ಬಸವೋಪನಿಷತ್ತು ೦೬ : ಜನರನ್ನು ,ಜಗತ್ತನ್ನು ಸುಧಾರಿಸುವುದಲ್ಲ ; ಸ್ವಯಂಸುಧಾರಣೆಯೇ ಮಹಾನ್ ಕಾರ್ಯ !

ಬಸವೋಪನಿಷತ್ತು ೦೬ : ಜನರನ್ನು ,ಜಗತ್ತನ್ನು ಸುಧಾರಿಸುವುದಲ್ಲ ; ಸ್ವಯಂಸುಧಾರಣೆಯೇ ಮಹಾನ್ ಕಾರ್ಯ ! : ಮುಕ್ಕಣ್ಣ ಕರಿಗಾರ

ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ;
ನಿಮ್ಮ ನಿಮ್ಮ ಮನವ ಸಂತಯ್ಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲ ಸಂಗಮದೇವ.

ಇತರರ ದೋಷಗಳನ್ನು ಎಣಿಸಿ ಆಡುವುದು,ಜನರ ಉದ್ಧಾರಕ್ಕೆ ಶ್ರಮಿಸುತ್ತೇನೆ ಎಂದು ಕೊಚ್ಚಿಕೊಳ್ಳುವುದು ಮನುಷ್ಯರ ಸ್ವಭಾವ.ಇದು ತರವಲ್ಲ ಎನ್ನುವ ಬಸವಣ್ಣನವರು ಪ್ರತಿಯೊಬ್ಬರು ತಮ್ಮ ತಮ್ಮ ತಪ್ಪುಗಳನ್ನು ತಿದ್ದಿಕೊಂಡರೆ ಜಗತ್ತೇ ಸುಧಾರಿಸುತ್ತದೆ ಎಂದಿದ್ದಾರೆ.ನಾಯಿಬಾಲದಂತಿರುವ ಜಗತ್ತನ್ನು ಸುಧಾರಿಸುತ್ತೇನೆ ಎಂದರೆ ಆಗದ ಕೆಲಸ.ಅದರ ಬದಲಿಗೆ ತಮ್ಮನ್ನು ತಾವು ಸುಧಾರಿಸಿಕೊಂಡರೆ ಸಾಕು.ಪಕ್ಕದಮನೆಯವರು ದುಃಖದಲ್ಲಿದ್ದಾರೆಂದು ದುಃಖಿಸುವುದು ಕಪಟವಲ್ಲದೆ ನಿಜದುಃಖವೆನ್ನಿಸದು.ಇಂತಹ ಕಪಟಿಗಳನ್ನು ಪರಶಿವನು ಮೆಚ್ಚಲಾರ ಎನ್ನುತ್ತಾರೆ ಬಸವಣ್ಣನವರು.

ಮನುಷ್ಯರಲ್ಲಿ ಕೆಲವರು ‘ಸಮಾಜಸುಧಾರಕ’ ನಾಗಬೇಕು, ‘ ಲೋಕೋದ್ಧಾರಕ’ ನೆನ್ನಿಸಿಕೊಳ್ಳಬೇಕು ಎನ್ನುವ ತೆವಲನ್ನು ಅಂಟಿಸಿಕೊಂಡಿರುತ್ತಾರೆ. ಆ ತೆವಲಿಗಾಗಿ ವಿಪರೀತ ಪ್ರಚಾರ ಪಡೆಯುತ್ತಾರೆ.ಲೋಕೋದ್ಧಾರ ಎನ್ನುವುದು ಸಹಜಬದ್ಧತೆಯಾದರದು ಸಹ್ಯ,ಅಂಥವರೇ ನಿಜವಾದ ಲೋಕಹಿತಚಿಂತಕರು.ಲೋಕೋದ್ಧಾರವನ್ನೇ ಜೀವನಧ್ಯೇಯವನ್ನಾಗಿ ಸ್ವೀಕರಿಸಿದವರು ಯಾರಿಗೂ ಹೇಳದೆ,ಯಾವ ಪ್ರಚಾರ,ಕೀರ್ತಿ ಬಯಸದೆ ತಮ್ಮ‌ಪಾಡಿಗೆ ತಾವು ಲೋಕಹಿತಚಿಂತನೆಯ ಕಾರ್ಯದಲ್ಲಿ ತೊಡಗಿರುತ್ತಾರೆ,ಲೋಕದಜೀವರುಗಳ ಕಲ್ಯಾಣಕ್ಕಾಗಿ ದುಡಿಯುತ್ತಿರುತ್ತಾರೆ.ಈಗ ನಾವು ನೋಡುತ್ತಿರುತ್ತೇವಲ್ಲ,ರೋಗಿಗಳು,ಅಶಕ್ತರಿಗೆ ಬ್ರೆಡ್ಡು,ಹಣ್ಣುಗಳನ್ನು ವಿತರಿಸಿ ಟಿ.ವಿ,ಪೇಪರ್ ಗಳಲ್ಲಿ ಮಿಂಚುವ ಮಹಾನುಭಾವರುಗಳನ್ನು ! ಇಂಥವರು ಲೋಕೋದ್ಧಾರಕರುಗಳಲ್ಲ,ಸಮಾಜಸೇವಕರುಗಳಲ್ಲ.ನಿರ್ಗತಿಕರಿಗೆ,ನಿರಾಶ್ರತರಿಗೆ ಸಹಾಯ ಮಾಡುವ ನೆಪದಲ್ಲಿ ಭಾರಿ ಪ್ರಚಾರಪಡೆದು ಜನಮನ್ನಣೆ ಪಡೆಯಬೇಕು,ಜನನಾಯಕರು ಆಗಬೇಕು ಎನ್ನುವ ಪ್ರಚಾರಪ್ರಿಯರು ಲೋಕಹಿತಚಿಂತಕರುಗಳಲ್ಲ,ಸೇವಾಯೋಗಿಗಳಲ್ಲ.ಮಾಡುವ ಪ್ರತಿಕೆಲಸವು ಸುದ್ದಿಯಾಗಬೇಕು ಎಂದು ಹಪಹಪಿಸುವ ಕಾರ್ಪೋರೇಟ್ ಜಗತ್ತಿನ ಗುರು,ಆಚಾರ್ಯ,ಯೋಗಿಗಳು ಮಹಾತ್ಮರುಗಳಲ್ಲ,ಲೋಕೋದ್ಧಾರಕರುಗಳಲ್ಲ.ಇಂತಹ ಕಪಟಿಗಳನ್ನು ಪರಶಿವನು ಮೆಚ್ಚಲಾರ.ಮಂದಿಯನ್ನು ಮೆಚ್ಚಿಸಲು ಜನಸೇವೆ ಮಾಡಬಾರದು,ಮನಸ್ಸು ಒಪ್ಪುವಂತೆ,ಮಹಾದೇವ ಶಿವನು ಮೆಚ್ಚುವಂತೆ ಪ್ರಾಮಾಣಿಕ ಜನಸೇವೆ ಮಾಡಬೇಕು.ಪಕ್ಕದ ಮನೆಯವರು ಯಾವುದೋ ದುಃಖದಲ್ಲಿದ್ದಾರೆ ಎಂದರಿತು ಅವರ ಕಷ್ಟದ ಕಾರಣ ತಿಳಿದು ಅದರ ಪರಿಹಾರಕ್ಕೆ ಪ್ರಯತ್ನಿಸಿದರೆ,ಅವರು ಸಂಕಟಮುಕ್ತರಾಗಲು ನೆರವಾದರೆ ಅದು ನಿಜವಾದ ನೆರವು,ಸಹಾಯ ಎನ್ನಿಸಿಕೊಳ್ಳುತ್ತದೆ.ಪಕ್ಕದ ಮನೆಯವರು ಅಳುತ್ತಿದ್ದಾರೆಂದು ಅವರ ಜೊತೆ ಜೋರಾಗಿ ಅಳುವುದು ಕಪಟ ಇಲ್ಲವೆ ನಾಟಕವಲ್ಲದೆ ನಿಜವಲ್ಲ.ಇಂತಹ ನಟಸಾರ್ವಭೌಮರುಗಳು ನಟರಾಜ ಶಿವನ ಒಲುಮೆಯನ್ನುಣ್ಣಲಾರರು.

ಬಸವಣ್ಣನವರು ಈ ವಚನದಲ್ಲಿ ಲೋಕವು ನಾಯಿಬಾಲದಂತೆ ಡೊಂಕಾಗಿದೆ,ಅದನ್ನು ನೇರ್ಪುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ವಿಶ್ವನಿಯಮದತ್ತ,ಪರಮಾತ್ಮನ ನಿಯತಿಯತ್ತ ಜಗತ್ತಿನ ಗಮನಸೆಳೆದಿದ್ದಾರೆ.ಜಗತ್ತು ಸೃಷ್ಟಿಗೊಂಡಂದಿನಿಂದ,ಜಗತ್ತಿನಲ್ಲಿ ಮನುಷ್ಯ ಹುಟ್ಟಿದಂದಿನಿಂದ ಮನುಷ್ಯರ ವರ್ತನೆಯಲ್ಲಿ ಕುಂದು‌ಕೊರತೆಗಳಿವೆ,ದೋಷ- ದೌರ್ಬಲ್ಯಗಳಿವೆ.ಮನುಷ್ಯರಲ್ಲಿ ಪರಿಪೂರ್ಣರೆನ್ನುವವರು ಇಲ್ಲವೇ ಇಲ್ಲ.ಪೂರ್ಣತೆಯ ಪಥದಲ್ಲಿ ನಡೆದು,ಪೂರ್ಣರಾಗಲು ದುಡಿದು ಕೆಲವರು ದೊಡ್ಡವರಾಗಿದ್ದಾರೆ,ಮಹಾತ್ಮರು ಆಗಿದ್ದಾರೆ.ಅಂತಹ ಪೂರ್ಣಪಥಗಾಮಿಚೇತನರುಗಳು ತಾವು ಪೂರ್ಣರಾಗುತ್ತ ಸಹಜೀವರುಗಳಿಗೆ,ಲೋಕಜೀವರುಗಳಿಗೆ ಪೂರ್ಣಪಥದಲ್ಲಿ ನಡೆಯಲು ಸ್ಫೂರ್ತಿಯಾದರು. ಮಹಾಂತರುಗಳು ತಾವು ಪೂರ್ಣರಾಗುತ್ತ ಜನರನ್ನು ಪೂರ್ಣರಾಗಲು ಪ್ರೇರೇಪಿಸಿದರೇ ಹೊರತು ಪೂರ್ಣರಾಗಿರಿ ಎಂದು ಬರಿಯ ಉಪದೇಶ ನೀಡಲಿಲ್ಲ.ಮಹಾತ್ಮರು,ಶರಣರು- ಸಂತರು ತಾವು ನುಡಿದಂತೆ ನಡೆದರು,ನಡೆನುಡಿ ಒಂದಾಗಿ ಬಾಳಿದರು.ಇಂತಹ ಸಚ್ಚರಿತ್ರರನ್ನು ಲೋಕವು ಆದರ್ಶವೆಂದು ಸ್ವೀಕರಿಸಿತು.ಇಂತಹ ಲೋಕೋದ್ಧಾರಕರುಗಳು ಎಲ್ಲ ಕಾಲ,ಎಲ್ಲ ದೇಶಗಳಲ್ಲಿಯೂ ಅವತರಿಸಿದ್ದಾರೆ.ಮಹಾನ್ ವ್ಯಕ್ತಿಗಳ ಜೀವನ- ಸಂದೇಶದಿಂದ ತತ್ಕಾಲದಲ್ಲಿ ಪ್ರಭಾವಿತಗೊಂಡು ಅವರನ್ನು ಅನುಸರಿಸುವ ಜಗತ್ತು ಆ ಮಹಾಪುರುಷರು ಕಣ್ಮರೆಯಾದೊಡನೆ ತನ್ನ ಮುನ್ನಿನ ಸ್ವಭಾವಕ್ಕೆ ಮರಳುತ್ತದೆ ! ನಾಯಿಯ ಡೊಂಕುಬಾಲವನ್ನು ನೇರ್ಪುಗೊಳಿಸುತ್ತೇನೆ ಎಂದು ನಾಯಿಯ ಬಾಲವನ್ನು ಕೈಯಲ್ಲಿ ಹಿಡಿದಿರಬಹುದು,ಅಥವಾ ಅದಕ್ಕೊಂದು ಕೊಳವೆ ಸುತ್ತಬಹುದು.ಕೈ ಬಿಟ್ಟೊಡನೆ ಇಲ್ಲವೆ ಕೊಳವೆಯನ್ನು ತೆಗೆದೊಡನೆ ನಾಯಿಯ ಬಾಲ ಮೊದಲಿನಂತೆ ಡೊಂಕಾಗುತ್ತದೆ ! ಅದು ನಾಯಿ ಬಾಲದಸ್ವಭಾವ.ಡೊಂಕಾಗಿರುವುದೇ ನಾಯಿ ಬಾಲದ ಸ್ವಭಾವ,ಸಹಜ ಗುಣ ! ಪ್ರಕೃತಿ ನಿಯಮ ! ಡೊಂಕಾಗಿರುವ ನಾಯಿಬಾಲವನ್ನು ನೆಟ್ಟಗೆ ಮಾಡುತ್ತೇನೆ ,ನೇರ್ಪುಗೊಳಿಸುತ್ತೇನೆ ಎನ್ನುವುದು ವಿಕೃತಿ,ಆಭಾಸ.ಡೊಂಕಾಗಿರುವ ನಾಯಿಬಾಲವನ್ನು ನೆಟ್ಟಗೆ ಮಾಡುವವರು ತೋರಿಕೆಯ ಸಮಾಜಸೇವಕರುಗಳು.ಪ್ರಕೃತಿ ತತ್ತ್ವವನ್ನು‌ ಒಪ್ಪಿ,ಪರಮಾತ್ಮನ ಸಂಕಲ್ಪವನ್ನರಿತು ಜನಮನವನ್ನು ತಿದ್ದಿ ತೀಡುವವರೇ ಮಹಾತ್ಮರು,ಶರಣರು ಸಂತರು.ಪ್ರಚಾರಪ್ರಿಯರುಗಳು ಸಮಾಜಸುಧಾರಕರಾಗುತ್ತೇವೆ,ಜನರ ನಡೆ ನುಡಿಗಳನ್ನು ತಿದ್ದುತ್ತೇವೆ,ಜನರ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಬೀಗುವ ಬದಲು,ವ್ಯರ್ಥ ಪೋಸುಕೊಡುವ ಬದಲು ತಮ್ಮ ತಪ್ಪುಗಳನ್ನು ತಾವು ತಿದ್ದಿಕೊಂಡರೆ ಸಾಕು. ತಮ್ಮ ದೇಹ ಬುದ್ಧಿ- ಭಾವಗಳನ್ನು ನೆಟ್ಟಗಿಟ್ಟುಕೊಂಡರೆ ಸಾಕು.ಸಮಾಜ,ರಾಷ್ಟ್ರ,ವಿಶ್ವದ ಸುಧಾರಣೆಯು ವೈಯಕ್ತಿಕ ನೆಲೆಯಿಂದಲೇ ಪ್ರಾರಂಭವಾಗಬೇಕು.ಪ್ರತಿಯೊಬ್ಬರು ತಮ್ಮ ತಮ್ಮ ತಪ್ಪುಗಳನ್ನು ತಿದ್ದಿಕೊಂಡರೆ ಜಗತ್ತೇ ನೆಟ್ಟಗಾಗುತ್ತದೆ.ಅವರು ತಪ್ಪು ಮಾಡುತ್ತಿದ್ದಾರೆ ಅವರನ್ನು ತಿದ್ದುವೆ,ಬುದ್ಧಿ ಹೇಳುವೆ ಎನ್ನುವ ವ್ಯಕ್ತಿ ಮೊದಲು ತಾನು ನೆಟ್ಟಗಿರಬೇಕಲ್ಲ ! ಇದು ಸ್ವಯಂ ಅಷ್ಟಾವಕ್ರನಾಗಿರುವವನು ಇತರರ ಕಪ್ಪುಬಣ್ಣವನ್ನು ಆಡಿಕೊಂಡಂತೆ ಆಭಾಸದ ಕ್ರಿಯೆ.ತಾನು ಶುದ್ಧನಾಗುತ್ತ,ಇತರರು ಶುದ್ಧಿಯಾಗಲು ಪ್ರೇರೇಪಿಸುವವರೇ ಶುದ್ಧಾತ್ಮರು ಎನ್ನುವ ಬಸವಣ್ಣನವರು ಲೋಕೋದ್ಧಾರದ ಪ್ರಸಿದ್ಧಿಯನ್ನು ಬಯಸದೆ ಮೊದಲು ನೀವು ಶುದ್ಧರಾಗಿ,ಸಿದ್ಧರಾಗಿ,ಬುದ್ಧರಾಗಿ,ಪ್ರಬುದ್ಧರಾಗಿ ಎನ್ನುವ ಸಾರ್ವತ್ರಿಕ- ಸಾರ್ವಕಾಲಿಕ ಸಂದೇಶವನ್ನು ನೀಡಿದ್ದಾರೆ ಈ ವಚನದಲ್ಲಿ.

೦೬.೦೧.೨೦೨೪

About The Author