ಯೋಗಚಿಂತನೆ : ಯೋಗ ಮತ್ತು ಅಷ್ಟಾಂಗಯೋಗ : ಮುಕ್ಕಣ್ಣ ಕರಿಗಾರ

ಯೋಗಚಿಂತನೆ : ಯೋಗ ಮತ್ತು ಅಷ್ಟಾಂಗಯೋಗ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ಮೂಲಕಾರ್ಯಕರ್ತರಲ್ಲೊಬ್ಬರಾಗಿರುವ ನನ್ನ ಹಳೆಯ ವಿದ್ಯಾರ್ಥಿಶಿಷ್ಯ ಮಂಜುನಾಥ ಕರಿಗಾರ ಅವರಿಗೆ ‘ ಅಷ್ಟಾಂಗಯೋಗ’ ದ ಬಗ್ಗೆ ತಿಳಿದುಕೊಳ್ಳುವ ಕುತೂಹಲ.ಗಬ್ಬೂರಿನಲ್ಲಿ ಶ್ರದ್ಧಾನಿಷ್ಠೆಗಳಿಂದ ದೇವಿ ಉಪಾಸನೆ ಮಾಡುತ್ತ ಶ್ರೀದೇವಿಪುರಾಣ ಪಾರಾಯಣ ವ್ರತಿಗಳಾಗಿರುವ ಮಂಜುನಾಥ ಕರಿಗಾರ ಕನ್ನಡ ಎಂ ಎ ಪದವಿಧರರಾಗಿದ್ದು ಪ್ರಸ್ತುತ ಗಬ್ಬೂರ ಗ್ರಾಮಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ವಿದ್ಯಾರ್ಹತೆಗೆ ತಕ್ಕ ಹುದ್ದೆಯಲ್ಲವಾದರೂ ಜೀವನೋಪಾಯಕ್ಕಾಗಿ ಒಂದು ಹುದ್ದೆ ಎಂದು ಅದರಲ್ಲಿಯೇ ಆನಂದವನ್ನು ಕಾಣುತ್ತಿರುವ ಮಂಜುನಾಥ ಕರಿಗಾರ ಉತ್ತಮಯೋಗಸಾಧಕರೊಬ್ಬರನ್ನು ಗುರುವಾಗಿ ಪಡೆದು ಆಧ್ಯಾತ್ಮಿಕ ಸಾಧನೆ ಮಾಡುತ್ತಿದ್ದಾರೆ.ಆಧ್ಯಾತ್ಮಿಕ ಸಾಧಕರಿಗೆ ಸಹಜವಾದ ಆಧ್ಯಾತ್ಮಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಕೌತುಕದಿಂದ ಅಷ್ಟಾಂಗಯೋಗದ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

ಪುಣ್ಯಭೂಮಿಯಾದ ಭಾರತವು ತನ್ನ ಸಂಸ್ಕೃತಿ,ಯೋಗ,ಧರ್ಮ ಮತ್ತು ದರ್ಶನಗಳಿಂದ ವಿಶ್ವದ ಅತಿವಿಶಿಷ್ಟ ದೇಶವಾಗಿದೆ.ಅಧ್ಯಾತ್ಮ ಮತ್ತು ಯೋಗಗಳು ಭಾರತದ ಅನನ್ಯ ಕೊಡುಗೆಗಳು ವಿಶ್ವಕ್ಕೆ.ವಿಶ್ವದ ಇತರ ದೇಶಗಳಲ್ಲಿ ಧರ್ಮಗಳು ಇವೆ,ಧಾರ್ಮಿಕ ಭಾವನೆಗಳಿವೆ ಆದರೆ ಅಧ್ಯಾತ್ಮ ಎನ್ನುವುದು ಭಾರತಕ್ಕೆ ಮೀಸಲಾದ,ಭಾರತದ ವೈಶಿಷ್ಟ್ಯ.ಧರ್ಮವೇ ಬೇರೆ,ಅಧ್ಯಾತ್ಮವೇ ಬೇರೆ.ಧಾರ್ಮಿಕ ಗ್ರಂಥಗಳ ಪಠಣೆಯಿಂದ ಯಾರಾದರೂ ಧಾರ್ಮಿಕ ವ್ಯಕ್ತಿಗಳಾಗಬಹುದು,ಆದರೆ ಆಧ್ಯಾತ್ಮಿಕವ್ಯಕ್ತಿಗಳಾಗಲು ಸಾಧ್ಯವಿಲ್ಲ.ಧರ್ಮವು ಜೇನುಗೂಡು ಆದರೆ ಅಧ್ಯಾತ್ಮವು ಜೇನು.ಧರ್ಮವು ಕಬ್ಬು ಆದರೆ ಅಧ್ಯಾತ್ಮವು ಕಬ್ಬಿನೊಳಗಿನ ರಸ.ಧರ್ಮವು ತೆಂಗಿನಕಾಯಿ ಆದರೆ ಅಧ್ಯಾತ್ಮವು ಕೊಬ್ಬರಿ.ಈ ಉದಾಹರಣೆಗಳಿಂದ ಧರ್ಮ ಮತ್ತು ಅಧ್ಯಾತ್ಮಗಳ ನಡುವಿನ ಅಂತರವೇನೆಂದು ತಿಳಿದುಕೊಳ್ಳಬಹುದು.ಧಾರ್ಮಿಕ ಗ್ರಂಥಗಳ ಪಠಣೆ,ಪಾರಾಯಣದಿಂದ ಒಬ್ಬ ವ್ಯಕ್ತಿ ಸಂಸ್ಕಾರಿತ ಮನುಷ್ಯನಾಗಬಹುದು ಆದರೆ ದೇವರನ್ನು ಕಾಣಲು ಸಾಧ್ಯವಿಲ್ಲ.ಪರಮಾತ್ಮನ ದರ್ಶನ ಮತ್ತು ಸಾಕ್ಷಾತ್ಕಾರಗಳು ಅಧ್ಯಾತ್ಮಸಾಧನೆಯಿಂದ ಮಾತ್ರ ಸಾಧ್ಯ.

ಅಧ್ಯಾತ್ಮಿಕ ಸಾಧನೆಗೆ ಪೂರಕವಾದ ಹಲವಾರು ಅಂಶಗಳಲ್ಲಿ ಯೋಗವೂ ಒಂದು.ಸಂಸ್ಕೃತದ ‘ಯಜ್’ ಧಾತುವಿನಿಂದ ನಿಷ್ಪನ್ನಗೊಳ್ಳುವ ಯೋಗ ಶಬ್ದದ ಅರ್ಥ ‘ ಒಂದುಗೂಡುವುದು’. ಆತ್ಮನು ಪರಮಾತ್ಮನಲ್ಲಿ ಸಮಾವೇಶಗೊಳ್ಳುವುದು,ಜೀವನು ಪರಮಾತ್ಮನಲ್ಲಿ ಒಂದಾಗುವುದೇ ಯೋಗ.ಆತ್ಮ ಪರಮಾತ್ಮರ ಸಂಯೋಗಕ್ಕೆ ಸಾಧನವಾದುದೇ ಯೋಗ.ಯೋಗವು ಪರಶಿವನಿಂದಲೇ ಹುಟ್ಟಿದೆ.ಶಿವನು ನಟರಾಜ ಲೀಲೆಯನ್ನು ನಟಿಸಿ,ಕುಣಿಯುತ್ತಿದ್ದಾಗ ಅಕ್ಷರಗಳು,ಕಲೆಗಳು,ಯೋಗವಾದಿ ಆತ್ಮವಿಷಯಗಳು ಹುಟ್ಟಿದವು.ಶಿವನ ಗುರುರೂಪವಾದ ದಕ್ಷಿಣಾಮೂರ್ತಿಯಿಂದ ಸನತ್ಕುಮಾರನು ಯೋಗವಿದ್ಯೆಯನ್ನು ಗ್ರಹಿಸಿ ಅದನ್ನು ಜಗತ್ತಿಗೆ ಬೋಧಿಸಿದನು.ಆದರೆ ಸನತ್ಕುಮಾರನು ಬೋಧಿಸಿದ ಯೋಗವಿದ್ಯೆಯು ಇಂದು ನಮಗೆ ದೊರೆತಿಲ್ಲ.ಪತಂಜಲ ಮಹರ್ಷಿಗಳು ಬರೆದ ಯೋಗವಿದ್ಯೆಯು ಪ್ರಚಲಿತವಾಗಿದ್ದು ಅದನ್ನು ‘ ಪಾತಂಜಲ ಅಷ್ಟಾಂಗಯೋಗ’ ಎನ್ನಲಾಗುತ್ತದೆ.ಪತಂಜಲಿ ಮಹರ್ಷಿಗಳು ಯೋಗಸಾಧನೆಯ ಎಂಟು ಸೋಪಾನ ಇಲ್ಲವೆ ಎಂಟು ಮೆಟ್ಟಿಲುಗಳನ್ನು ‘ಅಷ್ಟಾಂಗಯೋಗ’ ಎಂದು ಕರೆದಿದ್ದಾರೆ.

ಪತಂಜಲಿ ಮಹರ್ಷಿಗಳು ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿದ್ದ ದಾರ್ಶನಿಕರು,ಮಹಾಯೋಗಿಗಳು.ಅವರು ಯೋಗಶಾಸ್ತ್ರವನ್ನಲ್ಲದೆ ವ್ಯಾಕರಣ,ಆಯುರ್ವೇದದ ಬಗೆಗೆ ಕೃತಿಗಳನ್ನು ಬರೆದಿದ್ದಾರೆ ಎನ್ನಲಾಗುತ್ತಿದ್ದು ಪ್ರಸ್ತುತ ಯೋಗಸೂತ್ರಗಳಲ್ಲದ ಅವರ ಇತರ ಕೃತಿಗಳು ಲಭ್ಯವಿಲ್ಲ .ಗೋಣಿರಾಳು ಪತಂಜಲಿ ಋಷಿಯ ತಾಯಿಯಾಗಿದ್ದು ಪತಂಜಲಿಯವರನ್ನು ಗೋಣಿಕಾಪುತ್ರನೆಂದೂ ಕರೆಯುತ್ತಾರೆ.ತನ್ನ ತಾಯಿಯ ಅಂಜಲಿಯಿಂದ ಹುಟ್ಟಿದವರಾದ್ದರಿಂದ ಇವರಿಗೆ ಪತಂಜಲಿ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.ಇದು ವಿಚಾರಾರ್ಹ ಸಂಗತಿಯಾಗಿದೆ.ಸತ್ಯಕಾಮ ಜಾಬಾಲಿಯಂತೆ ಮತ್ತಾವುದೋ ವೃತ್ತಾಂತವನ್ನು ಸಾರುತ್ತಿರಬಹುದು ಪತಂಜಲಿಯವರ ಜನ್ಮಕಥೆ.ತಾಯಿಯ ಹಸ್ತದಿಂದ ಹುಟ್ಟಿದವರು ಎನ್ನುವುದರಿಂದ ಬಹುಶಃ ಅವರ ತಾಯಿಯೇ ಪತಂಜಲ ಋಷಿಗಳ ಗುರುವೂ ಆಗಿರುವ ಸಾಧ್ಯತೆ ಇದೆ.ಅಧ್ಯಾತ್ಮಸಾಧಕಶಿಷ್ಯರುಗಳನ್ನು ಅವರ ಗುರುಗಳ ಕರಕಮಲಸಂಜಾತರೆನ್ನುತ್ತೇವಲ್ಲ ಹಾಗೆಯೇ ಪತಂಜಲಿಯವರು ಕೂಡ ಅವರ ತಾಯಿಯ ಕರಕಮಲಸಂಜಾತರಾಗಿರಬೇಕು.ಹಿಂದೆ ಸ್ತ್ರೀಯರು ಕೂಡ ಸಾಧನೆಯ ಬಲದಿಂದ ಜ್ಞಾನಿಗಳು,ಯೋಗಿಗಳು ಆಗಿದ್ದು ಅವರನ್ನು ಋಷಿಕೆಯರು ಎಂದು ಕರೆಯಲಾಗುತ್ತದೆ.

ಯೋಗವೆಂದರೇನು ?

‘ ಯೋಗ’ ಶಬ್ದವನ್ನು ‘ ಯುಜಿರ್ ಯೋಗೇ'( ಸೇರಿಸುವುದು) ಮತ್ತು ‘ ಯುಜಸಮಾಧೌ'( ಸಮಾಧಿ,ಏಕಾಗ್ರತೆಯ ಪರಾಕಾಷ್ಠೆ) ಎನ್ನುವ ಎರಡು ಧಾತುಗಳಿಂದ ನಿಷ್ಪನ್ನ ಮಾಡಲಾಗಿದೆ.ವೇದದ ಅತ್ಯಂತ ಪುರಾತನ ವ್ಯಾಖ್ಯಾನವು ಋಗ್ವೇದದಲ್ಲಿ ಕಾಣಬಹುದು.’ ಯುಂಜತೇ ಮನ ಉತ ಯುಂಜತೇ ಧಿಯೋ ವಿಪ್ರಾಃ’ ಎಂದು ಯೋಗವನ್ನು ವ್ಯಾಖ್ಯಾನಿಸಿದೆ ಋಗ್ವೇದ.’ ಯಾವ ವಿಪ್ರರು ತಮ್ಮ ಮನಸ್ಸನ್ನೂ ಇಂದ್ರಿಯಗಳನ್ನೂ ಪರಮಾತ್ಮನಲ್ಲಿ ಸೇರಿಸುತ್ತಾರೆಯೋ ಅವರು ಯೋಗಿಗಳು,ಯೋಗಸಾಧಕರು ಎನ್ನುವ ಅರ್ಥದಲ್ಲಿ ಋಗ್ವೇದವು ಯೋಗವನ್ನು ವ್ಯಾಖ್ಯಾನಿಸಿದೆ.ಹಲವು ಉಪನಿಷತ್ತುಗಳು ಯೋಗಾರ್ಥ ವಿವರಣೆ ನೀಡಿವೆ.ಕಠೋಪನಿಷತ್ತು

” ಯದಾ ಪಂಚಾವತಿಷ್ಠಂತೇ ಜ್ಞಾನಾನಿ ಮನಸಾ ಸಹ /
ಬುದ್ಧಿಶ್ಚ ನ ವಿಚೇಷ್ಟತೇ ತಾಮಾಹುಃ ಪರಮಾಂ ಗತಿಮ್ //
ತಾಂ ಯೋಗಮಿತಿ ಮನ್ಯಂತೇ ಸ್ಥಿರಾಮಿಂದ್ರಿಯಧಾರಣಾಮ್ /
ಎನ್ನುತ್ತದೆ.ಅಂದರೆ ‘ ಯಾವಾಗ ಪಂಚಜ್ಞಾನೇಂದ್ರಿಯಗಳು ಮನಸ್ಸಿನೊಂದಿಗೆ ಶಾಂತವಾಗುವವೋ,ಬುದ್ಧಿಯು ಅಲುಗಾಡುವುದಿಲ್ಲವೋ ಅದನ್ನು ಪರಮಗತಿ ಎಂದು ಹೇಳುತ್ತಾರೆ.ಸ್ಥಿರವಾದ ಇಂದ್ರಿಯ ಧಾರಣೆಯನ್ನೇ ಯೋಗವೆಂದು ಭಾವಿಸುತ್ತಾರೆ’.ಕಠೋಪನಿಷತ್ತಿನ ಮತ್ತೊಂದೆಡೆ ” ಅಧ್ಯಾತ್ಮ– ಯೋಗಾಧಿಗಮೇನ ದೇವಂ ಮತ್ವಾ ಧೀರೋ ಹರ್ಷಶೋಕೌ ಜಹಾತಿ’ ಎಂದಿರುವೆಡೆಯೂ ಯೋಗವು ಏಕಾಗ್ರತೆ,ಧ್ಯಾನ,ಸಮಾಧಿ ಎಂಬರ್ಥದಲ್ಲಿಯೇ ಪ್ರಯೋಗಿಸಲ್ಪಟ್ಟಿದೆ.ಶ್ವೇತಾಶ್ವತರ ಉಪನಿಷತ್ತಿನಲ್ಲಿ ‘ಧ್ಯಾನಯೋಗ’ ಎಂಬ ಪದದ ಬಳಕೆ ಇರುವುದಲ್ಲದೆ ಆಸನ- ಪ್ರಾಣಾಯಾಮಾದಿಗಳು ಮತ್ತು ಯೋಗಸಿದ್ಧಿಗಳ ಉಲ್ಲೇಖವೂ ಇದೆ.ಮುಂಡಕೋಪನಿಷತ್ತು ” ಧನುರ್ಗೃಹೀತೌಪನಿಷದಂ ಮಹಾಸ್ತ್ರಂ” ಮತ್ತು ” ಪ್ರಣವೋ ಧನುಃ ಶರೋಹ್ಯಾತ್ಮಾ” ಎನ್ನುವ ಮಂತ್ರಗಳಲ್ಲಿ ಓಂಕಾರವನ್ನು ಧನುಸ್ಸಿಗೂ ಶುದ್ಧಮನಸ್ಸನ್ನು ಬಾಣಕ್ಕೂ ಬ್ರಹ್ಮವನ್ನೂ ಲಕ್ಷ್ಯಕ್ಕೂ ಹೋಲಿಸಲಾಗಿದ್ದು ‘ಓಂಕಾರಸಹಿತವಾದ ಧ್ಯಾನದಿಂದ ಬ್ರಹ್ಮವಸ್ತುವಿನಲ್ಲಿ ಒಂದಾಗುವುದೇ ಯೋಗ’ ವೆಂದು ಅರ್ಥೈಸಲಾಗಿದೆ.ಮುಂಡಕೋಪನಿಷತ್ತಿನ ಅಭಿಪ್ರಾಯದಂತೆ ಬ್ರಹ್ಮವನ್ನು ಸೇರುವುದೇ ಯೋಗ.ಮಂಡಲಬ್ರಾಹ್ಮಣೋಪನಿಷತ್,ಯೋಗಾಚೂಡಾಮಣ್ಯುಪನಿಷತ್ ಮೊದಲಾದ ೨೦ ಉಪನಿಷತ್ತುಗಳಲ್ಲಿ ಯೋಗದ ಕುರಿತ ಸವಿಸ್ತಾರ ವಿವರಣೆ ಇದೆ.

ಅಷ್ಟಾಂಗಯೋಗ

ಪತಂಜಲಿ ಮಹರ್ಷಿಗಳು ಯೋಗದ ಎಂಟು ಸೋಪಾನಗಳನ್ನು ತಮ್ಮ ಯೋಗದರ್ಶನದಲ್ಲಿ ವಿವರಿಸಿದ್ದಾರೆ.ಪತಂಜಲಿಮಹರ್ಷಿಗಳ ‘ಯೋಗಸೂತ್ರಗಳು’ ಕೃತಿಯು 195 ಯೋಗಸೂತ್ರಗಳನ್ನುಳ್ಳ ಕೃತಿಯಾಗಿದ್ದು ಅದು ಸಮಾಧಿಪಾದ ( 51 ಸೂತ್ರಗಳು) ಸಾಧನ ಪಾದ ( 55 ಸೂತ್ರಗಳು)
ವಿಭೂತಿ ಪಾದ ( ( 55 ಸೂತ್ರಗಳು)
ಕೈವಲ್ಯ ಪಾದ ( 34 ಸೂತ್ರಗಳು)ಎನ್ನುವ ನಾಲ್ಕು ಪಾದಗಳಲ್ಲಿ ಹರಡಿದ ಸೂತ್ರಗ್ರಂಥವಾಗಿದೆ.’ ಯೋಗಶ್ಚಿತ್ತವೃತ್ತಿ ನಿರೋಧ’ ಚಿತ್ತವೃತ್ತಿಯ ನಿರೋಧವೇ ಯೋಗವೆನ್ನುವ ಪತಂಜಲಿ ಮಹರ್ಷಿಗಳು ಆ ಯೋಗಕ್ಕೆ ಸಾಧನಭೂಮಿಕೆಯಾಗಿರುವ ಎಂಟು ಅಂಗಗಳನ್ನು ಹೇಳುತ್ತಾರೆ.ಅವೇ ಯೋಗದ ಅಷ್ಟಾಂಗಗಳು.ಅವು -ಯಮ,ನಿಯಮ,ಆಸನ,ಪ್ರಾಣಾಯಾಮ,ಪ್ರತ್ಯಾಹಾರ,ಧಾರಣ,ಧ್ಯಾನ ಮತ್ತು ಸಮಾಧಿ.

೧.ಯಮ

ನೈತಿಕನಿಯಮಗಳ ಕಟ್ಟುಪಾಡೇ ಯಮ’. ಅಧ್ಯಾತ್ಮ ಪಥದಲ್ಲಿ ನಡೆಯಬೇಕಾದವರು,ಯೋಗಮಾರ್ಗದಲ್ಲಿ ಕ್ರಮಿಸಬೇಕಾದವರು ಪಾಲಿಸಲೇಬೇಕಾದ ನೀತಿನಿಯಮಗಳೇ ‘ ಯಮ’ ಎನ್ನಿಸಿಕೊಳ್ಳುತ್ತವೆ.ಈ ನಿಯಮಗಳು ಸ್ಥಿರನಿಯಮಗಳು ಅಂದರೆ ಎಂದೆಂದೂ ಬದಲಾಗದ ಶಾಶ್ವತ ನಿಯಮಗಳು.ಅಹಿಂಸೆ,ಸತ್ಯ,ಆಸ್ತೇಯ,ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳೇ ‘ಯಮ’ ದಲ್ಲಿ ಬರುವ ಮಹಾವ್ರತಗಳು.
ಅಹಿಂಸೆ — ಯೋಗಸಾಧಕನು ಯಾವ ಜೀವಿಗಳನ್ನೂ ಜೀವರುಗಳನ್ನೂ ಹಿಂಸಿಸತಕ್ಕದ್ದಲ್ಲ.ದೈಹಿಕ ಹಿಂಸೆ ಮಾತ್ರವಲ್ಲ ಮಾನಸಿಕ ಹಿಂಸೆಯೂ ಕೂಡದು ಎನ್ನುತ್ತದೆ ಯೋಗನಿಯಮ.ಒಬ್ಬರನ್ನು ಹೊಡೆಯುವುದು,ಬಡಿಯುವುದು ಮಾತ್ರ ಹಿಂಸೆಯಲ್ಲ ,ಅವರ ಮನಸ್ಸನ್ನು ನೋಯಿಸುವಂತಹ ಮಾತುಗಳನ್ನಾಡುವುದು ಕೂಡ ಹಿಂಸೆಯೇ ಆಗುತ್ತದೆ.ಆದ್ದರಿಂದ ಯೋಗಸಾಧಕನು ಬಹಳ ಎಚ್ಚರಿಕೆಯಿಂದ ಇದ್ದು ಯಾರಿಗೂ ಯಾವ ವಿಧದಲ್ಲಿಯೂ ನೋವುಂಟುಮಾಡದಂತೆ ಜಾಗರೂಕನಾಗಿರಬೇಕು.
ಸತ್ಯ — ಯೋಗ ಸಾಧಕರು ಸುಳ್ಳನ್ನು ಹೇಳಬಾರದು,ಸತ್ಯವನ್ನೇ ನುಡಿಯಬೇಕು; ಸತ್ಯವ್ರತಿಗಳಾಗಿರಬೇಕು.ಶಿವನು ಸತ್ಯಸ್ವರೂಪನಾಗಿರುವುದರಿಂದ ಪರಮಾತ್ಮನ ಅನುಗ್ರಹ ಪಡೆಯುವವರು ಸತ್ಯನಿಷ್ಠರಾಗಿರಬೇಕು.
ಆಸ್ತೇಯ — ಕದಿಯದೆ ಇರುವುದು ಅಂದರೆ ಕಳ್ಳತನ ಮಾಡದೆ ಇರುವುದೇ ಆಸ್ತೇಯವು.ಪರರ ಒಡವೆ ವಸ್ತುಗಳನ್ನು,ನಗ- ನಾಣ್ಯವಾದಿಗಳನ್ನು ಕದಿಯದಿರುವುದೇ ಆಸ್ತೇಯ.ವಸ್ತುಗಳನ್ನು ಕದಿಯುವುದು ಮಾತ್ರವಲ್ಲ ತನಗೆ ಸೇರಿರದ ಪರರ ವಸ್ತುಗಳನ್ನು,ವ್ಯಕ್ತಿಗಳನ್ನು ಮನಸ್ಸಿನಲ್ಲಿ ಬಯಸುವುದು ಕೂಡ ಕಳ್ಳತನವೆ! ಪರಸ್ತ್ರೀಯರನ್ನು ಬಯಸುವುದು,ಅವರ ಸಂಗಕ್ಕೆಳಸುವುದು ಕೂಡ ಸ್ತೇಯವೆ ಅಂದರೆ ಕಳ್ಳತನವೆ!
ಬ್ರಹ್ಮಚರ್ಯ–ಇಂದ್ರಿಯನಿಗ್ರಹವೇ ಬ್ರಹ್ಮಚರ್ಯವು.ಪ್ರತ್ಯಕ್ಷ ಕ್ರಿಯೆ ಇಲ್ಲವೆ ಮಾನಸಿಕವಾಗಿಯೂ ಕೂಡ ರತಿಸ್ಪರ್ಶವಿಲ್ಲದುದೇ ಬ್ರಹ್ಮಚರ್ಯ.ಇಂದ್ರಿಯಸುಖಕ್ಕೆಳಸುವ ದೇಹ ಮನಸ್ಸುಗಳನ್ನು ಬ್ರಹ್ಮಮುಖಿಯಾಗಿಸುವುದೇ ಬ್ರಹ್ಮಚರ್ಯವು.
ಅಪರಿಗ್ರಹ — ಅಗತ್ಯಕ್ಕಿಂತ ಹೆಚ್ಚಿನ ವಸ್ತು,ಪಡಿ ಪದಾರ್ಥಗಳನ್ನು ಸಂಗ್ರಹಿಸದೆ ಇರುವುದೇ ಅಪರಿಗ್ರಹವು.ತನ್ನ ಜೀವನ ನಿರ್ವಹಣೆಗೆ ಎಷ್ಟುಬೇಕೋ ಅಷ್ಟುಮಾತ್ರ ಸಂಪತ್ತು,ಸಂಪನ್ಮೂಲಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.ಅಗತ್ಯಕ್ಕಿಂತ ಅಧಿಕವಾದ ವಸ್ತು,ಸರಕು,ಪದಾರ್ಥ,ಧನ ಕನಕಗಳ ಸಂಗ್ರಹಬುದ್ಧಿಯು ಕೂಡದು.

೨. ನಿಯಮ

ಆತ್ಮಶುದ್ಧಿಗಾಗಿ ಯೋಗಪಥಿಕನು ವಿಧಿಸಿಕೊಳ್ಳುವ ನಿರ್ಬಂಧಗಳೇ ನಿಯಮ.ಶೌಚ ( ಶುದ್ಧತೆ) ಸಂತೋಷ ( ತೃಪ್ತಿ) , ತಪಸ್ಸು ( ನಿಯಮನಿಷ್ಠೆ,ಭಗವನ್ನಿಷ್ಠೆ) ಸ್ವಾಧ್ಯಾಯ ( ಉತ್ತಮಗ್ರಂಥಗಳ ವಾಚನ) ಮತ್ತು ಈಶ್ವರ ಪ್ರಣಿಧಾನ ( ಪರಮಾತ್ಮನಲ್ಲಿ ಶರಣಾಗುವುದು) ಇವೇ ನಿಯಮಗಳು
ಶೌಚ — ಯೋಗಸಾಧಕನು ದೇಹ ಮತ್ತು ಮನಸ್ಸುಗಳೆರಡನ್ನೂ ಶುಚಿಯಾಗಿಟ್ಟುಕೊಳ್ಳಬೇಕು.ನಿತ್ಯಕರ್ಮಗಳಿಂದ ಮುಕ್ತನಾಗಿ ಸ್ನಾನಗೈವುದು ಶೌಚವಾಗಿದ್ದು ದಿನಕ್ಕೆ ಒಂದು ಬಾರಿ ಅಥವಾ ಎರಡುಬಾರಿ ದೇಹವನ್ನು ತೊಳೆದು ಶುದ್ಧೀಕರಿಸಿಕೊಳ್ಳಬೇಕು.ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಉಂಟಾಗದಂತೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಮನಸ್ಸಿನ ಶುದ್ಧಿಯನ್ನು ಸಾಧಿಸಬೇಕು.

ಸಂತೋಷ — ಸಂತೋಷ ಅಥವಾ ಸಂತೃಪ್ತಿ ಎಂದರೆ ದೊರೆತ ವಸ್ತು,ಭೋಗಸಾಮಗ್ರಿಗಳಲ್ಲಿಯೇ ಸಂತುಷ್ಟರಾಗಬೇಕು.ತನಗೆ ಏನು ದೊರೆತಿದೆಯೋ ಅದೇ ಭಾಗ್ಯವೆಂದು ಭಾವಿಸಿ ಸಂತೃಪ್ತರಾಗಬೇಕು.ದೊರೆಯದೆ ಇದ್ದ ವಸ್ತು,ಹುದ್ದೆ,ಪದವಿ,ಫಲಗಳಿಗಾಗಿ ಅಪೇಕ್ಷಿಸಬಾರದು.ತನ್ನಲ್ಲಿ ಇಲ್ಲದ ವಸ್ತುವಿಗಾಗಿ ಆಶಿಸಿದರೆ ಆ ಆಶೆಯು ಅದನ್ನು ಪಡೆಯಲೇಬೇಕೆಂಬ ಮೋಹ ಉಂಟಾಗಿ,ಆ ಮೋಹವು ವಿಭ್ರಾಂತಿಯನ್ನುಂಟುಮಾಡುವುದಲ್ಲದೆ ಆ ವಸ್ತುವು ದೊರಕದೆ ಇದ್ದರೆ ಕ್ರೋಧೋನ್ಮತ್ತರನ್ನಾಗಿಸುತ್ತದೆ.ಸಂತೋಷಗುಣಕ್ಕೆ ಎರವಾಗುವುದರಿಂದ ಅರಿಷಡ್ವರ್ಗಗಳಿಗೆ ವಶರಾಗಬೇಕಾಗುತ್ತದೆ.ಆರುವೈರಿಗಳ ವಶರಾದವರ ಚಿತ್ತವು ಸ್ವಸ್ಥವಾಗಿರುವುದಿಲ್ಲವಾದ್ದರಿಂದ ಅಸ್ವಸ್ಥಚಿತ್ತರಿಂದ ಯೋಗಸಾಧನೆಯು ಸಾಧ್ಯವಾಗುವುದಿಲ್ಲ.

ತಪಸ್ಸು — ಪರಮಾತ್ಮನಲ್ಲಿ ನೆಟ್ಟ ಮನಸ್ಸುಳ್ಳವರಾಗಿ ಅನವರತವೂ ಪರಮಾತ್ಮನ ಅನುಸಂಧಾನದಲ್ಲಿರುವುದೇ ತಪಸ್ಸು.ಪ್ರತಿನಿತ್ಯ ಒಂದು ನಿರ್ದಿಷ್ಟ ಸಮಯವನ್ನು ಯೋಗಸಾಧನೆಗೆ ನಿಗದಿಪಡಿಸಿಕೊಂಡು ಆನಿಗದಿತ ಅವಧಿಯಲ್ಲಿ ತಪ್ಪದೆ ಅಧ್ಯಾತ್ಮಿಕ ಸಾಧನೆ ಮಾಡಬೇಕು ಮತ್ತು ಅಧ್ಯಾತ್ಮಿಕ ಸಾಧನೆಯು ನಿರಂತರವಾಗಿರಬೇಕು.ಯೋಗಸಾಧನೆಯು ಒಂದೆರಡು ದಿನಗಳಲ್ಲಿ ಇಲ್ಲವೇ ಒಂದೆರಡು ತಿಂಗಳುಗಳಲ್ಲಿ ಸಿದ್ಧಿಸದು,ಅದಕ್ಕೆ ನಿರಂತರ ಅಭ್ಯಾಸ,ಸಾಧನೆ ಬೇಕು.ನಿರಂತರ ಯೋಗಾಭ್ಯಾಸವೇ ತಪಸ್ಸು.
ಸ್ವಾಧ್ಯಾಯ — ಆತ್ಮಜ್ಞಾನಕ್ಕೆ ಪೂರಕವಾಗುವ ಉತ್ತಮ ಗ್ರಂಥಗಳ ವಾಚನವೇ ಸ್ವಾಧ್ಯಾಯವು.ಮನಸ್ಸನ್ನು ಉದಾತ್ತ ವಿಚಾರಗಳತ್ತ ಪ್ರೇರೇಪಿಸುವ ,ವ್ಯಕ್ತಿತ್ವವನ್ನು ಶುಚಿಯಾಗಿಟ್ಟುಕೊಳ್ಳಲು ಸಹಾಯಕವಾಗುವ,ಆತ್ಮೋದ್ದೀಪಕ ಕೃತಿಗಳ ಅಧ್ಯಯನವೇ ಸ್ವಾಧ್ಯಾಯವು.ಯೋಗಸಾಧಕನು ಮಹಾಪುರುಷರ ಜೀವನ ಚರಿತ್ರೆಗಳನ್ನು ಓದಬೇಕು,ಯೋಗ ,ಆಧ್ಯಾತ್ಮವನ್ನು ಕುರಿತ ಕೃತಿಗಳನ್ನು ಓದಬೇಕು,ಧಾರ್ಮಿಕ ಗ್ರಂಥಗಳ ವಾಚನ ಮಾಡಬೇಕು.ರಾಮಾಯಣ,ಮಹಾಭಾರತ,ಶಿವಪುರಾಣ,ದುರ್ಗಾಸಪ್ತಶತಿ,ಭಗವದ್ಗೀತೆ ,ಅರವತ್ತುಮೂರು ಪುರಾತನರ ಕಥೆಗಳು,ಶಿವಶರಣ ಕಥೆಗಳು ಇವೆ ಮೊದಲಾದ ಧಾರ್ಮಿಕ ಗ್ರಂಥಗಳನ್ನು ಓದಬೇಕು.
ಸ್ವನಿರೀಕ್ಷಣೆಯು ಸ್ವಾಧ್ಯಾಯದ ಮಹತ್ವದ ಅಂಶವಾಗಿದ್ದು ತನ್ನ ಸಾಧನಾ ಪಥದ ನಡೆಯ ಬಗ್ಗೆ ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕು.ಸರಿ ಇದ್ದುದನ್ನು ಮುಂದುವರೆಸಬೇಕು.ತಪ್ಪು ಎಂದು ಕಂಡುದುದನ್ನು ಬಿಡಬೇಕು.ಆತ್ಮಾವಲೋಕನ ಇಲ್ಲವೆ ಅಂತರ್ನಿರೀಕ್ಷಣೆಯೂ ಸ್ವಾಧ್ಯಾಯವೆನ್ನಿಸಿಕೊಳ್ಳುವುದು.
ಈಶ್ವರ ಪ್ರಣಿಧಾನ — ಪರಮಾತ್ಮನಲ್ಲಿ ಅನನ್ಯನಿಷ್ಠೆಯನ್ನಿಡುವುದೇ ಈಶ್ವರ ಪ್ರಣಿಧಾನವು.ಶಿವನಲ್ಲಿ ಶರಣಾಗುವುದೇ ಈಶ್ವರ ಪ್ರಣಿಧಾನವು.ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳೆಲ್ಲವೂ ಪರಮಾತ್ಮನ ಪ್ರೇರಣೆ ಎಂದೂ ಪರಮಾತ್ಮನ ಸರ್ವಜ್ಞತ್ವ,ಸರ್ವಶಕ್ತಿತ್ವ ಮತ್ತು ಸರ್ವಂತರ್ಯಾಮಿ ತತ್ತ್ವದಲ್ಲಿ ನಂಬಿಕೆಯನ್ನಿಡಬೇಕು.ಯೋಗಸಾಧನೆಯಲ್ಲಿ ತಾನು ಬಾರಿಬಾರಿಗೂ ವಿಫಲನಾಗುತ್ತಿರಬಹುದು.ಆದರೂ ನನ್ನ ದೋಷ,ಕುಂದು ಕೊರತೆಗಳನ್ನೆಲ್ಲ ಮನ್ನಿಸಿ ಪೊರೆದು,ಉದ್ಧರಿಸು ಪ್ರಭುವೇ ಎಂದು ಪರಮಾತ್ಮನನ್ನು ಪ್ರಾರ್ಥಿಸಬೇಕು.ಯಾರು ಪರಮಾತ್ಮನೆದುರು ತಮ್ಮ ದೋಷದೌರ್ಬಲ್ಯಗಳನ್ನು ನಿವೇದಿಸಿಕೊಂಡು ಶರಣಾಗುತ್ತಾರೋ ಅಂಥಹವರು ಬೇಗನೆ ಪರಮಾತ್ಮನ ಅನುಗ್ರಹವನ್ನು ಪಡೆಯುತ್ತಾರೆ.

೩ ಆಸನ — ಪರಮಾತ್ಮನ ಒಲುಮೆಗಾಗಿ ಚಿತ್ತವನ್ನು ನಿಗ್ರಹಿಸಿಕೊಂಡು ತನಗನುಕೂಲವಾದ ಭಂಗಿಯಲ್ಲಿ ಕುಳಿತುಕೊಳ್ಳುವುದೇ ಆಸನವು.ಯೋಗಪದ್ಧತಿಯಂತೆ 84 ಆಸನಗಳಿವೆ.ಆದರೆ ಅವೆಲ್ಲವೂ ಯೋಗಸಾಧನೆಗೆ ಪೂರಕವಾದವುಗಳಲ್ಲ.ಬಹುತೇಕ ಆಸನಗಳು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುವ ಸಾಧನಗಳು.ಪದ್ಮಾಸನ,ಸಿದ್ಧಾಸನ ಮತ್ತು ವಜ್ರಾಸನಗಳು ಯೋಗಸಾಧನೆಗೆ ಪೂರಕ ಆಸನಗಳಾಗಿದ್ದು ಅವುಗಳಲ್ಲಿ ಪದ್ಮಾಸನವು ಸರ್ವಶ್ರೇಷ್ಠ ಆಸನವಾಗಿದೆ.ಬ್ರಹ್ಮಚರ್ಯೆ ಪಾಲನೆಗೆ ನೆರವಾಗುತ್ತದೆ ಸಿದ್ಧಾಸನ.ಪದ್ಮಾಸನ,ಸಿದ್ಧಾಸನಗಳನ್ನು ಹಾಕಲಾಗದವರು ತಮಗೆ ಅನುಕೂಲವಾಗುವ ಸುಖಾಸನದಲ್ಲಿ ಕುಳಿತುಕೊಂಡು ಧ್ಯಾನಿಸಬಹುದು.
ಆಸನವು ಯೋಗದ ಅಷ್ಟಾಂಗಗಳಲ್ಲಿ ಒಂದು ಎನ್ನುವುದು ನಿಜವಾದರೂ ಅದೇ ಮಹತ್ವದ್ದಲ್ಲ,ಪ್ರಮಾಣವಲ್ಲ.ಕೆಲವರು ಯೋಗಾಸನಪ್ರವೀಣರುಗಳನ್ನೇ ಯೋಗಗುರುಗಳು ಎಂದು ಭಾವಿಸಿದ್ದಾರೆ.ಅದು ತಪ್ಪು.ಯೋಗಾಸನಗಳನ್ನು ಬಲ್ಲಿದವರು ಯೋಗಾಸನನಿಪುಣರೇ ಹೊರತು ಯೋಗಿಗಳಲ್ಲ.ಪರಮಾತ್ಮನ ಒಲುಮೆಗೆ ಆಸನವು ಅನಿವಾರ್ಯವಾದುದಲ್ಲ ಎಂದು ತಿಳಿದುಕೊಂಡು ತಮ್ಮ ದೇಹಕ್ಕೆ ಸುಲಭವೆನ್ನುವ ಯಾವುದಾದರೂ ಆಸನದ ಮೂಲಕ ಯೋಗಸಾಧನೆ ಮಾಡಬಹುದು,ಪರಮಾತ್ಮನ ಅನುಗ್ರಹ ಪಡೆಯಬಹುದು.

೪ ಪ್ರಾಣಾಯಾಮ

ಉಸಿರಾಟದ ಕ್ರಿಯೆಯ ನಿಯಂತ್ರಣವೇ ಪ್ರಾಣಾಯಾಮ.ಮನುಷ್ಯರೆಲ್ಲರೂ ಪ್ರತಿನಿತ್ಯವೂ ಉಸಿರಾಡುತ್ತಾರೆ.ಶ್ವಾಸ ಅಥವಾ ಉಸಿರು ಇರುವವರೆಗೆ ಮನುಷ್ಯ ಬದುಕಿರುತ್ತಾನೆ.ಶ್ವಾಸ ನಿಂತೊಡನೆ ಅಥವಾ ಉಸಿರಾಟ ಸ್ತಬ್ಧವಾದೊಡನೆ ಮನುಷ್ಯ ಮೃತನಾಗುತ್ತಾನೆ.ಆರೋಗ್ಯವಂತರು ಒಂದು ನಿಮಿಷಕ್ಕೆ ೧೫ ಬಾರಿ ಉಸಿರಾಡುತ್ತಾರೆ.ಇದಕ್ಕನುಗುಣವಾಗಿ ಒಂದು ದಿನಕ್ಕೆ ೨೧೬೦೦ ಬಾರಿ ಶ್ವಾಸೋಚ್ಛಾಸಕ್ರಿಯೆ ನಡೆಯುತ್ತದೆ.

ಸಾಮಾನ್ಯ ಉಸಿರಾಟದ ಕ್ರಿಯೆಯನ್ನು ಸುಧಾರಿಸಿ ಅದರಗತಿಯನ್ನು ನಿಯಂತ್ರಿಸುವುದೇ ‘ ಪ್ರಾಣಾಯಾಮವು’.ಪ್ರಾಣಾಯಾಮದಲ್ಲಿ ಪೂರಕ,ರೇಚಕ ಮತ್ತು ಕುಂಭಕ ಎನ್ನುವ ಮೂರು ಕ್ರಿಯೆಗಳಿವೆ.ಉಸಿರನ್ನು ಒಳಗೆ ಎಳೆದುಕೊಳ್ಳುವುದು ಪೂರಕವಾದರೆ ಉಸಿರನ್ನು ಹೊರಬಿಡುವುದು ರೇಚಕವು.ಉಸಿರನ್ನು ಮಸ್ತಕದಲ್ಲಿ ತಡೆದು ನಿಲ್ಲಿಸುವುದೇ ಕುಂಭಕವು.ಮೂಗಿನ ಬಲಹೊಳ್ಳೆಯಿಂದ ಉಸಿರನ್ನು ಎಳೆದುಕೊಂಡು ಎಡಹೊಳ್ಳೆಯಿಂದ ಅದನ್ನು ಬಿಡುವುದು ಮತ್ತು ಉಸಿರನ್ನು ಮಸ್ತಕದಲ್ಲಿ ಸ್ತಂಭಿಸುವುದು ಪ್ರಾಣಾಯಾಮಕ್ರಿಯೆಯ ಭಾಗಗಳು.ಆಮ್ಲಜನಕವನ್ನು ಪ್ರಾಣವಾಯುವನ್ನಾಗಿ ಶುದ್ಧೀಕರಿಸಿಕೊಂಡು ಅದನ್ನು ಅತಿಸೂಕ್ಷ್ಮವಾಯುವನ್ನಾಗಿ ಪರಿವರ್ತಿಸುವುದೇ ಪ್ರಾಣಾಯಾಮ.

ಪ್ರಾಣಕ್ಕೂ ಮನಸ್ಸಿಗೂ ನಿಕಟಸಂಬಂಧವಿದ್ದು ಯೋಗಿಯು ಸಾಮಾನ್ಯವಾಯುವನ್ನು ಪ್ರಾಣವಾಯುವನ್ನಾಗಿ ಪರಿವರ್ತಿಸಿಕೊಂಡು ವಾಯುಗತಿಯನ್ನು ಸ್ತಂಭಿಸಿ ದೀರ್ಘಕಾಲ ಕುಂಭಕನಿರತನಾಗುವ ಮೂಲಕ ತಾನು ಇಷ್ಟಪಟ್ಟಷ್ಟು ವರ್ಷಗಳ ಕಾಲ ಬದುಕಬಲ್ಲನು.ಪ್ರಾಣದಲ್ಲಿ ಮುಖ್ಯವಾಗಿ ಐದುವಿಧಗಳಿವೆ.ಅವು ಪ್ರಾಣ,ಅಪಾನ,ಸಮಾನ,ಉದಾನ,ವ್ಯಾನ.ಇವುಗಳಲ್ಲದೆ ನಾಗ,ಕೂರ್ಮ,ಕೃಕರ,ದೇವದತ್ತ ಮತ್ತು ಧನಂಜಯ ಎನ್ನುವ ಐದು ಉಪಪ್ರಾಣಗಳಿವೆ.

೫. ಪ್ರತ್ಯಾಹಾರ

ಮನಸ್ಸಿನ ನಿಗ್ರಹವೇ ಪ್ರತ್ಯಾಹಾರವು.ವಿಷಯಾಸಕ್ತ ಮನಸ್ಸನ್ನು ಪಳಗಿಸಿ ಅದನ್ನು ಪಶುಪತಿಯ ಪಥದಲ್ಲಿ ಮುನ್ನಡೆಸುವ ಯೋಗಕ್ರಿಯೆಯೇ ಪ್ರತ್ಯಾಹಾರವು.ಮನಸ್ಸಿನಿಂದಾಗಿಯೇ ನಾವು ಮನುಷ್ಯರಾಗಿದ್ದೇವೆ.ಆದರೆ ಈ ಮನಸ್ಸು ಬಹಿರ್ಮುಖವಾಗಿ,ಸದಾ ವಿಷಯಸುಖಗಳತ್ತ ತುಡಿಯುತ್ತಲೇ ಇರುತ್ತದೆ.ಬಹಿರ್ಮುಖವಾದ ಮನಸ್ಸನ್ನು ಅಂತರ್ಮುಖಿಯಾಗಿಸಿ ಅಂತರಾತ್ಮನದರ್ಶನ ಪಡೆಯುವುದು ಪ್ರತ್ಯಾಹಾರದ ಗುರಿ.

೬.ಧಾರಣ

ಧಾರಣವೆಂದರೆ ಮನೋನಿಗ್ರಹ.ಹರಿದಾಡುವ ಮನಸ್ಸನ್ನು ಏಕತ್ರಗೊಳಿಸುವುದು,ಏಕಾಗ್ರಗೊಳಿಸುವುದು ಧಾರಣ.ಹರಿದಾಡುವ ಮನಸ್ಸನ್ನು ಪ್ರತ್ಯಾಹಾರದಿಂದ ನಿಯಂತ್ರಿಸಿ ಪರಮಲಕ್ಷ್ಯದಲ್ಲಿ ಅದನ್ನು ನಿಲುಗಡೆ ಮಾಡುವುದೆ ಧಾರಣ‌.ಧಾರಣವೆಂದರೆ ಧರಿಸುವುದು ಎಂದರ್ಥವಿದ್ದು,ಏಕಾಗ್ರಚಿತ್ತದಿಂದ ತಾನು ದೇಹಿಯಲ್ಲ ಆತ್ಮನು ಎನ್ನುವ ಭಾವವನ್ನುಂಟುಮಾಡಿಕೊಳ್ಳುವುದೇ ಧಾರಣವು.

೭. ಧ್ಯಾನ

ಏಕಾಗ್ರತೆಯು ನಿರಂತರವಾಗಿರುವುದೇ ಧ್ಯಾನವು.ಧ್ಯಾನವು ಯೋಗದ ಮುಖ್ಯ ಪ್ರಯೋಜನ,ಮುಖ್ಯಗುರಿಯು.ಪರಮಾತ್ಮನಲ್ಲಿ ಮನಸ್ಸನ್ನು ಏಕೀಕರಿಸುವುದೇ ಧ್ಯಾನವು.ಎಣ್ಣೆಯನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಸುರಿದಾಗ ಅದು ಏಕಧಾರೆಯಾಗಿ ಹರಿಯುವಂತೆ ಪರಮಾತ್ಮನಲ್ಲಿ ಏಕೋಭಾವದಿಂದ ಒಡಗೂಡುವುದೇ ಧ್ಯಾನವು.ಧ್ಯಾನವು ಸಿದ್ಧಿಸಿದ ಯೋಗಿಯು ಯೋಗಶಕ್ತಿಸಂಪನ್ನನಾಗುವನು.ಅವನಿಗೆ ಬೆಳಕಿನ ಚಿತ್ತಾರಗಳು,ದಶವಿಧನಾದಗಳೆಂಬ ದಿವ್ಯನಾದಗಳು,ದಿವ್ಯಧ್ವನಿಯೂ ಕೇಳಿಸುವುದು.ಧ್ಯಾನದಲ್ಲಿ ೧. ಸಗುಣಧ್ಯಾನ ಮತ್ತು ೨. ನಿರ್ಗುಣ ಧ್ಯಾನಗಳೆಂಬ ಎರಡು ಪ್ರಕಾರಗಳಿದ್ದು ಸಾಕಾರ ಪರಮಾತ್ಮನನ್ನು ಧ್ಯಾನಿಸುವುದು ಸಗುಣಧ್ಯಾನವಾದರೆ ನಿರಾಕಾರಪರಬ್ರಹ್ಮನನ್ನು ಧ್ಯಾನಿಸುವುದು ನಿರ್ಗುಣ ಧ್ಯಾನವು.

೮. ಸಮಾಧಿ

ಧ್ಯಾನದ ಮುಂದುವರಿದ ಸ್ಥಿತಿಯೇ ಸಮಾಧಿಯು.ಜೀವಾತ್ಮನು ಪರಮಾತ್ಮನಲ್ಲಿ ಸಮಾಗಮವಾಗುವುದು,ಒಂದಾಗಿ ಬೆರೆಯುವುದೇ ಸಮಾಧಿಯು.ಸಮಾಧಿಯಲ್ಲಿಯೂ ಸವಿಕಲ್ಪ ಸಮಾಧಿ ಮತ್ತು ನಿರ್ವಿಕಲ್ಪ ಸಮಾಧಿಗಳೆನ್ನುವ ಎರಡು ವಿಧಗಳಿದ್ದು ಸವಿಕಲ್ಪ ಸಮಾಧಿಯಲ್ಲಿರುವ ಯೋಗಿಗೆ ಸ್ವಲ್ಪ ದೇಹ,ಮನಸ್ಸು ಮತ್ತು ಬುದ್ಧಿಯ ಪ್ರಜ್ಞೆ ಇರುತ್ತದೆ.ಆದರೆ ನಿರ್ವಿಕಲ್ಪ ಸಮಾಧಿಯಲ್ಲಿರುವ ಯೋಗಿಗೆ ಯಾವ ಬಾಹ್ಯಪ್ರಜ್ಞೆಯೂ ಇರುವುದಿಲ್ಲ.ಅವನು ಸಂಪೂರ್ಣ ತಾನೇ ತಾನಾಗಿರುತ್ತಾನೆ.ಧ್ಯಾನ,ಧಾರಣ ಮತ್ತು ಸಮಾಧಿಗಳನ್ನು ಹನ್ನೆಡರ ಗುಣಕದಲ್ಲಿ ಅಳೆಯಲಾಗುತ್ತದೆ.ನಮ್ಮ ಮನಸ್ಸನ್ನು ಹನ್ನೆರಡು ಸೆಕೆಂಡುಗಳ ಕಾಲ ತದೇಕಚಿತ್ತವಾಗಿಸುವುದು ಧಾರಣವಾದರೆ ಅದರ ಹನ್ನೆರಡು ಪಟ್ಟು ಮನಸ್ಸು ನಿಂತರೆ ಅದೇ ಧ್ಯಾನ.ಇದರ ಹನ್ನೆರಡು ಪಟ್ಟು ಮನಸ್ಸು ಏಕಾಗ್ರವಾದರೆ ಅದೇ ಸಮಾಧಿ.ಅಂದರೆ ಹನ್ನೆರಡು ಸೆಕೆಂಡುಗಳ ಧಾರಣೆ,೧೪೪ ಸೆಕೆಂಡುಗಳ ಧ್ಯಾನ ಮತ್ತು ೧೭೨೮ ಸೆಕೆಂಡುಗಳ ಸಮಾಧಿ ಈ ಕ್ರಮದಲ್ಲಿ ಸಮಾಧಿಯನ್ನು ಸಾಧಿಸಬೇಕು.೨೪ ಘಂಟೆಗಳ ಕಾಲ ಸಮಾಧಿಸ್ಥಿತಿಯಲ್ಲಿರಬಹುದಾದರೆ ಅದುವೇ ಯೋಗಸಿದ್ದಿ,ಸಮಾಧಿಸ್ಥಿತಿ.ಯೋಗಿಗಳು ಈ ಸಮಾಧಿಸ್ಥಿತಿಯಲ್ಲಿಯೇ ಹೆಚ್ಚುಹೆಚ್ಚುಕಾಲ ವಿರಮಿಸುತ್ತ ತಪಸ್ಸನ್ನಾಚರಿಸುತ್ತಾರೆ.ಹನ್ನೆರಡು ದಿನಗಳು,ಹನ್ನೆರಡು ತಿಂಗಳುಗಳು ಮತ್ತು ಹನ್ನೆರಡು ವರ್ಷಗಳವರೆಗೆ ಸಮಾಧಿಸ್ಥಿತಿಯಲ್ಲಿರಬಲ್ಲವರೆ ತಪಸ್ವಿಗಳು ಮಹಾತಪಸ್ವಿಗಳು ಎನ್ನಿಸಿಕೊಳ್ಳುವರು.ನನಗೆ ಅಷ್ಟಾಂಗಯೋಗವನ್ನು ಬೋಧಿಸಿ,ಶಿವಾನುಗ್ರಹವನ್ನು ಕರುಣಿಸಿ ನನ್ನನ್ನು ಉದ್ಧರಿಸಿದ ನನ್ನ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಧಾರವಾಡದ ತಪೋವನದ ‘ಧ್ಯಾನಮಂದಿರ’ಕ್ಕೆ ಹೊಂದಿಕೊಂಡಂತೆ ನಿರ್ಮಿಸಿಕೊಂಡಿದ್ದ ಯೋಗಗುಹೆಯಲ್ಲಿ ಹನ್ನೆರಡು ತಿಂಗಳುಗಳ ಕಾಲ ಸಮಾಧಿಯಲ್ಲಿದ್ದು ಅಖಂಡ ತಪಸ್ಸನ್ನಾಚರಿಸಿ ಮಹಾತಪಸ್ವಿಗಳು,ಯುಗಯೋಗಿಗಳು ಎಂದು ಪ್ರಸಿದ್ಧರಾದರು.ಅಂತಹ ಮಹಾಯೋಗಿಯ ಪದತಲದಲ್ಲಿ ಮೂರುವರ್ಷಗಳ ಕಾಲ ಯೋಗಸಾಧನೆ ಮಾಡಿದ ಫಲದಿಂದ ನಾನು ಇಂತಹ ಯೋಗಸಿದ್ಧಿ,ಯೋಗಜ್ಞಾನವನ್ನು ಪಡೆಯಲು ಸಾಧ್ಯವಾಗಿದೆ.ನನ್ನೆಲ್ಲ ಯೋಗಸಿದ್ಧಿಯು ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಅನುಗ್ರಹ ಎಂದು ವಿನೀತನಾಗಿ ಹೇಳುವೆ.

About The Author