ಶಿವಯೋಗಿ ಸಿದ್ಧರಾಮ

ಶಿವಯೋಗಿ ಸಿದ್ಧರಾಮ : ಮುಕ್ಕಣ್ಣ ಕರಿಗಾರ

‘ ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳ ಸಿದ್ಧರಾಮನೊಬ್ಬನೆ ಯೋಗಿ’ ಎಂದು ಸೊಡ್ಡಳ ಬಾಚರಸನಿಂದ ಹೊಗಳಿಸಿಕೊಂಡ ಸಿದ್ಧರಾಮ ಕನ್ನಡದ ಮಹತ್ವದ ವಚನಕಾರ,ಶರಣಚಳುವಳಿಯಲ್ಲಿ ತನ್ನದೆ ವಿಶಿಷ್ಟ ವ್ಯಕ್ತಿತ್ವದಿಂದ ಗುರುತಿಸಲ್ಪಟ್ಟ ಶಿವಯೋಗಿ.ಶರಣಚಳುವಳಿಯ ಐವರು ಪ್ರಮುಖ ಶರಣರಲ್ಲೊಬ್ಬ-ಅಲ್ಲಮಪ್ರಭು,ಅಕ್ಕಮಹಾದೇವಿ,ಬಸವಣ್ಣ ಮತ್ತು ಚೆನ್ನಬಸವಣ್ಣನವರುಗಳಂತೆಯೇ ವಚನಚಳುವಳಿಯ ಮಹಾನ್ ನೇತಾರರಲ್ಲೊಬ್ಬರಾಗಿದ್ದುದು ಸಿದ್ಧರಾಮನ ವಿಶೇಷತೆ.

ಸಿದ್ಧರಾಮನ ಬದುಕಿನಲ್ಲಿ ಎರಡು ಘಟ್ಟಗಳಿವೆ.ಧೂಳಿಮಾಕಾಳನೆಂಬ ಮುಗ್ಧಬಾಲಕ ಶ್ರೀಶೈಲ ಮಲ್ಲಯ್ಯನ ಅನುಗ್ರಹವನ್ನುಂಡು ಕರ್ಮಯೋಗಿಯಾಗಿ ಬೆಳೆದು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಎರಡನೇ ಶ್ರೀಶೈಲವಾಗುವಂತೆ ತನ್ನ ಯೋಗಶಕ್ತಿಯ ಬಲದಿಂದ ಮಾರ್ಪಡಿಸಿದ್ದು ಒಂದು ಘಟ್ಟವಾದರೆ ಅಲ್ಲಮಪ್ರಭುದೇವರಿಂದ ಕರ್ಮಪಾಶದ ಜಡರು ತೊಡರುಗಳಿಂದ ಮುಕ್ತರಾಗಿ ನಿರಾಕಾರ ಪರಶಿವನ ನೆಲೆಯನ್ನರಿಯಲು ಕಲ್ಯಾಣಕ್ಕೆ ಬಂದು ಬಸವಣ್ಣನವರ ವ್ಯಕ್ತಿತ್ವದ ಮಹಾಬೆಳಕಿನಲ್ಲಿ ತಾವೂ ಬೆಳಕಾಗಿ ಬೆಳಗಿದ್ದು ಎರಡನೇ ಘಟ್ಟ.ಕಲ್ಯಾಣಕ್ಕೆ ಬಂದ ಸಿದ್ಧರಾಮನಿಗೆ ಪ್ರಭುದೇವರು ಚೆನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಕೊಡಿಸುವ ಮೂಲಕ ಆತನನ್ನು ಲಿಂಗೋಪಾಸಕನನ್ನಾಗಿಸುತ್ತಾರೆ,ವಿಶ್ವಮುಖಿಯಾಗಿಸುತ್ತಾರೆ.ಇಲ್ಲಿ ಒಂದು ಸಂದೇಹವಿದೆ,ಒಂದು ಸಮಸ್ಯೆ ಇದೆ.ಬಾಲಕನಾಗಿದ್ದಾಗಲೇ ಶ್ರೀಶೈಲ ಮಲ್ಲಯ್ಯನ ಅಂದರೆ ಮಲ್ಲಿಕಾರ್ಜುನ ಶಿವನ ಸಾಕ್ಷಾತ್ಕಾರ ಪಡೆದಿದ್ದ ಸಿದ್ಧರಾಮನಿಗೆ ಇಷ್ಟಲಿಂಗ ಧಾರಣೆಯ ಅಗತ್ಯವಿತ್ತೆ ಎನ್ನುವ ಪ್ರಶ್ನೆ ಕಾಡುತ್ತಿದೆ‌.ಆದರೆ ಪ್ರಭುದೇವರು ಸಿದ್ಧರಾಮನ ವ್ಯಕ್ತಿತ್ವವನ್ನು ನಾಡಿಗೆಲ್ಲ ಪರಿಚಯಿಸಬೇಕು,ಅವನನ್ನು ಶುದ್ಧಸಿದ್ಧನನ್ನಾಗಿಸಬೇಕು ಎನ್ನುವ ಉದ್ದೇಶದಿಂದಲೇ ಕಲ್ಯಾಣಕ್ಕೆ ಕರೆತರುತ್ತಾರೆ.ಕಲ್ಯಾಣದ ಶರಣರಿಗೆ ಸಿದ್ಧರಾಮನ ಅಪೂರ್ವ ತೇಜಸ್ಸಿನ ವ್ಯಕ್ತಿತ್ವದ ಪರಿಚಯವಾಗುತ್ತದೆ,ಸಿದ್ಧರಾಮನಿಗೂ ಬಸವಣ್ಣನೆಂಬ ಶಿವಬೆಡಗಿನ ಮಹೋನ್ನತ ವ್ಯಕ್ತಿತ್ವದ ದರ್ಶನವಾಗುತ್ತದೆ,ಬಸವ ಬೆಳಗಿನಲ್ಲಿ ತೊಳಗಿ ಬೆಳಗುತ್ತಿದ್ದ ಪರಿಪೂರ್ಣತೆಯ ಪರಂಜ್ಯೋತಿ ಸ್ವರೂಪರಾಗಿದ್ದ ಶರಣಗಣದ ಪರಿಚಯವೂ ಆಗುತ್ತದೆ.ಬಸವಣ್ಣನು ಶಿವಧರ್ಮದ ಯುಗಬೆಳಕು ಎಂದರಿತಿದ್ದ ಅಲ್ಲಮಪ್ರಭುದೇವರು ಬಿಡಿ ಬಿಡಿಯಾಗಿ ನಾಡಿನ ಅಲ್ಲಲ್ಲಿ ಹರಡಿದ್ದ ಶರಣರನ್ನು ಒಬ್ಬೊಬ್ಬರನ್ನಾಗಿ ಕಲ್ಯಾಣಕ್ಕೆ ಕರೆತಂದಂತೆ ಸಿದ್ಧರಾಮನನ್ನು ಕರೆತರುತ್ತಾರೆ ವ್ಯಷ್ಟಿಪ್ರಭೆಯಿಂದ ಬೆಳಗುತ್ತಿದ್ದ ಸಿದ್ಧರಾಮ ಸಮಷ್ಟಿಪ್ರಭೆಯ ಪರಮನಿರಂಜನನ ಬೆಳಕಿನ ಬೆಡಗಿನ ಒಂದು ಭಾಗವಾಗಲಿ ಎನ್ನುವ ಆಶಯದಿಂದ.ಅಲ್ಲದೆ ಸಿದ್ಧರಾಮನು ಕರ್ಮಯೋಗಿಯಾಗಿ ಸೊನ್ನಲಿಗೆಯಲ್ಲಿ ಗುಡಿ ಗುಂಡಾರ,ಶಿವಾಲಯ ಕೆರೆಗಳನ್ನು ಕಟ್ಟಿಸುತ್ತ ಅದೇ ಸಾರ್ಥಕತೆ ಎಂದು ಬಗೆದಿದ್ದ.’ಶಿವಯೋಗಿಯ ಕಾಯಂ ವೃಥಾಸವೆಯಲಾಗದು’ ಎಂಬ ನಂಬುಗೆಯ ಸಿದ್ಧರಾಮನು ತನ್ನ ಯೋಗಶಕ್ತಿಯಿಂದ ಶಿವಸಮಾಜ ನಿರ್ಮಾಣ ಮಾಡಬೇಕು, ಸರ್ವರಿಗೂ ಉದ್ಧಾರದ,ಉನ್ನತಿಯ ಹಕ್ಕು ಇರಬೇಕು ಎಂದು ಸೊನ್ನಲಿಗೆಯಲ್ಲಿ ಅಷ್ಟಾಷಷ್ಟಿ ತೀರ್ಥಗಳನ್ನು ನಿರ್ಮಾಣ ಮಾಡಿದ್ದಲ್ಲದೆ ಬಡವರ ಮದುವೆ ಮಾಡಿಸುವುದು,ಅವರ ಕುಟುಂಬಗಳ ಸಂಕಷ್ಟಕ್ಕೆ ನೆರವಾಗುವುದು,ರೋಗಿಗಳನ್ನು ತನ್ನಯೋಗಶಕ್ತಿಯಿಂದ ಗುಣಪಡಿಸುವುದು ಇವೇ ಮೊದಲಾದ ಸಮಾಜೋಪಯೋಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದನೆಂಬುದೇನೋ ಸರಿ.ಆದರೆ ತೊಡರು ನಾರಿನದಾದರೇನು,ಬಂಗಾರದ್ದಾದರೇನು ಮುನ್ನಡೆಯಲು ಬಿಡದೆ ನಡೆವಕಾಲುಗಳಿಗಡ್ಡಿಯಾಗುತ್ತದೆ,ಕೆಡಹುತ್ತದೆ.ಕರ್ಮಯೋಗವು ಸಿದ್ಧರಾಮನ ಕಾಲ್ತೊಡಕಾಗಿ ಕಾಡುತ್ತಿರುವುದನ್ನರಿತೇ ಅಲ್ಲಮಪ್ರಭುದೇವರು ಅವನಲ್ಲಿದ್ದ ಅಹಂ ನಿರಸನಗೊಳಿಸಿ ಕಲ್ಯಾಣದತ್ತ ಕರೆತಂದರು.ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದ ಶೂನ್ಯಸಿಂಹಾಸನದ ಮೂರನೆಯ ಅಧಿಪತಿಯಾಗುವ ಮಟ್ಟಿಗೆ ಸಿದ್ಧರಾಮನನ್ನು ಬೆಳೆಸಿದರು ಪ್ರಭುದೇವರು.ಕಲ್ಯಾಣದಲ್ಲಿ ಕ್ರಾಂತಿಯುಂಟಾಗಿ ಶರಣಗಣವೆಲ್ಲ ಚೆಲ್ಲಾಪಿಲ್ಲಿಯಾಗಿ ತೋಚಿದ ದಿಕ್ಕುಗಳತ್ತ ನಡೆದಾಗ ಸಿದ್ಧರಾಮನು ತನ್ನ ಮೂಲಕಾರ್ಯಕ್ಷೇತ್ರವಾದ ಸೊನ್ನಲಾಪುರಕ್ಕೆ ಹಿಂದಿರುಗಿ ಅಲ್ಲಿ ತಾನೇ ಕಟ್ಟಿಸಿದ ಮಲ್ಲಿನಾಥನ ದೇವಾಲಯದ ಆವರಣದಲ್ಲಿಯೇ ಜೀವಂತಸಮಾಧಿಯನ್ನೈದು ಬಯಲಾಗುತ್ತಾನೆ.

ಸಿದ್ಧರಾಮನು ಕನ್ನಡದ ಪ್ರಮುಖ ವಚನಕಾರನೂ ಅಹುದು.ತಾನು ಅರುವತ್ತೆಂಟು ಸಾವಿರ ವಚನಗಳನ್ನು ರಚಿಸಿರುವೆನೆಂದು ಸಿದ್ಧರಾಮನೇ ತನ್ನ ಒಂದು ವಚನದಲ್ಲಿ ಹೇಳಿದ್ದಾನಾದರೂ ಇದುವರೆಗೂ ಆತನ ೧೯೯೨ ವಚನಗಳು ಮಾತ್ರ ದೊರೆತಿವೆ.ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅದೆಷ್ಟೋ ಸಾವಿರ- ಲಕ್ಷವಚನಗಳ ಕಟ್ಟುಗಳು ನಾಶವಾದವು.ಚೆನ್ನಬಸವಣ್ಣನು ಉಳಿದ ವಚನಗಳ ಕಟ್ಟುಗಳೊಂದಿಗೆ ಉಳವಿಯತ್ತ ನಡೆದು ಆ ವಚನಗಳನ್ನು ಸಂರಕ್ಷಿಸಿದ್ದರಿಂದ ಇಂದು ಇಷ್ಟಾದರೂ ವಚನಸಾಹಿತ್ಯ ಲಭ್ಯವಿದೆ.ಸಿದ್ಧರಾಮನು ವಚನಗಳನ್ನಲ್ಲದೆ ಯೋಗದ ಕುರಿತು ‘ ಯೋಗಾಂಗ ತ್ರಿವಿದಿ’ ಯನ್ನು ಸಹ ಬರೆದಿದ್ದಾನೆ.ಸೊನ್ನಲಿಗೆಯಲ್ಲಿದ್ದಾಗ ಕಪಿಲಸಿದ್ಧ ಮಲ್ಲಿಕಾರ್ಜುನನ ಅಂಕಿತದಲ್ಲಿ ವಚನಗಳನ್ನು ಬರೆದಿರುವ ಸಿದ್ಧರಾಮನು ಕಲ್ಯಾಣಕ್ಕೆ ಬಂದ ಬಳಿಕ ಯೋಗಿನಾಥ ಅಂಕಿತದಲ್ಲಿ ವಚನಗಳನ್ನು ಬರೆದಿರಬಹುದು ಎಂದು ಊಹಿಸಲವಕಾಶವಿದೆ.ವಚನಗಳಲ್ಲಿ ಸಿದ್ಧರಾಮನ ಬಹುಮುಖಿ ವ್ಯಕ್ತಿತ್ವ,ಆತನ ಕರ್ತೃತ್ವಶಾಲಿ ವ್ಯಕ್ತಿತ್ವದ ದರ್ಶನವಾದರೆ ಯೋಗದ ಕುರಿತ ವಚನಗಳಲ್ಲಿ ಆತನು ಸಾಧಿಸಿದ ಯೋಗಸಿದ್ಧಿಯ ದರ್ಶನವಾಗುತ್ತದೆ.ಕುಂಡಲಿನಿಯೋಗಮಾರ್ಗದವಿಡಿದು ಸಹಸ್ರಾರ ಚಕ್ರವನ್ನೇರಿದ ಯೋಗಿಯಾತ,ಸಹಸ್ರಾರ ಚಕ್ರದ ಸಹಸ್ರದಳ ಮಧ್ಯದಲ್ಲಿ ಪವಡಿಸಿಪ್ಪ ಪರಶಿವನೊಂದಿಗೆ ಒಂದಾಗಿ ಬೆರೆತದ್ದರಿಂದ ತನ್ನನ್ನು ತಾನು ಯೋಗಿ ಎಂದು ಕರೆದುಕೊಂಡಿದ್ದಾನೆ ಒಂದು ವಚನದಲ್ಲಿ ;
ಭಕ್ತನಾದಡೆ ಬಸವಣ್ಣನಂತಾಗಬೇಕು.
ಜಂಗಮನಾದಡೆ ಪ್ರಭುವಿನಂತಾಗಬೇಕು.
ಭೋಗಿಯಾದಡೆ ನಮ್ಮ ಗುರು ಚೆನ್ನಬಸವಣ್ಣನಂತಾಗಬೇಕು.
ಯೋಗಿಯಾದಡೆ ನನ್ನಂತಾಗಬೇಕು ನೋಡಯ್ಯಾ,
ಕಪಿಲಸಿದ್ಧ ಮಲ್ಲಿಕಾರ್ಜುನ.
ಈ ವಚನದಲ್ಲಿ ತಾನು ಯೋಗಿ ಎನ್ನುವುದು ತನ್ನ ವಿಶೇಷ ಎನ್ನುವುದನ್ನು ವಿವರಿಸಿದ್ದಾನೆ ಸಿದ್ಧರಾಮನು.ಅಂದರೆ ಕಲ್ಯಾಣಕ್ಕೆ ಬರುವ ಪೂರ್ವದಲ್ಲಿಯೇ ಶ್ರೀಶೈಲ ಮಲ್ಲಿಕಾರ್ಜುನನ ಸಾಕ್ಷಾತ್ಕಾರದ ಬಲದಿಂದ ಯೋಗಸಾಮರ್ಥ್ಯವು ಸಹಜವಾಗಿಯೇ ಸಿದ್ಧಿಸಿತ್ತು ಸಿದ್ಧರಾಮನಲ್ಲಿ.ಸಿದ್ಧರಾಮನ ಬದುಕಿನಲ್ಲಿ ಪ್ರತ್ಯಕ್ಷ ಲೀಲೆಯನ್ನೆಸಗುವ ಶ್ರೀಶೈಲ ಮಲ್ಲಿಕಾರ್ಜುನನು ಸಾಧುವಿನ ರೂಪದಲ್ಲಿ ಸೊನ್ನಲಿಗೆಗೆ ಬಂದು,ಮಾತುಬಾರದ ದನಕಾಯುತ್ತಿದ್ದ ಧೂಳಿಮಾಕಾಳನಿಂದ ಜೋಳದ ಸಿಹಿಬೆಳಸೆ ತಿಂದು ಅವನನ್ನು ಮೊಸರು ಕೇಳಿ ತರಲು ಮನೆಗೆ ಕಳಿಸಿ ಮೊಸರಮಗಿಯೊಂದಿಗೆ ಧೂಳಿಮಾಕಾಳನು ಹಿಂದಿರುಗುವಷ್ಟರಲ್ಲಿ ಮರೆಯಾಗುವ ಮಲ್ಲಯ್ಯನು ತನ್ನನ್ನು ಹುಡುಕಿ ಹುಡುಕಿ ಕಾಣದೆ ಶ್ರೀಶೈಲ ಪಾದಯಾತ್ರೆಗೆ ಹೊರಟವರೊಡನೆ ಶ್ರೀಶೈಲಕ್ಕೆ ಬಂದು ಅಲ್ಲಿರುವ ಜ್ಯೋತಿರ್ಲಿಂಗವು ತಾನು ಕಂಡ ಮಲ್ಲಯ್ಯನಲ್ಲವೆಂದು ಮಲ್ಲಯ್ಯ ಮಲ್ಲಯ್ಯ ಎಂದು ಕರೆದೂ ಕಾಣದಾದಾಗ ರುದ್ರಗಮ್ಮರಿಗೆಯ ಹಾರಿದ ಬಾಲಕ ಧೂಳಿಮಾಕಾಳನ ದೃಢಭಕ್ತಿಗೆ ಒಲಿದು ಅವನಿಗೆ ಪ್ರತ್ಯಕ್ಷದರ್ಶನ ನೀಡುವ ಮಲ್ಲಿಕಾರ್ಜುನನು ಧೂಳಿಮಾಕಾಳನಿಗೆ ಹಿಂದಿರುಗಿ ಸೊಲ್ಲಾಪುರಕ್ಕೆ ಹೋಗಿ ಅಲ್ಲಿ ತನ್ನದೇವಸ್ಥಾನ ನಿರ್ಮಿಸಿ,ಲೋಕೋಪಕಾರ ಕಾರ್ಯಗಳೊಂದಿಗೆ ಯೋಗಸಾಧನೆ ಮಾಡಲು ಆಜ್ಞಾಪಿಸಿ ಕಳುಹಿಸುವನು.ಲೋಕರೂಢಿಯಂತೆ ಸಾಧಕನಿಗೊಬ್ಬ ಗುರುವಿರಬೇಕು ಎಂದು ಮಲ್ಲಯ್ಯನೇ ಕೇದಾರದಲ್ಲಿ ಸಾಧನಾ ನಿರತನಾಗಿದ್ದ ಜಂಗಮನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡು ಸೊನ್ನಲಿಗೆಗೆ ತೆರಳಿ ಸಿದ್ಧರಾಮನಿಗೆ ಯೋಗವಿದ್ಯೆಯನ್ನು ಕಲಿಸಿ,ಉದ್ಧರಿಸು ಎಂದು ಆಜ್ಞಾಪಿಸುವನು.ಕೇದಾರದಿಂದ ಸಿದ್ಧರಾಮನನ್ನು ಹುಡುಕಿಕೊಂಡು ಬಂದ ಆ ಯೋಗಸಾಧಕನು ತನ್ನನ್ನು ಕೇದಾರ,ಕೇದಾರಯ್ಯ ಎಂದು ಪರಿಚಯಿಸಿಕೊಂಡು ಸಿದ್ಧರಾಮನಿಗೆ ಯೋಗದೀಕ್ಷೆ ನೀಡಿ ಯೋಗಿಯನ್ನಾಗಿಸುವನು.ಚೆನ್ನಬಸವಣ್ಣನಿಂದ ಲಿಂಗದೀಕ್ಷೆ ಪಡೆಯುವ ಪೂರ್ವದಲ್ಲಿ ಕೇದಾರಗುರುಗಳಲ್ಲಿ ಸಿದ್ಧರಾಮನು ಯೋಗವಿದ್ಯೆಯನ್ನು ಕಲಿತು ಪರಿಣತನಾಗಿದ್ದ.

ಬಸವಣ್ಣನವರಂತೆಯೇ ಸಿದ್ಧರಾಮನ ವಚನಗಳಲ್ಲಿ ಅಂತರ್ನಿರೀಕ್ಷಣೆ ಇದೆ,ಶಿವಕಾರುಣ್ಯಕ್ಕಾಗಿ ತೆರೆದುಕೊಟ್ಟ ಮುಗ್ಧ ಎದೆಯ ಆತ್ಮನಿವೇದನೆ ಇದೆ,ಶರಣಸತಿ ಲಿಂಗಪತಿ ಭಾವವೂ ಇದೆ,ಯೋಗಿಯ ಕೆಚ್ಚಿದೆ,ಸಮಾಜಸುಧಾರಕನ ಹೆಚ್ಚುಗಾರಿಕೆಯೂ ಇದೆ.ಸಮಾಜದಲ್ಲಿದ್ದ ರೂಢಿಯಲ್ಲಿದ್ದ ಮೌಢ್ಯ,ಕಂದಾಚಾರ,ಕಪಟ- ಕುತ್ಸಿತಗಳನ್ನು ಖಂಡಿಸುತ್ತಲೇ ಸಮಾಜಸುಧಾರಣೆಯ ಕಾರ್ಯಕ್ಕೆ ಕೈಹಾಕಿದ್ದ ಸಿದ್ಧರಾಮನದು ಸ್ವಯಂಸಿದ್ಧಯೋಗಪಥವಾದರೆ ಲೋಕೋದ್ಧಾರಕ್ಕೆ ಸ್ವಯಂಸಮರ್ಪಿಸಿಕೊಂಡ ಶಿವಸಿದ್ಧ ಶಿವಬದ್ಧ ಬದುಕು.ಸಮಾಜದ ಅಂಕುಡೊಂಕುಗಳನ್ನು ತಿದ್ದಿ ನೇರ್ಪುಗೊಳಿಸುತ್ತ ನಡೆದ ಸಿದ್ಧರಾಮನು ಅಂದಿನ ಸಮಾಜದಲ್ಲಿ ರೂಢಿಯಲ್ಲಿ ಜಾತಿಯಿಂದ ಹಿರಿಯರು ಕಿರಿಯರು ಎನ್ನುವ ಕೃತ್ರಿಮವನ್ನು ಖಂಡಿಸದೆ ಬಿಡಲಿಲ್ಲ,ಬ್ರಾಹ್ಮಣರ ಹುಸಿಪ್ರತಿಷ್ಠೆಯನ್ನು ನೇರವಾಗಿ ಪ್ರಶ್ನಿಸಿದ್ದಾನೆ ;

ವೇದವನೋದಿ ವೇದಾಧ್ಯಯನವ ಮಾಡಿದಡೇನು
ಬ್ರಾಹ್ಮಣನಾಗಬಲ್ಲನೆ ?
ಬ್ರಹ್ಮವೇತ್ತುಗಳ ಶುಕ್ಲಶೋಣಿತದಿಂದ ಜನಿಸಿದಡೇನು,
ಬ್ರಾಹ್ಮಣನಾಗಬಲ್ಲನೆ ?
ಯಜನಾ( ದಿ ಇ) ಷ್ಟ ಷಟ್ಕರ್ಮಂಗಳ ಬಿಡದೆ ಮಾಡಿದಡೇನು,
ಬ್ರಾಹ್ಮಣನಾಗಬಲ್ಲನೆ ?
‘ ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ’ ಎಂಬ ವೇದವಾಕ್ಯವನರಿದು,
ಬ್ರಹ್ಮಭೂತನಾದಾತನೆ ಬ್ರಾಹ್ಮಣ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.

ವೇದವನ್ನೋದುವುದರಿಂದ ಬ್ರಾಹ್ಮಣತ್ವ ಲಭಿಸದು,ಬ್ರಹ್ಮಜ್ಞಾನಿಗಳಾದ ದಂಪತಿಗಳ ಮಗನಾಗಿ ಹುಟ್ಟಿದರೂ ಬ್ರಾಹ್ಮಣತ್ವವು ಅಳವಡದು.ಹೋಮಹವನಾದಿ ಷಟ್ಕರ್ಮಗಳನ್ನಾಚರಿಸಿಯೂ ಬ್ರಾಹ್ಮಣತ್ವವನ್ನು ಹೊಂದಲು ಸಾಧ್ಯವಿಲ್ಲ.ಬ್ರಹ್ಮಜ್ಞಾನಿಯಾದವನೆ,ಸರ್ವಭೂತಹಿತ ಚಿಂತಕನೇ ಬ್ರಾಹ್ಮಣ ಎನ್ನುವ ಸಿದ್ಧರಾಮನು ಬ್ರಾಹ್ಮಣತ್ವವು ಜಾತಿಯಿಂದಲ್ಲ,ನೀತಿಯಿಂದ, ಸಾಧನೆಯಿಂದ ಎಂದು ಸಾರಿದ್ದಾನೆ.ಗುಣದಿಂದ ಮಾತ್ರಬ್ರಾಹ್ಮಣ್ಯವನ್ನು ಪಡೆಯಬಹುದಲ್ಲದೆ ಜನನದಿಂದ ಬ್ರಾಹ್ಮಣರಾಗಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ವಚನ ;

ಗುಣದಿಂದ ಹಾರುವನಲ್ಲದೆ,ಅಗಣಿತ ವಿಧ್ಯಾಭ್ಯಾಸದಿಂದ ಹಾರುವನಲ್ಲ.
ಹಾರುಬೇಕು ಮಲತ್ರಯಂಗಳ ; ಹಾರಬೇಕು ಸೃಷ್ಟಿ ಸ್ಥಿತಿ ಲಯವ ;
ಹಾರಬೇಕು,ಸರ್ಪಹಾರ ಕಪಿಲಸಿದ್ಧ ಮಲ್ಲಿಕಾರ್ಜುನನ ಆಹಾರದಲ್ಲಿ.

ಬ್ರಾಹ್ಮಣತ್ವವು ಗುಣದಿಂದ ಸಿದ್ಧಿಸುವುದಲ್ಲದೆ ಹುಟ್ಟಿನಿಂದ ಬ್ರಾಹ್ಮಣರಾಗಲು ಸಾಧ್ಯವಿಲ್ಲ.ಆಣವ, ಮಾಯಾ ಮತ್ತು ಕಾರ್ಮಿಕವೆಂಬ ಮೂರು ಬಗೆಯ ಮಲಗಳಿಗಂಟಿಕೊಳ್ಳದೆ ದಾಟಿಹೋಗಬೇಕು,ಉತ್ಪತ್ತಿ ಸ್ಥಿತಿ ಲಯಗಳೆಂಬ ಪ್ರಕೃತಿಧರ್ಮವನ್ನು ಮೆಟ್ಟಿನಿಲ್ಲಬೇಕು,ಶುದ್ಧನಾಗುತ್ತ ನಿತ್ಯಮಡಿಯಾಗುತ್ತ ಪರಿಪೂರ್ಣನೂ ಚಿದ್ಘನನೂ ಆಗಿರುವ ಪರಶಿವನ ಕೊರಳಲ್ಲಿ ಭೂಷಣವಾಗುವ ಹಾವಾಗುವ ವರೆಗೆ ಹಾರುವವನೇ ಹಾರುವನು ಎಂದು ಹಾರುವನಾಗುವ ಬಗೆಯನ್ನು ಬಹುಸೊಗಸಾಗಿ ವಿವರಿಸಿದ್ದಾರೆ.

ಕುಲಮದಮದಿತ ಜನರನ್ನೆಚ್ಚರಿಸಲು ಹುಟ್ಟಿದ ಕುಲದಿಂದ ಯಾರೂ ಹಿರಿಯರಾಗರು,ಸಾಧನೆ- ಸಿದ್ಧಿಗಳಿಂದ ಮಾತ್ರ ಹಿರಿಮೆ ಎನ್ನುವುದನ್ನು,

ಕುಲದಿಂಧಧಿಕವೆಂದು ಹೋರಾಡುವ ಅಣ್ಣಗಳಿರಾ,ಕೇಳಿರಯ್ಯಾ ;
ಬ್ರಾಹ್ಮಣನವ ಮಧುವಯ್ಯ,ಚಂಡಾಲನವ ಹರಳಯ್ಯ,
ದೂರ್ವಾಸನವ ಮಚ್ಚಿಗ,ಊರ್ವಶಿಯಾಕೆ ದೇವಾಂಗನೆ,
ಚಂಡಾಲನವ ಪರಾಶರ,ಕುಸುಮಗಂಧಿಯಾಕೆ ಕಬ್ಬಿಲಗಿತ್ತಿ
‘ ಜಪತಸ್ತಪತೋ ಗುಣತಃ’ ಕಪಿಲಸಿದ್ಧ ಮಲ್ಲಿಕಾರ್ಜುನಾ ಕೇಳಾ,
ಕೇದಾರಯ್ಯ

ಎನ್ನುವ ವಚನದಲ್ಲಿ ಜಪ ತಪ ಧ್ಯಾನ ಗಳಿಂದ ಮಾತ್ರ ಶ್ರೇಷ್ಠರಾಗಬಲ್ಲರು ಎನ್ನುವುದನ್ನು ಸಾರಿದ್ದಾರೆ.

ಕುಲದ ವ್ಯರ್ಥಹಿರಿಮೆಯನ್ನು ಖಂಡಿಸುವ ಮತ್ತೊಂದು ವಚನ ;

ಕುಲವೆಂದು ಹೋರಾಡುವ ಅಣ್ಣಗಳಿರಾ,ಕೇಳಿರೋ :
ಕುಲವೇ ಡೋಹಾರನ ? ಕುಲವೇ ಮಾದಾರನ ?
ಕುಲವೇ ದೂರ್ವಾಸನ ?
ಕುಲವೇ ವ್ಯಾಸನ ? ಕುಲವೇ ವಾಲ್ಮಿಕನ ? ಕುಲವೇ ಕೌಂಡಿಲ್ಯನ ?
ಕುಲವ ನೋಳ್ಪಡೆ ಹುರುಳಿಲ್ಲ ;
ಅವರ ನಡೆಯ ನೋಳ್ಪಡೆ ನಡೆಯುವವರು ತ್ರಿಲೋಕದಲ್ಲಿಲ್ಲ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ.

ಕುಲಾಭಿಮಾನದ ಹುಸಿಪ್ರತಿಷ್ಠೆಯನ್ನು ಮೆರೆಯುವ ಅಣ್ಣಗಳಿರಾ ಶಿವನೊಲುಮೆಗೆ ಪಾತ್ರನಾದ ಡೋಹಾರ ಕಕ್ಕಯ್ಯನ ಕುಲವಾವುದು ? ಶಿವನಿಗೆ ಅಂಬಲಿಯನ್ನುಣ್ಣಿಸಿದ ಮಾದಾರ ಚೆನ್ನಯ್ಯನ ಕುಲವಾವುದು ? ಋಷಿ ದೂರ್ವಾಸನ ಕುಲವಾವುದು ?ವ್ಯಾಸ,ವಾಲ್ಮೀಕಿ,ಕೌಂಡಿಲ್ಯರ ಕುಲವಾವುದು ? ಇವರೆಲ್ಲರೂ ಕುಲದಿಂದ ಕೀಳಾದರೂ ಅವರುಗಳಂತಹ ನಡೆನುಡಿಗಳು ಒಂದಾಗಿದ್ದ ಸತ್ಯಶುದ್ಧವ್ತಕ್ತಿತ್ವವನ್ನಂಗವಿಸಿಕೊಂಬುದು ಮೂರಲೋಕದಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಸಿದ್ಧರಾಮನು ಈ ವಚನದಲ್ಲಿ ವ್ಯಕ್ತಿಯ ಸಾಧನೆಯಿಂದ ಮಾತ್ರ ಆತನಿಗೆ ಹಿರಿಮೆಯೊದಗುತ್ತದೆಯೇ ಹೊರತು ಹುಟ್ಟಿದ ಕುಲದಿಂದಲ್ಲ ಎಂಬ ವಾಸ್ತವವನ್ನು ತೆರೆದಿಟ್ಟಿದ್ದಾನೆ‌.

ಕುಲದಲ್ಲಿ ಹೀನನೆಂದು ಬಗೆದ ವಾಲ್ಮೀಕಿಯು ಸಂಸ್ಕೃತದ ಆದಿಕಾವ್ಯವನ್ನು ಬರೆದ ಆದಿಕವಿ ,ಋಷಿಕವಿಯಾದ; ಕುಲಹೀನನಾದ ದೂರ್ವಾಸನೇ ಮಂತ್ರಗಳನ್ನು ರಚಿಸಿದ.ಬರಿಯ ಕುಲಾಭಿಮಾನದಿಂದ ಕುಲಗೇಡಿಗಳಾಗುತ್ತಾರಲ್ಲದೆ ಮತ್ತೇನನ್ನೂ ಸಾಧಿಸರು ಎನ್ನುವುದನ್ನು ವ್ಯಂಗಿಸುವ ಸಿದ್ಧರಾಮನ ವಚನ ;

ವಾಲ್ಮೀಕನ ಶೇಷಪ್ರಸಾದವೆಲ್ಲ ಸಂಸ್ಕೃತಮಯವಾಯಿತ್ತು ಮರ್ತ್ಯಕ್ಕೆ.
ದೂರ್ವಾಸನ ಉಪದೇಶವೆಲ್ಲ ಚಂಡಾಲರ ಮುನಿಗಳ ಮಾಡಿತ್ತು ಸ್ವರ್ಗಕ್ಕೆ.
ಕುಲವೆಂದಡೆ ಮಲತ್ರಯವು ಬಿಡವು ನೋಡಾ,
ಕಪಿಲಸಿದ್ಧ ಮಲ್ಲಿಕಾರ್ಜುನಾ.

ಸಿದ್ಧರಾಮನು ಬಸವಣ್ಣ,ಚೆನ್ನಬಸವಣ್ಣ ಮತ್ತು ಅಲ್ಲಮ ಪ್ರಭುದೇವರಂತೆ ವೇದಪ್ರಾಮಾಣ್ಯವನ್ನು ಅಲ್ಲಗಳೆದನು; ಶಿವನು ಭಕ್ತಿಗೆ ಒಲಿದು ಓಗೊಡುವ ಭಕ್ತಿಪ್ರಿಯನಲ್ಲದೆ ವೇದಾದಿ ಶಾಸ್ತ್ರಗಳ ಪ್ರಿಯನಲ್ಲ ಎನ್ನುವ ಸಿದ್ಧರಾಮನು ಹೇಳುವುದು ;

ವೇದಪ್ರಿಯನಲ್ಲಯ್ಯಾ ನೀನು ;
ಶಾಸ್ತ್ರಪ್ರಿಯನಲ್ಲಯ್ಯಾ ನೀನು ;
ನಾದಪ್ರಿಯನಲ್ಲಯ್ಯಾ ನೀನು ;
ಸ್ತೋತ್ರಪ್ರಿಯನಲ್ಲಯ್ಯಾ ನೀನು ;
ಯುಕ್ತಿಪ್ರಿಯನಲ್ಲಯ್ಯಾ ನೀನು ;
ಮುಕ್ತಿಪ್ರಿಯನಲ್ಲಯ್ಯಾ ನೀನು ;
ಭಕ್ತಿಪ್ರಿಯನೆಂದು ನಂಬಿದೆ,ಮರೆವೊಕ್ಕೆ
ಕಾಯಯ್ಯಾ ನೀನು,ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.

ಶಿವನಲ್ಲಿ ಅನನ್ಯವಾದಭಕ್ತಿಯನ್ನಾಚರಿಸುವುದರಿಂದ ಮಾತ್ರವೇ ಮೋಕ್ಷ ಎನ್ನುವ ಸಿದ್ಧರಾಮನು ವೇದವಾದಿ ಶಾಸ್ತ್ರಗಳ ಪಠಣೆಯು ನಿಷ್ಪ್ರಯೋಜಕವಾದುದು ಎನ್ನುವುದನ್ನು ಸಾರಿರುವ ವಚನ ;

ವೇದಪ್ರಿಯನಾದಡೆ ಛಿದ್ರಿಸುವೆಯಾ ಬ್ರಹ್ಮನ ಮಸ್ತಕವ ?
ಶಾಸ್ತ್ರಪ್ರಿಯನಾದಡೆ ಒಳಗುಮಾಡುವೆಯಾ ಶಬ್ದಕ್ಕೆ ?
ಮುಕ್ತಿಪ್ರಿಯನಾದಡೆ ಭವಕ್ಕೆ ತರುವೆಯಾ ಎನ್ನ ?
ಭಕ್ತಿಪ್ರಿಯನಾದಲ್ಲಿ ಒಯ್ಯಲಿಲ್ಲವೆ ಬೇಡನ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.

ಶಿವನು ವೇದಪ್ರಿಯನಾಗಿದ್ದರೆ ವೇದಹಸ್ತನಾದ ಬ್ರಹ್ಮನ ತಲೆಯನ್ನು ಭೈರವನಿಂದ ಕಡಿಸುತ್ತಿರಲಿಲ್ಲ.ಶಾಸ್ತ್ರಪ್ರಿಯಶಿವನೆಂದರದು ಶಬ್ದದ ಹಂಗು.ಮುಕ್ತಿಪ್ರಿಯ ಶಿವನೆಂದಾದರೆ ನನ್ನನ್ನು ಮತ್ತೆ ಭವಕ್ಕೆ ತರಬೇಡ.ಮುಗ್ಧಭಕ್ತಿಯನ್ನಾಚರಿಸಿದ ಬೇಡರ ಕಣ್ಣಪ್ಪನನ್ನು ಶಿವಗಣರುಗಳು ಕೈಲಾಸಕ್ಕೆ ಕರೆದೊಯ್ದರು ಎಂದು ಭಕ್ತವತ್ಸಲನಾದ ಶಿವಮಹಿಮೆಯನ್ನು ಈ ವಚನದಲ್ಲಿ ಸಾರಿದ್ದಾರೆ ಸಿದ್ಧರಾಮ.

ಮುಂದುವರೆದು ಸಿದ್ಧರಾಮನು ನಾನಾವಿಧವಾದ ಶಾಸ್ತ್ರಜ್ಞಾನವು ಬರಿಯ ಓದಾಯಿತ್ತಲ್ಲದೆ ಅದು ಮುಕ್ತಿಯ ಸಾಧನವಾಗಲಿಲ್ಲ ಎಂದು ಸಾರಿದ ವಚನವು ;

ಸಿದ್ಧಾಂತಿಯ ಜ್ಞಾನ ಸಾಧನೆಯಲ್ಲಿ ಹೋಯಿತ್ತು.
ವೇದಾಂತಿಯ ಜ್ಞಾನ ವಾದದಲ್ಲಿ ಹೋಯಿತ್ತು.
ಕ್ರಿಯಾವಂತನ ಜ್ಞಾನ ನುಡಿಯಲ್ಲಿ ಹೋಯಿತ್ತು.
ವ್ಯವಹಾರಿಕನ ಜ್ಞಾನ ದ್ರವ್ಯಾರ್ಜನೆಯಲ್ಲಿ ಹೋಯಿತ್ತು .
ಇವೆಲ್ಲ ಭವಕ್ಕೆ ಕಾರಣವಲ್ಲದೆ,
ಭವರಹಿತ ಜ್ಞಾನವು ಸಾಧ್ಯವಾಗುವುದದು ದುರ್ಲಭವಯ್ಯಾ,
ಕಪಿಲಸಿದ್ಧ ಮಲ್ಲಿಕಾರ್ಜುನಾ.

ವೇದ ಪುರಾಣ,ಶಾಸ್ತ್ರ ಆಗಮಗಳು ಪ್ರಮಾಣವಲ್ಲ,ಚಂದ್ರ ಸೂರ್ಯಾದಿ ಗ್ರಹಗಳು ದೇವರಲ್ಲ ಇವೆಲ್ಲವೂ ವಿಶ್ವಪತಿಯಾದ ವಿಶ್ವೇಶ್ವರನ ವಿಶ್ವನಿಯತಿಯ ಅಂಕೆಗೆ ಒಳಗಾಗಿರ್ಪವು.ಶಿವನೊಬ್ಬನೇ ಸರ್ವತಂತ್ರ ಸ್ವತಂತ್ರನಾಗಿರುವ ಪರಮೇಶ್ವರನು ಎನ್ನುವುದನ್ನು ನಿದರ್ಶನಗಳ ಸಹಿತ ವಿವರಿಸಿದ್ದಾರೆ ಸಿದ್ಧರಾಮರು ;

ವೇದಂಗಳು ದೈವವಾದಡೆ ಕುಕ್ಕುರ ಕುದುರೆಗಳಾಗಲೇಕೋ ?
ಶಾಸ್ತ್ರಂಗಳು ದೈವವಾದಡೆ ಹೊರಜು ಕಣ್ಣಿಗಳಾಗಲೇಕೋ ?
ಆಗಮಂಗಳು ದೈವವಾದಡೆ ಕೀಲುಗುಣಿಕೆಗಳಾಗಲೇಕೋ ?
ಪುರಾಣಂಗಳು ದೈವವಾದಡೆ ಅಚ್ಚು ಹೊರಜೆಯಾಗಲೇಕೋ ?
ಚಂದ್ರಸೂರ್ಯರು ದೈವವಾದಡೆ ಗಾಲಿಗಳಾಗಲೇಕೋ ?
ಇವ ಹಿಡಿದಾಡಿ ಭಜಿಸಿ ಪೂಜೆಮಾಡಿದವರು ದೈವವಾದಡೆ,
ಪುಣ್ಯ- ಪಾಪಕ್ಕೀಡಾಗಲೇಕೋ ?
ಇದು ಕಾರಣ,ವೇದಗಳು ದೈವವಲ್ಲ,ಶಾಸ್ತ್ರಂಗಳು ದೈವವಲ್ಲ,
ಆಗಮಂಗಳು ದೈವವಲ್ಲ,ಪುರಾಣಂಗಳು ದೈವವಲ್ಲ,
ಚಂದ್ರ ಸೂರ್ಯರು ದೈವವಲ್ಲ,ಆತ್ಮನು ದೈವವಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ,ನೀನೊಬ್ಬನೇ ದೈವ.

ವೇದ ಅಪೌರುಷೇಯ,ಸ್ವಯಂಭು ಎನ್ನುವುದನ್ನು ಸ್ಪಷ್ಟವಾಗಿ ನಿರಾಕರಿಸುವ ಸಿದ್ಧರಾಮನ ಗಟ್ಟಿನುಡಿ,ದಿಟ್ಟ ಉತ್ತರ ;

ವೇದ ಪಾಠಕರೆಲ್ಲಾ ಕೇಳಿಭೋ !
ವೇದ ಸ್ವಯಂಭು ಎನಲೊಡನೆ ಅಯ್ಯಾ
ಎನ್ನ ಎದೆ ಝಲ್ಲೆಂದವಯ್ಯ.
ಎಲೆ ಅಜ್ಞಾನಿ ಕೇಳು,
ಕಪಿಲಸಿದ್ಧ ಮಲ್ಲಿಕಾರ್ಜುನ ಒಬ್ಬನೆ ಸ್ವಯಂಭು.

ಸಿದ್ಧರಾಮನು ಜನರ ಡಾಂಬಿಕ ನಡೆನುಡಿಗಳನ್ನು ಕಟುವಾಗಿ ನಿಂದಿಸುತ್ತಿದ್ದ.ಗಂಗಾನದಿಯು ಪವಿತ್ರನದಿ ಎಂದೂ ಅದರಲ್ಲಿ ಮಿಂದವರೆಲ್ಲ ಪರಿಶುದ್ಧಾತ್ಮರಾಗಿ ಸ್ವರ್ಗ ಸೇರುವರು ಎನ್ನುವ ನಂಬಿಕೆಯು ಅರ್ಥಹೀನ,ಅಪಕ್ವಮತಿಗಳಾಡುವ ಮಾತು ಎನ್ನುವುದನ್ನು ವಿಡಂಬಿಸುವ ವಚನವಿದು ;

ಗಂಗೆಯ ಘನ ಮುಟ್ಟಿದ ಪ್ರಾಣಿಗಳೆಲ್ಲಾ ದೇವತೆಗಳೆಂದಡೆ,
ಗಂಗೆಯ ಸಂಚಾರ ಸಾವಿರಾರು ಗಾವುದ.
ಅದರಲ್ಲಿಯ ಪ್ರಾಣಿಗಳು ಅನಂತಾನಂತ.
ಇಷ್ಟು ಜೀವಿಗಳೆಲ್ಲಾ ದೇವರಾದಡೆ,
ಸ್ವರ್ಗದಲ್ಲಿ ನಿಯಮಿತ ದೇವತೆಗಳೆಂಬುದು ಅಪ್ರಸಿದ್ಧ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ.

ಗಂಗಾನದಿಯಲ್ಲಿ ಮಿಂದವರಿಗೆಲ್ಲ ಸ್ವರ್ಗ ಪ್ರಾಪ್ತಿಯಾಗುವಂತಿದ್ದರೆ,ಗಂಗಾನದಿಯು ನೂರಾರು ಮೈಲುಗಳ ದೂರ ಹರಿಯುತ್ತದೆ,ಅದರಲ್ಲಿ ಲೆಕ್ಕವಿಲ್ಲದಷ್ಟು ಜಲಚರ ಜೀವಿಗಳಿವೆ.ಅಷ್ಟೂ ಜೀವಿಗಳು ಸ್ವರ್ಗಕ್ಕೆ ಹೋದರೆ ಸ್ವರ್ಗದಲ್ಲಿರುವ ಮುವ್ವತ್ತುಮೂರು ದೇವತೆಗಳಿಗೆ ಕುಳಿತುಕೊಳ್ಳಲು ಜಾಗವಾದರೂ ಎಲ್ಲಿ ಎಂದು ಪ್ರಶ್ನಿಸುವ ಸಿದ್ಧರಾಮರು ಇವೆಲ್ಲ ಸುಳ್ಳಿನ‌ಕಥೆಗಳು ಎಂದು ಹೇಳುತ್ತಾರೆ.

ಅಂತಹದೆ ಮತ್ತೊಂದು ನಂಬಿಕೆಯು ಜನರ ರೂಢಿಯಲ್ಲಿದೆ ; ಗಂಗಾನದಿಯಲ್ಲಿ ಮಿಂದರೆ ಪಾಪಮುಕ್ತರಾಗಿ ಸ್ವರ್ಗ ಸೇರುತ್ತಾರೆ.ಗಂಗೆಯು ಪಾಪಗಳನ್ನು ಕಳೆದು ಪರಿಶುದ್ಧರನ್ನಾಗಿಸಿ ಸದ್ಗತಿಯನ್ನು ಕರುಣಿಸುವ ದೇವನದಿ ಎನ್ನುವ ನಂಬಿಕೆಯ ಟೊಳ್ಳುತನವನ್ನು ಸಿದ್ಧರಾಮರು ಪ್ರಶ್ನಿಸುವ ಪರಿ ;

ಗಂಗೆಯ ಮುಳುಗಿ ಬಂದವರೆಲ್ಲಾ ಪಾಪವ ಮಾಡಿ ಸತ್ತಡೆ,
ಅವರಿಗೆ ಪುಣ್ಯದ ಪದವಿಯುಂಟಾದಡೆ,ಗಂಗೆ ಘನವೆಂಬೆ.
ಮುಳುಗಿ ಪಾಪವ ಮಾಡದೆ ಸತ್ತುಹೋದಡೆ,
ಪುಣ್ಯದ ಪದವಿಯುಂಟಾದಡೆ ಘನವೆಂಬೆ,
ಕಪಿಲಸಿದ್ಧ ಮಲ್ಲಿಕಾರ್ಜುನಾ.

ಪರರ ಮನನೋಯಿಸುವ ಪಾಪಾತ್ಮರುಗಳು ಗಂಗಾನದಿಯಲ್ಲಿ ಮಿಂದರೆ ಪರಿಶುದ್ಧರಾಗುವುದಿಲ್ಲ.ಮತ್ತೊಬ್ಬರ ಮನವ ನೋಯಿಸಿದವನೆ ಹಿರಿಯನು,ಮತ್ತೊಬ್ಬರಿಗೆ ಮೋಸವೆಸಗದವನೆ ಪರಿಶುದ್ಧನು ಎನ್ನುತ್ತಾರೆ ಸಿದ್ಧರಾಮರು ;

ಒಬ್ಬರ ಮನವ ನೋಯಿಸಿ,
ಒಬ್ಬರ ಮನವ ಘಾತವ ಮಾಡಿ,
ಗಂಗೆಯ ಮುಳುಗಿದಡೇನಾಗುವುದಯ್ಯಾ ?
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು ? ಕಲಂಕ ಬಿಡದಾಯಿತ್ತಯ್ಯಾ.
ಅದು ಕಾರಣ,ಮನವ ನೋಯಿಸದವನೆ,ಒಬ್ಬರ ಘಾತವ ಮಾಡದವನೆ
ಪರಮಪಾವನ ನೋಡಾ,ಕಪಿಲಸಿದ್ಧಮಲ್ಲಿಕಾರ್ಜುನಾ.

ವಿದ್ಯೆಯಲ್ಲಿ ಪರಾವಿದ್ಯೆ ಮತ್ತು ಅಪರಾವಿದ್ಯೆ ಎಂದು ಎರಡು ತೆರನುಂಟು.ಲೌಕಿಕ ವಿದ್ಯೆಯಾವುದು,ಅಲೌಕಿಕ ವಿದ್ಯೆಯಾವುದು ಎಂದು ನಿಶ್ಚಯಿಸಲರಿಯದೆ ಬ್ರಾಹ್ಮಣರು,ಪುರೋಹಿತರುಗಳು ರಾಮಾಯಣ- ಮಹಾಭಾರತಗಳನ್ನೇ ವಿದ್ಯೆ ಎಂದು ಬಿಂಬಿಸಿದರು.ಇದರ ಕುಟಿಲವನ್ನು ಸಿದ್ಧರಾಮರು ಕೆಡೆನುಡಿಯುತ್ತಾರೆ ;

ವಿದ್ಯೆ ಎಂದಡೆ ಭಾರತ – ರಾಮಾಯಣವಲ್ಲ.
ಭಾರತವೆಂದಡೆ ಭರತದೇಶದಲ್ಲಿ ಜನಿಸಿ,
ಕಾಮಿನಿಯರ ಸೋಗುಹಾಕಿ, ಆ ದೇಶಕ್ಕಧಿಪತಿಯಾದ ಕಥೆಯೇ ಭಾರತವಯ್ಯಾ.
ರಾಮಾಯಣವೆಂದಡೆ,ಆದಿನಾರಾಯಣನು ಪೃಥ್ವಿಯೊಳು ಹುಟ್ಟಿ,
ರಾಮನೆಂಬಭಿಧಾನವ ಧರಿಸಿ,ಸರ್ವರಂತೆ ಪ್ರಪಂಚವ ಮಾಡಿ,
ರಾಕ್ಷಸರ ಗರ್ವವನಳಿದುದೆ ರಾಮಾಯಣ.
ಮಾಡಿ ಉದ್ಧಟವಾದಲ್ಲಿ ಕಾಲಾಂತರದಲಾದರೂ
ಕುರುಹಿನೊಳಗಾದವಯ್ಯಾ,ಕಪಿಲಸಿದ್ಧಮಲ್ಲಿಕಾರ್ಜುನಾ.

ಸಿದ್ಧರಾಮನ ಶಿವಯೋಗದ ಕೆಚ್ಚು ನೆಚ್ಚು ಸಿದ್ಧರಾಮನೊಬ್ಬನಿಗೇ ಸಾಧ್ಯವಾಗುವಂತಹದ್ದು.ಶಿವಯೋಗಿಯಾದ ತನ್ನ ವಚನಕ್ಕೆ ಪುರಾಣ,ಪಾರಾಯಣ,ಗಾಯತ್ರಿ ಜಪಕೂಡ ಸರಿದೊರೆಯಾಗದು ಎನ್ನುತ್ತಾನೆ ;

ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ.
ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರೀಯಯಾಗ ಸಮಬಾರದಯ್ಯಾ
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮಬಾರದಯ್ಯಾ,
ಕಪಿಲಸಿದ್ಧ ಮಲ್ಲಿಕಾರ್ಜುನಾ.

ಶಿವಯೋಗಸಾಧನೆಯ ಬಲದಿಂದ ತಾನು ಪರಶಿವನ ಬಯಲ ನಿರಂಜನವ್ಯಕ್ತಿತ್ವವನ್ನು ಅಳವಡಿಸಿಕೊಂಡ ನಾಮ ರೂಪ ಕ್ರಿಯೆ ಕಳೆಗಳೆಂಬ ಉಪಾಧಿರಹಿತನಾದ್ದರಿಂದ ನನ್ನ ಪುರಾಣಕ್ಕೆ,ನನ್ನ ಚರಿತೆಗೆ ಹೆಸರಿನ ಹಂಗಿಲ್ಲ ಎನ್ನುವ ಸಿದ್ಧರಾಮರ ವಚನ ;

ಎಲ್ಲ ಪುರಾಣಕ್ಕೆ ಹೆಸರುಂಟು,ನಮ್ಮ ಪುರಾಣಕ್ಕೆ ಹೆಸರಿಲ್ಲ ನೋಡಯ್ಯಾ.
ಲಿಂಗದ ಮಹತ್ವವ ಹೇಳಿದಲ್ಲಿ ಲಿಂಗಪುರಾಣವೆನಿಸಿತ್ತು.
ಷಣ್ಮುಖನ ಮಾಹಾತ್ಮವ ಹೇಳಿದಲ್ಲಿ ಸ್ಕಂದಪುರಾಣವೆನಿಸಿತ್ತು.
ವೀರಭದ್ರನ ಮಾಹಾತ್ಮ್ಯವ ಹೇಳಿದಲ್ಲಿ ದಕ್ಷಖಂಡವೆನಿಸಿತ್ತು.
ಶಿವನ ಮಹಿಮೆ,ಕಾಶೀಮಹಿಮೆಯ ಹೇಳಿದಲ್ಲಿ
ಶಿವಪುರಾಣ ಕಾಶೀಕಾಂಡವೆನಿಸಿತ್ತು.
ಪಾರ್ವತಿಯ ಮಹಾತ್ವ್ಯವ ಹೇಳಿದಲ್ಲಿ ಕಾಳೀಪುರಾಣವೆನಿಸಿತ್ತು.
ನಮ್ಮ ಪುರಾಣ ಹೆಸರಿಡಬೇಕೆಂದಡೆ,
ನಿಶ್ಯಬ್ದ ನಿರವಯಲ ಪುರಾಣ ತಾನೆಯಾಯಿತ್ತು ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ.

ಬಸವಣ್ಣನವರ ಹೆಸರು ಕೇಳಿದಾಕ್ಷಣ ಭಾವಪರವಶರಾಗುವ ಬಸವಭಕ್ತಿಯು ಶಿವಯೋಗಿ ಸಿದ್ಧರಾಮನದು.ಬಸವಣ್ಣನವರ ಮಹಿಮಾತಿಶಯವನ್ನು ಇಪ್ಪತ್ತಕ್ಕೂ ಹೆಚ್ಚು ವಚನಗಳಲ್ಲಿ ಸ್ತುತಿಸಿದ್ದಾರೆ.ಅವುಗಳಲ್ಲಿ ಕೆಲವು ಮಾತ್ರ ;

ಬಸವಣ್ಣನೇ ತಾಯಿ,ಬಸವಣ್ಣನೇ ತಂದೆ,
ಬಸವಣ್ಣನೇ ಪರಮಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನಾ,
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.

ಬಸವಾ ಬಸವಾ,ನಿಮ್ಮಿಂದ ಕಂಡೆನಯ್ಯಾ ಭಕ್ತಿಯ.
ಬಸವಾ ಬಸವಾ,ನಿಮ್ಮಿಂದ ಕಂಡೆನಯ್ಯಾ ಜ್ಞಾನವ.
ಬಸವಾ ಬಸವಾ,ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ,
ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮಗೂ ಎನಗೂ ಬಸವಣ್ಣನೇ ಶಿವಪಥಿಕನಯ್ಯಾ.

‘ ಹರಬಸವಾಯ ನಮಃ ‘ ಎಂದು ಪಾಪದೂರನಾದೆ.
‘ ಗುರುಬಸವಾಯ ನಮಃ ‘ ಎಂದು ಭವದೂರನಾದೆ.
‘ ಲಿಂಗಬಸವಾಯನಮಃ’ ಎಂದು ಲಿಂಗಾಂಕಿತನಾದೆ.
‘ ಜಂಗಮ ಬಸವಾಯ ನಮಃ’ ಎಂದು
ನಿಮ್ಮ ಪಾದಕಮಲದಲ್ಲಿ ಭ್ರಮರನಾದೆ.
ಏಳಾ ಸಂಗನ ಬಸವ ಗುರು ಕಪಿಲಸಿದ್ಧ ಮಲ್ಲಿಕಾರ್ಜುನ ಸ್ವಾಮಿಯೆ.

ಜಗತ್ತೆಲ್ಲವೂ ಶಿವಮಯ,ಶಿವನೇ ಜಗದಾದಿ ಕರ್ತನು,ಶಿವನಲ್ಲದೆ ಮತ್ತೊಬ್ಬ ದೇವರು ಪರಮಾತ್ಮನಿಲ್ಲ ಎನ್ನುವುದನ್ನು ಬಹಳಷ್ಟು ವಚನಗಳಲ್ಲಿ ಸಾರಿರುವ ಸಿದ್ಧರಾಮನು ಪಂಚಭೂತಾತ್ಮಿಕವಾದ ಈ ಪ್ರಪಂಚವು ಪಂಚಮುಖನಾದ ಪರಶಿವನ ಲೀಲೆ ಎಂದು ನಿರ್ಣಯಿಸಿದ ವಚನ ಒಂದನ್ನು ಉದಾಹರಿಸುವ ಮೂಲಕ ಸಿದ್ಧರಾಮರನ್ನು ಕುರಿತಾದ ಈ ವ್ಯಕ್ತಿಚಿತ್ರಣವನ್ನು ಮುಗಿಸಬಹುದು ;

ಮಣ್ಣೆಲ್ಲ ಮಹಾದೇವನ ಸದ್ಯೋಜಾತಮುಖ ನೋಡಾ.
ನೀರೆಲ್ಲ ಮಹಾದೇವನ ವಾಮದೇವಮುಖ ನೋಡಾ.
ಪ್ರಳಯಾಗ್ನಿಯೆಲ್ಲ ಮಹಾದೇವನ ಅಘೋರಮುಖ ನೋಡಾ.
ಮಾರುತವೆಲ್ಲ ಮಹಾದೇವನ ತತ್ಪುರುಷ ಮುಖ ನೋಡಾ.
ಆಕಾಶವೆಲ್ಲ ಮಹಾದೇವನ ಈಶಾನಮುಖ ನೋಡಾ.
ಆತ್ಮವೆಲ್ಲ ಮಹಾದೇವನ ಗೋಪ್ಯಮುಖ ನೋಡಾ.
‘ ಸರ್ವಂ ಶಿವಮಯಂ ಜಗತ್ತೆಂ’ ಬ ಶ್ರುತಿಶಾಖೆ ಪುಸಿಯಲ್ಲ
ನೋಡಾ,ಕಪಿಲಸಿದ್ಧಮಲ್ಲಿಕಾರ್ಜುನಾ.

೧೫.೦೧.೨೦೨೪

About The Author