ಜಾತಿಗಣತಿಯ ವರದಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು : ಮುಕ್ಕಣ್ಣ ಕರಿಗಾರ

 

ಬಿಹಾರದಲ್ಲಿ ಜಾತಿಗಣತಿ ವರದಿಯು ಬಹಿರಂಗವಾದ ಬಳಿಕ ಇತರ ರಾಜ್ಯಗಳಲ್ಲಿಯೂ ಜಾತಿಗಣತಿಗಾಗಿ ಆಗ್ರಹ ಕೇಳಿ ಬಂದಿದೆ.ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿಯವರು ಐದು ರಾಜ್ಯಗಳ ಚುನಾವಣಾ ಭಾಷಣಗಳಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸುವ ಆಶ್ವಾಸನೆ ನೀಡಿದ್ದಾರೆ.ಒಟ್ಟಾರೆಯಾಗಿ ಜಾತಿಗಣತಿಯ ಕೂಗು ದೇಶವ್ಯಾಪಿಯಾಗಿ ಅನುರಣಿಸುತ್ತಿದೆ.ಹೀಗಾಗಿಯೇ ಗೃಹಮಂತ್ರಿ ಅಮಿತ್ ಶಾ ಅವರು ‘ ಬಿಜೆಪಿಯು ಎಂದೂ ಜಾತಿಗಣತಿಯನ್ನು ವಿರೋಧಿಸಿರಲಿಲ್ಲ’ ಎನ್ನುವ ಸ್ಪಷ್ಟೀಕರಣ ನೀಡಿದ್ದಾರೆ.ದೇಶದಾದ್ಯಂತ ಶೂದ್ರಸಮುದಾಯಗಳು ಎಚ್ಚರಗೊಳ್ಳುತ್ತಿವೆಯಾದ್ದರಿಂದ ಜಾತಿಗಣತಿಯನ್ನು ವಿರೋಧಿಸುವುದು ಬಿಜೆಪಿಗೂ ಕಷ್ಟಕರವೆ.

ಕರ್ನಾಟಕದಲ್ಲಿ ಈಗಾಗಲೇ ಜಾತಿಗಣತಿಯ ವರದಿಯು ಸಿದ್ಧವಾಗಿದೆ.ಈ ಹಿಂದೆ ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೆ 170 ಕೋಟಿ ರೂಪಾಯಿಗಳನ್ನು ಖರ್ಚುಮಾಡಿ ‘ ಆರ್ಥಿಕ ಸಾಮಾಜಿಕ ಸಮೀಕ್ಷೆ’ ಎನ್ನುವ ಹೆಸರಿನಲ್ಲಿ ಜಾತಿಗಣತಿ ನಡೆಸಲಾಗಿದೆ.ಬಿಜೆಪಿ ಸರಕಾರವು ಉದ್ದೇಶಪೂರ್ವಕವಾಗಿಯೇ ಜಾತಿಗಣತಿಯ ವರದಿಯನ್ನು ಬಹಿರಂಗಪಡಿಸಲಿಲ್ಲ.ಈಗ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾರೆ.ಜಾತಿಗಣತಿಯ ವರದಿಯನ್ನು ಅವರು ಆದಷ್ಟು ಶೀಘ್ರವಾಗಿ ಬಿಡುಗಡೆ ಮಾಡಬೇಕು.

ಒಕ್ಕಲಿಗರ ಮಠಾಧೀಶರ ನೇತೃತ್ವದಲ್ಲಿ ನಡೆದ ಒಕ್ಕಲಿಗರ ಸಭೆಯು ‘ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡದಂತೆ ಸರಕಾರವನ್ನು ಒತ್ತಾಯಿಸುವ ನಿರ್ಣಯ ‘ ಕೈಗೊಂಡಿದೆ.ವಿಶೇಷವೆಂದರೆ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದು ಅಲ್ಲದೆ ಜಾತಿಗಣತಿಯ ವರದಿ ಬಿಡುಗಡೆ ಮಾಡಬಾರದು ಎನ್ನುವ ನಿರ್ಣಯಕ್ಕೆ ಸಮ್ಮತಿ ಸೂಚಿಸಿ,ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.ಇದು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಗಳಿಗೆ ಸಲ್ಲದ ನಡೆ ಎನ್ನುವುದನ್ನು ಡಿ.ಕೆ.ಶಿವಕುಮಾರ ಮರೆತಿದ್ದಾರೆ.ಜಾತಿಗಣತಿಯ ವರದಿಯನ್ನು ತಿರಸ್ಕರಿಸಬೇಕು ಎನ್ನುವ ಮನೋಭಾವನೆಯ,ಒಕ್ಕಲಿಗರ ಹಿತರಕ್ಷಕ ಡಿ.ಕೆ.ಶಿವಕುಮಾರ ಒಂದುವೇಳೆ ರಾಜ್ಯದ ಮುಖ್ಯಮಂತ್ರಿಯಾದರೆ ದಲಿತರು,ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಹಿತವನ್ನು ಕಾಪಾಡಬಲ್ಲರೆ ಎನ್ನುವ ಸಂದೇಹ ಉಂಟಾಗಿದೆ.

‌ಲಿಂಗಾಯತರು ಕೂಡ ಜಾತಿಗಣತಿಯ ವರದಿಯ ಬಿಡುಗಡೆಯನ್ನು ವಿರೋಧಿಸುತ್ತಿದ್ದಾರೆ.ವೀರಶೈವ ಮಹಾಸಭಾವು ಕೂಡ ‘ ಜಾತಿಗಣತಿಯನ್ನು ತಿರಸ್ಕರಿಸಬೇಕು’ ಎನ್ನುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗವು ಸಿದ್ಧಪಡಿಸಿದ್ದ ಜಾತಿಗಣತಿಯ ಕೆಲವು ವಿವರಗಳು ಸೋರಿಕೆಯಾಗಿದ್ದೇ ಒಕ್ಕಲಿಗರು,ಲಿಂಗಾಯತರು ನಿದ್ದೆಗೆಡಿಸಿಕೊಳ್ಳಲು ಕಾರಣ.ಇದುವರೆಗೂ ರಾಜ್ಯದ ಜನಸಂಖ್ಯೆಯಲ್ಲಿ ಒಕ್ಕಲಿಗರು ಮೊದಲ ಸ್ಥಾನದಲ್ಲಿ ,ಲಿಂಗಾಯತರು ಎರಡನೇ ಸ್ಥಾನದಲ್ಲಿದ್ದಾರೆ ಎಂದು ಸುಳ್ಳಿನ ಅಂಕೆ ಸಂಖ್ಯೆಗಳ ಆಧಾರದ ಮೇಲೆ ಈ ಎರಡು ಬಲಿಷ್ಠ ಕೋಮುಗಳು ರಾಜಕೀಯ ಅಧಿಕಾರ ಮತ್ತು ಸಂಪನ್ಮೂಲಗಳಲ್ಲಿ ಸಿಂಹಪಾಲು ಪಡೆದಿದ್ದವು.ಹಳೆಯ ಮೈಸೂರು ಭಾಗದ ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ವಾಸವಾಗಿರುವ ಒಕ್ಕಲಿಗರು ರಾಜ್ಯದ ದೊಡ್ಡಸಂಖ್ಯೆಯ ಜನಸಮುದಾಯವಾಗಿರಲು ಸಾಧ್ಯವೆ ? ಹತ್ತುಹಲವು ಉಪಜಾತಿಗಳ ಹೆಸರಿನಲ್ಲಿ ಸಂಖ್ಯಾಬಲ ತೋರಿಸುತ್ತಿರುವ ಲಿಂಗಾಯತರು ರಾಜ್ಯದಲ್ಲಿ ಎರಡನೇ ಸ್ಥಾನದ ಸಂಖ್ಯಾಬಲದಲ್ಲಿರಲು ಸಾಧ್ಯವೆ? ಈ ಅನುಮಾನಗಳನ್ನು ಜನರನ್ನು ಕಾಡುತ್ತಿದ್ದವು.ಹಿಂದುಳಿದ ವರ್ಗಗಳ ರಾಜ್ಯ ಶಾಶ್ವತ ಆಯೋಗವು ಜಾತಿ ಸಮೀಕ್ಷೆ ಮಾಡಿ ಇಂತಹ ಸುಳ್ಳುಸಂಖ್ಯೆಯ ಮಿಥ್ಯೆಯ ಸತ್ತ್ವಕ್ಕೆ ಪೆಟ್ಟುಕೊಟ್ಟಿದೆ.ಸೋರಿಕೆಯಾದ ಕಾಂತರಾಜ ವರದಿಯ ಅಂಕಿ ಸಂಖ್ಯೆಗಳಂತೆ ರಾಜ್ಯದ ಜನಸಂಖ್ಯೆಯಲ್ಲಿ ದಲಿತರು ಮೊದಲ ಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ ಕುರುಬರು ಇದ್ದಾರೆ.ಅಲ್ಪಸಂಖ್ಯಾತರು ಮೂರನೇ ಸ್ಥಾನದಲ್ಲಿದ್ದು ಒಕ್ಕಲಿಗರು,ಲಿಂಗಾಯತರು ನಂತರದ ಸ್ಥಾನಗಳಲ್ಲಿದ್ದಾರೆ.ಒಂದೊಮ್ಮೆ ಜಾತಿಗಣತಿಯ ವರದಿಯು ಬಹಿರಂಗಗೊಂಡರೆ ತಮ್ಮ ಹುಸಿ ಪ್ರತಿಷ್ಠೆಗೆ ಗಂಡಾಂತರ ಒದಗಲಿದೆ ಎನ್ನುವ ಕಾರಣದಿಂದಲೇ ಒಕ್ಕಲಿಗರು ಮತ್ತು ಲಿಂಗಾಯತರು ಜಾತಿಗಣತಿಯ ವರದಿಯನ್ನು ಬಹಿರಂಗಪಡಿಸದಂತೆ ಆಗ್ರಹಿಸುತ್ತಿದ್ದಾರೆ.ಡಿ.ಕೆ.ಶಿವಕುಮಾರ ಅವರಾಗಲಿ ಅಥವಾ ಲಿಂಗಾಯತ ಸಮುದಾಯದ ಸಚಿವರುಗಳಾಗಲಿ ಜಾತಿಗಣತಿಯ ವರದಿಯ ಬಿಡುಗಡೆಗೆ ಅಪಸ್ವರ ಎತ್ತುವುದು ಅವರದೆ ಸರಕಾರದ ವಿರುದ್ಧದ ಸರಕಾರಿ ವಿರೋಧಿ ನೀತಿ.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ರಾಹುಲ್ ಗಾಂಧಿ ಅವರು ಜಾತಿಗಣತಿಯ ಪರವಾಗಿ ಮಾತನಾಡುತ್ತಿರುವಾಗ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಭಾಗವಾಗಿ,ರಾಜ್ಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ ಜಾತಿಗಣತಿಯನ್ನು ವಿರೋಧಿಸುವುದು ಪಕ್ಷವಿರೋಧಿನಡೆ ಆಗದಿದ್ದರೂ ಪಕ್ಷದ ಆಶಯಗಳಿಗೆ ವಿರುದ್ಧವಾದ,ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ನಡೆಯಂತೂ ಹೌದು.ಲಿಂಗಾಯತ ಸಮುದಾಯದ ಸಚಿವರುಗಳಿಗೂ ಈ ಮಾತು ಅನ್ವಯಿಸುತ್ತದೆ.

ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ್ದ ಆಶ್ವಾಸನೆಗಳಲ್ಲಿ ಜಾತಿಗಣತಿಯ ವರದಿಯನ್ನು ಬಹಿರಂಗಪಡಿಸುವುದು ಕೂಡ ಒಂದು ಆಶ್ವಾಸನೆಯಾಗಿತ್ತು.ಅಲ್ಲದೆ ರಾಹುಲ್ ಗಾಂಧಿಯವರು ಜಾತಿಗಣತಿಯ ಪರವಾಗಿ ಇದ್ದಾರೆ‌.ಈ ಎರಡು ಅಂಶಗಳ ಬಲದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಂತರಾಜ್ ಸಮಿತಿಯು ಸಿದ್ಧಪಡಿಸಿದ ಜಾತಿಗಣತಿಯ ವರದಿಯನ್ನು ಬಹಿರಂಗಪಡಿಸಬೇಕು.ಜಾತಿಗಣತಿಯ ವರದಿಯು ಬಹಿರಂಗಗೊಳ್ಳುವುದರಿಂದ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಧೃತಿಗೆಡುವಂತಹ ಪ್ರಸಂಗಗಳೇನೂ ಬರುವುದಿಲ್ಲ,ಸತ್ಯಬಯಲಿಗೆ ಬರುವ ಹೊರತಾಗಿ.ಇದುವರೆಗೂ ಹಿಂದುಳಿದ,ಅವಕಾಶವಂಚಿತ ಶೂದ್ರಸಮುದಾಯಗಳ ಹಕ್ಕು- ಅವಕಾಶಗಳನ್ನು ಬಳಸಿಕೊಂಡದ್ದು ಸಾಲದೆ?

ಜಾತಿಗಣತಿಯ ವರದಿಯು ಬಹಿರಂಗಗೊಂಡರೆ ಹಿಂದುಳಿದ ವರ್ಗಗಳ ಶೂದ್ರಸಮುದಾಯಕ್ಕೆ ಆನೆಬಲ ಬರುತ್ತದೆ.ಜನಸಂಖ್ಯೆಯ ಆಧಾರದಲ್ಲಿ ರಾಜಕೀಯ ಹಕ್ಕು ಮತ್ತು ಸಂಪತ್ತಿನ ಹಂಚಿಕೆಯಲ್ಲಿನ ಅವಕಾಶಗಳಿಗಾಗಿ ಹಕ್ಕು ಮಂಡಿಸಲು ನೆರವಾಗುತ್ತದೆ.ಇದುವರೆಗೂ ಪರಿಗಣನೆಗೆ ಬಾರದೆ ಇದ್ದ ಅವಕಾಶವಂಚಿತ ಸಮುದಾಯಗಳು ತಮ್ಮ ಹಕ್ಕುಮಂಡಿಸಲು,ಧ್ವನಿ ಎತ್ತಲು ಸಹಕಾರಿಯಾಗುತ್ತದೆ.ಶೂದ್ರಸಮುದಾಯಗಳು,ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಸ್ಥಾನ ಮಾನ,ಅವಕಾಶಗಳಿಗಾಗಿ ಆಗ್ರಹಿಸಲು ಜಾತಿಗಣತಿಯ ವರದಿಯು ಪ್ರಬಲ ಅಸ್ತ್ರವಾಗಿ ಪರಿಣಮಿಸುತ್ತದೆ.

About The Author