ಕೊಡುವವನು ಹರನೆ,ಕಸಿದುಕೊಳ್ಳುವವನು ಹರನೇ !

ಬಸವೋಪನಿಷತ್ತು ೧೬ : ಕೊಡುವವನು ಹರನೆ,ಕಸಿದುಕೊಳ್ಳುವವನು ಹರನೇ ! : ಮುಕ್ಕಣ್ಣ ಕರಿಗಾರ

ಹರನೀವ ಕಾಲಕ್ಕೆ ಸಿರಿಯು ಬೆನ್ನಲ್ಲಿ ಬರ್ಕು
ಹರಿದು ಹೆದ್ದೊರೆಯೆ ಕೆರೆ ತುಂಬಿದಂದಂತಯ್ಯಾ :
ನೆರೆಯದ ವಸ್ತು ನೆರೆವುದು ನೋಡಯ್ಯಾ !
ಪರಮನಿರಂಜನನೆ ಮರೆದ ಕಾಲಕ್ಕೆ ತುಂಬಿದ ಹರವಿಯ
ಕಲ್ಲುಕೊಂಡಂತೆ,ಕೂಡಲಸಂಗಮದೇವಾ !

ಬಸವಣ್ಣನವರು ಮನುಷ್ಯರಿಗೆ ಸಂಪದೈಶ್ವರ್ಯಗಳನ್ನು ಕೊಡುವವನು ಹರನೇ,ಕಸಿದುಕೊಳ್ಳುವವನೂ ಹರನೇ ಎಂಬುದನ್ನು ಸೊಗಸಾಗಿ ನಿರೂಪಿಸಿದ್ದಾರೆ ಈ ವಚನದಲ್ಲಿ.ಹರನು ತನ್ನ ಭಕ್ತನನ್ನು ಒಲಿದು ಉದ್ಧರಿಸಲು ಸಂಕಲ್ಪಿಸೆ ಸಂಪತ್ತು ಅವನು ಬೇಡಬೇಡವೆಂದರೂ ಅವನ ಬೆನ್ನು ಹತ್ತಿ ಬರುತ್ತದೆ ದೊಡ್ಡತೆರೆಯೇ ಕೆರೆಯತ್ತ ಹರಿದು ಬಂದು ತೋಡಿಸಿದ ಕೆರೆಯನ್ನು ತುಂಬುವಂತೆ.ಶಿವನ ಅನುಗ್ರಹ ಉಂಟಾದಾಗ ಅಸಾಧ್ಯವಾದ ಕೆಲಸ ಕಾರ್ಯಗಳೆಲ್ಲ ಸುಲಭವಾಗಿ ಕೈಗೂಡುತ್ತವೆ,ದುರ್ಲಭ ವಸ್ತುಗಳೆಲ್ಲ ಕರವಶವಾಗುತ್ತವೆ.ಆಳರಸರು ಮತ್ತು ಅರಸನಪರಿವಾರದವರು ಶಿವನೊಲುಮೆಗೆ ಪಾತ್ರನಾದ ಭಕ್ತರನ್ನು ಆದರಿಸುವರಲ್ಲದೆ ದೊರೆತನವೂ ಪ್ರಾಪ್ತವಾಗಬಹುದು.ಆದರೆ ಶಿವನು ಭಕ್ತನನ್ನು ಮರೆತರೆ ತುಂಬಿದ ನೀರಿನ ಕೊಡಕ್ಕೆ ಕಲ್ಲಿನಿಂದ ಹೊಡೆದರೆ ನೀರೆಲ್ಲ ಖಾಲಿಯಾಗುವಂತೆ ಸಂಪತ್ತು ಕರಗಿಹೋಗುತ್ತದೆ ಎನ್ನುವ ಬಸವಣ್ಣನವರು ಹರಕರುಣೆಯನ್ನುಂಡ ಭಕ್ತರು ಪರಮವಿನಯವ್ರತಿಗಳಾಗಿ ಬಾಳುತ್ತ ಶಿವನಿತ್ತ ಸಂಪತ್ತನ್ನು ಸತ್ಕಾರ್ಯಗಳಿಗೆ ಬಳಸಬೇಕು, ಶಿವನಿತ್ತ ಸಂಪತ್ತು ದುರ್ವಿನಿಯೋಗವಾಗೆ,ಅಲ್ಲದ ಕೆಲಸ ಕಾರ್ಯಗಳಿಗೆ ಬಳಸೆ ಶಿವನು ತನ್ನ ಭಕ್ತನನ್ನು ಕಡೆಗಣಿಸುವನು,ಮರೆಯುವನಾದ್ದರಿಂದ ಹರಕರುಣೆಯಿಂದೊದಗಿ ಬಂದ ಸಂಪತ್ತು ತನ್ನಿಂದ ತಾನೇ ಕರಗುತ್ತದೆಯಾದ್ದರಿಂದ ಎಚ್ಚರಿಕೆಯಿಂದ ಇರಬೇಕು ಎನ್ನುವ ಸಂದೇಶ ನೀಡಿದ್ದಾರೆ.

ಶಿವನು ತನ್ನನ್ನು ನಂಬಿದ ಭಕ್ತರ ಬದುಕಿನ ಹೊಣೆಯನ್ನು ತಾನೇ ಹೊರುತ್ತಾನೆ.ಭಕ್ತರ ಕಷ್ಟಗಳನ್ನು ಕಳೆದು ಅವರ ಇಷ್ಟಾರ್ಥಗಳನ್ನೆಲ್ಲ ಈಡೇರಿಸಿ ಪೊರೆವ ಪರಮ ಕರುಣಾಕರ,ಕರುಣಾಸಿಂಧುವು ಶಿವನು.ಶಿವನು ಭಕ್ತರತ್ತ ಅನುಗ್ರಹದೃಷ್ಟಿಯನ್ನು ಬೀರೆ ಭಕ್ತನಿಗೆ ಎಲ್ಲ ರೀತಿಯ ಶುಭಗಳೊದಗುತ್ತವೆ,ಅದುವರೆಗೂ ಅವನನ್ನು ನಿರ್ಲಕ್ಷಿಸಿದ್ದ ಲಕ್ಷ್ಮಿಯು ಶಿವಾನುಗ್ರಹಪಾತ್ರನಾದ ಭಕ್ತನನ್ನು ಹುಡುಕಿಕೊಂಡು ಅವನ ಬೆನ್ನಹಿಂದೆಯೇ ಬರುತ್ತಾಳೆ ಬೇಡಬೇಡವೆಂದರೂ.ಶಿವಭಕ್ತನೊಬ್ಬನು ಒಂದು ಕೆರೆಯನ್ನು ತೋಡಿಸಿದ ಜನರು ಮತ್ತು ದನಕರುಗಳಿಗೆ ಕುಡಿಯುವ ನೀರಿನ್ನು ಒದಗಿಸುವ ಉದ್ದೇಶದಿಂದ.ಆದರೆ ಭೂಮಿಯಲ್ಲಿ ಸೆಲೆ ಚಿಮ್ಮಲಿಲ್ಲವಾದ್ದರಿಂದ ಕೆರೆಯು ನೀರಿಲ್ಲದ ಒಣಕೆರೆಯಾಯಿತು.ಭಕ್ತನು ಆರ್ತನಾಗಿ ಪರಶಿವನನ್ನು ಪ್ರಾರ್ಥಿಸಿದನಂತೆ.ಕೆರೆಗೆ ದೂರದಲ್ಲಿ ಹರಿಯುತ್ತಿದ್ದ ದೊಡ್ಡ ತೊರೆಯೊಂದು ತನ್ನ ಹರಿವನ್ನು ಬದಲಾಯಿಸಿಕೊಂಡು ಶಿವಭಕ್ತನು ಕಟ್ಟಿಸಿದ ಕೆರೆಯತ್ತ ಹರಿದು,ಆ ಕೆರೆಯನ್ನು ತುಂಬಿಸಿತಂತೆ.ಶಿವನ ಅನುಗ್ರಹವಾದರೆ ಸಾಕು ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ‌ ಇರುವುದಿಲ್ಲ.ಶಿವನು ಪ್ರಕೃತಿಪತಿಯಾದುದರಿಂದ ತನ್ನ ಭಕ್ತರ ಬೇಡಿಕೆಗಳನ್ನು ಆಗುಮಾಡಿಕೊಡುವನು.ಅದುವರೆಗೆ ದುರ್ಲಭವೆನಿಸಿದ್ದ ವಸ್ತುಗಳು ಶಿವಾನುಗ್ರಹವಾದ ಮರುಕ್ಷಣದಲ್ಲಿಯೆ ಶಿವಭಕ್ತನ ಮನೆಯಲ್ಲಿರುತ್ತವೆ,ಆಳರಸರು ಮತ್ತವನ ಪರಿವಾರದವರು ಶಿವಭಕ್ತನ ಬಗ್ಗೆ ಆದರಾಭಿಮಾನ ತೋರುವರು. ಸರ್ವಜನಮಾನ್ಯನಾಗುವ ಶಿವಭಕ್ತನಿಗೆ ಅರಸುತನ,ವಿಶೇಷ ಪದವಿ,ಸ್ಥಾನ- ಮಾನಗಳು ದೊರೆಯುತ್ತವೆ.ಶಿವನಿತ್ತ ಸಂಪತ್ತನ್ನು ಶಿವಭಕ್ತನು ಸಮಾಜೋಪಯೋಗಿ ಕೆಲಸ ಕಾರ್ಯಗಳಿಗೆ ಬಳಸಿದರೆ ಆ ಸಂಪತ್ತು ದ್ವಿಗುಣಗೊಳ್ಳುತ್ತ ಹೋಗುವುದು.ಸಂಪತ್ತಿನ ಮದಕ್ಕೊಳಗಾದ ಶಿವಭಕ್ತನು ಶಿವನಿತ್ತ ಸಂಪದವನ್ನು ದುರ್ಬಳಕೆ ಮಾಡಿಕೊಳ್ಳೆ,ತಾಮಸ ವಿಷಯಸುಖಕ್ಕಾಗಿಯೇ ಬಳಸಿದರೆ,ಸತ್ಪುರುಷರಿಗೆ ನೆರವು ದಾನ ನೀಡದಿದ್ದರೆ ಶಿವನು ತನ್ನ ಭಕ್ತನನ್ನು ನಿರ್ಲಕ್ಷಿಸುವನು,ಆಗ ಭಕ್ತನಿಗೆ ಬಂದ ಸಂಪತ್ತು ಬಂದಂತೆಯೇ ಕಾಣೆಯಾಗುವುದು.

ಲೋಕಪ್ರಭುವಾದ ಶಿವನು ಹುಟ್ಟು ಸಾವುಗಳಿರದ ಪರಮಾತ್ಮನಾದ್ದರಿಂದ ಅವನು ತನ್ನ ಭಕ್ತರಮೂಲಕ ತನ್ನ ಜಗದೋದ್ಧಾರದ ಲೀಲೆಯನ್ನಾಡುವನು.ಒಬ್ಬ ಭಕ್ತನನ್ನು ಒಲಿದು ಸಿರಿ ಸಂಪತ್ತುಗಳನ್ನಿತ್ತು ಹರಸುವ ಶಿವನು ತನ್ನ ಭಕ್ತನಿಂದ ಲೋಕಕಲ್ಯಾಣಕಾರ್ಯಗಳು ನೆರವೇರುವುದನ್ನು ಬಯಸುತ್ತಾನೆ.ಶಿವನ ಒಲುಮೆಯನ್ನುಂಡ ಶಿವಭಕ್ತನು ತನಗೆ ಒದಗಿ ಬಂದ ಸಂಪತ್ತನ್ನು ಪೂರ್ಣವಾಗಿ ತಾನೊಬ್ಬನೇ ಅನುಭೋಗಿಸದೆ ತನ್ನ ಕುಟುಂಬಕ್ಕೆ ಬೇಕಾಗುವಷ್ಟನ್ನು ಇಟ್ಟುಕೊಂಡು ಉಳಿದ ಶಿವಸಂಪತ್ತನ್ನು ಸಮಾಜೋಪಯೋಗಿ‌ ಕೆಲಸ- ಕಾರ್ಯಗಳಿಗಾಗಿ ಬಳಸಬೇಕು.ಸಮಾಜದಲ್ಲಿ ನಿರ್ಗತಿಕರಿಗೆ ಆಸರೆಯಾಗಬೇಕು.ಬಡವರ ಮನೆಯಲ್ಲಿ ಜರುಗುವ ಮದುವೆ ಉತ್ಸವಾದಿಗಳಿಗೆ ನೆರವಾಗಬೇಕು,ಬಡವರ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸಬೇಕು,ಬಡವರ ಮನೆಗಳಲ್ಲಿರುವ ವಯೋವೃದ್ಧರು,ಅಶಕ್ತರು ಮತ್ತು ರೋಗಿಗಳಿಗೆ ಸಹಾಯಹಸ್ತನೀಡಬೇಕು.ದೇಹಿ ಎಂದು ಬೇಡಿ ಬಂದ ಶಿವಭಕ್ತರನ್ನು ಇಲ್ಲ ಎಂದು ಅವರನ್ನು ಬರಿಗೈಯಲ್ಲಿ ಕಳಿಸಬಾರದು.ಸಮಾಜಕ್ಕೆ ನೆರವಾಗುವ ಕೆರೆಬಾವಿಗಳನ್ನು ತೋಡಿಸುವ,ಶಾಲೆ ಆಸ್ಪತ್ರೆಗಳನ್ನು ಕಟ್ಟಿಸುವ,ಅನ್ನದಾನ,ವಿದ್ಯಾದಾನಗಳನ್ನೇರ್ಪಡಿಸುವ ಮೂಲಕ ಶಿವಸಂಪತ್ತನ್ನು ಸಮಾಜದ ಒಳಿತಿಗಾಗಿ ವ್ಯಯಿಸಿದರೆ ಶಿವನು ಪರಮಸಂತುಷ್ಟನಾಗಿ ತನ್ನ ಭಕ್ತನಿಗೆ ಅಕ್ಷಯಸಂಪತ್ತನ್ನಿತ್ತು ಆಶೀರ್ವದಿಸುವನು.ಆದರೆ ಶಿವಸಂಪತ್ತಿನ ಮದದಿಂದ ಭಕ್ತನು ದಾರಿತಪ್ಪಿ ಮಾಡಬಾರದುದನ್ನು ಮಾಡುತ್ತ ಹೋದರೆ,ಪರಸ್ತ್ರೀಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಭೋಗಿಸುತ್ತ,ಪರರ ಸ್ವತ್ತನ್ನು ವಾಮಮಾರ್ಗದದಿಂದ ಕಸಿದುಕೊಳ್ಳುತ್ತ,ಸಂಪತ್ತಿನ ಮದದಿಂದ ಸಾಧು ಸತ್ಪುರುಷರನ್ನು ಕಡೆಗಣಿಸಿದರೆ ಶಿವನು ತನ್ನ ಭಕ್ತನಲ್ಲಿ ಕೋಪಗೊಳ್ಳುವನು.ನೀರು ತುಂಬಿದ ಕೊಡಕ್ಕೆ ಕಲ್ಲೇಟು ಬೀಳಲು ಆ ಕೊಡದಿಂದ ನೀರು ಖಾಲಿಯಾಗುವಂತೆ ಶಿವಾನುಗ್ರಹಕ್ಕೆ ತುತ್ತಾದ ಭಕ್ತನ ಮನೆಯಿಂದ ಸಿರಿದೇವಿಯು ಹೊರಟುಹೋಗಿ ಮತ್ತೆ ದಾರಿದ್ರ್ಯ,ಬಡತನಗಳುಂಟಾಗುತ್ತವೆ‌.ಶಿವಭಕ್ತರು ಶಿವನಿತ್ತ ಸಂಪತ್ತಿನಲ್ಲಿ ಸಮಾಜೋದ್ಧಾರದ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಆಸಕ್ತರಾಗಿರಬೇಕು,ಶಿವಭಕ್ತರ ಸೇವೆ,ಅರ್ಚನೆಗಳಿಗೆ ಆ ಸಂಪತ್ತನ್ನು ಉಪಯೋಗಿಸಬೇಕು.ಇದಕ್ಕೆ ಬದಲಾಗಿ ಶಿವನಿತ್ತ ಸಂಪತ್ತನ್ನು ಸ್ವಾರ್ಥಕ್ಕೆ,ದುರಾಚಾರಕ್ಕೆ ವ್ಯಯಿಸಿದರೆ ಸಂಪತ್ತು ಬಂದಂತೆಯೇ ಕರಗಿಹೋಗುತ್ತದೆ ತೂತುಕೊಡದಿಂದ ನೀರು ಹರಿದು ಹೊರಹೋಗುವಂತೆ.ಸಮಾಜದ ಶ್ರೀಮಂತರು,ಉಳ್ಳವರು,ಉದ್ಯಮಿಗಳು ಬಸವಣ್ಣನವರ ಈ ವಚನದ ಉಪದೇಶವನ್ನು ಅರ್ಥಮಾಡಿಕೊಂಡು ತಮ್ಮಲ್ಲಿ ಸಂಗ್ರಹವಾಗಿರುವ ಯಥೇಚ್ಛ ಸಂಪತ್ತಿನಲ್ಲಿ ಒಂದು ಭಾಗವನ್ನಾದರೂ ಬಡವರು,ದುರ್ಬಲರು ಮತ್ತು ನಿರ್ಗತಿಕರ ಏಳಿಗೆಗಾಗಿ ಖರ್ಚು ಮಾಡಬೇಕು .ಶಿವನಿತ್ತ ಸಂಪತ್ತನ್ನು ಇತರರೊಂದಿಗೆ ಹಂಚಿ,ತಿನ್ನಬೇಕು.ಅಂಥವರೇ ನಿಜವಾದ ಶಿವಭಕ್ತರು.ಸಂಗ್ರಹಬುದ್ಧಿಯ ಲೋಭಿಗಳು ಮತ್ತು ವಿಷಯಸುಖವೇ ಜೀವನದ ಸಾರ್ಥಕತೆಯೆಂದು ಭ್ರಮಿಸುವ ದುರಾಚಾರಿಗಳು ಶಿವಾನುಗ್ರಹವನ್ನು‌ಪಡೆಯಲು ಅರ್ಹರಲ್ಲ.

೧೬.೦೧.೨೦೨೪

About The Author