ಮಾಡಾಳ್ ಪ್ರಕರಣ —ನುಣುಚಿಕೊಳ್ಳುವ ಪ್ರಯತ್ನವೋ ಅಥವಾ ಉದ್ದೇಶಪೂರ್ವಕ ವಿಳಂಬವೋ

ಲೇಖಕರು : ಮುಕ್ಕಣ್ಣ ಕರಿಗಾರ
ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ’ಯ ಅಧ್ಯಕ್ಷರು ಮತ್ತು ಸಾಹಿತಿಗಳು

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ( ಕೆಎಸ್ ಡಿ ಎಲ್ ) ನ ಹಿಂದಿನ ಅಧ್ಯಕ್ಷ ಕೆ.ಮಾಡಾಳ್ ವಿರುಪಾಕ್ಷಪ್ಪ ಅವರ ವಿರುದ್ಧದ ಬಹುಕೋಟಿ ರೂಪಾಯಿ ಲಂಚಪ್ರಕರಣದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲು ಲೋಕಾಯುಕ್ತ ಪೋಲೀಸರು ವಿಧಾನಸಭೆಯ ಸ್ಪೀಕರ್ ಅವರನ್ನು ಅಭಿಯೋಜನಾ ( Prosecution )ಮಂಜೂರಾತಿ ಕೋರಿದ್ದು ಮೂರು ತಿಂಗಳಾದರೂ ಸ್ಪೀಕರ್ ಅವರು ಅಭಿಯೋಜನಾ ಮಂಜೂರಾತಿ ನೀಡಿಲ್ಲ ಎನ್ನುವ ಸಂಗತಿ ಪತ್ರಿಕೆಗಳಲ್ಲಿ ವರದಿಯಾಗಿದೆ.ವಿಧಾನಸಭೆಯ ಸ್ಪೀಕರ್ ಅವರು ‘ಸಾರ್ವಜನಿಕ ಸೇವಕರಿಗೆ ಅಭಿಯೋಜನಾ ಮಂಜೂರಾತಿ ಅಧಿಕಾರವನ್ನು ನೇಮಕಾತಿ ಮತ್ತು ಸಕ್ಷಮ ಪ್ರಾಧಿಕಾರಗಳು ನೀಡಬೇಕಾಗಿದೆ,ಶಾಸಕರನ್ನು ಸ್ಪೀಕರ್ ನೇಮಿಸುವುದಿಲ್ಲ.ಅಲ್ಲದೆ ಮಾಡಾಳ್ ವಿರುಪಾಕ್ಷಪ್ಪ ಈಗ ಮಾಜಿ ಶಾಸಕರಾಗಿದ್ದಾರೆ.ಅವರ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಬಹುದೆ ಎನ್ನುವ ಕಾನೂನು ತೊಡಕುಗಳಿಂದಾಗಿ ಕಾನೂನು ತಜ್ಞರ ಸಲಹೆ ಕೇಳಲಾಗಿದೆ’ ಎಂದು ಅಭಿಪ್ರಾಯಿಸಿದ್ದಾಗಿಯೂ ಮಾಧ್ಯಮಗಳಲ್ಲಿ ವರದಿಯಾಗಿದೆ.ಲೋಕಾಯುಕ್ತ ಪೋಲೀಸರು ಮತ್ತು ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿಯೇ ಈ ವಿಳಂಬ ತಂತ್ರ ಅನುಸರಿಸುತ್ತಿದ್ದಾರೇನೋ ಎನ್ನಿಸುತ್ತಿದೆ.ಸುಪ್ರೀಂಕೋರ್ಟ್ ಈಗಾಗಲೇ ಎಂಪಿ ಮತ್ತು ಎಂ ಎಲ್ ಎ ಗಳ ಅಭಿಯೋಜನೆಗೆ ಸ್ಪೀಕರ್ ಅವರ ಅನುಮತಿ ಕಡ್ಡಾಯವಲ್ಲ ಎಂದು 1998 ರ .ಪಿ ವಿ ನರಸಿಂಹರಾವ್ v/s ಸಿಬಿಐ ಎನ್ನುವ ಹೆಸರಿನ ಜೆ ಎಂ ಎಂ ಸಂಸದರ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮಾರ್ಪಡಿಸಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಎಂ ಆರ್ ಶಹಾ ಅವರನ್ನೊಳಗೊಂಡ ಪೀಠವು ಕೇರಳಸರ್ಕಾರದ ಪ್ರಕರಣದಲ್ಲಿ 2015 ರಲ್ಲಿಯೇ ತೀರ್ಪುನೀಡಿದೆ. ಸಿಪಿಎಂ ನ ಹಿರಿಯ ನಾಯಕರುಗಳು ಕೇರಳ ವಿಧಾನಸಭೆಯಲ್ಲಿ ಗದ್ದಲವನ್ನುಂಟು ಮಾಡಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಕೇರಳ ಪೋಲೀಸರು ಸಿಪಿಎಂನ ಶಾಸಕರುಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ವಿಧಾನಸಭೆಯ ಸ್ಪೀಕರ್ ಅವರ ಅನುಮತಿ ಇಲ್ಲದೆ ಪೋಲೀಸರು ಶಾಸಕರ ವಿರುದ್ಧ FIRಗಳನ್ನು ರಜಿಸ್ಟರ್ ಮಾಡಿದ್ದು ತಪ್ಪು.ಆದ್ದರಿಂದ ಈ ಎಫ್ ಐ ಆರ್ ಗಳನ್ನು ರದ್ದುಗೊಳಿಸಬೇಕು ,ಸಿಪಿಎಂನ ಹಿರಿಯ ನಾಯಕರುಗಳ ವಿರುದ್ಧದ ‘ ಸಾರ್ವಜನಿಕ ಆಸ್ತಿಧ್ವಂಸ’ ಸೇರಿದಂತೆ ದಾಖಲಿಸಿದ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಅನುಮತಿ ನೀಡಬೇಕು ಎಂದು ಕೋರಿ ಕೇರಳ ಸರ್ಕರವು ಸುಪ್ರೀಂಕೋರ್ಟಿನ ಮೊರೆಹೋದ ಸಂದರ್ಭದಲ್ಲಿ ಪಿ.ವಿ ನರಸಿಂಹರಾವ್ v/s ಸಿಬಿಐ ಪ್ರಕರಣ ಸೇರಿದಂತೆ ಸುಪ್ರೀಂಕೋರ್ಟ್ ಹಿಂದೆ ನೀಡಿದ್ದ ಮೂರು ತೀರ್ಪುಗಳನ್ನು ಪರಾಮರ್ಶಿಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಹಾ ಅವರುಗಳಿದ್ದ ಪೀಠವು ‘ ನೆಲದ ಕಾನೂನಿನ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಮತ್ತು ಸುಪ್ರೀಂಕೋರ್ಟ್ ನಾಗರಿಕರ ಹಿತರಕ್ಷಣೆಯ ತನ್ನಕಾರ್ಯವ್ಯಾಪ್ತಿಗೆ ನಿರ್ಬಂಧ ತರುವ ಈ ತೀರ್ಪುಗಳನ್ನು ಗಮನಿಸಿ’ “ಶಾಸಕರ ವಿರುದ್ಧ ಅಭಿಯೋಜನೆಗೆ ಸ್ಪೀಕರ್ ಅವರ ಅನುಮತಿಯ ಅಗತ್ಯವಿಲ್ಲ” ಎಂದು ತೀರ್ಪು ನೀಡಿದೆ.

ಕರ್ನಾಟಕ ಲೋಕಾಯುಕ್ತ ಪೋಲೀಸರಿಗೆ ಸುಪ್ರೀಂಕೋರ್ಟಿನ ಈ ತೀರ್ಪಿನ ಬಗ್ಗೆ ಮಾಹಿತಿ ಇಲ್ಲವೆ ? ಸ್ಪೀಕರ್ ಅವರ ಕಛೇರಿಯ ಅಧಿಕಾರಿಗಳು ಸುಪ್ರೀಂಕೋರ್ಟಿನ ಈ ತೀರ್ಪನ್ನು ಓದಿಲ್ಲವೆ ? ಸ್ಪೀಕರ್ ಅವರಿಗೆ ಕಾನೂನಿನ ವಿಷಯಗಳ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ ಎಂದರೆ ಒಪ್ಪೋಣ.ಆದರೆ ವಿಧಾನಸಭಾ ಸಚಿವಾಲಯದ ಅಧಿಕಾರಿಗಳು ಮತ್ತು ಲೋಕಾಯುಕ್ತ ಪೋಲೀಸರಿಗೆ ಸುಪ್ರೀಂಕೋರ್ಟಿನ ಈ ತೀರ್ಪು ಗೊತ್ತಿಲ್ಲವೆಂದರೆ…?

‌ ವಿಧಾನಸಭೆಯ ಸ್ಪೀಕರ್ ಅವರು ಅನುಮಾನದ ಮತ್ತೊಂದು ಕಾರಣ ಕೆ.ಮಾಡಾಳ್ ವಿರುಪಾಕ್ಷಪ್ಪ ಮಾಜಿ ಶಾಸಕರಾಗಿದ್ದು ಹಾಲಿ ವಿಧಾನಸಭೆಯ ಸ್ಪೀಕರ್ ಆಗಿರುವ ತಾವು ಅಭಿಯೋಜನಾ ಮಂಜೂರಾತಿ ನೀಡಬಹುದೆ ಎನ್ನುವ ಪ್ರಶ್ನೆಗೂ ಸುಪ್ರೀಂಕೋರ್ಟ್ ಹಿಂದೆಯೇ ಉತ್ತರಿಸಿದೆ ‘ ನಿವೃತ್ತ ಸಾರ್ವಜನಿಕ ಸೇವಕರ ವಿರುದ್ಧ ನೇಮಕಾತಿ ಪ್ರಾಧಿಕಾರದಿಂದ ಅನುಮತಿಯ ಅಗತ್ಯ ಇಲ್ಲ’ ಎಂದು.ಸ್ಪೀಕರ್ ಅವರು ಈಗ ಮಾಡಾಳ್ ವಿರುಪಾಕ್ಷಪ್ಪ ಅವರ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಬಹುದು ಅಥವಾ ಸುಪ್ರೀಂಕೋರ್ಟಿನ ಮೇಲಿನ ತೀರ್ಪಿನ ಹಿನ್ನೆಲೆಯಲ್ಲಿ ‘ ಲೋಕಾಯುಕ್ತ ಪೋಲೀಸರೇ ಕ್ರಮ ಕೈಗೊಳ್ಳಬಹುದು’ ಎಂದು ಅಭಿಪ್ರಾಯಿಸಿ ಲೋಕಾಯುಕ್ತ ಪೋಲೀಸರಿಗೆ ಕಡತ ಹಿಂದಿರುಗಿಸಬಹುದು.ಅದನ್ನು ಬಿಟ್ಟು ಮೂರು ತಿಂಗಳುಗಳಗಟ್ಟಲೆ ಕಡತದ ಮೇಲೆ ಯಾವುದೇ ನಿರ್ಣಯ ಕೈಗೊಳ್ಳದೆ ಕಾನೂನಿನ ತೊಡಕನ್ನು ಉಲ್ಲೇಖಿಸುವ ಸ್ಪೀಕರ್ ಅವರ ನಡೆ ಸರಿಯಾದುದಲ್ಲ.

ವಿಧಾನಸಭೆಯ ಸದಸ್ಯರ ಅರ್ಹತೆ ಅನರ್ಹತೆಯ ನಿರ್ಣಯದ ಪೂರ್ಣ ಅಧಿಕಾರವು ಸ್ಪೀಕರ್ ಅವರಿಗೆ ಇದೆ ಎಂದು ಮಹಾರಾಷ್ಟ್ರರಾಜ್ಯ ವಿಧಾನಸಭೆಯ‌ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿಧಾನಸಭೆಯಲ್ಲಿ ಸ್ಪೀಕರ್ ಅವರ ಮಹತ್ವದ ಪಾತ್ರವನ್ನು ಒತ್ತಿಹೇಳಿದೆ.ಅಲ್ಲದೆ ಶಾಸಕರು ವಿಧಾನಸಭೆಯಲ್ಲಿ ಸ್ಪೀಕರ್ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿಯೇ ಶಾಸಕರಾಗಿ ತಮ್ಮ ಕಾರ್ಯರಂಭ ಮಾಡುತ್ತಾರೆ.ಅಧಿವೇಶನ ಸಂದರ್ಭದಲ್ಲಿ ಅಧಿವೇಶನವನ್ನು ನಿಯಂತ್ರಿಸಿ,ನಿರೂಪಿಸುವ ಪೂರ್ಣ ಅಧಿಕಾರವು ವಿಧಾನಸಭೆಯ ಸ್ಪೀಕರ್ ಅವರಿಗೆ ಇದೆ.ಅಲ್ಲದೆ ಶಾಸಕರುಗಳು ಅಧಿವೇಶನಕ್ಕೆ ಗೈರು ಹಾಜರಾಗಲು ಇಲ್ಲವೆ ಹೊರರಾಜ್ಯ ಅಥವಾ ವಿದೇಶ ಪ್ರವಾಸಕೈಗೊಳ್ಳಲು ಸ್ಪೀಕರ್ ಅವರ ಅನುಮತಿ ಪಡೆಯಬೇಕು.ಇಂತಹ ಅಧಿಕಾರಗಳನ್ನು ಪಡೆದಿರುವ ವಿಧಾನಸಭೆಯ ಸ್ಪೀಕರ್ ಅವರು ಮಾಡಾಳ್ ಕೆ ವಿರುಪಾಕ್ಷ ಅವರ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿದರೆ ಅದು ತಪ್ಪು ಆಗುತ್ತದೆಯೆ?ಒಂದೊಮ್ಮೆ ವಿಧಾನಸಭಾ ಸ್ಪೀಕರ್ ಕೆ ಮಾಡಾಳ್ ವಿರುಪಾಕ್ಷಪ್ಪ ಅವರ ವಿರುದ್ಧ ನೀಡಿದ್ದ ಅಭಿಯೋಜನಾ ಮಂಜೂರಾತಿ ಕ್ರಮಬದ್ಧವಲ್ಲ ಎಂದಾದರೂ ಮಾಡಾಳ್ ವಿರೂಪಾಕ್ಷಪ್ಪನವರ ವಿರುದ್ಧದ ಬಹುಕೋಟಿ ರೂಪಾಯಿಗಳ ಭ್ರಷ್ಟಾಚಾರದ ತೀವ್ರತೆಯೇನೂ ಕಡಿಮೆ ಆಗುವುದಿಲ್ಲ.ಶಾಸಕರಾಗಿ ಸಾರ್ವಜನಿಕ ಸ್ವತ್ತಿನ ದುರ್ಬಳಕೆ,ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಮಾಡಾಳ್ ವಿರುಪಾಕ್ಷಪ್ಪನವರು ಸಾರ್ವಜನಿಕ ಸೇವಕರಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದ ಬಳಿಕ ಅವರ ವಿರುದ್ಧ ಅಭಿಯೋಜನಾ ಮಂಜೂರಾತಿಗೆ ಸ್ಪೀಕರ್ ಅವರು ಅನುಮಾನಿಸುತ್ತಿರುವುದೇಕೆ ?

ಲೋಕಾಯುಕ್ತ ಪೋಲೀಸರು ಸಹ ಕೇರಳಸರ್ಕಾರದ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರುಗಳನ್ನೊಳಗೊಂಡ ಪೀಠವು ನೀಡಿದ ತೀರ್ಪಿನ ಆಧಾರದ ಮೇಲೆ ತಮಗೆ ಪ್ರದತ್ತವಾದ ಅಧಿಕಾರವನ್ನು ತಾವೇ ಚಲಾಯಿಸಿ ಮಾಡಾಳ್ ವಿರುಪಾಕ್ಷ ಅವರ ವಿರುದ್ಧದ ತನಿಖಾವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬಹುದು.ಕೇರಳ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಶಾಸಕರು ಸಾರ್ವಜನಿಕ ಸೇವಕರು ,ವಿಶೇಷ ಹಕ್ಕು ಬಾಧ್ಯತೆಗಳು( privilege and immunities ) ಗಳನ್ನು ಉಳ್ಳವರು ಎನ್ನುವುದು ಸೇರಿದಂತೆ CRPc ಮತ್ತು ಸಾರ್ವಜನಿಕಸೇವಕರ ಹಕ್ಕುಬಾಧ್ಯತೆಗಳ ನಿಯಮಗಳೆಲ್ಲವನ್ನು ಅವಲೋಕಿಸಿ ಶಾಸಕರುಗಳ ವಿರುದ್ಧ ಅಭಿಯೋಜನಾ ಪ್ರಕ್ರಿಯೆಗೆ ವಿಧಾನಸಭೆಯ ಸ್ಪೀಕರ್ ಅನುಮತಿ ಬೇಕಿಲ್ಲ’ ಎನ್ನುವ ಮಹತ್ವದ ತೀರ್ಪುನೀಡಿದೆ ಎನ್ನುವುದು ಕರ್ನಾಟಕ ಲೋಕಾಯುಕ್ತ ಪೋಲೀಸರ ಗಮನದಲ್ಲಿರಬೇಕು.

About The Author