ಬಸವೋಪನಿಷತ್ತು ೦೩ : ಶಿವಭಕ್ತರ ಕಾಯವೇ ಕೈಲಾಸ:ಮುಕ್ಕಣ್ಣ ಕರಿಗಾರ
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ?
ಈ ಲೋಕದೊಳಗೇ ಮತ್ತೆ ಅನಂತಲೋಕ !
ಶಿವಲೋಕ ಶಿವಾಚಾರವಯ್ಯಾ ;
ಭಕ್ತನಿರ್ದ ಟಾವೇ ದೇವಲೋಕ ;
ಭಕ್ತನಂಗಣವೇ ವಾರಣಾಸಿ ;
ಕಾಯವೇ ಕೈಲಾಸ !
ಇದು ಸತ್ಯ ಕೂಡಲ ಸಂಗಮದೇವಾ.
ಮರ್ತ್ಯಲೋಕಕ್ಕೆ ಅತಿಶಯ ಮಹತ್ವವನ್ನು ಕೊಟ್ಟಿರುವ ಬಸವಣ್ಣನವರು ಈ ಹಿಂದಿನ ವಚನಗಳಲ್ಲಿ ಮರ್ತ್ಯದ ಸತ್ತ್ವ ತತ್ತ್ವವನ್ನು ಎತ್ತಿಹಿಡಿದಂತೆ ಈ ವಚನದಲ್ಲಿಯೂ ಮರ್ತ್ಯದ ಮಹಾತತ್ತ್ವವನ್ನು ಪ್ರತಿಪಾದಿಸಿದ್ದಾರೆ.ಮರ್ತ್ಯಲೋಕ ಮತ್ತು ದೇವಲೋಕಗಳೆರಡೂ ಬೇರೆಬೇರೆಯಲ್ಲ,ಮರ್ತ್ಯವಾದ ಈ ಭೂಲೋಕದಲ್ಲಿಯೇ ದೇವಲೋಕಮಾತ್ರವಲ್ಲದೆ ಮನುಷ್ಯರ ಕಲ್ಪನೆಯ ಅನಂತ ಲೋಕಗಳು ಇವೆ.ಶಿವಲೋಕವು ಸಹ ಈ ಲೋಕಕ್ಕೆ ದೂರವಿರದೆ ಶಿವಾಚಾರದಿಂದ ಇಲ್ಲಿಯೇ ಶಿವಲೋಕವನ್ನು ಸ್ಥಾಪಿಸಬಹುದು.ಶಿವಭಕ್ತನಿದ್ದ ಮನೆಯೇ ದೇವಲೋಕವು.ಶಿವಭಕ್ತನ ಮನೆಯ ಅಂಗಳವೇ ಕಾಶಿ ಕ್ಷೇತ್ರವು.ಶಿವ ಭಕ್ತನ ದೇಹವೇ ಕೈಲಾಸವೆನ್ನುವ ಬಸವಣ್ಣನವರು ಇದು ಸತ್ಯವಲ್ಲ,ಊಹೆಯಲ್ಲ,ಕಲ್ಪನೆಯಲ್ಲ ಸತ್ಯವಾದ ಮಾತು ಎನ್ನುತ್ತಾರೆ.
ಧರ್ಮ ದೇವರ ಸ್ವರೂಪವನ್ನರಿಯದ ಜನರು ದೇವಲೋಕ ಪರಲೋಕ ಶಿವಲೋಕ ಮುಂತಾದ ಅನಂತ ಲೋಕಗಳ ಬಗ್ಗೆ ತಲೆಕೆಡಿಸಿಕೊಂಡು ಚಿಂತಿತರಾಗುತ್ತಾರೆ.ಆದರೆ ತಾವಿರುವ ಈ ಲೋಕವೇ ಎಲ್ಲ ಮಿಗಿಲು ಲೋಕಗಳ ಸಾಧನಾಭೂಮಿ ಎನ್ನುವ ಸತ್ಯವನ್ನು ಮರೆಯುತ್ತಾರೆ.ಪರಮಾತ್ಮನು ಮರ್ತ್ಯದಲ್ಲಿ ನಮ್ಮನ್ನು ಬುದ್ಧಿವಂತರಾದ ಮನುಷ್ಯರನ್ನಾಗಿ ಹುಟ್ಟಿಸದೆ ಇದ್ದರೆ ನಾವು ದೇವಲೋಕವಾದಿ ಅನಂತ ಲೋಕಗಳ ಚಿಂತೆ ಮಾಡುತ್ತಿದ್ದೆವೆ? ಇಲ್ಲ ! ಖಗ ಮೃಗಗಳು ದೇವಲೋಕ,ಶಿವಲೋಕ ಮತ್ತಿತರ ಲೋಕಗಳ ಬಗ್ಗೆ ಚಿಂತಿಸುವುದಿಲ್ಲ.ಅಷ್ಟೇ ಏಕೆ, ಪಶು ಪಕ್ಷಿಗಳು ನಾಳೆಯ ಬಗ್ಗೆಯೂ ಚಿಂತಿಸುವುದಿಲ್ಲ.ಅಂದಂದಿನ ಬದುಕಿನ ಆಹಾರಾನ್ವೇಷಣೆ,ಆಹಾರದಿಂದ ಸಂತೃಪ್ತಿ ಮತ್ತು ಸಂತಾನೋತ್ಪತ್ತಿಗಾಗಿ ಮೈಥುನ ಇಷ್ಟೇ ಪಶುಪಕ್ಷಿಗಳ ಜೀವನ.ಆದರೆ ಬುದ್ಧಿವಂತ ಮನುಷ್ಯ ನೂರೆಂಟು ಭ್ರಮೆಗಳನ್ನು ಸೃಷ್ಟಿಸಿಕೊಂಡು ಭ್ರಮಾಧೀನನಾಗಿ ಬಾಳುತ್ತ ಆನಂದಕ್ಕೆ ಎರವಾಗುತ್ತಿದ್ದಾನೆ.ಅದನ್ನೇ ಬಸವಣ್ಣನವರು ಈ ವಚನದಲ್ಲಿ ಬಹುಸೊಗಸಾಗಿ ವಿವರಿಸಿದ್ದಾರೆ.ನಾವು ಇರುವ ಈ ಲೋಕವೇ ದೇವಲೋಕ,ಶಿವಲೋಕ ಮತ್ತಿತರ ಸಹಸ್ರ ಲೋಕಗಳಿಗೆ ಆಧಾರವಾಗಿದೆ.ಆ ಲೋಕ ಈ ಲೋಕ ಎಂದು ವ್ಯರ್ಥ ಚಿಂತಿಸದೆ ಇದ್ದ ಈ ಲೋಕದಲ್ಲಿಯೇ ಸೊಗಸಾಗಿ ಬಾಳಿದರೆ ಎಲ್ಲ ಲೋಕಗಳನ್ನು ಇಲ್ಲಿಯೇ ಕಾಣಬಹುದು ಎನ್ನುತ್ತಾರೆ ಬಸವಣ್ಣನವರು.
ಮಹಾದೇವನ ನೆಲೆಮನೆಯಾದ ಮರ್ತ್ಯಲೋಕದಲ್ಲಿಯೇ ಎಲ್ಲ ಲೋಕಗಳಿರುವ ಅನುಭಾವದ ಬೆಡಗನ್ನು ಬಸವಣ್ಣನವರು ಈ ವಚನದಲ್ಲಿ ಪ್ರಸ್ತಾಪಿಸಿ ಶಿವಮಹಿಮೆ,ಶಿವಭಕ್ತರ ಆಧಿಕ್ಯವನ್ನು ಎತ್ತಿಹಿಡಿದಿದ್ದಾರೆ.ಶಿವಭಕ್ತರ ಮನೆಯೇ ದೇವಲೋಕವಾಗುತ್ತದೆ.ದೇವಲೋಕವು ದುಃಖಮುಕ್ತ,ಸದಾಸಂತೋಷದ ಲೋಕವಾಗಿದೆ.ಶಿವಭಕ್ತರು ಸಹ ಬದುಕಿನಲ್ಲಿ ಬಂದೊದಗುವ ಕಷ್ಟ ಸುಖಗಳ ಬಗ್ಗೆ ವ್ಯಥಿತರಾಗದೆ ಶಿವನಲ್ಲಿ ಅನನ್ಯಭಾವದಿಂದ ಶರಣಾಗಿ,ಶಿವನಾಮದಲ್ಲಿ ಅನೋನ್ಯಾಶ್ರಯ ಪಡೆದಿರುವುದರಿಂದ ಅವರು ಎಲ್ಲದರಲ್ಲೂ ಶಿವನನ್ನೇ ಕಾಣುತ್ತಾರೆ.’ ಸರ್ವಶಿವಮಯಂ’ ಆದ ಬದುಕಿನಲ್ಲಿ ದುಃಖ,ಸಂಕಟ,ಬೇಗುದಿ,ಬೇಸರಗಳಿರುವುದಿಲ್ಲ.ಶಿವಭಕ್ತರ ಮನೆಯಂಗಳವೇ ಮಹಾ ಶಿವಕ್ಷೇತ್ರವೆನ್ನಿಸಿದ ಕಾಶಿಕ್ಷೇತ್ರವು.ಕಾಶಿಯು ವರುಣಾ ಮತ್ತು ಅಸಿ ಎನ್ನುವ ಎರಡು ನದಿಗಳ ನಡುವೆ ಇರುವ ಪುರಾಣಪ್ರಸಿದ್ಧ ಕ್ಷೇತ್ರವಾಗಿರುವುದರಿಂದ ಅದನ್ನು ವಾರಣಾಸಿ ಎಂದು ಕರೆಯುತ್ತಾರೆ.ದ್ವಾದಶ ಜ್ಯೋತಿರ್ಲಿಂಗ ಮತ್ತಿತರ ಸಹಸ್ರಾರು ಶಿವಕ್ಷೇತ್ರಗಳಿಗಿಂತ ಕಾಶಿಯೇ ತನಗೆ ಪ್ರಿಯಕ್ಷೇತ್ರವು ಎಂದು ಪರಶಿವನು ಹೇಳಿರುವುದರಿಂದ ಕಾಶಿಕ್ಷೇತ್ರಕ್ಕೆ ಎಲ್ಲಿಲ್ಲದ ಮಹತ್ವವಿದೆ.ಕಾಶಿಯಲ್ಲಿ ಸತ್ತಜೀವರುಗಳಿಗೆಲ್ಲ ಕೈಲಾಸ ಇಲ್ಲವೆ ಮೋಕ್ಷಪ್ರಾಪ್ತಿಯಾಗುವುದರಿಂದ ಕಾಶಿಯನ್ನು ‘ ಅವಿಮುಕ್ತಕ್ಷೇತ್ರ’ ಎನ್ನಲಾಗುತ್ತದೆ.ಇಂತಹ ಮಿಗಿಲು ಮಹಿಮೆಯ ಕಾಶಿಕ್ಷೇತ್ರವು ಶಿವಭಕ್ತರ ಅಂಗಳದಲ್ಲಿಯೇ ಇದೆ ಅಂದರೆ ಶಿವಭಕ್ತರ ಮನೆಯ ಅಂಗಳವೇ ಶಿವನಿಗೆ ಪರಮಪ್ರಿಯವಾದುದರಿಂದ ಶಿವಭಕ್ತರ ಮನೆಯಂಗಳವು ಕಾಶಿಯಷ್ಟೇ ಪವಿತ್ರವಾದುದು,ಭವಜೀವರುಗಳ ಭವಪರಿಹರಿಸಬಲ್ಲ ಅವಿಮುಕ್ತಕ್ಷೇತ್ರವು. ಲೋಕದ ಜನರು ಕಾಶಿಕ್ಷೇತ್ರಕ್ಕೆ ಹೋಗಲು ಆಲೋಚಿಸುವ ಬದಲು ಶಿವಭಕ್ತರ ಮನೆಯ ಅಂಗಳದ ಮಣ್ಣಿನಸ್ಪರ್ಶದಿಂದಲೇ ಮುಕ್ತರಾಗಬಹುದು. ಶಿವನು ‘ ಮಮ ಭಕ್ತಕಾಯ,ಮಮಕಾಯ’ ಅಂದರೆ ನನ್ನ ಭಕ್ತರ ಕಾಯವೇ ನನ್ನ ಕಾಯವು ಎಂದು ಘೋಷಿಸಿರುವುದರಿಂದ ಶಿವಭಕ್ತರ ಮನೆಯಲ್ಲಿ ಸಕಲದೇವತೆಗಳು ವಾಸ ಮಾಡುತ್ತಾರೆ,ಶಿವಭಕ್ತರ ಮನೆಯ ಅಂಗಳವೇ ಕಾಶಿಕ್ಷೇತ್ರವಾಗುತ್ತದೆ; ಶಿವಭಕ್ತರ ಕಾಯವೇ ಕೈಲಾಸವಾಗಿರುತ್ತದೆ.ಕೈಲಾಸವನ್ನು ಬೇರೆಲ್ಲಿಯೂ ಹುಡುಕದೆ ಶಿವಭಕ್ತರ ಶರೀರದಲ್ಲಿಯೇ ಅದನ್ನು ಕಾಣಬೇಕು.ಶಿವಭಕ್ತರ ಕಾಯವೇ ಕೈಲಾಸ ಎನ್ನುವ ಮೂಲಕ ಬಸವಣ್ಣನವರು ಶಿವಭಕ್ತರ ಆಧಿಕ್ಯವನ್ನೂ ಲೋಕಪ್ರಭುವಾದ ಪರಶಿವನ ಭಕ್ತಕಾರುಣ್ಯ ಗುಣವಿಶೇಷವನ್ನು ಸಾರಿ ಹೇಳಿದ್ದಾರೆ.ಲೋಕದ ಜನರು ಆ ಕ್ಷೇತ್ರ ಈ ಕ್ಷೇತ್ರಗಳೆಂದು ವ್ಯರ್ಥ ಸಂಚರಿಸದೆ ಶಿವಭಕ್ತರ ಸನ್ನಿಧಿಯೊಳಿದ್ದು ಮುಕ್ತರಾಗಬೇಕು ಎನ್ನುವುದು ಈ ವಚನದ ಒಟ್ಟು ಅಭಿಪ್ರಾಯವು.
೦೩.೦೧.೨೦೨೪