ಸಿದ್ಧರಾಮಯ್ಯನವರು ವಾಗ್ದೇವಿಯ ಗರ್ಭಗುಡಿಯನ್ನು ಪ್ರವೇಶಿಸದೆ ಇರುವುದು ಸದಾಚಾರವೇ ಹೊರತು ದುರಾಚಾರವಲ್ಲ,ಅಪಚಾರವೂ ಅಲ್ಲ !

ಸಿದ್ಧರಾಮಯ್ಯನವರು ವಾಗ್ದೇವಿಯ ಗರ್ಭಗುಡಿಯನ್ನು ಪ್ರವೇಶಿಸದೆ ಇರುವುದು ಸದಾಚಾರವೇ ಹೊರತು ದುರಾಚಾರವಲ್ಲ,ಅಪಚಾರವೂ ಅಲ್ಲ ! : ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಜಯಪುರದ ದ್ಯಾಬೇರಿಯ ವಾಗ್ದೇವಿ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಲು ನಿರಾಕರಿಸಿದ ಸಂಗತಿಯನ್ನು ಬಿಜೆಪಿಯು ಅಪಚಾರ,ಮಹಾ ಅಪರಾಧ ಎಂಬಂತೆ ಬಿಂಬಿಸುತ್ತಿದೆ.ಸಿದ್ಧರಾಮಯ್ಯನವರು ವಾಗ್ದೇವಿ ದೇವಸ್ಥಾನದ ಉದ್ಘಾಟನೆ,ಕಳಶಾರೋಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ,ದೇವಸ್ಥಾನದಲ್ಲಿ ಗರ್ಭಗುಡಿಯವರೆಗೂ ಬಂದು ಗರ್ಭಗುಡಿಯ ಮುಂಭಾಗದ ಬಾಗಿಲಲ್ಲಿ ನಿಂತು ದೇವಿಗೆ ಕೈ ಮುಗಿದಿದ್ದಾರೆ.ಅರ್ಚಕರು ಕರೆದಾಗ ಒಳಹೋಗದೆ ತಮ್ಮ ಪರವಾಗಿ ಸಚಿವ ಎಂ ಬಿ ಪಾಟೀಲ್ ಅವರನ್ನು ಗರ್ಭಗುಡಿಯ ಒಳಗೆ ಕಳಿಸಿದ್ದಾರೆ.ಇದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸದುದ್ದೇಶವಿದೆಯೇ ಹೊರತು ದುರುದ್ದೇಶವೇನಿಲ್ಲ.ಗರ್ಭಗುಡಿಯನ್ನು ಪ್ರವೇಶಿಸದೆ ಸಿದ್ಧರಾಮಯ್ಯನವರು ವಿನಯ,ಭಕ್ತಿಯನ್ನು ಪ್ರದರ್ಶಿಸಿದ್ದಾರೆಯೇ ವಿನಹ ಬಿಜೆಪಿಯವರು ಆಕ್ಷೇಪಿಸುವಂತಹ ಯಾವ ಅಪಚಾರವನ್ನು ಎಸಗಿಲ್ಲ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಾಗ್ದೇವಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸದೆ ಇದ್ದುದು ಅವರ ಸನ್ನಡತೆ; ಅದರಲ್ಲಿ ದೋಷವನ್ನೆಣೆಸುವುದು ಬಿಜೆಪಿಯ ಸಣ್ಣತನ.ಗರ್ಭಗುಡಿಯಲ್ಲಿ ಹೋಗುವುದಷ್ಟೇ ಭಕ್ತಿಯಲ್ಲ,ಹೊರಗಿನಿಂದಲೂ– ದೇವಾಲಯದ ಹೊರಭಾಗದಲ್ಲಿ ನಿಂತು ಕೈ ಮುಗಿಯುವುದೂ ಭಕ್ತಿಯೆ! ಭಕ್ತನು ಗರ್ಭಗುಡಿಯವರೆಗೆ ಬಂದಿದ್ದಾನೆಂದು ದೇವರು ಸಂಭ್ರಮಿಸುವುದಿಲ್ಲ,ಹೊರಗೆ ನಿಂತು ನಮಿಸಿದ್ದಾನೆಂದು ದೇವರು ದುಃಖಗೊಳ್ಳುವುದೂ ಇಲ್ಲ.ಸಿದ್ಧರಾಮಯ್ಯನವರು ಗರ್ಭಗುಡಿಯನ್ನು ಪ್ರವೇಶಿಸಿದ್ದರೆ ಮುಖ್ಯಮಂತ್ರಿಯವರೊಂದಿಗೆ ಫೋಟೋ ತೆಗೆಸಿಕೊಂಡೆವೆಂದು ಅರ್ಚಕರು ಪ್ರತಿಷ್ಠೆ ಮೆರೆಯಲು ಅವಕಾಶವಿತ್ತೇ ಹೊರತು ಅದರಿಂದ ವಾಗ್ದೇವಿಯ ಪ್ರತಿಷ್ಠೆಯಲ್ಲಿ ಹೆಚ್ಚುಕಡಿಮೆ ಆಗುತ್ತಿರಲಿಲ್ಲ.

ಸಿದ್ಧರಾಮಯ್ಯನವರು ಬಹುಶಃ ಮಾಂಸ ಸೇವಿಸಿರಬಹುದು ಅಥವಾ ಹೊರಗಡೆ ತಿರುಗಾಡಿದ್ದರಿಂದ ದೇವಾಲಯದ ಗರ್ಭಗುಡಿ ಪ್ರವೇಶಿಸಬಾರದು ಎನ್ನುವ ಭಕ್ತಿಭಾವದ ಕಾರಣದಿಂದಲೇ ಅವರಾಗಿಯೇ ಸ್ವಯಂ ನಿರ್ಬಂಧ ವಿಧಿಸಿಕೊಂಡು ದೇವಾಲಯ ಸಂಸ್ಕೃತಿಗೆ ಗೌರವ ತೋರಿಸಿದ್ದಾರೆ.ಗರ್ಭಗುಡಿಯೊಳಗೆ ಪ್ರವೇಶಿಸಲು ಅರ್ಚಕರು ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಎನ್ನುವ ಕಾರಣದಿಂದ ಆಹ್ವಾನಿಸಿದ್ದಾರೆಯೇ ಹೊರತು ಸಹಜ ಧಾರ್ಮಿಕ ಹಕ್ಕನ್ನು ಎತ್ತಿಹಿಡಿಯುವ ಉದ್ದೇಶದಿಂದಲ್ಲ.ದೇವಾಲಯದ ಉದ್ಘಾಟನೆಯ ನಂತರದ ದಿನಗಳಲ್ಲಿ ಅದೇ ಅರ್ಚಕರು ಸಿದ್ಧರಾಮಯ್ಯನವರ ಸಮುದಾಯದ ಕುರುಬರನ್ನಾಗಲಿ,ಹಿಂದುಳಿದ ಜನಾಂಗದವರನ್ನಾಗಲಿ ಅಥವಾ ದಲಿತರನ್ನಾಗಲಿ ಗರ್ಭಗುಡಿಯೊಳಗೆ ಆಹ್ವಾನಿಸುತ್ತಾರೆಯೆ? ಬಿಟ್ಟುಕೊಳ್ಳುತ್ತಾರೆಯೆ? ದೇವಸ್ಥಾನಗಳ ಗರ್ಭಗುಡಿಯಲ್ಲಿ ಶೂದ್ರರು ದಲಿತರು ಪ್ರವೇಶಿಸುವುದು ಅವರ ಹಕ್ಕು ಎನ್ನುವುದನ್ನು ಬಿಜೆಪಿಯು ಖಚಿತಪಡಿಸುತ್ತದೆಯೆ? ಶೂದ್ರರು ದಲಿತರಿಗೆ ದೇವಸ್ಥಾನಗಳ ಪ್ರವೇಶಾತಿ ಹಕ್ಕನ್ನು ದೊರಕಿಸಿ ಕೊಡಲು ಬಿಜೆಪಿಯು ಒತ್ತಾಯಿಸುತ್ತದೆಯೆ? ಶೂದ್ರರು ದಲಿತರುಗಳಿಗೆ ಪ್ರವೇಶ ನಿರಾಕರಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಬಿಜೆಪಿಯು ಒತ್ತಾಯಿಸುತ್ತದೆಯೆ? ಇಂತಹ ಯಾವ ಪ್ರಗತಿಪರವಿಚಾರಗಳನ್ನು ಅಳವಡಿಸಿಕೊಳ್ಳದ,ದಲಿತರು- ಶೂದ್ರರನ್ನು ಇಂದಿಗೂ ದೇವಾಲಯಗಳ ಪ್ರವೇಶದಿಂದ ದೂರವಿರಿಸುವ ‘ ಗರ್ಭಗುಡಿ ಸಂಸ್ಕೃತಿ’ ಯ ಬಿಜೆಪಿಯು ಸಿದ್ಧರಾಮಯ್ಯನವರು ವಾಗ್ದೇವಿ ದೇವಿಯ ಗರ್ಭಗುಡಿಯನ್ನು ಪ್ರವೇಶಿಸದೆ ಇರುವುದನ್ನು ದೊಡ್ಡದು ಮಾಡುತ್ತಿರುವುದು ಆ ಪಕ್ಷದ ಆಷಾಢಭೂತಿತನಕ್ಕೆ ಒಂದು ಉತ್ತಮ ಉದಾಹರಣೆ.

ಮನುಷ್ಯತ್ವದ ವಿರೋಧಿಗಳಾದ ಪುರೋಹಿತಶಾಹಿ ಜನಾಂಗ ಯಾವ ಪಕ್ಷದೊಂದಿಗೆ ಗುರುತಿಸಿಕೊಂಡಿದೆ? ಬ್ರಾಹ್ಮಣರು ಯಾವ ಪಕ್ಷಕ್ಕೆ ಪ್ರಶ್ನಾತೀತ ಬೆಂಬಲ ಕೊಡುತ್ತಿದ್ದಾರೆ? ಯಾರ ಹಿತಕ್ಕಾಗಿ ಕೇಂದ್ರದ ಬಿಜೆಪಿ ಸರಕಾರವು ಆರ್ಥಿಕ ಹಿಂದುಳಿದವರೆಂದು 10% ಮೀಸಲಾತಿ ನೀಡಿದೆ? ಸಿದ್ಧರಾಮಯ್ಯನವರ ನಡೆಯನ್ನು ಆಕ್ಷೇಪಿಸುವ ಬಿಜೆಪಿಯು ಪ್ರಜಾಪ್ರಭುತ್ವ ವಿರೋಧಿಯಾದ,ಸಂವಿಧಾನದ ಆಶಯಗಳಿಗೆ ವಿರುದ್ಧವಾದ ತನ್ನ ನಡೆಯನ್ನು ಮೊದಲು ತಿದ್ದಿಕೊಳ್ಳಬೇಕು.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಧಾರ್ಮಿಕ ವಿಷಯದಲ್ಲಿ ಪರಿಣತರಲ್ಲದೆ ಇರಬಹುದು ಆದರೆ ಅವರ ಧಾರ್ಮಿಕ ನಂಬಿಕೆ ನಿಲುವುಗಳನ್ನು ಪ್ರಶ್ನಿಸುವ, ಹೀಯಾಳಿಸುವ ಬಿಜೆಪಿಯ ನಡೆಯು ಸಿದ್ಧರಾಮಯ್ಯನವರು ಪ್ರತಿನಿಧಿಸುತ್ತಿರುವ ಶೂದ್ರಸಮುದಾಯಗಳಿಗೆ ಮಾಡುತ್ತಿರುವ ಅಪಮಾನ ಎನ್ನುವುದನ್ನು ಮರೆಯಬಾರದು.ಹಿಂದೊಮ್ಮೆ ಸಿದ್ಧರಾಮಯ್ಯನವರು ಮಾಂಸಾಹಾರವನ್ನು ಸೇವಿಸಿ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದಾರೆಂದು ದೊಡ್ಡಗಲಾಟೆ ಎಬ್ಬಿಸಿದ್ದ ಬಿಜೆಪಿಯವರು ಈಗ ವಾಗ್ದೇವಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರವೇಶಿಸದ ಸಿದ್ಧರಾಮಯ್ಯನವರ ನಡೆಯಲ್ಲಿ ದೋಷವನ್ನೆಣಿಸುವುದರ ಹಿಂದೆ ಯಾವ ತರ್ಕವಿದೆ? ಧಾರ್ಮಿಕ ಭಾವನೆಗಳನ್ನು ಕೆರಳಿಸುವುದೇ ರಾಜಕೀಯ ಯಶಸ್ಸಿನ ದಾರಿ ಎಂದು ಬಿಜೆಪಿಯು ತಿಳಿದಿದ್ದರೆ ಅದು ತಪ್ಪು.ಕೆಲವರ ಧಾರ್ಮಿಕ ಭಾವನೆಗಳನ್ನಷ್ಟೇ ಎತ್ತಿಹಿಡಿಯುವು ಬಿಜೆಪಿಯ ನಾಯಕರಿಗೆ ಸಾರ್ಥಕತೆ ಎನ್ನಿಸಿರಬಹುದು.ಆದರೆ ದೇಶದ ಬಹುಸಂಖ್ಯಾತರಾದ ಶೂದ್ರರು,ದಲಿತರು ನಿಮ್ಮ ಧಾರ್ಮಿಕ ಅಸಹನೆಯನ್ನು ವಿರೋಧಿಸುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಸಿದ್ಧರಾಮಯ್ಯನವರು ವಾಗ್ದೇವಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸದೆ ಇರುವ ಮೂಲಕ ಸಂವಿಧಾನಬದ್ಧರಾಗಿ ನಡೆದುಕೊಂಡಿದ್ದಾರೆ,ಸಂವಿಧಾನದ ಆಶಯವನ್ನು ಎತ್ತಿಹಿಡಿದಿದ್ದಾರೆ.ನನ್ನ ಜನಾಂಗ,ಶೂದ್ರರು ಮತ್ತು ದಲಿತರಿಗೆ ಪ್ರವೇಶವಿಲ್ಲದ ದೇವಸ್ಥಾನದ ಗರ್ಭಗುಡಿಯಲ್ಲಿ ನಾನೇಕೆ ಪ್ರವೇಶಿಸಬೇಕು ಎನ್ನುವ ಅವರ ‘ಸೌಮ್ಯಬಂಡಾಯ’ದಲ್ಲಿ ಸಮಾನತೆಯ ಹಕ್ಕನ್ನು ಎತ್ತಿಹಿಡಿದ ಸಂವಿಧಾನದ ಬದ್ಧತೆ ಇದೆ.ಸಿದ್ಧರಾಮಯ್ಯನವರು ವಾಗ್ದೇವಿ ದೇವಿಯ ಗರ್ಭಗುಡಿಯಲ್ಲಿ ಪ್ರವೇಶಿಸಿದ್ದನ್ನು ಧಾರ್ಮಿಕ ಅಪಚಾರ ಎನ್ನುವಂತೆ ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ನಾಯಕರುಗಳು ಇಂದಿನಿಂದಲೇ — ಖಾಸಗಿ ದೇವಸ್ಥಾನ-ಮಠ ಮಂದಿರಗಳು ಬೇಡ– ಧಾರ್ಮಿಕ ದತ್ತಿ ಇಲಾಖೆಯ ,ಸರಕಾರದ ಮುಜರಾಯಿ ಇಲಾಖೆಯ ದೇವಸ್ಥಾನಗಳ ಗರ್ಭಗುಡಿಗಳಿಗಾದರೂ ಶೂದ್ರರು,ದಲಿತರು ಪ್ರವೇಶಿಸಬಹುದು ಎನ್ನುವ ಹೇಳಿಕೆಯನ್ನು ನೀಡಲಿ.ಶೂದ್ರರು ದಲಿತರ ದೇವಸ್ಥಾನಗಳ ಪ್ರವೇಶದ ಹಕ್ಕನ್ನು ಪ್ರತಿಪಾದಿಸಲು ಒಂದು ಧಾರ್ಮಿಕ ಅಭಿಯಾನ ನಡೆಸಲಿ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನಡೆಯನ್ನು ಆಕ್ಷೇಪಿಸುವ ರಾಜ್ಯ ಬಿಜೆಪಿ ನಾಯಕರುಗಳು –ಕರ್ನಾಟಕದವರೇ ಆಗಿದ್ದುದರಿಂದ ಬಸವಣ್ಣನವರು ಮತ್ತು ಬಸವ ಸಂಸ್ಕೃತಿಯ ಬಗ್ಗೆ ಅವರಿಗೆ ತಿಳಿವಳಿಕೆ ಇರುವುದರಿಂದ — ಬಸವಣ್ಣನವರು ಪುರೋಹಿತರು ದಲಿತರು,ಶೂದ್ರರಿಗೆ ದೇವಸ್ಥಾನಗಳ ಪ್ರವೇಶ ನಿರಾಕರಿಸಿದ್ದನ್ನು ಖಂಡಿಸಿ,’ ಆನುದೇವ ಹೊರಗಣವನು’ ಎಂದು ಕೆಡೆ ನುಡಿದು,ಯಾವ ದೇವಸ್ಥಾನಗಳಲ್ಲಿಯೂ ಪ್ರವೇಶಿಸದೆ ‘ ನೆಲನೊಂದೇ ಹೊಲೆಗೇರಿ ಶಿವಾಲಯಕೆ’ ಎಂದು ಧಾರ್ಮಿಕ ಸಮತೆಯನ್ನು ಎತ್ತಿಹಿಡಿದು ದಲಿತರಾದಿ ಶೋಷಿತಜನಾಂಗಗಳ ಕೈಯ್ಗಳಲ್ಲಿ ಇಷ್ಟಲಿಂಗವನ್ನಿತ್ತು ಅವರೆಲ್ಲರನ್ನೂ ಶಿವಚೇತನರನ್ನಾಗಿಸಿದರು ಎನ್ನುವ ಮಹಾಸತ್ಯವನ್ನು,ಐತಿಹಾಸಿಕ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು. ಬಸವಣ್ಣನವರ ಹೆಸರನ್ನು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿ ನಾಯಕರು ಬಸವಣ್ಣನವರಷ್ಟು ಅಲ್ಲದಿದ್ದರೂ ಬಸವಸಮತೆಯ ಸಹಸ್ರದಲ್ಲಿ ಒಂದಷ್ಟನ್ನಾದರೂ ಎತ್ತಿಹಿಡಿಯಬಲ್ಲರೆ?

೦೪.೦೧.೨೦೨೪

About The Author