ಬಸವೋಪನಿಷತ್ತು ೧೫ : ಹರನನ್ನು ಬೇಡಬೇಕಲ್ಲದೆ ನರರನ್ನು ಬೇಡಬಾರದು

ಬಸವೋಪನಿಷತ್ತು ೧೫ : ಹರನನ್ನು ಬೇಡಬೇಕಲ್ಲದೆ ನರರನ್ನು ಬೇಡಬಾರದು:ಮುಕ್ಕಣ್ಣ ಕರಿಗಾರ

ಸುರರ ಬೇಡಿದಡಿಲ್ಲ,ನರರ ಬೇಡಿದಡಿಲ್ಲ,
ಬರಿದೆ ಧೃತಿಗೆಡಬೇಡ,ಮನವೇ ;
ಆರನಾದಡೆಯೂ ಬೇಡಿ ಬೇಡಿ,ಬರಿದೆ ಧೃತಿಗೆಡಬೇಡ,ಮನವೇ.
ಕೂಡಲ ಸಂಗಮದೇವನಲ್ಲದೆ,ಆರ ಬೇಡಿದಡಿಲ್ಲ,ಮನವೇ

ಬಸವಣ್ಣನವರು ಶಿವನೆ ನಿಜಬಂಧುವಾದ್ದರಿಂದ ಭಕ್ತರು ಏನನ್ನಾದರೂ ಬೇಡುವಂತಿದ್ದರೆ ಶಿವನನ್ನು ಮಾತ್ರ ಬೇಡಬೇಕು,ಸುರರನ್ನಾಗಲಿ ನರರನ್ನಾಗಲಿ ಬೇಡಬಾರದು ಎನ್ನುತ್ತಾರೆ.ಸುರರು ನಾವು ಬೇಡಿದ ಎಲ್ಲವನ್ನೂ ನೀಡಲಾರರು,ನರರು ಕೊಟ್ಟು ಲೆಕ್ಕ ಇಡುವವರು.ಹರನೊಬ್ಬನೇ ಕೊಟ್ಟು ಮರೆಯುವ ಮಹಾದೇವನಾದ್ದರಿಂದ ಏನನ್ನಾದರೂ ಅದು ಭೋಗವೇ ಇರಲಿ,ಮೋಕ್ಷವೇ ಆಗಿರಲಿ ಹರನನ್ನು ಮಾತ್ರಬೇಡಬೇಕು.ಇತರರನ್ನು ಬೇಡಿದಾಗ ಅವರು ಕೊಟ್ಟರೆ ಸಂತಸವಾಗುತ್ತದೆ,ಕೊಡದಿದ್ದರೆ ದುಃಖವಾಗುತ್ತದೆ.ಸಿರಿವಂತರನ್ನು ಬೇಡಿದಾಗ ಅವರು ನಿಂದಿಸಿ ನುಡಿದರೆ ಆತ್ಮಗೌರವಕ್ಕೆ ಪೆಟ್ಟಾಗುತ್ತದೆ.ಆದ್ದರಿಂದ ನರರನ್ನು ಬೇಡಿ ಧೈರ್ಯಗುಂದಿ,ದುಃಖಿತರಾಗುವುದಕ್ಕಿಂತ ಪರವಸ್ತುವೂ ಪರಬ್ರಹ್ಮನೂ ಆದ ಪರಶಿವನನ್ನೇ ಬೇಡಬೇಕು‌ ಎಂದು ಜನರಿಗೆ ಆತ್ಮಗೌರವದ ಮಾರ್ಗೋಪದೇಶವನ್ನು ಬೋಧಿಸಿದ್ದಾರೆ ಬಸವಣ್ಣನವರು ಈ ವಚನದಲ್ಲಿ.

ಮರ್ತ್ಯದ ಮಾನವರು ನೂರೆಂಟು ದೇವರುಗಳನ್ನು ಸೃಷ್ಟಿಸಿಕೊಂಡು ಬಳಲುತ್ತಿದ್ದಾರೆ.ಎಲ್ಲದಕ್ಕೂ ಕಾರಣಕರ್ತನಾಗಿರುವ,ದೇವತೆಗಳಿಗೂ ದೇವನಾಗಿರುವ ಮಹಾದೇವ ಶಿವನನ್ನು ಮರೆಯುತ್ತಾರೆ.ನಾವು ದೇವತೆಗಳು ಪೂಜಿಸಿ ಅದು ಕೊಡು,ಇದು ಕೊಡು ಎಂದು ಬೇಡಬಹುದು ಆದರೆ ಆ ದೇವತೆಗಳು ನಮ್ಮ ಎಲ್ಲ ಬೇಡಿಕೆಯನ್ನು ಈಡೇರಿಸುತ್ತಾರೆ ಎನ್ನುವ ಖಚಿತತೆ ಇಲ್ಲ.ನಮಗೆ ದೊಡ್ಡವರಾಗಿ ಕಾಣಿಸುವ ಆ ದೇವತೆಗಳು ಸಹ ಶಿವನನ್ನು ಪೂಜಿಸಿಯೇ ಫಲ ಪದವಿಗಳನ್ನು ಪಡೆದಿದ್ದಾರೆ.ಅವರು ತಾವು ಪಡೆದ ಎಲ್ಲವನ್ನು ತಮ್ಮನ್ನು ಬೇಡುವವರಿಗೆ ನೀಡುವುದಿಲ್ಲ.ಎಲ್ಲವನ್ನೂ ನೀಡಿ ಶಕ್ತಿಹೀನರಾದರೆ ಅವರ ಗತಿ ಏನು ? ಇಂದ್ರನಾಗಲಿ,ಚಂದ್ರನಾಗಲಿ,ಕುಬೇರನಾಗಲಿ ಮತ್ತಾರೇ ಆಗಿರಲಿ ತಾವು ಪರಶಿವನಿಂದ ಪಡೆದ ವರದಲ್ಲೊಂದಿಷ್ಟು ಭಾಗವನ್ನು ಮಾತ್ರ ತಮ್ಮ ಭಕ್ತರುಗಳಿಗೆ ನೀಡಬಲ್ಲರು.ಜನರು ಸಿರಿ ಸಂಪತ್ತುಗಳಿಗಾಗಿ ಮಹಾಲಕ್ಷ್ಮೀ,ಕುಬೇರ ಮೊದಲಾದ ದೇವತೆಗಳನ್ನು ಪೂಜಿಸುತ್ತಾರೆ.ಜ್ಯೋತಿಷಿಗಳಂತೂ ದಿನಕ್ಕೊಬ್ಬರಂತೆ ದೇವತೆಗಳನ್ನು ಹುಟ್ಟಿಸಿ ಅವರನ್ನು ಪೂಜಿಸಿ,ಇವರನ್ನು ಪೂಜಿಸಿ ಆ ದೇವರು ಆ ಫಲ ಕೊಡುತ್ತಾನೆ,ಈ ದೇವರು ಈ ಫಲ‌ಕೊಡುತ್ತಾನೆ ಎಂದು ಸುಳ್ಳಿನ ಕಥೆಗಳನ್ನು ಕಟ್ಟಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.ಒಂದು ವೇಳೆ ಜ್ಯೋತಿಷಿಗಳು ಹೇಳುವ ಮಾತು ನಿಜವೇ ಆಗಿದ್ದರೆ ಜ್ಯೋತಿಷಿಗಳು ಹೇಳುವ ದೇವತೆಗಳು ಸರ್ವಸಮರ್ಥರೇ ಆಗಿದ್ದರೆ ಜ್ಯೋತಿಷಿಗಳು ತಾವೇ ಆ ದೇವತೆಗಳನ್ನು ಪೂಜಿಸಿ ತಮ್ಮ ಮನೋಭಿಷ್ಟಗಳನ್ನು ಈಡೇರಿಸಿಕೊಂಡು ಸಂಪದಭಿವೃದ್ಧಿ ಹೊಂದಿ ನೆಮ್ಮದಿಯಿಂದ ಇರಬಹುದಿತ್ತಲ್ಲ,ಮಂದಿಯನ್ನು ಶಾಸ್ತ್ರದ ಹೆಸರಿನಲ್ಲಿ ಕಾಡಿ,ಬೇಡಿ ಹೆದರಿಸಿ ದುಡ್ಡುಮಾಡುವ ಅಗತ್ಯವೇನಿತ್ತು ?ಲಕ್ಷ್ಮೀಯನ್ನು ಪೂಜಿಸ ಹೇಳುವ ಜ್ಯೋತಿಷಿಗಳು ಆ ಲಕ್ಷ್ಮಿಯು ಎಷ್ಟು ಜನರಿಗೆ ಸಂಪತ್ತನ್ನು ನೀಡಿದ್ದಾಳೆ ಎಂದು ಹೇಳಬಲ್ಲರೇನು ? ಹೇಳಿ ಕೇಳಿ ಲಕ್ಷ್ಮೀಯು ಚಂಚಲೆಯು,ಆಕೆಯ ಮನ ಭಾವ ಯಾವಾಗ ಹೇಗೆ ಎಂದು ನಿರ್ಣಯಿಸಲಾಗದು.ಕುಬೇರನೋ ಆಸೆಯುಳ್ಳ ಯಕ್ಷನು.ಅವನು ಕೊಟ್ಟರೆ ಎಷ್ಟುಕೊಟ್ಟಾನು ? ಶಿವನಿಂದಲೇ ಲಕ್ಷ್ಮೀ ಮತ್ತು ಕುಬೇರರು ಸಂಪತ್ತನ್ನು ಪಡೆದಿದ್ದಾರೆ.ಚಂಚಲೆಯಾದ ಲಕ್ಷ್ಮೀಯನ್ನು ಬೇಡಿ ನಿರಾಶರಾಗುವ ಬದಲು ಅಚಂಚಲ,ನಿಶ್ಚಲ ನಿರವಯಲ ಶಿವನನ್ನು ಬೇಡಿದರೆ ಆಗದೆ? ಶಿವನೊಬ್ಬನೇ ತನ್ನ ಭಕ್ತರು ಏನೇ ಬೇಡಲಿ ಅವರು ಬೇಡಿದುದನ್ನು ಕೊಡುತ್ತಾನೆ.ಶಿವನು ಕೊಡುವುದಷ್ಟೇ ಅಲ್ಲ ಕೊಟ್ಟು ಮರೆಯುವ ಏಕೈಕ ದೇವರು ಆದ್ದರಿಂದ ಅವನು ಮಹೌದಾರಿಯು,ಮಹಾದಾನಿಯು.ಲಕ್ಷ್ಮಿಯು ನಿಮಗೆ ಸಂಪತ್ತನ್ನು ನೀಡಿದಳೆಂದಿಟ್ಟುಕೊಳ್ಳಿ,ತನ್ನನ್ನು ನಿತ್ಯ ಪೂಜಿಸಬೇಕು,ಇಂತಿಂಥ ನಿಯಮಗಳನ್ನು ಪಾಲಿಸಬೇಕು ಎನ್ನುವ ಷರತ್ತುಗಳನ್ನು ವಿಧಿಸಿಯೇ ಸಂಪತ್ತನ್ನು ನೀಡುತ್ತಾಳೆ.ಭಕ್ತನು ಆ ಷರತ್ತುಗಳನ್ನು ಮರೆತೊಡನೆ ಅವನನ್ನು ತೊರೆದು ಹೋಗುತ್ತಾಳೆ ಸಿರಿದೇವಿ ಲಕ್ಷ್ಮೀ.ಇಂತಹ ಚಂಚಲೆಯಾದ ಲಕ್ಷ್ಮಿಯ ಮುಂದೆ ದೈನ್ಯದಿಂದ ಬೇಡುವ ಬದಲು ಪರಶಿವನನ್ನು ಬೇಡಬಾರದೆ ? ಬ್ರಹ್ಮ,ವಿಷ್ಣು,ಇಂದ್ರನಾದಿ ಸಮಸ್ತದೇವತೆಗಳು ಪರವಸ್ತುವೂ ಪರಬ್ರಹ್ಮನೂ ಆದ ಪರಶಿವನನ್ನೇ ಪೂಜಿಸಿ ದೇವರಾಗಿದ್ದಾರೆ,ಲೋಕದಲ್ಲಿ ಪೂಜೆಗೊಳ್ಳುತ್ತಿದ್ದಾರೆ ಎಂದ ಬಳಿಕ ನಾವು ಅವರನ್ನು ಬೇಡುವ ಬದಲು ಪರಮಾತ್ಮನಾದ ಶಿವನನ್ನೇ ಬೇಡಬಾರದೇಕೆ ?

ನರರನ್ನು ಬೇಡುವುದಂತೂ ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡುವ ಸಂಗತಿಯಾದ್ದರಿಂದ ನರರನ್ನು ಬೇಡಲೇಬಾರದು.ಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು ಎನ್ನುವುದು ಧರ್ಮ.ಆದರೆ ಅದನ್ನು ಧರ್ಮವೆಂದರಿಯದ ನರರು ಹಣಕೊಟ್ಟು ಬಡ್ಡಿಯನ್ನು ಪಡೆಯುತ್ತಾರೆ,ಬಡ್ಡಿಗೆ ಚಕ್ರಬಡ್ಡಿ ಸೇರಿಸುತ್ತಾರೆ,ಸಾಲವನ್ನು ತೀರಿಸಿದವರ ಹೊಲ ಮನೆಗಳನ್ನು ನುಂಗಲು ಹೊಂಚು ಹಾಕಿರುತ್ತಾರೆ.ಧನಿಕರು ತಾವು ಸಾಲಕೊಟ್ಟವರ ವಿವರಗಳನ್ನು‌ ಒಂದು ಲೆಕ್ಕದ ಪುಸ್ತಕದಲ್ಲಿ ಬರೆದಿಟ್ಟು ದಿನಾಲು ಆ ಪುಸ್ತಕದ ಪುಟಗಳನ್ನು ತಿರುವಿಹಾಕಿ ಅಂದಂದು ಯಾರಿಂದ ಬಡ್ಡಿ ಬರಬೇಕಾಗಿದೆಯೋ ಅಂಥವರ ಮನೆಗಳಿಗೆ ತಮ್ಮ ದೂತರನ್ನು ಅಟ್ಟುತ್ತಾರೆ.ಶ್ರೀಮಂತರ ಮನೆಯಾಳುಗಳ ಸೊಕ್ಕೋ ಹೇಳತೀರದು.ತಾವೂ ಬಡವರು,ತಮಗೂ ಇದೇ ಗತಿ ಬರಬಹುದು ಎಂದು ಆಲೋಚಿಸದೆ ತನ್ನ ಒಡೆಯಧನಿಕನಲ್ಲಿ ಕಡುನಿಷ್ಠೆಯನ್ನು ನಟಿಸಿ ಸಾಲಪಡೆದ ಬಡವನ ಮನೆಯ ಮುಂದೆ ಠಳಾಯಿಸಿ ಆ ಬಡವನನ್ನು,ಅವನ ಹೆಂಡಿರು ಮಕ್ಕಳನ್ನು ಬಾಯಿಗೆ ಬಂದಂತೆ ಆಡುತ್ತಾರೆ.ಇದರಿಂದ ಸಾಲಪಡೆದ ಬಡವನು ಮರ್ಯಾದೆಕಳೆದುಕೊಂಡು ಮುಖಬಾಡಿಸಿಕೊಳ್ಳುವನು,ತನ್ನ ಮರ್ಯಾದೆ ಹರಾಜಾಯಿತಲ್ಲ ಎಂದು ಮನನೊಂದು ಎಷ್ಟೋ ಜನ ಬಡವರುಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಿಮ್ಮ ಬಂಧು ಬಾಂಧವರು,ಹತ್ತಿರದವರು,ಆತ್ಮೀಯರು ಎನ್ನುವ ಜನರೂ ಅಷ್ಟೆ,ನಿಮ್ಮಲ್ಲಿ ಹಣ ಇದ್ದರೆ ಮಾತ್ರ ನಿಮ್ಮ ಬಳಿ ಬರುತ್ತಾರೆ.ನಿಮ್ಮಲ್ಲಿ ಹಣ ಇಲ್ಲ ಎಂದರೆ ನಿಮ್ಮಿಂದ ದೂರಸರಿಯುತ್ತಾರೆ ಮಾತ್ರವಲ್ಲ ನಿಮ್ಮನ್ನು ಕಂಡೂಕಾಣದಂತೆ ಇರುತ್ತಾರೆ,ಹಣಕೇಳಬಹುದು ಎಂದು ಭಾವಿಸಿ ನಿಮ್ಮಿಂದ ದೂರ ಇರುತ್ತಾರೆ.ನಿಮ್ಮ ಉನ್ನತಿಯ,ಉತ್ತಮದ ದಿನಗಳಲ್ಲಿ ನಿಮ್ಮಿಂದ ನೆರವು ಸಹಾಯ ಪಡೆದು ಉದ್ಧಾರವಾದವರು ಸಹ ನಿಮ್ಮ ಸಂಕಷ್ಟದ ಸಮಯದಲ್ಲಿ ನಿಮಗೆ ನೆರವಾಗುವುದು ಧರ್ಮ,ಮನುಷ್ಯತ್ವ ಎನ್ನುವುದನ್ನು ಅರ್ಥಮಾಡಿಕೊಳ್ಳದೆ ನಿಮ್ಮಿಂದ ದೂರ ಇರಬಯಸುತ್ತಾರೆ.ಇದು ಜಗತ್ತಿನ ನಿಯಮ,ಮನುಷ್ಯರ ಸಹಜ ವರ್ತನೆ.ಹಾಗಾಗಿ ಸ್ವಾರ್ಥಿಗಳು,ಅವಕಾಶವಾದಿಗಳು ಆದ ಮನುಷ್ಯರನ್ನು ನಂಬಿ ಕೆಡುವ ಬದಲು,ನಿಮ್ಮ ಆಪತ್ಕಾಲದಲ್ಲಿ ನರರನ್ನು ಬೇಡಿ ನಿರಾಶರಾಗುವ ಬದಲು ಪರಮ‌ಕರುಣಾಕರನಾದ ಹರನನ್ನೇ ಬೇಡಿದರಾಯಿತು.ಪರಮೇಶ್ವರನಾದ ಶಿವನನ್ನು ಬೇಡಿ ಪ್ರಾರ್ಥಿಸಿ ಮನುಷ್ಯರು ತಮ್ಮ ಸಂಕಷ್ಟ ಪರಿಹರಿಸಿಕೊಳ್ಳಬಹುದು.ವ್ಯವಹಾರಬುದ್ಧಿಯ ಮನುಷ್ಯರನ್ನು ಕೇಳಿ ಇಲ್ಲವೆನ್ನಿಸಿಕೊಳ್ಳುವ ಬದಲು ಲೋಕೋದ್ಧಾರಬದ್ಧನಾದ ಪರಶಿವನನ್ನು ಬೇಡಿ ಪಡೆಯಬಹುದು ಎನ್ನುವ ಬಸವಣ್ಣನವರು ದೇವತೆಗಳ ಮಿತಿ ಮತ್ತು ಮನುಷ್ಯರ ಅಲ್ಪತನವನ್ನು ಕೆಡೆನುಡಿದು ಜಗದ ಒಡೆಯನಾದ ಜಗದೀಶ್ವರ ಶಿವನೇ ಮಾನವರ ನಿಜಬಂಧುವಾದ್ದರಿಂದ ಏನನ್ನಾದರೂ ಬೇಡುವಂತಿದ್ದರೆ ಮೃಡ ಮಹಾದೇವನನ್ನೇ ಬೇಡಬೇಕು ಎನ್ನುವ ಹಿತೋಪದೇಶ ನೀಡಿದ್ದಾರೆ ಈ ವಚನದಲ್ಲಿ.

೧೫.೦೧.೨೦೨೪

About The Author