ತರಕಾರಿ ಮಾರುಕಟ್ಟೆನಾ ಅಥವಾ ಸಾಂಕ್ರಾಮಿಕ ರೋಗಗಳ ಕೇಂದ್ರನಾ ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಕಿಡಿ : ನಗರಸಭೆ ಕಾರ್ಯವೈಖರಿ ವಿರುದ್ಧ ಅಸಮಾಧಾನ 

ಶಹಾಪುರ : ನಗರದ ತರಕಾರಿ ಮಾರುಕಟ್ಟೆ ಸೇರಿದಂತೆ ಹಲವು ಪ್ರದೇಶಗಳಿಗೆ ಇಂದು ಯಾದಗಿರಿ ಜಿಲ್ಲಾ ಲೋಕಾಯುಕ್ತರು ದಿಢೀರನೆ ಭೇಟಿ ನೀಡಿ ನಗರ ಪ್ರದಕ್ಷಣೆ ಗೈದರು.ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ ಲೋಕಾಯುಕ್ತರು ಅಲ್ಲಿನ ವ್ಯವಸ್ಥೆಯನ್ನು ಕಂಡು ದಂಗಾದರು. ತರಕಾರಿ ಮಾರುಕಟ್ಟೆನಾ ಅಥವಾ ಸಾಂಕ್ರಾಮಿಕ ರೋಗಗಳ ಕೇಂದ್ರನಾ ಲೋಕಾಯುಕ್ತ ಎಸ್ಪಿ ಜಾನ್ ಕಿಡಿ ಕಾರಿದರು.

ಚರಂಡಿಯ ವ್ಯವಸ್ಥೆ ಶುದ್ಧ ಕುಡಿಯುವ ನೀರು ಇರದಿರುದನ್ನು ಕಂಡು ಪೌರಾಯುಕ್ತರಾದ ರಮೇಶ ಬಡಿಗೇರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಗರ ಸಭೆ ಕಾರ್ಯವೈಖರಿ ವಿರುದ್ಧ ಅಸಾಮದಾನ ವ್ಯಕ್ತಪಡಿಸಿದ ಅವರು, ನೀವು ಯಾವ ಸೀಮೆ ಅಧಿಕಾರಿ ಇದೇನಾ ನಿಮ್ಮ ಕಾರ್ಯವೈಖರಿ. ಸ್ವಲ್ಪನಾದರೂ ಜವಾಬ್ದಾರಿ ಇಲ್ವಲ್ಲ ರಿ. ಇದು ಮಾರುಕಟ್ಟೆನಾ? ನಿಮ್ಮ ಬೇಜವಾಬ್ದಾರಿ ತನಕ್ಕೆ ಇದು ಸಾಕ್ಷಿಯಾಗಿದೆ. ನಿಮ್ಮಂತ ಅಧಿಕಾರಿಗಳು ಇರುವುದರಿಂದಲೇ  ನಗರದ ಜನತೆಯನ್ನು ದೇವರೇ ಕಾಪಾಡಬೇಕು ಎಂದು ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಅಧಿಕಾರಿ ವಿರುದ್ಧ ಕಿಡಿಕಾರಿದರು.

ನಗರ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಯಾದಗಿರಿ ಲೋಕಾಯುಕ್ತ  ವತಿಯಿಂದ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕ ಕುಂದು ಕೊರತೆ, ಅಹವಾಲು ಸ್ವೀಕಾರ ಕಾರ್ಯಕ್ರಮ ಮುಗಿಸಿದ ನಂತರ ಸಾರ್ವಜನಿಕರ ದೂರಿನ ಮೇರೆಗೆ ದಿಡೀರನೆ ನಗರ ಸಂಚಾರ ನಡೆಸಿದರು.

ಚರಂಡಿ ವೀಕ್ಷಣೆ ಮಾಡಿದ ಅವರು ಚರಂಡಿ ಎಷ್ಟು ದಿನಕೊಮ್ಮೆ ಸ್ವಚ್ಛಗೊಳಿಸುತ್ತೀರಿ, ಅಧಿಕಾರಿಗಳೇ ನೀವು ಆರಾಮಾಗಿದ್ದರೆ ಸಾಕಾ ಜನರಿಗೆ ಏನಾದರೂ ಆಗಲಿ, ನಾನೇ ಸ್ವಚ್ಛ ಮಾಡುವುದು ಬಾಕಿ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಬ್ಯಾಂಕ್ ಆಫ್ ಬರೋಡ ಹತ್ತಿರವಿರುವ ವಿದ್ಯುತ್ ಕಂಬ ವೀಕ್ಷಿಸಿ, ತಕ್ಷಣ ನಗರಸಭೆ ಅಧಿಕಾರಿಗಳನ್ನು ಕರೆದು ಏನ್ರೀ ಇದನ್ನು ಜನರನ್ನು ಸಾಯಿಸಲು ಬಿಟ್ಟಿದ್ದೀರಾ ತಕ್ಷಣ ಸರಿಪಡಿಸಿ ಎಂದು ಸೂಚಿಸಿದರು.

ನಗರದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದಾಗ ಅದೇ ಸಮಯದಲ್ಲಿ ಗ್ರಾಹಕರೋಬ್ಬರು ನೀರು ತುಂಬಿ ಕೊಳ್ಳುತ್ತಿದ್ದರು. 20 ಲೀಟರ್ ಬಾಟಲಿಗೆ ಕೊಡುತ್ತೀರಾ ಎಂದು ವಿಚಾರಿಸಿದಾಗ ಗ್ರಾಹಕರ 5 ರೂ 2 ನಾಣ್ಯ ಹಾಕಿದ್ದೇನೆ  ಎಂದು ಹೇಳಿದಾಗ ಸ್ಥಳದಲ್ಲಿ ಹಾಜರಿದ್ದ ನಗರಸಭೆ ಪೌರಾಯುಕ್ತರಿಗೇ ನೀವು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀವು ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.

ತರಕಾರಿ ಮಾರುಕಟ್ಟೆಗೆ ಭೇಟಿ : ಇದು ತರಕಾರಿ ಮಾರುಕಟ್ಟೆನಾ? ನಿಮಗಿದು ತರಕಾರಿ ಮಾರುಕಟ್ಟೆ ತರ ಕಾಣಿಸುತ್ತದೆಯೇ, ಇಷ್ಟೊಂದು ದುರ್ನಾಥ, ಗಲೀಜು ಎಂದು ನೋಡುತ್ತಿರುವಾಗ,ತರಕಾರಿ ಮಾರುವ ಮಹಿಳೆಯೊಬ್ಬರನ್ನು ಇಲ್ಲಿನ ಸಮಸ್ಯೆ ಬಗ್ಗೆ ಕೇಳಿದರು.ಮೂತ್ರ ಮಾಡುವುದಕ್ಕೆ  ಜಾಗ ಇಲ್ಲ.ಇರುವ ಮೂತ್ರ ಕೇಂದ್ರದಲ್ಲಿ 5 ರೂಪಾಯಿ ಕೊಟ್ಟರೆ ಮೂತ್ರ ಮಾಡಲು ಬಿಡುತ್ತಾರೆ.. ಕುಡಿಯೋಕೆ ನೀರಿಲ್ಲ, ಚರಂಡಿ ತೆಗೆಯುವುದಿಲ್ಲ.ಚರಂಡಿ ಪಕ್ಕದಲ್ಲಿ ಕುಳಿತು ನಾವು ತರಕಾರಿ ಮಾರಬೇಕು. ಇದು ಬಿಟ್ಟರೆ ನಮಗೆ ಬೇರೆ ದಂಧೆ ಇಲ್ಲ. ವ್ಯಾಪಾರ ಮಾಡಬೇಕು. ಹೇಗಾದರೂ ಮಾಡಿ ನಮ್ಮ ಸಮಸ್ಯೆ ಬಗೆಹರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಲೋಕಾಯುಕ್ತ ಎಸ್ಪಿ ಮುಂದೆ ಅಳಲು ತೋಡಿಕೊಂಡಳು.

ಅನಧಿಕೃತ ಡಬ್ಬಿಗಳ ತೆರವು : ಮಾರುಕಟ್ಟೆಯಲ್ಲಿ ಎಲ್ಲಿಂದರಲ್ಲಿ ಅನಧಿಕೃತವಾಗಿ ಡಬ್ಬಿಗಳನ್ನು ಇಟ್ಟಿರುವದನ್ನು ಗಮನಕ್ಕೆ ಬರುತ್ತಿದ್ದಂತೆ, ತಕ್ಷಣ ಈ ಡಬ್ಬಿಗಳನ್ನು ತೆರವುಗೊಳಿಸಿ ಇಲ್ಲವೇ ಬಾಡಿಗೆ ನಿಗದಿಪಡಿಸಿ ಎಂದು ಸೂಚನೆ ನೀಡಿದರು. ಬಾಡಿಗೆ ಹೆಸರು ಒಬ್ಬರದು ಬಾಡಿಗೆ ನಡೆಸುವವರು ಇನ್ನೊಬ್ಬರು ಎಂದು ಅಲ್ಲಿನ ಜನತೆ ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಗೆ ಭೇಟಿ : ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಿದ ಲೋಕಾಯುಕ್ತರು ಹೊರ ಹಾಗೂ ಒಳ ರೋಗಿಗಳನ್ನು ಆಸ್ಪತ್ರೆಯಲ್ಲಿ ನಿಮಗೆ ಯಾರಾದರೂ ದುಡ್ಡು ಕೇಳುತ್ತಾರಾ ಅಥವಾ ಇಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ಕೇಳಿದಾಗ ಇಲ್ಲಾ ನಾವು ಯಾವುದೇ ತರದ ದುಡ್ಡು ಕೊಟ್ಟಿಲ್ಲ ಎಂದು ರೋಗಿಗಳು ಹೇಳಿದರು. ಆಸ್ಪತ್ರೆಯಲ್ಲಿರುವ ಮಾತ್ರೆಗಳನ್ನು ವೀಕ್ಷಿಸಿದರು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಮೆಡಿಕಲ್ ಗಳಿಗೆ ಚಿಟ್ಟಿ ಬರೆದು ಕೊಡಬಾರದು ಎಂದು ಸೂಚಿಸಿದರು.ಆಸ್ಪತ್ರೆಯಲ್ಲಿರುವ ಕುಡಿಯುವ ನೀರು, ಉದ್ಯಾನವನವನ್ನು, ಆಸ್ಪತ್ರೆಯ ಸ್ವಚ್ಛತೆ ವ್ಯವಸ್ಥೆ ಕಂಡು ಲೋಕಾಯುಕ್ತ ಎಸ್ಪಿ ಮತ್ತು ಅವರ ತಂಡದವರು ಡಾ.ಯಲ್ಲಪ್ಪ ಮತ್ತು ವೈದ್ಯರು ಹಾಗೂ ಸಿಬ್ಬಂದಿಯವರನ್ನು ಅಭಿನಂದಿಸಿದರು.

ಲೋಕಾಯುಕ್ತ ತಂಡದಲ್ಲಿ ಡಿವೈಎಸ್ಪಿ ಹಣಮಂತರಾಯ, ಪೊಲೀಸ್ ನಿರೀಕ್ಷಕ ಹಣಮಂತ ಬಿ ಸಣ್ಣಮನಿ, ಪಿಐ ರಾಜಶೇಖರ್ ಹಳಿಗೋದಿ, ಪೌರಾಯುಕ್ತ ರಮೇಶ್ ಬಡಿಗೇರ್, ನಗರ ಸಭೆ ಎಇಇ ನಾನಾಸಾಬ ಮಡಿವಾಳ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಹಾಗೂ ನಗರಸಭೆ ಅಧಿಕಾರಿಗಳು ಇದ್ದರು.

ಕಳೆದ ನಾಲ್ಕು  ತಿಂಗಳ ಹಿಂದೆ ನಗರದ ಸಮಸ್ಯೆಗಳ ಬಗ್ಗೆ ಪೌರಾಯುಕ್ತರಿಗೆ ಪಾತ್ರದ ಮೂಲಕ ತಿಳಿಸಿದ್ದೆವು.ನಗರಸಭೆ ಅಧಿಕಾರಿಗಳು ಕರ್ತವ್ಯ ಮರೆತಿದ್ದಾರೆ. ಸಾರ್ವಜನಿಕರು ಸಮಸ್ಯೆ ಹೇಳಿಕೊಂಡು ನಗರ ಸಭೆಗೆ ಹೋದರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಗರಸಭೆ ಕೆಲವರ ಕೈಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿದೆ.

ಮಾನಪ್ಪ ಹಡಪದ್
ಸಾಮಾಜಿಕ ಕಾರ್ಯಕರ್ತ.

About The Author