ಮಹಾಶೈವ ಧರ್ಮಪೀಠದಲ್ಲಿ ಮಹಾಕಾಳಿಪ್ರತಿಷ್ಠಾಪನಾ ವಾರ್ಷಿಕೋತ್ಸವದ ಆಚರಣೆ

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಡಿಸೆಂಬರ್ 22 ರ ಶುಕ್ರವಾರದಂದು ಮಹಾಕಾಳಿಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಬೆಳಿಗ್ಗೆ ಏಳುಘಂಟೆಗೆ ಮಹಾಕಾಳಿ ಮೂರ್ತಿಯನ್ನು ಕೃಷ್ಣಾನದಿಯ ನೀರಿನಿಂದ ತೊಳೆದು,ಗಂಗಾಸ್ನಾನ ಮಾಡಿಸುವ ಮೂಲಕ ಧಾರ್ಮಿಕಕ್ರಿಯೆಯನ್ನಾರಂಭಿಸಿದರು.

ಪಂಚಾಮೃತಾಭಿಷೇಕ,ಎಳೆನೀರಿನ ಅಭಿಷೇಕ,ಸುಗಂಧದ್ರವ್ಯಗಳ ಅಭಿಷೇಕ,ವನಸ್ಪತಿಗಳ ರಸೌಷಧಿ ಅಭಿಷೇಕ ಮತ್ತು ಮಂತ್ರತೀರ್ಥಾಭಿಷೇಕ ಎನ್ನುವ ಪಂಚಾಭಿಷೇಕಗಳಿಂದ ಮಹಾಕಾಳಿದೇವಿಗೆ ಪಂಚಾಭಿಷೇಕ ಸ್ನಾನ ಮಾಡಿಸಲಾಯಿತು.ನಂತರ ಪೂಜೆ ನೆರವೇರಿಸಲಾಯಿತು.ನಂತರ ಸುಮಂಗಲಿಯರು ಮಹಾಕಾಳಿಗೆ ಕಳಶಬೆಳಗಿದ ಬಳಿಕ ಕೊಡೆಗೆ ಪೂಜೆಯನ್ನು ಸಲ್ಲಿಸಿ,ಐದುಸುತ್ತು ದೇವಿಯಗುಡಿಯ ಸುತ್ತು ಪ್ರದಕ್ಷಿಣೆಗೈದು ಮಹಾಕಾಳಿದೇವಸ್ಥಾನಕ್ಕೆ ಹೊಸಕೊಡೆಯನ್ನು ಸಮರ್ಪಿಸಲಾಯಿತು.ಕಳೆದ ವರ್ಷ ಶುಭಕೃತ್ ಸಂವತ್ಸರ ಶಕೆ 1944 ರ ಮಾರ್ಗಶಿರ ಶುದ್ಧ ದಶಮಿಯ ದಿನವಾಗಿದ್ದ 02.12.2022 ರ ಶುಕ್ರವಾರದಂದು ಬೆಳಿಗ್ಗೆ ಮಹಾಶೈವ ಧರ್ಮಪೀಠದ ಬನ್ನಿಮಹಾಂಕಾಳಿಯನೆಲೆಯಾಗಿದ್ದ ಶಮೀವೃಕ್ಷದಡಿ ಸಣ್ಣ ದೇವಸ್ಥಾನವನ್ನು ಕಟ್ಟಿ 11 ಅಂಗುಲಗಳ ಮಹಾಕಾಳಿಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.’ಮೂರ್ತಿಚಿಕ್ಕದಿದ್ದರೂ ಕೀರ್ತಿದೊಡ್ಡದು’ ಎನ್ನುವ ಗಾದೆಯಂತೆ ಮಹಾಶೈವ ಧರ್ಮಪೀಠದ ಮಹಾಕಾಳಿ ದೇವಿಯು ತಾನುವಿಶ್ವನಿಯಾಮಕಿಯಾದ ಮಹಾಶಕ್ತಿ ಎನ್ನುವ ದುಷ್ಟಶಿಕ್ಷಕಿ ಶಿಷ್ಟರಕ್ಷಕಿಯ ತನ್ನ ಲೋಕೋದ್ಧಾರದ ಲೀಲೆಗಳನ್ನು ತೋರುತ್ತ,ಕ್ಷೇತ್ರರಕ್ಷಕಿಯಾಗಿ,ನಿತ್ಯಲೀಲೆಯ ಜಾಗೃತಶಕ್ತಿಯ ಲೀಲೆ ಮೆರೆಯುತ್ತಿದ್ದಾಳೆ.’ಅಣುಮಹತ್’ ತತ್ತ್ವಾರ್ಥ ಪ್ರಕಟಿಸುತ್ತ ಹನ್ನೊಂದು ಅಂಗುಲಗಳ ಮೂರ್ತಿಯಲ್ಲಿ ಪ್ರಕಟಗೊಂಡು ನೆಲಮುಗಿಲಗಳನ್ನು ತಬ್ಬಿ ಆವರಿಸುವ ವ್ಯೋಮಶಕ್ತಿ,ವಿರಾಟ್ ಶಕ್ತಿಯಾಗಿ ಪ್ರಕಟಗೊಳ್ಳುತ್ತ ಭಕ್ತರಿಂದ ಪೂಜೆ,ಸೇವೆಗಳನ್ನು ಸ್ವೀಕರಿಸುತ್ತಿದ್ದಾಳೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲಕಾರ್ಯಕರ್ತ ಗೋಪಾಲ ಮಸೀದಪುರ,ಮಹಾಶೈವ ಧರ್ಮಪೀಠದ ದಾಸೋಹಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಪ್ರಭು ಕರಿಗಾರ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಯಲ್ಲಪ್ಪ ಕರಿಗಾರ,ಬಸವರಾಜ ಹರವಿ,ಪಂಚಯ್ಯ ಕರಿಗಾರ,ಹನುಮೇಶ,ಶಿವಕುಮಾರ ಕರಿಗಾರ,ಲಿಂಗಪ್ಪ, ರಂಗನಾಥ ಮಸೀದಪುರ,ವೆಂಕಟೇಶ ಮಸೀದಪುರ, ಬೆಟ್ಟಪ್ಪ ಗದಾರ,ಅಕ್ರಂಪಾಶಾ,ಶಿವಕುಮಾರ ವಸ್ತಾರ ಮತ್ತು ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಹಾಗೂ ಮಹಾಶೈವ ಧರ್ಮಪೀಠದ ಭಕ್ತರುಗಳು ಪಾಲ್ಗೊಂಡಿದ್ದರು.

About The Author