ಬಸವೋಪನಿಷತ್ತು ೦೯ : ಸಿರಿಯ ಮೋಹದಲ್ಲಿ ಸಿಕ್ಕಿಬೀಳದೆ ಹರನಪಾದವಿಡಿದು ಉದ್ಧಾರವಾಗಿ

ಬಸವೋಪನಿಷತ್ತು ೦೯ : ಸಿರಿಯ ಮೋಹದಲ್ಲಿ ಸಿಕ್ಕಿಬೀಳದೆ ಹರನಪಾದವಿಡಿದು ಉದ್ಧಾರವಾಗಿ : : :ಮುಕ್ಕಣ್ಣ ಕರಿಗಾರ

ಸಂಸಾರವೆಂಬುದು ಗಾಳಿಯ ಸೊಡರು
ಸಿರಿಯೆಂಬುದು ಸಂತೆಯ ಮಂದಿ,ಕಂಡಯ್ಯಾ !
ಇದ ನೆಚ್ಚಿ ಕೆಡಬೇಡ – ಸಿರಿಯೆಂಬುದ !
ಮರೆಯದೆ ಪೂಜಿಸು ಕೂಡಲ ಸಂಗಮದೇವನ.

ಬಸವಣ್ಣನವರು ಅರ್ಥಕ್ಕಿಂತ ಪರಮಾರ್ಥವೇ ಮೇಲು,ಸಿರಿಯ ಸಂಪಾದನೆಗಿಂತ ಹರನ ಅನುಗ್ರಹ ಸಂಪಾದನೆಯಿಂದಲೆ ಜೀವನಕ್ಕೆ ಸಾರ್ಥಕತೆ ಎನ್ನುವುದನ್ನು ಈ ವಚನದಲ್ಲಿ ಸಿರಿಯಾಸೆಗೊಳಗಾಗಿ ಹರನ ಮರೆವ ಮರ್ತ್ಯದ ಮಾನವರೆಲ್ಲರಿಗೆ ಉಪದೇಶಿಸಿದ್ದಾರೆ.ಹೆಂಡಿರು ಮಕ್ಕಳ ಸಂಸಾರವು ಗಾಳಿಗೆ ಇಟ್ಟ ದೀಪದಂತೆ,ಉರಿಯುವ ಖಾತ್ರಿಯಿಲ್ಲದೆ ಯಾವಾಗಲಾದರೂ ಆರಬಹುದು.ಧನ ಕನಕಗಳ ಶ್ರೀಮಂತಿಕೆಯು ಶಾಶ್ವತವಲ್ಲ.ಸಂತೆಯಲ್ಲಿ ನೆರೆದ ಜನಸಮೂಹ ಸಂಜೆಯಾದೊಡನೆ ತಂತಮ್ಮ ಮನೆ,ಊರುಗಳಿಗೆ ಮರಳಿದಂತೆ ಮನುಷ್ಯರು ಸಂಪಾದಿಸಿದ ಸಂಪತ್ತು ಯಾವಾಗಲಾದರೂ ಕರಗಬಹುದು,ಶಾಶ್ವತವಾಗಿ ಇರದು.ಇಂತಹ ಶಾಶ್ವತವಲ್ಲದ,ಇದ್ದು ಇಲ್ಲವಾಗುವ ಸಿರಿ ಸಂಪತ್ತನ್ನು ನಂಬಿಕೆಡದೆ ಪರಮಾತ್ಮನಾದ ಶಿವನನ್ನು ನಂಬಬೇಕು,ಶಿವನನ್ನು ಪೂಜಿಸಿ ಉದ್ಧಾರವಾಗಬೇಕು ಎನ್ನುತ್ತಾರೆ ಬಸವಣ್ಣನವರು.

ಸಂಸಾರವು ಪರಮಾತ್ಮನ ಎಣಿಕೆ,ಪ್ರಪಂಚವು ಪರಮಾತ್ಮನ ಸೃಷ್ಟಿಯಾದ್ದರಿಂದ ಮಡದಿ ಮಕ್ಕಳ ಸಂಸಾರ ಮತ್ತು ಲೋಕಜೀವರುಗಳ ನೆಲೆಯಾದ ಪ್ರಪಂಚವನ್ನು ಕಡೆಗಣಿಸಲಾಗದು.ಆದರೆ ಸಂಸಾರವು ಸ್ಥಿರವಲ್ಲ,ಪ್ರಪಂಚವು ಶಾಶ್ವತವಲ್ಲ ಎನ್ನುವ ಅರಿವು ಇರಬೇಕು.ಸೃಷ್ಟಿ ತತ್ತ್ವವು ಪರಮಾತ್ಮನ ಸಂಕಲ್ಪವೇ ಆಗಿರುವುದರಿಂದ ನಾವು ಮದುವೆ ಮಾಡಿಕೊಂಡು ಹೆಂಡಿರು ಮಕ್ಕಳೊಡನೆ ಸಂಸಾರಸುಖವನ್ನು ಅನುಭವಿಸಿ, ಆನಂದಿಸಬೇಕು.ಹತ್ತಿದವರು- ಹೊಂದಿದವರು,ಬಂಧು- ಮಿತ್ರರು ಎಂಬಿತ್ಯಾದಿ ಪ್ರಪಂಚಭಾವವನ್ನು ವಿಸ್ತರಿಸಿಕೊಂಡು ಮನುಷ್ಯಸಂಬಂಧಗಳನ್ನೇರ್ಪಡಿಸಿಕೊಂಡು ಬಾಳಬೇಕು.ಆದರೆ ಈ ಸಂಸಾರವಾಗಲಿ,ಪ್ರಪಂಚವಾಗಲಿ ಶಾಶ್ವತವಲ್ಲ,ಎಂದಾದರೊಂದು ದಿನ ಸಂಸಾರ,ಪ್ರಪಂಚವನ್ನು ತೊರೆದು ಹೋಗಲೇಬೇಕು ಎನ್ನುವ ಸತ್ಯವನ್ನು ಮರೆಯದೆ ಸಂಸಾರಬದ್ಧರಾಗಿ ಬದುಕಬೇಕು,ಲೋಕಸಮಸ್ತರಲ್ಲಿ ಒಬ್ಬರಾಗಿ ಪರಮಾತ್ಮನ ಸೃಷ್ಟಿಯನ್ನು ಆನಂದಿಸಬೇಕು.ಸಂಸಾರವು ಕರ್ತವ್ಯವೆಂದು ಪ್ರಪಂಚವು ಪರಮಾತ್ಮನ ಲೀಲಾಭೂಮಿಯೆಂದು ತಿಳಿದು ಬಾಳಬೇಕು.ಹೆಂಡತಿ ಮಕ್ಕಳಿಗೆ,ತನ್ನನ್ನು ಆಶ್ರಯಿಸಿದವರಿಗೆ ಸಾಕಾಗುವಷ್ಟು ಸಂಪಾದನೆ ಮಾಡಬೇಕು,ಅದು ಕರ್ತವ್ಯ.ಆದರೆ ನೂರಾರು ತಲೆಮಾರುಗಳಿಗೆ ಆಗುವಷ್ಟು ಸಂಪಾದಿಸುವ ಸಂಗ್ರಹಬುದ್ಧಿ ತರವಲ್ಲ ಅದು ಶಿವವಿರೋಧಿನಡೆ.ಸಂಪತ್ತಿನ ಸಂಗ್ರಹವು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದರಿಂದ,ಬಡವರ ಬದುಕುವ ಹಕ್ಕಿನ ಮೇಲೆ ಪರಿಣಾಮ ಬೀರುವುದರಿಂದ ಸಂಪತ್ತಿನ ವ್ಯಾಮೋಹವು ತರವಲ್ಲ.ಬಿಲಿಯನೇರ್,ಮಿಲಿಯನೇರುಗಳಾಗಬಹುದು,ಅರಮನೆಯಂತಹ ಭವ್ಯಸೌಧಗಳನ್ನು ಕಟ್ಟಿಸಬಹುದು,ನೂರಾರು ವಿಲಾಸಿ ಕಾರುಗಳನ್ನಿಟ್ಟುಕೊಳ್ಳಬಹುದು ಆದರೆ ಸತ್ತಾಗ ಬಂಗಾರದ ನಾಣ್ಯಗಳಾಗಲಿ,ನೋಟುಗಳಾಗಲಿ,ಅರಮನೆ ,ಕಾರುಗಳಾಗಲಿ ನಮ್ಮೊಂದಿಗೆ ಬರುವುದಿಲ್ಲ ಎನ್ನುವ ವಿವೇಕ ನಮಗಿರಬೇಕು.ಪ್ರಾಣಹೋದೊಡನೆ ಹೆಣವಾಗುವ ಈ ದೇಹವನ್ನು ನಮ್ಮ ಪ್ರೀತಿಪಾತ್ರರು ಮನೆಯಲ್ಲಿಟ್ಟುಕೊಳ್ಳುವುದಿಲ್ಲ,ಮಣ್ಣಲ್ಲಿ ಹೂಳುತ್ತಾರೆ,ಇಲ್ಲವೆ ಸುಡುತ್ತಾರೆ.ಹೀಗಿದ್ದೂ ನನ್ನವರು ನನ್ನವರು ಎಂದು ನೂರು ಸಾವಿರ ಕೋಟಿಗಳ ಸಂಪಾದಿಸಿಡುವ ಅಲ್ಪತನವೇಕೆ? ಮದುವೆ ಮಾಡಿಕೊಂಡಿದ್ದೀರಿ,ಮಕ್ಕಳನ್ನು ಪಡೆದಿದ್ದೀರಿ.ಮಡದಿ ಮಕ್ಕಳನ್ನು ಚೆನ್ನಾಗಿಡುವುದು ನಿಮ್ಮ ಕರ್ತವ್ಯ.ಅದಕ್ಕೆ ಎಷ್ಟುಬೇಕೋ ಅಷ್ಟು ಸಂಪಾದಿಸಿ,ಅವರ ಜೀವನಕ್ಕಾಗುವಷ್ಟು ಸಂಗ್ರಹಿಸಿಡಿ.ನನ್ನ ಏಳು ತಲೆಮಾರು ಸುಖವಾಗಿರಲಿ,ನೂರು ತಲೆಮಾರುಗಳು ಸುಖವಾಗಿರಲಿ ಎನ್ನುವ ದುರಾಶೆಯಿಂದ ಬಡವರ ಅನ್ನ, ಅವಕಾಶಗಳನ್ನು ಕಸಿದುಕೊಂಡು ಸಂಗ್ರಹಮಾಡಿಟ್ಟರೆ ನಿಮ್ಮ ವಂಶಜರು ಅದನ್ನು ಅನುಭವಿಸುತ್ತಾರೆ ಎನ್ನುವುದಕ್ಕೆ ಖಾತ್ರಿ ಏನಾದರೂ ಇದೆಯಾ? ಇಂದಿನ ದಿನವಷ್ಟೇ ನಮಗೆ ನಿಶ್ಚಿತವಾಗಿರುವ ದಿನ.ನಾಳೆ ಏನಾಗುವುದೆಂದು ಯಾರು ಬಲ್ಲರು? ದೀಪವು ನಾಲ್ಕುಗೋಡೆಗಳ ಮಧ್ಯೆ ಇದ್ದರೆ ಉರಿಯುತ್ತದೆ,ಬೆಳಕಾಗುತ್ತದೆ.ಆದರೆ ದೀಪವನ್ನು ಬಯಲಿಗೆ,ನಡು ರಸ್ತೆಯಲ್ಲಿ ಇಟ್ಟರೆ ಅದು ಉರಿಯಬಲ್ಲುದೇನು ? ಗಾಳಿ ಬೀಸಿದೊಡನೆ ಬಯಲಲ್ಲಿಟ್ಟದೀಪವು ಆರಿ ಹೋಗುತ್ತದೆ.ನೀವು ಸತ್ತೊಡನೆ ಇಲ್ಲವಾಗುವ ನಿಮ್ಮ ಸಂಸಾರ ಸಂಬಂಧಗಳು ನಿಮ್ಮ ದೇಹದಲ್ಲಿ ಜೀವ ಇರುವವರೆಗೆ ಮಾತ್ರ.ನೀವು ಸತ್ತ ಬಳಿಕ ನಿಮ್ಮ ಹೆಂಡಿರು ಮಕ್ಕಳು ಮೊಮ್ಮಕ್ಕಳ ಗತಿ ಸ್ಥಿತಿ ಏನಾಗುವುದೋ ಎನ್ನುವ ಕಾವಳ,ಕಳವಳ ನಿಮಗೇಕೆ ? ಅವರ ಸುಸ್ಥಿತಿ ದುಸ್ಥಿತಿಯನ್ನು ನೋಡಲು ನೀವೇ ಇರುವುದಿಲ್ಲವಲ್ಲ !ಆದ್ದರಿಂದ ಸಂಸಾರ ಎನ್ನುವುದು ಬಯಲಲ್ಲಿ ಇಟ್ಟ ದೀಪದಂತಿದ್ದು ಗಾಳಿಬೀಸಿದೊಡನೆ ಆರಿಹೋಗುತ್ತದೆಯಾದ್ದರಿಂದ ಸಂಸಾರಬಂಧನಕ್ಕೆ ಸಿಕ್ಕು ಬೀಳಬಾರದು.ಸಂಜೆಯಾದೊಡನೆ ಸಂತೆಗೆ ಸೇರಿದ್ದ ಮಂದಿ ತಮ್ಮ ತಮ್ಮ ನೆಲೆಗಳಿಗೆ ಹೊರಟುಹೋಗುವಂತೆ ಚಂಚಲೆಯಾದ ಲಕ್ಷ್ಮಿಯು ನಿಮ್ಮನ್ನು ತೊರೆದು ಮತ್ತೊಬ್ಬರ ಬಳಿ ಹೋಗುತ್ತಾಳೆ.ಅಶಾಶ್ವತವಾದ ಸಂಪತ್ತನ್ನು ನಂಬಿ ಕೆಡುವ ಬದಲು ನಿತ್ಯನೂ ಶಾಶ್ವತನೂ ಆದ ಶಿವನನ್ನು ನಂಬಿ,ಪೂಜಿಸುವುದೇ ಜೀವನದ ಶ್ರೇಯಸ್ಸು ಎಂದಿದ್ದಾರೆ ಬಸವಣ್ಣನವರು.

‘ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ ಎಂದ ಬಸವಣ್ಣನವರೇ ಇಲ್ಲಿ ‘ ಸಂಸಾರವೆಂಬುದು ಗಾಳಿಯ ಸೊಡರು’ ಎಂದಿರುವುದು ವಿರೋಧಾಭಾಸವಲ್ಲವೆ ಎನ್ನುವ ಪ್ರಶ್ನೆ ಉಂಟಾಗಬಹುದು.ಇಲ್ಲಿ ಗೊಂದಲವಾಗಲಿ,ವಿರೋಧಾಭಾಸವಾಗಲಿ ಇಲ್ಲ.ಬಸವಣ್ಣನವರು ಮನುಷ್ಯರು ಬದುಕಿರುವವರೆಗೆ ಮಾತ್ರ ಅವರ ಸಂಸಾರ ಇರುತ್ತದೆ,ಪ್ರಳಯಕ್ಕೆ ಒಳಗಾಗುವವರೆಗೆ ಮಾತ್ರ ಪ್ರಪಂಚದ ಅಸ್ತಿತ್ವ ಇರುವುದರಿಂದ ಅವು ಶಾಶ್ವತವಲ್ಲ.ಪರಶಿವನೊಬ್ಬನೇ ಹುಟ್ಟು ಸಾವುಗಳಿಲ್ಲದ ಅವಿನಾಶಿಯಾದುದರಿಂದ,ಶಿವನೊಬ್ಬನೇ ಶಾಶ್ವತನಿರುವುದರಿಂದ ಕ್ಷಣಿಕವಾದ ಲೌಕಿಕ ಸುಖಕ್ಕಿಂತ ಶಾಶ್ವತವಾದ ಮೋಕ್ಷವನ್ನು ಕರುಣಿಸುವ ಮುಕ್ಕಣ್ಣಶಿವನನ್ನು ನಂಬಿ ಪೂಜಿಸಬೇಕು ಎನ್ನುವುದನ್ನು ಇಲ್ಲಿ ಸಾರಿದ್ದಾರೆ. ಇದು ಎಲ್ಲರ ಅನುಭವಕ್ಕೆ ಬರುವ ವಾಸ್ತವವಾದ್ದರಿಂದ ಇದರಲ್ಲಿ ದ್ವಂದ್ವವಾಗಲಿ,ವಿರೋಧಾಭಾಸವಾಗಲಿ ಇಲ್ಲ.ಸಂಸಾರದಲ್ಲಿ ಇದ್ದು ಉದ್ಧಾರವಾಗುವುದೇ ಜೀವನದ ಪ್ರೇಯಸ್ಸು ; ಪ್ರಪಂಚದಲ್ಲಿ ಇದ್ದು ಪರಮಾತ್ಮನ ಅನುಗ್ರಹವನ್ನು ಪಡೆಯುವುದೇ ಶ್ರೇಯಸ್ಸು ಎನ್ನುವ ಬಾಳಸತ್ಯವನ್ನು,ನಿತ್ಯಸತ್ಯವನ್ನು ಬಸವಣ್ಣನವರು ಈ ವಚನದ ಮೂಲಕ ಲೋಕಸಮಸ್ತರಿಗೆ ಉಪದೇಶಿಸಿದ್ದಾರೆ.

೦೯.೦೧.೨೦೨೪

About The Author