ತಮ್ಮ ಹೆಸರು ಬೌದ್ಧಮೂಲದ್ದು ಎನ್ನುವುದನ್ನು ಆರ್ ಅಶೋಕ ಅವರು ಅರ್ಥಮಾಡಿಕೊಳ್ಳಬೇಕು ! :ಮುಕ್ಕಣ್ಣ ಕರಿಗಾರ

ತಮ್ಮ ಹೆಸರು ಬೌದ್ಧಮೂಲದ್ದು ಎನ್ನುವುದನ್ನು ಆರ್ ಅಶೋಕ ಅವರು ಅರ್ಥಮಾಡಿಕೊಳ್ಳಬೇಕು ! :ಮುಕ್ಕಣ್ಣ ಕರಿಗಾರ

ರಾಜ್ಯ ಬಿಜೆಪಿಯ ನಾಯಕರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ತಮ್ಮ ಅರ್ಥಹೀನ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.ವಿರೋಧಪಕ್ಷದ ನಾಯಕರಾಗಿರುವ ಆರ್. ಅಶೋಕ ಅವರು ಮುಸಲ್ಮಾನರಪರವಾಗಿರುವ ವಾಗ್ದೇವಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸದ ಸಿದ್ಧರಾಮಯ್ಯನವರು ತಮ್ಮ ಹೆಸರಿನಿಂದ ‘ ರಾಮ’ ನನ್ನು ತೆಗೆಯಲಿ ಎಂದು ಆಗ್ರಹಿಸಿದ್ದಾರೆ.ಈ ಲೇಖನವನ್ನು ಓದುವ ಪೂರ್ವದಲ್ಲಿ ಆರ್ .ಅಶೋಕ ಅವರು ವಾಟ್ಸಾಪ್ ಗುಂಪುಗಳಲ್ಲಿ ವೈರಲ್ ಆದ ನನ್ನ ನಿನ್ನೆಯ ಲೇಖನ ‘ ಸಿದ್ಧರಾಮಯ್ಯನವರು ವಾಗ್ದೇವಿಯ ಗರ್ಭಗುಡಿಯನ್ನು ಪ್ರವೇಶಿಸದೆ ಇರುವುದು ಸದಾಚಾರವೇ ಹೊರತು ದುರಾಚಾರವಲ್ಲ,ಅಪಚಾರವೂ ಅಲ್ಲ !’ ಎನ್ನುವ ಲೇಖನವನ್ನು ಮೊದಲು ಓದಬೇಕು.ಅಕ್ಷರಲೋಕ,ಸಾಂಸ್ಕೃತಿಕ ಲೋಕ ಮನಸ್ಸಿಗೆ ಬಂದದನ್ನೇ ಮಾತನಾಡುವ ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ.ಧರ್ಮ ಮತ್ತು ಅಧ್ಯಾತ್ಮಗಳು ಯಾರೊಬ್ಬರ ಖಾಸಗಿ ಆಸ್ತಿಯಲ್ಲ,ಯಾವುದೇ ರಾಜಕೀಯ ಪಕ್ಷದ ಪೇಟೆಂಟಿನ ಸರಕುಗಳಲ್ಲ.

ಆರ್ .ಅಶೋಕ ಅವರ ‘ ರಾಮನನ್ನು ತೆಗೆಯುವ ಪ್ರಸ್ತಾಪಕ್ಕೆ’ ಬರುವ ಮುಂಚೆ ಒಂದು ವಿಷಯವನ್ನು ಸ್ಪಷ್ಟ ಪಡಿಸಿಯೇ ಮುಂದೆ ಹೋಗುವೆ.ಆರ್.ಅಶೋಕ ಅವರು ಮತ್ತು ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಡುತ್ತಿರುವ ಮುಸ್ಲಿಂ ವಿರೋಧಿ ಮಾತುಗಳು ಸಂವಿಧಾನ ಬಾಹಿರ ನಡೆಯಾಗಿದ್ದು ಬಿಜೆಪಿಯ ನಾಯಕರುಗಳು ಸಂವಿಧಾನ ಬದ್ಧತೆಯನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ.ಇಲ್ಲದಿದ್ದರೆ ಯಾರಾದರೂ ನಿಮ್ಮ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಬಹುದು.ಕರ್ನಾಟಕದ ಮುಸ್ಲಿಮರೇನು ವಿದೇಶದವರಲ್ಲ,ಅವರೂ ಈ ರಾಜ್ಯವಾಸಿಗಳು,ಭಾರತದ ಪ್ರಜೆಗಳು.ಭಾರತದ ಪ್ರಜೆಗಳಲ್ಲಿ ಜಾತಿ,ಮತ,ಧರ್ಮಗಳ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡಕೂಡದು ಎನ್ನುತ್ತದೆ ನಮ್ಮ ಸಂವಿಧಾನ.ಶಾಸಕರಾಗಿ ಆಯ್ಕೆಯಾದವರು,ವಿಧಾನಸಭೆಯಲ್ಲಿ ಶಾಸಕ ಕರ್ತವ್ಯ ನಿರ್ವಹಣೆಯನ್ನು‌ ಪ್ರಾರಂಭಿಸುವ ಮುಂಚೆ ‘ ಸಂವಿಧಾನಬದ್ಧವಾಗಿ ನಡೆಯುತ್ತೇನೆ’ ಎಂದು ಪ್ರಮಾಣವಚನ ಸ್ವೀಕರಿಸಿರುತ್ತಾರೆ.ಹೀಗಾಗಿ ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ ಅವರು ಆಡುತ್ತಿರುವ ಮುಸ್ಲಿಂ ಸಮುದಾಯದ ವಿರೋಧಿ ಮಾತುಗಳು ಸಂವಿಧಾನವಿರೋಧಿ ನಡೆ ಎನ್ನುವುದನ್ನು ಅವರಿಬ್ಬರು ಅರ್ಥ ಮಾಡಿಕೊಳ್ಳಬೇಕು.ಶಾಸಕರಾದವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರಲಿ ಯಾವುದೇ ಜನಾಂಗದ ಅಭಿವೃದ್ಧಿಗೆ ವಿರುದ್ಧವಾಗಿ ಮಾತನಾಡುವುದನ್ನಾಗಲಿ,ನಡೆದುಕೊಳ್ಳುವುದನ್ನಾಗಲಿ ಮಾಡಬಾರದು.

ಸಿದ್ಧರಾಮಯ್ಯನವರು ತಮ್ಮ ಹೆಸರಿನಿಂದ ‘ ರಾಮ’ ನನ್ನು ಏಕೆ ತೆಗೆಯಬೇಕು ಎನ್ನುವುದಕ್ಕೆ ಆರ್.ಅಶೋಕ ಅವರು ಮೊದಲು ಕಾರಣವನ್ನು ಹೇಳಬೇಕು.ಆರ್.ಅಶೋಕ ಅವರು ಭಾವಿಸಿದಂತೆ ಸಿದ್ಧರಾಮಯ್ಯನವರಲ್ಲಿರುವ ‘ ರಾಮ’ ಬಿಜೆಪಿಯವರು ಗುತ್ತಿಗೆ ಹಿಡಿದ ರಾಮಾಯಣದ ‘ ರಾಮ’ ನಲ್ಲ, ಕನ್ನಡದ ವಚನಕಾರ ಸಿದ್ಧರಾಮ ಸಿದ್ಧರಾಮಯ್ಯನವರ ‘ರಾಮ’. ಆರ್.ಅಶೋಕ ಅವರಿಗೆ ಗೊತ್ತಿರಬಹುದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಂದಿದ್ದು ಮೈಸೂರಿನ ಸಿದ್ಧರಾಮನ ಹುಂಡಿಯಿಂದ.ವಚನಕಾರ ಸಿದ್ಧರಾಮನ ಭಕ್ತರು ಸಿದ್ಧರಾಮನ ಮೂರ್ತಿ ಒಂದನ್ನು ತಮ್ಮ ಊರಿನಲ್ಲಿ ಪ್ರತಿಷ್ಠಾಪಿಸಿದ್ದರಿಂದ ಆ ಹಳ್ಳಿಗೆ ಸಿದ್ಧರಾಮನ ಹುಂಡಿ ಎಂದು ಹೆಸರಾಗಿದೆ.ವಚನಕಾರ ಸಿದ್ಧರಾಮನು ಕುರುಬರಕುಲದವನು ಆಗಿದ್ದರಿಂದ ( ಸಿದ್ಧರಾಮ ಕುಡು ಒಕ್ಕಲಿಗ ಎನ್ನುವುದು ಸುಳ್ಳುಸೃಷ್ಟಿ) ಕುರುಬರಲ್ಲಿ ತಮ್ಮ ಮಕ್ಕಳಿಗೆ ಸಿದ್ಧರಾಮ ಎಂದು ಹೆಸರಿಡುವುದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಆಚರಣೆಯಲ್ಲಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರ ತಂದೆ ತಾಯಿಗಳು ವಚನಕಾರ ಸಿದ್ಧರಾಮನ ಹೆಸರನ್ನು ತಮ್ಮ ಮಗನಿಗೆ ಇಟ್ಟಿದ್ದಾರೆಯೇ ಹೊರತು ರಾಮಾಯಣದ ರಾಮನ ಹೆಸರನ್ನಲ್ಲ ಎನ್ನುವ ಕುರುಬರ ಕುಲಮೂಲಪರಂಪರೆಯ ಪ್ರಾಥಮಿಕ ಜ್ಞಾನವು ಆರ್.ಅಶೋಕ ಅವರಿಗೆ ಇರಬೇಕು.

ಈಗ ಬಿಜೆಪಿಯವರು ಹೇಳುತ್ತಿರುವ ‘ ರಾಮ’ ನೊಬ್ಬನೇ ಭಾರತದ ರಾಮನಲ್ಲ.ವಾಲ್ಮೀಕಿಯವರ ರಾಮಾಯಣದಲ್ಲೇ‌ಮತ್ತೊಬ್ಬ ರಾಮ‌ನಿದ್ದಾನೆ, ‘ಪರಶುರಾ’ಮನೆಂದು ಪ್ರಖ್ಯಾತನಾದ ಮಹಾವೀರನಾತ.ಬಿಜೆಪಿಯವರ ರಾಮ ಇಕ್ಷಾಕುವಂಶೋತ್ಪನ್ನ ರಾಮನಾದರೆ ಪರಶುರಾಮನು ಜಮದಗ್ನಿ ರೇಣುಕೆಯರ ಪುತ್ರನಾದ ಮಹಾಬಲಶಾಲಿಯಾಗಿದ್ದು ತನ್ನ ತಂದೆಯ ಕೊಲೆಯಸೇಡಿಗಾಗಿ ಪೃಥ್ವಿಯಲ್ಲಿ ಕ್ಷತ್ರಿಯಕುಲಸಮೂಲನಾಶಕ್ಕಾಗಿ ಪಣತೊಟ್ಟು ಪರಶಿವನನ್ನು ಕುರಿತು ಉಗ್ರ ತಪಸ್ಸನ್ನಾಚರಿಸಿ ಶಿವನಿಂದ ಅಜೇಯವಾದ ಕೊಡಲಿಯನ್ನು ಪಡೆದು ‘ ಪರಶುರಾಮ’ ನಾಗುತ್ತಾನೆ.

ವೇದದಲ್ಲೂ ಒಬ್ಬ ‘ ರಾಮ’ ನಿದ್ದಾನೆ.ಆದರೆ ಆತ ಬಿಜೆಪಿಯವರ ರಾಮನೂ ಅಲ್ಲ,ವಾಲ್ಮೀಕಿ ರಾಮಾಯಣದ ರಾಮನೂ ಅಲ್ಲ.ಆತ್ಮತತ್ತ್ವದ ಪ್ರತೀಕವಾದ ‘ ಆತ್ಮಾರಾಮ’ ನು ವೇದದಲ್ಲಿದ್ದಾನೆ.ಮಹರ್ಷಿ ವಾಲ್ಮೀಕಿಗಳು ಬಹುಶಃ ವೇದದ ಈ ‘ ಆತ್ಮಾರಾಮ’ ನಿಂದಲೇ ಸ್ಫೂರ್ತಿಗೊಂಡು ಮಹಾಕಾವ್ಯ,ಆದಿಕಾವ್ಯ ರಾಮಾಯಣವನ್ನು ರಚಿಸಿರಬೇಕು.’ಆತ್ಮಾರಾಮ’ ನು ವ್ಯಕ್ತಿಯಲ್ಲ,ಜಾತಿಯಲ್ಲ,ಮತವಲ್ಲ,ಧರ್ಮವಲ್ಲ; ಜೀವಸಮಸ್ತರ ಆತ್ಮಚೈತನ್ಯನಾತ.’ ರಾಮ’ ಎಂದರೆ ರಮಿಸು ಎಂದಾಗುತ್ತಿದ್ದು ಎಲ್ಲರ ದೇಹಗಳಲ್ಲಿ ವಾಸಿಸುವನೇ ರಾಮನು,ಆತ್ಮಾರಾಮನು.ಬಿಜೆಪಿಯವರು ಗುತ್ತಿಗೆ ಹಿಡಿದ ರಾಮನು ಕ್ರಿಶ ಆರನೇ ಶತಮಾನದಿಂದ ದೇವರಾಗಿ ಪೂಜಿಸಲ್ಪಡುತ್ತಿರುವ ಕ್ಷತ್ರಿಯ ಕುಲೋದ್ಭವ ರಾಮನು.ಭಾರತದ ಪ್ರಜೆಗಳೆಲ್ಲರೂ ಆತ್ಮಾರಾಮನನ್ನು ಹೊಂದುವ ಹಕ್ಕು,ಅವಕಾಶಗಳನ್ನು ಪಡೆದಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಹೆಸರಿನಿಂದ ‘ ರಾಮ’ ನನ್ನು ತೆಗೆಯಬೇಕು ಎಂದು ಆಗ್ರಹಿಸುವ ಆರ್.ಅಶೋಕ ಅವರಿಗೆ ತಮ್ಮ ಹೆಸರಿನ ಮೂಲವೇನಾದರೂ ಗೊತ್ತಿದೆಯೆ? ಅಶೋಕ ಎನ್ನುವುದು ಹಿಂದೂ ಹೆಸರಂತೂ ಅಲ್ಲ.ವೇದ,ಉಪನಿಷತ್ತುಗಳಲ್ಲಾಗಲಿ ಅಥವಾ ಪುರಾಣಗಳಲ್ಲಾಗಲಿ ಅಶೋಕನೆಂಬ ದೊರೆ ಇಲ್ಲ.ಬೌದ್ಧಮತಾನುಯಾಗಿ ಜಗದ್ವಿಖ್ಯಾತನಾದ ಧರ್ಮಚಕ್ರವರ್ತಿ ಅಶೋಕನೇ ಆರ್. ಅಶೋಕ ಅವರ ಹೆಸರಿನ ಹಿಂದೆ ಇರುವ ಅಶೋಕ! ಪುರಾಣಕಾಲದ ಯಾವ ದೊರೆಗಳಿಗೂ ಅಶೋಕ ಎನ್ನುವ ಹೆಸರು ಇಲ್ಲ ಎನ್ನುವುದನ್ನು ಆರ್ ಅಶೋಕ ಅವರು ಗಮನಿಸಬೇಕು.ನಿಮ್ಮ ಹೆಸರೇ ಬೌದ್ಧಮೂಲದ ಹೆಸರಾಗಿರುವಾಗ ನೀವು ಸಿದ್ಧರಾಮಯ್ಯನವರ ಹೆಸರಿನ ‘ ರಾಮ’ ನನ್ನು ತೆಗೆಯ ಹೇಳುವುದು ಯಾವ ತರ್ಕ ಆರ್.ಅಶೋಕ ಅವರೆ?ಕೊನೆಯದಾಗಿ ಅಶೋಕ ಅವರೆ,ನಿಮ್ಮನ್ನು ಮೂದಲಿಸಬೇಕು ಎನ್ನುವ ಉದ್ದೇಶದಿಂದ ನಿಮ್ಮ ಹೆಸರಿನ ಹಿಂದಿನ ಬೌದ್ಧಮೂಲವನ್ನು ನಾನು ಪ್ರಸ್ತಾಪಿಸಲಿಲ್ಲ.ನಿಮ್ಮ‌ಪಕ್ಷವು ಜವಾಬ್ದಾರಿಯುತ ವಿರೋಧಪಕ್ಷವಾಗಿ ವರ್ತಿಸಬೇಕೇ ಹೊರತು ಪ್ರಾಥಮಿಕ ಶಾಲಾ ಮಕ್ಕಳು ಹೆಸರು ಹಿಡಿದು ಕಚ್ಚಾಡುವಂತೆ ಪ್ರಜೆಗಳ ಅಭಿವೃದ್ಧಿ ವಿಷಯಕ್ಕೆ ಸಂಬಂಧವೇ ಪಡದ ಧಾರ್ಮಿಕ ವಿಷಯಗಳ ಬಗ್ಗೆ,ವೈಯಕ್ತಿಕ ಬದುಕಿನ ಸಂಗತಿಗಳನ್ನೇ ವೈಭವೀಕರಿಸಿ ಮಾತನಾಡುವುದನ್ನು ಮಾಡಬಾರದು.

*** ಲೇಖಕರು ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಕನ್ನಡದ ಖ್ಯಾತನಾಮಸಾಹಿತಿಗಳಲ್ಲೊಬ್ಬರಾಗಿದ್ದಾರಲ್ಲದೆ ” ಶೂದ್ರ ಭಾರತ ಪಕ್ಷ” ಎನ್ನುವ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕದ ಪ್ರಾದೇಶಿಕ ರಾಜಕೀಯ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದಾರೆ***

೦೫.೦೧.೨೦೨೪

About The Author