ಮೂರನೇಕಣ್ಣು : ಪಂಡಿತಾರಾಧ್ಯ ಶಿವಾಚಾರ್ಯರು ಮೊದಲು ಬಸವಣ್ಣನವರನ್ನು ಸರಿಯಾಗಿ ಅರ್ಥೈಸಿಕೊಳ್ಳಲಿ

ಮೂರನೇಕಣ್ಣು : ಪಂಡಿತಾರಾಧ್ಯ ಶಿವಾಚಾರ್ಯರು ಮೊದಲು ಬಸವಣ್ಣನವರನ್ನು ಸರಿಯಾಗಿ ಅರ್ಥೈಸಿಕೊಳ್ಳಲಿ : ಮುಕ್ಕಣ್ಣ ಕರಿಗಾರ

ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಯವರು ಬಸವ ಪರಂಪರೆ ಮತ್ತು ವೈದಿಕಪರಂಪರೆಯ ಬಗ್ಗೆ ಮತ್ತೆ ತಮ್ಮ ಅಪಕ್ವಭಾವನೆಯನ್ನು ವ್ಯಕ್ತಪಡಿಸಿದ್ದಾರೆ.ದಾವಣಗೆರೆ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅವರು ‘ ಬಸವಪರಂಪರೆಯನ್ನು ಒಪ್ಪಿಕೊಳ್ಳುವವರು ವೈದಿಕಪರಂಪರೆಯಿಂದ ದೂರವಿರಬೇಕು.ಎರಡೂ ಬೇಕೆನ್ನುವುದನ್ನು ಶರಣತತ್ತ್ವ ಒಪ್ಪುವುದಿಲ್ಲ’ ಎಂದ ಪಂಡಿತಾರಾಧ್ಯ ಶಿವಾಚಾರ್ಯರು ತಮ್ಮ ಮಾತನ್ನು ಮುಂದುವರೆಯಿಸಿ, ‘ ಕೆಲ ವಚನಗಳಲ್ಲಿ ಅಡಕವಾಗಿರುವ ಸತ್ಯವನ್ನು ಬಿಡಿಸಿ ಹೇಳಿದರೆ ಬಹಳಷ್ಟು ಮಂದಿಯ ಕಣ್ಣು ಕೆಂಪಗಾಗುತ್ತದೆ.ಕಲ್ಲುದೇವರು ದೇವರೇ ಅಲ್ಲ ಎಂಬುದು ಬಸವಣ್ಣನವರ ವಚನದ ಸಾರ. ಆದರೆ ಬಹುಪಾಲು ಮಂದಿ ಕಲ್ಲು,ಮಣ್ಣು,ಮರದ ದೇವರನ್ನು ಪೂಜಿಸುತ್ತಾರೆ.ಶರಣತತ್ತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಇಷ್ಟಲಿಂಗ ಪೂಜೆ ಮಾಡುವ ಭಾವನೆ ಬೆಳೆಸಿಕೊಳ್ಳಬೇಕು’ ಎಂದಿದ್ದಾರೆ.( ಪ್ರಜಾವಾಣಿ ಡಿಸೆಂಬರ್ 20,2023 ,ಪುಟ 5) ಬಸವಣ್ಣನವರ ಸಮಗ್ರವಚನಗಳಲ್ಲಿಯ ಕೆಲವು ವಚನಗಳನ್ನು ಎತ್ತಿತೋರಿಸಿದರೆ ಪಂಡಿತಾರಾಧ್ಯಶಿವಾಚಾರ್ಯರ ಕಣ್ಣೇಕೆಂಪಗಾಗಬಹುದು.

ಪಂಡಿತಾರಾಧ್ಯಶಿವಾಚಾರ್ಯರಂಥವರು ಮೊದಲು ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.ಬಸವಣ್ಣನವರಿಗೆ ಸಮಾಜದ ಶೂದ್ರರು,ದಲಿತರು,ಪದದುಳಿತರ ಉದ್ಧಾರದಲ್ಲಿ ಪ್ರಾಮಾಣಿಕ ಕಳಕಳಿ,ಕಾಳಜಿ ಇತ್ತೇ ಹೊರತು ಲಿಂಗಾಯತಧರ್ಮ ಎನ್ನುವ ಪ್ರತ್ಯೇಕ ಧರ್ಮ ಸ್ಥಾಪನೆಯಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ,ಅವರು ಆ ಬಗ್ಗೆ ಪ್ರಯತ್ನಿಸಲೂ ಇಲ್ಲ.ಲಿಂಗಾಯತ ಸ್ವತಂತ್ರ ಧರ್ಮ ಪ್ರತಿಪಾದನೆ ಇತ್ತೀಚಿನವರ ಪರಿಕಲ್ಪನೆ.ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.ಆದರೆ ಲಿಂಗಾಯತಧರ್ಮದ ಪಡಿಯಚ್ಚಿನಲ್ಲಿ ಬಸವಣ್ಣನವರನ್ನು ಬಂಧಿಸಿ ,ಬಸವಣ್ಣನವರ ಲೋಕೋತ್ತರ,ವಿಶ್ವವಿಭೂತಿ ವ್ಯಕ್ತಿತ್ವಕ್ಕೆ ಅಪಚಾರ ಎಸಗಬಾರದು.ಶಿವಸರ್ವೋತ್ತಮ ತತ್ತ್ವ ಪ್ರತಿಪಾದನೆಗಾಗಿ ಬಸವಣ್ಣನವರು ಒಬ್ಬ ಮತಸ್ಥಾಪಕನ ಆವೇಶದಿಂದ ಅನ್ಯದೈವಗಳ ಪೂಜೆ,ಉಪಾಸನೆಯನ್ನು ಖಂಡಿಸಿದ್ದಾರೆಯೇ ವಿನಹಃ ಅವರದು ‘ ಅನ್ಯನತಭಂಜಕ ದೃಷ್ಟಿ’ ಯಾಗಿರಲಿಲ್ಲ.ಕಲ್ಲುನಾಗರಪೂಜೆ,ಮಣ್ಣು ಮರಗಳ ದೈವ ಪೂಜೆಯ ಹೆಸರಿನಲ್ಲಿ ಬಡವರು ದುರ್ಬಲರು ಶೋಷಣೆ ಒಳಗಾಗುತ್ತಿರುವುದನ್ನು ಕಂಡು ಮರುಗಿತ್ತು ಬಸವಣ್ಣನವರ ದಯಾರ್ದ ಹೃದಯ.ದೇವರು- ದೈವಗಳ ಹೆಸರಿನಲ್ಲಿ ಅಪವ್ಯಯ,ದುಂದುವೆಚ್ಚ ಮಾಡಿ ಬಡವರು ಸಂಕಷ್ಟಕ್ಕೆ ಗುರಿಯಾಗಬಾರದು ಎನ್ನುವ ಬಂಧುಭಾವ ಬಸವಣ್ಣನವರದಾಗಿತ್ತೇ ಹೊರತು ಅವರು ಅನ್ಯರ ನಂಬಿಕೆಯ ಮೇಲೆ ಪ್ರಹಾರ ಮಾಡಲಿಲ್ಲ.’ಉಳ್ಳವರು ಶಿವಾಲಯವ ಮಾಡುವರು’ ಎನ್ನುವ ವಚನದಲ್ಲಿ ಸಿರಿತನದ ಅರ್ಥಮದವನ್ನು ಖಂಡಿಸಿದ್ದಾರೆಯೇ ಹೊರತು ಶಿವಾಲಯವನ್ನು ಕಟ್ಟಿಸಬೇಡಿ,ಸ್ಥಾವರಲಿಂಗವನ್ನು ಪೂಜಿಸಬೇಡಿ ಎಂದು ನಿರ್ಬಂಧಿಸಲಿಲ್ಲ.’ಕಲ್ಲನಾಗರ ಕಂಡರೆ ಹಾಲೆರೆಯೆಂಬರು’ ವಚನದಲ್ಲಿ ಬಡವರು,ನಿರ್ಗತಿಕರಿಗೆ ಅನ್ನವನ್ನಿಕ್ಕುವುದೇ ಶ್ರೇಷ್ಠ ಪೂಜೆ,ಉಪಾಸನೆ ಎನ್ನುವ ಭಾವ ಇದೆಯೇ ಹೊರತು ಕಲ್ಲುದೇವರನ್ನು ಪೂಜಿಸಬೇಡಿ ಎನ್ನುವ ಆಗ್ರಹವಿಲ್ಲ.ಮಾರಿ ಮಸಣಿಯರಂತಹ ಮರದದೈವಗಳ ಹೆಸರಿನಲ್ಲಿ ಜೀವಬಲಿ ನಡೆಯುವುದರಿಂದ ಅದು ಸಲ್ಲದ ಆಚರಣೆ ಎಂದಿದ್ದಾರೆಯೇ ಹೊರತು ಮಾರಿ ಮಸಣಿಯರುಗಳನ್ನು ಪೂಜಿಸುವವರು ಕ್ಷುದ್ರಜೀವಿಗಳು ಎಂದು ಕೆಡೆನುಡಿದಿಲ್ಲ.ಏಕದೇವೋಪಾದನೆಯ ತತ್ತ್ವಪ್ರತಿಪಾದನೆಗಾಗಿ,ಶಿವಸರ್ವೇಶ್ವರ ತತ್ತ್ವಪ್ರತಿಪಾದನೆಗಾಗಿ ಬಸವಣ್ಣನವರು ಇತರ ದೇವರುಗಳು,ಪೂಜಾಪದ್ಧತಿಗಳನ್ನು ಖಂಡಿಸಿದ್ದಾರೆ.

‘ವೀರಶೈವಮತೋದ್ಧಾರಕ’ ರಾದ ಬಸವಣ್ಣನವರು ಜಾತಿಶ್ರೇಷ್ಠತೆಯ ವ್ಯಸನಪೀಡಿತರಾಗಿದ್ದ ಬ್ರಾಹ್ಮಣರ ಕಂದಾಚಾರಗಳನ್ನು ಖಂಡಿಸಿದ್ದಾರೆಯೇ ಹೊರತು ವೈದಿಕತತ್ತ್ವವನ್ನು ಸಾರಾಸಗಟಾಗಿ ಅಲ್ಲಗಳೆದಿಲ್ಲ.ವೈದಿಕರ,ಶೈವಬ್ರಾಹ್ಮಣರ ಆರಾಧ್ಯ ಶಿವನೇ ಬಸವಣ್ಣನವರ ಶಿವನು.ಕಲ್ಲುದೇವರಲ್ಲ ಎನ್ನುವ ಅಪಕ್ವಮತಿಗಳು ಬಸವಣ್ಣನವರು ತಮ್ಮ ವಚನಗಳಲ್ಲಿ ‘ಸ್ಥಾವರ ಜಂಗಮ ಒಂದೇ’ ಎಂದು ಪ್ರತಿಪಾದಿಸಿದ್ದಾರೆ,ಅಷ್ಟೋಪಚಾರ- ಷೋಡಶೋಪಚಾರ ಪೂಜೆಗಳನ್ನೂ ಒಪ್ಪಿದ್ದಾರೆ ಎನ್ನುವುದನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚುತ್ತಿದ್ದಾರೆ.

ಅಷ್ಟವಿಧಾರ್ಚನೆ– ಷೋಡಶೋಪಚಾರವ ಮಾಡುವುದು ;
ಮಾಡಿದ ಪೂಜೆಯ ನೋಡುವುದಯ್ಯಾ.
ಶಿವತತ್ತ್ವ ಗೀತವ ಪಾಡುವುದು ;
ಶಿವನ ಮುಂದೆ ನಲಿವುದಯ್ಯಾ.
ಭಕ್ತಿಸಂಭಾಷಣೆಯ ಮಾಡುವುದು;
ನಮ್ಮ ಕೂಡಲ ಸಂಗಯ್ಯನ ಕೂಡುವುದು.

ಶಿವನೊಲುಮೆಗೆ ಅನುಕೂಲವಿದ್ದವರು ಅಷ್ಟವಿಧ ಪೂಜೆ,ಷೋಡಶೋಪಚಾರ ಸೇವೆ ಸಲ್ಲಿಸಲಿ.ಬಡವರು ಆ ಪೂಜೆಯನ್ನು ನೋಡಲಿ.ಶಿವತತ್ತ್ವವನ್ನು ಸಾರುವ ಗೀತೆಯನ್ನು ಹಾಡಬೇಕು,ಶಿವನ ಮುಂದೆ ನರ್ತಿಸಿ ನಲಿಯಬೇಕು,ಶಿವ ಸಂಕೀರ್ತನೆಯನ್ನು ಕೇಳಬೇಕು; ಇವೆಲ್ಲ ಶಿವಾನುಗ್ರಹಪ್ರಾಪ್ತಿಯ ಸಾಧನಗಳು,ಸುಲಭೋಪಾಯಗಳು ಎನ್ನುವ ಬಸವಣ್ಣನವರ ಈ ವಚನವು ಸ್ಥಾವರಶಿವಲಿಂಗವನ್ನುಳ್ಳ ಶಿವಾಲಯದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು,ವೈದಿಕ ಶಿವಪೂಜೆಯ ಅಂಗಗಳನ್ನು ವರ್ಣಿಸುತ್ತಿದೆ ಎನ್ನುವುದನ್ನು ಮರೆಯಬಾರದು.

ಇಷ್ಟಲಿಂಗವು ನಿರಾಕಾರಶಿವನ ಜಂಗಮಪ್ರತೀಕ ಎನ್ನುವ ಬಸವಣ್ಣನವರು ಇಷ್ಟಲಿಂಗ ಸ್ಥಾವರಲಿಂಗಗಳೆರಡೂ ಒಂದೇ ಎಂದಿದ್ದಾರೆ ;

ಕನ್ನಡಿಯ ನೋಡುವ ಅಣ್ಣಗಳಿರಾ ಜಂಗಮವ ನೋಡಿರೇ:
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿರ್ಪ.
‘ ಸ್ಥಾವರ ಜಂಗಮ ಒಂದೇ’ ಎಂದುದು ಕೂಡಲ ಸಂಗನ ವಚನ.

ಎನ್ನುವ ವಚನದಲ್ಲಿ ಜಂಗಮನಾದ ಶಿವಯೋಗಿ ಮತ್ತು ಸ್ಥಾವರಲಿಂಗದಲ್ಲಿ ಯಾವ ಭೇದವೂ ಇಲ್ಲ ಎಂದ ಬಸವಣ್ಣನವರು ಮತ್ತೊಂದು ವಚನದಲ್ಲಿ ;

ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ–
ನಮ್ಮ ಶರಣರಿಗುರಿಗರಾಗಿ ಕರಗದನ್ನಕ್ಕ ?
‘ ಸ್ಥಾವರ ಜಂಗಮವೊಂದೇ’ ಎಂದು ನಂಬದನ್ನಕ್ಕ?
ಕೂಡಲ ಸಂಗಮದೇವಾ,ಬರಿಯ ಮಾತಿನ ಮಾಲೆಯಲೇನಹುದು ?

ಬರಿ ಮಾತಿನ ಮಾಲೆಯಲ್ಲಿಯೇ ಬಸವತತ್ತ್ವ ಕಟ್ಟಬಯಸುವ ಸಾಣೆಹಳ್ಳಿ ಪಂಡಿತಾರಾಧ್ಯರಂಥವರು ಈ ವಚನಾರ್ಥವನ್ನು ಮನನ ಮಾಡಬೇಕು.ಕಲ್ಲುದೇವರಲ್ಲ ಎಂದು ಬಸವಣ್ಣನವರು ಹೇಳಿದ್ದಾರೆ ಎನ್ನುವವರು ಬಸವಣ್ಣನವರು ಕಲ್ಲುಲಿಂಗವಾದ ಸ್ಥಾವರವೂ ಶಿವಸ್ವರೂಪವೇ ಎಂದು ಸಾರಿದ್ದಾರೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು.ಬಸವಣ್ಣನವರು ತಮ್ಮನ್ನು ತಾವು ಸ್ಥಾವರಲಿಂಗ ಜಂಗಮದ ಪೂಜಕರಾದ ‘ ಉಭಯಲಿಂಗಸಂಗಿ’ ಎಂದು ಕರೆದುಕೊಂಡಿರುವುದನ್ನು ಬರಿಯ ಬಸವಾಭಿಮಾನಿಗಳಾದ ಬಹಳಷ್ಟು ಜನರಿಗೆ ಗೊತ್ತಿಲ್ಲ!

‘ಸ್ಥಾವರ ಜಂಗಮ ಒಂದೇ’ಯೆಂದು ಇದಿರ ನುಡಿವೆ!
ನಾನೆಡಹುತಿಪ್ಪೆ : ಸಹಜನಲ್ಲಯ್ಯಾ!
ಆನು ಸಮ್ಯಕ್ಕನಲ್ಲಯ್ಯಾ!
‘ ಆನುಭಯಲಿಂಗಸಂಗಿ’ ಯೆಂಬೆನು:

ಎನ್ನುವ ವಚನದಲ್ಲಿ ಬಸವಣ್ಣನವರು ತಾವು ಸ್ಥಾವರ ಮತ್ತು ಜಂಗಮ ಎರಡರಲ್ಲೂ ಏಕೋನಿಷ್ಠೆಯನ್ನಿಟ್ಟವರು ಎನ್ನುವುದು ದೃಢಪಡುವುದಿಲ್ಲವೆ ?
ಮತ್ತೊಂದು ವಚನದಲ್ಲಿ
‘ ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ’ ಎಂದಿದ್ದಾರೆ.

ಆರಾಧನೆಯ ಮಾಡಿದಡೆ ಅಮೃತದ ಬೆಳಸು :
ವಿರೋಧಿಸಿದಡೆ ವಿಷದ ಬೆಳಸು!
ಇದು ಕಾರಣ,ಲಿಂಗಜಂಗಕ್ಕಂಜಲೆ ಬೇಕು.
‘ ಸ್ಥಾವರ ಜಂಗಮ ಒಂದೆಯೆಂದರಿದರೆ’
ಕೂಡಲ ಸಂಗಮದೇವ ಶರಣಸನ್ನಿಹಿತ

ಶಿವನು ತನ್ನ ಭಕ್ತರ ಬಳಿ ಬರಬೇಕಾದರೆ ಶಿವಭಕ್ತರು ಸ್ಥಾವರಲಿಂಗ ಮತ್ತು ಜಂಗಮದಲ್ಲಿ ಭೇದವನ್ನೆಣಿಸಬಾರದು ಎಂದು ಬಸವಣ್ಣನವರು ಹೇಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಬಸವಣ್ಣನವರು ತಾವುಂಡ ಶಿವಸಾಕ್ಷಾತ್ಕಾರದ ಸತ್ಯವನ್ನು ಹಲವು ವಚನಗಳಲ್ಲಿ ಸಾರಿದ್ದಾರೆ.ಬಸವಣ್ಣನವರು ಕಂಡ ಶಿವನಿಗೂ ವೇದಕಾಲದಿಂದಲೂ ಸಂಪ್ರದಾಯಸ್ಥರು,ವೈದಿಕರು ಕಾಣುತ್ತಬಂದ ಶಿವನಿಗೂ ವ್ಯತ್ಯಾಸವಿಲ್ಲ.ನಾವು ಇಂದು ಚಿತ್ರಪಟಗಳಲ್ಲಿ ಕಾಣುವ ಶಿವನೇ ಬಸವಣ್ಣನವರು ಕಂಡ ಶಿವನಾಗಿದ್ದ ಎಂದ ಬಳಿಕ ವೈದಿಕರಶಿವ ಬೇರೆ ಬಸವಣ್ಣನವರ ಶಿವ ಬೇರೆ ಎನ್ನಲು ಸಾಧ್ಯವೆ ? ಬಸವಣ್ಣನವರ ಶಿವದರ್ಶನ ;

ಹೊನ್ನ ಹಾವುಗೆಯ ಮೆಟ್ಟಿದವನ,ಮಿಡಿಮಿಟ್ಟಿದ ಕೆಂಜೆಡೆಯವನ;
ಮೈಯಲ್ಲಿ ವಿಭೂತಿ ಧರಿಸಿದವನ,
ಕರದಲ್ಲಿ ಕಪಾಲವ ಪಿಡಿದವನ,
ಅರ್ಧನಾರಿಯಾದವನ,ಬಾಣನ ಬಾಗಿಲ ಕಾಯ್ದವನ;
ನಂಬಿಗೆ ಕುಂಟಣಿಯಾದವನ,
ಚೋಳಂಗೆ ಹೊನ್ನಮಳೆಯ ಕರೆದವನ;
ಎನ್ನ ಮನಕ್ಕೆ ಬಂದವನ,ಸದ್ಭಕ್ತರ ಹೃದಯದಲ್ಲಿಪ್ಪವನ;
ಮಾಡಿದ ಪೂಜೆಯೊಪ್ಪುವನ,ಕೂಡಲ ಸಂಗಯ್ಯನೆಂಬುವನ!

ಬಸವಣ್ಣನವರು ಕಂಡ ‘ ಕೂಡಲಸಂಗಯ್ಯನೆಂಬ ಶಿವನು’ ಸಾಕಾರಶಿವನೆಂಬುದು ಶತಶತಮಾನಗಳಿಂದ ಜನರು ಪೂಜಿಸುತ್ತ ಬಂದ ವೈದಿಕರ ಶಿವನೇ ಅಲ್ಲವೆ? ಬಸವಣ್ಣನವರ ವಚನಾಂಕಿತ ‘ ಕೂಡಲಸಂಗಮದೇವ’ ಎನ್ನುವುದು ಕೂಡ ಸ್ಥಾವರಲಿಂಗಸೂಚಕವೆ! ಆದ್ದರಿಂದ ಬಸವಣ್ಣನವರು ಕಲ್ಲುಪೂಜೆ ಕೂಡದೆಂದರು,ಸ್ಥಾವರಲಿಂಗಪೂಜೆ ಸಲ್ಲದೆಂದರು ಎನ್ನುವುದು ಬಸವವ್ಯಕ್ತಿತ್ವವನ್ನು ಸರಿಯಾಗಿ ಗ್ರಹಿಸದ ಅರೆಜ್ಞಾನಿಗಳ ಮಾತಲ್ಲವೆ ?

ಬಸವಣ್ಣನವರ ಶಿವನು ವೈದಿಕರ ರುದ್ರನಿಗಿಂತ ಭಿನ್ನನಲ್ಲದ ಶಿವನೆಂಬುದು ಆಶ್ಚರ್ಯವಾದರೂ ಸತ್ಯ.ಬಸವಣ್ಣನವರೇ ಹಾಡಿದ್ದಾರೆ ;

ಶ್ರುತಿಗಮ್ಯ,ದ್ವಾದಶಾಂತ್ಯನಪ್ರತಿಮಮಹಿಮಂಗೆ ಪ್ರತಿಯುಂಟೆ ?
‘ ಸೋಮಃ ಪವತೇ’ ಎಂಬ ಶ್ರುತಿಯನರಿತು,
ಶಿವ’ ನೇಕೋ ದೇವ ರುದ್ರನದ್ವಿತೀಯನೆಂದು’
ನಂಬುವುದು,ಕಾಣಿರಣ್ಣಾ.
‘ ಕೂಡಲ ಸಂಗಮದೇವನಲ್ಲದೆ ಇಲ್ಲ’ ವೆಂದೆತ್ತಿದೆ
ಬಿರುದ ಜಗವೆಲ್ಲರಿಯಲು.
ಮತ್ತೊಂದು ವಚನದಲ್ಲಿ ಬಸವಣ್ಣನವರು ಗಾಯತ್ರಿಮಂತ್ರಾತ್ಮಕ ಶಿವನ ಕುರಿತು ಹಾಡಿದ್ದಾರೆ ;

ಉಪ್ಪರಗುಡಿ,ನಂದಿವಾಹನ ಸದ್ಯೋಜಾತನ
ಬಾಗಿಲ ಮುಂದೆ ಸಾರುತ್ತೈದಾವೆ,ನೋಡಾ ;
ಶ್ರುತಿಗಳು ನಾಲ್ಕು ವೇದವೂ ಹುಸಿಯದೆ
‘ ಭರ್ಗೋದೇವಸ್ಯ ಧೀಮಹಿ’ ಎಂದುದಾಗಿ
ಕೂಡಲ ಸಂಗಮನಲ್ಲದಿಲ್ಲೆಂದುದು ವೇದ.
ಮತ್ತೊಂದು ವಚನದಲ್ಲಿ ಬಸವಣ್ಣನವರು ಮನದುಂಬಿ ಹಾಡುವುದು ;

‘ ವೇದ ಸ್ವಯಂಭು’ ವೆಂಬ ವಾದಿ ನೀ ಕೇಳೆಲವೋ :
‘ ಏಕೋ ದೇವ ರುದ್ರನದ್ವಿತೀಯ’ ನೆಂದು
ನಂಬುವುದು ಕಾಣಿರಣ್ಣಾ.
‘ ಓಂ ದ್ಯಾವಾ ಭೂಮೀಜನಯಂ ದೇವ ಏಕೋದೇವ
ಏಕೋ ಹಿ ರುದ್ರೋ ನದ್ವಿತೀಯಾಯ ತಸ್ತುಃ’
‘ ಚಕಿತಮಭಿಧತ್ತೇ’ ಎಂದು ಶ್ರುತಿ ಸಾರುತ್ತೈದಾವೆ.
ಜಗದ ಕರ್ತ ಕೂಡಲ ಸಂಗಮದೇವನೊಬ್ಬನೇ,ಕಾಣಿರಣ್ಣ.

ಶಿವನವಿಶ್ವರೂಪ ದರ್ಶನದ ಬಸವಣ್ಣನವರ ವಚನ ;

ಎತ್ತೆತ್ತ ನೋಡಿದತ್ತತ್ತ ನೀನೇ ದೇವಾ ;
ಸಕಲವಿಸ್ತಾರದ ರೂಹು ನೀನೇ,ದೇವಾ;
ವಿಶ್ವತಸ್ ಚಕ್ಷು ನೀನೇ ದೇವಾ; ವಿಶ್ವತೋಮುಖ ನೀನೇ,ದೇವಾ;
ವಿಶ್ವತೋಬಾಹು ನೀನೇ,ದೇವಾ;
ವಿಶ್ವತಃಪಾದ ನೀನೇ ದೇವಾ; ಕೂಡಲಸಂಗಮದೇವಾ.

ಶಿವಸಹಸ್ರಪುರುಷನೆಂದು ಸಾರುವ ಬಸವಣ್ಣನವರ ವಚನ ;

ರುದ್ರ ಮುಖದಲ್ಲಿ,ವಿಷ್ಣು ಭುಜದಲ್ಲಿ,ಜಂಘೆಯಲ್ಲಿ ಅಜಜನನವು!
ಇಂದ್ರ ಪಾದದಲ್ಲಿ,ಚಂದ್ರ ಮನದಲ್ಲಿ,ಚಕ್ಷುವಿನಲ್ಲಿ ಸೂರ್ಯಜನನವು!
ಮುಖದಲ್ಲಿ ಅಗ್ನಿಯು,ಪ್ರಾಣದಲ್ಲಿ ವಾಯು,
ನಾಭಿಯಲ್ಲಿ ಅಂತರಿಕ್ಷವು.
ಸಿರದಲುದಯ ತೆತ್ತೀಸಕೋಟಿ ದೇವತೆಗಳು,
ಪಾದತಳದಲ್ಲಿ ಭೂಮಿ ಜನನವು!
ಶ್ರೋತದಲ್ಲಿ ದಶದಿಕ್ಕುವೂ!
ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ ಅಕ್ಷಯನಗಣಿತನು!
ಸಾಸಿರತಲೆ,ಸಾಸಿರ ಕಣ್ಣು,ಸಾಸಿರ ಕೈ,ಸಾಸಿರ ಪಾದ,
ಸಾಸಿರಸನ್ನಿಹಿತ ನಮ್ಮ ಕೂಡಲ ಸಂಗಯ್ಯ!
ಮತ್ತೊಂದು ವಚನ ;

ವಿಶ್ವಾಧಿಕೋರುದ್ರನ ಹೊಗಳುವ ಶ್ರುತಿಗಳು:
” ವಿಶ್ವರೂಪಾಯ ವೈ ನಮಃ
ಪರಮರೂಪನೇ ನಮೋ,ಪರತತ್ವನೇ ನಮೋ,
ಆದಿಯಾರೂಢಭಯಂಕರನೇ ನಮೋ
ಹರಿಯನು ಹರಿಸಿದನೇ”
ಎಂದು ಶ್ರುತಿಯು ಸಾರುತ್ತಿರಲು—
ಸಂಹಾರಕಾರಣ ನಮೋ,ಕೂಡಲ ಸಂಗಮದೇವಾ,
ಮಹನ್ ಮದದ್ ಭ್ಯೋ ನಮಃ

ಬಸವಣ್ಣನವರ ಈ ವಚನಗಳಲ್ಲಿರುವ ಶಿವನು ವೇದೋಕ್ತಶಿವನಲ್ಲವೆ? ವೇದದ ರುದ್ರಸೂಕ್ತ,ರುದ್ರಾಧ್ಯಾಯಗಳಲ್ಲಿ ಬಣ್ಣಿಸಲ್ಪಟ್ಟ ವಿಶ್ವಪುರುಷ,ವಿಶ್ವನಿಯಾಮಕ ರುದ್ರ ಶಿವನನ್ನೇ ಬಸವಣ್ಣನವರು ತಮ್ಮ ಶಿವನನ್ನಾಗಿ ಒಪ್ಪಿದ್ದಾರಲ್ಲವೆ ? ವೈದಿಕರ ಪುರಾಣೋಕ್ತ ಶಿವನಿಗೂ ಬಸವಣ್ಣನವರ ಶಿವನಿಗೂ ಏನಾದರೂ ವ್ಯತ್ಯಾಸವಿದೆಯೆ? ಬಸವಣ್ಣನವರು ಇಷ್ಟಲಿಂಗೋಪಸಕರು,ವೈದಿಕರ ಶಿವಪೂಜಕರಲ್ಲ ಎನ್ನುವುದು ಅಜ್ಞಾನಿಗಳ ಮಾತೆನಿಸುವುದಿಲ್ಲವೆ ?

ಬಸವಣ್ಣನವರು
ಅಯ್ದೇ ಬ್ರಹ್ಮನ ಕಪಾಲ ಕರದಲ್ಲಿ :
ಅಯ್ದುದೇ ವಿಷ್ಣುವಿನ ನಯನ ಪಾದದಲ್ಲಿ
ಅಯ್ದುದೇ ಕಾಮನ ಸುಟ್ಟ ಭಸ್ಮ ಮೈಯಲ್ಲಿ
ಮುಖ ಮೂದಲೆ ಏಕಯ್ಯಾ,ಕೂಡಲ ಸಂಗಮದೇವಾ ?

ಎಂದು ಹಾಡಿರುವ ವಚನವು ಶಿವಮಹಾಪುರಾಣ,ಸ್ಕಂದ ಮಹಾಪುರಾಣಗಳಲ್ಲಿ ಬಣ್ಣಿಸಲ್ಪಟ್ಟ ಶಿವನೇ ಅಲ್ಲವೆ?

ವೇದ,ಪುರಾಣ,ಶಿವರಹಸ್ಯ,ರುದ್ರಾಧ್ಯಾಯ ಮೊದಲಾದ ಕೃತಿಗಳಲ್ಲಿ ವರ್ಣಿಸಲ್ಪಟ್ಟ ವೈದಿಕರ ಶಿವನನ್ನೇ ಬಸವಣ್ಣನವರು ತಮ್ಮ‌ಶಿವಮಹಿಮಾಧಿಕ್ಯ ಬಣ್ಣನೆಗೆ ಬಳಸಿಕೊಂಡಿದ್ದಾರೆ ಎನ್ನುವ ಇನ್ನು ಒಂದೆರಡು ವಚನಗಳು ;

ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು ಮರುಳತಂಡಗಳು ಓದಿ ನೋಡಲು
‘ ಇವನಜ,ಇವ ಹರಿ,ಇವ ಸುರಪತಿ,
ಇವ ಧರಣೀಂದ್ರನಿವನಂತಕ’ ನೆಂದು
ಹರುಷದಿಂದ ಸರಸವಾಡಿತ್ತ ಕಂಡು
ಹರ ಮುಕುಳಿತನಾಗಿ ನಸುನಕ್ಕನು
ನಮ್ಮ ಕೂಡಲಸಂಗಮದೇವ.

ಅದುರಿತು ಪಾದಾಘಾತದಿಂದ ಧರೆ ;
ಬಿದುರಿದವು ಮುಕುಟ ತಾಗಿ ತಾರಕೆಗಳು ;
ಉದುರಿದವು ಕೈ ತಾಗಿ ಲೋಕಂಗಳೆಲ್ಲಾ !
ಮಹೀ ಪಾದಾಘಾತಾದ್ ವ್ರಜತಿ ಸಹಸ್ರಾ ಸಂಶಯಪದಂ
ಪದಂ ವಿಷ್ಣೋರ್ ಭ್ರಾಮ್ಯಾದ್ ಭುಜಪರಿಘರುಗ್ಣಗ್ರಹಗಣಂ/
ಮುಹುರ್ ದ್ಯೌರ್ ದೌಸ್ಥ್ಯಂ ಯಾತ್ಯ ನಿಭೃತ ಜಟಾತಾಡಿತತಟಾ
ಜಗದ್ ರಕ್ಷಾಯೈ ತ್ವಂ ನಟಸಿ ನನು ವಾಮೈವ ವಿಭುತಾ//
ನಮ್ಮ ಕೂಡಲ ಸಂಗಮದೇವ ನಿಂದು ನಾಟ್ಯವನಾಡೆ.

ಆರುಕೋಟಿ ಬ್ರಹ್ಮರು ಮಡಿವಲ್ಲಿ ನಾರಾಯಣಗೆ ಒಂದು ದಿನವಾಯಿತ್ತು.
ನಾರಾಯಣರೊಂದು ಕೋಟಿ ಮಡಿವಲ್ಲಿ ರುದ್ರನ ಕಣ್ಣೆವೆ ಹಳಚಿತ್ತು.
ರುದ್ರಾವತಾರ ಹಲವಳಿದಲ್ಲಿ
ನಮ್ಮ ಕೂಡಲ ಸಂಗಮದೇವನೇನೆಂದೂ ಅರಿಯನು.

ಇಂತಹ ಇನ್ನು ಹತ್ತಾರು ವಚನಗಳನ್ನು ಉದಾಹರಿಸಿ,ಉದ್ಧರಿಸಿ ಬಸವಣ್ಣನವರ ಶಿವನು ವೈದಿಕರ ಶಿವನಿಗಿಂತ ಅಭಿನ್ನನು ಎನ್ನುವುದನ್ನು ಸಾಧಿಸಿತೋರಬಲ್ಲೆನಾದರೂ ಲೇಖನ ದೀರ್ಘವಾಗುವ ಭಯದಿಂದ ಇಷ್ಟು ವಿವರಗಳಿಗೆ ಮುಗಿಸುವೆ.ಶಿವನು ವೈದಿಕರ ದೇವರು ಎನ್ನುವ ಅಜ್ಞಾನಿಮಹಾನುಭಾವರುಗಳು ಬಸವಣ್ಣನವರು ಶಿವಪೂಜಕರೇ,ಬಸವಣ್ಣನವರ ಶಿವನು ವೈದಿಕರ ಶಿವನಿಗಿಂತ ಭಿನ್ನನಲ್ಲ,ಸ್ಥಾವರಲಿಂಗ,ಮೂರ್ತಿಗಳಲ್ಲಿ ಒಡಮೂಡಿದ ಶಿವನೇ ಸರ್ವರ ಶಿವನು ಎನ್ನುವುದನ್ನು ಅರ್ಥಮಾಡಿಕೊಂಡರೆ ಸಾಕು.

ಯೋಗಪರಂಪರೆಯನ್ನು ಅಲ್ಲಗಳೆದು ಬಸವಪರಂಪರೆಯನ್ನು ಪ್ರತಿಪಾದಿಸುವ ಮಹಾನುಭಾವರುಗಳು ಬಸವಣ್ಣನವರು ಕುಂಡಲಿನಿ ಯೋಗಸಾಧಕರಾಗಿದ್ದರು,ಷಡ್ಚಕ್ರಗಳನ್ನು ಭೇದಿಸಿ ಸಹಸ್ರಾರವನ್ನು ತಲುಪಿದ್ದ ಮಹಾಶಿವಯೋಗಿಗಳಾಗಿದ್ದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಆಜ್ಞಾಚಕ್ರದಲ್ಲಂತರ್ಗತ ಸೂಕ್ಷ್ಮಾತಿಸೂಕ್ಷ್ಮ ‘ ಈತರಲಿಂಗ’ ವನ್ನೇ ಬಸವಣ್ಣನವರು ಇಷ್ಟಲಿಂಗವನ್ನಾಗಿ ರೂಪಿಸಿದರು; ಷಟ್ಚಕ್ರಗಳ ಯೋಗಪದ್ಧತಿಯೇ ಬಸವಣ್ಣನವರ ಷಟ್ ಸ್ಥಲ ಸಿದ್ಧಾಂತ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ಬಸವಣ್ಣನವರದೇ ಒಂದು ವಚನ ;

ಪಶ್ಚಿನಪದ್ಮಾಸನದಲ್ಲಿ ಕುಳಿತು ನೆಟ್ಟೆಲುವ ಮುರಿದು
ತುಟಿ ಮಿಡುಕದೆ ಅಟ್ಟೆಯಾಡಿತ್ತಲ್ಲಾ !
ಬಿಟ್ಟ ಕಣ್ಣು ಬಿಗಿದ ಹುಬ್ಬು,ಬ್ರಹ್ಮರಂಧ್ರದಲ್ಲಿ
ಕಟ್ಟುಗುಡಿಯ ಕೂಡಲ ಸಂಗಮದೇವ ಹಿಡಿವಡೆದ !

ಯೋಗಸಾಧನೆಯನ್ನರಿಯದ ಬರಿ ಇಷ್ಟಲಿಂಗೋಪಾಸಕರಾದ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರಂತಹವರಿಗೆ ಬಸವಣ್ಣನವರ ಇಷ್ಟಲಿಂಗ ರಹಸ್ಯವಾವುದು, ಇಷ್ಟಲಿಂಗವು ಕರಸ್ಥಳದಲ್ಲಿ ಚುಳುಕಾಗುವ ಮೂಲವಾವುದು ಎಂದು ಅರ್ಥವಾಗಲು ಸಾಧ್ಯವಿಲ್ಲ.

ಬಸವಣ್ಣನವರು ಪ್ರಗತಿಪರ ವಿಚಾರಧಾರೆಗಳನ್ನುಳ್ಳ ದಾರ್ಶನಿಕರಾಗಿದ್ದರೂ ಅವರು ಕರ್ಮಸಿದ್ಧಾಂತ,ಪುನರ್ಜನ್ಮಗಳನ್ನು ಅಲ್ಲಗಳೆಯಲಿಲ್ಲ. ಶಿವಭಕ್ತಿ,ಶಿವಧರ್ಮವನ್ನು ಎತ್ತಿಹಿಡಿಯಲು ಏಳು ಜನ್ಮಗಳನ್ನು ಎತ್ತಿಬಂದಿರುವುದಾಗಿ ಹೇಳಿಕೊಂಡ ಬಸವಣ್ಣನವರು ‘ ಏಳೇಳು ಜನ್ಮಗಳಲ್ಲಿ ಶಿವಭಕ್ತನಾಗಿ ಬರದಿದ್ದರೆ ನಿಮ್ಮಾಣೆ,ನಿಮ್ಮ ಪ್ರಮಥರಾಣೆ’ ಎಂದೂ ಉದ್ಘೋಷಿಸಿದ್ದಾರೆ.ಅವತಾರಗಳ ಕಲ್ಪನೆಯು ವೈದಿಕ ಶೈವರ ಕಲ್ಪನೆಯೆ!

ಬಸವಣ್ಣನವರನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಜನರನ್ನು ದಾರಿತಪ್ಪಿಸುವುದು ಬಸವದ್ರೋಹ,ಶಿವದ್ರೋಹ.ಇಂತಹ ಪಾತಕಿಗಳು ಬಸವಣ್ಣನವರೇ ಹೇಳುವ ‘ ಕುಂಭಿಪಾಕನರಕ’ ದಲ್ಲಿ ಬೀಳುತ್ತಾರೆ.ವಿಶ್ವವಿಭೂತಿಯಾದ,ಮಹಾನ್ ದಾರ್ಶನಿಕರಾದ ಬಸವಣ್ಣನವರನ್ನು ಸ್ವಾರ್ಥಸಾಧನೆಗಾಗಿ ಪೇಟೆಂಟ್ ಪಡೆದು ಇಲ್ಲದುದನ್ನು ಗಳಹುವ ಮಂದಿ ಬಸವಣ್ಣನವರ ಸಮಗ್ರವಚನಗಳನ್ನು ಓದಿ ಬಸವಣ್ಣನವರ ಸಂಕೀರ್ಣವೂ ಸಮಷ್ಟಿಯೂ ಆದ ವ್ಯಕ್ತಿತ್ವದರ್ಶನ ಮಾಡಿಕೊಳ್ಳಬೇಕು.

About The Author