ಚಕ್ರಚಿಂತನೆ : ಷಟ್ಚಕ್ರಗಳು ಮತ್ತು ‘ ಮೇಲೊಂದು ‘ ಸಹಸ್ರಾರ ಚಕ್ರ’ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ಅತ್ಯಂತ ನಿಷ್ಠಾವಂತ ಭಕ್ತರೂ ಮತ್ತು ನನ್ನ ಸಮೀಪವರ್ತಿಗಳಲ್ಲೊಬ್ಬರಾಗಿರುವ ಅತ್ತನೂರಿನ ದಿಡ್ಡಿಬಸವ ಚಲುವಾದಿ ಅವರಿಗೆ ಚಕ್ರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ.ನಿನ್ನೆ ನಾನು ಶಿಷ್ಯ ಮಂಜುನಾಥ ಕರಿಗಾರ ಸೃಷ್ಟಿಸಿರುವ ‘ಕಾಮನ್ ಮ್ಯಾನ್ ‘ ವಾಟ್ಸಾಪ್ ಗುಂಪಿನಲ್ಲಿ ಮತ್ತೊಬ್ಬ ಶಿಷ್ಯ ಚಿದಾನಂದ ಖಾನಾಪುರ ಅವರ ” ಓಂಕಾರ” ದ ಕುರಿತ ಪ್ರಶ್ನೆಗೆ ನೀಡಿದ್ದ ಉತ್ತರದಲ್ಲಿ ನಮ್ಮ ದೇಹದಲ್ಲಿ ಸಹಸ್ರಾರವನ್ನೊಳಗೊಂಡಂತೆ‌ ಇರುವ ಏಳುಚಕ್ರಗಳ ಬಗ್ಗೆ ವಿವರಣೆ ನೀಡಿದ್ದೆ.ಅದನ್ನು ಓದಿ,ಆನಂದಿತರಾದ ದಿಡ್ಡಿಬಸವ ಅವರು ‘ ಸಪ್ತಚಕ್ರಗಳ ಬಗ್ಗೆ ಮಾಹಿತಿನೀಡಿ ಗುರುದೇವ’ ಎಂದು ಕೇಳಿದ್ದಾರೆ.ವೃತ್ತಿಯಲ್ಲಿ ಪೋಲೀಸ್ ಅಧಿಕಾರಿಯಾಗಿದ್ದರೂ ದಿಡ್ಡಿಬಸವ ಅವರು ಆಧ್ಯಾತ್ಮಿಕ ಒಲವು ಉಳ್ಳವರು,ಗುರು- ದೇವರಲ್ಲಿ ಅನನ್ಯ ಭಕ್ತಿನಿಷ್ಠೆಯುಳ್ಳವರು.ಪ್ರಸ್ತುತ ಇಂಡಿಯನ್ ರಿಸರ್ವ್ ಬೆಟಾಲಿನಿಯನ್ ( IRB) ನ ASI ಹುದ್ದೆಯಲ್ಲಿ ಮುನಿರಾಬಾದಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿಡ್ಡಿಬಸವ ಚಲುವಾದಿ ಅತ್ತನೂರು ಅವರು ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವ,ವಿಶ್ವೇಶ್ವರಿ ದುರ್ಗಾದೇವಿ ಮತ್ತು ಮಹಾಮಾತೆ ಮಹಾಕಾಳಿ ದೇವಿಯರಲ್ಲಿ ಅತ್ಯಂತ ಭಕ್ತಿಯನ್ನಿಟ್ಟ ಪರಿಶುದ್ಧಹೃದಯಿಗಳು.ಗುರುದೀಕ್ಷೆಯನ್ನು ಪಡೆದು ನಿತ್ಯಶಿವೋಪಾಸನೆ ಮಾಡುತ್ತಿರುವ ಅವರು ತಮಗೆ ತಲೆದೋದೋರಿದ ಆಧ್ಯಾತ್ಮಿಕ ಸಂದೇಹಗಳ ಬಗ್ಗೆ ನನ್ನನ್ನು ಪ್ರಶ್ನಿಸುತ್ತಿರುತ್ತಾರೆ.ಇಂದಿನ ಅವರ ಪ್ರಶ್ನೆ ಸಪ್ತಚಕ್ರಗಳನ್ನು ಕುರಿತದ್ದು.

ಯೋಗಶಾಸ್ತ್ರದಲ್ಲಿ ಷಟ್ ಚಕ್ರಗಳನ್ನು ಉಲ್ಲೇಖಿಸಲಾಗಿದೆ.ಮೂಲಾಧಾರ,ಸ್ವಾಧಿಷ್ಠಾನ,ಮಣಿಪೂರ,ಅನಾಹತ,ವಿಶುದ್ಧ ಮತ್ತು ಆಜ್ಞಾಚಕ್ರಗಳು ಷಟ್ ಚಕ್ರಗಳು.ಆದರೆ ಸದಾಶಿವನ ನೆಲೆಯಾಗಿರುವ ಸಹಸ್ರಾರ ಚಕ್ರವು ಏಳನೆಯ ಮತ್ತು ಮೋಕ್ಷದಾಯಕವಾದ ಮಹಾಚಕ್ರವಾಗಿದೆ.ಸಾಮಾನ್ಯಯೋಗಿಗಳು ಸಹಸ್ರಾರಭೇದನಕ್ರಮವನ್ನು ಅರಿಯರಾದ್ದರಿಂದ ಅವರು ಆಜ್ಞಾಚಕ್ರದವರೆಗಿನ ಷಡ್ಚಕ್ರಗಳಿಗೆ ಮಾತ್ರ ಸೀಮಿತರಾಗುತ್ತಾರೆ.ಯೋಗದಲ್ಲಿ ಪಳಗಿದ ಮಹಾಯೋಗಿಯು ಮಾತ್ರ ಸಹಸ್ರಾರಚಕ್ರವನ್ನು ಭೇದಿಸಬಲ್ಲ.ಸಹಸ್ರಾರಚಕ್ರಭೇದಿಸದೆ ಯೋಗವು ಪೂರ್ಣಗೊಳ್ಳದು.ಮೂಲಾಧಾರದಿಂದ ಆಜ್ಞಾಚಕ್ರದವರೆಗಿನ ಷಟ್ಚಕ್ರಗಳ ಭೇದನದಿಂದ ಅಣಿಮಾದಿ ಅಷ್ಟಸಿದ್ಧಿಗಳು ಸೇರಿದಂತೆ ಹಲವು ಅಲೌಕಿಕ ಸಿದ್ಧಿಗಳು ಪ್ತಾಪ್ರವಾಗುತ್ತವೆಯಾದರೂ ಮೋಕ್ಷವು ಲಭಿಸದು.ಮೋಕ್ಷಾಪೇಕ್ಷಿಯಾದ ಯೋಗಿಯು ಸಹಸ್ರಾರ ಚಕ್ರವನ್ನು ಭೇದಿಸಿ ಅಲ್ಲಿ ಸಹಸ್ರದಳ ಕಮಲದಲ್ಲಿ ಪವಡಿಸಿರ್ಪ ಸದಾಶಿವನನ್ನು ಕಾಣಲೇಬೇಕು.ಸಮರ್ಥಗುರುವಿನ ಸನ್ನಿಧಿಯಲ್ಲಿ ಮಾತ್ರ ಶಿಷ್ಯನು ಸಹಸ್ರಾರಭೇದನವನ್ನು ಸಾಧಿಸಬಲ್ಲ,ಸಾಮಾನ್ಯ ಗುರುಗಳಿಂದ ಅದು ಸಾಧ್ಯವಿಲ್ಲ.

ಷಟ್ಚಕ್ರಗಳು ಮತ್ತು ಮಹಾಚಕ್ರವಾದ ಸಹಸ್ರಾರ ಚಕ್ರದ ಬಗ್ಗೆ ಇಲ್ಲಿ ವಿವರಿಸುವೆ.ಚಕ್ರಗಳು ಸ್ಥೂಲದೃಷ್ಟಿಗೆ ಕಾಣುವ ಚಕ್ರಗಳಲ್ಲ.ದೇಹದಲ್ಲಿ ಕ್ರಿಯಾಶೀಲವಾಗಿರುವ ಅತಿಸೂಕ್ಷ್ಮಪ್ರಜ್ಞೆಯ ಶಕ್ತಿಸ್ತರಗಳೇ ಚಕ್ರಗಳು.ಮೇರುದಂಡ( ಬೆನ್ನುಮೂಳೆಯ) ಕೆಳತುದಿಯಿಂದ ಆರಂಭಗೊಂಡು ಮಿದುಳಿನ ಮೇಲ್ಭಾಗದವರೆಗೂ ನಿರ್ದಿಷ್ಟಸ್ಥಳಗಳಲ್ಲಿ ಅವು ಸ್ಥಾಪಿತಗೊಂಡಿವೆ.ಪ್ರತಿಯೊಂದು ಚಕ್ರ ಅಥವಾ ಶಕ್ತಿಕೇಂದ್ರದಿಂದ ಸಹಸ್ರಾರು ನಾಡಿಗಳು ಹೊರಚಾಚಿಕೊಂಡಿದ್ದು ಅವುಗಳ ಮೂಲಕ ಚೈತನ್ಯಯುಕ್ತಪ್ರಾಣವಾಯುವು ದೇಹದಾದ್ಯಂತ ಪಸರಿಸುತ್ತದೆ.ವೈದ್ಯಕೀಯ ವಿಜ್ಞಾನವು ಗುರುತಿಸಿದ ರಕ್ತನಾಳಗಳು ಅಥವಾ ನರಸಮೂಹಗಳಿಗೂ ಈ ನಾಡಿಗಳಿಗೂ ಯಾವುದೇ ಸಂಬಂಧವಿಲ್ಲ.ಇವು ಯೋಗದೃಷ್ಟಿಗೆ ಮಾತ್ರಗೋಚರಿಸುವುದರಿಂದ ಯೋಗನಾಡಿಗಳೆಂದು ಕರೆಯುತ್ತಾರೆ.ಈ ನಾಡಿಗಳಲ್ಲಿ ಹದಿನಾಲ್ಕುಮುಖ್ಯನಾಡಿಗಳಿದ್ದು ಅವು ಯೋಗಕಾರಕ ನಾಡಿಗಳು.ಅದರಲ್ಲೂ ಇಡಾ,ಪಿಂಗಳ ಮತ್ತು ಸುಷುಮ್ನಾ ನಾಡಿಗಳು ಅತಿಶಯ ಮಹತ್ವವನ್ನುಳ್ಳ ಮೂರುಮುಖ್ಯನಾಡಿಗಳು.ಈ ಮೂರರಲ್ಲಿಯೂ ಸುಷುಮ್ನಾ ನಾಡಿಯೂ ಅತ್ಯಂತಪ್ರಮುಖ ನಾಡಿಯು.

ಸುಷುಮ್ನಾ ನಾಡಿಯು ಶರೀರದ ಬೆನ್ನುಹುರಿಯ ಒಳಭಾಗದಲ್ಲಿದೆ.ಇದು ಮೂಲಾಧಾರಚಕ್ರದಿಂದ ಹಿಡಿದು ಮಿದುಳಿನಲ್ಲಿರುವ ಸಹಸ್ರದಳ ಕಮಲದವರೆಗೆ( 12 ದಳಗಳಿರುವ ಹೃತ್ಕಮಲದ ಮೂಲಕ ಹಾಯ್ದು) ಹರಡಿಕೊಂಡಿದೆ.ಸುಷುಮ್ನಾ ನಾಡಿಯ ಒಳಭಾಗದಲ್ಲಿ ‘ ವಜ್ರಿನಿ’ ಎನ್ನುವ ನಾಡಿಯೊಂದಿದ್ದು ಅದರ ಒಳಭಾಗದಲ್ಲಿ ಅತಿಸೂಕ್ಷ್ಮವಾದ ‘ ಚಿತ್ರಿನಿ’ ನಾಡಿ ಇದೆ.ಈ ಚಿತ್ರಿನಿ ನಾಡಿಯ ಅಂತರತಮಸೂಕ್ಷ್ಮನಾಡಿಯು’ ಬ್ರಹ್ಮನಾಡಿ’ ಯು.ಕುಂಡಲಿನಿಶಕ್ತಿಯು ಈ ಬ್ರಹ್ಮನಾಡಿಯಲ್ಲೇ ಸಂಚಾರಗೈವುದು.ಬ್ರಹ್ಮನಾಡಿಯೇ ಕುಂಡಲಿನಿಯ ‘ ಕುಲಮಾರ್ಗ’ ಎನ್ನುವ ರಾಜದ್ವಾರದ ಮೂಲಕ ಪ್ರವೇಶಿಸಿ ಸಹಸ್ರಾರದಳದಲ್ಲಿರುವ ಪರಮಾತ್ಮನೊಂದಿಗೆ ಐಕ್ಯವಾಗುವುದರಿಂದ ಅದನ್ನು ಬ್ರಹ್ಮದ್ವಾರ ಎಂದು ಕರೆಯಲಾಗುತ್ತದೆ.

ಮೂಲಾಧಾರ ಚಕ್ರ

ಜನನಾಂಗ ಮತ್ತು ಗುದದ್ವಾರದ ನಡುವಿನ ಚಕ್ರವೇ ಮೂಲಾಧಾರಚಕ್ರವು.ಮೂಲಾಧಾರ ಚಕ್ರವು ಕೆಂಪುಬಣ್ಣದಿಂದ ಕೂಡಿದ್ದು ನಾಲ್ಕುದಳಗಳನ್ನು ಹೊಂದಿದೆ.ವಂ,ಶಂ,ಷಂ,ಸಂ ಎನ್ನುವ ನಾಲ್ಕು ಅಕ್ಷರಗಳು ಬಂಗಾರದ ಕಾಂತಿಯಿಂದ ಹೊಳೆಯುತ್ತವೆ.ಪ್ರತಿ ಅಕ್ಷರಕ್ಕೂ ಅದರದ್ದೇ ಆದ ಮಂತ್ರ,ಶಕ್ತಿ ಹಾಗೂ ದೇವತೆ ಇರುತ್ತದೆ.ಇವೆಲ್ಲವೂ ಮೂಲಾಧಾರಚಕ್ರದ ಅಧಿದೇವತೆಯ ಸೇವೆಯಲ್ಲಿರುತ್ತವೆ.

ಮೂಲಾಧಾರ ಚಕ್ರವು ಪೃಥ್ವಿತತ್ತ್ವ ಚಕ್ರವಾಗಿದ್ದು ಚೌಕಾಕಾರದ ರೂಪವನ್ನು ಹೊಂದಿದೆ.ಅದರ ಬಣ್ಣವು ಹಳದಿಯಾಗಿದ್ದು ” ಲಂ” ಅಕ್ಷರವು ಮೂಲಾಧಾರಚಕ್ರದ ಬೀಜಾಕ್ಷರವಾಗಿದೆ. ಸೃಷ್ಟಿಕರ್ತಬ್ರಹ್ಮನು ಮೂಲಾಧಾರ ಚಕ್ರದ ಅಧಿದೇವನಾಗಿದ್ದು ಆತನ ಶಕ್ತಿಯು ‘ ಸವಿತೃ’ ನಾಮಕ ಶಕ್ತಿಯಾಗಿದೆ.ಇಲ್ಲಿ ‘ ಢಾಕಿನಿ’ ಶಕ್ತಿದೇವಿಯ ಉಪಸ್ಥಿತಿ ಇದೆ.
ಮೂಲಾಧಾರಚಕ್ರದಲ್ಲಿ ತ್ರಿಕೋನಾಕಾರದ ಯೋನಿಯಿದ್ದು ಅದನ್ನು ‘ ಶಕ್ತಿಪೀಠ’ ಎನ್ನಲಾಗುತ್ತದೆ.ಈ ತ್ರಿಕೋನದೊಳಭಾಗದಲ್ಲಿ ಚಿಗುರೆಲೆಯ ಆಕಾರದ ‘ ಸ್ವಯಂಭೂ’ ಲಿಂಗವಿದೆ.ಸ್ವಯಂಭೂ ಲಿಂಗವು ಬ್ರಹ್ಮಾವಿರ್ಭಾವಸ್ಥಿತಿಯ ಸೂಚಕವು.ಸ್ವಯಂಭೂ ಲಿಂಗವು ಕೂಡ ಹಳದಿ ಬಣ್ಣವನ್ನು ಹೊಂದಿದೆ.ಈ ಚಕ್ರದೊಳಗಿನ ಟೊಳ್ಳು ಪ್ರದೇಶದಲ್ಲಿ ಕುಂಡಲಿನೀಶಕ್ತಿಯು ಮಿಂಚಿನಂತೆ ಪ್ರಕಾಶಿಸುತ್ತ,ಪ್ರಜ್ವಲಿಸುತ್ತಿರುವ ದೀಪಗಳಸರಮಾಲೆಯಂತೆ ಕಾಣಿಸುತ್ತಾಳೆ.ಸರ್ವಸಂಕ್ಷೋಭಿಣಿಯೂ,ಜೀವಜಗದ್ರಕ್ಷಕಿಯು ಆಗಿರುವ ಕುಂಡಲಿನೀ ದೇವಿಯು ಮೂಲಾಧಾರ ಚಕ್ರದೊಳಗಿನ ಸ್ವಯಂಭೂಲಿಂಗವನ್ನು ಮೂರುವರೆಸುತ್ತು ಸುತ್ತಿಕೊಂಡಿದ್ದು ತನ್ನ ತಲೆಯಿಂದ ಬ್ರಹ್ಮದ್ವಾರವನ್ನು ಮುಚ್ಚಿಕೊಂಡು ನಿದ್ರಿಸುತ್ತಿದ್ದಾಳೆ.

ಸ್ವಾಧಿಷ್ಠಾನ ಚಕ್ರ

ಮೂಲಾಧಾರದಿಂದ ಸ್ವಲ್ಪ ಮೇಲುಭಾಗದಲ್ಲಿ ಜನನಾಂಗದ ಗ್ರಂಥಿಗಳಿರುವಲ್ಲಿ ಸ್ವಾಧಿಷ್ಟಾನ ಚಕ್ರವಿದೆ.ಕುಂಕುಮ ಬಣ್ಣದ ಸ್ವಾಧಿಷ್ಠಾನಚಕ್ರದ ಕಮಲವು ಆರು ದಳಗಳನ್ನು ಹೊಂದಿದ್ದು ಬಂ,ಭಂ,ಮಂ,ಯಂ,ರಂ ಮತ್ತು ಲಂ ಎಂಬ ಅಕ್ಷರಗಳು ಮಿಂಚಿನಂತೆ ಪ್ರಕಾಶಮಾನವಾಗಿವೆ.ಈ ಚಕ್ರದ ಪ್ರಧಾನತತ್ತ್ಚವು ಜಲತತ್ತ್ವವಾಗಿದೆ‌.” ಮಂ” ಅಕ್ಷರವು ಈ ಚಕ್ರದ ಬೀಜಾಕ್ಷರವಾಗಿದ್ದು ವಿಷ್ಣುವು ಸ್ವಾಧಿಷ್ಠಾನಚಕ್ರದ ಅಧಿದೇವತೆಯಾಗಿದ್ದಾನೆ.ಇದು ರಾಕಿಣಿದೇವಿಯ ಆವಾಸಸ್ಥಾನ.

ಮಣಿಪೂರಚಕ್ರ

ಸ್ವಾಧಿಷ್ಠಾನ ಚಕ್ರದ ಮೇಲುಭಾಗದಲ್ಲಿ ಹೊಕ್ಕಳಿನ ನಡುಭಾಗದಲ್ಲಿ ಮಣಿಪೂರಚಕ್ರವಿದೆ.ನಾಭಿಕಮಲವು ಹತ್ತುದಳಗಳಿಂದ ಕೂಡಿದ್ದು ಡಂ,ಢಂ,ಣಂ,ತಂ,ಥಂ,ದಂ,ಧಂ,ನಂ,ಪಂ ಮತ್ತು ಫಂ ಅಕ್ಷರಗಳುಳ್ಳ ದಶದಳದಳವಾಗಿದ್ದು ನೀಲಕಾಂತಿಯಿಂದ ಮಿರುಗುತ್ತದೆ.ಇದು ತೇಜಸ್ತತ್ವವನ್ನು ಹೊಂದಿದೆ.ರುದ್ರನು ಮಣಿಪೂರಚಕ್ರದ ಅಧಿದೇವತೆಯಾಗಿರುವನು.ಲಾಕಿನಿದೇವಿಯು ಈ ಚಕ್ರದ ಶಕ್ತಿದೇವಿಯಾಗಿರುವಳು.

ಅನಾಹತ ಚಕ್ರ

ಮಣಿಪುರ ಚಕ್ರದ ಮೇಲ್ಭಾಗದಲ್ಲಿ ಹೃದಯ ಪ್ರದೇಶದಲ್ಲಿರುವ ಚಕ್ರವು ಅನಾಹತಚಕ್ರವೆನಿಸಿಕೊಳ್ಳುತ್ತದೆ.ಬಂಧೂಕಪುಷ್ಪದ ಬಣ್ಣವನ್ನು ಹೊಂದಿರುವ ಅನಾಹತಕಮಲವು ಹನ್ನೆರಡು ದಳಗಳನ್ನು ಹೊಂದಿದ್ದು ಅವು ಕಂ,ಖಂ,ಗಂ,ಘಂ,ಙಂ,ಛಂ,ಝಂ,ಞಂ,ಟಂ,ಠಂ ಗಳಾಗಿದ್ದು ಅವು ಕುಂಕುಮಬಣ್ಣದಿಂದ ಹೊಳೆಯುತ್ತವೆ.’ಹಂಸ’ ನಾಮಾತ್ಮಕನಾದ ಜೀವಾತ್ಮನ ನಿವಾಸವಿದು.ಅನಾಹತಚಕ್ರವು ವಾಯುತತ್ತ್ವಾತ್ಮಕ ಚಕ್ರವಾಗಿದ್ದು ” ಯಂ” ಅಕ್ಷರವು ಈ ಚಕ್ರದ ಬೀಜಾಕ್ಷರವಾವಿದೆ.ಈಶ ಹಾಗೂ ಶಕ್ತಿಶಾಕಿನಿಯರು ಈ ಚಕ್ರದ ಅಧಿದೇವತೆಗಳಾಗಿರುವರು.ಶಕ್ತಿಯ ಅಧೋಮುಖವಾಗಿರುವ ತ್ರಿಕೋಣದಲ್ಲಿ ಶಿವನು ಇಲ್ಲಿ ‘ ಬಾಣಲಿಂಗ’ ರೂಪದಲ್ಲಿರುವನು.ಓಂಕಾರವು ಅನಾಹತಚಕ್ರದಲ್ಲಿರುವುದರಿಂದ ಇದನ್ನು ಶ್ರೇಷ್ಠಚಕ್ರವೆಂದು ಪರಿಗಣಿಸಲಾಗಿದೆ.

ವಿಶುದ್ಧ ಚಕ್ರ

ಆಜ್ಞಾಚಕ್ರದ ನಂತರ ಬೆನ್ನುಹುರಿಯ ಕೇಂದ್ರಭಾಗದಲ್ಲಿ ಗಂಟಲಿನ ಕೆಳಭಾಗದಲ್ಲಿ ವಿಶುದ್ಧಚಕ್ರವಿದೆ.ಇದು ವಾಗ್ದೇವಿಯನಿವಾಸವಾಗಿದ್ದು ‘ ಭಾರತೀಸ್ಥಾನ’ ವೆಂದು ಗುರುತಿಸಲ್ಪಟ್ಟಿದೆ.ಕಡುನೀಲಿಬಣ್ಣದ ವಿಶುದ್ಧಿಚಕ್ರವು ಹದಿನಾರುದಳಗಳನ್ನುಳ್ಳ ಕಮಲವು.ಅಂ,ಆಂ,ಇಂ,ಈಂ,ಉಂ,ಊಂ,ಋಂ,ಋಂ( ರೂಂ),ಲೃಂ,ರ್ಲೂಂ ,ಏಂ,ಐಂ,ಓಂ,ಔಂ,ಅಂ,ಅಃ ಎನ್ನುವ ಅಕ್ಷರಗಳು ಪ್ರಕಾಶಮಾನವಾಗಿವೆ.ವಿಶುದ್ಧಿಚಕ್ರದ ಒಳಭಾಗವು ಬಿಳಿಯಬಣ್ಣವಾಗಿದ್ದು ಅದರ ಆವರಣವು ಗೋಳಾಕಾರವಾಗಿದೆ.” ಹಂ” ಬೀಜಾಕ್ಷರವು ಬಿಳಿಯ ಆನೆಯ ಮೇಲೆ ವಿರಾಜಮಾನವಾಗಿದೆ.ಶರೀರದ ಅರ್ಧಭಾಗವು ಶ್ವೇತವರ್ಣವನ್ನೂ ಇನ್ನರ್ಧ ಹೇಮವರ್ಣವನ್ನೂ ಹೊಂದಿರುವ ಗೌರಿಯನ್ನೊಡಗೂಡಿರುವ ಸದಾಶಿವನ ಅರ್ಧನಾರೀಶ್ವರ ರೂಪವು ವಿಶುದ್ಧಚಕ್ರದಲ್ಲಿ ಕಂಗೊಳಿಸುವುದು.ಶಾಕಿನಿಶಕ್ತಿಯು ಈಚಕ್ರದ ಶಕ್ತಿದೇವಿಯು.ಯೋಗಿಗೆ ತ್ರಿಕಾಲಜ್ಞಾನದರ್ಶನವು ವಿಶುದ್ಧಚಕ್ರದಲ್ಲಿಯೇ ಉಂಟಾಗುತ್ತದೆ.

ಆಜ್ಞಾಚಕ್ರ

ವಿಶುದ್ಧಚಕ್ರದ ಮೇಲಿನ ಚಕ್ರವೇ ಆಜ್ಞಾಚಕ್ರವು.ಊರ್ಧಲೋಕದಿಂದ ಬರುವ ಸದ್ಗುರುರೂಪನಾದ ಈಶ್ವರನ ಆಜ್ಞೆಯನ್ನು ಸ್ವೀಕರಿಸುವುದರಿಂದ ಇದನ್ನು ‘ ಆಜ್ಞಾಚಕ್ರ’ ವೆನ್ನುತ್ತಾರೆ.ಹಣೆಯ ನಡುವೆ ಎರಡು ಭ್ರೂಗಳ ನಡುವೆ ಆಜ್ಞಾಚಕ್ರವಿದೆ.ಇದು ಬಿಳಿಯತಾವರೆ ಬಣ್ಣದ ಎರಡು ದಳಗಳನ್ನು ಹೊಂದಿದ್ದು ‘ ಹಂ’ ಮತ್ತು ‘ ಕ್ಷಂ’ ಅಕ್ಷರಗಳು ಆಜ್ಞಾಚಕ್ರದ ಬೀಜಾಕ್ಷರಗಳಾಗಿವೆ.ಈ ಚಕ್ರವು ಮನಸ್ ತತ್ತ್ವದ ಚಕ್ರವು.ಹಂಸರೂಪವಾದ ಪರಶಿವನೂ ಮತ್ತು ಹಾಕಿನೀಶಕ್ತಿಯರು ಆಜ್ಞಾಚಕ್ರದಲ್ಲಿರುವರು.ಇಲ್ಲಿ
ಯೋನಿರೂಪವಾದ,ಅಧೋಮುಖ ತ್ರಿಕೋಣದ ಒಳಗಿನ ತಾವರೆಯ ಅಂಡಾಶಯದ ಆವರಣದಲ್ಲಿ ಶಿವನು ‘ ಈತರಲಿಂಗ’ ರೂಪದಲ್ಲಿ ಪ್ರಜ್ವಲಿಸುತ್ತಿದ್ದಾನೆ.ಷಟ್ಚಕ್ರಗಳಲ್ಲಿ ಸ್ವಯಂಭೂ ಲಿಂಗ,ಬಾಣಲಿಂಗ ಮತ್ತು ಈತರಲಿಂಗ ಎನ್ನುವ ಮೂರುಲಿಂಗಗಳ ದರ್ಶನವಾಗುತ್ತದೆ.ಮೂಲಾಧಾರಚಕ್ರದಲ್ಲಿ ಸ್ವಯಂಭೂಲಿಂಗವೂ ಅನಾಹತಚಕ್ರದಲ್ಲಿ ಬಾಣಲಿಂಗವೂ ಮತ್ತು ಆಜ್ಞಾಚಕ್ರದಲ್ಲಿ ಈತರಲಿಂಗವೂ ಇದ್ದು,ಯೋಗಿಯು ತನ್ನ ಎಚ್ಚೆತ್ತಕುಂಡಲಿನಿಶಕ್ತಿಯ ಬಲದಿಂದ ಆ ಮೂರು ಮಹಾಲಿಂಗಗಳನ್ನು ದರ್ಶಿಸುತ್ತಾನೆ.

ಇಲ್ಲಿಂದ ಮೇಲಿರುವ ಕಾರಣಶರೀರ ಭೂಮಿಕೆಯೇ ಸಹಸ್ರಾರ ಚಕ್ರದ ಪ್ರಾರಂಭಸ್ಥಳವಾಗಿದ್ದು.ಇದು ಆಧಾರರಹಿತ ಪ್ರದೇಶವಾಗಿರುವುದರಿಂದ ಇದನ್ನು ‘ ನಿರಾಲಂಬಪುರಿ’ ಎನ್ನಲಾಗುತ್ತಿದ್ದು ನಾದ ಬಿಂದ್ವಾತ್ಮಕವಾದ ಈ ನಿರಾಲಂಬಪುರಿಯಲ್ಲಿ ‘ಪರಮಹಂಸಪೀಠ’ ವಿದ್ದು ಇದು ಗುರುಪಾದುಕಾಪೀಠವಾಗಿ ಸೇವಿಸಲ್ಪಡುತ್ತದೆ.ಇಲ್ಲಿ ಹಂಸಶರೀರಮಯಿಯಾಗಿರುವ ಜ್ಞಾನಮಯವಾಗಿರುವ ಗುರುವು ಪರಮಹಂಸನಾಗಿ, ಆಗಮ ನಿಗಮಗಳೆಂಬ ರೆಕ್ಕೆಗಳು,ಶಿವಶಕ್ತಿಯರೆಂಬ ಪಾದಗಳುಳ್ಳಳ್ಳವನಾದ ಹಂಸಪರಮಾತ್ಮನಿಗೆ ಕೊಕ್ಕೇ ಪ್ರಣವವಾಗಿದ್ದು ಅದರ ಕಂಠ ಪ್ರದೇಶ ಹಾಗೂ ಕಣ್ಣುಗಳು ಕಾಮಕಲಾರೂಪಗಳಾಗಿರುತ್ತವೆ.

ಸಹಸ್ರಾರ ಚಕ್ರ

ಇಲ್ಲಿಂದ ಮೇಲೆ ಇರುವ ಸಹಸ್ರದಳಗಳ ಕಮಲವೇ ‘ ಸಹಸ್ರಾರ ಚಕ್ರ’ ವಾಗಿದೆ.ಈ ಚಕ್ರದ ಪ್ರತಿದಳವೂ ವರ್ಣಮಾಲೆಯ ಎಲ್ಲ ಅಕ್ಷರಗಳನ್ನು ಹೊಂದಿದ್ದು ಇದು ಪರಶಿವನ ಆವಾಸಸ್ಥಾನವಾಗಿದೆ.ಎಲ್ಲ ಚಕ್ರಗಳ ಮೇಲುಭಾಗದಲ್ಲಿ ಬ್ರಹ್ಮರಂಧ್ರವಿದ್ದು,ಸಹಸ್ರದಳ ಕಮಲವು ಅಲ್ಲಿಂದ ತಲೆಕೆಳಗಾಗಿ ತೂಗಾಡುತ್ತಿದೆ.ಪ್ರತಿಯೊಂದೂ ಬ್ರಹ್ಮಲೋಕದಿಂದಲೇ ಉದ್ಭವಿಸುತ್ತಿದ್ದು ಇಲ್ಲಿ ಮುಂದೆ ಅಸ್ತಿತ್ವಕ್ಕೆ ಬರುವುದೆಲ್ಲವೂ ಅಂತಸ್ಥವಾಗಿರುತ್ತವೆ.

ಸಹಸ್ರಾರವು ಸುಷುಮ್ನಾ ನಾಡಿಯ ಮೇಲುತುದಿಯಲ್ಲಿದ್ದು ಇದು ಶ್ವೇತವರ್ಣವನ್ನು ಹೊಂದಿದೆ.’ ಅ’ ದಿಂದ ‘ ಳ’ ವರೆಗಿನ ಐವತ್ತು ಅಕ್ಷರಗಳು ಈ ಪದ್ಮದ ದಳಗಳ ಸುತ್ತಲೂ ಇಪ್ಪತ್ತು ಸುತ್ತು ಹಾಕಿರುತ್ತವೆ.ಇದರ ಅಂಡಾಶಯದ ಮೇಲೆ ಹಂಸವಿದ್ದು ಅದರ ಮೇಲೆ ಪರಶಿವನಾದ ಗುರುವೇ ಇರುತ್ತಾನೆ.ಈ ಗುರುಸ್ಥಾನದ ಮೇಲುಭಾಗದಲ್ಲಿ ಸೂರ್ಯ ಹಾಗೂ ಚಂದ್ರಮಂಡಲಗಳಿದ್ದು ಅದಕ್ಕೂ ಮೇಲೆ ಮಹಾವಾಯು ಇರುವುದು.ಈ ಮಹಾವಾಯುವಿನಲ್ಲಿ ‘ಬ್ರಹ್ಮರಂಧ್ರ’ ವಿರುತ್ತದೆ.ಮಹಾವಾಯುವಿನ ಮೇಲೆ ‘ ಮಹಾಶಂಖಿನಿ’ ಯು ಇರುತ್ತದೆ.ಚಂದ್ರಮಂಡಲದಲ್ಲಿ ಮಿಂಚಿನೋಪಾದಿಯಲ್ಲಿ ಹೊಳೆಯುವ ತ್ರಿಕೋಣವಿದ್ದು ಅದರೊಳಗೆ ಚಂದ್ರನ ಹದಿನಾರನೇ ಕಲೆ( ಅಮಾಕಲಾ) ಯು ಕೆಂಪುಬಣ್ಣದಿಂದ ಕೂಡಿದ್ದು ಅದು ಒಂದು ತಾವರೆಯ ನಾರಿನ ನೂರನೇ ಒಂದು ಭಾಗದಷ್ಟು ನವಿರಾಗಿದ್ದು,ಅಧೋಮುಖವಾಗಿ ಬಾಯಿ ತೆರೆದಿರುತ್ತದೆ.ಈ ಕಲೆಯ ಮಡಿಲಲ್ಲಿ ‘ ನಿರ್ವಾಣಕಲೆ’ ಯಿದ್ದು,ಅದು ಒಂದು ಕೂದಲಿನ ಸಾವಿರದ ಒಂದು ಭಾಗದಷ್ಟು ಸೂಕ್ಷ್ಮವಾಗಿರುವುದು.ಇದು ಕೂಡ ಕೆಂಪುಬಣ್ಣದಿಂದೊಡಗೂಡಿ ಅಧೋಮುಖವಾಗಿ ಬಾಯ್ದೆರೆದಿರುತ್ತದೆ.ಈ ನಿರ್ವಾಣ ಕಲೆಯ ಕೆಳಗೆ ಅವ್ಯಕ್ತನಾದರೂಪವಾದ ‘ ನಿಬೋಧಿಕಾ’ ಎನ್ನುವ ಅಗ್ನಿಯೊಂದಿದೆ.ನಿರ್ವಾಣಕಲೆಯ ಅಂತರ್ಭಾಗದಲ್ಲಿ ಶಿವ- ಶಕ್ತಿ ರೂಪವಾದ ‘ ಪರಾಬಿಂದು’ ಇರುವುದು.ಈ ಪರಾಬಿಂದುವಿನ ಶಕ್ತಿಯನ್ನು ‘ ನಿರ್ವಾಣಶಕ್ತಿ’ ಎಂದು ಕರೆಯುತ್ತಿದ್ದು ಅದು ತೇಜಸ್ಸಾಗಿ ಹಂಸರೂಪದಲ್ಲಿರುತ್ತದೆ.ಇದು ಒಂದು ಕೂದಲಿನ ತುದಿಯ ಹತ್ತುಕೋಟಿಯ ಒಂದು ಭಾಗದಷ್ಟು ಸೂಕ್ಷ್ಮಾತಿಸೂಕ್ಷ್ಮವಾಗಿರುತ್ತದೆ.ಈ ಹಂಸವೇ ಜೀವವಾಗಿರುವುದು.ಈ ಬಿಂದುವಿನ ಒಳಗೆ ಶೂನ್ಯವಿರುತ್ತಿದ್ದು ಅದುವೇ ನಿರಾಕರಪರಶಿವನ ನೆಲೆಯಾದ ಮಹಾಶೂನ್ಯ ಇಲ್ಲವೆ ಬ್ರಹ್ಮಪದವೆನಿಸಿದೆ.

About The Author