ಆತ್ಮರತಿಯ ಮಣಭಾರದಲ್ಲಿ ಕುಗ್ಗಿರುವ ‘ಮಹಾನ್ ಮಾರ್ಗದರ್ಶಿ’ : ಮುಕ್ಕಣ್ಣ ಕರಿಗಾರ

ವಿಮರ್ಶೆ

ಆತ್ಮರತಿಯ ಮಣಭಾರದಲ್ಲಿ ಕುಗ್ಗಿರುವ ‘ಮಹಾನ್ ಮಾರ್ಗದರ್ಶಿ’ : ಮುಕ್ಕಣ್ಣ ಕರಿಗಾರ

ನಿನ್ನೆಯಿಂದ ರಾಬಿನ್ ಶರ್ಮಾ ಅವರ ‘ ಮಹಾನ್ ಮಾರ್ಗದರ್ಶಿ’ ಪುಸ್ತಕವನ್ನು ಓದುತ್ತಿದ್ದೇನೆ.ಗಂಭೀರ ಸಾಹಿತ್ಯವನ್ನು ಓದುವಂತೆಯೇ ನಾನು ವ್ಯಕ್ತಿತ್ವದ ವಿಕಸನ ಕುರಿತ ಪುಸ್ತಕಗಳನ್ನು ಓದುತ್ತಿರುವುದರಿಂದ ಒಂದು ಲಕ್ಷಕ್ಕೂ ಮೀರಿದ ಪುಸ್ತಕಗಳನ್ನುಳ್ಳ ನನ್ನ ಗ್ರಂಥಭಂಡಾರದಲ್ಲಿ ನೂರಕ್ಕೂ ಹೆಚ್ಚಿನ ಸಂಖ್ಯೆಯ ಕನ್ನಡ ಮತ್ತು ಇಂಗ್ಲಿಷನ personality development ಕುರಿತ ಪುಸ್ತಕಗಳಿವೆ.ರಾಬಿನ್ ಶರ್ಮಾ ಅವರ ‘ ಫೆರಾರಿ ಮಾರಿದ ಫಕೀರ’ ಪುಸ್ತಕವೂ ನನ್ನ ಗ್ರಂಥಭಂಡಾರದ ವ್ಯಕ್ತಿತ್ವ ವಿಕಸನ ವಿಭಾಗದ ಪುಸ್ತಕಗಳಲ್ಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ರಾಮಕೃಷ್ಣಾಶ್ರಮಗಳ ಸ್ವಾಮಿಗಳು ಬರೆದಿರುವ ಇಲ್ಲವೆ ಸಂಪಾದಿಸಿರುವ ವಿವೇಕಾನಂದರ ಬದುಕಿನ ಸ್ಫೂರ್ತಿದಾಯಕ ಪ್ರಸಂಗಗಳನ್ನು ಆಧರಿಸಿದ ವ್ಯಕ್ತಿತ್ವವಿಕಸನ ಪುಸ್ತಕಗಳೂ ನನ್ನಲ್ಲಿವೆ‌ ಎ.ಆರ್ .ಕೆ ಶರ್ಮಾ, ಎ.ಜಿ.ಕೃಷ್ಣಮೂರ್ತಿ,ಪ್ರೊ.ಗೀತಾ ಶ್ರೀನಿವಾಸನ್ ಮತ್ತು ಎಸ್ ಬಿ ಸರಸ್ವತಿ ಮೊದಲಾದವರು ಬರೆದ ವ್ಯಕ್ತಿತ್ವ ವಿಕಸನ ಸಂಬಂಧಿತ ಪುಸ್ತಕಗಳಿವೆ ನನ್ನ ಸಂಗ್ರಹದಲ್ಲಿ.

ಈ ವಿಮರ್ಶಾ ಲೇಖನವನ್ನು ಬರೆಯುವ ಪೂರ್ವದಲ್ಲಿಯೇ ಒಂದು ಮಾತು ಹೇಳಿಬಿಡುವೆ.ವ್ಯಕ್ತಿತ್ವ ವಿಕಸನದ ಕುರಿತಾದ ಪುಸ್ತಕಗಳನ್ನು‌ ಓದುವುದರಿಂದ ನಿಶ್ಚಿತವಾಗಿಯೂ ನಮ್ಮ ವ್ಯಕ್ತಿತ್ವ ಬದಲಾವಣೆ ಆಗುವುದಿಲ್ಲ.ಈ ಪುಸ್ತಕಗಳ ಪ್ರಭಾವ ತಾತ್ಕಾಲಿಕವಾದುದಷ್ಟೆ.ನಿಜವಾದ ಬದಲಾವಣೆ ನಮ್ಮೊಳಗಿನಿಂದಲೇ ಬರಬೇಕು.ನಮ್ಮ ವ್ಯಕ್ತಿತ್ವದ ಮಾದರಿಯನ್ನು ನಾವೇ ಸಿದ್ಧಪಡಿಸಿಕೊಳ್ಳಬೇಕು.ನಾವು ನಡೆಯಬೇಕಾದರೆ ನಮ್ಮ‌ಕಾಲುಗಳನ್ನು ಬಳಸಿಯೇ ನಡೆಯಬೇಕು,ಮತ್ತೊಬ್ಬರ ಕಾಲುಗಳನ್ನು ಬಳಸಿ ನಡೆಯಲಾಗದು.ಹಾಗೆಯೇ ನಮ್ಮ ವ್ಯಕ್ತಿತ್ವದ ಗತಿನಿರ್ಧಾರಕ ಶಕ್ತಿಯೂ ನಾವೇ ! ನಮ್ಮ ವ್ಯಕ್ತಿತ್ವವನ್ನು ನಾವೇ ಪ್ರಕಟಿಸಿಕೊಳ್ಳಬೇಕು.ನಮಗಾಗಿ ಅದನ್ನು ಇತರರು ಮಾಡಲು ಸಾಧ್ಯವಿಲ್ಲ.ವ್ಯಕ್ತಿತ್ವ ವಿಕಸನದ ಕುರಿತಾದ ಪುಸ್ತಕಗಳು ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಸ್ಫೂರ್ತಿಯಾಗಬಹುದಷ್ಟೆ.

ಈಗ ವಿಷಯಕ್ಕೆ ಬರುವೆ,ಪುಸ್ತಕ ವಿಮರ್ಶೆಗೆ ಹಿಂದಿರುಗುವೆ.ರಾಬಿನ್ ಶರ್ಮಾ ಅವರನ್ನು ‘ವ್ಯಕ್ತಿತ್ವವಿಕಸನಗುರು’ ಎಂದು ಕಾರ್ಪೋರೇಟ್ ಜಗತ್ತಿನ ಜನರು ಭಾವಿಸಿದ್ದಾರೆ.ರಾಬಿನ್ ಶರ್ಮಾ ಅವರ ಪುಸ್ತಕಗಳು ಲಕ್ಷಲಕ್ಷ ಸಂಖ್ಯೆಯಲ್ಲಿ ಮಾರಾಟಗೊಂಡಿವೆ.’ ಫೆರಾರಿ ಮಾರಿದ ಫಕೀರ’ ಪುಸ್ತಕವು ರಾಬಿನ್ ಶರ್ಮಾ ಅವರಿಗೆ ಎಲ್ಲಿಲ್ಲದ ಖ್ಯಾತಿಯನ್ನು,ಹಣವನ್ನು ತಂದುಕೊಟ್ಟ ಪುಸ್ತಕ.ಶರ್ಮಾ ಅವರ ಪುಸ್ತಕಗಳ ಎರಡುಮಿಲಿಯನ್ ಪ್ರತಿಗಳು ಮಾರಾಟವಾಗಿವೆಯಂತೆ! ಅದ್ಭುತ! ಆದರೆ ರಾಬಿನ್ ಶರ್ಮಾ ಇಂಗ್ಲಿಷ್ ಸಾಹಿತ್ಯಲೋಕದ ಮಹಾನ್ ಸಾಹಿತಿಯೇನಲ್ಲ! ರಾಬಿನ್ ಶರ್ಮಾ ತಮ್ಮನ್ನು ತಾವು ದೊಡ್ಡಗುರುವೆಂದು,ತತ್ತ್ವಜ್ಞಾನಿ ಎಂದು ಭಾವಿಸಿರಬಹುದು,ಮಿಲಿಯನ್ ಗಟ್ಟಲೆಮಾರಾಟಗೊಂಡು ಅವರ ಪುಸ್ತಕಗಳು ದಾಖಲೆ ನಿರ್ಮಿಸಿರಬಹುದು.ಆದರೆ ರಾಬಿನ್ ಶರ್ಮಾ ಅವರಿಗೆ ಇಂಗ್ಲಿಷ್ ಸಾಹಿತ್ಯ ಲೋಕದಲ್ಲಿ ಯಾವ ಸ್ಥಾನವೂ ಇಲ್ಲ! ನಮ್ಮಲ್ಲೂ ಕೂಡ ಕೆಲವು ಜನ ಜನಪ್ರಿಯ ಸಾಹಿತಿಗಳಿದ್ದಾರೆ,ಅವರಿಗೆ ಅವರದೇ ಆದ ದೊಡ್ಡಸಂಖ್ಯೆಯ ಓದುಗರ,ಅಭಿಮಾನಿಗಳ ಬಳಗ ಇದೆ.ಇಷ್ಟಿದ್ದೂ ಅಂಥವರು ಮಹಾನ್ ಸಾಹಿತಿಗಳಲ್ಲ.ನೂರಾರು ಕಾದಂಬರಿಗಳನ್ನು ಬರೆದವರಿದ್ದಾರೆ ಆದರೆ ‘ ಕಾನೂರು ಹೆಗ್ಗಡತಿ’ ಮತ್ತು ‘ ಮಲೆಗಳಲ್ಲಿ ಮದುಮಗಳು’ ಎನ್ನುವ ಎರಡೇ ಕಾದಂಬರಿಗಳನ್ನು ಬರೆದಿರುವ ಕುವೆಂಪು ಅವರು ಕಾದಂಬರಿ ಕ್ಷೇತ್ರ ಸಾವಿರವರ್ಷಗಳಲ್ಲಿ ತಲುಪಬಹುದಾದ ಆತ್ಯಂತಕ ಸಿದ್ಧಿಯ ಶಿಖರವನ್ನು ಐವತ್ತು ವರ್ಷಗಳ ಹಿಂದೆಯೇ ತಲುಪಿದ್ದಾರೆ ಮತ್ತು ಕುವೆಂಪು ಅವರಂತೆ ‘ ಗದ್ಯಮಹಾಕಾವ್ಯವಾದ ಕಾದಂಬರಿ’ ಗಳನ್ನು ಬರೆಯಲು ಇತರರಿಂದ ಸಾಧ್ಯವಿಲ್ಲದ ಉತ್ಕೃಷ್ಟತೆಯನ್ನು ಅವರು ಸಾಧಿಸಿದ್ದಾರೆ.ಹತ್ತುಹಲವು ವಸ್ತುಗಳನ್ನಾಯ್ದುಕೊಂಡು ,ಗ್ರಾಮೀಣ ಭಾಷೆಯ ಸೊಗಡಿನಲ್ಲಿ ನೂರಾರು ಕಥೆಗಳನ್ನು ಬರೆದ,ಬರೆಯುತ್ತಿರುವ ಕಥೆಗಾರರು ನಮ್ಮಲ್ಲಿದ್ದಾರೆ; ಆದರೆ ಅವರಾರೂ ಮಾಸ್ತಿಯವರಂತೆ ಕಥೆಗಳನ್ನು ಬರೆಯಲು ಸಾಧ್ಯವಿಲ್ಲ.ಈಗಿನ ಬರಹಗಾರರಲ್ಲಿ ಬರೆಯಬೇಕು ಎನ್ನುವ ಉಮೇದು ಇದೆಯೇ ಹೊರತು ಅಧ್ಯಯನಶೀಲತೆ ಇಲ್ಲ,ಜೀವನಾನುಭವವಿಲ್ಲ.ತೋಚಿದ್ದನ್ನೇ ಗೀಚುವ ಹವ್ಯಾಸ ಉಳ್ಳವರು ಕವಿ,ಸಾಹಿತಿಗಳಾಗಲಾರರು.ಹಾಗೆಯೇ ಓದುಗರಿಗೆ ಅರ್ಥವಾಗದ ಭಾವ,ಭಾಷೆಯನ್ನು ಬಳಸುವ ಸರ್ಕಸ್ ಸಾಹಿತಿಗಳೂ ಕೂಡ ಉತ್ತಮ ಸಾಹಿತಿಗಳಲ್ಲ.

ಭಾರತವು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ತೆರೆದುಕೊಂಡ ಬಳಿಕ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ನಾಗರಿಕತೆ,ಸಂಸ್ಕೃತಿಯೊಂದಿಗೆ ದೇಶಕ್ಕೆ ಕಾಲಿಟ್ಟವು‌.ಉತ್ಕೃಷ್ಟಗುಣಮಟ್ಟದ ಹೆಸರಿನಲ್ಲಿ ಅತಿದುಬಾರಿ ಬೆಲೆಗೆ ಸರಕು- ಸೇವೆಗಳನ್ನು ಒದಗಿಸುವ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸಂಸ್ಥೆಗಳ ಅಧಿಕಾರಿಗಳು,ಸಿಬ್ಬಂದಿಯವರಿಗೆ ಹಲವು ಹತ್ತು ವಿಲಾಸಿ ಸುಖೋಪಭೋಗಸೌಕರ್ಯಗಳನ್ನು ಕಲ್ಪಿಸಿವೆ.ನಮ್ಮದಲ್ಲದ’ ಡೇಟಿಂಗ್ ಕಲ್ಚರ್’, ‘ ಲಿವಿಂಗ್ ಟುಗೇದರ್ ರಿಲೇಶನ್ಶಿಪ್’ ಗಳಂತಹ ವ್ಯಸನಜೀವನಸಂಸ್ಕೃತಿ ರೂಢಿಗೊಂಡಿದ್ದು ಬಹುರಾಷ್ಟ್ರೀಯ ಕಂಪನಿಗಳ ಲಾಭಬಡುಕತನದ ವ್ಯಾಪಾರೋತ್ತೇಜನ ಕ್ರಿಯೆಯ ಫಲವಾಗಿ.ಮಾದಕದ್ರವ್ಯಸೇವನೆಯಂತಹ ಹಲವು ವ್ಯಸನಗಳ ದಾಸರಾದ ಕಂಪನಿಗಳ ನೌಕರರುಗಳಿಂದ ಹೆಚ್ಚಿನ ದುಡಿಮೆಯನ್ನು ನಿರೀಕ್ಷಿಸಲು ಬಹುರಾಷ್ಟ್ರೀಯ ಕಂಪನಿಗಳು ‘ ವ್ಯಕ್ತಿತ್ವ ವಿಕಸನ ಶಿಬಿರ’ ಇಲ್ಲವೆ ಉಪನ್ಯಾಸಗಳನ್ನೇರ್ಪಡಿಸುತ್ತಿವೆ.ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಪಾಲ್ಗೊಂಡ ಅಂತಹ ಉಪನ್ಯಾಸಕರುಗಳು ಬರೆದ ಪುಸ್ತಕಗಳೇ ವ್ಯಕ್ತಿತ್ವ ವಿಕಸನದ ಪುಸ್ತಕಗಳು.ಕಾರ್ಪೋರೇಟ್ ಜಗತ್ತಿನ ಜನರು,ಅಲ್ಲಿ ದುಡಿಯುತ್ತಿರುವವರು ಇಂತಹ ಪುಸ್ತಕಗಳನ್ನು ಖರೀದಿಸಿ,ಓದುತ್ತಾರೆ.ಫಲವಾಗಿ ರಾಬಿನ್ ಶರ್ಮಾ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಪರ್ಸನಾಲಿಟಿ ಡೆವಲಪ್ಮೆಂಟ್ ವಿಷಯದ ‘ ಗುರು’ ವಾಗುತ್ತಾರೆ.

‘ ಮಹಾನ್ ಮಾರ್ಗದರ್ಶಿ’ ಪುಸ್ತಕವು ರಾಬಿನ್ ಶರ್ಮಾ ಅವರ ಎಲ್ಲ ಪುಸ್ತಕಗಳಂತೆ ಬಹುರಾಷ್ಟ್ರೀಯ ಕಂಪನಿಗಳು,ದೊಡ್ಡದೊಡ್ಡ ಉದ್ದಿಮೆಗಳಲ್ಲಿ ದುಡಿಯುವ ಅಧಿಕಾರಿಗಳು,ನೌಕರರಿಗೆ ಉಪಯುಕ್ತವಾಗಬಹುದಾದ ಪುಸ್ತಕವೇ ಹೊರತು ಸಾಹಿತ್ಯಾಸಕ್ತರಿಗೆ,ಭಾರತೀಯ ಮಹತ್ವಾಕಾಂಕ್ಷಿಗಳಿಗೆ ಅದರಿಂದ ಯಾವ ಪ್ರಯೋಜನವೂ ಇಲ್ಲ.ಒಂದು ನೂರಾ ಒಂದು ಸಣ್ಣ ಸಣ್ಣ ಅಧ್ಯಾಯಗಳ ಈ ಪುಸ್ತಕದಲ್ಲಿ ಅಲ್ಲಲ್ಲಿ ಕೆಲವೊಂದು ಚೇತೋಹಾರಿ ಉಲ್ಲೇಖ,ಪ್ರಸಂಗಗಳಿವೆ ಎನ್ನುವುದನ್ನು ಬಿಟ್ಟರೆ ಈ ಪುಸ್ತಕವು ವ್ಯರ್ಥ ಕಸರತ್ತು ಎನ್ನದೆ ವಿಧಿಯಿಲ್ಲ.ರಾಬಿನ್ ಶರ್ಮಾ ‘ ತಾನೊಬ್ಬ ಸಾಮಾನ್ಯ ಮನುಷ್ಯ’ ಎನ್ನುತ್ತಲೇ ತಾವೊಬ್ಬ ಮಹಾನ್ ದಾರ್ಶನಿಕ,ತತ್ತ್ವಜ್ಞಾನಿ ಎನ್ನುವ ಭ್ರಮೆಗೆ ಒಳಗಾದಂತೆ ಕಾಣಿಸುತ್ತಾರೆ.ತಾವು ಗುರುವಾಗಿರುವುದು ವಿಸ್ತಾರವಾದ ಪ್ರಪಂಚದ ಅಣುಮಾತ್ರವಾದ ವ್ಯಾವಹಾರಿಕ ಪ್ರಪಂಚಕ್ಕೇ ಹೊರತು ಪರಮಾತ್ಮನ ಸೃಷ್ಟಿಯ ಅದ್ಭುತ,ಆನಂದದ ಪ್ರಪಂಚಕ್ಕೆ ಅಲ್ಲ ಎನ್ನುವ ಅರಿವು ಅವರಲ್ಲಿ ಇಲ್ಲ.ತಮ್ಮ ವೈಯಕ್ತಿಕ ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನೇ ವೈಭವೀಕರಿಸಿ ಬರೆಯುತ್ತಾರೆ.ತಾವು, ತಮ್ಮಕುಟುಂಬ,ತಮ್ಮ ಇಬ್ಬರು ಮಕ್ಕಳು,ತಮ್ಮ ವಿಮಾನಪ್ರಯಾಣ, ಪ್ರಪಂಚದ ಪ್ರಸಿದ್ಧ ಹೊಟೆಲ್ ಗಳಲ್ಲಿ ತಂಗುವ ಸಂಗತಿಗಳನ್ನೇ ಮಹತ್ವದ್ದು ಎಂಬಂತೆ ಬಿಂಬಿಸುವ ರಾಬಿನ್ ಶರ್ಮಾ ಓದುಗರ ತಾಳ್ಮೆಯನ್ನು ಪರೀಕ್ಷಿಸುವ ಸಾಹಸಕ್ಕೂ ಕೈಹಾಕಿದ್ದಾರೆ ‘ ಮಹಾನ್ ಮಾರ್ಗದರ್ಶಿ’ ಯಲ್ಲಿ.ನಿಜವಾದ ಗುರು,ಬರಹಗಾರ ತನ್ನ ವೈಯಕ್ತಿಕ ಬದುಕಿನ ಸಂಗತಿಗಳನ್ನು ವೈಭವೀಕರಿಸದೆ ಸಂಗತಿ,ವಸ್ತುಸ್ಥಿತಿ ಮತ್ತು ಹೇಳಹೊರಟಿರುವ ವಿಷಯವನ್ನು ವೈಭವೀಕರಿಸಬೇಕು.ತನ್ನ ವೈಯಕ್ತಿಕ ಬದುಕು,ತನ್ನ ಮನೆಯೇ ಪ್ರಪಂಚವಾದವನು ಉತ್ತಮ ಲೇಖಕನಲ್ಲ,ತತ್ತ್ವಜ್ಞಾನಿಯಂತೂ ಅಲ್ಲವೇ ಅಲ್ಲ.ನೂರೊಂದು ಅಧ್ಯಾಯಗಳ ಈ ಪುಸ್ತಕದಲ್ಲಿ ಹನ್ನೊಂದು ಅಧ್ಯಾಯಗಳ ಪರಿಮಿತಿಯಲ್ಲಿ ಸತ್ವವನ್ನು ಹುಡುಕಬಹುದಷ್ಟೆ.

ರಾಬಿನ್ ಶರ್ಮಾ ಅವರ ‘ಮಹಾನ್ ಮಾರ್ಗದರ್ಶಿ’ ಬಹುರಾಷ್ಟ್ರೀಯ ಕಂಪನಿಗಳು,ಆಧುನಿಕತೆಗೆ ತೆರೆದುಕೊಂಡ ದೊಡ್ಡದೊಡ್ಡ ಉದ್ದಿಮೆಗಳಲ್ಲಿ ದುಡಿಯುತ್ತಿರುವವರ ಕೈಯ್ಗಳಲ್ಲಿರಬಹುದಾದ ಪುಸ್ತಕವೇ ಹೊರತು ಮಹತ್ಕಾರ್ಯಗಳನ್ನು ಸಾಧಿಸುವವರಿಗೆ,ಮಹತ್ವಾಕಾಂಕ್ಷಿಗಳಿಗೆ,ಸೇವಾಯೋಗಿಗಳಿಗೆ,ಭಾರತೀಯ ನೆಲದ ಸತ್ತ್ವಕ್ಕನುಗುಣವಾದ ವ್ಯಕ್ತಿತ್ವಸಿದ್ಧಿಯನ್ನು ಸಂಪಾದಿಸಿಕೊಳ್ಳುವವರಿಗೆ ಈ ಪುಸ್ತಕ ಖಂಡಿತ ನಿರಾಶೆಯನ್ನುಂಟು ಮಾಡುತ್ತದೆ.ಪ್ರಸಿದ್ಧ ಕವಿ,ಕಲಾವಿದ,ರಾಜಕಾರಣಿಗಳ ಕೆಲವು ಮಾತುಗಳು,ಪ್ರಸಂಗಗಳು ಕೃತಿಯ ಸೊಬಗನ್ನು ಹೆಚ್ಚಿಸಿವೆ ಎನ್ನುವುದನ್ನು ಬಿಟ್ಟರೆ ‘ ಮಹಾನ್ ಮಾರ್ಗದರ್ಶಿ’ ಯು ‘ ಮಂತ್ರಕ್ಕಿಂತ ಉಗುಳೇ ಜಾಸ್ತಿ’ ಯಾದ ಹೋಮಕ್ರಿಯೆ ಇಲ್ಲವೆ ಮಂತ್ರಪಠಣೆಯ ಅನರ್ಥಕತೆಗೆ,ಅಸಾರತೆಗೆ ಉತ್ತಮ ನಿದರ್ಶನ.

 

About The Author