ಸಿರಿ -ಸಂಪತ್ತನ್ನು ಸಂಗ್ರಹಿಸಿಡುವ ಬದಲು ಸತ್ಕಾರ್ಯಕ್ಕೆ,ಶರಣಕಾರ್ಯಕ್ಕೆ ಬಳಸಬೇಕು

ಬಸವೋಪನಿಷತ್ತು ೧೧ : ಸಿರಿ -ಸಂಪತ್ತನ್ನು  ಸಂಗ್ರಹಿಸಿಡುವ ಬದಲು ಸತ್ಕಾರ್ಯಕ್ಕೆ,ಶರಣಕಾರ್ಯಕ್ಕೆ ಬಳಸಬೇಕು : ಮುಕ್ಕಣ್ಣ ಕರಿಗಾರ

ಆಯುಷ್ಯವುಂಟು,ಪ್ರಳಯವಿಲ್ಲವೆಂದು ಅರ್ಥವ
ಮಡಗುವಿರಿ :
ಆಯುಷ್ಯವು ತೀರಿ ಪ್ರಳಯವು ಬಂದರೆ
ಅರ್ಥವನುಂಬವರಿಲ್ಲಾ !
ನೆಲನನಗಿದು ಮಡುಗದಿರಾ !
ನೆಲ ನುಂಗಿದೊಡುಗುಳುವುದೆ ?
ಕಣ್ಣಿನಲ್ಲಿ ನೋಡಿ,ಮಣ್ಣಿನಲ್ಲಿ ನೆರಹಿ,ಉಣ್ಣದೆ ಹೋಗದಿರಾ !
ನಿನ್ನ ಮಡದಿಗಿರಲೆಂದರೆ ಮಡದಿಯ ಕೃತಕ ಬೇರೆ ;
ನಿನ್ನೊಡಲು ಕೆಡೆಯಲು ಮತ್ತೊಬ್ಬನಲ್ಲಿಗಡಕದೆ ಮಾಣ್ಬಳೆ ?
ಹೆರರಿಗಿಕ್ಕಿ ಹೆಗ್ಗುರಿಯಾಗಬೇಡಾ ;
ಕೂಡಲ ಸಂಗನ ಶರಣರಿಗೊಡನೆ ಸವಿಸುವುದು.

ಬಸವಣ್ಣನವರು ಈ ವಚನದಲ್ಲಿ ಸಂಪತ್ತಿನ ಸಂಗ್ರಹವು ಉಚಿತವಲ್ಲ,ಅನುಭೋಗಕ್ಕೆ ಬೇಕಾಗುವಷ್ಟನ್ನು ಬಳಿ ಇಟ್ಟುಕೊಂಡು ಉಳಿದ ಹಣವನ್ನು ಶರಣರ ಕಾರ್ಯಗಳಿಗೆ,ಶಿವಶರಣರ ಯೋಗಕ್ಷೇಮಕ್ಕೆ ಬಳಸಬೇಕು ಎಂದು ಉಪದೇಶಿಸಿದ್ದಾರೆ.ಮರಣದೇಹಿಗಳಾದ ಮಾನವರು ತಮಗೆ ಯಾವ ಕ್ಷಣದಲ್ಲಾದರೂ ಮರಣ ಬರಬಹುದೆನ್ನುವುದನ್ನರಿಯದೆ ಚಿರಕಾಲ ಬಾಳುವೆವು ಎಂಬಂತೆ ಹಣವನ್ನು ಸಂಗ್ರಹಿಸಿ ಇಡುತ್ತಾರೆ.ಆಯುಷ್ಯವು ಮೀರಿ ಮರಣಬಂದಾಗ ತಾವು ಸಂಗ್ರಹಿಸಿಟ್ಟ ಹಣವನ್ನು ಅನುಭೋಗಿಸುವವರೇ ಇರುವುದಿಲ್ಲ.ಸಂಪತ್ತು ಸುರಕ್ಷಿತವಾಗಿರಲೆಂದು ನೆಲವನ್ನು ಅಗೆದು ಧನ ಕನಕವನ್ನು ನೆಲದಲ್ಲಿ ಹುಗಿಯಬೇಡಿ.ಆ ಧನಕನಕ ನೈಸರ್ಗಿಕ ಕಾರಣಗಳಿಂದ ಭೂಗರ್ಭವನ್ನು ಸೇರಿದರೆ ನೀವು ಬೇಕೆಂದಾಗ ಮರಳಿ ಬರುತ್ತದೆಯೆ? ಹೆಂಡತಿಯು ಚೆನ್ನಾಗಿರಲೆಂದು ಆಕೆಗಾಗಿ ಸಂಪತ್ತನ್ನು ಶೇಖರಿಸಿಡಬಹುದು.ಆದರೆ ಆಕೆಯ ಬುದ್ಧಿ ಬೇರೆಯದೆ ಆಗಿದೆ.ನಿನ್ನಲ್ಲಿ ನಿಜಾನುರಕ್ತಿ ಇಲ್ಲದ ನಿನ್ನ ಹೆಂಡತಿ ನೀನು ಸತ್ತೊಡನೆ ಪರಪುರುಷನನ್ನು ಕೂಡುತ್ತಾಳೆ ಇಲ್ಲವೆ ಮತ್ತೊಬ್ಬನನ್ನು ಮದುವೆಯಾಗಿ ನಿನ್ನ ಸಂಪತ್ತನ್ನು ಅವನಿಗೆ ಒಯ್ದು ಕೊಡುತ್ತಾಳೆ.ಆದ್ದರಿಂದ ಸಂಪತ್ತು ನನಗೆ ನನ್ನ ಹೆಂಡತಿಗಿರಲಿ ಎಂದು ತೆಗೆದಿರಿಸಿ,ಕಾಯ್ದಿಟ್ಟು ದಡ್ಡನಾಗಬೇಡ.ಸಾಯುವ ಮೊದಲೆ ನಿನ್ನ ಸಂಪತ್ತನ್ನು ಶಿವಶರಣರಿಗೆ ಸಮರ್ಪಿಸಿ ಕೃತಾರ್ಥನಾಗು ಎನ್ನುತ್ತಾರೆ ಬಸವಣ್ಣನವರು.

ಬಸವಣ್ಷನವರು ಸಂಪತ್ತಿನ ಸಂಗ್ರಹವನ್ನು ವಿರೋಧಿಸಿದವರು.ಸಂಪತ್ತಿನ ಅಸಮಾನ ಹಂಚಿಕೆಯು ಸಾಮಾಜಿಕ ಅಸಮಾನತೆ,ತಾರತಮ್ಯಗಳಿಗೆ ಕಾರಣವಾಗುವುದರಿಂದ ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತಿನ ಶೇಖರಣೆ ಸಲ್ಲದೆಂದರು.ಒಬ್ಬನು ತನಗೆ,ತನ್ನ ಕುಟುಂಬಕ್ಕೆ ಸಾಕಾಗುವಷ್ಟು ಇಟ್ಟುಕೊಳ್ಳುವುದು ಧರ್ಮ,ಸನ್ನಡತೆ.ಅದನ್ನು ಬಿಟ್ಟು ತಾನು ಸಾವಿರವರ್ಷ ಬದುಕುವೆನೇನೋ ಎಂಬಂತೆ ಅತಿಯಾಗಿ ಸಂಪತ್ತನ್ನು ಸಂಗ್ರಹಿಸುವುದು ಅದು ಸುರಕ್ಷಿತವಾಗಿರಲೆಂದು ನೆಲದಲ್ಲಿ ಹುಗಿದಿಡುವುದನ್ನು ಮಾಡಬಾರದು.ಭೂಮಿಯನ್ನು ತೋಡಿ ಧನ ಕನಕವನ್ನು ನೆಲದಲ್ಲಿಟ್ಟರೆ ವಿಧಿವಶಾತ್ ಆ ಸಂಪತ್ತಿನ ಕೊಡ ಅಥವಾ ಹಂಡೆಯು ಭೂಗರ್ಭದಾಳಕ್ಕೆ ಇಳಿದರೆ ? ಇಟ್ಟವರಿಗೆ ಸಿಗದಂತಾಯಿತಲ್ಲ.ಅದರ ಬದಲು ಸಮಾಜದ ಬಡಬಗ್ಗರು,ಸಾಧು ಸತ್ಪುರುಷರುಗಳಿಗೆ ಅದನ್ನು ಕೊಟ್ಟಿದ್ದರೆ ಅವರು ಧನಿಕರನ್ನು ಸ್ಮರಿಸುತ್ತಿದ್ದರು.ಕಿರಿಯ ವಯಸ್ಸಿನ ಮಡದಿ ಇರುವಳೆಂದು ಅವಳಿಗಾಗಿ ಸಂಪತ್ತನ್ನು ತೆಗೆದಿಟ್ಟರೆ ಧನಿಕ ಸತ್ತೊಡನೆ ವಯೋಸಹಜ ಕಾಮವನ್ನು ಅದುಮಿಡಲಾಗದ ಆಕೆ ಪರಪುರುಷನನ್ನು ಕೂಡುತ್ತಾಳೆ ಇಲ್ಲವೆ ಮರುಮದುವೆ ಮಾಡಿಕೊಳ್ಳುತ್ತಾಳೆ.ತನ್ನ ಪ್ರಿಯಕರನಿಗೆ ಒಯ್ದುಕೊಡುತ್ತಾಳೆ ಆಕೆ ಪಾಪಿಧನಿಕ ಬಳಸದೆ ಕೂಡಿಟ್ಟ ಸಂಪತ್ತನ್ನು ! ಧನಿಕನು ಕೂಡಿಟ್ಟ ಸಂಪತ್ತು ವ್ಯರ್ಥ ಪರಪುರುಷನ ಪಾಲಾಯಿತಲ್ಲ ! ‘ಪಾಪಿಗಂಟು ಪರರ ಪಾಲು’ ಎನ್ನುವ ಗಾದೆಯ ಮಾತು ಇದನ್ನೇ ಹೇಳುತ್ತದೆ.ಸಂಪತ್ತನ್ನು ಅನುಭವಿಸಬೇಕು,ಸದ್ವಿನಿಯೋಗ ಮಾಡಬೇಕು.ಶೇಖರಿಸಿಟ್ಟು ಪರರ ಪಾಲು ಮಾಡುವ ಬದಲು ಶಿವಶರಣರಿಗೆ ಸಂಪತ್ತನ್ನು ದಾನ ಮಾಡಬೇಕು.ಶಿವಶರಣರಿಗೆ ಸಂಪತ್ತನ್ನು ದಾನ ಮಾಡಿದರೆ ಶಿವನು ಸಂತೃಪ್ತನಾಗಿ ಸದ್ಗತಿಯನ್ನು ಕರುಣಿಸುತ್ತಾನೆ.

ಸಂಪತ್ತಿನ ಒಡೆತನವು ಕೆಲವೇ ಜನರ ಕೈಯ್ಗಳಲ್ಲಿ ಇರಬಾರದು,ಸಂಪತ್ತು ಸಮಾಜದ ಸರ್ವರಿಗೂ ಸೇರಿದ್ದು, ಬಡವರು,ಆರ್ಥಿಕವಾಗಿ ದುರ್ಬಲರಾದವರಿಗೆ ಆ ಸಂಪತ್ತಿನಲ್ಲಿ ಹಕ್ಕು ಇರಬೇಕು ಎನ್ನುವ ಮನುಷ್ಯಕಲ್ಯಾಣ ಅರ್ಥವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ ಬಸವಣ್ಣನವರು ಈ ವಚನದಲ್ಲಿ.ಅರ್ಥವು ಮನುಷ್ಯರ,ದೀನ ದುರ್ಬಲರ ಕಲ್ಯಾಣಕ್ಕಾಗಿ ಇದೆಯೇ ಹೊರತು ಕೆಲವರ ಸಂಗ್ರಹಕ್ಕೆ,ದುರಾಸೆ ದುರಾಲೋಚನೆಗಳನ್ನು ಪೊರೆಯಲು ಅಲ್ಲ ಎನ್ನುವ ಬಸವಣ್ಣವರು ಅರ್ಥಶಾಸ್ತ್ರಜ್ಞರಲ್ಲಿಯೇ ವಿಶೇಷರಾದ ‘ ಕಲ್ಯಾಣ ಅರ್ಥಶಾಸ್ತ್ರಜ್ಞರು’.ಬಸವಣ್ಣನವರೇ ಕಲ್ಯಾಣ ಅರ್ಥಶಾಸ್ತ್ರದ ಪಿತಾಮಹರು.( ಪಾಶ್ಚಿಮಾತ್ಯ ರಾಷ್ಟ್ರಗಳ ಅರ್ಥಶಾಸ್ತ್ರಜ್ಞರುಗಳು 18,19 ನೆಯ ಶತಮಾನಗಳಲ್ಲಿ ಕಲ್ಯಾಣ ಅರ್ಥಶಾಸ್ತ್ರದ ಬಗ್ಗೆ ಚರ್ಚಿಸಿದರೆ ಬಸವಣ್ಣನವರು 12 ನೆಯ ಶತಮಾನದ,ರಾಜಪ್ರಭುತ್ವದ ಕಾಲದಲ್ಲಿಯೇ ಕಲ್ಯಾಣ ಅರ್ಥಶಾಸ್ತ್ರದ ತತ್ತ್ವಗಳನ್ನು ಪ್ರತಿಪಾದಿಸಿದ್ದಾರೆ.ಬಸವಣ್ಣನವರ ಕಲ್ಯಾಣ ಅರ್ಥಶಾಸ್ತ್ರದ ಗುಣ ವಿಶೇಷ,ಸತ್ತ್ವ- ತತ್ತ್ವಗಳನ್ನು ನಾನು ಬರೆದ ‘ ಬಸವಣ್ಣನವರ ‘ಕಲ್ಯಾಣ ಅರ್ಥಶಾಸ್ತ್ರ’ ಕೃತಿಯಲ್ಲಿ ನೋಡಬಹುದು) ಶರಣರು ಎಂದರೆ ಶಿವಭಕ್ತರು ಎಂದರ್ಥ.ಶಿವನಲ್ಲಿ ನಂಬಿಕೆ,ನಿಷ್ಠೆಗಳನ್ನಿಟ್ಟು,ಶಿವಪೂಜೆ ಆರಾಧನೆ ಮಾಡುವ ಶಿವಭಕ್ತರುಗಳಿಗೆ ಸಂಪತ್ತನ್ನು ದಾನ ಮಾಡಿದರೆ ಶಿವಾನುಗ್ರಹವು ಲಭಿಸುತ್ತದೆ.’ ಮಮ ಭಕ್ತಕಾಯ ಮಮ ಕಾಯ’ ( ನನ್ನ ಭಕ್ತರ ಕಾಯವೇ ನನ್ನ ಕಾಯ)ಎನ್ನುವುದು ಶಿವನ ಘೋಷಣೆಯಾಗಿರುವುದರಿಂದ ಶಿವಭಕ್ತರಿಗೆ ಸಂಪತ್ತನ್ನು ನೀಡಿದರೆ ಸ್ವಯಂ ಪರಶಿವನಿಗೆ ಸಂಪತ್ತನ್ನು ಇತ್ತಂತೆ.ಅದರಿಂದ ಸಿಗುವ ಫಲ ಪದವಿಗಳನ್ನು ಬಣ್ಣಿಸಲಳವೆ ? ಬಂಗಾರ ಬೆಳ್ಳಿಯನ್ನು ಅನುಭೋಗಿಸದೆ ಕೂಡಿಟ್ಟು ಉಣ್ಣದೆ ಪರಿತಪಿಸುವುದಕ್ಕಿಂತ,ಕೂಡಿಟ್ಟ ಹಣವು ಮಡದಿಯ ಕುಟಿಲದಿಂದ ಪರರ ಪಾಲಾಗದಂತೆ ಸಾರ್ಥಕತೆ ಪಡೆಯಬೇಕಾದರೆ ಶಿವಭಕ್ತರಾದ ಬಡವರು,ದುರ್ಬಲರು,ನಿರ್ಗತಿಕರು,ನಿರಾಶ್ರಿತರಿಗೆ ಉದಾರವಾಗಿ ನೀಡಬೇಕು,ಅವರ ಉನ್ನತಿಗಾಗಿ ವ್ಯಯಿಸಬೇಕು.ಸಂಪತ್ತಿನ ಶೇಖರಣೆಯಿಂದ ಉಂಟಾಗುವ ಸಾಮಾಜಿಕ ಅಸಮತೋಲನ,ಪ್ರಜಾವರ್ಗದ ಅಸಂತುಷ್ಟಿ,ಕೂಡಿಟ್ಟವರ ಪಡಿಪಾಟಲುಗಳನ್ನು ಬಸವಣ್ಣನವರು ಸೊಗಸಾಗಿ ವಿವರಿಸಿದ್ದಾರೆ ಈ ವಚನದಲ್ಲಿ.

೧೧.೦೧.೨೦೨೪

About The Author