ಬಸವೋಪನಿಷತ್ತು ೦೨ : ಆಚಾರದಿಂದ ಸದ್ಗತಿ ; ಅನಾಚಾರದಿಂದ ದುರ್ಗತಿ

ಬಸವೋಪನಿಷತ್ತು ೦೨ : ಆಚಾರದಿಂದ ಸದ್ಗತಿ ; ಅನಾಚಾರದಿಂದ ದುರ್ಗತಿ : ಮುಕ್ಕಣ್ಣ ಕರಿಗಾರ

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ,
ಕಾಣಿಭೋ !
ಸತ್ಯವ ನುಡಿವುದೇ ದೇವಲೋಕ ; ಮಿಥ್ಯವ ನುಡಿವುದೇ
ಮರ್ತ್ಯಲೋಕ !
ಆಚಾರವೇ ಸ್ವರ್ಗ,ಅನಾಚಾರವೇ ನರಕ
ಕೂಡಲ ಸಂಗಮದೇವಾ,ನೀವೇ ಪ್ರಮಾಣು.

ಬಸವಣ್ಣನವರು ಈ ವಚನದಲ್ಲಿ ಸದಾಚಾರವೇ ಶಿವನೊಲುಮೆಯ ಸಾಧನ ಎನ್ನುವುದನ್ನು ಲೋಕಕ್ಕೆ ಉಪದೇಶಿಸಿದ್ದಾರೆ.ಲೋಕದ ಜನರು ದೇವಲೋಕ ,ಮರ್ತ್ಯಲೋಕ ಎಂದು ಏನು ಏನನ್ನೋ ತರ್ಕಿಸುತ್ತಾರೆ,ಏನು ಏನನ್ನೋ ಲೆಕ್ಕ ಹಾಕುತ್ತಾರೆ.ದೇವಲೋಕವು ನಮ್ಮಿಂದ ದೂರದಲ್ಲಿ ಬೇರೆ ಎಲ್ಲಿಯೋ ಇದೆ,ಮರ್ತ್ಯಲೋಕದಿಂದ ಬಹುದೂರದಲ್ಲಿ ಇದೆ ಎಂದು ಆ ದೂರದ ಲೋಕವನ್ನು ಸಂಪಾದಿಸಿಕೊಳ್ಳುವ ಭ್ರಾಂತಿಗೊಳಗಾಗಿ ಸದಾಶಿವನೊಲುಮೆಗೆ ಕಾರಣವಾದ ಈ ಲೋಕವನ್ನು ಮರೆಯುತ್ತಾರೆ.ಸತ್ಯವ್ರತಿಗಳಾಗಿ ಬಾಳುವುದೇ ದೇವಲೋಕವಾದರೆ ಸುಳ್ಳನ್ನಾಡುವುದೇ ಮರ್ತ್ಯಲೋಕ ಎನ್ನುವ ಬಸವಣ್ಣನವರು ತಮ್ಮ ಮಾತಿಗೆ ವೇದ ಶಾಸ್ತ್ರ ಪುರಾಣಾದಿಗಳ ಸಾಕ್ಷಿ ಬೇಕಿಲ್ಲ,ಶಿವನೇ ಸಾಕ್ಷಿ ಎನ್ನುತ್ತಾರೆ.

ಈ ವಚನದಲ್ಲಿಯೂ ಸಹ ಬಸವಣ್ಣನವರು ಮರ್ತ್ಯಲೋಕದ ಮಹಿಮಾತಿಶಯವನ್ನು ಎತ್ತಿಹಿಡಿದಿದ್ದಾರೆ.ಹಿಂದಿನ ವಚನದಲ್ಲಿ ‘ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ ಎಂದ ಬಸವಣ್ಣನವರು ಈ ವಚನದಲ್ಲಿ ಈ ಮರ್ತ್ಯದಲ್ಲಿಯೇ ನಾಕವಿದೆ,ದಿವ್ಯಲೋಕವಿದೆ ಎಂದು ಸಾರಿದ್ದಾರೆ.ಸತ್ತಮೇಲೆ ಪಡೆಯುವ ದೇವಲೋಕಕ್ಕಿಂತ ಮರ್ತ್ಯದ ಬಾಳಿನಲ್ಲಿ ಸತ್ಯವಂತರಾಗಿದ್ದರೆ ನಾವಿರುವ ಲೋಕವೇ ದೇವಲೋಕವಾಗುತ್ತದೆ.ಶಿವನು ಸತ್ಯಸ್ವರೂಪನಾಗಿದ್ದು ಸತ್ಯನೂ ನಿತ್ಯನೂ ಶಾಶ್ವತನೂ ಆಗಿರುವ ಪರಶಿವನ ಒಲುಮೆಗೆ ಪಾತ್ರರಾಗಲು ಜೀವರುಗಳು ಸತ್ಯವ್ರತಿಗಳಾಗಿರಬೇಕು.ಸತ್ಯವೇ ಸತ್ತ್ವ; ಸತ್ಯವೇ ಮಹಾತತ್ತ್ವ.ಅಸತ್ಯದಿಂದ ಸತ್ಯವನ್ನು ಕಾಣಲಾಗದು.ಸತ್ಯವನ್ನು ನುಡಿಯುತ್ತ ಈ ಲೋಕವನ್ನೆ ದೇವಲೋಕವನ್ನಾಗಿ ಪರಿವರ್ತಿಸಬಹುದು.ಸುಳ್ಳನ್ನು ಹೇಳುವುದರಿಂದ ನಾವು ದೇವಲೋಕಕ್ಕೆ ಎರವಾಗಿ ಮರ್ತ್ಯದಲ್ಲಿಯೇ ಸಿಕ್ಕಿಬೀಳುತ್ತೇವೆ.ಮರ್ತ್ಯವು ಭವಭವಗಳ ಕಾರಣವಾಗಿದ್ದು ಭವಬಂಧನವನ್ನು ಹರಿದೊಗೆಯದೆ ಅಭವ ಶಿವನನ್ನು ಕೂಡಲು ಸಾಧ್ಯವಿಲ್ಲ.ಆಚಾರದಲ್ಲಿ ಸ್ವರ್ಗವಿದೆ,ಅನಾಚಾರವೇ ನರಕ ಎನ್ನುವ ಬಸವಣ್ಣನವರು ಸ್ವರ್ಗ ನರಕಗಳು ನಮ್ಮಿಂದ ದೂರ ಎಲ್ಲೋ ಇರುವ ಲೋಕಗಳಲ್ಲ, ನಾವು ಸದಾಚಾರ ಸಂಪನ್ನರಾಗಿದ್ದರದುವೆ ಸ್ವರ್ಗ,ದುರಾಚಾರಿಗಳಾಗಿದ್ದರೆ ನಾವಿರುವ ನೆಲೆಯೇ ನರಕವಾಗುತ್ತದೆ ಎಂದು ಉಪದೇಶಿಸಿದ್ದಾರೆ.ನೀತಿಯುತ,ಮೌಲ್ಯಯುತ ಬದುಕನ್ನು ಬಾಳಲದುವೆ ಸ್ವರ್ಗವಾಗುತ್ತದೆ,ಅನೀತಿಯ ,ಮೌಲ್ಯರಹಿತ ಜೀವನವನ್ನಪ್ಪಿ ಬದುಕೇ ಆ ಬದುಕೇ ನರಕವಾಗುತ್ತದೆ.ಸ್ವರ್ಗ ನರಕಗಳು ಮನುಷ್ಯರು ಸತ್ತಮೇಲೆ ಪ್ರಾಪ್ತವಾಗುವ ಎರಡು ಲೋಕಗಳಲ್ಲ,ಈ ಮರ್ತ್ಯದ ಬಾಳುವೆಯಲ್ಲಿಯೇ ಅನುಭವಿಸಬಹುದಾದ ಆತ್ಮನ ಎರಡು ಸ್ಥಿತಿಗಳು.ಸದಾಚಾರ ಸಂಪನ್ನನಾಗಿದ್ದರೆ ಆನಂದದ ಬದುಕನ್ನು ಸಾಗಿಸಬಹುದು,ದುರಾಚಾರಿಗಳಾಗಿದ್ದರೆ ದುಃಖಮಯ ಜೀವನದ ಹೊರತು ಮತ್ತೇನೂ ದೊರೆಯದು.

ವೇದವಾದಿಗಳು ಬದುಕಿನ ಸತ್ಯವನ್ನರಿಯದೆ,ಪರಮಾತ್ಮನ ಒಲುಮೆಗೆ ಪಾತ್ರವಾಗುವ ಬೆಡಗನ್ನರ್ಥೈಸಿಕೊಳ್ಳದೆ ಪರಮಾತ್ಮನು ನಮ್ಮಿಂದ ಬಹುದೂರದ ಯಾವುದೋ ಒಂದು ಲೋಕದಲ್ಲಿದ್ದಾನೆ,ಆ ಪರಮಾತ್ಮನನ್ನು ಸಂಪ್ರೀತಗೊಳ್ಳಲು ಯಜ್ಞಯಾಗಾದಿಗಳನ್ನು ಮಾಡಬೇಕು,ವ್ರತ- ನಿಯಮಗಳನ್ನಾಚರಿಸಬೇಕು, ದೇವರ ಹೆಸರಿನಲ್ಲಿ ಹಬ್ಬ – ಉತ್ಸವಗಳನ್ನೇರ್ಪಡಿಸಬೇಕು ಎಂಬಿವೆ ಮೊದಲಾದ ಭ್ರಮೆಗಳಿಗೊಳಗಾಗಿ ಭ್ರಾಂತಚಿತ್ತರು ಆಗಿರುತ್ತಾರೆ.ಭ್ರಾಂತಚಿತ್ತರಿಗೆ ಶಾಂತಿ ಲಭಿಸದು,ಆನಂದ ದೊರಕದು.ಇದ್ದುದನ್ನು ಬಿಟ್ಟು ಇಲ್ಲದುದನ್ನು ಹಿಡಿಯುವ ಬಳಲಿಕೆ,ಸತ್ಯದ ನಿಲುವನ್ನರಿಯದ ತೊಳಲಿಕೆಯು ದುಃಖದ ಕಾರಣವಾಗುತ್ತದೆ.ಬಸವಣ್ಣನವರು ಲೋಕ ಪರಲೋಕಗಳ ಚಿಂತೆ ಬೇಡವೆಂದು ಆತ್ಮತತ್ತ್ವವನ್ನು ಪ್ರತಿಪಾದಿಸಿದ್ದಾರೆ ಈ ವಚನದಲ್ಲಿ.ಪರಶಿವನು ಎಲ್ಲರ ಹೃದಯಗಳಲ್ಲಿ ಆತ್ಮಸ್ವರೂಪನಾಗಿರುವಾಗ ಅವನನ್ನು ಬಹುದೂರದಲ್ಲಿರುವ ಯಾವುದೋ ಲೋಕದಲ್ಲಿ ಹುಡುಕುವ ಅಜ್ಞಾನವೇಕೆ? ಸತ್ಯಸ್ವರೂಪನಾಗಿರುವ ಸದಾಶಿವನು ಎಲ್ಲರ ಅಂತರ್ಗತಚೈತನ್ಯವಸ್ತುವಾಗಿರಲು ಸತ್ಯ ಮತ್ತು ಸದಾಚಾರಗಳಿಂದಲೇ ಅವನನ್ನು ಪಡೆಯಬೇಕಲ್ಲದೆ ಧಾರ್ಮಿಕ ನಿಯಮ,ವ್ರತ ಆಚರಣೆಗಳಿಂದ ಪರಶಿವನ ಅನುಗ್ರಹವನ್ನು ಪಡೆಯಲು ಸಾಧ್ಯವಿಲ್ಲ.ಸನ್ನಡತೆಯಿಂದ ನಾವಿದ್ದ ನೆಲೆಯೇ ಸುಖಾನಂದದ ನೆಲೆಯಾದ ಸ್ವರ್ಗವಾದರೆ ದುರ್ನಡತೆಯಿಂದ ನಮ್ಮ ನೆಲೆಯೇ ಮಹಾದುಃಖದ ನೆಲೆಯಾಗಿರುವ ನರಕವಾಗುತ್ತದೆ.ನೆರೆಹೊರೆಯವರು,ಬಂಧು ಬಾಂಧವರು ಮತ್ತು ಸಮಾಜದ ಜನರೊಡನೆ ಪ್ರೀತಿ- ಪ್ರೇಮಭಾವದ ಸೌಹಾರ್ದ ಜೀವನವನ್ನು ರೂಪಿಸಿಕೊಂಡು ಎಲ್ಲರೊಡನೆ ಬೆರೆತು ಬಾಳುವುದೇ ಸ್ವರ್ಗಸುಖವೆನ್ನಿಸುವ ಆನಂದದ ಬದುಕು.ಇತರರೊಡನೆ ದ್ವೇಷಾಸೂಯೆಗಳಿಂದ ವರ್ತಿಸುತ್ತ,ಪರೋಪದ್ರಜೀವಿಗಳಾಗಿರುವವರು ಆ ಪಾಪದ ಫಲವಾದ ಮಹಾದುಃಖಕರ ನರಕದ ಭೀಕರತೆಯನ್ನು ಅನುಭವಿಸಬೇಕಾಗುತ್ತದೆ.ದೇವಲೋಕ- ಮರ್ತ್ಯಲೋಕ, ಸ್ವರ್ಗ ಮತ್ತು ನರಕಗಳು ನಮ್ಮ ನಡತೆಯಿಂದಲೇ ಪ್ರಾಪ್ತವಾಗುವ ಬದುಕಿನ ಸ್ಥಿತಿಗಳೇ ಹೊರತು ಅವು ಗುಡಿಗುಂಡಾರಗಳ ಪರ್ಯಟನೆ,ಯಜ್ಞಯಾಗಾದಿಗಳು,ಹೋಮ ಹವನಾದಿ ಶುಷ್ಕ‌ಕ್ರಿಯೆಗಳಿಂದ ದೊರಕುವುದಿಲ್ಲ.ಎದೆಮರುಕ ಉಳ್ಳವರು ದೇವಲೋಕವನ್ನು ನಿರ್ಮಿಸಿದರೆ ಎದೆಮರುಕವಿಲ್ಲದ ಕನಿಷ್ಟಜೀವಿಗಳು ಕನಿಕರವಿಲ್ಲದ ಕಷ್ಟಕರ ನರಕವನ್ನು ನಿರ್ಮಿಸುತ್ತಾರೆ.

೦೨.೦೧.೨೦೨೪

About The Author