ಶಿವಚಿಂತನೆ : ಪ್ರಣವಾರ್ಥ– ಪರಮಾರ್ಥ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ನಿಷ್ಠಾವಂತ ಅನುಯಾಯಿಗಳೂ ಶಿಷ್ಯರೂ ಆದ ಚಿದಾನಂದ ಖಾನಾಪುರ ಅವರಿಗೆ ‘ ಓಂ’ ಕಾರದ ಅರ್ಥ,ಮಹತ್ವ ತಿಳಿಯುವ ಕುತೂಹಲ.’ ಓಂಕಾರವೆಂದರೇನು ಗುರುಗಳೆ,ಅದರ ಅರ್ಥ ತಿಳಿಸಿ’ ಎಂದು ಕೇಳಿದ್ದಾರೆ. ಚಿದಾನಂದ ಅವರ ಪ್ರಶ್ನೆಯು ಆತ್ಮಜಿಜ್ಞಾಸುಗಳಿಗೆಲ್ಲ ಉಪಯುಕ್ತ ಪ್ರಶ್ನೆಯಾಗಿದ್ದು ಓಂಕಾರಾರ್ಥವನ್ನು ಸಂಕ್ಷಿಪ್ತವಾಗಿ ವಿವರಿಸುವೆ ಇಲ್ಲಿ.ಓಂಕಾರವು ವಿಶ್ವವನ್ನು ಒಳಕೊಂಡ ವಿಶ್ವಾತೀತ ತತ್ತ್ವವಾಗಿದ್ದು ಅದನ್ನು ವಿವರಿಸುವುದು ಅಷ್ಟು ಸುಲಭವಲ್ಲ.ಹಿಂದೆ ಮುಂಬೈಯಲ್ಲಿ ಪಂಡಿತರುಗಳು ನಿರಂತರ ಹನ್ನೆರಡು ವರ್ಷಗಳ ಕಾಲ ‘ಓಂ’ ಕಾರದ ಚಿಂತನ ಮಂಥನ ಮಾಡಿಯೂ ಅದರ ಅರ್ಥ ಇದೆ ಎಂದು ನಿರ್ಧರಿಸಲಾಗಲಿಲ್ಲವಂತೆ!

ಓಂಕಾರವನ್ನು ಪ್ರಣವ ಎನ್ನುತ್ತಾರೆ.ಯಾವುದು ಜಗತ್ತಿನ ಆದಿಯೋ ಜಗತ್ತಿನ ಕಾರಣವೋ ಜಗತ್ಪ್ರಳಯದ ನಂತರವೂ ಇರುತ್ತದೆಯೋ ಆ ಆದ್ಯಂತರಹಿತ ಅವಿನಾಶಿ ತತ್ತ್ವವೇ ಓಂಕಾರವು.ನಿರಾಕಾರ ಪರಬ್ರಹ್ಮನ ಸಂಕೇತವೇ ಓಂಕಾರವು.ಪರಶಿವನ‌ ಕುರುಹೇ ಓಂಕಾರವು.ಶಿವನ ಲಿಂಗರೂಪವು ಓಂಕಾರಾರ್ಥ ಸಂಕೇತವು.ಸ್ಥಾವರಲಿಂಗ ಮತ್ತು ವೀರಶೈವರ ಇಷ್ಟಲಿಂಗಗಳೆರಡೂ ನಿರಾಕಾರ ಪರಶಿವನ ಪ್ರತೀಕಗಳು.ಪರಶಿವನು ಜಗದುತ್ಪತ್ತಿಸ್ಥಿತಿಲಯಗಳ ಕರ್ತನಾಗಿಯೂ ಜಗದ ವ್ಯವಹಾರಗಳಿಗೆ ಸಿಲುಕನು,ನಿಲುಕನು ಆದ್ದರಿಂದ ಆತನು ಪರಬ್ರಹ್ಮನು.ಹುಟ್ಟುಸಾವುಗಳಿಲ್ಲದ,ಆದಿ ಅಂತ್ಯಗಳಿಲ್ಲದ ಆತ್ಯಂತಿಕಸತ್ಯವೇ ಪರಶಿವನು.ಈ ಆತ್ಯಂತಿಕ ಸತ್ಯದ ಅಕ್ಷರರೂಪವೇ ಓಂಕಾರವು.

‘ ಓಂ’ ಕಾರವು ‘ ಅ’ ಕಾರ, ‘ಉ’ ಕಾರ ಮತ್ತು ‘ ಮ’ ಕಾರಗಳೆಂಬ ಕಾರತ್ರಯಗಳ,ಕಾಲತ್ರಯಗಳನ್ನು ಮೀರಿದ ಮಹಾತತ್ತ್ವ.ಅ ಕಾರವು ಬ್ರಹನನ್ನು, ಉ ಕಾರವು ವಿಷ್ಣುವನ್ನು ಮ ಕಾರವು ರುದ್ರನನ್ನು ಸಂಕೇತಿಸುತ್ತದೆ.ಬ್ರಹ್ಮ,ವಿಷ್ಣು ಮತ್ತು ರುದ್ರರನ್ನು ಸೃಷ್ಟಿಸಿ ಅವರ ಮೂಲಕ ವಿಶ್ವದ ಸೃಷ್ಟಿ,ಸ್ಥಿತಿ ಮತ್ತು ಲಯಗಳನ್ನುಂಟು ಮಾಡುವ ವಿಶ್ವನಿಯಾಕ,ಜಗದಾದಿಕರ್ತೃ ಪರಶಿವನ ಕುರುಹಿಗೆ ಇರುವ ಅರ್ಥವೇ ಓಂಕಾರವು.ಓಂಕಾರದೊಳಗಿನ ಬಿಂದು ನಾದಸಂಕೇತವು.ಆನಾದವು ಪರಾಶಕ್ತಿಯ ಜಗದ್ವಿಲಾಸವಾಗಿಯೂ ಪರಾಶಕ್ತಿಯ ಕಂಪನ,ಅನುರಣನ ಕ್ರಿಯೆಯಿಂದ ತುಂಬಿದೆ ವಿಶ್ವವು.ಪರಾಶಕ್ತಿಯ ಪರನಾದದಿಂದ ಮೈಮರೆತು,ಪರವಶನಾಗುವ ಪರಶಿವನೇ ಚಿದಾನಂದನು.ಚಿತ್ತು,ಸತ್ತು ಮತ್ತು ಆನಂದಗಳ ಸಂಕೇತವು ಬಿಂದುರೂಪದ ಶಕ್ತಿಯಾಗಿದ್ದು ಶಕ್ತಿಯನ್ನು ಹೊಂದಿರುವುದರಿಂದ ಶಿವನು ಶಕ್ತಿಪತಿಯಾದ ‘ ಉಮಾಪತಿ’ ಯಾದ,ಪಾರ್ವತೀಶ್ವರನಾಗಿ ಲೀಲೆ ಮೆರೆದ.

ನಮ್ಮ ಶರೀರದಲ್ಲಿ 72000 ನಾಡಿಗಳಿವೆ.ಅವುಗಳಲ್ಲಿ1000 ನಾಡಿಗಳು ಮಹತ್ವದವು; ಅವುಗಳಲ್ಲಿಯೂ 100 ನಾಡಿಗಳು ಮಹತ್ವದವು.ಆ 100 ನಾಡಿಗಳಲ್ಲಿ 52 ನಾಡಿಗಳು ವಿಶೇಷವಾದವು ಆ 52 ನಾಡಿಗಳಲ್ಲಿ 3 ನಾಡಿಗಳು ಅತಿಶಯಮಹತ್ವವನ್ನುಳ್ಳ ನಾಡಿಗಳು.ಇಡಾ,ಪಿಂಗಳ ಮತ್ತು ಸುಷುಮ್ನಾ ನಾಡಿಗಳೇ ಆ ಮೂರು ಮುಖ್ಯನಾಡಿಗಳಾಗಿದ್ದು ಈ ಮೂರುನಾಡಿಗಳು ಯೋಗನಾಡಿಗಳು. ಎಚ್ಚೆತ್ತ ಕುಂಡಲಿನಿಶಕ್ತಿಯು ಈ ಮೂರುನಾಡಿಗಳ ಮೂಲಕ ದೇಹದಾದ್ಯಂತ ಸಂಚರಿಸಿ ವಿಶ್ವಶಕ್ತಿಯಾಗಿ ಬೆಳೆಯುತ್ತದೆ.ಇಡಾವು ಸೂರ್ಯನಾಡಿಯಾಗಿಯೂ ಪಿಂಗಳವು ಚಂದ್ರನಾಡಿಯಾಗಿಯೂ ಸುಷುಮ್ನಾವು ಬ್ರಹ್ಮನಾಡಿಯಾಗಿಯೂ ಗುರುತಿಸಲ್ಪಟ್ಟಿದ್ದು ಸುಷುಮ್ನಾನಾಡಿಯು ಬ್ರಹ್ಮನಾಡಿಯಾಗಿರುವುದರಿಂದ ಅದುಯೋಗಸಾಧನೆಯ ಸಿದ್ಧಿನಾಡಿಯೂ ಅಹುದು.ಸುಷುಮ್ನಾ ನಾಡಿಯಲ್ಲಿ ಶಿವಶಕ್ತಿಯ ಸಂಚಾರವಾಗುತ್ತದೆ,ಸಹಸ್ರಾರಚಕ್ರದ ಮಧುವಾದ ಅಮೃತವು ಸುಷುಮ್ನಾ ನಾಡಿಯ ಮೂಲಕ ಶರೀರದ ತುಂಬೆಲ್ಲ ವ್ಯಾಪಿಸಿ ಯೋಗಿಯ ಶರೀರವು ಜರಾಮರಣಮುಕ್ತವಾಗುತ್ತದೆ.

ಶಿವನನ್ನು ಮುಕ್ಕಣ್ಣ ಎನ್ನುತ್ತಾರೆ.ಸಂಸ್ಕೃತದ ತ್ರಯಂಬಕನೇ ಕನ್ನಡದ ಮುಕ್ಕಣ್ಣನು.ನಮಗೆಲ್ಲರಿಗೂ ಅಷ್ಟೇ ಏಕೆ ಎಲ್ಲ ದೇವ ದೇವಿಯರಿಗೆ ಎರಡು ಕಣ್ಣುಗಳಿದ್ದರೆ ಶಿವನಿಗೆ ಮಾತ್ರ ಮೂರುಕಣ್ಣುಗಳು! ಎಲ್ಲದರಲ್ಲೂ ಶಿವನದು ಇತರರಲ್ಲಿದ ವಿಶೇಷವೆ! ಸಮವಲ್ಲದ ಅಸಮ ಕಣ್ಣುಗಳುಳ್ಳವನಾದ್ದರಿಂದ ಶಿವನು ವಿಷಮಾಕ್ಷ,ಅಸಮಾಕ್ಷನು.ಸೂರ್ಯ,ಚಂದ್ರ ಮತ್ತು ಅಗ್ನಿಯರೇ ಸೂರ್ಯನ ಮೂರುಕಣ್ಣುಗಳು.ಸೂರ್ಯನು ಅಕಾರವಾಚಕನಾಗಿ ಅಗ್ನಿಯು ಉಕಾರವಾಚಕನಾಗಿಯೂ ಚಂದ್ರನು ಮಕಾರವಾಚಕನಾಗಿಯೂ ಇರುವನು.ಶಿವನ ಹಣೆಯ ನಡುವಿನ ಭ್ರೂಮಧ್ಯವು ನಾದಾತ್ಮಕಳಾದ ಶಕ್ತಿಯ ಸಂಕೇತವು. ಭ್ರೂಮಧ್ಯದಲ್ಲಿ ಆಜ್ಞಾಚಕ್ರವಿದ್ದು ಷಟ್ ಚಕ್ರಗಳಲ್ಲದು ಕೊನೆಯದು.ಏಳನೆಯದಾದ ಸಹಸ್ರಾರ ಚಕ್ರವು ಸದಾಶಿವನ ನೆಲೆಯಾಗಿದ್ದು ಭ್ರೂಮಧ್ಯದ ‘ನಿಟಿಲನೇತ್ರ’ ಶಕ್ತ್ಯಾಕ್ಷಿಯ ಮೂಲಕ ಸಹಸ್ರಾರದ ಸಹಸ್ರದಳ ಕಮಲದಲ್ಲಿ ಪವಡಿಸಿಪ್ಪ ಪರಶಿವನ ದರ್ಶನ ಸಾಧ್ಯ.ಸಹಸ್ರದಳಗಳು ಬ್ರಹ್ಮಾಂಡದ ಸಹಸ್ರಲೋಕಗಳ ಸಂಕೇತವಾಗಿದ್ದು ಒಂದೊಂದು ಅಕ್ಷರವು ಒಂದೊಂದು ಲೋಕವನ್ನು ಪ್ರತಿನಿಧಿಸುತ್ತದೆ.ಆ ಸಹಸ್ರಲೋಕಗಳ ನಿಯಾಮಕನು ಪರಶಿವನು .ಮರ್ತ್ಯಲೋಕವಾಸಿಗಳಾದ ನಮ್ಮ ಭೂಮಿಯು ‘ ಮ’ ಕಾರವಾಚಕವು. ಚಂದ್ರನು ಭೂಮಿಯ ಪೋಷಕ ದೇವತೆಯು.ವೈಜ್ಞಾನಿಕವಾಗಿಯೂ ಚಂದ್ರನು ಭೂಮಿಯ ಉಪಗ್ರಹವಾಗಿರುವದನ್ನು ಮನಗಾಣಬಹುದು.ಚಂದ್ರನು ಜಲತತ್ತ್ವ,ಅಮೃತತತ್ತ್ವವನ್ನು ಸಂಕೇತಿಸುವನು.ಭೂಮಿಯು ಒಂದು ಪಾಲಿನಷ್ಟಿದ್ದರೆ ಭೂಮಿಯನ್ನು ಸುತ್ತುವರೆದಿರುವ ಸಮುದ್ರದ ಜಲವು ಭೂಮಿಯ ಮೂರುಪಟ್ಟು ಇದೆ.ಭೂಮಿಗೆ ಆಧಾರನಾದ ಚಂದ್ರನನ್ನು ತಲೆಯಲ್ಲಿ ಧರಿಸಿರುವ ಮೂಲಕ ಶಿವನು ವಿಶ್ವವನ್ನು ಪೊರೆಯುವ ಚಂದ್ರಶೇಖರ ಎನ್ನಿಸಿಕೊಂಡಿರುವನು.

‘ ಓಂ’ ಕಾರ ದಿಂದಲೇ ಜಗತ್ತಿನ ಉತ್ಪತ್ತಿಯಾಗಿದೆ.ಪ್ರಣವಸ್ಫೋಟವೇ ವಿಶ್ವರಹಸ್ಯವು.ವಿಜ್ಞಾನಿಗಳು ವಿವರಿಸುವ Big bang theory ಯು ಪ್ರಣವಸ್ಫೋಟವೆ.ಇಂತಿದು ವಿಶ್ವದ ಉತ್ಪತ್ತಿಗೆ ಕಾರಣವಾಗಿ,ವಿಶ್ವವನ್ನು ನಿಯಮಿಸುತ್ತ ವಿಶ್ವಾತೀತ ಶಕ್ತಿಯಾಗಿರುವ ಓಂಕಾರ ಅರ್ಥ,ಪರಶಿವನ ಮಹಾತ್ಮೆ.

About The Author