ಭೀಮಕವಿಯ ಕುಲಹಿಡಿದು ಅವರ ಕೊಡುಗೆಯನ್ನು ಕಡೆಗಣಿಸಲಾಗದು !

ಭೀಮಕವಿಯ ಕುಲಹಿಡಿದು ಅವರ ಕೊಡುಗೆಯನ್ನು ಕಡೆಗಣಿಸಲಾಗದು ! : ಮುಕ್ಕಣ್ಣ ಕರಿಗಾರ

ಈ ವರ್ಷವನ್ನು ‘ಬಸವಸಾಹಿತ್ಯ ವರ್ಷ’ ಎಂದು ನಿರ್ಧರಿಸಿ ವರ್ಷವಿಡೀ ಬಸವಣ್ಣನವರ‌ ಕುರಿತು ವಿವಿಧ ಸಾಹಿತ್ಯಕೃತಿಗಳನ್ನು ರಚಿಸುವ ಸಂಕಲ್ಪ ಮಾಡಿದ್ದರಿಂದ ಬಸವಣ್ಣನವರನ್ನು ಕುರಿತಾದ ಎಲ್ಲ ಬಗೆಯ ಸಾಹಿತ್ಯವನ್ನು ಓದುತ್ತಿದ್ದೇನೆ.ಇಂದು ಕನ್ನಡವನ್ನು ಕಟ್ಟಿದ ಹಿರಿಯರಲ್ಲೊಬ್ಬರಾಗಿದ್ದ ಜಿ.ಪಿ.ರಾಜರತ್ನಂ ಅವರ ‘ ಶ್ರೀ ಬಸವೇಶ್ವರರು ಮತ್ತು ಅವರ ಸಮಕಾಲದವರು’ಎನ್ನುವ ಪುಸ್ತಕ ಓದುತ್ತಿದ್ದೆ.ಪುಸ್ತಕದಲ್ಲಿ ಇದುವರೆಗೂ ನನ್ನ ಗಮನಕ್ಕೆ ಬಾರದೆ ಇದ್ದ ಒಂದು ಸಂಗತಿಯು ಗಮನಕ್ಕೆ ಬಂದು ಹರ್ಷಚಿತ್ತನಾದೆ.ಜಿ.ಪಿ.ರಾಜರತ್ನಂ ಅವರು ‘ ಶ್ರೀ ಬಸವೇಶ್ವರರು ಮತ್ತು ಅವರ ಸಮಕಾಲದವರು’ ಎನ್ನುವ ಪುಸ್ತಕವನ್ನು ತಮಿಳಿನ ‘ ವಸವಪುರಾಣಮ್’ ಕೃತಿಯನ್ನು ಆಧರಿಸಿ ಬರೆದಿದ್ದಾರಂತೆ.ಅದರಲ್ಲೇನು ವಿಶೇಷವಿದೆ? ವಿಶೇಷವೆಂದರೆ ಕನ್ನಡದ ರಸ್ತಾಪುರ ಭೀಮಕವಿಯು ಬರೆದ ಬಸವಪುರಾಣವನ್ನು ಆಧರಿಸಿ ತಮಿಳಿನಲ್ಲಿ ‘ ವಸವಪುರಾಣಮ್’ ವನ್ನು ರಚಿಸಲಾಗಿದೆ.ತಮಿಳಿನ ‘ ವಸವಪುರಾಣಮ್’ ಕೃತಿಕಾರನ ಹೆಸರಿನ ಉಲ್ಲೇಖವಿಲ್ಲವಾದರೂ ಆತ ಕನ್ನಡದಲ್ಲಿ ಭೀಮಕವಿಯು ಬರೆದಿರುವ ‘ಬಸವಪುರಾಣ’ ಈ ಕೃತಿಗೆ ಆಧಾರ ಎಂದಿದ್ದಾನೆ.ಕನ್ನಡಿಗರು ನಿರ್ಲಕ್ಷ್ಯಿಸಿದ ಮಹಾನ್ ಪ್ರತಿಭೆಯೊಂದು ತನ್ನ ಅಂತಃಸತ್ತ್ವದಿಂದ ಕನ್ನಡನಾಡಿನಾಚೆಯ ತಮಿಳುಸಾಹಿತ್ಯದಲ್ಲಿ ಪ್ರಭಾವ ಬೀರಿದ್ದು ಗಮನಿಸಬೇಕಾದ ಸಂಗತಿ.

ರಸ್ತಾಪುರ ಭೀಮಕವಿಯ ಬಸವಪುರಾಣವು ಪಾಲ್ಕುರಿಕೆ ಸೋಮನಾಥನ ತೆಲುಗು ‘ ಬಸವಪುರಾಣಮ್’ ಕೃತಿಯನ್ನು ಆಧರಿಸಿದ್ದರೂ ಭೀಮಕವಿ ತಮ್ಮ ಸ್ವತಂತ್ರಪ್ರತಿಭೆಯ ಸೋಪಜ್ಞತೆಯನ್ನು ಮೆರೆದಿದ್ದಾರೆ ‘ಬಸವಪುರಾಣ’ ದಲ್ಲಿ.ಜಾತಿಯಿಂದ ಕುರುಬರಾಗಿದ್ದರೂ ಅವರು ‘ವೀರಶೈವಕವಿಗಳು ‘ಎನ್ನುವಷ್ಟು ವೀರಶೈವ ಶರಣರುಗಳನ್ನು ಕುರಿತು ಷಟ್ಪದಿಯಲ್ಲಿ ಸಾಹಿತ್ಯರಚಿಸಿದ್ದಾರೆ.ದುರಾದೃಷ್ಟವಶಾತ್ ವೀರಶೈವ ಲಿಂಗಾಯತ ಸಮುದಾಯದವರು ರಸ್ತಾಪುರ ಭೀಮಕವಿಯನ್ನು ಸ್ಮರಿಸುವುದಿಲ್ಲ.ಯಾದಗಿರಿ ಮತ್ತು ಶಹಾಪುರಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳ ದ್ವಾರಗಳಿಗೆ ರಸ್ತಾಪುರ ಭೀಮಕವಿಯ ಹೆಸರನ್ನು‌ಇಡದಷ್ಟು ಕುಬ್ಜರಾಗಿದ್ದಾರೆ ಅಲ್ಲಿನ ಸಾಹಿತಿಗಳು ಮತ್ತು ಸಾಹಿತ್ಯ ಸಂಘಟನೆಗಳವರು.ಕಳೆದ ವರ್ಷ ನಡೆದ ಶಹಾಪುರ ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲೂ ರಸ್ತಾಪುರ ಭೀಮಕವಿಯ ಹೆಸರನ್ನು ಯಾವುದೇ ದ್ವಾರಕ್ಕೆ ಇಟ್ಟಿರಲಿಲ್ಲ.ಕುರುಬರ ಸಂಘಟನೆಗಳು ಗಲಾಟೆ ಮಾಡಿದಾಗಲೆ ರಸ್ತಾಪುರ ಭೀಮಕವಿಯ ನೆನಪಾಗಿದೆ ಅಲ್ಲಿನ ಕವಿ ಸಾಹಿತಿಗಳಿಗೆ ಮತ್ತು ಸಾಹಿತ್ಯಪರಿಷತ್ತಿನವರಿಗೆ.ಕುರುಬರು ಪ್ರತಿಭಟಿಸುವವರೆಗೆ ಕಾಯಬೇಕಿತ್ತೆ ಶಹಾಪುರದ ಸಾಹಿತ್ಯಕ ವಲಯ? ಪರಂಪರೆಯ ಪ್ರಜ್ಞೆ ಇಲ್ಲದವರು ಉತ್ತಮ ಸಾಹಿತಿಗಳಲ್ಲ ; ಪರಂಪರೆಯ ಪಥನಿರ್ಮಾಪಕರನ್ನು ಮರೆಯುವ ಸಾಹಿತ್ಯಸಂಘಟನೆಯು ಆದರ್ಶಸಾಹಿತ್ಯಸಂಘಟನೆಯಲ್ಲ.ರಸ್ತಾಪುರ ಭೀಮಕವಿ ಬರೆದ ‘ಬಸವಪುರಾಣ’ ಬಸವಣ್ಣನವರನ್ನು ಅಧ್ಯಯನ ಮಾಡಲು ಇರುವ ಸಾಹಿತ್ಯಕ ದಾಖಲೆಗಳಲ್ಲಿ ಮಹತ್ವದ ದಾಖಲೆ ,ಬಸವಣ್ಣನವರ‌ಕುರಿತಾದ ಸಾಹಿತ್ಯದಲ್ಲಿ ವಿಶಿಷ್ಟ ಮಹತ್ವಪಡೆದ ಕೃತಿ.ಹೀಗಿದ್ದೂ ರಸ್ತಾಪುರ ಭೀಮಕವಿಯ ಕುರುಬ ಕುಲಮೂಲವನ್ನು ಹಿಡಿದುಕೊಂಡು ಆತನ ‘ ಭೀಮಪ್ರತಿಭೆ’ ಯನ್ನು ಸ್ಮರಿಸದೆ ಇರುವುದು,ನಿರ್ಲಕ್ಷಿಸುವುದು ಸುಸಂಸ್ಕೃತ ಮನಸ್ಸುಗಳಿಗೆ ಒಪ್ಪಿಗೆಯಾಗದ ಸಂಗತಿ.ಕಲ್ಯಾಣಕರ್ನಾಟಕದ ಹೆಮ್ಮೆಯ ಕವಿಯಾದ ರಸ್ತಾಪುರ ಭೀಮಕವಿಯನ್ನು ಅವರ ತವರು ತಾಲೂಕಾದ ಶಹಾಪುರದ ಜನತೆಯೇ ಮರೆತಿದ್ದಾರೆ ! ಷಟ್ಪದಿ ಕಾವ್ಯಪ್ರಕಾರ ಮತ್ತು ವೀರಶೈವ ಲಿಂಗಾಯತ ಸಾಹಿತ್ಯ ಪರಂಪರೆಯಲ್ಲಿ ಮರೆಯಲಾರದ ‘ಹಿರಿಯ’ ರಾದ ರಸ್ತಾಪುರದ ಭೀಮಕವಿಗಳು ಬಸವಣ್ಣನವರನ್ನು ತಮಿಳುನಾಡಿಗೆ ಪರಿಚಯಿಸಿ ಮಹದುಪಕಾರ ಮಾಡಿದ ಪುಣ್ಯಜೀವಿಗಳು ಎನ್ನುವ ಹೆಮ್ಮೆಯ ಕಾರಣದಿಂದಲಾದರೂ ಅವರನ್ನು ನಿರ್ಲಕ್ಷಿಸಿದವರು ಈಗ ರಸ್ತಾಪುರದ ಭೀಮಕವಿಯನ್ನು ಸ್ಮರಿಸಬೇಕಿದೆ ಬಸವಪ್ರೀತಿಯ ಕಾರಣದಿಂದಲಾದರೂ.

೧೬.೦೧.೨೦೨೪

About The Author