ಯುವನಿಧಿ’ ಪಾಕೆಟ್ ಮನಿ ಆಗದೆ ಬದುಕಿನ ಗ್ಯಾರಂಟಿ ಆಗಲಿ : 

ಯುವನಿಧಿ’ ಪಾಕೆಟ್ ಮನಿ ಆಗದೆ ಬದುಕಿನ ಗ್ಯಾರಂಟಿ ಆಗಲಿ : ಮುಕ್ಕಣ್ಣ ಕರಿಗಾರ

ಕರ್ನಾಟಕ ಸರಕಾರ ತನ್ನ ಐದನೇ ಗ್ಯಾರಂಟಿಯಾದ ‘ಯುವನಿಧಿ’ ಯನ್ನು ಜನೆವರಿ 01,2024 ರಿಂದ ಅನುಷ್ಠಾನಗೊಳಿಸಲು ನಿರ್ಧರಿಸಿದೆ.ಯುವನಿಧಿಯು ಪದವಿಪಡೆದ ನಿರುದ್ಯೋಗಿಗಳಿಗೆ ಪ್ರತಿತಿಂಗಳು ₹3000 ಮತ್ತು ಡಿಪ್ಲೊಮಾ ಪದವಿಧರರಿಗೆ 1500 ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಿದೆ.ಇದು ನಿರುದ್ಯೋಗಿ ಉದ್ಯೋಗಿಗಳಿಗೆ ಒಂದಿಷ್ಟು ತಾತ್ಕಾಲಿಕ ಪರಿಹಾರ ನೀಡಿದಂತಾಗುತ್ತದೆಯೇ ಹೊರತು ಅವರ ಬದುಕುಗಳನ್ನು ಕಟ್ಟಿಕೊಳ್ಳಲು ಆಸರೆ ಆಗುವುದಿಲ್ಲ.ಅಲ್ಲದೆ ಕೇವಲ ಎರಡು ಮೂರು ವರ್ಷಗಳ ಹಿಂದೆ ಪದವಿ,ಡಿಪ್ಲೋಮಾ ಮುಗಿಸಿದವರಿಗೆ ಮಾತ್ರ ಯುವನಿಧಿಯ ಹಣವರ್ಗಾವಣೆಯ ಪ್ರಯೋಜನ ತಟ್ಟಲಿದ್ದು ಅದಕ್ಕೂ ಹಿಂದಿನ ವರ್ಷಗಳ ಹಿಂದಿನ ಪದವಿಧರರುಗಳು,ಡಿಪ್ಲೊಮಾ ಪಡೆದ ನಿರುದ್ಯೋಗಿಗಳ ಈ ತಾತ್ಕಾಲಿಕ ಪರಿಹಾರವೂ ದೊರೆಯದು.

ಸರಕಾರವು’ ಯುವನಿಧಿ’ ಗ್ಯಾರಂಟಿಯ ಬಗ್ಗೆ ಮರುಚಿಂತನೆ ನಡೆಸುವ ಅಗತ್ಯವಿದೆ. ನಿರುದ್ಯೋಗಿ ಯುವಕರನ್ನು ಓಟ್ ಬ್ಯಾಂಕ್ ಆಗಿ ಮಾತ್ರ ನೋಡದೆ ಅವರಗಳ ಬಾಳು ಕಟ್ಟಿಕೊಡುವತ್ತ ಯೋಚಿಸಬೇಕಿದೆ.ಈಗ ಕೊಡುವ ₹3000 ಮತ್ತು ₹1500 ಗಳ ಹಣ ನಿರುದ್ಯೋಗಿ ಯುವಕ ಯುವತಿಯರ ‘ ಪಾಕೆಟ್ ಮನಿ’ ಆಗಬಹುದೇ ಹೊರತು ಅವರ ಬದುಕಿಗೆ ಭದ್ರತೆ ಒದಗಿಸದು.ಸರಕಾರವು ಕೊಡುವ ಈ ಅಲ್ಪಹಣದಿಂದ ಯುವಕರು ದುಶ್ಚಟಗಳ ದಾಸರಾಗುವ ಸಾಧ್ಯತೆಯೂ ಇದೆ.ಒಂದೆರಡು ವರ್ಷಗಳ ನಿರುದ್ಯೋಗಭತ್ತೆಯನ್ನು ನೀಡಿ ನಿರುದ್ಯೋಗ ಯುವಕ ಯುವತಿಯರನ್ನು ಮೈಗಳ್ಳರು ಇಲ್ಲವೆ ಪರಾವಲಂಬಿಗಳನ್ನಾಗಿ ಮಾಡದೆ ಅವರುಗಳು ಸ್ವಾವಲಂಬಿಗಳನ್ನಾಗಿಸುವತ್ತ ಚಿಂತಿಸಬೇಕು.ಕೇಂದ್ರ ಸರಕಾರದ ಮಹಾತ್ಮಗಾಂಧಿ ನರೆಗಾಯೋಜನೆಯು ದೇಶದ ಲಕ್ಷಾಂತರ ಯುವಕ ಯುವತಿಯರಿಗೆ ಅವರವರ ಊರು ,ತಾಲೂಕುಗಳಲ್ಲಿಯೇ ‘ಒಂದರ್ಥದ ಖಾಯಂ’ ಉದ್ಯೋಗ ಕಲ್ಪಿಸಿದೆ.ಮಹಾತ್ಮಗಾಂಧಿ ನರೆಗಾ ಯೋಜನೆಯು ಕೇಂದ್ರಕಾಯ್ದೆಯಾಗಿದ್ದರಿಂದ ಅದು ನಿರಂತರವಾಗಿ ಮುಂದುವರೆಯುತ್ತದೆ.ನರೆಗಾ ಯೋಜನೆಯಡಿ ತಾಂತ್ರಿಕ,ಸಾಮಾಜಿಕ ಸಮಾಲೋಚಕರುಗಳಾಗಿರುವ ಯುವಕ ಯುವತಿಯರು ಖಾಯಂ ನೌಕರರಾಗಿಯೇ ಮುಂದುವರೆಯಬಹುದಾಗಿದೆ ಅಭದ್ರತೆ ಮುಕ್ತರಾಗಿ.ಅವರ ನಡತೆ ಮತ್ತು ಅಪ್ರಾಣಿಕತೆಯ ಆಧಾರದಲ್ಲಷ್ಟೇ ಅವರ ಸೇವೆಯನ್ನು ಮೊಟಕುಗೊಳಿಸಲವಕಾಶವಿದೆ.ಅವರು ಖಾಯಂ ಉದ್ಯೋಗಿಗಳಲ್ಲವಾದರೂ ಖಾಯಂ ಸಮಾಲೋಚಕರುಗಳಾಗಿ ಮುಂದುವರೆಯಬಹುದು.

ಕರ್ನಾಟಕ ಸರಕಾರವು ಎಂಜಿನರೆಗಾ ಯೋಜನೆಯ ಮಾದರಿಯಲ್ಲಿ ರಾಜ್ಯದ ಯುವಕಯುವತಿಯರಿಗಾಗಿ ಯಾವುದಾದರೂ ಒಂದು ಯೋಜನೆಯನ್ನು ರೂಪಿಸಿ,ಅವರುಗಳು ಬಾಳು ಕಟ್ಟಿಕೊಳ್ಳಲು ನೆರವಾಗಬೇಕು.ಮನೆಯ ಒಡತಿಯರಿಗೆ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳ ₹2000 ಗಳನ್ನು ನೀಡುವುದಕ್ಕೂ,ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿಸುವುದಕ್ಕೂ ಮತ್ತು ನಿರುದ್ಯೋಗಿ ಯುವಕ ಯುವತಿಯರಿಗೆ ಅಲ್ಪಪ್ರಮಾಣದ ನಿರುದ್ಯೋಗ ಭತ್ತೆ ಕೊಡುವುದಕ್ಕೂ ವ್ಯತ್ಯಾಸವಿದೆ.ಉಚಿತಬಸ್ ಪ್ರಯಾಣವು ಅನುತ್ಪಾದಕವೆಚ್ಚವೆ.ಗೃಹಲಕ್ಷ್ಮೀಯೋಜನೆಯು ಕೊಂಚಮಟ್ಟಿಗೆ ಬಡ,ಮಧ್ಯಮವರ್ಗದ ಕುಟುಂಬಗಳ ಮಹಿಳೆಯರಿಗೆ ನೆರವಾಗಿದೆ.ಆದರೆ ಯುವಕ ಯುವತಿಯರಿಗೆ ನೀಡುವ ಅಲ್ಪಪ್ರಮಾಣದ ಹಣದ ನೆರವು ಅವರಿಗೆ ಯಾವ ವಿಧದಲ್ಲಿಯೂ ನೆರವಾಗದು.ಅದರ ಬದಲು ನಿರುದ್ಯೋಗ ಯುವಕ ಯುವತಿಯರಿಗೆ ಸರಕಾರಿ ಉದ್ಯೋಗ ಇಲ್ಲವೆ ಸ್ವಯಂ ಉದ್ಯೋಗ ನೀಡುವತ್ತ ಸರಕಾರ ಗಮನಿಸಿದರೆ ನಿರುದ್ಯೋಗಿ ಯುವಕ ಯುವತಿಯರ ನಿರಾಶೆ ಕವಿದ ಬಾಳುಗಳಲ್ಲಿ ಭರವಸೆಯ ಬೆಳಕು ಮೂಡುತ್ತದೆ.

 

About The Author