ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು

ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು : ಮುಕ್ಕಣ್ಣ ಕರಿಗಾರ

ರಾಜ್ಯದ ಪ್ರಭಾವಿ ಮಹಿಳಾ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ‘ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು’ ಎನ್ನುವ ಮಾತನ್ನಾಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಆಗಾಗ ತಮ್ಮ ಹೇಳಿಕೆಗಳಿಂದ,ನಡೆ ನುಡಿಗಳಿಂದ ಸುದ್ದಿಯಾಗುತ್ತಿದ್ದಾರೆ.ಅದು ಅವರ ರಾಜಕೀಯ ಬದುಕಿಗೆ ಸಂಬಂಧಿಸಿದ್ದರಿಂದ ನಿರ್ಲಕ್ಷಿಸಬಹುದಿತ್ತು.ಆದರೆ ಈಗ ಅವರು ‘ಬೆಳಗಾವಿಯು ಮಹಾರಾಷ್ಟ್ರದ ಭಾಗವಾಗಿತ್ತು’ ಎನ್ನುವ ಮೂಲಕ ಕನ್ನಡಿಗರ ರಕ್ತ ಕುದಿಯುವಂತೆ ಮಾಡಿದ್ದಾರೆ. ( ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆ ಮಾತುಗಳನ್ನಾಡಿದ್ದನ್ನು ವೈರಲ್ ಆದ ವಿಡಿಯೋ ತುಣುಕಿನಲ್ಲಿ ನಾನು ಗಮನಿಸಿದ್ದೇನೆ)ಭಾಷಾ ಸಾಮರಸ್ಯ,ಗಡಿರಾಜ್ಯಗಳೊಂದಿಗೆ ಸಮನ್ವಯದಿಂದ ಇರುವುದು ಒಕ್ಕೂಟ ಭಾರತದ ಅಗತ್ಯಾಂಶಗಳೇನೋ ನಿಜ,ಆದರೆ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ರಾಜ್ಯದ ಬೆಳಗಾವಿಯಲ್ಲಿರುವ ಎಂಇಎಸ್ ಪುಂಡರನ್ನು ಪ್ರಚೋದಿಸುವಂತಹ,ಮರಾಠಿಗರು ಮತ್ತೆ ಬೆಳಗಾವಿ ನಮಗೆ ಸೇರಿದ್ದು ಎನ್ನುವ ಖ್ಯಾತೆ ತೆಗೆಯಲು ಕಾರಣವಾಗುವಂತಹ ಮಾತನ್ನಾಡಿದ್ದರಿಂದ ಅವರು ಕರ್ನಾಟಕ ಸರಕಾರದ ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಕೂಡಲೆ ಅವರನ್ನು ಸಚಿವಸ್ಥಾನದಿಂದ ವಜಾಗೊಳಿಸಬೇಕು.ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿದ,ಕನ್ನಡದ ಸಾರ್ವಭೌಮತ್ವಕ್ಕೆ,ಕರ್ನಾಟಕದ ಅಖಂಡತೆಗೆ ಧಕ್ಕೆ ತರುವ ಮಾತುಗಳನ್ನಾಡಿದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುವುದು ಸೂಕ್ತವಲ್ಲವಾದ್ದರಿಂದ ಕನ್ನಡಿಗರ ಭಾವನೆಗಳನ್ನು ಬೆಂಬಲಿಸಬೇಕು ಎನ್ನುವ ಕನ್ನಡಪರ ಇಚ್ಛಾಶಕ್ತಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಇದ್ದರೆ ಅವರು ಕೂಡಲೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಚಿವಸ್ಥಾನದಿಂದ ವಜಾಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕು.ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಷ್ಟೇ ಪ್ರಭಾವಶಾಲಿಯಾಗಿರಬಹುದು ಆದರೆ ಕನ್ನಡಕ್ಕಿಂತ ಯಾರೂ ದೊಡ್ಡವರಿಲ್ಲ.ಪ್ರಜ್ಞಾಪೂರ್ವಕವಾಗಿಯೇ ಆಡಿರಲಿ ಅಥವಾ ಅಪ್ರಜ್ಞಾಪೂರ್ವಕವಾಗಿಯೇ ಅವರ ಬಾಯಿಂದ ಈ ಮಾತು ಬಂದಿರಲಿ ಕನ್ನಡವನ್ನು,ಕರ್ನಾಟಕವನ್ನು ಸಲೀಸಾಗಿ ತೆಗೆದುಕೊಂಡರೆ ಏನಾಗುತ್ತದೆ ಎನ್ನುವ ಪಾಠವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕಲಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕ್ರಮವಹಿಸಬೇಕು.

ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯಗಳ ರಚನೆಯ ಪೂರ್ವಾಪರಗಳು ತಿಳಿದಂತಿಲ್ಲ.ಇಂದಿನ ಮಹಾರಾಷ್ಟ್ರವೇ ಹಿಂದಿನ ಕರ್ನಾಟಕದ ಭಾಗವಾಗಿತ್ತು ಎನ್ನುವ ಇತಿಹಾಸಜ್ಞಾನವೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಇದ್ದಂತಿಲ್ಲ.ಶ್ರೀ ವಿಜಯನು ತನ್ನ ಕವಿರಾಜ ಮಾರ್ಗದಲ್ಲಿ ‘ ಕಾವೇರಿಯಿಂದ ಗೋದಾವರಿವರೆಮಿರ್ದ ನಾಡದಾ ಕನ್ನಡದೊಳ್’ ಎಂದು ಕಾವೇರಿಯಿಂದ ಗೋದಾವರಿನದಿಯವರೆಗೆ ವಿಸ್ತರವಾಗಿತ್ತು ಕನ್ನಡರಾಜ್ಯ,ಕರ್ನಾಟಕ ರಾಜ್ಯ ಎಂದು ಸಾರಿರುವ ಕರ್ನಾಟಕದ ಗಡಿ ಸೀಮೆಗಳ ವ್ಯಾಪ್ತಿಯು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಗೊತ್ತಿಲ್ಲವೆ? ಗೋದಾವರಿ ನದಿ ಎಲ್ಲಿದೆ ಎಂಬುದು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಗೊತ್ತಿರಬೇಕಲ್ಲ ? ಇಂದಿನ ಮಹಾರಾಷ್ಟ್ರದ ಮಧ್ಯಭಾಗದಲ್ಲಿದೆ ಗೋದಾವರಿ ನದಿ.ಹಿಂದೆ ಅಲ್ಲಿಯವರೆಗೆ ಕನ್ನಡ ಸಾಮ್ರಾಜ್ಯ ವಿಸ್ತರಿಸಿತ್ತು.ಮಹಾರಾಷ್ಟ್ರದಲ್ಲಿ ಗೋದಾವರಿ ನದಿ ತೀರದವರೆಗೆ ನೂರಾರು ಕನ್ನಡ ಶಿಲಾಶಾಸನಗಳು ಸಿಕ್ಕಿವೆ.ಕರ್ನಾಟಕವೇ ಮಹಾರಾಷ್ಟ್ರದ ಮೂಲನೆಲೆಯಾಗಿತ್ತು ಎನ್ನುವುದನ್ನು ಮುಕ್ತಮನಸ್ಸಿನ ಮರಾಠಿ ಇತಿಹಾಸಕಾರರೇ ಒಪ್ಪಿಕೊಂಡಿದ್ದಾರೆ.ಮಹಾರಾಷ್ಟ್ರ ರಾಜ್ಯ ಮತ್ತು ಮರಾಠಿ ಸಂಸ್ಕೃತಿಯನ್ನು ರೂಪಿಸುವಲ್ಲಿ ಕನ್ನಡ ಮಹತ್ವದ ಪಾತ್ರವಹಿಸಿದೆ ಎನ್ನುವುದು ಜ್ಞಾನದೇವ,ಸಂತತುಕಾರಾಮ್,ಸಮರ್ಥ ರಾಮದಾಸರ ಅನುಭಾವ ಸಾಹಿತ್ಯದಲ್ಲೂ ಅಭಿವ್ಯಕ್ತಗೊಂಡಿದೆ,ಮರಾಠಿ ಸಾಂಸ್ಕೃತಿಕ ಚಿಂತಕರೂ ಅದನ್ನು ಒಪ್ಪಿದ್ದಾರೆ.ಮಹಾರಾಷ್ಟ್ರದ ಇಂದಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಸೊಲ್ಲಾಪುರ,ಕೊಲ್ಲಾಪುರ ಮತ್ತು ತುಳಜಾಪುರಗಳು ಹಿಂದೆ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದವು ಎನ್ನುವುದಕ್ಕೆ ಇಂದಿಗೂ ಆ ಸ್ಥಳನಾಮಗಳು ಹೊಂದಿರುವ ‘ ಪುರ’ ಪದವೇ ಸಾಕ್ಷಿ.ಮಹಾರಾಷ್ಟ್ರದ ಹಳ್ಳಿಗಳನ್ನು ‘ ಗಾಂವ್’ ಎನ್ನುತ್ತಾರೆಯೇ ಹೊರತು ಪುರ ಎನ್ನುವುದಿಲ್ಲ.

ಮರಾಠಿಯು ಕನ್ನಡದಂತೆ ದ್ರಾವಿಡ ಭಾಷೆಗಳಲ್ಲಿ ಒಂದು ಅಲ್ಲ,ಅದು ಪ್ರಾಕೃತ ಭಾಷೆಯಿಂದ ಹುಟ್ಟಿದ ಭಾಷೆ ಎನ್ನುವುದು ನಿಜವಾದರೂ ಮರಾಠಿ ಭಾಷೆಯಲ್ಲಿ ಸಾವಿರಾರು ಕನ್ನಡ ಪದಗಳಿವೆ,ಅಸಂಖ್ಯಾತ ಸಂವಾದಿ ಪದಗಳಿವೆ. ಹದಿಮೂರನೇ ಶತಮಾನದಿಂದ ಕಾಣಿಸಿಕೊಳ್ಳುವ ಮರಾಠಿ ಭಾಷೆಗೆ ಕನ್ನಡದಷ್ಟು ಪ್ರಾಚೀನ ಇತಿಹಾಸದ ಹಿರಿಮೆ ಗರಿಮೆಗಳಿಲ್ಲ.ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ನೂರಾರು ಗ್ರಾಮಗಳು ಕರ್ನಾಟಕಕ್ಕೆ ತಮ್ಮ ಗ್ರಾಮಗಳನ್ನು ಸೇರ್ಪಡೆಗೊಳಿಸಲು ಗ್ರಾಮ ಪಂಚಾಯತಿಗಳ ಸಾಮಾನ್ಯ ಸಭೆಗಳಲ್ಲಿ ನಿರ್ಣಯಿಸಿವೆ.ಕಾನೂನು ತೊಡಕಿನಿಂದ ಈ ಸೇರ್ಪಡೆ ಸಾಧ್ಯವಾಗಿಲ್ಲವಾದರೂ ಇಂದಿಗೂ ಮಹಾರಾಷ್ಟ್ರದ ಗಡಿ ಹಳ್ಳಿಗಳಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ,ಕರ್ನಾಟಕದೊಂದಿಗೆ ಕೊಡು ಕೊಳ್ಳುವ ಸಂಬಂಧವನ್ನಿಟ್ಟುಕೊಂಡಿದ್ದಾರೆ.ಸೊಲ್ಲಾಪುರ,ಕೊಲ್ಲಾಪುರ ಮತ್ತು ತುಳಜಾಪುರಗಳಲ್ಲಿ ಕನ್ನಡ ಮಾತನಾಡುವ ಮರಾಠಿಗರಿದ್ದಾರೆ.ಈ ಎಲ್ಲ ಸಂಗತಿಗಳು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತಿಳಿಯದೆ ಇರುವ ಅವರ ಅಜ್ಞಾನವು ಕ್ಷಮಾರ್ಹವಲ್ಲ.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಸಾಂಸ್ಕೃತಿಕ ಕೊಡು ಕೊಳ್ಳುವಿಕೆ ಇದೆ,ಒಕ್ಕೂಟ ಭಾರತದ ನೆರೆಹೊರೆಯ ರಾಜ್ಯಗಳಾಗಿ ಪರಸ್ಪರ ಸುಮಧುರ ಬಾಂಧವ್ಯವನ್ನಿಟ್ಟುಕೊಳ್ಳುವುದು ಅಗತ್ಯ.ಹಾಗೆಂದು ಜವಾಬ್ದಾರಿಯುತ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರ್ನಾಟಕದ ಹಿತಾಸಕ್ತಿಗೆ ಮಾರಕವಾಗುವಂತಹ ಮಾತುಗಳನ್ನಾಡುವುದು ಎಷ್ಟು ಮಾತ್ರವೂ ಸರಿಯಲ್ಲ.

೦೯.೦೧.೨೦೨೪

About The Author