ದಿನಾಚರಣೆ : ಕುವೆಂಪು ಅವರ ವಿಶ್ವಮಾನವ ಸಂದೇಶ : ಮುಕ್ಕಣ್ಣ ಕರಿಗಾರ

ಕನ್ನಡದ ಯುಗಕವಿ,ಮಹಾಕವಿ ಕುವೆಂಪು ಅವರ ಹುಟ್ಟಿದ ದಿನವಾದ ಡಿಸೆಂಬರ್ ೨೯ ನೆಯ ದಿನವನ್ನು ರಾಜ್ಯದಲ್ಲಿ ‘ ವಿಶ್ವಮಾನವ ದಿನಾಚರಣೆ’ ಯನ್ನಾಗಿ ಆಚರಿಸಲಾಗುತ್ತಿದೆ.’ ಜಗದಕವಿ’ ಕುವೆಂಪು ಅವರು ಈ ಶತಮಾನದ ಮಹಾಕವಿಗಳಷ್ಟೇ ಅಲ್ಲ,ವಿಶ್ವಕವಿಗಳೂ ಆಗಿದ್ದ ಹೈಮಾಚಲೋಪಮ ವ್ಯಕ್ತಿತ್ವದ ಕವಿವಿಭೂತಿ; ವಿಭೂತಿಕವಿ.ಅವರು ವಿಶ್ವಮಾನವ ಸಂದೇಶವನ್ನು ಸಾರಿದರು ಮಾತ್ರವಲ್ಲ, ಅದನ್ನೇ ತಮ್ಮ ಜೀವನಧ್ಯೇಯವನ್ನಾಗಿ ಸ್ವೀಕರಿಸಿ ಬಾಳಿದ ಆಧುನಿಕ ಯುಗದ ಮಹರ್ಷಿ,ರಸ ಋಷಿ,ರಸಕವಿ.ಕುವೆಂಪು ಅವರ ಹುಟ್ಟುಹಬ್ಬವನ್ನು ‘ ವಿಶ್ವಮಾನವ ದಿನಾಚರಣೆ’ ಯನ್ನಾಗಿ ಆಚರಿಸುತ್ತಿರುವುದು ಮಹತ್ವದ ಸಂಗತಿ.

‘ ಮನುಜಪತ,ವಿಶ್ವಪಥ’ ಎನ್ನುವುದು ಕುವೆಂಪು ಅವರ ವಿಶ್ವದೃಷ್ಟಿ,ದಾರ್ಶನಿಕ ನೋಟ,ದೃಷ್ಟಿವಿಶೇಷ.ಕುವೆಂಪು ಅವರು ತಮ್ಮ ವಿಶ್ವಮಾನವ ಸಂದೇಶವನ್ನು ” ವಿಶ್ವಮಾನವ ಸಂದೇಶ ; ಪಂಚಮಂತ್ರ ಮತ್ತು ಸಪ್ತಸೂತ್ರ!” ಎನ್ನುವ ಹೆಸರಿನಲ್ಲಿ ರಚಿಸಿದ್ದಾರೆ.ಕುವೆಂಪು ಅವರ ‘ ವಿಶ್ವಮಾನವ ಸಂದೇಶದ ವ್ಯಾಖ್ಯಾನ ಮಾಡುವ ಪೂರ್ವದಲ್ಲಿ ನಾವು ಅವರ ವಿಶ್ವಮಾನವ ಸಂದೇಶದ ಪೂರ್ಣಪಾಠವನ್ನು ಓದೋಣ ;

” ಪ್ರತಿಯೊಂದು ಮಗುವೂ ಹುಟ್ಟುತ್ತಲೆ- ವಿಶ್ವಮಾನವ.ಬೆಳೆಯುತ್ತಾ ನಾವು ಅದನ್ನು ‘ ಅಲ್ಪಮಾನವ’ ನನ್ನಾಗಿ ಮಾಡುತ್ತೇವೆ.ಮತ್ತೆ ಅದನ್ನು ‘ ವಿಶ್ವಮಾನವ’ ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.
ಹುಟ್ಟುವಾಗ ‘ ವಿಶ್ವಮಾನವ’ ನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ,ಭಾಷೆ,ಮತ,ಜಾತಿ,ಜನಾಂಗ,ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ.ಅವೆಲ್ಲಗಳಿಂದ ಪಾರಾಗಿ ಅವನನ್ನು ‘ ಬುದ್ಧ’ನನ್ನಾಗಿ,ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೆ ನಮ್ಮ ವಿದ್ಯೆ,ಸಂಸ್ಕೃತಿ,ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು.ಪ್ರಪಂಚದ ಮಕ್ಕಳೆಲ್ಲ ‘ ಅನಿಕೇತನ’ ರಾಗಬೇಕು,ಲೋಕ ಉಳಿದು, ಬಾಳಿ ಬದುಕಬೇಕಾದರೆ !
ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ.ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು.ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಮಹಾತ್ಮರ ವಾಣಿ ಮತವಾಗಿ ಮಾರಕವಾಯಿತು.ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊಂದು ಹೊಸ ಧರ್ಮಕ್ಕೆಡೆಗೊಟ್ಟುದೂ ಉಂಟು.ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಒಡೆದಿವೆ ; ಯುದ್ಧಗಳನ್ನು ಹೊತ್ತಿಸಿವೆ,ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು.ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ ” ಮತ ಮತ್ತು ರಾಜಕೀಯದ ಕಾಲ ಆಗಿಹೋಯಿತು.ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ”.
ಮನುಜಮತ,ವಿಶ್ವಪಥ,ಸರ್ವೋದಯ,ಸಮನ್ವಯ,ಪೂರ್ಣದೃಷ್ಟಿ– ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ.ಅಂದರೆ,ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ ; ಮನುಜ ಮತ ; ಆ ಪಥ ಈ ಪಥ ಅಲ್ಲ ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ ; ಸರ್ವರ ಸರ್ವಸ್ತರದ ಉದಯ.ಪರಸ್ಪರ ವಿಮುಖವಾಗಿ ಸಿಡಿದುಹೋಗುವುದಲ್ಲ ; ಸಮನ್ವಯಗೊಳ್ಳುವುದು.ಮಿತಮತದ ಆಂಶಿಕ ದೃಷ್ಟಿಯಲ್ಲ ;ಭೌತಿಕ ಪಾರಮಾರ್ಥಿಕ ಎಂಬ ಭಿನ್ನದೃಷ್ಟಿಯಲ್ಲ ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ.
ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ,ಮತಕ್ಕೆ,ಗುಂಪಿಗೆ,ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ.ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು.ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು.ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ ; ಅದೇನಿದ್ದರೂ ರಾಜಕೀಯದ ಕರ್ಮ.ವ್ಯಕ್ತಿಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು.ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರುವುದು ಸಾಧ್ಯ ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ.ಈ ‘ ದರ್ಶನ’ ವನ್ನೆ ‘ ವಿಶ್ವಮಾನವ ಗೀತೆ’ ಸಾರುತ್ತದೆ.

ವಿಶ್ವಮಾನವರಾಗಲು ನಾವು ಸಾಧಿಸಬೇಕಾದ ಮೂಲಭೂತ ಸ್ವರೂಪದ ತತ್ತ್ವ ಪ್ರಣಾಳಿಕೆ

ಸಪ್ತಸೂತ್ರ

೧.” ಮನುಷ್ಯಜಾತಿ ತಾನೊಂದೆ ವಲಂ” ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
೨. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು.ಅಂದರೆ ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ,ಅಂತ್ಯಜ,ಷಿಯಾ,ಸುನ್ನಿ,ಕ್ಯಾಥೋಲಿಕ್,ಪ್ರಾಟೆಸ್ಟಂಟ್,ಸಿಖ್,ನಿರಂಹಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
೩. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ,ವಿನಾಶಗೊಳಿಸಬೇಕು.
೪.’ ಮತ’ ತೊಲಗಿ ‘ ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು.
೫. ಮತ ‘ ಮನುಜಮತ’ ವಾಗಬೇಕು ; ಪಥ ‘ ವಿಶ್ವಪಥ’ ವಾಗಬೇಕು ; ಮನುಷ್ಯ ‘ ವಿಶ್ವಮಾನವ’ನಾಗಬೇಕು.
೬. ಮತ ಗುಂಪುಕಟ್ಟುವ ವಿಷಯವಾಗಬಾರದು.ಯಾರೂ ಯಾವ ಒಂದು ಮತಕ್ಕೂ ಸೇರದೆ,ಪ್ರತಿಯೊಬ್ಬರೂ ತಾನು ಕಂಡುಕೊಳ್ಳುವ ‘ ತನ್ನ’ ಮತಕ್ಕೆ ಮಾತ್ರ ಸೇರಬೇಕು.ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ.ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪುಕಟ್ಟಿ ಜಗಳ ಹಚ್ಚುವಂತಾಗಬಾರದು.
೭. ಯಾವ ಒಂದು ಗ್ರಂಥವೂ ‘ ಏಕೈಕ ಪರಮಪೂಜ್ಯ ‘ ಗ್ರಂಥವಾಗಬಾರದು.ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ ದರ್ಶನ’ ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು “.

ಇದು ಕುವೆಂಪು ಅವರ ವಿಶ್ವಮಾನವ ಸಂದೇಶ,ವಿಶ್ವಮಾನವತತ್ತ್ವ.ಮಗು ಹುಟ್ಟುವಾಗ ಜಾತಿ,ಮತ,ಧರ್ಮ,ಭಾಷೆ,ನಾಡು,ಗಡಿ ಮೊದಲಾದ ಯಾವ ‘ಉಪಾಧಿ’ ಗಳಿಗೆ ಒಳಗಾಗಿರುವುದಿಲ್ಲ. ಸ್ವಯಂಪೂರ್ಣ ವ್ಯಕ್ತಿತ್ವದೊಂದಿಗೆ ಹುಟ್ಟಿರುತ್ತದೆ.ಆದರೆ ಮಗು ಬೆಳೆದು ದೊಡ್ಡವನಾಗುತ್ತ ಮನುಷ್ಯನಿರ್ಮಿತ ಕಟ್ಟುಕಟ್ಟಲೆಗಳ ಸಮಾಜ ಬಂಧನಕ್ಕೊಳಗಾಗಿ ತನ್ನ ಪೂರ್ಣತ್ವವನ್ನು ಕುಬ್ಜಗೊಳಿಸಿಕೊಂಡು ‘ಅಲ್ಪತ್ವ’ ವನ್ನು ಅಳವಡಿಸಿಕೊಳ್ಳುತ್ತದೆ.ಆತ್ಮಸ್ವರೂಪವೇ ಮನುಷ್ಯರ ಮೂಲಸ್ವರೂಪವಾಗಿದ್ದು ಅದನ್ನು ಮರೆತು ದೇಹಸ್ವರೂಪರಾಗಿ ಜನರು ಭ್ರಾಂತಿಗೀಡಾಗುತ್ತಿದ್ದಾರೆ.ಮನುಷ್ಯರಲ್ಲಿ ಮಗು ಸಹಜ ಮುಗ್ಧತೆ,ಪ್ರೀತಿ,ಸಹೋದರತೆ,ಸಮಾನತೆಗಳನ್ನು ಜಾಗೃತಗೊಳಿಸುವುದೇ ಶಿಕ್ಷಣ ಮತ್ತು ನಾಗರಿಕತೆಯ ಉದ್ದೇಶವಾಗಬೇಕು ಎನ್ನುವ ಕುವೆಂಪು ಅವರು ‘ ಮನುಜಮತ ; ವಿಶ್ವಪಥ’ ವಾಗಬೇಕು ಎನ್ನುತ್ತಾರೆ.ಲೋಕಸಮಸ್ತರ ಕಲ್ಯಾಣಕ್ಕಾಗಿ ಅವತರಿಸುವ ಪರಮಾತ್ಮನ ವಿಭೂತಿಗಳ ಉಪದೇಶವಾಕ್ಕುಗಳು ಸಾರ್ವತ್ರಿಕ ಸತ್ಯನುಡಿಗಳಾಗಿದ್ದು ಅವು ಯಾವುದೇ ನಿರ್ದಿಷ್ಟ ಜನಸಮುದಾಯಕ್ಕೆ ಸಂಬಂಧಿಸಿರದೆ ಇಡೀ ಮನುಕುಲದ ಒಳಿತನ್ನೇ ಬಯಸುವ ಮುಕ್ತಾತ್ಮರ ನುಡಿಗಳಾಗಿರುತ್ತವೆ.ಆದರೆ ಬುದ್ಧಿವಂತರೂ ಸ್ವಾರ್ಥಿಗಳೂ ಆಗಿರುವ ಮನುಷ್ಯರು ಮಹಾತ್ಮರುಗಳು,ಮಹಾನ್ ವ್ಯಕ್ತಿಗಳನ್ನು ತಮ್ಮ ಜಾತಿ,ಮತಗಳ ಮಿತಿಗೆ ಸೀಮಿತಗೊಳಿಸುತ್ತಾರೆ.ಸೂರ್ಯ ಜಗತ್ತಿಗೆ ಬೆಳಕನ್ನು ಕೊಡುತ್ತಾನೆ.ಆದರೆ ಸೂರ್ಯನ ಬಿಸಿಲಿನಿಂದ ಮಾಡಲ್ಪಟ್ಟ ಸೌರದೀಪ ಒಂದು ಮನೆ ಇಲ್ಲವೆ ಒಂದಷ್ಟು ಜಾಗವನ್ನು ಮಾತ್ರ ಬೆಳಗುತ್ತದೆ.ಇದು ಧರ್ಮವು ಮತವಾಗಿ ಪರಿಮಿತಾರ್ಥ ಪಡೆಯುವ ಸಂಕುಚಿತ ಕ್ರಿಯೆ,ಆಕುಂಚನ ಕ್ರಿಯೆ; ವಿಕಸನ ಕ್ರಿಯೆಯಲ್ಲ.

ವ್ಯಕ್ತಿಗಾಗಿ ಧರ್ಮವೇ ಹೊರತು ಧರ್ಮಕ್ಕಾಗಿ ವ್ಯಕ್ತಿಯಲ್ಲ ಎನ್ನುವ ಕುವೆಂಪು ಅವರು ‘ ವ್ಯಕ್ತಿಧರ್ಮ’ ದ ಪ್ರತಿಪಾದನೆ ಮಾಡುತ್ತಾರೆ.ಅಂದರೆ ಜಗತ್ತಿನಲ್ಲಿರುವ ಏಳುನೂರು ಬಿಲಿಯನ್ ಜನರು ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬೌದ್ಧ ಸಿಖ್ ಜಾರತೂಷ್ಟ್ರ ಮೊದಲಾದ ಮತಗಳಲ್ಲಿ ಹಂಚಿಹೋಗದೆ ಪ್ರತಿಯೊಬ್ಬ ವ್ಯಕ್ತಿಯ ಅಂತರ್ಗತಸತ್ಯವಾದ ಆತ್ಮನ ನೆಲೆಯಲ್ಲಿ ಅರಳುವ ತನ್ನತನದ,ಸ್ವಯಂಪ್ರಭೆಯ ಬೆಳಕಿನಲ್ಲಿ ಕಾಣುವ ವ್ಯಕ್ತಿವಿಶಿಷ್ಟಧರ್ಮವಾಗಬೇಕು.ವ್ಯಕ್ತಿಧರ್ಮದ ಉದಾತ್ತತೆಯನ್ನು ಅಳವಡಿಸಿಕೊಂಡರೆ ಜಗತ್ತಿನಲ್ಲಿ ಮತ ಧರ್ಮಗಳ ಹೆಸರಿನಲ್ಲಿ ನಡೆಯುವ ಕ್ಷೋಭೆ,ಸಂಘರ್ಷಗಳು ಇಲ್ಲವಾಗುತ್ತವೆ.ಕುವೆಂಪು ಅವರು ವಿಶ್ವಮಾನವ ತತ್ತ್ವಕ್ಕೆ ಐದು ಮಂತ್ರಗಳನ್ನು ನೀಡಿದ್ದಾರೆ ; ಮನುಜಮತ,ವಿಶ್ವಪಥ,ಸರ್ವೋದಯ,ಸಮನ್ವಯ,ಪೂರ್ಣದೃಷ್ಟಿ.ಈ ಮಹಾಮಂತ್ರಗಳನ್ನು ಅಳವಡಿಸಿ,ಅನುಷ್ಠಾನಕ್ಕೆ ತಂದುದಾದರೆ ನಮ್ಮ ಈ ಲೋಕವೇ ನಾಕವಾಗುತ್ತದೆ ; ದಿವ್ಯಲೋಕವಾಗುತ್ತದೆ.ವ್ಯಕ್ತಿ,ದೇಶ ಮತ್ತು ವಿಶ್ವ ಈ ಮೂರು ಸ್ತರಗಳಲ್ಲಿಯೂ ಈ ಪಂಚಪ್ರಮಾಣಸೂತ್ರಗಳ ಅನುಷ್ಠಾನವಾಗಬೇಕು.’ವಸುದೈವ ಕುಟುಂಬಕಂ’ ತತ್ತ್ವವು ಸಾಕಾರಗೊಳ್ಳಲು ಈ ಬೀಜಮಂತ್ರಗಳನ್ನು ಬಿತ್ತಿ ಬೆಳೆಯಬೇಕು.

ವಿಶ್ವಮಾನವತೆಯ ಸಾಕಾರಕ್ಕೆ ಪಂಚಮಂತ್ರಗಳ ಅನುಷ್ಠಾನದೊಂದಿಗೆ ಸಪ್ತಸೂತ್ರಗಳ ಸಾಧನೆಯ ಪಥವನ್ನು ತೆರೆದಿಟ್ಟಿದ್ದಾರೆ ಋಷಿಕವಿ ಕುವೆಂಪು ಅವರು.ಕನ್ನಡದ ಆದಿಕವಿ ಪಂಪನ ವಿಶ್ವಭ್ರಾತೃತ್ವದ ಘೋಷವಾಕ್ಯ ” ಮನುಷ್ಯಜಾತಿ ತಾನೊಂದೆ ವಲಂ” ಎಂಬುದನ್ನು ಒಪ್ಪಿ,ವಿಶ್ವದ ಮಾನವರೆಲ್ಲ ಒಂದೇ ಎನ್ನುವುದನ್ನು ಜಾತಿ,ವರ್ಣ,ವರ್ಗ,ಸಾಮಾಜಿಕ ಅಂತಸ್ತು,ವಿದ್ಯೆ,ವಿದ್ವತ್ತು,ಹುದ್ದೆಗಳಾದಿ ಎಲ್ಲವುಗಳಿಂದ ಮುಕ್ತವಾದ ಮನುಷ್ಯಮತವನ್ನು ಅನುಸರಿಸಿ ನಡೆಯಬೇಕು.ವರ್ಣಾಶ್ರಮವನ್ನು ಮೂಲೋತ್ಪಾಟನೆ ಮಾಡಬೇಕು ಎನ್ನುವ ಕುವೆಂಪು ಅವರು ವರ್ಣಾಶ್ರಮವು ಕೇವಲ ಭಾರತಕ್ಕೆ ಸಂಬಂಧಿಸಿದ ಮಿತಿಯಾಗಿರದೆ ಅದು ವಿಶ್ವದ ಎಲ್ಲ ಜಾತಿ,ಮತ- ಧರ್ಮಗಳನ್ನು ಆವರಿಸಿಕೊಂಡ ಹಾವಸೆಯಂತಿದ್ದು ಅದರ ಸಮೂಲನಾಶ ಮಾಡಬೇಕು ಎನ್ನುತ್ತಾರೆ .ಮತಬುದ್ಧಿಯು ತೊಲಗಿ ಮತಿಯ ನಿಚ್ಚಳಬೆಳಕಿನಲ್ಲಿ ಅಧ್ಯಾತ್ಮ ಮತ್ತು ವೈಜ್ಞಾನಿಕ ನಿಲುವಿನೊಂದಿಗೆ ಬಾಳುವ ವಿಶ್ವವನ್ನು ಸೃಷ್ಟಿಸಿಕೊಳ್ಳಬೇಕಿದೆ.ವ್ಯಕ್ತಿಧರ್ಮವು ಜಾಗತಿಕ ಅವಶ್ಯಕತೆಯಾಗಿ ಎದ್ದು ಬರಬೇಕು ಎನ್ನುವ ಕುವೆಂಪು ಯಾವುದೊಂದು ಧರ್ಮಗ್ರಂಥವು ‘ ಏಕೈಕ ಪರಮಪೂಜ್ಯ ಗ್ರಂಥ’ ವಾಗಬಾರದು ಎನ್ನುವ ನಿಷ್ಠುರಸತ್ಯದತ್ತ ನಮ್ಮ ಗಮನಸೆಳೆಯುತ್ತಾರೆ.ಭಗವದ್ಗೀತೆ,ಬೈಬಲ್,ಕುರಾನ್,ಜಿಂದ ಅವೆಸ್ತಾ,ಗುರುಗ್ರಂಥಸಾಹೇಬಗಳಾದಿ ಯಾವ ಧಾರ್ಮಿಕ ಗ್ರಂಥವೂ ಪರಿಪೂರ್ಣವಲ್ಲ,ಸಮಗ್ರವಲ್ಲವಾದ್ದರಿಂದ ವಿಶ್ವಮಾನವತೆಯು ‘ವಸುದೈವಕುಟುಂಬಕಂ’ ಸೂತ್ರದ ವಿಶ್ವಮಾನವ ಗೀತೆ’ ಯನ್ನು ತನ್ನ ದರ್ಶನವನ್ನಾಗಿ ಸ್ವೀಕರಿಸಿ ನಡೆಯಬೇಕು ಎನ್ನುತ್ತಾರೆ.

About The Author