ಡಿ.ಕೆ.ಶಿವಕುಮಾರ ವಿರುದ್ಧ ಸಿ. ಬಿ. ಐಗೆ ನೀಡಿದ್ದ ತನಿಖಾ ಮಂಜೂರಾತಿ ಹಿಂಪಡೆದ ಸರಕಾರದ ಕ್ರಮ ಸರಿಯಲ್ಲ

ಡಿ.ಕೆ.ಶಿವಕುಮಾರ ವಿರುದ್ಧ ಸಿ. ಬಿ. ಐಗೆ ನೀಡಿದ್ದ ತನಿಖಾ ಮಂಜೂರಾತಿ ಹಿಂಪಡೆದ ಸರಕಾರದ ಕ್ರಮ ಸರಿಯಲ್ಲ:ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ನವೆಂಬರ್ 23 ರ ಗುರುವಾರದಂದು ನಡೆದ ಕ್ಯಾಬಿನೆಟ್ ಸಭೆಯು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ವಿರುದ್ಧ ತನಿಖೆ ನಡೆಸಲು ಸಿ ಬಿ ಐ ಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲು ನಿರ್ಧರಿಸಿದೆ.ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಪ್ರಸ್ತುತ ಕಾಂಗ್ರೆಸ್ ಸರಕಾರವು ‘ ಸ್ಪೀಕರ್ ಅವರ ಅನುಮತಿ ಪಡೆದಿಲ್ಲ’ ಎನ್ನುವ ತಾಂತ್ರಿಕ ಕಾರಣ ನೀಡಿ,ಡಿ.ಕೆ.ಶಿವಕುಮಾರ ಅವರ ವಿರುದ್ಧ ನೀಡಿದ್ದ ತನಿಖೆಗೆ ಸಿ ಬಿ ಐ ಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದೆ.ಇದು ಕಾಂಗ್ರೆಸ ಸರಕಾರದ ಅತ್ಯಂತ ಕೆಟ್ಟ ನಿರ್ಧಾರ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಅವರ ಸಚಿವಸಂಪುಟದ ಕೆಲವು ಸಚಿವರ ಮೇಲೆ ಡಿ.ಕೆ.ಶಿವಕುಮಾರ ಅವರು ‘ ಹೈಕಮಾಂಡ್ ಒತ್ತಡ’ ಹೇರಿ ತಮ್ಮ ವಿರುದ್ಧ ಸಿ ಬಿ ಐ ತನಿಖೆಗೆ ನೀಡಿದ್ದ ಅನುಮತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.’ಅಕ್ರಮಸಂಪಾದನೆ’ ಯನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯವೇನಿತ್ತು ಕಾಂಗ್ರೆಸ್ ಪಕ್ಷಕ್ಕೆ? ಇದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರಕಾರಕ್ಕೆ ಮುಜುಗರದ ಪ್ರಕರಣ ಮಾತ್ರವಲ್ಲ,ಕಾಂಗ್ರೆಸ್ ಪಕ್ಷದ ವರ್ಛಸ್ಸಿಗೆ ಧಕ್ಕೆ ತರುವ ಪ್ರಕರಣವೂ ಹೌದು.ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರು,ಗೃಹಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿಯ ನಾಯಕರುಗಳು ರಾಜ್ಯಸರಕಾರದ ಈ ನಡೆಯನ್ನು ‘ ಕಳ್ಳರನ್ನು ರಕ್ಷಿಸುವ ಕಾಂಗ್ರೆಸ್ ಸರಕಾರ’ ಎಂದು ಟೀಕಿಸಲು ಆಸ್ಪದ ನೀಡುತ್ತದೆ.

ಡಿ.ಕೆ.ಶಿವಕುಮಾರ ಅವರ ವಿರುದ್ಧ ಸಿ.ಬಿ.ಐ ತನಿಖೆಗೆ ನೀಡಿದ್ದ ಅನುಮತಿಯ ತಾಂತ್ರಿಕ ದೋಷಗಳನ್ನು ಮುಂದಿಟ್ಟುಕೊಂಡು ಅನುಮತಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪನವರ ಮೌಖಿಕ ಆದೇಶದಂತೆ ಸಿ ಬಿ ಐ ಗೆ ಅನುಮತಿ ನೀಡಿದೆ ಎನ್ನುವ ಕಾಂಗ್ರೆಸ್ ಸರಕಾರವು ಡಿ.ಕೆ.ಶಿವಕುಮಾರ ಅವರ ವಿರುದ್ಧ ತನಿಖೆಗೆ ಸ್ಪೀಕರ್ ಅವರ ಅನುಮತಿಯನ್ನು ಪಡೆದಿಲ್ಲ ಎನ್ನುವ ಕಾರಣ ನೀಡಿ,ಅನುಮತಿಯನ್ನು ಹಿಂಪಡೆದಿದೆ.ಆದರೆ ಸ್ಪೀಕರ್ ಅವರು ಅನುಮತಿಯನ್ನು ಪಡೆಯದೆ ತಮ್ಮ ವಿರುದ್ಧ ಸಿ‌ಬಿಐ ತನಿಖೆಗೆ ಅನುಮತಿ ನೀಡಲಾಗಿದೆ ಎನ್ನುವ ಕಾರಣವನ್ನಿಟ್ಟುಕೊಂಡೇ ಡಿ.ಕೆ.ಶಿವಕುಮಾರ ಅವರು ಹೈಕೊರ್ಟ್ ಮೆಟ್ಟಿಲೇರಿದ್ದರು.ಕರ್ನಾಟಕ ಹೈಕೋರ್ಟಿನ ಏಕ ಸದಸ್ಯನ್ಯಾಯಪೀಠವು ಡಿ.ಕೆ.ಶಿವಕುಮಾರ ಅವರ ವಾದವನ್ನು ತಿರಸ್ಕರಿಸಿ ‘ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪನವರು ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯ ಸಿಂಧುತ್ವವನ್ನು ಎತ್ತಿಹಿಡಿದಿತ್ತು’ ಎನ್ನುವುದನ್ನು ರಾಜ್ಯಸರಕಾರವು ಗಮನಿಸಿಲ್ಲವೆ ? ಅಲ್ಲದೆ ಕೇರಳ ಸರಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಭ್ರಷ್ಟಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಶಾಸಕರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಲು ಸ್ಪೀಕರ್ ಅವರ ಅನುಮತಿ ಕಡ್ಡಾಯವಲ್ಲ’ ಎಂದು ನೀಡಿದ್ದ ತೀರ್ಪು ಕ್ಯಾಬಿನೆಟ್ಟಿನ ಗಮನಕ್ಕೆ ಬಂದಿಲ್ಲವೆ?

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಏಕನ್ಯಾಯಮೂರ್ತಿ ಪೀಠದ ತೀರ್ಪಿನ ವಿರುದ್ಧ ಹೈಕೋರ್ಟಿನ ವಿಭಾಗೀಯ ಪೀಠದ ಮೊರೆಹೋಗಿದ್ದರು.ಹೈಕೋರ್ಟ್ 2023 ರ ಜೂನ್ ನಲ್ಲಿ ಏಕನ್ಯಾಯಮೂರ್ತಿಪೀಠದ ಆದೇಶ ಮತ್ತು ಸಿ ಬಿ ಐ ತನಿಖೆಗೆ ನೀಡಿದ್ದ ಅನುಮತಿಗಳಿಗೆ ತಡೆಯಾಜ್ಞೆ ನೀಡಿತ್ತು.ಸಿ.ಬಿ.ಐ ಯು ಹೈಕೋರ್ಟಿನ ವಿಭಾಗೀಯ ಪೀಠದ ತಡೆಯಾಜ್ಞೆಯ ಸಿಂಧುತ್ವವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿತ್ತು.ಪ್ರಕರಣವನ್ನು ಆಲಿಸಿದ ಸುಪ್ರೀಂಕೋರ್ಟ್ ಡಿ.ಕೆ.ಶಿವಕುಮಾರ ಅವರ ಮನವಿಯ ಬಗ್ಗೆ ಎರಡುವಾರಗಳಲ್ಲಿ ನಿರ್ಣಯಿಸುವಂತೆ ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಸೂಚಿಸಿತ್ತು.ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠವು ನವೆಂಬರ್ 29 ರಂದು ಡಿ.ಕೆ.ಶಿವಕುಮಾರ ಅವರ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಲಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಕ್ಯಾಬಿನೆಟ್ ನಿನ್ನೆ ನಡೆದ ಸಭೆಯಲ್ಲಿ ಡಿ ಕೆ ಶಿವಕುಮಾರ ಅವರಿಗೆ ಹಿಂದಿನ ಬಿಜೆಪಿ ಸರಕಾರವು ನೀಡಿದ್ದ ಅನುಮತಿಯನ್ನು ಹಿಂಪಡೆದಿದೆ.ನವೆಂಬರ್ 29 ರ ವಿಚಾರಣೆಯಂದು ಪ್ರಸ್ತುತ ಸರಕಾರವು ಡಿ.ಕೆ.ಶಿವಕುಮಾರ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದ ಬಗ್ಗೆ ಹೈಕೋರ್ಟ್ ಪೀಠದ ಗಮನಕ್ಕೆ ತಂದು ಡಿ.ಕೆ.ಶಿವಕುಮಾರ ಅವರನ್ನು ಕಾನೂನು ಕುಣಿಕೆಯಿಂದ ತಪ್ಪಿಸುವುದು ಕಾಂಗ್ರೆಸ್ ಸರಕಾರದ ಲೆಕ್ಕಾಚಾರ.ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್ ಕೇಸುಗಳನ್ನು ಸಂಬಂಧಪಟ್ಟ ಹೈಕೋರ್ಟಿನ ಅನುಮತಿ ಪಡೆದು ಹಿಂಪಡೆಯಬಹುದು ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಗಮನಿಸಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರು ಸರಕಾರಕ್ಕೆ ಈ ಸಲಹೆ ನೀಡಿರಬಹುದು.

ಸರಕಾರದ ಈ ನಡೆಯನ್ನು ಸಿಬಿಐ ಹೈಕೋರ್ಟಿನಲ್ಲಿ ಬಲವಾಗಿ ವಿರೋಧಿಸಲಿದೆ.ಒಮ್ಮೆ ನೀಡಿದ ಅನುಮತಿಯನ್ನು ‘ ಸಮರ್ಥನೀಯ ಕಾನೂನು ಕಾರಣಗಳಿಲ್ಲದೆ ರಾಜಕೀಯ ಕಾರಣಗಳಿಂದ ಹಿಂಪಡೆಯಲು ಅವಕಾಶವಿಲ್ಲ’ ಎಂದು ಸಿಬಿಐ ಹೈಕೋರ್ಟಿನಲ್ಲಿ ವಾದಿಸಬಹುದು.ಡಿ.ಕೆ.ಶಿವಕುಮಾರ ಅವರ ವಿರುದ್ಧ ತನಿಖೆಗೆ ಸಿಬಿಐಗೆ 2019 ರ ಸೆಪ್ಟೆಂಬರ್ 25 ರಂದು ಅನುಮತಿ ನೀಡಲಾಗಿದೆ.ಆ ಬಳಿಕ ಸಿಬಿಐ ಡಿಕೆಶಿವಕುಮಾರ ವಿರುದ್ಧ FIR ದಾಖಲಿಸಿ ತನಿಖೆ ಕೈಗೊಂಡಿದೆ.ಸಿಬಿಐಯು 2023 ರ ಅಕ್ಟೋಬರ್ 03 ರಂದು ಡಿ.ಕೆ.ಶಿವಕುಮಾರ ಅವರನ್ನು ಬಂಧಿಸಿತ್ತು.ಸಿಬಿಐಯು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ ಅವರು ತಮ್ಮ ಆದಾಯಕ್ಕೂ ಮೀರಿ ಅಕ್ರಮಸಂಪಾದನೆ ಮಾಡಿದ್ದಾರೆ ಎಂದು ನೀಡಿದ ದೂರಿನ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ( Prevention of Corruption Act — PC Act) ನಡಿ ಪ್ರಕರಣ ದಾಖಲಿಸಿತ್ತು.ಆದಾಯ ತೆರಿಗೆ ಇಲಾಖೆಯು 2017 ರಲ್ಲಿ ಡಿ.ಕೆ.ಶಿವಕುಮಾರ ಅವರ ನಿವಾಸದ ಮೇಲೆ ದಾಳಿ ಮಾಡಿ ತನಿಖೆ ನಡೆಸಿತ್ತು.ಐಟಿ ದಾಳಿಯನ್ನು ಆಧರಿಸಿದ ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ ಅವರ ವಿರುದ್ಧ ‘ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆ'( Prevention of Money Laundering Act) ನಡಿ ತನಿಖೆ ಕೈಗೊಂಡು ರಾಜ್ಯಸರಕಾರಕ್ಕೆ ಡಿ.ಕೆ.ಶಿವಕುಮಾರ ವಿರುದ್ಧ PC Act ನಡಿ ತನಿಖೆ ಕೈಗೊಳ್ಳುವಂತೆ ತಿಳಿಸಿತ್ತು.ಅದರನ್ವಯ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಅಂದಿನ ಬಿಜೆಪಿ ಸರಕಾರವು ಡಿ.ಕೆ .ಶಿವಕುಮಾರ ವಿರುದ್ಧ ತನಿಖೆ ಕೈಗೊಳ್ಳಲು ಸಿಬಿಐಗೆ ಅನುಮತಿ ನೀಡಿತ್ತು.

ಆದಾಯತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳು ಡಿ.ಕೆ.ಶಿವಕುಮಾರ ಅವರು ತಮ್ಮ ಘೋಷಿತ ಆದಾಯಕ್ಕಿಂತ ₹200 ಕೋಟಿಗಳಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ದೂರಿವೆ.ತಮ್ಮ ಚುನಾವಣಾ ಅಫಿಡಾವಿಟ್ಟಿನಲ್ಲಿ ₹800 ಕೋಟಿಗೂ ಹೆಚ್ಚಿನ ಆಸ್ತಿಯನ್ನು ಡಿ.ಕೆ.ಶಿವಕುಮಾರ ಅವರು ಘೋಷಿಸಿಕೊಂಡಿದ್ದಾರೆ.ಈ ಆಸ್ತಿಗೆ ಅವರು ಆದಾಯ ತೆರಿಗೆಯನ್ನು ಕಟ್ಟಿರಬಹುದು.ಆದರೆ ₹800 ಕೋಟಿಗಳಷ್ಟು ಆದಾಯ ಪಡೆಯಲು ಡಿ.ಕೆ.ಶಿವಕುಮಾರ ಅವರು ಮಾಡುತ್ತಿದ್ದ ವ್ಯಾಪಾರ ವಹಿವಾಟುಗಳೇನು ? ಅವರ ತಂದೆಯ ಕಾಲದಲ್ಲಿ ಡಿ.ಕೆ.ಶಿವಕುಮಾರ ಅವರ ಕುಟುಂಬದ ಒಟ್ಟು ಆಸ್ತಿ ಎಷ್ಟಿತ್ತು? ಕಾಂಗ್ರೆಸ್ ಸರಕಾರದ ಹಿಂದಿನ ಅವಧಿಯಲ್ಲಿ ಇಂಧನಸಚಿವರಾಗಿದ್ದಾಗಲೇ ಡಿ.ಕೆ.ಶಿವಕುಮಾರ ಹಲವು ವಾಣಿಜ್ಯ ವ್ಯವಹಾರಗಳ ಲಾಭದ ಲೆಕ್ಕ ತೋರಿಸಿದ್ದಾರೆಯೇ ಹೊರತು ಅದರ ಪೂರ್ವದಲ್ಲಿ ನೂರಾರು ಕೋಟಿಗಳ ಲಾಭದ ವಿವರ ನೀಡಿಲ್ಲ.ಏಕಾಏಕಿ ₹800 ಕೋಟಿ ರೂಪಾಯಿಗಳ ಆಸ್ತಿ ಸಂಪಾದಿಸಲು ಹೇಗೆ ಸಾಧ್ಯ? ರಾಜ್ಯದ ಸಾಮಾನ್ಯ ಜನತೆ ವ್ಯಾಪಾರ ವ್ಯವಹಾರ ಮಾಡಿ ಡಿ.ಕೆ.ಶಿವಕುಮಾರ ಅವರಂತೆ ಕೆಲವೇ ವರ್ಷಗಳಲ್ಲಿ ಸಾವಿರಾರು ಕೋಟಿ ಲಾಭವನ್ನು ಪಡೆಯಬಹುದೆ?ವ್ಯಾಪಾರ ವಹಿವಾಟಿನಲ್ಲಿ ಲಾಭಗಳಿಸಲು ನಿರ್ದಿಷ್ಟ ಮಾರ್ಗಗಳಿವೆಯೇ ಹೊರತು ‘ಪವಾಡಮಾಡಿ ಆಸ್ತಿ ಸಂಪಾದಿಸಲು’ ಅವಕಾಶವಿಲ್ಲ.ಈ ಎಲ್ಲ ಅಂಶಗಳನ್ನು ಹೈಕೋರ್ಟಿನ ವಿಭಾಗೀಯ ಪೀಠ ಗಮನಿಸಲಿದೆ.

About The Author