ರಾಯಚೂರು ನಗರಸಭೆಯ ಪೌರಾಯುಕ್ತರ ಜನವಿರೋಧಿ ನಡೆ

ರಾಯಚೂರು ನಗರಸಭೆಯ ಪೌರಾಯುಕ್ತ ಗುರುಲಿಂಗಯ್ಯನವರು ರಾಯಚೂರು ನಗರಕ್ಕೆ ಮೂರುದಿನಗಳಿಗೆ ಒಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಆದೇಶ ಹೊರಡಿಸಿ,ರಾಯಚೂರು ನಗರದ ರಾಜಕಾರಣಿಗಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.ಈ ಹಿಂದೆ ಪ್ರತಿ ಎರಡು ದಿನಗಳಿಗೊಮ್ಮೆ ರಾಯಚೂರು ನಗರಕ್ಕೆ ನೀರು ಪೂರೈಸಲಾಗುತ್ತಿತ್ತು.’ಕೃಷ್ಣಾ ನದಿಯಲ್ಲಿ ನೀರಿನ ಅಭಾವ ಇದೆ’ ಎನ್ನುವ ಕಾರಣಕ್ಕೆ ಪ್ರತಿಮೂರುದಿನಗಳಿಗೆ ಒಮ್ಮೆ ನೀರು ಪೂರೈಸುವುದಾಗಿ ಪೌರಾಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ರಾಯಚೂರು ನಗರದ 11 ವಾರ್ಡುಗಳಿಗೆ ತುಂಗಭದ್ರಾನದಿಯ ನೀರು ರಾಂಪುರ ಜಲಶುದ್ಧೀಕರಣ ಘಟಕದಿಂದ 24 ವಾರ್ಡುಗಳಿಗೆ ಕೃಷ್ಣಾ ನದಿಯ ಮೂಲಕ ಸರಬರಾಜು ಮಾಡಲಾಗುತ್ತಿದೆ.ಪೌರಾಯುಕ್ತರು ಇಂತಹದ್ದೊಂದು ಆದೇಶ ಹೊರಡಿಸುವ ಮುನ್ನ ಸ್ಥಳಪರಿಶೀಲಿಸಿ,ವಾಸ್ತವವನ್ನು ಮನಗಂಡು ಆದೇಶ ಹೊರಡಿಸಬೇಕಿತ್ತು. ಮಾಜಿ ಶಾಸಕ ಎ.ಪಾಪರೆಡ್ಡಿಯವರ ನೇತೃತ್ವದಲ್ಲಿ ಪೌರಾಯುಕ್ತರ ವಿರುದ್ಧ ಪ್ರತಿಭಟನೆಗೆ ಇಳಿದ ರಾಯಚೂರು ನಗರ ಬಿಜೆಪಿ ಘಟಕವು ಕೃಷ್ಣಾನದಿಗೆ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯದಿಂದ ನೀರು ಹರಿದು ಬರುತ್ತಿದ್ದು ಕೃಷ್ಣಾನದಿಯಲ್ಲಿ ನೀರಿನ ಅಭಾವ ಇಲ್ಲ ಎನ್ನುವ ಮಾಹಿತಿಯನ್ನು ಒದಗಿಸಿದೆ.

‌ಪೌರಾಯುಕ್ತ ಗುರುಲಿಂಗಯ್ಯನವರು ಕುಡಿಯುವ ನೀರಿನ ಪೂರೈಕೆಯಂತಹ ಅತ್ಯವಶ್ಯಕ ಸೇವೆ ಮತ್ತು ಸೂಕ್ಷ್ಮವಿಷಯದ ಬಗ್ಗೆ ಆದೇಶ ಹೊರಡಿಸುವ ಮುನ್ನ ಜಾಣ್ಮೆ ಮೆರೆಯಬೇಕಿತ್ತು.ನಗರದ ಶಾಸಕರು,ಸಂಸದರು ಮತ್ತಿತರ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ,ಅವರಿಗೆ ನೀರಿನ ಅಭಾವದ ಬಗ್ಗೆ ಮನವರಿಕೆ ಮಾಡಿಕೊಡಬೇಕಿತ್ತು.ಅಲ್ಲದೆ ರಾಯಚೂರು ನಗರಸಭೆಯಲ್ಲಿ ಅಧ್ಯಕ್ಷ,ಉಪಾಧ್ಯಕ್ಷರು ಇರದೆ ಇದ್ದರೂ ಸದಸ್ಯರಂತೂ ಇದ್ದಾರೆ.ಅವರೊಂದಿಗೆ ಔಪಚಾರಿಕವಾಗಿ ಸಮಾಲೋಚಿಸಿದ್ದರೆ ಗುರುಲಿಂಗಯ್ಯನವರಿಗೆ ನಷ್ಟವೇನೂ ಆಗುತ್ತಿರಲಿಲ್ಲ.ಆದರೆ ನಮ್ಮ ಸರಕಾರಿ ಅಧಿಕಾರಿಗಳು ತಾವು ಸರ್ವಶಕ್ತರು ಎನ್ನುವ ಗುಂಗಿನಲ್ಲಿಯೇ ಇರುತ್ತಾರೆಯೇ ಹೊರತು ಜನಪ್ರತಿನಿಧಿಗಳೊಂದಿಗೆ ಚರ್ಚಿಸುವುದು ಅಧಿಕಾರವಿಕೇಂದ್ರೀಕರಣ ತತ್ತ್ವದ ಮೂಲ ಉದ್ದೇಶ ಎಂದು ತಿಳಿದುಕೊಳ್ಳುವುದೇ ಇಲ್ಲ.ಪೌರಾಯುಕ್ತರು ಆದೇಶ ಹೊರಡಿಸಿ ನೀರು ಪೂರೈಕೆಯ ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಬಹುದು.ಆದರೆ ರಾಯಚೂರಿನ ನಾಗರಿಕರು ಕುಡಿಯುವ ನೀರಿಗಾಗಿ ಪರಿತಪಿಸುವಂತೆ ಆಗಬಾರದು.ಜನರು ಪೌರಾಯುಕ್ತರನ್ನು ಪ್ರಶ್ನಿಸದೆ ಇರಬಹುದು ಆದರೆ ತಾವು ಆರಿಸಿದ ಜನಪ್ರತಿನಿಧಿಗಳನ್ನಂತೂ ಖಂಡಿತವಾಗಿಯೂ ಪ್ರಶ್ನಿಸುತ್ತಾರೆ.ಜನಪ್ರತಿನಿಧಿಗಳು ಜನತೆಗೆ ಉತ್ತರಿಸುವುದಾದರೂ ಹೇಗೆ? ಪೌರಾಯುಕ್ತರು ಶಾಸಕರು,ಸಂಸದರು,ನಗರಸಭೆಯ ಸದಸ್ಯರುಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಂಡಿದ್ದರೆ ಅವರೇ ಜನತೆಗೆ ಮನವರಿಕೆ ಮಾಡಿಕೊಡುತ್ತಿದ್ದರು.ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರಾಡಳಿತ ಸಂಸ್ಥೆಗಳಲ್ಲಿ ಆಡಳಿತ ನಡೆಸುವ ಅಧಿಕಾರಿಗಳು ಇಂತಹ ಸೂಕ್ಷ್ಮತೆಯನ್ನು ಮೈಗೂಡಿಸಿಕೊಳ್ಳಬೇಕು.ಭಾರತ ಸಂವಿಧಾನದ 73 ಮತ್ತು 74 ನೆಯ ತಿದ್ದುಪಡಿಗಳು ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರಾಡಳಿತ ಸಂಸ್ಥೆಗಳಿಗೆ ಬಲತುಂಬಿರುವುದರ ಜೊತೆಗೆ ಅವುಗಳ ಹೊಣೆಗಾರಿಕೆಯನ್ನು ಹೆಚ್ಚಿಸಿ, ನಿರ್ದಿಷ್ಟಪಡಿಸಲಾಗಿದೆ.ಸಂವಿಧಾನದ 74 ನೆಯ ತಿದ್ದುಪಡಿಯಂತೆ ನಗರಾಡಳಿತದ ಸ್ವಯಂಸರಕಾರವಾಗಿರುವ ನಗರಸಭೆಯು ನಗರದ ಪ್ರಜೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಮತ್ತು ನಗರದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅದರ ಮೂಲಭೂತ ಕರ್ತವ್ಯ.ರಾಯಚೂರು ನಗರದ ಜನತೆಗೆ ಶುದ್ಧನೀರು ಕೊಡಲು ಬದ್ಧರಾಗಿರಬೇಕಾದ ಪೌರಾಯುಕ್ತರು ನಿಜವಾಗಿಯೂ ನೀರಿನ ಅಭಾವ ಇದ್ದರೆ ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಂಡು ರಾಯಚೂರಿನ ನಾಗರಿಕರಿಗೆ ಕುಡಿಯುವ ನೀರನ್ನು ಪೂರೈಸಬೇಕೇ ಹೊರತು ಮನಸ್ಸಿಗೆ ಬಂದಂತೆ ಆದೇಶ ಹೊರಡಿಸಬಾರದು.ನವೆಂಬರ್ ತಿಂಗಳಲ್ಲಿಯೇ ಉರಿಬೇಸಿಗೆಯ ಬಿಸಿಲ ಬೇಗೆಯನ್ನು ಅನುಭವಿಸುತ್ತಿರುವ ರಾಯಚೂರಿನ ನಾಗರಿಕರಿಗೆ ಮೂರುದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವುದು ಎಂದರೆ ಅದು ಜನತೆಗೆ ತೊಂದರೆಯನ್ನುಂಟು ಮಾಡಿದಂತೆ.ರಾಯಚೂರು ನಗರಕ್ಕೆ ಪೂರೈಕೆಯಾಗುವ ನೀರಿನಲ್ಲಿ ಯಾರಾದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಸುತ್ತಿದ್ದರೆ,ಕೈಗಾರಿಕೆಗಳು ಅನಧಿಕೃತವಾಗಿಯೋ ಇಲ್ಲವೆ ಅವಶ್ಯಕತೆಗಿಂತ ಹೆಚ್ಚಾಗಿಯೋ ನೀರನ್ನು ಬಳಸುತ್ತಿದ್ದರೆ ಅದನ್ನು ತಡೆದು ಜನರಿಗೆ ಕುಡಿಯುವ ನೀರನ್ನು ಪೂರೈಸುವುದು ಪೌರಾಯುಕ್ತರ ಕರ್ತವ್ಯ.ಒಂದು ವೇಳೆ ಕೃಷ್ಣಾನದಿಯಲ್ಲಿ ನಿಜವಾಗಿಯೂ ನೀರಿನ ಅಭಾವ ಇದ್ದರೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಬೇಕಿತ್ತು.ರಾಯಚೂರು ಜಿಲ್ಲಾಧಿಕಾರಿಗಳು ಕೃಷ್ಣಾನದಿ ಹರವಿನ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮತ್ತು ಸರಕಾರದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಯಚೂರು ನಗರಕ್ಕೆ ಅವಶ್ಯಕವಿರುವಷ್ಟು ಕುಡಿಯುವ ನೀರನ್ನು ಪೂರೈಸಲು ವ್ಯವಸ್ಥೆ ಮಾಡುತ್ತಿದ್ದರು.ರೈತರು ಬೆಳೆಯುವ ಭತ್ತ ಮತ್ತಿತರ ಹೆಚ್ಚುನೀರುಬಯಸುವ ಬೆಳೆಗಳಿಗೆ ಸಾಕಾಗದಷ್ಟು ನೀರು ಕೃಷ್ಣಾನದಿ ಜಲಾಶಯದಲ್ಲಿ ಇಲ್ಲದೆ ಇರಬಹುದು ಆದರೆ ಕುಡಿಯುವ ನೀರಿನ ಬವಣೆ ನೀಗಿಸುವಷ್ಟು ನೀರಂತೂ ಇದೆ.

‌‌‌‌‌ಸರಕಾರಿ ಅಧಿಕಾರಿಗಳು ಸಾರ್ವಜನಿಕರ ಬದುಕಿಗೆ ಆಸರೆಯಾಗಬೇಕೇ ಹೊರತು ಸಾರ್ವಜನಿಕರ ಬೇಸರಕ್ಕೆ ಗುರಿಯಾಗುವಂತೆ ಅಧಿಕಾರ ಚಲಾಯಿಸಬಾರದು.

About The Author