ವಿಚಾರ : ಜ್ಯೋತಿಷ ಮತ್ತು ಕಾಲಜ್ಞಾನ : ಮುಕ್ಕಣ್ಣ ಕರಿಗಾರ

ಜ್ಯೋತಿಷ( ಜ್ಯೋತಿಷವೇ ಸರಿಯಾದ ಶಬ್ದ,ಜ್ಯೋತಿಷ್ಯ ತಪ್ಪು ಶಬ್ದ) ಶಾಸ್ತ್ರದ ಬಗ್ಗೆ ಜನರಲ್ಲಿ ನಂಬಿಕೆ ಇರುವಂತೆ ಅಪನಂಬಿಕೆಯೂ ಇದೆ.ಹೊಟ್ಟೆಪಾಡಿನ ಜ್ಯೋತಿಷಿಗಳು ಜ್ಯೋತಿಷದ ಬಗ್ಗೆ ಇಲ್ಲ ಸಲ್ಲದ ಕಟ್ಟುಕಥೆಗಳನ್ನು ಕಟ್ಟಿದ್ದಾರೆ.ಋಷಿಗಳೇ ಜ್ಯೋತಿಷದ ಕರ್ತೃಗಳು ಹಾಗೆ ಹೀಗೆ ಸುಳ್ಳುಗಳನ್ನು ಸೃಷ್ಟಿಸಿದ್ದಾರೆ.ವೇದಗಳ ಕಾಲದಲ್ಲಿ ಜ್ಯೋತಿಷ ಇರಲಿಲ್ಲ ಅದಕ್ಕೊಂದು ಶಾಸ್ತ್ರದ ಮನ್ನಣೆಯೂ ಇರಲಿಲ್ಲ.ನಿಖರವಾಗಿ ಹೇಳುವುದಾದರೆ ಅಥರ್ವವೇದದ ಕಾಲಕ್ಕೆ ಭಾರತದಲ್ಲಿ ಜ್ಯೋತಿಷವು ಕಾಣಿಸಿಕೊಳ್ಳುತ್ತದೆಯೇ ಹೊರತು ಋಗ್ವೇದದ ಕಾಲದ ಋಷಿಗಳು ಜ್ಯೋತಿಷದ ಆವಿಷ್ಕಾರ ಮಾಡಿರಲಿಲ್ಲ.( ಋಗ್ವೇದ ಮತ್ತು ಅಥರ್ವವೇದ ಕಾಲದ ನಡುವೆ ಏನಿಲ್ಲವೆಂದರೂ ಒಂದು ಸಾವಿರ ವರ್ಷಗಳ ಅಂತರವಿದೆ)ಋಗ್ವೇದ ದ ಸಮಾಜವು ‘ ಯಜ್ಞಪ್ರಧಾನ ಸಂಸ್ಕೃತಿ’ ಯ ಸಮಾಜವಾಗಿತ್ತು.ಯಜ್ಞದಿಂದ ದೇವತೆಗಳನ್ನು ಸಂಪ್ರೀತಗೊಳಿಸಬಹುದು ಎನ್ನುವುದು ಋಗ್ವೇದ ಕಾಲದ ಋಷಿಗಳ ನಂಬಿಕೆಯಾಗಿತ್ತು.ಋಗ್ವೇದದ ಋಷಿಗಳು ಮುವ್ವತ್ತುಮೂರು ದೇವತೆಗಳ ಉಪಾಸನೆ ಮಾಡುತ್ತಿದ್ದರು,ಅಗ್ನಿ ಅವರ ಪ್ರಧಾನದೇವತೆಯಾಗಿದ್ದ.ಅಶ್ವಿನಿ ದೇವತೆಗಳು ಆರೋಗ್ಯದ ದೇವತೆಗಳಾಗಿದ್ದರು,ದೇವವೈದ್ಯರುಗಳಾಗಿದ್ದರು.ನವಗ್ರಹಗಳ ಕಲ್ಪನೆ ಮತ್ತು ನವಗ್ರಹಗಳು ಭೂಮಿ ಮತ್ತು ಭೂಗ್ರಹದಲ್ಲಿ ವಾಸಿಸುವ ಜೀವಿಗಳ ಬದುಕಿನ ಆಗು ಹೋಗುಗಳಿಗೆ ಕಾರಣರು ಎನ್ನುವ ನಂಬಿಕೆ ಋಗ್ವೇದದ ಋಷಿಗಳದ್ದು ಆಗಿರಲಿಲ್ಲ.ನವಗ್ರಹಗಳಲ್ಲಿ ಸೂರ್ಯ ಮತ್ತು ಚಂದ್ರರ ಉಪಾಸನೆ ರೂಢಿಯಲ್ಲಿತ್ತು.

ಅಥರ್ವವೇದ ಕಾಲದಲ್ಲಿ ಇಂದಿನ ತಾಂತ್ರಿಕವಿದ್ಯೆಯ ಆವಿರ್ಭಾವವಾಯಿತು.ಮದ್ದು,ಮಾಟ,ಅಭಿಚಾರಕರ್ಮ ಪ್ರಯೋಗ ಮತ್ತು ಅವುಗಳ ನಿವಾರಣೆಗಾಗಿ ಯಂತ್ರ,ಮಂತ್ರ,ತಂತ್ರಗಳೆಂಬ ಸಾಧನಗಳನ್ನು ಆವಿಷ್ಕರಿಸಲಾಯಿತು.ಇದೇ ಕಾಲಘಟ್ಟದಲ್ಲಿ ಜ್ಯೋತಿಷವು ಮನ್ನಣೆ ಪಡೆದು ಅದೊಂದು ಶಾಸ್ತ್ರವಾಯಿತು.ಇದರ ಅರಿವು ಇಲ್ಲದ ಜ್ಯೋತಿಷಿಗಳು ಜ್ಯೋತಿಷವು ಋಗ್ವೇದೋಕ್ತ ಪುರಾತನ ಶಾಸ್ತ್ರ,ವಿದ್ಯೆ ಎಂದು ಸುಳ್ಳು ಹೇಳುತ್ತಿದ್ದಾರೆ.ಜ್ಯೋತಿಷವು ಗ್ರಹಗಳ ಚಲನೆಯನ್ನಾಧರಿಸಿದ ಶಾಸ್ತ್ರ.ನವಗ್ರಹಗಳು ಜ್ಯೋತಿಷದ ಮೂಲ ಮತ್ತು ಆಧಾರ.ನವಗ್ರಹಗಳಲ್ಲಿ ಸೂರ್ಯ,ಚಂದ್ರ,ಮಂಗಳ,ಬುಧ,ಗುರು ,ಶುಕ್ರ ಮತ್ತು ಶನಿಯರು ‘ಗೋಚರಿಸಬಹುದಾದ’ ಗ್ರಹಗಳಾಗಿದ್ದು ಆ ಗ್ರಹಗಳ ಗೋಚರಭಾವವದ ಆಧಾರದ ಮೇಲೆ ‘ ಗೋಚಾರ ಜ್ಯೋತಿಷ’ ವು ರೂಪುಗೊಂಡಿದೆ.ರಾಹು ಮತ್ತು ಕೇತುಗಳು ಕಣ್ಣಿಗೆ ಕಾಣಿಸದ ಅಗೋಚರಗ್ರಹಗಳಾಗಿದ್ದುದರಿಂದ ಆ ಎರಡು ಗ್ರಹಗಳನ್ನು ‘ ಛಾಯಾಗ್ರಹಗಳು’ ಎನ್ನಲಾಗುತ್ತದೆ.ಸೂರ್ಯನು ಅತ್ಯಂತ ಪ್ರಭಾವಶಾಲಿ ಗ್ರಹವಾಗಿ ‘ ಗ್ರಹರಾಜ’ ಎನ್ನಿಸಿಕೊಂಡಿದ್ದಾನೆ.ಸೂರ್ಯನ ಮಗನಾಗಿಯೂ ಸೂರ್ಯನ ಕಡುವೈರಿಯಾಗಿರುವ ಶನಿಯೂ ಮಹಾಬಲಶಾಲಿ ಗ್ರಹ.ಅಲ್ಲದೆ ಛಾಯಾಗ್ರಹಗಳಾದ ರಾಹು ಮತ್ತು ಕೇತುಗಳಿಬ್ಬರ ಸಖ್ಯವೂ ಶನಿಗೆ ಇದೆ.ಪ್ರತಿಯೊಬ್ಬ ಮನುಷ್ಯನ ಹೆಸರಿಗನುಗುಣವಾಗಿ ಅವನ ರಾಶಿಯು ನಿರ್ಧಾರವಾಗುತ್ತಿದ್ದು ಮೇಷವಾದಿ ಹನ್ನೆರಡು ರಾಶಿಗಳಿವೆ.ಗ್ರಹಗಳು ಸಂಚರಿಸುವ ಸ್ಥಿತಿಯನ್ನು ಅನುಸರಿಸಿ ದ್ವಾದಶರಾಶಿಗಳಿಗೆ ದ್ವಾದಶಭಾವಗಳಿವೆ.ಗ್ರಹಗತಿ,ರಾಶಿ ಮತ್ತು ಗ್ರಹಗಳ ಸಂಚಾರದ ಗತಿಯ ಆಧಾರದ ಮೇಲೆ ಜ್ಯೋತಿಷಿಗಳು ವ್ಯಕ್ತಿಗಳ ‘ ಭವಿಷ್ಯ’ ನಿರ್ಧರಿಸುತ್ತಾರೆ.ಜಾತಕವು ವ್ಯಕ್ತಿಗಳ ಭವಿಷ್ಯ ನಿರ್ಣಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಮಗು ಹುಟ್ಟಿದ ದಿನ, ಸಮಯ,ತಿಥಿ,ನಕ್ಷತ್ರಗಳ ಆಧಾರದ ಮೇಲೆ ಜಾತಕರಚಿಸಿ ಅವನ ಭವಿಷ್ಯ ನಿರ್ಣಯಿಸುತ್ತಾರೆ.ಆದರೆ ಎಲ್ಲ ಮಕ್ಕಳಿಗೂ ಜಾತಕ ಬರೆಸಿರುವುದಿಲ್ಲವಲ್ಲ! ಜಾತಕವಿಲ್ಲದವರಿಗೆ ಭವಿಷ್ಯವೇ ಇಲ್ಲವೆ? ಅದನ್ನು ‘ ಗೋಚಾರಫಲ’ ದ ಆಧಾರದ ಮೇಲೆ ನಿರ್ಣಯಿಸುತ್ತೇವೆ ಎನ್ನುತ್ತಾರೆ ಜ್ಯೋತಿಷಿಗಳು.ಗೋಚಾರವಾಗಿರಲಿ ಅಥವಾ ಜಾತಕಫಲವಾಗಲಿ ಪೂರ್ಣಸತ್ಯವಲ್ಲ.ಜ್ಯೋತಿಷದ ಯಶಸ್ಸು ಜ್ಯೋತಿಷಿಯ ಗಣಿತಸಾಮರ್ಥ್ಯ,ಊಹಾ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ.ಒಂದೇ ರಾಶಿಯಲ್ಲಿದ್ದ ಲಕ್ಷಾಂತರ ಜನರಿಗೂ ಒಂದೇ ಭವಿಷ್ಯ ಇರುವುದಿಲ್ಲ.ಜ್ಯೋತಿಷಿಗಳು ಹೇಳುವುದು ಎಲ್ಲರಿಗೂ ಅನ್ವಯಿಸುವುದಿಲ್ಲ.ಪರಿಹಾರಜ್ಯೋತಿಷದ ಹೆಸರಿನಲ್ಲಿ ಜ್ಯೊತಿಷಿಗಳು ಸುಳ್ಳುಗಳನ್ನು ಸೃಷ್ಟಿಸುತ್ತಿದ್ದಾರೆ.ತಾವು ನಂಬುವ,ಪೂಜಿಸುವ ದೇವರುಗಳ ಪೂಜೆ ಉಪಾಸನೆಯಿಂದ ಸಮಸ್ಯೆಗಳ ಪರಿಹಾರ ಸಾಧ್ಯವೆಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.ಜ್ಯೋತಿಷಿಗಳಲ್ಲಿ ಬಹುಪಾಲು ಜನರು ಬ್ರಾಹ್ಮಣರೇ ಇರುವುದರಿಂದ ಬ್ರಾಹ್ಮಣರು ಪೂಜಿಸುವ ದೈವಗಳನ್ನೇ ‘ ಪರಿಹಾರ ದೈವ’ ಗಳನ್ನಾಗಿ ಸೂಚಿಸುತ್ತಿದ್ದಾರೆ.ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳಿಂದ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ಸಾಯಿಬಾಬಾ ಅವರ ಆರಾಧನೆಯಿಂದ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದು ರಾಘವೇಂದ್ರಸ್ವಾಮಿಗಳು ಮತ್ತು ಸಾಯಿಬಾಬಾರ ಭಕ್ತರಾಗಿರುವ ಜ್ಯೋತಿಷಿಗಳ ಸುಳ್ಳು ಸಲಹೆ.ರಾಘವೇಂದ್ರಸ್ವಾಮಿಗಳು,ಸಾಯಿಬಾಬಾ ಅವರು ಶರಣರು,ಸಂತರು ಆಗಿದ್ದು, ಅವರ ಯೋಗಸಾಮರ್ಥ್ಯದ ಬಲದಿಂದ ಅವರಿಬ್ಬರನ್ನು ಮೊರೆಹೊಕ್ಕವರಿಗೆ ಒಳ್ಳೆಯದು ಆಗುತ್ತದೆ.ಆದರೆ ರಾಘವೇಂದ್ರಸ್ವಾಮಿಗಳಿಗಾಗಲಿ ಅಥವಾ ಶಿರಡಿ ಸಾಯಿಬಾಬಾ ಅವರಿಗಾಗಲಿ ನವಗ್ರಹಗಳಲ್ಲಿ ಯಾವುದೇ ಗ್ರಹದ ಮೇಲೆ ಅಧಿಪತ್ಯವಿಲ್ಲ; ಅವರಿಬ್ಬರು ಯಾವ ಗ್ರಹದ ಅಭಿಮಾನಿದೇವತೆಗಳೂ ಅಲ್ಲ.

ಭಾರತದಲ್ಲಿ ಬಹು ಪುರಾತನ ಕಾಲದಿಂದಲೂ ಶ್ರೀಕಾಳಹಸ್ತಿಯು ಗ್ರಹದೋಷಗಳ ಪರಿಹಾರಸ್ಥಾನವಾಗಿದೆ.ಅದನ್ನು ಬಿಟ್ಟರೆ ಕುಕ್ಕೆ ಸುಬ್ರಹ್ಮಣ್ಯ,ಧರ್ಮಸ್ಥಳದ ಮಂಜುನಾಥಸ್ವಾಮಿ ಗ್ರಹದೋಷಗಳನ್ನು ಪರಿಹರಿಸಬಲ್ಲರು.ಗಣಪತಿ,ಷಣ್ಮುಖ,ವೀರಭದ್ರ- ಭೈರವರುಗಳ ಆರಾಧನೆಯಿಂದ ಯಾವುದೇ ಗ್ರಹಗಳ ಪೀಡೆಯಿಂದ ಮುಕ್ತರಾಗಬಹುದು.ಶಿವನ ಜ್ಯೋತಿರ್ಲಿಂಗಗಳು ಗ್ರಹದೋಷಪರಿಹಾರಕ್ಕೆ ಅತ್ಯಂತ ಸಮರ್ಥಕ್ಷೇತ್ರಗಳು. ದುರ್ಗಾದೇವಿಯು ನವಗ್ರಹಗಳನ್ನು ನಿಗ್ರಹಿಸಬಲ್ಲಳು.ಜ್ಯೋತಿಷಿಗಳು ಈ ದೇವರುಗಳ ಬಗೆಗೆ ಹೇಳದೆ ತಮ್ಮ ನಂಬಿಕೆಯ ದೇವರು,ದೈವಗಳ ಸುಳ್ಳುಮಹಿಮೆ ಪ್ರಸಾರಮಾಡುವ ಮೋಸಕಾರ್ಯವನ್ನು ಎಸಗುತ್ತಿದ್ದಾರೆ‌.ಇದರಿಂದ ಜನರಿಗೆ ವ್ಯರ್ಥ ಖರ್ಚು ಆಗುತ್ತದೆಯೇ ಹೊರತು ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ.

‌ಜ್ಯೋತಿಷವು ಒಂದು ಶಾಸ್ತ್ರವಾಗಿ ಬೆಳೆದಿದೆಯಾದರೂ ಅದು ಪರಿಪೂರ್ಣಶಾಸ್ತ್ರವಲ್ಲ,ಪ್ರಮಾಣಶಾಸ್ತ್ರವಲ್ಲ.ಜ್ಯೋತಿಷವು ನೂರಕ್ಕೆ 40 ರಷ್ಟು ಮಾತ್ರ ನಿಜವಾಗಬಲ್ಲದು,ಅದಕ್ಕಿಂತ ಹೆಚ್ಚಿನ ಪ್ರಮಾಣದ ಫಲಸಿದ್ಧಿಯನ್ನು ಜ್ಯೋತಿಷದಿಂದ ನಿರೀಕ್ಷಿಸಲು ಸಾಧ್ಯವಿಲ್ಲ.

‌ಜ್ಯೋತಿಷಕ್ಕೆ ವಿರುದ್ಧವಾಗಿದೆ ‘ ಕಾಲಜ್ಞಾನ’. ಕಾಲಜ್ಞಾನವು ಯೋಗಸಾಮರ್ಥ್ಯದಿಂದ ಲಭಿಸುವ ವಿಶೇಷಜ್ಞಾನವಾಗಿದ್ದು ಅದು ಸತ್ಯವಾಗಿರುತ್ತದೆ,ನಿಖರವಾಗಿರುತ್ತದೆ.ಆದರೆ’ ಕಾಲಜ್ಞಾನ’ ದ ಹೆಸರಿನಲ್ಲಿ ಕೋಡಿಮಠದ ಸ್ವಾಮಿಗಳಂಥವರು ಹೇಳುತ್ತಿರುವುದು ‘ ಕಾಲಜ್ಞಾನವಲ್ಲ’ ಎನ್ನುವ ತಿಳಿವಳಿಕೆ ಇರುವುದು ಅವಶ್ಯಕ.ಕೋಡಿಮಠವು ‘ಕವಡೆಶಾಸ್ತ್ರ’ ವನ್ನು ಆಧರಿಸಿದ ಕವಡೆಮಠ.ಈಗಿನ ಕೋಡಿಮಠದ ಸ್ವಾಮಿಗಳಂತೂ ಕಾಲಜ್ಞಾನಿಗಳು ಅಲ್ಲವೇ ಅಲ್ಲ,ಅವರು ಕಾಲಜ್ಞಾನಿಗಳು ಎಂಬಂತೆ ಸುಳ್ಳು ಪ್ರಚಾರ ನೀಡಲಾಗಿದೆ.ಕಾಲಜ್ಞಾನವು ಎತ್ತರದ ಯೋಗಿಗಳಿಗೆ ಎಟುಕುವ ಯೋಗಸಿದ್ಧಿಯೇ ಹೊರತು ಯೋಗಸಾಧಕರಲ್ಲದ ಕೋಡಿಮಠದ ಶಿವಾನಂದಸ್ವಾಮಿಗಳಂಥವರಿಗೆ ಸಿದ್ಧಿಸದು. ಶಿವಾನಂದ ಸ್ವಾಮಿಗಳು ಕೋಡಿ ಮಠದಲ್ಲಿನ ತಾಳೆಯೋಲೆ ಗ್ರಂಥಗಳು,ಹಸ್ತಪ್ರತಿಗಳ ಆಧಾರದ ಮೇಲೆ ಹೇಳುವ ಜ್ಯೋತಿಷವು ಕಾಲಜ್ಞಾನವಲ್ಲ. ಚೆನ್ನಬಸವಣ್ಣ,ಕೈವಲ್ಯದ ನಾರಾಯಣ ಯತಿಗಳು,ಕೊಡೆಕಲ್ ಬಸವಣ್ಣ ಮೊದಲಾದವರು ಕಾಲಜ್ಞಾನಿಗಳು.ಹಿಮಾಲಯದ ಎತ್ತರದ ,ಅಗೋಚರ ಗುಹೆಗಳಲ್ಲಿನ ಋಷಿಗಳು ಕಾಲಜ್ಞಾನಿಗಳು.ಕರ್ನಾಟಕದ ಹಡಗಲಿಯ ಮೈಲಾರ ದೇವರು ಹೇಳುವ ಕಾರಣಿಕನುಡಿಯು ಕಾಲಜ್ಞಾನ ನುಡಿ.ಮೈಲಾರನಂತೆಯೇ ಹಲವು ಮೈಲಾರ ಕ್ಷೇತ್ರಗಳಲ್ಲಿ ಕಾರಣಿಕ ನುಡಿಯಲಾಗುತ್ತಿದೆ.ಹಳ್ಳಿಗಳಲ್ಲಿ ದೇವರುಗಳು ‘ಹೇಳಿಕೆ’ ಹೇಳುತ್ತಿವೆ.ಮಳೆ ಬೆಳೆಯ ಬಗ್ಗೆ ರೈತರಿಗೆ ಮಾಹಿತಿ ನೀಡುವುದೇ ಜನಪದ ಸಂಸ್ಕೃತಿಯ ದೈವಗಳ ಹೇಳಿಕೆ.ಎಲ್ಲ ದೇವರುಗಳು ಸತ್ಯವನ್ನೇ ಹೇಳುತ್ತವೆ ಎನ್ನಲಾಗದು.ಅಲ್ಲದೆ ಬೆಡಗಿನವಚನಗಳ ರೂಪದಲ್ಲಿರುವ ಈ ಹೇಳಿಕೆಗಳನ್ನು ಹೇಗಾದರೂ ಅರ್ಥೈಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅವುಗಳನ್ನು ಪ್ರಮಾಣವಾಕ್ಯಗಳು ಎನ್ನಲಾಗದು.

ಆದರೆ ಯೋಗಿಗಳು ತಮ್ಮ ಯೋಗಸಾಮರ್ಥ್ಯದಿಂದ ನಿಖರವಾದ ಜ್ಞಾನವನ್ನು ಹೇಳಬಲ್ಲರು.ಕುಂಡಲಿನಿಯೋಗಸಾಧನೆಯ ಬಲದಿಂದ ಷಟ್ ಚಕ್ರಗಳನ್ನು ಭೇದಿಸಬಲ್ಲ ಯೋಗಿಯು ಪ್ರಕೃತಿರಹಸ್ಯವನ್ನು ಭೇದಿಸಬಲ್ಲ. ಜ್ಯೋತಿಷವು ಬರೆದಿಟ್ಟ ಜ್ಞಾನವಾಗಿದ್ದು ಸ್ವಲ್ಪ ಪರಿಶ್ರಮದಿಂದ ಯಾರಾದರೂ ಅದರಲ್ಲಿ ಪ್ರಾವಿಣ್ಯ ಪಡೆಯಬಹುದು.ಆದರೆ ಕಾಲಜ್ಞಾನವು ಯೋಗಸಾಧನೆಯಿಂದ ದೊರಕುವ ಅಪರೋಕ್ಷ ಜ್ಞಾನವಾಗಿದ್ದು ಅದಕ್ಕೆ ಸ್ವಯಂ ಪರಿಶ್ರಮ ಬೇಕಾಗುತ್ತದೆ,ಯೋಗಿಯ ಸ್ವಯಂ ಸಿದ್ಧಿಯ ಸಂಪಾದನೆಯೇ ಕಾಲಜ್ಞಾನವು.ಕುಂಡಲಿನಿಯೋಗಸಾಧಕರು ನಿಶ್ಚಿತವಾದ ಕಾಲಜ್ಞಾನವನ್ನು ಹೇಳಬಲ್ಲರು.ಯೋಗಿಗೆ ಪ್ರಕೃತಿಯ ಮೇಲೆ ಪ್ರಭುತ್ವ ದೊರೆತಿರುವುದರಿಂದ ಯೋಗಿಯು ಹಿಂದಿನ ಇಂದಿನ ಮುಂದಿನ ಸಂಗತಿಗಳನ್ನು ಅರಿಯಬಲ್ಲ.ಮನುಷ್ಯರ ಬದುಕು ಹೇಗೆ ಪೂರ್ವನಿರ್ಧಾರಿತವೋ ಹಾಗೆಯೇ ಈ ಪ್ರಪಂಚದ ಗತಿಯೂ ಪೂರ್ವನಿರ್ಧಾರಿತವೆ! ಈ ಪ್ರಪಂಚದಲ್ಲಿ ಜರುಗುವ ಪ್ರತಿ ಘಟನೆ,ವಿದ್ಯಮಾನಗಳನ್ನು ಪ್ರಪಂಚಸೃಷ್ಟಿಯ ಪೂರ್ವದಲ್ಲೇ ಪರಮಾತ್ಮನು ನಿರ್ಧರಿಸಿದ್ದಾನೆ.ಪರಮಾತ್ಮನ ಸಂಕಲ್ಪ ಇಲ್ಲವೆ ‘ನಿಯತಿ’ ಯು ಪೂರ್ವನಿರ್ಧಾರಿತ ನಿಯಮವಾಗಿದ್ದು ಅದು ಸೂತ್ರಗಳ ರೂಪದಲ್ಲಿದೆ.ಯೋಗಿಯು ತನ್ನ ಯೋಗಸಾಮರ್ಥ್ಯದ ಬಲದಿಂದ ಪರಮಾತ್ಮನ ‘ನಿಯತಿನಿಯಮಗಳ’ ನ್ನು ಓದಬಲ್ಲ.ಪ್ರಕೃತಿಯು ಯೋಗಿಗೆ ತೆರೆದು ತೋರಿಸುವಂತೆ ಇತರರಿಗೆ ತನ್ನ ವಿಶ್ವರಹಸ್ಯವನ್ನು ತೆರೆದಿಡದು.ಆದ್ದರಿಂದ ಯೋಗಿಗಳು ಅಲ್ಲದ ಯಾರೇ ಹೇಳುವ ಮಾತುಗಳು ನಿಖರಸತ್ಯವಲ್ಲ,ಕಾಲಜ್ಞಾನವಲ್ಲ.

 

About The Author