ಜಾತಿಗಣತಿ ವರದಿ ; ಮಲ್ಲಿಕಾರ್ಜುನ ಖರ್ಗೆಯವರ ಬದ್ಧತೆ ಮತ್ತು ಡಿ.ಕೆ.ಶಿವಕುಮಾರ ಅವರ ಅಪ್ರಬುದ್ಧತೆ

ಜಾತಿಗಣತಿ ವರದಿ ; ಮಲ್ಲಿಕಾರ್ಜುನ ಖರ್ಗೆಯವರ ಬದ್ಧತೆ ಮತ್ತು ಡಿ.ಕೆ.ಶಿವಕುಮಾರ ಅವರ ಅಪ್ರಬುದ್ಧತೆ : ಮುಕ್ಕಣ್ಣ ಕರಿಗಾರ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಜಾತಿಗಣತಿಯ ವರದಿಯನ್ನು ಬಹಿರಂಗಪಡಿಸಲು ವಿರೋಧಿಸಿ,ಒತ್ತಡ ಹೇರುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿಲುವನ್ನು ರಾಜ್ಯಸಭೆಯಲ್ಲಿಯೇ ಖಂಡಿಸಿ ಜಾತಿಗಣತಿಯ ವರದಿಯ ಬಿಡುಗಡೆಗೆ ತಮ್ಮ ಸಮ್ಮತಿ ಇರುವುದನ್ನು ಸ್ಪಷ್ಟಪಡಿಸಿದ್ದಾರೆ.ರಾಜ್ಯಸಭೆಯ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಸುಶಿಲ್ ಕುಮಾರ್ ಮೋದಿ ಕರ್ನಾಟಕದ ಜಾತಿಗಣತಿಯ ವರದಿಯ ಕುರಿತು ಪ್ರಸ್ತಾಪಿಸಿ ‘ಜಾತಿಗಣತಿ ವರದಿಯನ್ನು ಕರ್ನಾಟಕ ಸರಕಾರ ಯಾವಾಗ ಬಹಿರಂಗಗೊಳಿಸುತ್ತದೆ ಎಂಬುದನ್ನು ಖರ್ಗೆಯವರೇ ಹೇಳಬೇಕು.ವರದಿ ಬಹಿರಂಗಗೊಳಿಸುವುದನ್ನು ವಿರೋಧಿಸಿ ಒಕ್ಕಲಿಗರ ಸಂಘ ಸಲ್ಲಿಸಿರುವ ಮನವಿಗೆ ಶಿವಕುಮಾರ್ ಸಹಿ ಹಾಕಿದ್ದಾರೆ’ ಎಂದು ಟೀಕಿಸಿದ್ದಕ್ಕೆ ಉತ್ತರಕೊಡುತ್ತ ಮಲ್ಲಿಕಾರ್ಜುನ ಖರ್ಗೆಯವರು ‘ ವರದಿ ಬಿಡುಗಡೆಗೆ ಶಿವಕುಮಾರ್ ವಿರೋಧಿಸುತ್ತಿದ್ದಾರೆ.ಈ ವಿಷಯದಲ್ಲಿ ಪ್ರಬಲ ಜಾತಿಗಳ ಜನರೆಲ್ಲ ಒಗ್ಗಟ್ಟಾಗಿದ್ದಾರೆ.ಈ ವಿಷಯದಲ್ಲಿ ಪ್ರಬಲ ಜಾತಿಯ ಜನರು ಆಂತರಿಕವಾಗಿ ಒಗ್ಗಟ್ಟಾಗುತ್ತಾರೆ’ ಎಂದು ಹೇಳಿರುವ ಖರ್ಗೆಯವರು ಜಾತಿಗಣತಿವರದಿ ಬಿಡುಗಡೆಗೆ ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದ್ದಾರೆ.ಮಲ್ಲಿಕಾರ್ಜುನ ಖರ್ಗೆಯವರ ಈ ಮಾತು ಡಿ.ಕೆ.ಶಿವಕುಮಾರ ಅವರ ಜಂಘಾಬಲ ಉಡುಗಿಸಿದ್ದು ಮಾತ್ರವಲ್ಲದೆ ರಾಜ್ಯಸರಕಾರದ ಭಾಗವಾಗಿಯೂ ಒಕ್ಕಲಿಗ ಲಿಂಗಾಯತ ಸಮುದಾಯಗಳಿಗೆ ಸೇರಿದ ಸಚಿವರುಗಳ ಜಾತಿಪ್ರೇಮದಾಟಕ್ಕೆ ಬೀಸಿದ ದೊಣ್ಣೆ ಏಟುಕೂಡ ಹೌದು.ಇಂತಹ ವಿಷಯಗಳಲ್ಲಿ ಪ್ರಬಲಜಾತಿಗಳು ಆಂತರಿಕವಾಗಿ ಒಕ್ಕಟ್ಟಾಗುವ ಸಾಮಾಜಿಕ ಸೂಕ್ಷ್ಮದತ್ತಲೂ ಮಲ್ಲಿಕಾರ್ಜುನ ಖರ್ಗೆಯವರು ದೇಶದ ಗಮನಸೆಳೆದಿದ್ದಾರೆ.ದಲಿತರು,ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬದ್ಧತೆಗೆ ಹೆಸರಾಗಿರುವ ಕಾಂಗ್ರೆಸ್ ಪಕ್ಷದ ಮೇಲ್ವರ್ಗದ ರಾಜಕಾರಣಿಗಳು ಕಾಂಗ್ರೆಸ್ ಪಕ್ಷವು ತನ್ನ ಸಿದ್ಧಾಂತದ ಬದ್ಧತೆಯಿಂದಲೇ ಜನಮನವನ್ನು ಗೆಲ್ಲುತ್ತಿದೆ ಎನ್ನುವುದನ್ನು ನಿರ್ಲಕ್ಷಿಸಿ, ಪಕ್ಷದ ಹಿತವನ್ನು ಕಡೆಗಣಿಸಿ ತಮ್ಮ ಜಾತಿ ಜನಾಂಗಗಳ ಏಳಿಗೆಗಾಗಿ ರಾಜಕೀಯಬಲ ಪ್ರದರ್ಶಿಸುತ್ತಿರುವುದು ಗುಟ್ಟಿನ ಸಂಗತಿ ಏನಲ್ಲ.ಕರ್ನಾಟಕದಲ್ಲಿ ಒಕ್ಕಲಿಗರ ಜೊತೆಗೆ ವೀರಶೈವ ಲಿಂಗಾಯತರು ಸಹ ಜಾತಿಗಣತಿಯ ವರದಿಯನ್ನು ವಿರೋಧಿಸುತ್ತಿದ್ದು ಸಚಿವರುಗಳಾದ ಎಂ ಬಿ ಪಾಟೀಲ್,ಈಶ್ವರ ಖಂಡ್ರೆ ಮೊದಲಾದವರು ವೀರಶೈವ ಲಿಂಗಾಯತ ಸಮುದಾಯದ ಸ್ವಾಮಿಗಳೊಂದಿಗೆ ಈ ಕುರಿತು ಚರ್ಚಿಸಿದ್ದ ವಿಷಯವೂ ಮಲ್ಲಿಕಾರ್ಜುನ ಖರ್ಗೆಯವರ ಆಕ್ರೋಶದ ಕಾರಣ ಎನ್ನುವುದು ಸರಕಾರದ ಭಾಗವಾಗಿರುವ ಲಿಂಗಾಯತ ಸಮುದಾಯದ ಸಚಿವರುಗಳು ಅರ್ಥಮಾಡಿಕೊಳ್ಳಬೇಕು.

ಮಲ್ಲಿಕಾರ್ಜುನ ಖರ್ಗೆಯವರ ಮಾತು ಕೇಳಿದೊಡನೆ ಡಿ.ಕೆ.ಶಿವಕುಮಾರ್ ತಮ್ಮ ಮಾತಿನ ವರಸೆ ಬದಲಾಯಿಸಿ ‘ ನಾನು ಜಾತಿಗಣತಿ ವರದಿಯನ್ನು ವಿರೋಧಿಸಿಲ್ಲ, ಜಾತಿಗಣತಿಯು ವೈಜ್ಞಾನಿಕವಾಗಿ ನಡೆಯಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು’ ಎಂದು ಸ್ಪಷ್ಟನೆ ನೀಡಿದ್ದಾರೆ.ಮಲ್ಲಿಕಾರ್ಜುನ ಖರ್ಗೆಯವರ ಕೆಂಗೆಣ್ಣಿಗೆ ಗುರಿಯಾದರೆ ತಮ್ಮ ಮುಖ್ಯಮಂತ್ರಿಪಟ್ಟದ ಕನಸು ಈಡೇರುವುದು ಕಷ್ಟ ಎನ್ನುವ ಕಾರಣದಿಂದಲೇ ಡಿ.ಕೆ.ಶಿವಕುಮಾರ್ ಅವರು ಈ ಸ್ಪಷ್ಟನೆ ನೀಡಿ ‘ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ’ ಮಾಡಿದ್ದಾರೆಯೇ ಹೊರತು ಜಾತಿಗಣತಿ ವರದಿ ಪ್ರಕಟಣೆಯ ಬದ್ಧತೆಯಿಂದ ಆಡಿಲ್ಲ.ಜಾತಿಗಣತಿ ವರದಿಯನ್ನು ಬಹಿರಂಗಪಡಿಸಲು ವಿರೋಧಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಜಾತಿಪ್ರೇಮದಿಂದ ತಾವು ಕುಳಿತ ಹುದ್ದೆಗಳ ಆಶಯವನ್ನೇ ಗಾಳಿಗೆ ತೂರಿದ್ದಾರೆ.ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಜಾತಿಗಣತಿ ವರದಿಯ ಬಿಡುಗಡೆಯನ್ನು ಬೆಂಬಲಿಸಬೇಕಿತ್ತು.ಕಾಂಗ್ರೆಸ್ ಪಕ್ಷದ ಮೂಲಸಿದ್ಧಾಂತವೇ ಹಿಂದುಳಿದವರು ಅಲ್ಪಸಂಖ್ಯಾತರು ಮತ್ತು ಶೋಷಿತಸಮುದಾಯಗಳ ಹಿತಸಾಧನೆ.ಜಾತಿಗಣತಿಯ ವರದಿಯು ಕಾಂಗ್ರೆಸ್ ಪಕ್ಷದ ಉದ್ದೇಶಕ್ಕೆ ಪೂರಕವಾದ ವರದಿಯಾಗಿದ್ದು ಆ ವರದಿ ಬಹಿರಂಗಗೊಳ್ಳುವುದರಿಂದ ಕಾಂಗ್ರೆಸ್ ಪಕ್ಷದ ವರ್ಛಸ್ಸು ವೃದ್ಧಿಯಾಗುತ್ತಿತ್ತು.ಸ್ವಜಾತಿಪ್ರೇಮದಿಂದ ಅಂತಹ ಸದವಕಾಶಕ್ಕೆ ತೊಡರುಗಾಲು ಹಾಕಿದರು ಡಿ.ಕೆ.ಶಿವಕುಮಾರ್.ಇನ್ನು ಡಿ.ಕೆ.ಶಿವಕುಮಾರ್ ಅವರು ‘ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ’ ಎಂದು ಪ್ರಮಾಣವಚನ ಸ್ವೀಕರಿಸಿ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ.ಸಂವಿಧಾನವು ದಲಿತರು ಸೇರಿದಂತೆ ದುರ್ಬಲಸಮುದಾಯಗಳ ಉನ್ನತಿಯು ರಾಜ್ಯದ ಆದ್ಯಕರ್ತವ್ಯ ಎನ್ನುತ್ತದೆ.ದಲಿತರು ಸೇರಿದಂತೆ ಅವಕಾಶವಂಚಿತ ಸಮುದಾಯಗಳ ಉನ್ನತಿಗೆ ಕಾರಣವಾಗುವ ಜಾತಿಗಣತಿವರದಿಯ ಬಿಡುಗಡೆಗೆ ತೊಡರುಗಾಲನ್ನಿಕ್ಕಿದ ಡಿ.ಕೆ.ಶಿವಕುಮಾರ್ ಅವರು ಸಂವಿಧಾನದ ಆಶಯಗಳನ್ನು ಧಿಕ್ಕರಿಸಿದ್ದಾರೆ.ಡಿ.ಕೆ.ಶಿವಕುಮಾರ್ ಅವರು ಜಾತಿಗಣತಿಯ ವರದಿಯ ಬಿಡುಗಡೆಗೆ ಆಗ್ರಹಿಸಿದ್ದರೆ ಅವರು ಶೂದ್ರಸಮುದಾಯಗಳು, ಹಿಂದುಳಿದ ವರ್ಗಗಳ ನಾಯಕರಾಗಿ ಹೊರಹೊಮ್ಮಬಹುದಿತ್ತು.ಆದರೆ ಒಕ್ಕಲಿಗಜಾತಿಯ ಹಿತ ಒಂದೇ ತಮ್ಮ ಜೀವನದ ಸಾರ್ಥಕತೆ ಎನ್ನುವಂತೆ ವರ್ತಿಸಿದ್ದರಿಂದ ಶೂದ್ರಸಮುದಾಯಗಳ ಕೆಂಗಣ್ಣಿಗೂ ಗುರಿಯಾದರು. ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ,ಮುಖ್ಯಮಂತ್ರಿಯಾಗುವುದು ತಮ್ಮ ಜನ್ಮಸಿದ್ಧ ಹಕ್ಕು ( ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವೂ ಇದೆ.ಆ ಮಾತು ಬೇರೆ) ಎನ್ನುವಂತೆ ವರ್ತಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರು ಕೇವಲ ಒಕ್ಕಲಿಗರ ಹಿತೈಷಿಯಾಗಿ ವರ್ತಿಸುತ್ತಿದ್ದು ಮುಖ್ಯಮಂತ್ರಿಯಾಗಿ ಅವರು ಸಮಷ್ಟಿನಾಯಕರಾಗಬಲ್ಲರೆ ಎನ್ನುವ ಸಂದೇಹವನ್ನುಂಟು ಮಾಡಿದೆ.ಪರಮಾತ್ಮನು ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರು ಎನ್ನುವ ಕಾರಣದಿಂದ ಅವರಿಗೆ ಮುಖ್ಯಮಂತ್ರಿ ಆಗುವ ಅದೃಷ್ಟ ಕಲ್ಪಿಸಿಲ್ಲ ; ಹಿಂದಣ ಹಲವು ಜನ್ಮಗಳಲ್ಲಿ ಗೈದ ಸತ್ಕಾರ್ಯಗಳ ಫಲವಾಗಿ ಅವರಿಗೆ ಪರಮಾತ್ಮನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗವನ್ನಿತ್ತಿದ್ದಾನೆ ಎನ್ನುವ ದೈವನಿಯಮವನ್ನರಿತು ಡಿ.ಕೆ‌.ಶಿವಕುಮಾರ್ ಅವರು ಒಕ್ಕಲಿಗರ ಹಿತಸಾಧನೆಯೇ ಸಾರ್ಥಕತೆ ಎಂದು ಭಾವಿಸುವ ಬದಲು ಎಲ್ಲ ಜಾತಿ,ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕಾರ್ಯವನ್ನು ಈಗಲಾದರೂ ಮಾಡಬೇಕು.ಇಲ್ಲದಿದ್ದರೆ ಕುಳಿತುಕೊಳ್ಳಲಿರುವ ಮುಖ್ಯಮಂತ್ರಿ ಹುದ್ದೆಯಲ್ಲಿ ಅವರು ಬಹುಕಾಲ ಮುಂದುವರೆಯುವುದಿಲ್ಲ.

 

( ಲೇಖಕರು ‘ ಶೂದ್ರಭಾರತ ಪಕ್ಷ’ ಎನ್ನುವ ಪ್ರಾದೇಶಿಕ ಪಕ್ಷದ ಅಧ್ಯಕ್ಷರು ಹಾಗೂ ‘ ಶೂದ್ರ ಸಮುದಾಯಗಳ ಕಲ್ಯಾಣ ಕೇಂದ್ರ ಅಧ್ಯಕ್ಷರು)

About The Author