ಬಸವೋಪನಿಷತ್ತು ೦೪ : ಲೋಕ ಹಿತಚಿಂತನೆಯಲ್ಲಿ ಬದುಕುವುದೇ ಶ್ರೇಷ್ಠ ಬದುಕು

ಬಸವೋಪನಿಷತ್ತು ೦೪ : ಲೋಕ ಹಿತಚಿಂತನೆಯಲ್ಲಿ ಬದುಕುವುದೇ ಶ್ರೇಷ್ಠ ಬದುಕು : ಮುಕ್ಕಣ್ಣ ಕರಿಗಾರ

ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕುದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರುದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಶ್ಲೋಕ : ಜೀವಿತಂ ಶಿವಭಕ್ತಾನಾಂ/ ವರಂ ಪಂಚದಿನಾನಿ ಚ/
ನಾಜಕಲ್ಪ ಸಹಸ್ರೇಭ್ಯೋ / ಭಕ್ತಿಹೀನಸ್ಯ ಶಾಂಕರಿ//
ಎಂಬುದಾಗಿ ಕೂಡಲ ಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನೋ ?

ಬದುಕಿನ ಸಾರ್ಥಕತೆಯ ಬಗ್ಗೆ ಬಸವಣ್ಣನವರು ಈ ವಚನದಲ್ಲಿ ವಿವರಿಸಿದ್ದಾರೆ.ಮರ್ತ್ಯದಲ್ಲಿ ಮನುಷ್ಯರ ಬದುಕಿಗೆ ಹಿರಿಮೆ ಗರಿಮೆಗಳೊದಗುವುದು ಅವರು ಎಷ್ಟು ದಿನ ಬದುಕಿದರು ಎನ್ನುವುದರಿಂದಲ್ಲ,ಹೇಗೆ ಬದುಕಿದರು ಎನ್ನುವುದರಿಂದ.ಇದನ್ನೇ ಬಸವಣ್ಣನವರು ‘ ಲೇಸೆನ್ನಿಸಿಕೊಂಡು ಬದುಕುವುದು’ ಎನ್ನುತ್ತಾರೆ.ಪರೋಪಕಾರಿಗಳಾಗಿ ಐದುದಿನ ಬದುಕಿದರರೂ ಕೂಡ ಆ ಬದುಕು ಶ್ರೇಷ್ಠವೆ.ಲೋಕಹಿತಚಿಂತನೆಯಲ್ಲಿ ನಾಲ್ಕುದಿನ ಬದುಕಿದರೂ ಆ ಬದುಕು ಹಿರಿದಾದ ಬದುಕೆ.ಸಮಷ್ಟಿ ಕಲ್ಯಾಣಕ್ಕೆ ಶ್ರಮಿಸುತ್ತ ಮೂರು ದಿನ ಬದುಕಿದರೂ ಆ ಬದುಕು ಅದ್ಭುತವಾದ ಬದುಕೆ.ಭೂತಹಿತ ಚಿಂತನೆಯಲ್ಲಿ ಎರಡುದಿನ ಬದುಕಿದರೂ ಆ ಬದುಕು ಮಹತ್ವಪೂರ್ಣವಾದ ಬದುಕೆ.ಶಿವಭಕ್ತಿಯಿಲ್ಲದೆ ಬ್ರಹ್ಮನ ಆಯುರ್ಮಾನದ ಸಹಸ್ರವರ್ಷಗಳಷ್ಟು ಬದುಕಿದರೇನು ಫಲ? ಶಿವಭಕ್ತನಾಗಿ ಲೇಸೆನ್ನಿಸಿಕೊಂಡು ಒಂದು ದಿನ ಬದುಕಿದರೂ ಆ ಬದುಕು ಲೋಕೋತ್ತರ ಬದುಕಾಗುತ್ತದೆ,ಲೋಕಕ್ಕೆ ಆದರ್ಶವಾಗುತ್ತದೆ ಎನ್ನುತ್ತಾರೆ ಬಸವೇಶ್ವರರು.

ಮನುಷ್ಯರು ಬದುಕಿಗೆ ಸಾರ್ಥಕತೆಯೊದಗುವುದು ಲೋಕಹಿತಚಿಂತನೆ ಮತ್ತು ಪರಹಿತದ ದುಡಿಮೆಯಿಂದ.ಸ್ವಾರ್ಥಿಯಾಗಿ,ಸಂಕುಚಿತ ಮನಸ್ಕರಾಗಿ ನೂರು ವರ್ಷ ಬದುಕಿದರೇನು,ಸಾವಿರ ವರ್ಷ ಬದುಕಿದರೇನು? ಆ ಬದುಕು ಮಹತ್ವದ ಬದುಕಲ್ಲ.ಭೂತಾನುಕಂಪೆಯಿಂದ ನಾಲ್ಕು ಜನರಿಗೆ ಕೈಲಾದ ಸಹಾಯ ಮಾಡುತ್ತ,ಪರರ ಕಷ್ಟಗಳಲ್ಲಿ ಸ್ಪಂದಿಸುತ್ತ,ಜನೋಪಕಾರಿಗಳಾಗಿ ಬದುಕಿದರೆ ಆ ಬದುಕು ಜಗದೀಶ್ವರನಾದ ಶಿವನಿಗೆ ಪ್ರಿಯವಾದ ಬದುಕು ಎನ್ನಿಸುತ್ತದೆ.ನಾಲ್ಕು ಜನರಿಗೆ ಬೇಕಾಗುವಂತೆ ಬಾಳುವುದೇ ಲೇಸಾದ ಬದುಕು.ಪರರಿಗೆ ಕೆಡುಕನ್ನೆಸಗುತ್ತ,ನಂಬಿದವರಿಗೆ ದ್ರೋಹವನ್ನೆಸಗುತ್ತ,ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಅಪಕಾರಮಾಡುತ್ತ ಬದುಕುವ ಬದುಕು ತುಚ್ಛಬದುಕು.ತುಚ್ಛಬದುಕನ್ನು ಬಾಳುತ್ತ ಎಷ್ಟೇ ವರ್ಷಗಳ ಕಾಲ ಬಾಳಿದರೂ ಮೆಚ್ಚಿಸಲಾಗದು ಪರಮಾತ್ಮನನ್ನು.ಹದ್ದಿನಂತೆ ಸಾವಿರ ವರ್ಷ ಬದುಕುವದಕ್ಕಿಂತ ಹುಲಿಯಂತೆ ಮೂರು ವರ್ಷ ಬದುಕುವುದೇ ಹೆಚ್ಚುಗಾರಿಕೆ.ಹದ್ದು ಸಾವಿರ ವರ್ಷ ಬದುಕಿದರೂ,ಮೇಲೆ ಎತ್ತರದಲ್ಲಿ ಹಾರಿದರೂ ಅದರ ದೃಷ್ಟಿ ನೆಲದಲ್ಲಿ ಹರಿದಾಡುತ್ತಿರುವ ಕ್ರಿಮಿ ಕೀಟಗಳು,ಸತ್ತಪ್ರಾಣಿಗಳ ಮಾಂಸದ ಮೇಲೆಯೇ ಇರುತ್ತದೆ.ಇದೇತರದ ಬದುಕು? ಸಾವಿರ ವರ್ಷ ಬದುಕುವ ಹದ್ದಿಗಿಂತ ಸಾಕಿದ ಮನೆಯ ಒಡೆಯನನ್ನು ಗುರುತಿಸಿ ಬಾಲ ಆಡಿಸಿ,ಕೃತಜ್ಞತೆಯನ್ನು ವ್ಯಕ್ತಪಡಿಸುವ ಮುದ್ದು ನಾಯಿಮರಿಯೇ ಶ್ರೇಷ್ಠವಾದುದು.

ಬಸವಣ್ಣನವರು ಶಿವಭಕ್ತಿಯಿಲ್ಲದ ಬದುಕು ಅರ್ಥಹೀನ ಬದುಕು,ಶಿವಭಕ್ತಿಯಿಲ್ಲದವರು ಸಾವಿರ ವರ್ಷ ಬದುಕಿದರೂ ವ್ಯರ್ಥ ಎನ್ನುತ್ತಾರೆ.ಶಿವಭಕ್ತಿಯನ್ನಾಚರಿಸುತ್ತ ಐದುದಿನ ಬದುಕಿದರು ಸರಿಯೆ,ನಾಲ್ಕುದಿನ ಬದುಕಿದರು ಸರಿಯೆ,ಮೂರು ದಿನ ಬದುಕಿದರೆ ಸರಿಯೆ,ಎರಡು ದಿನ‌ಬದುಕಿದರು ಸರಿಯೆ,ಕೊನೆಗೆ ಒಂದು ದಿನ ಬದುಕಿದರೂ ಕೂಡ ಶಿವಭಕ್ತನ ಬಾಳು ಉತ್ತಮವಾದ,ಆದರ್ಶವಾದ ಬಾಳು ಎನ್ನುತ್ತಾರೆ.ಶಿವಭಕ್ತರಾಗುವುದು ಎಂದರೆ ಕೇವಲ ಶಿವಾಲಯಗಳನ್ನು ಕಟ್ಟಿಸುವುದು,ಶಿವಾಲಯಗಳನ್ನು ಸುತ್ತುವುದು,ಶಿವನ ಲಿಂಗ ಮೂರ್ತಿಗಳನ್ನು ಪೂಜಿಸುವುದು,ಶಿವನ ಹೆಸರಿನಲ್ಲಿ ವ್ರತಾನುಷ್ಠಾನಗಳನ್ನು ಆಚರಿಸುವುದಲ್ಲ,ಶಿವನ ಲೋಕಕಲ್ಯಾಣ ಗುಣವನ್ನಳವಡಿಸಿಕೊಂಡು ಭೂತಾನುಕಂಪೆಯ ಭಾವದಿಂದ ಸಮಷ್ಟಿಕಲ್ಯಾಣಕ್ಕಾಗಿ ಪರಿಶ್ರಮಿಸುವುದೇ ಶಿವಭಕ್ತರ ಲಕ್ಷಣ.ಲೋಕಪ್ರಭುವಾದ ಪರಶಿವನು ಯಾರಿಗೂ ಕೆಡುಕನ್ನೆಸಗನು,ಸರ್ವರಿಗೂ ಒಳಿತನ್ನೇ ಬಯಸುವ ಮಂಗಳಮೂರ್ತಿಯಾದ್ದರಿಂದ ಅವನಿಗೆ ಶಿವನೆಂಬ ಹೆಸರು .’ ಶಿವ’ ಎಂದರೆ ಅಶುಭನಿವಾರಕ,ಕಲ್ಯಾಣ,ಮಂಗಳ ಎನ್ನುವ ಅರ್ಥಗಳಿದ್ದು ಈ ಅರ್ಥಗಳ ತತ್ತ್ವರೂಪವೇ ಶಿವನು.ಶಿವಭಕ್ತರು ಶಿವನ ತತ್ತ್ವಾರ್ಥದ ಸಾಕಾರರೂಪರಾಗಿ ಬಾಳಿ,ಬದುಕಬೇಕು.ಪರಶಿವನು ಹುಟ್ಟು ಸಾವುಗಳಿಲ್ಲದ ಪರಬ್ರಹ್ಮನಾಗಿರುವುದರಿಂದ ಶಿವಭಕ್ತರು ಶಿವನಸಹಜಸ್ವಭಾವವಾದ ಲೋಕಕಲ್ಯಾಣವನ್ನೇ ತಮ್ಮ ಜೀವಿತಧ್ಯೇಯವನ್ನಾಗಿ ಸ್ವೀಕರಿಸಿ ಬದುಕಬೇಕು.ಹಾಗೆ ಬದುಕುವವರು ಲೋಕಕ್ಕೆ ಬೇಕಾದವರು ಆಗುತ್ತಾರೆ,ಶಿವನಿಗೂ ಪ್ರಿಯರು ಆಗುತ್ತಾರೆ.ನರರ ಕಲ್ಯಾಣ ಸಾಧಿಸುತ್ತ ಹರನೊಲುಮೆಗೆ ಪಾತ್ರರಾಗುವುದೇ ಜೀವನದ ಶ್ರೇಯಸ್ಸು- ಪ್ರೇಯಸ್ಸು.ಹರನಕಲ್ಯಾಣಗುಣವನ್ನು ಆದರ್ಶವಾಗಿ ಸ್ವೀಕರಿಸಿ ಧರೆಯ ಸಹಜೀವರುಗಳ ಕಷ್ಟಗಳಿಗೆ ಕರಗಿ,ನೊಂದವರ ನಿಟ್ಟುಸಿರಿಗೆ ನೆರವಾಗಿ,ನಿರ್ಗತಿಕರ ಬಾಳಿಗೆ ಆಸರೆಯಾಗಿ,ಬಡವರ ಬಾಳುಗಳಿಗೆ ಬಂಧುವಾಗಿ ಬದುಕುವವರು ಲೋಕಬಂಧುಗಳಾಗುತ್ತಾರೆ,ಶಿವ ವಿಭೂತಿಗಳಾಗುತ್ತಾರೆ.ಶಿವವಿಭೂತಿಗಳು ಅಲ್ಪಾಯುಗಳಾಗಿದ್ದರೂ ಕಲ್ಪಗಳವರೆಗೆ ಅವರ ಕೀರ್ತಿಯ ಕಂಪು ಜಗತ್ತನ್ನು ಸ್ಫೂರ್ತಿಗೊಳಿಸುತ್ತದೆ.

೦೪.೦೧.೨೦೨೪

About The Author