ಶಿವಚಿಂತನೆ : ಸಪ್ತವಿಧ ಶೈವಗಳು : ಮುಕ್ಕಣ್ಣ ಕರಿಗಾರ

ನನ್ನ ಹಳೆಯ ವಿದ್ಯಾರ್ಥಿ– ಶಿಷ್ಯರೂ ನಮ್ಮ‌ ಮಹಾಶೈವ ಧರ್ಮಪೀಠದ ನಿಷ್ಠಾವಂತ ಅನುಯಾಯಿಗಳೂ ಆಗಿರುವ ಆಂಜನೇಯ ನಾಯಕ್ ಅವರು ಸಪ್ತವಿಧಶೈವಗಳ ಬಗ್ಗೆ ವಿವರಿಸುವಂತೆ ಕೇಳಿದ್ದಾರೆ.ಅವರ ಪ್ರಶ್ನೆಗೆ ಉತ್ತರ ರೂಪವಾಗಿ ಸಂಕ್ಷಿಪ್ತವಾಗಿ ಸಪ್ತವಿಧ ಶೈವಗಳ ಬಗ್ಗೆ ಇಲ್ಲಿ ವಿವರಿಸುತ್ತಿದ್ದೇನೆ.

ಶೈವಧರ್ಮವು ಭಾರತದ ಮೂಲಧರ್ಮ; ಶೈವ ಸಂಸ್ಕೃತಿಯು ಭಾರತದ ಮೂಲ ಸಂಸ್ಕೃತಿ.ವೇದಪೂರ್ವ ಕಾಲದಿಂದಲೂ ಭಾರತೀಯರು ಶಿವನನ್ನು ಪೂಜಿಸುತ್ತಿದ್ದರು,ಶೈವಧರ್ಮ ಅಸ್ತಿತ್ವದಲ್ಲಿತ್ತು‌.ವೇದದಲ್ಲಿ ಶಿವನನ್ನು ಕುರಿತ ಹಲವು ಮಂತ್ರ,ಸೂಕ್ತಗಳಿವೆ.ಪ್ರಸಿದ್ಧವಾದ ರುದ್ರಾಧ್ಯಾಯವು ವೇದದಲ್ಲಿದೆ.’ ‘ನಮಃಶಿವಾಯ’ ಎನ್ನುವ ಶಿವಪಂಚಾಕ್ಷರಿ ಮಂತ್ರ ಮತ್ತು ‘ ಓಂ ನಮೋಭಗವತೇ ರುದ್ರಾಯ’ ಎನ್ನುವ ರುದ್ರಮಂತ್ರ ಈ ಮಂತ್ರಗಳೆರಡು ರುದ್ರಾಧ್ಯಾಯದಲ್ಲಿವೆ. ವೇದಕಾಲದ ಋಷಿಗಳು ಶಿವ ಮತ್ತು ರುದ್ರರು ಒಬ್ಬನೇ ಪರಮಾತ್ಮನ ಎರಡು ಅವಸ್ಥೆಗಳು ಎಂದು ಪರಿಭಾವಸಿದ್ದರು.ಜೊತೆಗೆ ಗಾಯತ್ರಿಯಷ್ಟೇ ಪ್ರಸಿದ್ಧವಾದ ತ್ರ್ಯಯಂಬಕ ಮಂತ್ರವೂ ವೇದದಲ್ಲಿದೆ.ವೇದಕಾಲದ ಋಷಿಗಳು ಶಿವನನ್ನು ಪೂಜಿಸುತ್ತಿದ್ದರು,ಧ್ಯಾನಿಸುತ್ತಿದ್ದರು.ಇದರಿಂದ ವೇದಗಳ ಪೂರ್ವಕಾಲದಿಂದಲೂ ಶಿವನ ಆರಾಧನೆರೂಢಿಯಲ್ಲಿತ್ತು ಎಂದು ಅರ್ಥೈಸಿಕೊಳ್ಳಬಹುದು.

ಮೊದಲು ಒಂದೇ ಇದ್ದ ವೇದವನ್ನು ಮಹರ್ಷಿ ವ್ಯಾಸರು ಋಗ್ವೇದ,ಯಜುರ್ವೇದ,ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಂಗಡಿಸಿ ‘ ವೇದವ್ಯಾಸರು’ ಎನ್ನಿಸಿಕೊಂಡರು.ವೇದದ ಅರ್ಥ ಜನಸಾಮಾನ್ಯರಿಗೆ ಎಟುಕುತ್ತಿರಲಿಲ್ಲವಾದ್ದರಿಂದ ವೇದದ ಅರ್ಥಪ್ರತಿಪಾದನೆಗೆ ಋಷಿಗಳು ತಮ್ಮ ಧ್ಯಾನ,ತಪಸ್ಸಿನಿಂದ ಸಾಕ್ಷಾತ್ಕರಿಸಿಕೊಂಡ ಸತ್ಯವನ್ನು ಉಪನಿಷತ್ತುಗಳು ಎನ್ನುವ ಬೋಧೆರೂಪದಲ್ಲಿ ಬರೆದಿಟ್ಟರು,ಅವರ ಶಿಷ್ಯರುಗಳು ಅವುಗಳನ್ನು ಸಂಗ್ರಹಿಸಿದರು.ಮೊದಲು ಹತ್ತು ಉಪನಿಷತ್ತುಗಳಿದ್ದು ಅವು ‘ ದಶೋಪನಿಷತ್ತುಗಳು’ ಎಂದು ಪ್ರಸಿದ್ಧವಾಗಿವೆ.ಭಗವದ್ಗೀತೆಯು ಈ ದಶೋಪನಿಷತ್ತುಗಳ ಸಾರರೂಪ ಬೋಧೆ,ಕೃತಿ,ಗೀತೆ.ಆನಂತರದ ಕಾಲದಲ್ಲಿ ಉಪನಿಷತ್ತುಗಳ ಸಂಖ್ಯೆ ಹೆಚ್ಚುತ್ತ ಒಂದು ನೂರಾ ಎಂಟು ಉಪನಿಷತ್ತುಗಳಾದವು.

ವೇದದ ಅರ್ಥಪ್ರತಿಪಾದನೆಗಾಗಿ ಉಪನಿಷತ್ತುಗಳು ಹುಟ್ಟಿದಂತೆ ಶಿವತತ್ತ್ವಾರ್ಥನಿರೂಪಣೆಗೆ ‘ ಆಗಮಗಳು’ ಹುಟ್ಟಿದವು.’ ಆಗತಂ ಗತಂ ಮತಂ ಚ ಆಗಮಃ’ ಎನ್ನುವದು ‘ಆಗಮ’ ಶಬ್ದದ ನಿರ್ವಚನವು ‘ ಆ’ ಎಂದರೆ ‘ ಆಗತಂ’ ಬಂದದ್ದು, ‘ ಗ’ ಎಂದರೆ ‘ ಗತಂ’– ತಲುಪಿದ್ದು, ‘ ಮ’ ಎಂದರೆ ‘ ಮತಂ’ ಎಂದರೆ ಸಮ್ಮತವಾದುದು,ಅನುಷ್ಠಾನಿಸಿದುದು ಎಂದರ್ಥವಾಗುತ್ತದೆ.ಆಗಮಗಳು ಆಪ್ತವಾಕ್ಯಗಳು.ಜೀವರುಗಳಿಗೆ ಪರಮ ಆಪ್ತನಾದ ಶಿವನ ವಾಕ್ಯಗಳು.ಗಿರಿಜೆಗಾಗಿ ಉಪದೇಶಿಸಲ್ಪಟ್ಟ ಆಗಮಗಳು ವಾಸುದೇವನಿಂದ ಆಚರಿಸಲ್ಪಟ್ಟವು ಇಲ್ಲವೆ ಅನುಷ್ಠಾನ ಮಾಡಲ್ಪಟ್ಟವು.
ಆಗಮದ ವ್ಯಾಖ್ಯೆಯೂ ಅದನ್ನೇ ಹೇಳುತ್ತದೆ ;

ಆಗತಂ ಪಂಚವಕ್ತ್ರಾತು ಗತಂ ಚ ಗಿರಿಜಾನನೇ
ಮತಂ ಚ ವಾಸುದೇವಸ್ಯ ತಸ್ಮಾದಾಗಮ ಉಚ್ಯತೇ
ಶಿವನ ಪಂಚಮುಖಗಳಿಂದ ಆಗತ( ಬಂದದ್ದು) ಗಿರಿಜೆಯಲ್ಲಿ ‘ ಗತ’ ( ಸ್ವೀಕರಿಸಲ್ಪಟ್ಟಿದ್ದು)’ ಮ’ ಕಾರವು ವಾಸುದೇವನಿಗೆ ಸಮ್ಮತವಾದುದು.ಪರಮಾತ್ಮನಿಂದ ಪಾರ್ವತಿಗೆ ಉಪದೇಶಿಸಲ್ಪಟ್ಟು ವಾಸುದೇವನಿಂದ ಅನುಷ್ಠಾನಿಸಲ್ಪಟ್ಟ ಪರಂಪರಾನುಗತ ಜ್ಞಾನವೇ ಆಗಮ.ಭಾಸ್ಕರೀಯಲ್ಲಿ ಆಗಮದ ಸರಳ ವ್ಯಾಖ್ಯೆ ;

” ಆಗತಂ ಶಿವವಕ್ತ್ರಾತು ಗತಂ ಚ ಗಿರಿಜಾಮುಖೇ
ಮತಂ ಶ್ರೀ ವಾಸುದೇವಸ್ಯ ಆಗಮಸ್ತೇನ ಕೀರ್ತಿತಃ
‘ ಶಿವನ ಮುಖಾರವಿಂದದಿಂದ ಹೊರಹೊಮ್ಮಿ ಪಾರ್ವತಿಗೆ ಹೇಳಲ್ಪಟ್ಟಿದ್ದು ಮತ್ತು ವಾಸುದೇವನಿಗೆ ಸಮ್ಮತವಾದದ್ದು ಆಗಮವೆಂದು ಕರೆಯಲ್ಪಡುವುದು.

ಶಿವತತ್ತ್ವ ನಿರೂಪಣೆಯ ಆಗಮಗಳನ್ನು ಶಿವಾಗಮಗಳು ಎಂದು ಕರೆಯುತ್ತಿದ್ದು ಅವು ಕಾಮಿಕಾದಿ ವಾತುಲಾಂತ್ಯ ಇಪ್ಪತ್ತೆಂಟು ಇವೆ.೨೮ ಶಿವಾಗಮಗಳು ;
೧. ಕಾಮಿಕ.೨. ಯೋಗಜ.೩. ಅಚಿಂತ್ಯ.೪. ಕಾರಣ.೫. ಅಜಿತ.೬. ದೀಪ್ತ.೭. ಸೂಕ್ಷ್ಮ.೮. ಸಹಸ್ರ.೯. ಅಂಶುಮಾನ್.೧೦. ಸುಪ್ರಭೇದ.೧೧. ವಿಜಯ.೧೨. ನಿಶ್ವಾಸ.೧೩. ಸ್ವಾಯಂಭುವ.೧೪. ಅನಲ.೧೫. ವೀರ.೧೬. ರೌರವ.೧೭. ಮಕುಟ.೧೮. ವಿಮಲ.೧೯. ಚಂದ್ರಜ್ಞಾನ.೨೦. ಬಿಂಬ.೨೧. ಲಲಿತ.೨೨. ಪ್ರೋದ್ಗೀತ.೨೩. ಸಿದ್ಧ.೨೪. ಸಂತಾನ.೨೫. ಸರ್ವೋತ್ತರ.೨೬. ಪಾರಮೇಶ್ವರ.೨೭. ಕಿರಣ.೨೮. ವಾತುಲ.
ನಿರಾಕಾರ ಪರಬ್ರಹ್ಮನಾಗಿರುವ ಪರಶಿವನು ಜಗತ್ ಕಲ್ಯಾಣ ಕಾರಣದಿಂದ ಪಂಚಬ್ರಹ್ಮಮಂತ್ರಾತ್ಮಕ ಸದಾಶಿವರೂಪಧರಿಸಿ ಸದ್ಯೋಜಾತ,ವಾಮದೇವ,ಅಘೋರ,ತತ್ಪುರುಷ ಮತ್ತು ಈಶಾನ ಎಂಬ ಪಂಚಮುಖಗಳನ್ನು ತಳೆದು ಈ ಪಂಚಮುಖಗಳಿಂದ ೨೮ ಆಗಮಗಳಲ್ಲಿ ತನ್ನ ವಿಮಲಜ್ಞಾನವನ್ನು ಪ್ರವಹಿಸಿದನು.ಕಾಮಿಕ,ಯೋಗಜ,ಚಿಂತ್ಯ,ಕಾರಣ,ಅಜಿತ ಎನ್ನುವ ಐದು ಆಗಮಗಳು ಸದ್ಯೋಜಾತ ಮುಖದಿಂದಲೂ,ದೀಪ್ತ,ಸೂಕ್ಷ್ಮ,ಸಹಸ್ರ,ಅಂಶುಮಾನ್,ಸುಪ್ರಭೇದ ಎನ್ನುವ ಐದು ಆಗಮಗಳು ವಾಮದೇವ ಮುಖದಿಂದಲೂ,ವಿಜಯ,ನಿಶ್ವಾಸ,ಸ್ವಾಯಂಭುವ,ಅನಲ,ವೀರ ಎನ್ನುವ ಐದು ಆಗಮಗಳು ಅಘೋರಮುಖದಿಂದಲೂ,ರೌರವ,ಮಕುಟ,ವಿಮಲ,ಚಂದ್ರಜ್ಞಾನ,ಬಿಂಬ ಎನ್ನುವ ಐದು ಆಗಮಗಳು ತತ್ಪುರುಷ ಮುಖದಿಂದಲೂ,ಪ್ರೋದ್ಗೀತ,ಲಲಿತ,ಸಿದ್ಧ,ಸಂತಾನ,ಸರ್ವೋತ್ತರ,ಪಾರಮೇಶ್ವರ,ಕಿರಣ,ವಾತುಲ ಎಂಬ ಎಂಟು ಆಗಮಗಳು ಈಶಾನ ಮುಖದಿಂದಲೂ ಪ್ರಕಟಗೊಂಡವು.

ಈ ಶಿವಾಗಮಗಳಲ್ಲಿ ಪಾರಮೇಶ್ವರಾಗಮ ಮತ್ತು ಸೂಕ್ಷ್ಮಾಗಮಗಳಲ್ಲಿ ಸಪ್ತವಿಧ ಶೈವದ ವಿವರಣೆ ಬಂದಿದೆ.ಪಾರಮೇಶ್ವರಾಗಮದಂತೆ
ಸಪ್ತವಿಧ ಶೈವಮ್

ಅಥ ವಕ್ಷ್ಯೇ ಗಿರಿಸುತೇ ಮತಂ ಮಮ ಮಹತ್ತರಮ್ /
ಶೈವಂ ಸಪ್ತವಿಧಂ ಪುಣ್ಯಂ ವೀರಶೈವವಾದಿಭೇದತಃ//
ವೀರಶೈವಂ ತಥಾನಾದಿಶೈವಮಾದಿಪದಂ ತತಃ/
ಅನುಶೈವಂ ಮಹಾಶೈವಂ ಯೋಗಶೈವಂ ತು ಷಷ್ಠಕಮ್ //
ಸಪ್ತಮಂ ಜ್ಞಾನಶೈವಾಖ್ಯಂ ತತ್ರ ಸರ್ವೋತ್ತಮೋತ್ತಮಮ್/
ವೀರಶೈವಮಿತೀಶಾನಿ ತದಂಗಾನೀತರಾಣಿ //
‘ ಪಾರ್ವತಿ,ನನ್ನ ಅತಿಶ್ರೇಷ್ಠವಾದ ಮತದ ( ಶೈವಮತದ) ಬಗ್ಗೆ ಹೇಳುತ್ತೇನೆ.ಶೈವವು ಪುಣ್ಯಮಯವಾದ ವೀರಶೈವವೇ ಮೊದಲಾದ ಭೇದಗಳಿಂದ ಏಳುಬಗೆ: ವೀರಶೈವ,ಅನಾದಿಶೈವ,ಆದಿಶೈವ,ಅನುಶೈವ,ಮಹಾಶೈವ,ಯೋಗಶೈವ.ಆರನೆಯದು ಜ್ಞಾನಶೈವ ಏಳನೆಯದು ವೀರಶೈವ’

ಸೂಕ್ಷ್ಮಾಗಮ ಕ್ರಿಯಾಪಾದದಲ್ಲಿರುವ ಸಪ್ತವಿಧಶೈವಗಳು — ಅನಾದಿಶೈವ,ಆದಿಶೈವ,ಮಹಾಶೈವ,ಅನುಶೈವ,ಅವಾಂತರಶೈವ,ಪ್ರವರಶೈವ ಮತ್ತು ಅಂತ್ಯಶೈವ.ಇವು ಸಪ್ತವಿಧ ಶೈವಗಳು.

About The Author