ಸಂವಿಧಾನ ಪ್ರಜ್ಞೆ’ ಯ ಪ್ರಸಾರ ಇಂದಿನ ತುರ್ತು ಅಗತ್ಯ : ಮುಕ್ಕಣ್ಣ ಕರಿಗಾರ

ನಾಳೆ,ನವೆಂಬರ್ 26 ರಂದು ದೇಶದಾದ್ಯಂತ ‘ಸಂವಿಧಾನ ದಿನಾಚರಣೆ'( Constitution Day) ಯನ್ನು ಆಚರಿಸಲಾಗುತ್ತಿದೆ.ಸಂವಿಧನಾ ರಚನಾ ಸಭೆಯು 1949 ರ ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿದ ಸ್ಮರಣೆಯಲ್ಲಿ ಪ್ರತಿವರ್ಷ ನವೆಂಬರ್ 26 ರಂದು ‘ ಸಂವಿಧಾನ ದಿನಾಚರಣೆ’ ಯನ್ನು ಆಚರಿಸಲಾಗುತ್ತಿದೆ.ಜನೆವರಿ 26,1950 ರಂದು ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದಿತು.ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2015 ರ ನವೆಂಬರ್ 19 ರಂದು ಆದೇಶಹೊರಡಿಸಿ ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲು ನಿರ್ದೇಶನ ನೀಡಿತ್ತು.2015 ರ ನವೆಂಬರ್ 26 ರಿಂದ ‘ ಸಂವಿಧಾನ ದಿನಾಚರಣೆ’ ಯನ್ನು ಆಚರಿಸಲಾಗುತ್ತಿದೆ.ಅದಕ್ಕಿಂತ ಮುಂಚೆ ಈದಿನವನ್ನು ‘ ಕಾನೂನುದಿನ’ ( Law Day) ವನ್ನಾಗಿ ಆಚರಿಸಲಾಗುತ್ತಿತ್ತು.

ಸಂವಿಧಾನ ದಿನಾಚರಣೆಯು ಶುಷ್ಕ ಸರಕಾರಿ ಆಚರಣೆ ಮಾತ್ರವಾಗದೆ ಅದು ಭಾರತೀಯರೆಲ್ಲರ ಆಚರಣೆಯಾಗಬೇಕು,ಹಬ್ಬವಾಗಬೇಕು.ಇಂದು ಭಾರತವು ವಿಶ್ವದ ಪ್ರಬಲಶಕ್ತಿ ರಾಷ್ಟ್ರಗಳಲ್ಲಿ ಒಂದಾಗಿದ್ದರೆ ಅದಕ್ಕೆ ನಮ್ಮ ಸಂವಿಧಾನವೇ ಕಾರಣ.ತುರ್ತುಪರಿಸ್ಥಿತಿಯ ಕರಾಳದಿನಗಳನ್ನು ಹೊರತುಪಡಿಸಿ ಭಾರತದ ಸಂವಿಧಾನವು ದೇಶವಾಸಿಗಳೆಲ್ಲರ ಆತ್ಮಗೌರವವನ್ನು ಎತ್ತಿಹಿಡಿಯುತ್ತ ಭಾರತೀಯರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ.ನಮ್ಮ‌ನೆರೆಹೊರೆಯ ಸಣ್ಣರಾಷ್ಟ್ರಗಳ ಸಂವಿಧಾನಗಳು ಮೇಲಿಂದ ಮೇಲೆ ಬದಲಾದರೂ ನಮ್ಮ ಸಂವಿಧಾನವು ಏಳುದಶಕಗಳಿಂದ ಅವಿಚ್ಛಿನ್ನವಾಗಿ ಮುಂದುವರೆದಿದೆ,ಭಾರತೀಯರೆಲ್ಲರ ಗೌರವಾದರಗಳಿಗೆ ಪಾತ್ರವಾಗಿದೆ.ಡಾ.ಬಿ.ಆರ್.ಅಂಬೇಡ್ಕರ್ ಅವರ ಆಳವಾದ ಅಧ್ಯಯನ, ದಾರ್ಶನಿಕನದೂರದೃಷ್ಟಿಯ ಫಲವಾಗಿ ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕನಸು,ಕಾಣ್ಕೆಗಳ ‘ ದರ್ಶನ’ ವಾಗಿ ಮೂಡಿಬಂದ ನಮ್ಮ ಸಂವಿಧಾನವು ತನ್ನ ಸತ್ತ್ವ,ಸರ್ವರುನ್ನತಿಯ ತತ್ತ್ವದಿಂದಾಗಿ ಎದ್ದುನಿಂತಿದೆ ಸಂವಿಧಾನವಿರೋಧಿ ಶಕ್ತಿಗಳ ಸದ್ದಡಗಿಸುತ್ತ.

ಸಂವಿಧಾನ ಪ್ರಜ್ಞೆಯನ್ನು ಪಸರಿಸಬೇಕಾದ ಅಗತ್ಯ ಇಂದು ಎಂದಿಗಿಂತಲೂ ಅಗತ್ಯವಾಗಿದೆ.ಜನಸಾಮಾನ್ಯರ ಬದುಕು- ಭರವಸೆಯಾಗಿರುವ ಸಂವಿಧಾನವನ್ನು ಪ್ರತಿಗಾಮಿಶಕ್ತಿಗಳು ತಮ್ಮ‌ಮನಸ್ಸಿಗೆ ಬಂದಂತೆ ಅರ್ಥೈಸುತ್ತ,ಸಂವಿಧಾನದ ಆಶಯಗಳಿಗೆ ಅಪಚಾರವೆಸಗುತ್ತಿರುವ ಅಪಾಯದ ದಿನಗಳಿಗೆ ಸಾಕ್ಷಿಯಾಗಿರುವ ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಸರ್ವೋದಯ ಭಾರತವನ್ನು ಕಟ್ಟಬೇಕಾದರೆ ಸಂವಿಧಾನಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು.ಸಮರ್ಪಣಾ ಮನೋಭಾವದಿಂದ ನಾವು ಸಂವಿಧಾನವನ್ನು ಸ್ವೀಕರಿಸಿ ನಡೆದರೆ ಪ್ರತಿಗಾಮಿಶಕ್ತಿಗಳ ಆಟ ನಡೆಯುವುದಿಲ್ಲ.’ಇದು ನಮ್ಮ ಹೆಮ್ಮೆಯ ಸಂವಿಧಾನ’ ಎನ್ನುವ ಭಾವನೆ ದೇಶದ ಜನಸಾಮಾನ್ಯರು, ಶೂದ್ರರು,ಪದದುಳಿತರುಗಳಲ್ಲಿ ಮೂಡಿದ್ದಾದರೆ ‘ ಸಂವಿಧಾನ ಬದಲಾಯಿಸುತ್ತೇವೆ’ ಎನ್ನುವ ವಿಕೃತಮನಸ್ಕರ ರಾಕ್ಷಸೀದಾಹವು ಕೊನೆಗೊಳ್ಳುತ್ತದೆ.ಯಾವ ಧರ್ಮಗ್ರಂಥದ ಅಗತ್ಯವೂ ಇಲ್ಲ ನಮಗಿಂದು; ನಮಗಿಂದು ಬೇಕಿರುವುದು ಸಂವಿಧಾನ ಒಂದೇ.ಧರ್ಮಗ್ರಂಥಗಳ ಹೆಸರುಗಳನ್ನು ಹೇಳುತ್ತಲೇ ಮನುಷ್ಯರನ್ನು ಪಶುವಿಗಿಂತ ಕಡೆಯಾಗಿ ಕಂಡ ಪಾಮರಪಡೆಯ ವಿರುದ್ಧ ಸೆಟೆದು ನಿಲ್ಲಲು ಸಂವಿಧಾನವೇ ಮಹಾಅಸ್ತ್ರ.ಸಂವಿಧಾನದ ಅಸ್ತ್ರಜಳುಪಿಸುತ್ತ ಪ್ರತಿಗಾಮಿಶಕ್ತಿಗಳ ವಿರುದ್ಧ ವಿಜಯಸಾಧಿಸಬೇಕು.

ಅಂದು ಮುವ್ವತ್ತುಕೋಟಿಯಷ್ಟಿದ್ದ ನಮ್ಮ ಪೂರ್ವಿಕರು ಸಮರ್ಪಣಾಭಾವದಿಂದ ತಮ್ಮನ್ನು ಸಮರ್ಪಿಸಿಕೊಂಡ ಸಂವಿಧಾನವನ್ನು ಅವರ ಪೀಳಿಗೆಯವರಾದ ನೂರಾನಲವತ್ತುಕೋಟಿಯಷ್ಟಿರುವ ನಾವುಗಳೆಲ್ಲರೂ ಗೌರವಿಸಿ ,ಅದರ ಬೆಳಕಿನಲ್ಲಿ ನಡೆಯಬೇಕಿದೆ.ಪ್ರತಿಗಾಮಿಶಕ್ತಿಗಳು ಪ್ರತಿಪಾದಿಸುತ್ತಿರುವ ದೊಡ್ಡಧರ್ಮಗಳು ಶೂದ್ರರು,ದಲಿತರು,ಮಹಿಳೆಯರಿಗೆ ಘನತೆಯಿಂದ ಬದುಕುವ ಹಕ್ಕು ಅವಕಾಶಗಳನ್ನು ನೀಡಿರಲಿಲ್ಲ ಎನ್ನುವುದು ದೇಶದ ಜನಸಾಮಾನ್ಯರು ಮನಗಾಣಬೇಕಿದೆ.ನಮ್ಮ ಸಂವಿಧಾನವೇ ನಮಗೆ ಘನತೆಯಿಂದ ಬದುಕುವ ಹಕ್ಕನ್ನು‌ ಕೊಟ್ಟಿದೆ.ನಮ್ಮ ಸಂವಿಧಾನವೇ ನಮ್ಮನ್ನು ಸ್ವಾಭಿಮಾನದಿಂದ ತಲೆ ಎತ್ತಿ ತಿರುಗುವಂತೆ ಮಾಡಿದೆ.ನಮ್ಮ‌ಮನೆಗಳ ದೇವರ‌ಜಗುಲಿಗಳಲ್ಲಿ ಧರ್ಮಗ್ರಂಥಗಳನ್ನಿಟ್ಟು ಪೂಜಿಸುವ ಬದಲು ಸಂವಿಧಾನವನ್ನಿಟ್ಟು ಓದಿ,ಅರ್ಥೈಸಿಕೊಳ್ಳಬೇಕಿದೆ.ಪುರಾಣ ಪುಣ್ಯಕಥೆಗಳ ಪಾರಾಯಣದ ವ್ಯರ್ಥಕಾಲಹರಣಕ್ಕಿಂತ ಸಂವಿಧಾನದ ಅಧ್ಯಯನ ಮಾಡುವುದು ಶ್ರೇಯಸ್ಕರವಾದುದು.ಅರ್ಥವಾಗದ ಸಂಸ್ಕೃತ ಮಂತ್ರ,ಶ್ಲೋಕಗಳನ್ನು‌ಉಗ್ಗಡಿಸುವ ಬದಲು ಸಂವಿಧಾನದ ಅನುಚ್ಛೇದಗಳನ್ನು ಓದಿ,ತಿಳಿದುಕೊಳ್ಳಬೇಕು.ಪಟ್ಟಭದ್ರರ,ಪುರೋಹಿತರ ಅಟ್ಟಹಾಸ,ಕ್ರೌರ್ಯದ ವಿರುದ್ಧ ಯಾವ ದೇವರೂ ನಮ್ಮನ್ನು ಕಾಪಾಡಲಾರರು; ಆದರೆ ನಮ್ಮ ಸಂವಿಧಾನವು ಧೂರ್ತಜನರ ಸ್ವಾರ್ಥದ ವಿರುದ್ಧ ನಮಗೆ ಗೆಲುವನ್ನು ನೀಡುತ್ತದೆ.

‘ ಕೆರೆಯಂ ಕಟ್ಟಿಸು,ಬಾವಿಯಂ ತೋಡಿಸು’ ಎಂದು ಸಂಚಿಯ ಹೊನ್ನಮ್ಮ ಎಳೆಕಂದಮ್ಮಗಳಿಗೆ ಉಪದೇಶಿಸಿದಂತೆ ತೊಟ್ಟಿಲಲ್ಲಿ ಆಡುವ ಮಕ್ಕಳಿಗೆ ಅಂಬೇಡ್ಕರ ಅವರ ಕಥೆಯನ್ನು ಹೇಳಬೇಕಿದೆ,ಸಂವಿಧಾನದ ಆಶಯದ ಹಾಡು ಕಥೆಗಳನ್ನು ಹೇಳುತ್ತ ನಮ್ಮ ಮಕ್ಕಳನ್ನು ಬೆಳೆಸಬೇಕಿದೆ.ಸಮುದ್ರಮಥನದ ಕಥೆಗಳನ್ನು ಹೇಳಿ ಸಂವಿಧಾನದ ಹೆಸರಿನಲ್ಲಿ ಅವಕಾಶಗಳ ಅಮೃತವನ್ನು ಕಸಿದುಕೊಳ್ಳುತ್ತಿರುವ ಕರ್ಮಠರ ಕರ್ಮಕಾಂಡದ ಬಲಿಪಶುಗಳಾಗಿ ಹಾಲಾಹಲವನ್ನೇ ಉಂಡು ಬೆಳೆಯಬೇಕಾದ ನಮ್ಮ ಬದುಕು ಬವಣೆಗಳ ಬಿಡುಗಡೆಯ ಮಾರ್ಗಗಳನ್ನು ಎಳವೆಯಲ್ಲಿಯೇ ಮಕ್ಕಳಿಗೆ ಕಲಿಸಬೇಕಿದೆ.ಪುರಾಣ – ಪುಣ್ಯ ಕಥೆಗಳ ಬದಲು ಈಗ ಪ್ರತಿಮನೆಯಲ್ಲಿಯೂ ಸಂವಿಧಾನದ ಪುಸ್ತಕ ಇರಬೇಕಾದ ಅಗತ್ಯವಿದೆ.

About The Author