ಸರಕಾರಿ ಅಧಿಕಾರಿಗಳ ಸ್ವೇಚ್ಛೆಗೆ ಸಾರ್ವಜನಿಕ ಸಂಪತ್ತಿನ ದುರ್ಬಳಕೆ ಆಗಬಾರದು:ಮುಕ್ಕಣ್ಣ ಕರಿಗಾರ

ಕಳೆದ ವಾರ ನವದೆಹಲಿಯಲ್ಲಿ ನಡೆದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಗಳ ಮುಖ್ಯ ನ್ಯಾಯಾಧೀಶರುಗಳ ಜಂಟಿ ಸಮಾವೇಶದಲ್ಲಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಎನ್ ವಿ ರಮಣ ಅವರು ಶಾಸಕಾಂಗ ಮತ್ತು ಕಾರ್ಯಾಂಗದ ಕಾರ್ಯವೈಖರಿಯಲ್ಲಿ ಆಗಬೇಕಾದ ಹಲವು ಮಹತ್ವದ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಈ ಜಂಟಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.ಶಾಸಕಾಂಗ ಮತ್ತು ಕಾರ್ಯಾಂಗದ ವಿಳಂಬಧೋರಣೆ ಮತ್ತಿತರ ಕಾರಣಗಳಿಂದ ಜನರಿಗೆ ಶೀಘ್ರನ್ಯಾಯದಾನ ಮಾಡುವಲ್ಲಿ ನ್ಯಾಯಾಂಗ ಎದುರಿಸುತ್ತಿರುವ ತೊಂದರೆ- ತೊಡಕುಗಳ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಅವರು ಪ್ರಧಾನಮಂತ್ರಿಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳ ಗಮನಸೆಳೆದಿದ್ದಾರೆ.

‌ಈ ಸಮಾವೇಶದಲ್ಲಿ ಶಾಸಕಾಂಗ- ಕಾರ್ಯಾಂಗದ ಕಾರ್ಯನೀತಿಯ ಬಗ್ಗೆ ಹತ್ತು- ಹಲವು ಮಹತ್ವದ ಸಲಹೆಗಳನ್ನು ಮುಖ್ಯನ್ಯಾಯಮೂರ್ತಿ ರಮಣ ಅವರು ನೀಡಿದ್ದಾರೆ.ಅವುಗಳಲ್ಲಿ ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಎರಡು ವಿಷಯಗಳ ಬಗ್ಗೆ ಮಾತ್ರ ನಾನಿಲ್ಲಿ ಪ್ರಸ್ತಾಪಿಸುತ್ತಿದ್ದೇನೆ.ಸರಕಾರಿ ಅಧಿಕಾರಿಗಳ ಸ್ವಾರ್ಥ,ದುರುದ್ದೇಶ ಮತ್ತು ವಿಳಂಬದ ಕಾರಣದಿಂದ ರಾಜ್ಯ ಸರಕಾರಗಳು ಮುಜುಗುರಕ್ಕೆ ಈಡಾಗುತ್ತಿರುವ ಪ್ರಸಂಗಗಳು ಅವು.ಎನ್ ವಿ ರಮಣ ಅವರು ‘ ಪಾರದರ್ಶಕವಾಗಿ ಮತ್ತು ನಿಯಮಾನುಸಾರ ಸರಕಾರಿ ನೌಕರರ ಸೇವಾ ವಿಷಯಗಳನ್ನು ನಿರ್ವಹಿಸಿದರೆ ಸರಕಾರಿ ನೌಕರರು,ಅಧಿಕಾರಿಗಳು ಕೋರ್ಟ್ ಗಳ ಮೆಟ್ಟಿಲು ಏರುವುದಿಲ್ಲ ಎಂದರಲ್ಲದೆ ನ್ಯಾಯಾಂಗ ನಿಂದನೆ ( contempt of court cases) ಪ್ರಕರಣಗಳ ಬಗ್ಗೆ ಅನಗತ್ಯ ವಿಳಂಬ ಮಾಡುತ್ತಿರುವುದರಿಂದಾಗಿಯೇ ತೊಂದರೆಗೆ ಸಿಲುಕುತ್ತಿರುವ ಬಗ್ಗೆ ಗಮನಸೆಳೆದಿದ್ದಾರೆ.ಈ ಎರಡು ಸಂಗತಿಗಳು ಸಂಪೂರ್ಣವಾಗಿ ಕಾರ್ಯಾಂಗಕ್ಕೆ ಸಂಬಂಧಿಸಿದ ಸಂಗತಿಗಳಾಗಿದ್ದು ಸರಕಾರಿ ಅಧಿಕಾರಿಗಳೇ ಈ ವಿಷಯಗಳಲ್ಲಿ ಮುಖ್ಯ ಪಾತ್ರವಹಿಸುತ್ತಾರೆ.ಸರಕಾರಿ ಇಲಾಖೆಗಳ ಮುಖ್ಯಸ್ಥರಾಗಿರುವ ಮಂತ್ರಿಗಳು,ಮುಖ್ಯಮಂತ್ರಿಗಳು ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮುಜುಗರ ಅನುಭವಿಸಬೇಕಾಗುತ್ತದೆ.

ಸರಕಾರಿ ನೌಕರರು,ಅಧಿಕಾರಿಗಳು ಸೇವಾ ವಿಷಯಗಳಾದ ಜ್ಯೇಷ್ಠತೆ,ಪದೋನ್ನತಿ ಮತ್ತು ಪಿಂಚಣಿ ಸೌಲಭ್ಯಗಳಂತಹ ವಿಷಯಗಳಿಗಾಗಿ ಆಡಳಿತ ನ್ಯಾಯಮಂಡಳಿಗಳು,ಹೈಕೋರ್ಟ್ ಗಳ ಮೊರೆಹೋಗುತ್ತಾರೆ.ಸೇವಾವಿಷಯಗಳಲ್ಲಿ ‘ನ್ಯಾಯಸಮ್ಮತ’ (fair) ಮತ್ತು ಪಾರದರ್ಶಕನಡೆ( transparency ) ಕಾಯ್ದುಕೊಳ್ಳುವ ಜವಾಬ್ದಾರಿ ಸರಕಾರದ ಕಾರ್ಯಾಂಗದ ಭಾಗವಾಗಿರುವ ಹಿರಿಯ ಅಧಿಕಾರಿಗಳದ್ದು.ಸೇವಾವಿಷಯಗಳಲ್ಲಿ ಕಾರ್ಯಾಂಗದ ಮುಖ್ಯಸ್ಥರುಗಳಾಗಿರುವ ಮಂತ್ರಿಗಳು ಇಲ್ಲವೆ ಮಂತ್ರಿಗಳದ್ದು ಬರಿ ಸಹಿಮಾಡುವ ಇಲ್ಲವೆ ಅಂಕಿತ ಹಾಕುವ ಹಿರಿಮೆಯಷ್ಟೆ.ಅವರಿಗೆ ಆಡಳಿತಾತ್ಮಕ ವಿಷಯಗಳು,ಸೇವಾ ಕಾನೂನುಗಳ ತಿಳಿವಳಿಕೆ ಇರುವುದಿಲ್ಲ.ಮಂತ್ರಿಗಳು ಮುಖ್ಯಮಂತ್ರಿಗಳ ಆಪ್ತಶಾಖೆಗಳ ಸಲಹೆಗಳೇ ಮಂತ್ರಿಗಳು,ಮುಖ್ಯಮಂತ್ರಿಗಳ ನಿರ್ಣಯಗಳಾಗಿ ಹೊರಬರುತ್ತವೆ.ಸೇವಾ ವಿಷಯಗಳಾದ ಜ್ಯೇಷ್ಠತೆ,ಪದೋನ್ನತಿ ಮತ್ತು ಪಿಂಚಣಿಯಂತಹ ವಿಷಯಗಳಲ್ಲಿ ಜನಪ್ರತಿನಿಧಿಗಳಿಗೆ ಅಷ್ಟು ಆಸಕ್ತಿ ಇರುವುದಿಲ್ಲ.ವರ್ಗಾವಣೆ ವಿಷಯದಲ್ಲಿ ಮಾತ್ರ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುತ್ತಾರೆ.ಸರಕಾರದ ಹಿರಿಯ ಅಧಿಕಾರಿಗಳು ವರ್ಗಾವಣೆ ವಿಷಯದಲ್ಲಿ ಬಿಗಿಯಾದ,ಕಟ್ಟು ನಿಟ್ಟಿನ ನಿಯಮಗಳನ್ನು ಅನುಸರಿಸಿದರೆ ಬಹಳಷ್ಟು ಜನ ಮಂತ್ರಿಗಳು ಖುಷಿ ಪಡುತ್ತಾರೆಯೇ ಹೊರತು ಬೇಸರಿಸುವುದಿಲ್ಲ.ಆದರೆ ಸರಕಾರದ ಹಿರಿಯ ಅಧಿಕಾರಿಗಳು ತಮ್ಮ ಸ್ವ ಹಿತಾಸಕ್ತಿಯಿಂದ ಮಂತ್ರಿಗಳು,ಜನಪ್ರತಿನಿಧಿಗಳು ಹೇಳಿದ ಒಂದೆರಡು ಕೆಲಸಗಳನ್ನು ಮಾಡಿ ವ್ಯವಸ್ಥೆಯನ್ನು ತಮ್ಮ‌ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ.

ತಮಗೆ ಇಷ್ಟವಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳಲು ಶಾಸಕರುಗಳು ಬಯಸಿದರೆ ತಮಗೆ ಇಷ್ಟವಾದ,ಲಾಭದಾಯಕ ಸ್ಥಳ- ಸ್ಥಾನಗಳಿಗೆ ಹೋಗಲು ಅಧಿಕಾರಿಗಳು ಶಾಸಕರುಗಳು,ಜನಪ್ರತಿನಿಧಿಗಳ ಮೊರೆಹೋಗುತ್ತಾರೆ.ಪರಸ್ಪರರಿಗೆ ಅನುಕೂಲವಾಗುವ ಷರತ್ತುಗಳು ಇಲ್ಲಿ ಕೆಲಸ ಮಾಡುತ್ತವೆ.ತಮ್ಮ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಯಿಂದ ರಾಜಕಾರಣಿಗಳು ಅಧಿಕಾರಿಗಳನ್ನು ವರ್ಗಮಾಡಿಸಿಕೊಂಡರೆ ಅಧಿಕಾರಿಗಳು ಇಂತಹದ್ದೆ ಸ್ಥಳಬೇಕು ಎಂದು ಆಯಕಟ್ಟಿನ ಸ್ಥಾನಗಳಿಗಾಗಿ ರಾಜಕಾರಣಿಗಳ ಮೊರೆಹೋಗುತ್ತಿರುವುದು ಅಧಿಕಾರಿಗಳ ಸ್ವಾರ್ಥ ಮತ್ತು ದುರಾಸೆಯಿಂದಲ್ಲದೆ ಜನಪರ ಕಾಳಜಿಯಿಂದಲ್ಲ. ಸರಕಾರಿ ಸೇವಾನಿಯಮಗಳು ಸರಕಾರದಿಂದ ನೇಮಕಗೊಂಡ ಎಲ್ಲ ಅಧಿಕಾರಿ ಮತ್ತು ನೌಕರರುಗಳಿಗೆ ಸಮನಾಗಿ ಅನ್ವಯವಾಗುವಂತೆ ಇರಬೇಕು.ಆದರೆ ವೃಂದ ಮತ್ತು ನೇಮಕಾತಿ ನಿಯಮಗಳು ಪ್ರತಿ ಇಲಾಖೆಗೆ ಪ್ರತ್ಯೇಕವಾಗಿ ಇರುವುದರಿಂದ ಆಯಾ ಇಲಾಖೆಗಳ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಮನಸ್ಸಿಗೆ ಬಂದಂತೆ ಪದೋನ್ನತಿ ನೀಡುವ ಕೆಟ್ಟಸಂಪ್ರದಾಯ ಒಂದು ಎಗ್ಗಿಲ್ಲದೆ ನಡೆಯುತ್ತಿದೆ. ಅರ್ಹತೆ ಇಲ್ಲದೆ ಇದ್ದರೂ ವಾಮಮಾರ್ಗದಿಂದ ಪದೋನ್ನತಿ ಪಡೆದು ಆಯಕಟ್ಟಿನ ಮತ್ತು ನಿರ್ಣಯಾಕ ಸ್ಥಾನಗಳಿಗೆ ಬಂದು ಕುಳಿತುಕೊಳ್ಳುವವರಿಂದ ಸರಕಾರಿ ಆಡಳಿತ ಯಂತ್ರ ಕುಸಿಯುತ್ತದೆ; ಸೇವಾ ಮೌಲ್ಯಗಳು ದುರ್ಬಲಗೊಳ್ಳುತ್ತವೆ.ಅನರ್ಹರು ರಾಜಕಾರಣಿಗಳ ಒಡನಾಟ,ಸಖ್ಯ ಬೆಳೆಸಿ ತಮಗೆ ಬೇಕಾದ ಸ್ಥಾನ,ಹುದ್ದೆಗಳನ್ನು ಪಡೆಯುವುದರಿಂದ ಅರ್ಹ ಮತ್ತು ಪ್ರಾಮಾಣಿಕ,ದಕ್ಷ ಅಧಿಕಾರಿಗಳು ತೊಂದರೆ ಅನುಭವಿಸಬೇಕಾಗುತ್ತದೆ.ಇದು ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಸರಕಾರದ ಹಿರಿಯ ಅಧಿಕಾರಿಗಳು ಆಧೀನದ ಅಧಿಕಾರಿಗಳು,ನೌಕರರು ತಮ್ಮ ಇಷ್ಟದಂತೆ ನಡೆಯಲಿಲ್ಲ ಎಂದೊಡನೆ ಅವರ ವಿರುದ್ಧ ಸೇಡಿನ ಮನೋಭಾವ ತಳೆಯುವುದು,ಆಧೀನದ ಅಧಿಕಾರಿಗಳನ್ನು ತುಳಿಯುವುದು ಹೊಸದೇನಲ್ಲ.ಇಂತಹ ಸಂದರ್ಭಗಳಲ್ಲಿ ತೊಂದರೆಗೊಳಗಾದ ಸರಕಾರಿ ಅಧಿಕಾರಿ,ನೌಕರರು ಕೋರ್ಟ್ ಗಳ ಮೊರೆಹೋಗಿ ತಮ್ಮ ಹಿತ ಕಾಪಾಡಿಕೊಳ್ಳುವುದು ಅನಿವಾರ್ಯ ಎನ್ನಿಸುತ್ತದೆ ಅವರಿಗೆ.ಸಂವಿಧಾನದಲ್ಲಿ ‘ವಿವೇಚನಾಧಿಕಾರ’ಕ್ಕೆ ಅವಕಾಶ ಇಲ್ಲದೆ ಇದ್ದರೂ ಸರಕಾರದ ಹಿರಿಯ ಅಧಿಕಾರಿಗಳು ತಮ್ಮಿಂದ ತಾವೇ “ವಿವೇಚನಾಧಿಕಾರ” ಸೃಷ್ಟಿಸಿಕೊಂಡು ಆಧೀನದ ಅಧಿಕಾರಿಗಳಿಗೆ ತೊಂದರೆ ಕೊಡುವ,ತಮಗೆ ಬೇಕಾದ ಹಾಗೆ ನಿಯಮ- ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿಕೊಳ್ಳುವ ಪ್ರವೃತ್ತಿರೂಢಿಸಿಕೊಂಡಿದ್ದಾರೆ.ಸಂವಿಧಾನ ಬಾಹಿರ ನಡೆಗಳಿಂದ ತೊಂದರೆಗೊಳಗಾದವರು ನ್ಯಾಯಾಲಯಗಳ ಮೊರೆಹೋಗುವುದು ಸಹಜ.ನ್ಯಾಯಾಲಯಗಳಲ್ಲಿ ವಕೀಲರ ಶುಲ್ಕ ಮತ್ತಿತರ ವೆಚ್ಚಗಳನ್ನು ಸರಕಾರವು ಭರಿಸಬೇಕಾಗುತ್ತದೆ.ಹಿರಿಯ ಅಧಿಕಾರಿ ಒಬ್ಬರ ದುರುದ್ದೇಶದಿಂದ ಬಾಧಿತ ಸರಕಾರಿ ಅಧಿಕಾರಿಗಳು ಕೋರ್ಟ್ ಗೆ ಹೋದರೆ ಸರಕಾರವು ಸಾರ್ವಜನಿಕರ ಹಣವನ್ನು ಯಾಕೆ ಖರ್ಚು ಮಾಡಬೇಕು? ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡದೆ ಸ್ವಹಿತಾಸಕ್ತಿಯಿಂದ ಕಾರ್ಯನಿರ್ವಹಿಸಿ, ಪ್ರಕರಣ ಕೋರ್ಟ್ ಗಳ ಮೆಟ್ಟಿಲು ಹತ್ತಲು ಕಾರಣರಾಗುವ ಅಧಿಕಾರಿಗಳೇ ಕೋರ್ಟಿನ ಖರ್ಚು ಭರಿಸುವ,ಕೋರ್ಟಿನ ಆದೇಶದಂತೆ ಪರಿಹಾರ ಪಾವತಿಸುವಂತೆ ಮಾಡಬೇಕು.ಹೀಗಾದರೆ ಮಾತ್ರ ಸರಕಾರಿ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸುತ್ತಾರೆ.ಸರಕಾರಿ ಅಧಿಕಾರಿಗಳು ಸಾರ್ವಜನಿಕ ಸೇವಕರು ಆಗಿ ಸಾರ್ವಜನಿಕ ಹಿತಾಸಕ್ತಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಹೊರತು ಸ್ವಾರ್ಥ ಮತ್ತು ಸ್ವಹಿತಾಸಕ್ತಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.ಸರಕಾರಿ ಅಧಿಕಾರಿಗಳ ತಪ್ಪುನಿರ್ಧಾರ ಮತ್ತು ಸಾರ್ವಜನಿಕ ಹಿತಾಸಕ್ತಿಗಳ ಕಾರಣದಿಂದಲ್ಲದೆ ಆದ ಅವರ ನಡೆ,ವರ್ತನೆಗಳಿಗೆ ಅವರನ್ನೇ ವೈಯಕ್ತಿಕವಾಗಿ ಜವಾಬ್ದಾರರನ್ನಾಗಿಸಬೇಕಲ್ಲದೆ ಆ ತಪ್ಪುಗಳಿಗೆ ಪರಿಹಾರವಾಗಿ ಸಾರ್ವಜನಿಕರ ತೆರಿಗೆಯ ಹಣ ಪಾವತಿಸಬಾರದು.ಸರಕಾರಿ ಅಧಿಕಾರಿಗಳು ಅವರು ಅಖಿಲಭಾರತ ಸೇವೆಗಳಿಗೆ ಸೇರಿದವರೇ ಆಗಿರಲಿ,ರಾಜ್ಯ ಸೇವೆಗೆ ಸೇರಿದವರೇ ಆಗಿರಲಿ ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡ ಅವರ ನಿರ್ಧಾರಗಳಿಗೆ ಮಾತ್ರ ಸರಕಾರವು ಹೊಣೆಹೊರಬೇಕೇ ಹೊರತು ಅವರ ಸ್ವೇಚ್ಛೆಯ ನಿರ್ಧಾರಗಳಿಗೆ ಕಣ್ಮುಚ್ಚಿಕೊಂಡು ಆಗಲಿ ಎನ್ನಬಾರದು.ಸರಕಾರಿ ಅಧಿಕಾರಿಗಳ ಹೊಣೆಗಾರಿಕೆ ಕುರಿತು ಶಾಸನ ರೂಪಿಸಿ,ಕಾಯ್ದೆ ಜಾರಿಗೊಳಿಸಬೇಕು.ಇದರಿಂದ ಸಾರ್ವಜನಿಕರ ತೆರಿಗೆಯ ಹಣ ವ್ಯರ್ಥ ಪೋಲಾಗುವುದು ತಪ್ಪುತ್ತದೆ.

ನ್ಯಾಯಾಂಗ ನಿಂದನೆ ಪ್ರಕರಣಗಳು

ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ನೂರಕ್ಕೆ ತೊಂಬತ್ತರಷ್ಟು ಅಧಿಕಾರಿಗಳ ತಪ್ಪುನೀತಿ,ಸ್ವಹಿತಾಸಕ್ತಿ,ರಾಗ- ದ್ವೇಷಪೂರಿತ ನಿಲುವುಗಳು,ಕಾನೂನು ನಿಯಮಗಳ ತಿಳಿವಳಿಕೆಯ ಕೊರತೆಯ ಕಾರಣದಿಂದಲೇ ಘಟಿಸುತ್ತವೆ.ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ಪಾತ್ರ ಕಡಿಮೆ;ಎಲ್ಲೋ ಒಬ್ಬಿಬ್ಬರ ಅಬ್ಬರ,ಆಟೋಟಾಪಗಳಿಂದ ಆಗಿರಬಹುದು.ಆದರೆ ಬಹುಪಾಲು ನ್ಯಾಯಾಂಗ ನಿಂದನೆ ಪ್ರಕರಣಗಳು ಅಧಿಕಾರಿಗಳ ಎಡವಟ್ಟಿನಿಂದಲೇ ಆಗಿರುತ್ತವೆ.ಅಧಿಕಾರಿಗಳ ಉದ್ದೇಶಪೂರಿತ ತಪ್ಪುನಡೆಗೆ ಸರಕಾರ ಏಕೆ ಜವಾಬ್ದಾರಿ ಆಗಬೇಕು? ಅಧಿಕಾರಿಗಳ ತಪ್ಪಿಗೆ ಸಾರ್ವಜನಿಕರ ತೆರಿಗೆಯ ಹಣದಿಂದ ಏಕೆ ಪರಿಹಾರ ನೀಡಬೇಕು?ರಾಜಕಾರಣಿಗಳು ಇಂತಹ ವಿಷಯಗಳಲ್ಲಿ ಅಧಿಕಾರಿಗಳ ಹಿತಕಾಯದೆ ಸಾರ್ವಜನಿಕರ ತೆರಿಗೆಯ ಹಣದ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು.ಸರಕಾರಿ ಅಧಿಕಾರಿಗಳಿಗೆ ಸಂಬಳ ಸವಲತ್ತುಗಳಿಗೆ ಕೊರತೆ ಇಲ್ಲ.ಬರ ಬರಲಿ,ನೆರೆಹಾವಳಿ ಉಂಟಾಗಲಿ ಜನರು ಸಂಕಷ್ಟದಲ್ಲಿದ್ದಾಗಲೂ ಸರಕಾರಿ ಅಧಿಕಾರಿಗಳು,ನೌಕರರುಗಳಿಗೆ ತಿಂಗಳು ಮುಗಿದೊಡನೆ ಸಂಬಳ ಸಿಗುತ್ತದೆ,ಸೌಲಭ್ಯಗಳು ದೊರೆಯುತ್ತವೆ.ಸರಕಾರಿ ಅಧಿಕಾರಿ ನೌಕರರುಗಳು ಸಂತೃಪ್ತ ಜೀವನ ನಿರ್ವಹಣೆ ನಡೆಸಲು ಸಾಕಾಗುವಷ್ಟು ಅವರಿಗೆ ಸಂಬಳ- ಸವಲತ್ತುಗಳನ್ನು ನೀಡಲಾಗುತ್ತಿದೆ.ಹೀಗಿದ್ದೂ ಧನದಾಹದಿಂದ ಲಂಚಕೋರರಾಗಿ ಆಡಳಿತ ವ್ಯವಸ್ಥೆಯನ್ನು ಹಾಳುಮಾಡುವವರ ಸ್ವಾರ್ಥಕ್ಕೆ ಸರಕಾರ ಏಕೆ ಹೊಣೆಯಾಗಬೇಕು? ಸ್ವಾರ್ಥಿ ಅಧಿಕಾರಿಗಳ ದುರುದ್ದೇಶದ ವರ್ತನೆಗೆ ಸಾರ್ವಜನಿಕರ ತೆರಿಗೆಯ ಹಣದಿಂದ ಏಕೆ ಪಾವತಿಸಬೇಕು ಪರಿಹಾರ ಧನವನ್ನು ? ಸರಕಾರಿ ಅಧಿಕಾರಿಗಳ ಎಲ್ಲ ನಡೆ- ನುಡಿಗಳನ್ನು ಕಣ್ಮುಚ್ಚಿಕೊಂಡು ಒಪ್ಪುವ ಬದಲು ಅವರು ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡ ನೀತಿ ನಿಲುವುಗಳನ್ನಷ್ಟೇ ಬೆಂಬಲಿಸಬೇಕು ಜನಪ್ರತಿನಿಧಿಗಳು,ಸರಕಾರ.

ಕೆಲವು ಜನ ಅಧಿಕಾರಿಗಳು ಉನ್ಮತ್ತರಾಗಿ ವರ್ತಿಸುತ್ತಾರೆ.ಕೋರ್ಟ್ಗಳ ನಿರ್ದೇಶನ,ಆದೇಶಗಳ ಬಗ್ಗೆಯೂ ಅಸಡ್ಡೆಯಿಂದ ವರ್ತಿಸುತ್ತಾರೆ.ಕೋರ್ಟ್ ಗಳು ಎಂದರೆ ಅಲರ್ಜಿ ಕೆಲವರಿಗೆ.ಕೆಳಹಂತದ ಕೋರ್ಟ್ಗಳು,ಆಡಳಿತ ನ್ಯಾಯ ಮಂಡಳಿ,ಉಚ್ಛ ನ್ಯಾಯಾಲಯ,ಸರ್ವೋಚ್ಛ ನ್ಯಾಯಾಲಯ ನೀಡಿದ ನಿರ್ದೇಶನ,ಆದೇಶಗಳನ್ನು ಓದಬೇಕು,ಕಾನೂನು ತಜ್ಞರುಗಳೊಂದಿಗೆ ಚರ್ಚಿಸಬೇಕು.ಕೋರ್ಟಿಗೆ ಉತ್ತರ ನೀಡಬೇಕು ಇಲ್ಲವೆ ಕ್ರಮತೆಗೆದುಕೊಂಡು ಅನುಪಾಲನಾ ವರದಿ ಸಲ್ಲಿಸಬೇಕು.ಬಹಳಷ್ಟು ಜನ ಸರಕಾರಿ ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಓದುವುದಿಲ್ಲ; ಬದಲಿಗೆ ಅವರ ಕಛೇರಿಗಳ ಗುಮಾಸ್ತರುಗಳು ಕಡತದಲ್ಲಿ ದಾಖಲಿಸಿದ ಟಿಪ್ಪಣಿಗಳನ್ನೇ ವೇದವಾಕ್ಯ ಎಂದು ಭಾವಿಸುತ್ತಾರೆ.ಈ ಗುಮಾಸ್ತರುಗಳೋ ಸರಕಾರದ ನಿಯಮಗಳು,ಸರಕಾರದ ಆಡಳಿತ ವ್ಯವಸ್ಥೆ,ನ್ಯಾಯಾಂಗದ ಪಾತ್ರದ ಬಗ್ಗೆ ಏನೇನೂ ತಿಳಿವಳಿಕೆ ಇಲ್ಲದ ಓಬಿರಾಯನ ಕಾಲದ ಸರಕಾರಿ ನೌಕರರುಗಳು.ಇಂತಹವರ ಟಿಪ್ಪಣಿಗಳು,ಖಂಡಿಕೆಗಳ ಒಕ್ಕಣೆಯನ್ನು ಒಪ್ಪದೆ ಅಧಿಕಾರಿಗಳು ಕೋರ್ಟ್ ಪ್ರಕರಣಗಳಲ್ಲಿ ತಜ್ಞರ ಕಾನೂನು ಸಲಹೆ ಪಡೆಯಬೇಕು,ಕೋರ್ಟಗಳಿಗೆ ಭೇಟಿ ನೀಡಿ ವಿಚಾರಿಸಬೇಕು.ಸರಕಾರಿ ಅಧಿಕಾರಿಗಳಲ್ಲಿ ಕೆಲವರಿಗೆ ಕೋರ್ಟ್ ಗಳೆಂದರೆ ಭಯ; ಮತ್ತೆ ಕೆಲವರಿಗೆ ಕೋರ್ಟ್ ಗೆ ಹೋದರೆ ತಮ್ಮ ಘನತೆಗೆ ಕುಂದು ಎಂಬ ‘ಸ್ವಯಂಘೋಷಿತ ಘನತೆಯ ಮನೋಭಾವ’.ಹೀಗಾಗಿ ಕೋರ್ಟ್ ಗಳಲ್ಲಿ ಸರಕಾರದ ವಿರುದ್ಧ ಆದೇಶ ಬರುತ್ತವೆ,ನ್ಯಾಯಾಂಗ ನಿಂದನೆ ಪ್ರಕರಣಗಳು ದಾಖಲಾಗುತ್ತವೆ.ಸರಕಾರಿ ಪ್ರಕರಣಗಳಲ್ಲಿ ವಕೀಲರುಗಳನ್ನೇ ನೇಮಿಸದ,ನೇಮಿಸಿದರೂ ವಕೀಲರಿಗೆ ಸರಿಯಾದ ಮಾಹಿತಿ ನೀಡದ ಕಾರಣಗಳಿಂದಲೇ ಕೋರ್ಟ್ ಗಳಲ್ಲಿ ಸರಕಾರದ ವಿರುದ್ಧ ತೀರ್ಪುಗಳು ಬರುತ್ತವೆ.ಇದು ಅಧಿಕಾರಿಗಳ ಅಸಡ್ಡೆ ಮನೋಭಾವದಿಂದಲೇ ಆಗುವ ಅನಾಹುತ.ಇದಕ್ಕೆ ಸರಕಾರ ಯಾಕೆ ಹೊಣೆ ಹೊರಬೇಕು? ಜನರ ತೆರಿಗೆಯ ಹಣದಿಂದ ಏಕೆ ಈ ವೆಚ್ಚ ಇಲ್ಲವೆ ಪರಿಹಾರ ಪಾವತಿಸಬೇಕು ?

ಸರಕಾರವು ಸಾರ್ವಜನಿಕ ಸೇವಕರುಗಳಾದ ಸರಕಾರಿ ಅಧಿಕಾರಿಗಳ ನಡೆ ನುಡಿಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನುಕೈಗೊಳ್ಳಬೇಕು.’ಸರಕಾರಿ ಅಧಿಕಾರಿಗಳ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳಿ’ಗೆ ಸಂಬಂಧಿಸಿ ಪ್ರತ್ಯೇಕ ಶಾಸನ ರಚಿಸಿ ಅದನ್ನು ಕಾನೂನ್ನಾಗಿ ರೂಪಿಸಬೇಕು.ಸರಕಾರಿ ಕಡತಗಳಲ್ಲಿ ನೌಕರರು,ಅಧಿಕಾರಿಗಳು ದಾಖಲಿಸಿದ ಅಭಿಪ್ರಾಯ,ತೆಗೆದುಕೊಂಡ ನಿರ್ಣಯ,ನಿರ್ಧಾರಗಳ ಆಧಾರದಲ್ಲಿ ಅವರ ಹೊಣೆಗಾರಿಕೆ ನಿರ್ಧಾರವಾಗಬೇಕು.ಆಧೀನದ ನೌಕರರು ,ಅಧಿಕಾರಿಗಳು ಕಾನೂನು ಜ್ಞಾನದ ಕೊರತೆಯಿಂದ ಮಂಡಿಸಿದ ಕಡತಗಳ ಬಗ್ಗೆ ಕಾನೂನಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕಾದುದು ಮೇಲಾಧಿಕಾರಿಗಳ ಜವಾಬ್ದಾರಿ.ಆಧೀನದ ಅಧಿಕಾರಿಗಳು ಕಾನೂನಾತ್ಮಕವಾಗಿಯೇ ಮಂಡಿಸಿದ ಅಭಿಪ್ರಾಯಗಳನ್ನು ತಿರಸ್ಕರಿಸುವ ಮಹಾನುಭಾವರುಗಳಾದ ಮೇಲಾಧಿಕಾರಿಗಳೂ ಇದ್ದಾರೆ.ದುರುದ್ದೇಶದಿಂದ ಹೀಗೆ ವರ್ತಿಸುವವರನ್ನು ಅವರ ತಪ್ಪುಗಳಿಗೆ ಹೊಣೆಗಾರರನ್ನಾಗಿಸಬೇಕು,ಅವರಿಂದಲೇ ಕೋರ್ಟ್ ಗಳ ಶುಲ್ಕ,ಪರಿಹಾರ ಪಾವತಿಸುವಂತೆ ಮಾಡಬೇಕು.ಹೀಗಾದರೆ ಮಾತ್ರ ಎಚ್ಚೆತ್ತುಕೊಳ್ಳುತ್ತಾರೆ ಸರಕಾರಿ ಅಧಿಕಾರಿಗಳು.ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳು ಪಡೆಯುವ ಸರಕಾರಿ ಅಧಿಕಾರಿಗಳು ತಮ್ಮ ಸ್ವಾರ್ಥ ಮತ್ತು ಸ್ವೇಚ್ಛಾಚಾರದ ವರ್ತನೆಯಿಂದ ಕೋರ್ಟ್ ಗಳ ವ್ಯತಿರಿಕ್ತ ತೀರ್ಪುಗಳ ವೆಚ್ಚ ಮತ್ತು ಪರಿಹಾರ ನೀಡಲು ಕಾರಣರಾಗುತ್ತಾರೆ ಅಂದರೆ ಅಂಥವರು ಸಾರ್ವಜನಿಕರಿಗೆ ‘ ಭಾರವಾದವರೆ’,ಸಾರ್ವಜನಿಕರ ತೆರಿಗೆಯ ಹಣಕ್ಕೆ ‘ ಹೊರೆಯಾದವರೆ’!

‌07.05.2022

About The Author