ಬಸವೋಪನಿಷತ್ತು ೦೧ : ಮರ್ತ್ಯಲೋಕವು ಕರ್ತಾರನ ಕಮ್ಮಟ

ಬಸವೋಪನಿಷತ್ತು
೦೧

ಮರ್ತ್ಯಲೋಕವು ಕರ್ತಾರನ ಕಮ್ಮಟ

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ ;
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ,
ಕೂಡಲ ಸಂಗಮದೇವಾ.

ಬಸವಣ್ಣನವರು ಮರ್ತ್ಯಲೋಕವನ್ನು ಮಹಾದೇವನ ಲೀಲಾಭೂಮಿಯನ್ನಾಗಿಸಿ ಈ ಲೋಕಕ್ಕೆ ಎಲ್ಲಿಲ್ಲದ ಮಹತಿಯನ್ನುಂಟು ಮಾಡಿದ ಮಹಾನುಭಾವರು.ಶಂಕರಾಚಾರ್ಯರ ‘ ಬ್ರಹ್ಮಸತ್ಯಾ,ಜಗನ್ಮಿಥ್ಯಾ’ ತತ್ತ್ವಸೂತ್ರದಿಂದ ಜನರು ಬದುಕು ನಶ್ವರ ಎನ್ನುವ ನಿರಾಶೆಗೊಳಗಾಗಿದ್ದರು, ಬದುಕಿನ ಆನಂದವನ್ನು ಅನುಭವಿಸದೆ ಪರಿತಪಿಸುತ್ತಿದ್ದರು.ಶಂಕರಾಚಾರ್ಯರ ಬೋಧನೆಯ ಉದ್ದೇಶ ಬೇರೆಯೇ ಆಗಿದ್ದರೂ ವಿಪರೀತಮತಿಗಳು ಅದಕ್ಕೆ ಲೋಕವಿಪರೀತ ಅರ್ಥವನ್ನು ಕಲ್ಪಿಸಿ ಜನಸಾಮಾನ್ಯರ ಬದುಕನ್ನು ಬೆಂಗಾಡಾಗಿ ಪರಿವರ್ತಿಸಿದ್ದರು.ಬ್ರಹ್ಮವೊಂದೇ ಸತ್ಯ,ಉಳಿದುದೆಲ್ಲವೂ ಸುಳ್ಳು ಎನ್ನುವ ಭಾವಭ್ರಮೆಗೊಳಗಾಗಿ ಜಗತ್ತು,ಸಂಸಾರವನ್ನು ಕಡೆಗಣಿಸಿ ಆಕಾಶದತ್ತ ಕತ್ತೆತ್ತಿ ನೋಡುವುದೇ ಜೀವನದ ಗುರಿ,ಶ್ರೇಯಸ್ಸು ಎನ್ನಿಸಿಕೊಂಡಿತ್ತು.ಇಹಲೋಕವನ್ನು,ಇಹಲೋಕದ ಆನಂದವನ್ನು ಕಡೆಗಣಿಸಿ ಪಾರಲೌಕಿಕ ಆನಂದ,ಅನುಭೂತಿಯೇ ಜೀವನದ ಸಾರ್ಥಕತೆ ಎಂದು ಬೋಧಿಸಿದ್ದರಿಂದ ಜನಸಾಮಾನ್ಯರ ಬದುಕು ಗೊಂದಲಮಯವಾಗಿತ್ತು,ದಿಕ್ಕುಕಾಣದೆ ಬಳಲುತ್ತಿತ್ತು ಜನಕೋಟಿ.

ಬಸವಣ್ಣನವರು ಜನಸಾಮಾನ್ಯರ ಉದ್ಧರಕ್ಕಾಗಿ,ಮಾನವಕುಲಕೋಟಿಯ ಕಲ್ಯಾಣಕ್ಕಾಗಿ ಇಂತಹ ವಿಪರೀತಭಾವನೆಯು ಸಲ್ಲದೆಂದು ‘ ಈ ಮರ್ತ್ಯಲೋಕವೇ ಕರ್ತಾರನ ಕಮ್ಮಟ,ಇಲ್ಲಿ ಚೆನ್ನಾಗಿ ಬದುಕಿ ಬಾಳಿದರೆ ಮಾತ್ರ ಪರಲೋಕಕ್ಕೆ,ಪರಮಾತ್ಮನ ಧಾಮಕ್ಕೆ ಪ್ರವೇಶವೇ ಹೊರತು ಇಲ್ಲಿ ಸರಿಯಾಗಿ ಬಾಳದವರಿಗೆ ಪರಲೋಕದ ಪ್ರವೇಶದ ಅರ್ಹತೆ ಇಲ್ಲವೆಂದು ಇಹದ ಬಾಳಿಗೆ ಎಲ್ಲಿಲ್ಲದ ಮಹತ್ವವನ್ನು ನೀಡಿದರು.ಕಮ್ಮಟವೆಂದರೆ ನಾಣ್ಯಗಳನ್ನು ಮುದ್ರಿಸುವ ಟಂಕಸಾಲೆ.ಹಿಂದಿನ ಕಾಲದಲ್ಲಿ ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳು ಚಲಾವಣೆಯಲ್ಲಿದ್ದವು.ನಾಣ್ಯವನ್ನು ಸಿದ್ಧಪಡಿಸಬೇಕಾದರೆ ಅದಿರಿನ ರೂಪದಲ್ಲಿದ್ದ ಬಂಗಾರ ಇಲ್ಲವೆ ಬೆಳ್ಳಿಯನ್ನು ಬೆಂಕಿಹೊತ್ತಿ ಉರಿಯುತ್ತಿರುವ ಕಬ್ಬಿಣದ ಕುಲುಮೆಯಲ್ಲಿ ಕುದಿಸಿ,ಸಂಸ್ಕರಿಸಿ ಅದಕ್ಕೆ ನಾಣ್ಯದ ರೂಪವನ್ನು ನೀಡಿ,ರಾಜಮುದ್ರೆಯೊಂದಿಗೆ ನಾಣ್ಯದ ಮುಖಬೆಲೆಯನ್ನು ಮುದ್ರಿಸಲಾಗುತ್ತಿತ್ತು.ಅಂದರೆ ಮಾತ್ರ ನಾಣ್ಯವು ಚಲಾವಣೆಗೆ ಯೋಗ್ಯತೆ ಪಡೆಯುತ್ತಿತ್ತು.ಭೂಗರ್ಭದಲ್ಲಿ ಅದಿರಿನ ರೂಪದಲ್ಲಿದ್ದ ಬಂಗಾರ ಅಥವಾ ಬೆಳ್ಳಿಯನ್ನು ಹೊರತೆಗೆದು ಕುಲುಮೆಯಲ್ಲಿ ಕಾಯಿಸಿ,ಸಂಸ್ಕಾರ ನೀಡಿದಾಗಲೆ ಆ ನಾಣ್ಯವು ಮೌಲ್ಯಯುತವಾಗುತ್ತದೆ.ಈ ಪ್ರಪಂಚವು ಕೂಡ ಪರಮಾತ್ಮನ ಟಂಕಸಾಲೆಯಾಗಿದ್ದು ಜೀವರುಗಳು ಅದಿರಿನ ರೂಪದಲ್ಲಿದ್ದಾರೆ.ಅದಿರಿನ ರೂಪದಲ್ಲಿರುವ ಜೀವಾತ್ಮನಿಗೆ ಧಾರ್ಮಿಕ ಇಲ್ಲವೆ ಆತ್ಮ ಸಂಸ್ಕಾರವನ್ನು ಕೊಟ್ಟು ಅವನಲ್ಲಿ ಶಿವಸಂಸ್ಕಾರವನ್ನುಂಟು ಮಾಡುವುದೇ ಅಧ್ಯಾತ್ಮ,ಧರ್ಮ,ಉಪದೇಶ,ಬೋಧೆಯ ಉದ್ದೇಶ.ಸಂಸ್ಕಾರ ರಹಿತ ಜೀವನಕ್ಕೆ ಅರ್ಥ,ಮಹತ್ವ ಇರುವುದಿಲ್ಲ.ಎಲ್ಲ ಪಶುಗಳಂತೆ ಮನುಷ್ಯ ಒಂದು ಪಶುವಾಗುತ್ತಾನೆ ಶಿಕ್ಷಣ,ಸಂಸ್ಕಾರ ಇರದಿದ್ದರೆ.ಪಶುವಾಗಿ ಬದುಕುತ್ತಿದ್ದ ಮನುಷ್ಯನನ್ನು ಪಶುಪತಿಯ ಪಥದಲ್ಲಿ ಕರೆದೊಯ್ಯುವುದೇ ದೀಕ್ಷೆ,ಬೋಧೆಯ ಗುರಿ.ಅದಿರಿಗೆ ಒಂದು ಆಕಾರ ಕೊಟ್ಟರೆ ಮಾತ್ರ ಅದು ನಾಣ್ಯವಾಗದು.ನಾಣ್ಯಕ್ಕೆ ಎರಡು ಮುಖಗಳನ್ನು ಕೆತ್ತಿ ಒಂದು ಭಾಗದಲ್ಲಿ ಅದರ ಮೌಲ್ಯ ಮತ್ತೊಂದು ಭಾಗದಲ್ಲಿ ಅದನ್ನು ಹೊರಡಿಸಿದ ಪ್ರಭು,ಪ್ರಭುತ್ವ ಇಲ್ಲವೆ ಆಧುನಿಕ ಯುಗದ ಸರಕಾರ ಅಥವಾ ಸರಕಾರದ ಪ್ರತಿನಿಧಿಯಾದ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದಂತಹ ಕೇಂದ್ರಿಯ ಬ್ಯಾಂಕಿನ ಹೆಸರು,ಮೌಲ್ಯಭರವಸೆಯನ್ನು ಟಂಕಿಸಬೇಕು.ಹಾಗೆಯೇ ಮರ್ತ್ಯದ ಮನುಷ್ಯರ ಬದುಕಿಗೆ ‘ಇಹ’ ಮತ್ತು‌ ‘ಪರ ‘ ಎನ್ನುವ ಎರಡು ಮುಖಗಳಿದ್ದು ಆ ಎರಡು ಮುಖಗಳು ಪರಸ್ಪರ ಪೂರಕವಾಗಿವೆ.ನಾಣ್ಯ ಒಂದಕ್ಕೆ ಒಂದೇ ಮುಖ ಇದ್ದರೆ ಅದು ಚಲಾವಣೆಯಲ್ಲಿ ನಡೆಯದು.ಎರಡು ಮುಖಗಳಿದ್ದ ನಾಣ್ಯವು ಮಾತ್ರ ಚಲಾವಣೆಗೊಂಡು ವ್ಯಾಪಾರ ವ್ಯವಹಾರಗಳನ್ನು ಕುದುರಿಸುತ್ತದೆ.ಅಂತೆಯೇ ‘ಇಹ’ ಮತ್ತು ‘ಪರ’ಗಳೆರಡರಲ್ಲಿ ಆಸಕ್ತರಾಗಿ ಒಂದನ್ನು ಬಿಟ್ಟು ಮತ್ತೊಂದನ್ನು ಹಿಡಿಯದೆ ಎರಡರಲ್ಲೂ ಆಸಕ್ತಿಬೆಳೆಸಿಕೊಂಡು ಮುನ್ನಡೆಯುವುದೇ ಜೀವನದ ಯಶಸ್ಸು ಎನ್ನುವುದು ಬಸವಣ್ಣನವರ ಈ ವಚನವು ಹೊರಹೊಮ್ಮಿಸುವ ಜೀವನ ಸಂದೇಶ.

ಬಸವಣ್ಣನವರು ಮರ್ತ್ಯದ ಬದುಕಿಗೆ ಮಹತ್ವ ನೀಡಿದವರು,ಮರ್ತ್ಯದ ಸಾರ್ಥಕ ಜೀವನವೇ ಕೈಲಾಸಕ್ಕೆ ದಾರಿ ಎಂದು ಸಾರಿ ಹೇಳಿದವರು.’ ಇಲ್ಲಿ’ ಎಂದರೆ ಈ ಲೋಕವು, ‘ ಅಲ್ಲಿ’ ಎಂದರೆ ಪರಮಾತ್ಮನ ಲೋಕವಾದ ಕೈಲಾಸ ಅಥವಾ ಸ್ವರ್ಗವೆಂದರ್ಥ.ಸ್ವರ್ಗ ಅಥವಾ ಕೈಲಾಸವನ್ನು ಸೇರಬೇಕಾದರೆ ನಮಗೊದಗಿ ಬಂದ ಮರ್ತ್ಯದ ಬಾಳನ್ನು ಸೊಗಸಾಗಿ,ಸುಂದರವಾಗಿ ಬಾಳಬೇಕು.’ಬದುಕು ನಶ್ವರ’ , ‘ ಬದುಕು ನೀರ ಮೇಲಿನ ಗುರುಳೆ’ ಎಂಬಿತ್ಯಾದಿ ನಿರಾಶಾವಾದಕ್ಕೆ,ಪಲಾಯನವಾದಕ್ಕೆ ಅವಕಾಶ ನೀಡದೆ ಎಲ್ಲ ಸಂಕಷ್ಟ- ಸಮಸ್ಯೆ- ಸವಾಲುಗಳ ನಡುವೆಯೂ ಎದೆಗಾರಿಕೆಯಿಂದ,ಧೀರಾತ್ಮರಾಗಿ ಬದುಕಬೇಕು.ಇಲ್ಲಿ ಉತ್ತಮರಾಗಿ ಬದುಕಿದರೆ ಮಾತ್ರ ಸತ್ತಮೇಲೆ ಸದ್ಗತಿ ಪಡೆಯಲು ಸಾಧ್ಯ.ಇಲ್ಲಿ ಸಚ್ಚರಿತ್ರರಾಗಿ ಬದುಕದೆ ಸತ್ತಬಳಿಕ ಉತ್ತಮಲೋಕ ಸೇರುವೆವು ಎನ್ನುವುದು ಕಪಟ,ಭ್ರಾಂತಿ.ಸಹಜೀವರುಗಳೊಂದಿಗೆ ಬಂಧುಭಾವದಿಂದ,ಎಲ್ಲರೊಂದಿಗೆ ಒಂದಾಗಿ,ಚೆಂದಾಗಿ ಬಾಳುವುದರಲ್ಲಿ ಬದುಕಿನ ಆನಂದವಿದೆ.ಇತರರನ್ನು ತನ್ನಂತೆ ತಿಳಿದು,ಇತರರಿಗೂ ತನ್ನಂತೆ ಭಾವನೆಗಳಿವೆ,ಅವರಿಗೂ ನೋವು ಬಾಧೆಗಳುಂಟಾಗುತ್ತವೆ ಎಂದು ತಿಳಿದು ಪರರ ನೋವಿಗೆ ಕಾರಣರಾಗದೆ,ಪರರ ಕಷ್ಟಗಳಲ್ಲಿ ಕರಗುತ್ತ,ಪರೋಪಕಾರಿಗಳಾಗಿ,ಲೋಕಹಿತ ಚಿಂತನೆಯಲ್ಲಿ ಬದುಕುವುದೇ ಸಾರ್ಥಕ ಬದುಕಾಗಿದ್ದು ಅಂತಹ ಸಾರ್ಥಕ ಜೀವರುಗಳೇ ಪರಶಿವನ ನೆಲೆಯಾದ ಕೈಲಾಸವನ್ನು ಸೇರುತ್ತಾರೆ.ಮರ್ತ್ಯದಲ್ಲಿ ಅರ್ಥಪೂರ್ಣವಾಗಿ ಬದುಕುವುದೇ ಸ್ವರ್ಗ ಇಲ್ಲವೆ ಉತ್ತಮ ಪರಲೋಕದ ಪ್ರಾಪ್ತಿಯ ರಹಸ್ಯ,ಸೂತ್ರ,ಮಾರ್ಗ ಎನ್ನುವುದನ್ನು ಬಸವಣ್ಣನವರು ಈ ವಚನದ ಮೂಲಕ ಲೋಕಸಮಸ್ತರಿಗೆ ಉಪದೇಶಿಸಿದ್ದಾರೆ.

೦೧.೦೧.೨೦೨೪

About The Author