ಹಠಯೋಗ- ರಾಜಯೋಗ ಮತ್ತು ಇತರ ಯೋಗಗಳು : ಮುಕ್ಕಣ್ಣ ಕರಿಗಾರ

ಯೋಗಚಿಂತನೆ : ಹಠಯೋಗ- ರಾಜಯೋಗ ಮತ್ತು ಇತರ ಯೋಗಗಳು : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ನಿಕಟವರ್ತಿಗಳೂ ವಿದ್ಯಾರ್ಥಿದೆಸೆಯಿಂದಲೂ ಮಹಾಶೈವ ಧರ್ಮಪೀಠದೊಂದಿಗೆ ಅನೋನ್ಯಭಾವದಿಂದಿರುವ ನನ್ನ ಮತ್ತೋರ್ವ ವಿದ್ಯಾರ್ಥಿಶಿಷ್ಯ ಗುರುಪಾದ ಕರಿಗಾರ ಅವರಿಗೆ ಹಠಯೋಗ ಮತ್ತು ರಾಜಯೋಗಗಳ ಬಗ್ಗೆ ತಿಳಿದುಕೊಳ್ಳುವ ಸಮ್ಯಕ್ ಇಚ್ಛೆ. ವೃತ್ತಿಯಲ್ಲಿ ಪೋಲೀಸ್ ಅಧಿಕಾರಿಯಾಗಿರುವ ಗುರುಪಾದ ಕರಿಗಾರ ಪ್ರಸ್ತುತ ಬೆಂಗಳೂರಿನ ಕೋರಮಂಗಲ ಪೋಲಿಸ್ ಸ್ಟೇಶನ್ನಿನಲ್ಲಿ ಮುಖ್ಯಪೇದೆ ಅಂದರೆ ಹೆಡ್ ಕಾನ್ ಸ್ಟೇಬಲ್ ಹುದ್ದೆಯಲ್ಲಿದ್ದಾರೆ.ಪೋಲೀಸ್ ಇಲಾಖೆಗೂ ಅಧ್ಯಾತ್ಮಕ್ಕೂ ಎತ್ತಣೆತ್ತಣ ಸಂಬಂಧ? ಆದರೆ ಗುರುಪಾದ ಕರಿಗಾರ ವಿದ್ಯಾರ್ಥಿದೆಸೆಯಿಂದಲೂ ಈಗಿನ ಮಹಾಶೈವ ಧರ್ಮಪೀಠದ ಪೂರ್ವದ ಅಧ್ಯಾತ್ಮಕೇಂದ್ರವಾಗಿದ್ದ ನಮ್ಮ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಸ್ಮರಣೆಯಲ್ಲಿ ನಾವು ಪ್ರಾರಂಭಿಸಿದ್ದ ‘ ತಪೋವನ ಯೋಗ ಆಶ್ರಮ’ ದ ಒಡನಾಟದಲ್ಲಿ ಬೆಳೆದದ್ದರಿಂದ ಅಧ್ಯಾತ್ಮಿಕ ಅಭಿಪ್ಸೆ ಉಂಟಾಗಿ ‘ ಸಿದ್ಧಿಸಂಪನ್ನಗುರು’ ಒಬ್ಬರನ್ನು ಪಡೆದು ಅಧ್ಯಾತ್ಮಿಕ ಪಥದಲ್ಲಿ ಪಯಣಿಸುತ್ತಿದ್ದಾರೆ.ನಿತ್ಯಶಿವೋಪಾಸನೆಯ ಫಲವಾಗಿ ಗುರುಪಾದ ಕರಿಗಾರ ಅವರಲ್ಲಿ ‘ ಹಠಯೋಗ ಮತ್ತು ರಾಜಯೋಗ’ ದ ಬಗ್ಗೆ ತಿಳಿದುಕೊಳ್ಳುವ ಸಹಜ ಕುತೂಹಲವಿದೆ.

ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ ಹಲವಾರು ಯೋಗಗಳಿವೆ.ಭಕ್ತಿಯೋಗ,ಜ್ಞಾನಯೋಗ,ಕರ್ಮಯೋಗಗಳೆಂಬ ಯೋಗತ್ರಯಗಳನ್ನು ಎಲ್ಲರೂ ಬಲ್ಲರು.ಕೆಲವರು ಈ ಮೂರು ಯೋಗಗಳೊಂದಿಗೆ ‘ ರಾಜಯೋಗ’ ವನ್ನು ಸೇರಿಸಿ,ನಾಲ್ಕುಯೋಗಗಳೆನ್ನುತ್ತಾರೆ.ಇನ್ನು ಕೆಲವರು ಎಂಟುಯೋಗಗಳೆನ್ನುತ್ತಾರೆ.ಎಲ್ಲ ಪ್ರಮುಖ ಯೋಗ ಪದ್ಧತಿಗಳನ್ನು ಪರಿಶೀಲಿಸಿನೋಡಿದಾಗ ಒಟ್ಟು ಹನ್ನೆರೆಡು ಪ್ರಮುಖಯೋಗಗಳಿವೆ.ಅವು–ಕರ್ಮಯೋಗ,ಭಕ್ತಿಯೋಗ,ಜ್ಞಾನಯೋಗ,ಹಠಯೋಗ,ರಾಜಯೋಗ,ಮಂತ್ರಯೋಗ,ಯಂತ್ರಯೋಗ,ತಂತ್ರಯೋಗ,ಲಯಯೋಗ ಅಥವಾ ಕುಂಡಲಿನಿಯೋಗ,ನಾದಯೋಗ,ಜಪಯೋಗ ಮತ್ತು ಪ್ರಾರ್ಥನಾಯೋಗ.ಈ ಯೋಗಗಳಲ್ಲಿ ಹಠಯೋಗ,ರಾಜಯೋಗ ಮತ್ತು ಕುಂಡಲಿನಿಯೋಗಗಳು ಮೋಕ್ಷಸಾಧಕವಾದ ಮೂರು ಮುಖ್ಯಯೋಗಗಳು.

ಕನ್ನಡಿಗರಾದ ನಮಗೆಲ್ಲರಿಗೂ ಶೂನ್ಯಸಿಂಹಾಸನಾಧೀಶ್ವರ ಅಲ್ಲಮ ಪ್ರಭುಗಳ ಪರಿಚಯವಿದೆ.ಅವರು ಅಧ್ಯಾತ್ಮಸಾಧನೆಯ ಅತ್ಯುನ್ನತ ಸಿದ್ಧಿಯಾದ ‘ ವ್ಯೋಮಕಾಯಸಿದ್ಧಿ’ ಯನ್ನು ಪಡೆದಿದ್ದ ಏಕೈಕ ಯೋಗಿಗಳು ಎನ್ನುವುದು ಅವರ ಹೆಗ್ಗಳಿಕೆ.ಅಲ್ಲಮಪ್ರಭುದೇವರು ಶ್ರೇಷ್ಠ ಹಠಯೋಗಸಾಧಕರಾಗಿದ್ದರು.ಹಠಯೋಗದ ಸಾಧನೆಯ ಬಲದಿಂದಲೇ ಪ್ರಭುದೇವರ ವ್ಯಕ್ತಿತ್ವಕ್ಕೆ ಸಿದ್ಧಿಪ್ರಸಿದ್ಧಿಗಳೊದಗಿದ್ದು.ಅಲ್ಲಮಪ್ರಭುದೇವರು ಹಠಯೋಗಸಾಧನೆಯಿಂದ ದೇಶದ ಯೋಗಿಗಳನ್ನೆಲ್ಲ ಸೋಲಿಸುತ್ತಬಂದಿದ್ದ ಗೋರಕ್ಷನನ್ನು ಸೋಲಿಸಿ ಅವನಿಗೆ ನಿಜಯೋಗಸಿದ್ಧಿಯ ಗುಟ್ಟನ್ನರುಹಿ ಉದ್ಧರಿಸಿದ್ದು ಅಲ್ಲಮಪ್ರಭುದೇವರು ಏರಿದ್ದ ಯೋಗಸಾಧನೆಯ ಎತ್ತರಕ್ಕೊಂದು ನಿದರ್ಶನ.ಹಠಯೋಗ ಮತ್ತು ರಾಜಯೋಗಗಳು ಪರಸ್ಪರ ಪೂರಕವಾದ ಯೋಗಗಳು.ಚಿದಾನಂದಾವಧೂತರು ತಮ್ಮ’ ವೇದಾಂತ ಜ್ಞಾನಸಿಂಧು’ಕೃತಿಯಲ್ಲಿ ಹಠಯೋಗ ಮತ್ತು ರಾಜಯೋಗಗಳ ಸಂಯೋಗದಿಂದ ಉಂಟಾಗುವ ‘ ಹಠರಾಜಯೋಗ’ ಎನ್ನುವ ಮತ್ತೊಂದು ಯೋಗದ ಬಗ್ಗೆ ವಿವರಿಸಿದ್ದಾರೆ.ಗೋರಕ್ಷರು ಹಠಯೋಗದ ಬಗ್ಗೆ ಗ್ರಂಥ ಒಂದನ್ನು ಬರೆದಿದ್ದಾರೆ.ಆದರೆ ನಾಥಸಂಪ್ರದಾಯದ ಕಾರಣಕರ್ತನಾದ ಪರಶಿವನೇ ಹಠಯೋಗವನ್ನು ಬೋಧಿಸಿದನೆಂದೂ ಅವನಿಂದ ನಾಥ ಸಂಪ್ರದಾಯವು ಹುಟ್ಟಿತೆಂದೂ ಶಿವನನ್ನು ‘ ಆದಿನಾಥ’ ಎಂದು ಕರೆಯುತ್ತಾರೆ.ಬಹುಹಿಂದಿನ ಕಾಲದಲ್ಲಿ ಒಂದು ದಿನ ಶಿವನು ಒಂದು ದ್ವೀಪದಲ್ಲಿ ಪಾರ್ವತಿಗೆ ಯೋಗವಿದ್ಯೆಯನ್ನು ಬೋಧಿಸುತ್ತಿದ್ದನು.ಪಕ್ಕದಲ್ಲಿದ್ದ ಜಲದಲ್ಲಿದ್ದ ಒಂದು ಮತ್ಸ್ಯ( ಮೀನು) ವು ಶಿವನ ಯೋಗೋಪದೇಶವನ್ನು ಏಕಾಗ್ರಚಿತ್ತದಿಂದ ಆಲಿಸಿ ,ಸಮಾಧಿಸ್ಥಿತಿಯನ್ನು ಹೊಂದಿತು.ಇದನ್ನು ಕಂಡು ದಯಾಸಾಗರನಾದ ಆದಿನಾಥ ಶಿವನು ಆ ಮತ್ಸ್ಯದ ಮೇಲೆ ಜಲದಿಂದ ಸಂಪ್ರೋಕ್ಷಣೆ ಮಾಡಿದನು.ತಕ್ಷಣ ಆ ಮತ್ಸ್ಯವು ಮತ್ಸ್ಯೇಂದ್ರಸಿದ್ಧನಾಗಿ ಪರಿವರ್ತನೆಯಾಯಿತು.ಈತನೇ ಮತ್ಸ್ಯೇಂದ್ರನಾಥನೆಂದು ಪ್ರಸಿದ್ಧನಾಗಿ ನಾಥಸಂಪ್ರದಾಯವನ್ನು ಭೂಲೋಕದಲ್ಲಿ ಪ್ರಚುರಪಡಿಸಿದನು.

ಮತ್ಸ್ಯೇಂದ್ರನಾಥ ಮತ್ತು ಅವನ ಶಿಷ್ಯರು ನವನಾಥರೆಂದು ಪ್ರಸಿದ್ಧರಾಗಿದ್ದಾರೆ.ಹಠಯೋಗವನ್ನು ಈ ನವನಾಥರುಗಳೇ ವ್ಯಾಪಕವಾಗಿ ಪ್ರಸಾರಮಾಡಿದವರಾಗಿದ್ದು ಯೋಗಸಿದ್ಧಿಯಲ್ಲಿ ಇವರನ್ನು ಮೀರಿಸಿದವರಿಲ್ಲ.ಹಠಯೋಗಸಾಧನೆಯಿಂದ ಕಾಲನ ಕಾಲದಂಡವನ್ನೂ ಖಂಡಿಸಿ ಮೃತ್ಯುವನ್ನು ಜಯಿಸಿ ಯೋಗಶಕ್ತಿಯಿಂದ ಬ್ರಹ್ಮಾಂಡ ಮಂಡಲದಲ್ಲಿ ವಿಹರಿಸುತ್ತಿರುವರು.

ಹಠಯೋಗದ ಹಿರಿಮೆ

ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮನೂ ಹಠಯೋಗವಿದ್ಯೆಯನ್ನು ಸಾಧನೆ ಮಾಡಿದ್ದಾನೆ ಎನ್ನುತ್ತದೆ ಯಾಜ್ಞ್ಯವಲ್ಕಸ್ಮೃತಿ.ಶಿವನು ಬ್ರಹ್ಮ,ವಿಷ್ಣುಗಳಿಗೆ ಹಠಯೋಗವನ್ನು ಬೋಧಿಸಿದನು.ಶುಕದೇವ,ನಾರದ,ಯಾಜ್ಞ್ಯವಲ್ಕ ಮೊದಲಾದವರು ಹಠಯೋಗಸಾಧನೆಯ ಸಿದ್ಧಿಯಿಂದ ಪ್ರಸಿದ್ಧರಾಗಿದ್ದಾರೆ.

ಗೋರಕ್ಷನಾಥನು ಹಠಯೋಗವನ್ನು ಸೂರ್ಯಚಂದ್ರರ ಯೋಗವೇ ಹಠಯೋಗವೆಂದಿದ್ದಾನೆ. ‘ ಹ’ ಎಂದರೆ ಎಂದರೆ ಸೂರ್ಯ ‘ ಠ’ ಎಂದರೆ ಚಂದ್ರ.ಹೀಗಾಗಿ ಹಠಯೋಗವು ಸೂರ್ಯಚಂದ್ರರ ಸಂಯೋಗಯೋಗವು.ಶರೀರದ ಬೆನ್ನುಮೂಳೆಯ ಮಧ್ಯಭಾಗದಲ್ಲಿ ಸೂಕ್ಷ್ಮವಾದ ಸುಷುಮ್ನಾನಾಡಿ ಇದೆ.ಸುಷುಮ್ನಾ ನಾಡಿಯ ಬಲಭಾಗಕ್ಕೆ ಸೂರ್ಯ ನಾಡಿ ಇದ್ದು ಅದನ್ನು ‘ ಪಿಂಗಳ’ ಎನ್ನಲಾಗುತ್ತದೆ.ಸುಷುಮ್ನಾ ನಾಡಿಯ ಎಡಭಾಗಕ್ಕಿರುವ ನಾಡಿಯೇ ಚಂದ್ರನಾಡಿಯಾಗಿದ್ದು ಅದನ್ನು ‘ ಇಡಾ’ ಎಂದು ಕರೆಯಲಾಗುತ್ತದೆ.ಸೂರ್ಯ ಮತ್ತು ಚಂದ್ರನಾಡಿಗಳ ಮೂಲಕ ಪ್ರಾಣದ ಗತಿನಿಯಂತ್ರಿಸಿ ಮಾಡುವ ಯೋಗವೇ ‘ ಹಠಯೋಗ’ ವಾಗಿದೆ.ಹಠಯೋಗವು ಕುಂಡಲಿನಿಯೋಗದೊಂದಿಗೆ ಸಂಬಂಧಹೊಂದಿದ್ದು ಪ್ರಾಣಾಯಾಮ ಕ್ರಿಯೆಯ ಮೂಲಕ ಹಠಯೋಗಸಿದ್ಧಿಯನ್ನು ಪಡೆಯಲಾಗುತ್ತದೆ.

ಮನುಷ್ಯರನ್ನು ಆಧ್ಯಾತ್ಮಿಕ,ಆಧಿಭೌತಿಕ ಮತ್ತು ಆಧಿದೈವಿಕ ಎನ್ನುವ ಮೂರು ಬಗೆಯ ತಾಪಗಳು ಕಾಡುತ್ತವೆ.ಇವುಗಳನ್ನು ‘ ತಾಪತ್ರಯಗಳು’ ಎನ್ನುತ್ತಾರೆ.ಆಧ್ಯಾತ್ಮಿಕ ತಾಪದಲ್ಲಿ ಶಾರೀರಿಕ ತಾಪ ಮತ್ತು ಮಾನಸಿಕ ತಾಪ ಎನ್ನುವ ಎರಡು ಬಗೆಯ ತಾಪಗಳಿವೆ.ವ್ಯಾಧಿಗಳಿಂದ ಉಂಟಾಗುವ ತಾಪವು ಶಾರೀರಿಕ ತಾಪವು.ಕಾಮ,ಕ್ರೋಧಾದಿ ಅರಿಷಡ್ವರ್ಗಗಳಿಂದುಂಟಾಗುವ ತಾಪವು ಮಾನಸಿಕ ತಾಪವು.ಹುಲಿ,ಸಿಂಹ,ಚಿರತೆ,ಸರ್ಪ ಮೊದಲಾದ ಕ್ರೂರ ಪ್ರಾಣಿಗಳು ಹಾಗೂ ವಿಷಜಂತುಗಳಿಂದ ಉಂಟಾಗುವ ತಾಪವು ಆಧಿಭೌತಿಕ ತಾಪವು.ಸೂರ್ಯನಾದಿ ಗ್ರಹಗಳಿಂದ ಉಂಟಾಗುವ ತಾಪವು ಆಧಿದೈವಿಕ ತಾಪವು.ಹಠಯೋಗಸಾಧನೆಯಿಂದ ಈ ತಾಪತ್ರಯಗಳಿಂದ ಸಂಪೂರ್ಣವಾಗಿ ಮುಕ್ತರಾಗಬಹುದು.ತಾಪತ್ರಯಮುಕ್ತರೇ ರಾಜಯೋಗಕ್ಕೆ ಅಧಿಕಾರಿಗಳು ಆಗುವುದರಿಂದ ಹಠಯೋಗಸಿದ್ಧಿಯಿಂದ ರಾಜಯೋಗಮಾರ್ಗಕ್ಕೆ ತನ್ನಿಂದ ತಾನೇ ಪ್ರವೇಶದೊರೆಯುತ್ತದೆ.

ಹಠಯೋಗ ಸಾಧನೆ — ಹಠಯೋಗಸಾಧಕರು ಜನರ ಸದ್ದುಗದ್ದಲದಿಂದ ಮುಕ್ತವಾಗಿರುವ ಒಂದು ನಿಶಬ್ದ,ಏಕಾಂತ ಸ್ಥಳವನ್ನು ಆಯ್ದುಕೊಳ್ಳಬೇಕು.ಅಲ್ಲಿ ಚಿಕ್ಕದಾದ ಒಂದು ಮಠ ಇಲ್ಲವೆ ಯೋಗಗುಹೆಯನ್ನು ನಿರ್ಮಿಸಿಕೊಳ್ಳಬೇಕು.ಮಠಕ್ಕೆ ಸಣ್ಣ ಪ್ರವೇಶದ್ವಾರವಿರಬೇಕು.ಯೋಗಗುಹೆಗೆ ಕಿಟಕಿ,ಗವಾಕ್ಷ,ರಂಧ್ರಗಳು ಇರಕೂಡದು.ಬಿಲಗಳು ಉಂಟಾಗದಂತೆ ಎಚ್ಚರವಹಿಸಬೇಕು. ಯೋಗಗುಹೆಯು ಅತ್ಯಂತ ಎತ್ತರದ ಇಲ್ಲವೆ ಅತ್ಯಂತ ಕೆಳಗಿನ ಸ್ಥಾನವಾಗಿರಬಾರದು.ಇಂತಹ ಸ್ಥಳಗಳಲ್ಲಿ ಏರಿಳಿಯುವ ಪ್ರಯಾಸ ಉಂಟಾಗುತ್ತದೆ.ಮಠವು ಚಿಕ್ಕದಾಗಿರಬೇಕಲ್ಲದೆ ಅತ್ಯಂತ ವಿಸ್ತಾರವಾಗಿರಬಾರದು.ವಿಸ್ತಾರವಾದ ಯೋಗಗುಹೆ ಇದ್ದರೆ ದೃಷ್ಟಿಯು ವಿಶಾಲವಾದ ಕ್ಷೇತ್ರದತ್ತ ಸಂಚರಿಸುತ್ತದೆ.ಮಠದ ಒಳಭಾಗವು ಗೋಮಯದಿಂದ ಸಾರಿಸಲ್ಪಟ್ಟಿರಬೇಕು ಮತ್ತು ಎಲ್ಲ ರೀತಿಯಿಂದಲೂ ನಿರ್ಮಲವಾಗಿರಬೇಕು.ಗುಂಗಾಡು,ಜೀರುಂಡೆ,ತಗಣಿ,ಸೊಳ್ಳೆಗಳ ಪ್ರವೇಶರಾಹಿತ್ಯ ಸ್ಥಳವಾಗಿರಬೇಕು.ಮಠದ ಮುಂಭಾಗದಲ್ಲಿ ಜಲಾಶಯ,ಹೂಗಿಡಬಳ್ಳಿಗಳು,ಮಂಟಪ,ವೇದಿಕೆ ಇವೇ ಮೊದಲಾದ ಮನಸ್ಸಿಗೆ ಆನಂದವನ್ನುಂಟುಮಾಡುವ ಪ್ರಕೃತಿರಮಣೀಯ ನೋಟ ಇರಬೇಕು.ಮಠದ ಸುತ್ತಲೂ ಪ್ರಾಕಾರ ಇರಬೇಕು.ಇದು ನಾಥ ಸಂಪ್ರದಾಯೋಕ್ತ ಹಠಯೋಗಸಾಧನೆಯ ಮಠ ಇಲ್ಲವೆ ಯೋಗಗುಹೆಯ ವಿವರವು.

ರಾಜಯೋಗ

ಮಾನವ ಶರೀರವು ೧. ಅನ್ನಮಯಕೋಶ ೨.ಪ್ರಾಣಮಯಕೋಶ ೩. ಮನೋಮಯಕೋಶ ೪. ವಿಜ್ಞಾನಮಯಕೋಶ ೫. ಆನಂದಮಯಕೋಶ ಎನ್ನುವ ಐದುಕೋಶಗಳಿಂದ ಕೂಡಿದ್ದು ಹಠಯೋಗವು ಅನ್ನಮಯಕೋಶ,ಪ್ರಾಣಮಯಕೋಶಗಳ ಶುದ್ಧಿಗೆ ಮಹತ್ವನೀಡಿದರೆ ರಾಜಯೋಗವು ಮನೋಮಯಕೋಶ ಮತ್ತು ವಿಜ್ಞಾನಮಯ ಕೋಶಗಳ ಶುದ್ಧಿಗೆ ಒತ್ತು ನೀಡುತ್ತದೆ.ಗುರು ಗೋರಖನಾಥರು ” ಗೋರಕ್ಷ ಪದ್ಧತಿ” ಯಲ್ಲಿ ಹೇಳಿರುವುದು ;

” ಹಠಂ ವಿನಾ ರಾಜಯೋಗೋ ರಾಜಯೋಗಂ ವಿನಾ ಹಠಃ/
ನ ಸಿದ್ಧ್ಯತಿ ತತೋ ಯುಗ್ಮ ಮಾನಿಷ್ಪತ್ತೇಃ ಸಮಭ್ಯಸೇತ್ /

ಅಂದರೆ ‘ ಹಠಯೋಗವಿಲ್ಲದೆ ರಾಜಯೋಗದ ಮತ್ತು ರಾಜಯೋಗವಿಲ್ಲದೆ ಹಠಯೋಗದ ಸಿದ್ಧಿಯಾಗುವುದಿಲ್ಲ.ಆದ್ದರಿಂದ ಸಿದ್ಧಿಪ್ರಾಪ್ತಿಗಾಗಿ ಎರಡನ್ನೂ ಸಾಧಿಸಬೇಕು”.
ಪತಂಜಲಿ ಮಹರ್ಷಿಗಳು ನಿರೂಪಿಸಿದ ಅಷ್ಟಾಂಗಯೋಗಮಾರ್ಗವೇ ರಾಜಯೋಗವು.ಪತಂಜಲಿ ಮಹರ್ಷಿಗಳು ತಮ್ಮ ಯೋಗವ್ಯಾಖ್ಯೆಯಾದ ‘ ಯೋಗಃಶ್ಚಿತ್ತವೃತ್ತಿನಿರೋಧಃ’ ಎನ್ನುವುದರಲ್ಲಿಯೆ ರಾಜಯೋಗದ ಗೂಢವನ್ನರುಹಿದ್ದಾರೆ.ಚಿತ್ತದವೃತ್ತಿಯನ್ನು ನಿರೋಧಿಸಿದರೆ ರಾಜಯೋಗವು ತಂತಾನೇ ಸಿದ್ಧಿಸುತ್ತದೆ.ಜೀವಾತ್ಮನು ಪರಮಾತ್ಮನೊಂದಿಗೆ ಒಂದಾಗುವ ಯೋಗವಿದ್ಯೆಯೇ ರಾಜಯೋಗವು.

About The Author