ಅನುಭಾವ ಚಿಂತನೆ : ಕಾಲಜ್ಞಾನ — ಕಾಲಜ್ಞಾನಿಗಳು : ಮುಕ್ಕಣ್ಣ ಕರಿಗಾರ

ಕಾಲಜ್ಞಾನ ಮತ್ತು ಕಾಲಜ್ಞಾನಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಉಂಟಾಗಿದೆ ಶಿಷ್ಯ ಮಂಜುನಾಥ ಕರಿಗಾರ ಅವರಲ್ಲಿ.ಆ ಬಗ್ಗೆ ವಿವರಿಸಲು ಕೋರಿದ್ದಾರೆ ಅವರು ಬಲ್ಲ‌ ಕೊಡೆಕಲ್ ಬಸವಣ್ಣ ಮತ್ತು ಆಂಧ್ರಪ್ರದೇಶದ ಕಾಲಜ್ಞಾನಿ ವೀರಬ್ರಹ್ಮೇಂದ್ರಸ್ವಾಮಿ ಅವರಿಬ್ಬರ ಹೆಸರುಗಳನ್ನು ಪ್ರಸ್ತಾಪಿಸಿ.ಅವರಿಬ್ಬರಷ್ಟೇ ಅಲ್ಲ, ದೇಶದಲ್ಲಿ ಸಾಕಷ್ಟು ಜನ‌ ಕಾಲಜ್ಞಾನಿಗಳು ಬಂದು ಹೋಗಿದ್ದಾರೆ.ಕಾಲಜ್ಞಾನ ಎನ್ನುವುದು ಭಾರತಕ್ಕಷ್ಟೇ ಸೀಮಿತವಾದ ವಿದ್ಯಮಾನವಲ್ಲ.ಪಾಶ್ಚಿಮಾತ್ಯ ಜಗತ್ತೂ ನಂಬಿದೆ ಸಾಕಷ್ಟು ಜನ ಕಾಲಜ್ಞಾನಿಗಳನ್ನು.ನಾಸ್ಟ್ರಾಡಾಮಸ್ ಮತ್ತು ಬಾಬಾ ವಂಗಾ ಅವರಿಬ್ಬರು ಪಾಶ್ಚಿಮಾತ್ಯ ಜಗತ್ತಿನ ಪ್ರಸಿದ್ಧ ಕಾಲಜ್ಞಾನಿಗಳು.ಅವರಿಬ್ಬರು ಹೇಳಿದ್ದೆಲ್ಲ ನಿಜವಾಗಿದೆ ಎನ್ನುವ ನಂಬಿಕೆ ಪಾಶ್ಚಿಮಾತ್ಯರಲ್ಲಿದೆ.

ಕಾಲ ಎನ್ನುವುದು ಅನಂತವಾದುದು,ದೀರ್ಘವಾದುದು.ಇಂಗ್ಲಿಷಿನ time ನಿರ್ದಿಷ್ಟ ಅವಧಿಸೂಚಕ ಪದವಾದರೆ ಕಾಲವು ಅನೂಹ್ಯವಾದುದು,ನಿಷ್ಕರ್ಷಿಸಲು ಸಾಧ್ಯವಾಗದೆ ಇರುವಂತಹದ್ದು,ಅನಂತವಾದುದು.ಮನುಷ್ಯರ ಕಾಲಮಾನ ನೂರು ವರ್ಷಗಳು.ಆ ಲೆಕ್ಕದಲ್ಲಿಯೇ ಭಾರತೀಯರು ತಮ್ಮ ದೇವರು,ದೈವಗಳಿಗೂ ಆಯುಷ್ಯವನ್ನು ನಿರ್ಧಾರ ಮಾಡಿದ್ದಾರೆ.ಆದರೆ ವಿಶ್ವನಿಯಾಮಕನಾಗಿರುವ ಪರಶಿವನು ಕಾಲಕ್ಕೆ ಸಿಕ್ಕಲಾರನು,ಕಾಲವೇ ಅವನ ಆಧಿನದಲ್ಲಿದೆ.ಹಾಗಾಗಿ ಶಿವನು ಕಾಲಾತೀತನು,ಕಾಲಕ್ಕೆ ಕಾಲನಾಗಿರುವ ಮಹಾಕಾಲನು.

ಕಾಲ ಮತ್ತು ಮಹಾಕಾಲ ಎರಡನ್ನು ಸ್ವಲ್ಪ ತಿಳಿದುಕೊಳ್ಳೋಣ.ಕಾಲವು ಮನುಷ್ಯರ ಅಳತೆಯ ಅವಧಿಯ ಪ್ರಮಾಣವಾದರೆ ಮನುಷ್ಯರ ಅಳತೆಗೆ ಸಿಕ್ಕದೆ ಇರುವುದೇ ಮಹಾಕಾಲವು.ಕಾಲಕ್ಕೆ ಸಿಕ್ಕಲಾರನು ಎನ್ನುವ ಕಾರಣದಿಂದಲೇ ಶಿವನು ಮಹಾಕಾಲನು.ನಮ್ಮ‌ಅಳತೆಯ ಕಾಲಕ್ಕೆ ಭೂತ,ವರ್ತಮಾನ ಮತ್ತು ಭವಿಷ್ಯಗಳೆಂಬ ಮೂರು ಅವಧಿಗಳಿವೆ,ಆಯಾಮಗಳಿವೆ.ಭೂತವು ಗತಿಸಿದ ಕಾಲವಾದರೆ ಭವಿಷ್ಯವು ಮುಂದೆ ಬರಲಿರುವ ಕಾಲವು.ಅವೆರಡೂ ನಮ್ಮ ಅಂಕೆಯಲ್ಲಿ‌ಇಲ್ಲ.ಆದರೆ ವರ್ತಮಾನವು ಮಾತ್ರ ನಮ್ಮ‌ಕೈಯಲ್ಲಿದೆ.ವರ್ತಮಾನವನ್ನು ಚೆನ್ನಾಗಿ ಬಾಳಿ,ಬದುಕಿದರೆ ಸಾಕು.ಆದರೆ ಮನುಷ್ಯರಲ್ಲಿ ಸೃಷ್ಟಿ ರಹಸ್ಯವನ್ನು ಭೇದಿಸುವ,ತಿಳಿದುಕೊಳ್ಳುವ ಕುತೂಹಲ ಇದೆಯಲ್ಲ.ಈ ಕುತೂಹಲವೇ ಕಾಲಜ್ಞಾನದ ಅನ್ವೇಷಣೆಯ ಕಾರಣವು.

ಪರಮಾತ್ಮನ ಸೃಷ್ಟಿಯಾಗಿರುವ ಪ್ರಕೃತಿ ಮತ್ತು ಪ್ರಪಂಚದಲ್ಲಿ ಎಲ್ಲವೂ ಪೂರ್ವನಿರ್ಧಾರಿತವೆ.ಮಳೆಗಾಲ,ಚಳಿಗಾಲ,ಬೇಸಿಗೆ ಕಾಲಗಳೆಂಬ ಕಾಲತ್ರಯಗಳು ಅವುಗಳ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಬರುತ್ತವೆಯೇ ಹೊರತು ನಾವು ಬಯಸಿದಾಗ ಬರುವುದಿಲ್ಲ.ಮನುಷ್ಯರ ವಿಪರೀತ ಬುದ್ಧಿಯಿಂದ ಪ್ರಕೃತಿಯ ಮೇಲೆ ಪರಿಣಾಮವಾಗಿ ಕಾಲಕ್ಕನುಸರಿಸಿ ನಡೆಯುವ ವಿದ್ಯಮಾನಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಿದೆಯಾದರೂ ಕಾಲನಿಯಮವು ಬದಲಾಗಿಲ್ಲ.ಪ್ರತಿದಿನ ಸೂರ್ಯೋದಯ ಸೂರ್ಯಾಸ್ತಗಳು,ತಿಂಗಳಿಗೊಮ್ಮೆ ಅಮವಾಸೆ ಹುಣ್ಣಿಮೆಗಳು,ಪ್ರಾಕೃತಿಕ ವಿದ್ಯಮಾನಗಳು ಅದಾಗಲೇ ನಿರ್ಣಯಿಸಲ್ಪಟ್ಟ ಸೃಷ್ಟಿಸೂತ್ರಗಳಿಗನುಗುಣವಾಗಿ ಆಯಾ ಸಂದರ್ಭ ಒದಗಿ ಬಂದೊಡನೆ ಪ್ರಕಟಗೊಳ್ಳುತ್ತವೆ.ಪ್ರಕೃತಿಯು ಜಡವಾಗಿದ್ದು ಜಂಗಮನಾಗಿರುವ ಪರಮಾತ್ಮನ ಸಂಕಲ್ಪದಂತೆ ಕಾರ್ಯನಿರ್ವಹಿಸುತ್ತಿದೆ.ಪರಮಾತ್ಮನು ಪ್ರಕೃತಿಯ ನಿತ್ಯವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದೆ ನಿರಾಸಕ್ತನಾಗಿದ್ದಾನೆ,ನಿರ್ಲಿಪ್ತನಾಗಿದ್ದಾನೆ.ಪ್ರಕೃತಿ ವ್ಯವಹಾರ ನಿರ್ವಹಣೆಗಾಗಿ ಪರಮಾತ್ಮನು ವಿಶ್ವನಿಯಮಗಳನ್ನು ಸಂಕಲ್ಪಿಸಿದ್ದು ಅದನ್ನು ‘ ನಿಯತಿ’ ಎಂದು ಕರೆಯಲಾಗುತ್ತದೆ.ಪರಮಾತ್ಮನ ನಿಯತಿಯು ಅನುಲ್ಲಂಘನೀಯವಾಗಿದ್ದು ಅದನ್ನು ಪ್ರಕೃತಿಯಾಗಲಿ,ಪ್ರಾಕೃತಿಕ ಶಕ್ತಿಗಳಾಗಲಿ ಉಲ್ಲಂಘಿಸುವಂತಿಲ್ಲ.ಪರಮಾತ್ಮನ ಸಂಕಲ್ಪ ಅಥವಾ ನಿಯತಿಯು ಆಕಾಶದಲ್ಲಿ ಸೂತ್ರಗಳ ರೂಪದಲ್ಲಿದೆ.H2O ಎಂದರೆ ಜಲಜನಕ ಅಥವಾ ನೀರು ಎನ್ನುವ ವಿಜ್ಞಾನದ ಸೂತ್ರಗಳಿರುವಂತೆಯೇ ಪ್ರಕೃತಿ ನಿಯಂತ್ರಕ ಪರಮಾತ್ಮನ ಸೂತ್ರಗಳಿವೆ.ವಿಜ್ಞಾನಿಯು ತನ್ನ ಪ್ರಯೋಗಾಲಯದಲ್ಲಿ ವಸ್ತುಗಳ ಮೂಲದ್ರವ್ಯಮಾಪನ ಮಾಡಿ ಅವುಗಳ ಗುಣ ಸ್ವಭಾವ ಕ್ರಿಯೆಗಳನ್ನು ನಿರ್ಣಯಿಸುವಂತೆ ಯೋಗಿಗಳು ತಮ್ಮ ಯೋಗಬಲದಿಂದ ಪ್ರಕೃತಿಯಲ್ಲಿರುವ ಪರಮಾತ್ಮನ ಸಿದ್ಧಸೂತ್ರಗಳನ್ನು ಓದಬಲ್ಲರು.ಪರಮಾತ್ಮನು‌ ಒಂದೊಂದು ಯುಗಕ್ಕೆ ಯುಗಧರ್ಮ ಒಂದನ್ನು ನಿರ್ಣಯಿಸಿ ಆ ಯುಗದ ವಿದ್ಯಮಾನಗಳನ್ನೆಲ್ಲ ಕಾಲರೂಪದಲ್ಲಿ ನಿರ್ಣಯಿಸಿದ್ದಾನೆ.ವರ್ಷ ಇಲ್ಲವೆ ಸಂವತ್ಸರಗಳ ಲೆಕ್ಕದಲ್ಲಿ ಆಯಾ ಸಂವತ್ಸರದಲ್ಲಿ ಜರುಗಬೇಕಾದ ಸಂಗತಿಗಳನ್ನು ಸೂತ್ರರೂಪದಲ್ಲಿಟ್ಟಿದ್ದಾನೆ.ಈ ಸೂತ್ರಗಳನ್ನು ಓದಿ,ಅರ್ಥೈಸಿಕೊಳ್ಳುವವರೇ ಕಾಲಜ್ಞಾನಿಗಳು.

ಕುಂಡಲಿನೀ ಯೋಗಸಾಧನೆಯಲ್ಲಿ ಪಳಗಿದ ಯೋಗಿಗಳು ಕಾಲಜ್ಞಾನವನ್ನು ಕರಗತ ಮಾಡಿಕೊಳ್ಳಬಲ್ಲರು.ಷಟ್ಚಕ್ರ ಭೇದನ ಕ್ರಮವನ್ನರಿತ ಯೋಗಿಯು ಪ್ರಕೃತಿಯ ವಿದ್ಯಮಾನಗಳನ್ನು ಗ್ರಹಿಸಬಲ್ಲ.ಚಕ್ರಭೇದನ ಕ್ರಮವನ್ನನುಸರಿಸಿ ‘ ಅನಾಹತಚಕ್ರ’ ಕ್ಕೆ ತಲುಪಿದಾಗ ಯೋಗಿಗೆ ಕಾಲಜ್ಞಾನದ ಅರಿವು ಉಂಟಾಗುತ್ತದೆ.ಅನಾಹತಚಕ್ರಸಿದ್ಧಿಯಿಂದ ಯೋಗಿಯು ತ್ರಿಕಾಲಜ್ಞಾನ ಸಿದ್ಧಿಯನ್ನು ಪಡೆಯುತ್ತಾನೆ.ಅನಾಹತಚಕ್ರಾರೋಹಣ ಗೈದ ಸಿದ್ಧಪುರುಷನು ಹಿಂದೆ ಘಟಿಸಿದುದನ್ನು ಯಥಾವತ್ತಾಗಿ ನೋಡಬಲ್ಲನು,ಮುಂದೆ ಭವಿಷ್ಯತ್ತಿನಲ್ಲಿ ಸಂಭವಿಸಲಿರುವ ಸಂಗತಿಗಳನ್ನು ಅವು ಸಂಭವಿಸುವಂತೆಯೇ ಕಾಣಬಲ್ಲನು.ಯೋಗಿಯು ತನ್ನ ಯೋಗಬಲದಿಂದ ಕಂಡುಂಡ ಪ್ರಪಂಚಜ್ಞಾನವನ್ನು ದಾಖಲಿಸುವುದೇ ಕಾಲಜ್ಞಾನವು.

ಯೋಗದ ಬಲದಿಂದಲ್ಲದೆ ಕೆಲವು ತಾಂತ್ರಿಕ ಸಾಧನೆಗಳಿಂದಲೂ ಕಾಲಜ್ಞಾನವನ್ನು ಸಂಪಾದಿಸಿಕೊಳ್ಳಬಹುದು.ಕಾಲಜ್ಞಾನ ಸಂಪಾದನೆಗಾಗಿ ಕೆಲವು ತಾಂತ್ರಿಕ ಪದ್ಧತಿಗಳಿವೆ,ಅವುಗಳನ್ನು ಅನುಷ್ಠಾನ ಮಾಡಿದರೆ ಕಾಲಜ್ಞಾನವನ್ನು ಪಡೆಯಬಹುದು.ಪರಶಿವನ ಮಹಾಕಾಲ ಜ್ಯೋತಿರ್ಲಿಂಗವು ಕಾಲಜ್ಞಾನದೊಂದಿಗೆ ಸಂಬಂಧಿಸಿದ ಜ್ಯೋತಿರ್ಲಿಂಗವಾಗಿದ್ದು ಉಜ್ಜಯನಿಯ ಮಹಾಕಾಲಶಿವನನ್ನು ಪೂಜಿಸುವ ಮೂಲಕ ಕಾಲಜ್ಞಾನಸಿದ್ಧಿಯನ್ನು ಪಡೆಯಬಹುದು.ಕಾಲನ ಅಧಿದೇವನಾಗಿರುವ ಯಮನನ್ನು ಪೂಜಿಸುವುದರಿಂದಲೂ ಕಾಲಜ್ಞಾನ ಪಡೆಯಬಹುದು.ಬ್ರಹ್ಮೋಪಾಸನೆಯಿಂದಲೂ ಕಾಲಜ್ಞಾನವು ಸಿದ್ಧಿಸುತ್ತದೆ.

೧೦.೦೧.೨೦೨೪

About The Author