ಶ್ರೀರಂಗಲಿಂಗೇಶ್ವರರ ತತ್ವಪದಗಳ ಸಿಡಿ ಬಿಡುಗಡೆ : ಸಮಾಜಕ್ಕೆ ಶ್ರೀರಂಗಲಿಂಗೇಶ್ವರರ ಕೊಡುಗೆ ಅಪಾರ

ಶಹಾಪುರ :  ಭಕ್ತರ ಪಾಲಿನ ಆರಾಧ್ಯ ದೈವ ಶ್ರೀರಂಗಲಿಂಗೇಶ್ವರ ಶರಣರ ಪುಣ್ಯಾಶ್ರಮದಲ್ಲಿ ಸೋಮವಾರ ಕಾರ್ತಿಕ ಮಾಸಾಚರಣೆ ಹಿನ್ನೆಲೆ ೧೪ ವರ್ಷದ ಪ್ರಸಾದೋತ್ಸವ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀರಂಗಲಿಂಗೇಶ್ವರರು ಮತು ಶ್ರೀಮಠದ ಶರಣರು ಹಾಗೂ ರಂಗಲಿಂಗೇಶ್ವರರ ಸುಪುತ್ರರಾದ ತ್ರಿಶೂಲಪ್ಪ ಶರಣರು ರಚಿಸಿದ ತತ್ವಪದಗಳ ಸಿಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಸಂಶೋಧಕ, ಉಪನ್ಯಾಸಕ ಧರ್ಮಣ್ಣ ಬಡಿಗೇರ ಮಾತನಾಡಿ, ಈ ಭಾಗದಲ್ಲಿ ಕಡಕೋಳ ಮಡಿವಾಳಪ್ಪನವರು ತತ್ವಪದಕಾರರಲ್ಲಿ ಶ್ರೇಷ್ಠರಾಗಿ ಎಲ್ಲರ ಮನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅದರಂತೆ ಶ್ರೀರಂಗಲಿಂಗೇಶ್ವರರು ಸುಮಾರು ೨೫೦ ಕ್ಕೂ ಹೆಚ್ಚು ತತ್ವಪದಗಳನ್ನು ರಚಿಸಿದ್ದಾರೆ. ತತ್ವಪದಗಳು ಬದುಕಿನ ತಿರಳನ್ನು ತಿಳಿಸುವಂತ ಆಧ್ಯಾತ್ಮಿಕತೆ ಮೂಲಕ ದೇವರ ಸಾಮೀಪ್ಯವನ್ನು ಬಯಸುವಂತಹದ್ದು, ಅವುಗಳ ಅಧ್ಯಯನ ಮಾಡಿ ಬಿಡಿಸಿ ವಿವರಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.

ಶ್ರೀರಂಗಲಿಂಗೇಶ್ವರರು ರಚಿಸಿದ ತತ್ವಪದಗಳ ಸಿಡಿಯನ್ನು ಉದ್ಘಾಟಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರಮನುಷ್ಯನಲ್ಲಿ ಆದ್ಯಾತ್ಮಿಕ ಅನುಭವವಾಗಬೇಕಾದರೆ, ಅವರ ಒಳಮನಸ್ಸಿನಲ್ಲಿ  ಆಧ್ಯಾತ್ಮಿಕ ಶಕ್ತಿಯ ಸಂಚಲನ ಮೂಡಲಿದೆ. ಅದನ್ನು ಅನುಸರಿಸುತ್ತಾ ಹೋದಂತೆ ಮನುಷ್ಯ ಆಧ್ಯಾತ್ಮಿಕದ ಸುಖದ ನೆಲೆಕಂಡುಕೊಂಡು ಭಗವಂತನಲ್ಲಿ ಲೀನವಾಗುವ ಭಾವ ಬೆಳೆಸಿಕೊಳ್ಳುತ್ತಾನೆ.ಎಲ್ಲವು ಮೂಢನಂಬಿಕೆ ಆಗಿರುವದಿಲ್ಲ ಅದರಲ್ಲಿ ಮೂಡುವ ನಂಬಿಕೆಯನ್ನು ಮನುಷ್ಯ ಗಳಿಸಬೇಕಾಗುತ್ತದೆ. ನಂಬಿಕೆ ಮೇಲೆ ಮನುಷ್ಯ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ ಎಂದರು.
ಸಾತ್ವಿಕ ಗುಣ ಹೊಂದಿದ ಮನುಷ್ಯ ಸಾಮಾನ್ಯವಾಗಿ  ಆಧ್ಯಾತ್ಮಿಕತೆಯಡೆ ಹೆಜ್ಜೆ ಹಾಕುತ್ತಿರುತ್ತಾನೆ ಎಂಬುದು ಮನಗಾಣಬೇಕಿದೆ. ಡೋಂಗಿ ಆಧ್ಯಾತ್ಮಿಕವಾದಿಗಳು ಸಾಕಷ್ಟು ಜನರಿದ್ದಾರೆ. ಆದರೆ ಅವರ ಮಧ್ಯ ಸಾತ್ವಿಕರಿದ್ದಾರೆ ಎಂಬುದನ್ನು
ಮರೆಯಬಾರದು. ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಡೆ ನಾವೆಲ್ಲ ಸಂತ, ಶರಣರು ತೋರಿದ ಸನ್ಮಾರ್ಗದತ್ತ ಹೆಜ್ಜೆ ಹಾಕೋಣ ಎಂದರು.
ಶ್ರೀಮಠದ ತ್ರಿಶೂಲ ಶರಣರು ಅಧ್ಯಕ್ಷತೆವಹಿಸಿದ್ದರ.ಹಣಮಂತ್ರಾಯ ಗೋಗಿ, ಮುಕ್ತಂಪಟೇಲ್, ಗಂಗಾರಾಮ,ಬಸುಗೌಡ, ರುದ್ರಯ್ಯ, ಗೋವಿಂದರಾಜ ಆಲ್ದಾಳ, ಶರಣಪ್ಪ,ಹೊಸಮನಿ ಉಪಸ್ಥಿತರಿದ್ದರು. ಈರಪ್ಪ ಹವಲ್ದಾರ ನಿರೂಪಿಸಿ
ವಂದಿಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಮುದ್ನೂರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

About The Author