಗಳಿಗಾಗಿ ಕೆರೆ ಬಾವಿಗಳನ್ನೇಕೆ ತೋಡಿಸುತ್ತಿದ್ದರು? ದೇವರುಗಳ ನಿತ್ಯ ನೈಮಿತ್ತಿಕ ಪೂಜಾದಿ ಕೈಂಕರ್ಯಗಳಿಗಾಗಿ ಅರ್ಚಕ ಸಮುದಾಯದವರಿಗೆ ಭೂಮಿಯನ್ನೇಕೆ ನೀಡುತ್ತಿದ್ದರು? ದೇವಸ್ಥಾನಗಳುಳ್ಳ ಗ್ರಾಮಗಳ ತೆರಿಗೆಯಲ್ಲಿ ಒಂದು ಭಾಗವನ್ನು ದೇವಸ್ಥಾನಗಳ ಧಾರ್ಮಿಕ ಕಾರ್ಯಗಳಿಗಾಗಿ ಮೀಸಲಿಡುವ ಏರ್ಪಾಟನ್ನು ಏಕೆ ಮಾಡುತ್ತಿದ್ದರು ? ಇತಿಹಾಸಜ್ಞಾನವಿಲ್ಲದ ಅಪ್ರಬುದ್ಧಮತಿಗಳಿಗೆ ಈ ಎಲ್ಲ ಸಂಗತಿಗಳು ಅರ್ಥವಾಗುವುದಿಲ್ಲ.

ರಾಮಮಂದಿರದಿಂದ ಸಾವಿರಾರು ಕೋಟಿ ರೂಪಾಯಿಗಳ ಆದಾಯ ಬರುತ್ತಿದೆ ಸರಕಾರದ ಬೊಕ್ಕಸಕ್ಕೆ ಎಂದು ಲೆಕ್ಕಹಾಕುವ ಮಹಾನುಭಾವರುಗಳ ಆ ಆದಾಯದ ಸಿಂಹಪಾಲು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಪಾಲಾಗುತ್ತಿದೆ ಎಂದು ಆಲೋಚಿಸಿಯೇ ಇಲ್ಲ.ಜಿಎಸ್ಟಿ ಬರುತ್ತದೆ ಎಂದರೆ ಸಾಲದು.ವಿಧಿಸುವ ಜಿ ಎಸ್ ಟಿ ಯಲ್ಲಿ ದೇವಸ್ಥಾನಗಳಿಗೆ ಅರ್ಧದಷ್ಟು ವಿನಾಯತಿ ಇದೆ ! ಅಲ್ಲದೆ ಅಯೋಧ್ಯೆಯಲ್ಲಿನ ಆರ್ಥಿಕ ವ್ಯವಹಾರಗಳನ್ನು ಜಿ ಎಸ್ ಟಿ ಮುಕ್ತಗೊಳಿಸುವ ಆಲೋಚನೆಯೂ ಇದೆಯಂತೆ ! ಪ್ರವಾಸೋದ್ಯಮದ ಹೆಸರಿನಲ್ಲಿ ಸ್ಥಳೀಯರ ಆರ್ಥಿಕ ಜೀವನಮಟ್ಟ ಸುಧಾರಿಸಬಹುದು,ಕೆಲವು ಜನರಿಗೆ ಉದ್ಯೋಗಾವಕಾಶಗಳು ಸಿಗಬಹುದಷ್ಟೆ.ಅಯೋಧ್ಯೆಯು ವ್ಯಾಟಿಕನ್ ಸಿಟಿಯಾಗುತ್ತದೆ,ಮೆಕ್ಕಾ ಮದೀನಾದಂತೆ ಆಗುತ್ತದೆ ಎನ್ನುವುದು ಅವಾಸ್ತವಿಕ,ಭ್ರಮೆಯಷ್ಟೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತು ಬಿಜೆಪಿ ಪಕ್ಷವು ರಾಮಮಂದಿರದ ಉದ್ಘಾಟನೆಯಿಂದ ಲೋಕಸಭಾ ಚುನಾವಣೆಯಲ್ಲಿ ಲಾಭಪಡೆಯುತ್ತಾರೆಯೇ ಹೊರತು ಅದರಿಂದ ಭಾರತದ ಜನಸಾಮಾನ್ಯರಿಗೆ ಯಾವ ಲಾಭವೂ ಇಲ್ಲ.ನರೇಂದ್ರ ಮೋದಿಯವರು ಉಪವಾಸ ಇದ್ದರೆ ಬಡವರ ಹಸಿದ ಹೊಟ್ಟೆಗಳೇನು ತುಂಬುವುದಿಲ್ಲ,ನರೇಂದ್ರ ಮೋದಿಯವರು ರಾಮನಮೂರ್ತಿಯನ್ನು ಪ್ರತಿಷ್ಠಾಪಿಸುವುದರಿಂದ ಈ ದೇಶದ ಬಹುಸಂಖ್ಯಾತ ಜನಸಮುದಾಯಗಳಾದ ಶೂದ್ರರು ದಲಿತರು ಹಿಂದುಳಿದ ಜನಾಂಗಗಳ ದುಸ್ಥಿತಿಯ ಹಣೆಬರಹವೇನೂ ಬದಲಾಗುವುದಿಲ್ಲ.ಬದಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತು ಬಿಜೆಪಿ ನೇತಾರರುಗಳು ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದ್ದಾರೆ.ಜಾತ್ಯಾತೀತ ತತ್ತ್ವವನ್ನು‌ಪ್ರತಿಪಾದಿಸುವ ಸಂವಿಧಾನದ ವಿಧಿ ನಿಯಮಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಪ್ರಧಾನಮಂತ್ರಿಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಿದ್ದಾರೆ.ನರೇಂದ್ರ ಮೋದಿಯವರು ಬಿಜೆಪಿ ಪಕ್ಷದ ಅಗ್ರಗಣ್ಯ ನಾಯಕರು ಮಾತ್ರವಲ್ಲ ಅವರು ಈ ದೇಶದ ಪ್ರಧಾನ ಮಂತ್ರಿಗಳು,ಈ ದೇಶದ ಸಮಸ್ತಜನಕೋಟಿಯನ್ನು ಪ್ರತಿನಿಧಿಸಬೇಕಾದವರು.ರಾಮಮಂದಿರವನ್ನು ಉದ್ಘಾಟಿಸುವ ನರೇಂದ್ರ ಮೋದಿಯವರ ಉತ್ಸಾಹ ಹುಮ್ಮಸ್ಸುಗಳನ್ನು ಅವರನ್ನೊಬ್ಬ ಹಿಂದು ನಾಯಕನನ್ನಾಗಿಸಿವೆಯೇ ಹೊರತು ಸಂವಿಧಾನಬದ್ಧ ಪ್ರಧಾನಿಯನ್ನಾಗಿಸಿಲ್ಲ.ಬಿಜೆಪಿಯರು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ ರಾಮಮಂದಿರವನ್ನು ಉದ್ಘಾಟಿಸುತ್ತಿರುವುದು ಮುಸ್ಲಿಮರ ವಿರುದ್ಧದ ವಿಜಯವೆಂದು ಭಾವಿಸಬಾರದು; ಅದು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ,ಸಂವಿಧಾನವನ್ನು ಕಡೆಗಣಿಸಿ ನಡೆಯುವ ಪ್ರಯತ್ನ ಎಂದು ತಿಳಿದುಕೊಳ್ಳಬೇಕು.

೧೭.೦೧.೨೦೨೪

About The Author