ಬಸವೋಪನಿಷತ್ತು ೦೫ : ಮುಪ್ಪಡರುವ ಮುನ್ನ ಪೂಜಿಸಬೇಕು ಮಹಾದೇವ ಶಿವನನ್ನು: ಮುಕ್ಕಣ್ಣ ಕರಿಗಾರ

ಬಸವೋಪನಿಷತ್ತು ೦೫ : ಮುಪ್ಪಡರುವ ಮುನ್ನ ಪೂಜಿಸಬೇಕು ಮಹಾದೇವ ಶಿವನನ್ನು: ಮುಕ್ಕಣ್ಣ ಕರಿಗಾರ

ನೆರೆ ಕೆನ್ನೆಗೆ,ತೆರೆ ಗಲ್ಲಕ್ಕೆ,ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ,ಬೆನ್ನು ಬಾಗಿ,ಅನ್ಯರಿಗೆ ಹಂಗಾಗದ ಮುನ್ನ,
ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ,ಮೃತ್ಯುಮುಟ್ಟದ ಮುನ್ನ
ಪೂಜಿಸು ನಮ್ಮ ಕೂಡಲ ಸಂಗಮದೇವನ

ಬಸವಣ್ಣನವರು ಶರೀರ ಗಟ್ಟಿಯಾಗಿದ್ದಾಗಲೆ ಶಿವನನ್ನು ಪೂಜಿಸಬೇಕು ಎನ್ನುವ ವಿಶೇಷ ಉಪದೇಶ ಒಂದನ್ನು ನೀಡಿದ್ದಾರೆ ಲೋಕಸಮಸ್ತರಿಗೆ ಈ ವಚನದಲ್ಲಿ.ಬಸವಣ್ಣನವರು ಹೀಗೆ ಬೋಧಿಸಲು ಒಂದು ಕಾರಣವೂ ಇದೆ.ಜನರಲ್ಲಿ ಶಿವದೀಕ್ಷೆ,ಗುರೂಪದೇಶವನ್ನು ವಯಸ್ಸಾದ ಮೇಲೆಯೇ ಪಡೆಯಬೇಕು,ತಾರುಣ್ಯದಲ್ಲಿ ಪಡೆಯಬಾರದು ಎನ್ನುವ ತಪ್ಪು ಕಲ್ಪನೆ ರೂಢಿಯಲ್ಲಿದೆ. ಬಾಲ್ಯದಲ್ಲಿ ಗುರುದೀಕ್ಷೆ ಪಡೆದವರು ಸಂಸಾರದಲ್ಲಿ ಅನಾಸಕ್ತರಾಗುತ್ತಾರೆ,ಪ್ರಪಂಚದಿಂದ ವಿಮುಖರಾಗುತ್ತಾರೆ ಎನ್ನುವ ತಪ್ಪು ಕಲ್ಪನೆಯು ಅದು ಹೇಗೋ ರೂಢಿಗೊಂಡಿದೆ.ಬಾಲ್ಯ ಮತ್ತು ತಾರುಣ್ಯದ ಕಾಲದಲ್ಲಿ ಶಿವದೀಕ್ಷೆಯನ್ನು ಪಡೆದರೆ ಶಿವ ಭಕ್ತಿಯನ್ನಾಚರಿಸಲು,ಶಿವಯೋಗ ಸಾಧನೆ ಮಾಡಲು ಸಾಧ್ಯ.ವಯಸ್ಸಾದ ಬಳಿಕ ಸಾಧನೆ ಮಾಡುತ್ತೇವೆ ಎಂದರೆ ಅದು ಸಾಧ್ಯವಾಗುವುದಿಲ್ಲ.ಕೈಕಾಲುಗಳು ಎಳೆತಾಗಿದ್ದಾಗಲೇ ಯೋಗಾಸನಗಳಲ್ಲಿ ಪಳಗಿಸಬೇಕು ಅವುಗಳನ್ನು,ಸಂಸಾರಿಗರಾಗಿ ಇಂದ್ರಿಯಸುಖವನ್ನು ಅನುಭವಿಸುವ ಮುನ್ನವೇ ಪದ್ಮಾಸನದಲ್ಲಿ ಕುಳಿತು ಧ್ಯಾನಿಸಬೇಕು.ಮದುವೆಯಾದ ಬಳಿಕ ಘಂಟೆಗಳಗಟ್ಟಲೆ ಬೆನ್ನು ನೆಟ್ಟಗೆ ಮಾಡಿಕೊಂಡು ಯೋಗ ಮಾಡಲು ಸಾಧ್ಯವಿಲ್ಲ..ಇಂದ್ರಿಯ ಹೊರಹೋದಂತೆಲ್ಲ ಬೆನ್ನುಹುರಿ ಸಡಿಲವಾಗುತ್ತದೆ,ದೇಹ ದುರ್ಬಲವಾಗುತ್ತದೆ.’ಪಶ್ಚಿಮಪದ್ಮಾಸನ’ ( ಬಸವಣ್ಣನವರೇ ಹೇಳುವ ಅವರ ಯೋಗಪದ್ಧತಿ) ದಲ್ಲಿ ನೆಟ್ಟಗೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ದೀರ್ಘಕಾಲ.ಇನ್ನು ಮುಪ್ಪಡರಿದ ಬಳಿಕ ಶಿವಧ್ಯಾನ ಮಾಡುತ್ತೇವೆ ಎನ್ನುವುದಂತೂ ಅಸಾಧ್ಯದ ಮಾತೇ ಸರಿ.ಸಂಸ್ಕಾರವನ್ನು ಬಾಲ್ಯದಲ್ಲಿಯೇ ನೀಡಬೇಕು.ಶಿವಸಂಸ್ಕಾರ,ಶಿವಪೂಜಾಸಂಸ್ಕಾರವನ್ನು ಬಾಲ್ಯ ಇಲ್ಲವೆ ತಾರುಣ್ಯದಲ್ಲಿ ನೀಡಿದರೆ ಮುಂದೆ ಅದು ಮರವಾಗಿ ಫಲನೀಡುತ್ತದೆ.

ದವಡೆಗೆ ನೆರೆಯಂಟದ ಮುಂಚೆ,ಗಲ್ಲವು ಅದರುವ ಮುಂಚೆ,ದೇಹವು ಅಂದಗೆಟ್ಟು ಎಲುವಿನ ಹಂದರದಂತೆ ಕಾಣಿಸುವ ಮುಂಚೆ,ಹಲ್ಲುಗಳುದುರಿ ಬಚ್ಚುಬಾಯಿಯಾಗುವ ಮುಂಚೆ,ಬೆನ್ನೆಲವು ಸಡಿಲಗೊಂಡು,ಬಾಗಿ ನಡೆಯುವಂತಾಗಿ ಕೋಲಿನ ಆಸರೆ ಇಲ್ಲವೆ ಪರರ ಆಶ್ರಯವನ್ನು ಆಸರಿಸದ ಪೂರ್ವ,ಕೈಯ್ಗಳಲ್ಲಿ ಶಕ್ತಿ ಇಲ್ಲದೆ ಕಾಲಮೇಲೆ ಕೈಗಳನ್ನಿಟ್ಟುಕೊಂಡು ಕೂಡುವ ಮುಂಚೆ,ಬಡಿಗೆ ಅಥವಾ ಕೋಲನ್ನೂರಿ ನಡೆಯುವಷ್ಟು ದುರ್ಬಲನಾಗುವ ಮುಂಚೆ ,ಮುಪ್ಪಡರಿ ದೇಹ ತನ್ನ ಸ್ವಾಸ್ಥ್ಯ,ಸೌಂದರ್ಯವನ್ನಳಿದುಕೊಳ್ಳುವ ಮುಂಚೆ,ಸಾವು ಬರುವ ಮುಂಚೆ ಶಿವನನ್ನು ಪೂಜಿಸಿ ಎನ್ನುತ್ತಾರೆ ಬಸವಣ್ಣನವರು.ದೇಹ ಗಟ್ಟಿಯಾಗಿದ್ದಾಗಲೇ ಶಿವನನ್ನು ಪೂಜಿಸಬೇಕು,ವಯಸ್ಸಾದ ಬಳಿಕ,ಮುಪ್ಪಾದ ಬಳಿಕ,ದಿನಗಳನ್ನೆಣಿಸುವ ವೃದ್ಧಾಪ್ಯದಲ್ಲಿ ಶಿವನನ್ನು ಪೂಜಿಸುತ್ತೇವೆ ಎನ್ನುವುದು ಸರಿಯಲ್ಲ.ದೇಹ ಮತ್ತು ಮನಸ್ಸುಗಳು ಆರೋಗ್ಯದಿಂದಿರುವಾಗಲೆ ಶಿವಪೂಜೆಯನ್ನು ಮಾಡಬೇಕು.ದೇಹ,ಬುದ್ಧಿ ತನ್ನ ಸ್ವಾಧೀನದಲ್ಲಿರುವಾಗಲೆ ಸಾಧಿಸಬೇಕು ಶಿವಯೋಗವನ್ನು,ದೇಹ ಪರಾಧೀನವಾಗಿ,ಬುದ್ಧಿ ಸ್ವಾಧೀನ ತಪ್ಪಿದಾಗ ಶಿವನ ಸ್ಮರಣೆ,ಶಿವಪೂಜೆ ಮಾಡಲು ಸಾಧ್ಯವಾಗುವುದಿಲ್ಲ.

ಶಿವಪೂಜೆಯು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು.ಶಿವಭಕ್ತರಾದವರು ತಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಶಿವ ಸಂಸ್ಕಾರವನ್ನು ನೀಡಬೇಕು.ಆ ಕಾರಣದಿಂದಲೇ ಮಗು ತಾಯಿಯ ಗರ್ಭದಲ್ಲಿರುವಾಗಲೆ ಮನೆಯಲ್ಲಿ ಶಿವಸಂಸ್ಕಾರದ,ಶಿವಮಯ ವಾತಾವರಣವನ್ನು ನಿರ್ಮಿಸಬೇಕು.ಶಿವನ‌ ಕಥೆ- ಪುರಾಣಗಳ ಪ್ರವಚನ,ಶಿವ ಗೀತೆಗಳ ಗಾಯನ,ಶಿವ ಸಂಕೀರ್ತನೆಗಳನ್ನೇರ್ಪಡಿಸುವುದು ಇವೇ ಮೊದಲಾದ ಶಿವಭಕ್ತಿಯ ವಾತಾವರಣವನ್ನುಂಟು ಮಾಡುವುದರಿಂದ ಗರ್ಭಸ್ಥಮಗು ಶಿವಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆಯುತ್ತದೆ.ಬೆಳೆದ ಮಗುವಿಗೆ ಮೂರು,ಐದು,ಒಂಬತ್ತು ಅಥವಾ ಹನ್ನೊಂದು ವರ್ಷಗಳಲ್ಲಿ ವಿವಿಧ ಶಿವಾಚಾರಗಳ ಸಂಸ್ಕಾರವನ್ನು ನೀಡಬೇಕು.ಮಗು ಬೆಳೆದು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಅಂದರೆ ಬಾಲಕ- ಬಾಲಕಿಯರು ಹದಿನಾರು ವರ್ಷಗಳನ್ನು ತಲುಪುತಿದ್ದಂತೆ ಅವರಿಗೆ ಯೋಗ್ಯಗುರುವಿನಿಂದ ಶಿವದೀಕ್ಷೆಯನ್ನು ಕೊಡಿಸಬೇಕು.ಶಿವಪೂಜೆ,ಶಿವಯೋಗ ಸಾಧನೆಯಲ್ಲಿ ಮಕ್ಕಳನ್ನು ಪಳಗಿಸಬೇಕು.ಶಿವಸಂಸ್ಕಾರಗೊಂಡ ಮನಸ್ಸು ಭವದ ಮೋಹ ಮಮಕಾರಗಳು,ವಿಪರೀತ ವಿಷಯಾಸಕ್ತಿಯತ್ತ ಹೊರಳದು.ಬಾಲ್ಯದಲ್ಲಿಯೇ ಶಿವಸಂಸ್ಕಾರವನ್ನು ಕೊಡಿಸುವುದರಿಂದ ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಆಧುನಿಕ ಪ್ರಪಂಚದ ತರುಣಜನಾಂಗ ಎದುರಿಸುತ್ತಿರುವ ವಿಕೃತಜೀವನಾನಂದತ್ತ ಮನಸ್ಸು ಮಾಡುವುದಿಲ್ಲ.ಸನ್ನಡತೆ,ಸದಾಚಾರಗಳಿಂದ ಉತ್ತಮ ನಾಗರಿಕರಾಗಿ ಬಾಳುತ್ತಾರೆ.ಸ್ವಾರ್ಥಿಗಳಾಗದೆ ಪರೋಪಕಾರಿಗಳಾಗಿ ಮನೆಯವರು,ತಂದೆ ತಾಯಿಗಳಲ್ಲಿ ಗೌರವಾದರಗಳನ್ನು ಹೊಂದಿರುತ್ತಾರೆ.ಬಾಲ್ಯದ ಶಿವಸಂಸ್ಕಾರವು ಬಲಿತು ತಾರುಣ್ಯದಾರಂಭದ ದಿನಗಳಿಂದಲೂ ಶಿವಪೂಜೆ,ಶಿವಧ್ಯಾನಗಳನ್ನು ಮಾಡುತ್ತ ಶಿವಾನುಗ್ರಹ ಪಡೆಯುತ್ತಾರೆ,ಮೋಕ್ಷಕ್ಕೆ ಅರ್ಹರಾಗುತ್ತಾರೆ.ಇದು ಸಂಸಾರಿಗಳಿಗೆ ಸುಲಭವಾದ ಶಿವಯೋಗವಾಗಿದ್ದು ಇಂತಹ ಶಿವಭಕ್ತಿಯನ್ನಾಚರಿಸುತ್ತ ಮನೆಯನ್ನೇ ಮಹಾದೇವನ ನೆಲೆಯನ್ನಾಗಿಸಬಹುದು.ಮನೆಮನೆಗಳಲ್ಲಿ ಶಿವಬೆಳಕಿನ‌ ಪ್ರಣತೆಗಳನ್ನು ಬೆಳಗಿಸುವ ಮೂಲಕ ಭವಪ್ರಪಂಚವನ್ನೆ ಶಿವಪ್ರಪಂಚವನ್ನಾಗಿಸಬಹುದು.

೦೫.೦೧.೨೦೨೪

About The Author