ವೀರಾವೇಶದ ಭಾಷಣವಲ್ಲ,ಕನ್ನಡದ ಉದ್ಧಾರಕ್ಕೆ ನಿಜ ಬದ್ಧತೆ ಬೇಕು:ಮುಕ್ಕಣ್ಣ ಕರಿಗಾರ

ರಾಜ್ಯವು’ ಕರ್ನಾಟಕ’ ಎಂದು ನಾಮಕರಣಗೊಂಡು ಐವತ್ತು ವರ್ಷಗಳು ಪೂರ್ಣಗೊಂಡ ಸವಿನೆನಪಿಗೆ ರಾಜ್ಯಸರ್ಕಾರವು ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.ರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿಯವರಾದಿಯಾಗಿ ಸಚಿವರುಗಳು,ಶಾಸಕರುಗಳು ಅವರವರಿಗೆ ವಹಿಸಿಕೊಡಲಾದ ಉಸ್ತುವಾರಿ ಜಿಲ್ಲೆಗಳಲ್ಲಿ ಮತ್ತು ಶಾಸಕರುಗಳು ಅವರವರ ಮತಕ್ಷೇತ್ರಗಳಲ್ಲಿ ‘ನವೆಂಬರ್ ಕನ್ನಡಿಗರಾಗಿ’ ವೀರಾವೇಶದ ಭಾಷಣ ಮಾಡಿದ್ದಾರೆ.ಕನ್ನಡ ಸಂಘಟನೆಗಳು ವೀರಾವೇಶದ ಅಬ್ಬರವು ತುಸು ಜೋರಾಗಿಯೇ ಇದೆ.’ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ’ ‘ ಕನ್ನಡಕ್ಕೇ ಅಗ್ರಮಾನ್ಯತೆ’ ಎಂದು ಎಲ್ಲರೂ ಹೇಳುತ್ತಾರೆ.ಆದರೆ ಕನ್ನಡ ನುಡಿಯು ಅನ್ನದನುಡಿಯಾಗಿ ಬೆಳೆದಾಗಲೇ ಅದು ಉಳಿಯಲು ಸಾಧ್ಯ ಎನ್ನುವ ವಿಷಯವನ್ನು ಯಾರೂ ಚಿಂತಿಸುವುದಿಲ್ಲ,ಚರ್ಚಿಸುವುದಿಲ್ಲ.

ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳು ಶಿಕ್ಷಣ ಪಡೆಯುವುದನ್ನು ವಿರೋಧಿಸುವ ‘ ನವೆಂಬರ ಕನ್ನಡಿಗರು’ ಪೋಷಕರು ತಮ್ಮ ಮಕ್ಕಳನ್ನು ಯಾಕೆ ಕಾನ್ವೆಂಟ್ ಮತ್ತು ಇಂಗ್ಲಿಷ್ ಮೀಡಿಯಮ್ ಶಾಲೆಗಳಿಗೆ ಕಳುಹಿಸುತ್ತಾರೆ ಎನ್ನುವ ಕುರಿತು ಯೋಚಿಸುವುದೇ ಇಲ್ಲ. ನಮ್ಮಲ್ಲಿ ಶಿಕ್ಷಣವು ಉದ್ಯೋಗಪಡೆಯುವ ಸಾಧನವಾಗಿದೆಯೇ ಹೊರತು ವ್ಯಕ್ತಿತ್ವ ವಿಕಸನ,ಸ್ವಯಂ ಜೀವನ ನಿರ್ವಹಣೆ,ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವ ಜೀವನ ನಿರ್ವಹಣಾ ಕೌಶಲವಾಗಿ ಬೆಳೆದಿಲ್ಲ.ಗ್ರಾಮೀಣ ಜನರಂತೂ ಸರಕಾರಿ ನೌಕರಿ ಪಡೆಯಬೇಕು ಎನ್ನುವ ಹಂಬಲದಿಂದಲೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ.ಅದು ಅವರ ತಪ್ಪಲ್ಲ.ಬಡತನ,ದಾರಿದ್ರ್ಯಗಳಿಂದ ಪಾರಾಗಲು ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಮಕ್ಕಳು ಕಲಿತು ನೌಕರಿ ಮಾಡಲಿ ಎನ್ನುವ ಬಯಕೆ ಇದ್ದರದು ಸಹಜ.ಆದರೆ ನಮ್ಮ ಉದ್ಯೋಗ ನೀತಿಯಂತೆ ನಗರ ಪ್ರದೇಶದ ಮಕ್ಕಳಿಗೆ ಸಿಕ್ಕುವಷ್ಟು ವಿಪುಲ ಉದ್ಯೋಗಾವಕಾಶಗಳು ಗ್ರಾಮೀಣ ಪ್ರದೇಶದ ಉದ್ಯೋಗಾಸಕ್ತರುಗಳಿಗೆ ಸಿಗುವುದಿಲ್ಲ.ಸರಕಾರಿ ಇಲ್ಲವೆ ಖಾಸಗಿ ಉದ್ಯೋಗ ಪಡೆಯಲು ಎಸ್ ಎಸ್ ಎಲ್ ಸಿ,ಪಿಯುಸಿ,ಪದವಿ,ಸ್ನಾತಕೋತ್ತರ ಪದವಿ ಮೊದಲಾದ ಕೋರ್ಸುಗಳಲ್ಲಿ ಪಡೆದ ಅಂಕಗಳನ್ನೇ ‘ ಮೆರಿಟ್’ ಎಂದು ಪರಿಗಣಿಸಿ,ಆ ಮೆರಿಟ್ ನ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತಿದೆ.ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಅಧಿಕಾರಿಗಳ ನೇಮಕಾತಿಗಾಗಿ ತಾನು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅವರ ಆಯ್ಕೆಯನ್ನು ನಿರ್ಧರಿಸುತ್ತದೆ.ಕೆ ಪಿ ಎಸ್ ಸಿ ಯ ಮೂಲಕವೇ ನೇಮಕವಾಗಲಿ ಅಥವಾ ಇತರ ಯಾವುದೇ ನೇಮಕಾತಿ ಪ್ರಾಧಿಕಾರದ ಮೂಲಕವೇ ನೇಮಕಗೊಳ್ಳಲಿ ರಾಜ್ಯಮಟ್ಟದ ಪರೀಕ್ಷೆ ಮತ್ತು ಆಯ್ಕೆ ಪದ್ಧತಿ ಇದೆ.ಇದು ಗ್ರಾಮೀಣ ಪ್ರದೇಶದ ಯುವಕ ಯುವತಿಯರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿದೆ.ಸರಕಾರಿ ಹುದ್ದೆಗಳಿಗಾಗಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ನೀಡುವ 10% ಕೃಪಾಂಕ ಪದ್ಧತಿ ಇಲ್ಲವೆ ಉದ್ಯೋಗದಲ್ಲಿ ಗ್ರಾಮೀಣ ಮೀಸಲಾತಿಯನ್ನು ನಗರ ಪ್ರದೇಶದ ಅಭ್ಯರ್ಥಿಗಳು ಹೈಕೋರ್ಟಿನಲ್ಲಿ ಪ್ರಶ್ನಿಸಿದಾಗ ಹೈಕೋರ್ಟ್ ಗ್ರಾಮೀಣ‌ಕೃಪಾಂಕವು ಸಂವಿಧಾನದ ಸಮಾನತೆಯ ತತ್ತ್ವಗಳಿಗೆ ವಿರುದ್ಧವಾದ ನಡೆ ಎಂದು ಅಸಿಂಧುಗೊಳಿಸುತ್ತಿದೆ.ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಕೃಪಾಂಕ ನೀಡುವ ಉದ್ದೇಶ ಏನು ಎಂದು ಅರ್ಥಮಾಡಿಕೊಳ್ಳದ ಕೋರ್ಟ್ಗಳು ನಾವು ‘ಎಲ್ಲ ಸರಿಯಾಗಿಯೇ‌ಇರುವ ಆದರ್ಶ ಸಮಾಜ ವ್ಯವಸ್ಥೆಯಲ್ಲಿದ್ದೇವೆ’ ಎನ್ನುವಂತೆ ಕಲ್ಪಿಸಿಕೊಂಡು ಗ್ರಾಮೀಣ ಕೃಪಾಂಕವನ್ನು ರದ್ದುಪಡಿಸುತ್ತಿವೆ.ನ್ಯಾಯಾಧೀಶರುಗಳು ಸಂವಿಧಾನವನ್ನು ಎತ್ತಿಹಿಡಿಯುವುದರ ಜೊತೆಗೆ ವರ್ತಮಾನದ ಸಾಮಾಜಿಕ ವೈರುಧ್ಯ,ವಿಷಮತೆಯನ್ನು ಅರ್ಥಮಾಡಿಕೊಳ್ಳಬೇಕು.ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಓದಿದ ಅಭ್ಯರ್ಥಿಯೊಂದಿಗೆ ಬೀದರ್,ರಾಯಚೂರು ಅಥವಾ ಚಾಮರಾಜ ನಗರದ ಕಗ್ಗಾಡ ಹಳ್ಳಿಯ ಅಭ್ಯರ್ಥಿ ಸ್ಪರ್ಧೆಗೆ ಇಳಿಯಬಲ್ಲನೆ? ಹಿಂದುಳಿದ ಪ್ರದೇಶದಲ್ಲಿ ಓದಿದ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವುದು ಬೆಂಗಳೂರು,ಮೈಸೂರುಗಳ ವಿದ್ಯಾರ್ಥಿಗಳು ಪ್ರಥಮ rank ಪಡೆಯುವುದಕ್ಕೆ ಸಮ! ಕಲ್ಯಾಣ ಕರ್ನಾಟಕದ ಕಗ್ಗಾಡ ಹಳ್ಳಿಯೊಂದರಲ್ಲಿ ಓದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿ ಮತ್ತು ಬೆಂಗಳೂರಿನ ಅಂತಾರಾಷ್ಟ್ರೀಯ ಸೌಲಭ್ಯಗಳನ್ನು ಹೊಂದಿದ ಖಾಸಗಿ ಶಾಲೆಯ ವಿದ್ಯಾರ್ಥಿ ಉದ್ಯೋಗಕ್ಕೆ ಅರ್ಜಿ ಹಾಕಿದಾಗ ಉದ್ಯೋಗ ಯಾರಿಗೆ ದೊರೆಯುತ್ತದೆ? ಬೆಂಗಳೂರಿನ ವಿದ್ಯಾರ್ಥಿಗೆ ತಾನೆ ? ಬೆಂಗಳೂರಿನ ವಿದ್ಯಾರ್ಥಿಗೆ ಉದ್ಯೋಗ ನೀಡಿದ್ದು ಮತ್ತು ನೀಡುವುದು ಸರಿ ಎಂದು ತೀರ್ಪು ನೀಡುವ ನ್ಯಾಯಾಲಯಗಳಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ಸೌಲಭ್ಯದ ಖಾಸಗಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಮತ್ತು ಕಲ್ಯಾಣ ಕರ್ನಾಟಕದ ಸಾರಿಗೆ ಸಂಪರ್ಕದ ಕೊರತೆ,ಶಿಕ್ಷಕರ ಕೊರತೆ,ಪುಸ್ತಕಗಳ ಕೊರತೆಗಳಂತಹ ಎಲ್ಲ ಕೊರತೆಗಳ ನಡುವೆಯೂ ಕಷ್ಟಪಟ್ಟು ಓದಿ,ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಯ ನಡುವಿನ ಅಂತರ ಅರ್ಥ ಆಗುವುದಿಲ್ಲ.ಬಾಯುಪಚಾರಕ್ಕಾಗಿ ಗ್ರಾಮೀಣ ಜನರಿಗೆ ಉದ್ಯೋಗ ನೀಡಬೇಕೆನ್ನುವ ರಾಜಕಾರಣಿಗಳಿಗೆ ಅಷ್ಟೇ ಸಾಕಾಗಿರುತ್ತದೆ.’ ಕೋರ್ಟ್ ಗ್ರಾಮೀಣ ಕೃಪಾಂಕವನ್ನು ಅಸಿಂಧುಗೊಳಿಸಿದೆ.ನಾವೇನು ಮಾಡಲಾಗುತ್ತದೆ?’ ಎಂದು ಕೈತೊಳೆದುಕೊಳ್ಳುತ್ತಾರೆ.ನಮ್ಮ ಶಾಸಕರುಗಳು,ಸಚಿವರುಗಳು ಬಡವರಲ್ಲವಾದ್ದರಿಂದ ಮತ್ತು ತಮ್ಮ ಮಕ್ಕಳುಗಳನ್ನು ತಮ್ಮಂತೆಯೇ ರಾಜಕಾರಣಿಗಳನ್ನಾಗಿ ರೂಪಿಸಲು ಆಲೋಚಿಸಿರುವುದರಿಂದ ಬದುಕಿಗಾಗಿ ಸರಕಾರಿ ನೌಕರಿಯನ್ನೇ ನಂಬಿರುವ ಗ್ರಾಮೀಣ‌ಪ್ರದೇಶದ ಬಡಕುಟುಂಬಗಳ ಉದ್ಯೋಗಾಕಾಂಕ್ಷಿಗಳ ನೋವು,ಸಂಕಟ ಅವರಿಗೆ ಅರ್ಥವಾಗುವುದಿಲ್ಲ.ಗ್ರಾಮೀಣ ಪ್ರದೇಶದ ಜನರು ಹೇಗಾದರೂ ಮಾಡಿ ತಮ್ಮ ಮಕ್ಕಳು ಸರಕಾರಿ ನೌಕರಿ ಪಡೆಯಬೇಕು ಎನ್ನುವ ಕಾರಣದಿಂದಾಗಿಯೇ ಸಾಲಸೋಲ ಮಾಡಿ ಖಾಸಗಿ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ಗಳಿಗೆ ತಮ್ಮ‌ಮಕ್ಕಳನ್ನು ಕಳುಹಿಸುತ್ತಿದ್ದಾರೆ ಎನ್ನುವುದನ್ನು ನಮ್ಮ ರಾಜಕಾರಣಿಗಳು,ಅಧಿಕಾರಿಗಳು,ಶಿಕ್ಷಣ ತಜ್ಞರುಗಳು,ಕವಿ ಸಾಹಿತಿಗಳು ಅರ್ಥ ಮಾಡಿಕೊಳ್ಳಬೇಕು.

ಶ್ರೀಮಂತರು,ರಾಜಕಾರಣಿಗಳು,ಸರಕಾರಿ ಅಧಿಕಾರಿಗಳು ತಮ್ಮ ಮಕ್ಕಳುಗಳನ್ನು ಲಕ್ಷಾಂತರ ರೂಪಾಯಿಗಳ ಡೊನೇಶನ್ ಕೊಟ್ಟು ಪ್ರತಿಷ್ಠಿತ‌ ಖಾಸಗಿ ಶಾಲೆಗಳಲ್ಲಿ ಓದಿಸುತ್ತಾರೆ.ಆದರೆ ಬಡವರಿಗೆ ‘ ನಿಮ್ಮ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗಳಲ್ಲೇ ಓದಿಸಿ.ಯಾಕೆಂದರೆ ನಾವು ಕನ್ನಡಿಗರು,ನಮ್ಮ ಮಾತೃಭಾಷೆ ಕನ್ನಡ.ನಾವು ಕನ್ನಡವನ್ನು ಉಳಿಸಿ,ಬೆಳೆಸಬೇಕಾದರೆ ನಿಮ್ಮ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗೆ ಕಳುಹಿಸಿ’ ಎಂದು ಉಪದೇಶ ನೀಡುತ್ತಾರೆ.ಶ್ರೀಮಂತರು,ಉಳ್ಳವರ ಮಕ್ಕಳುಗಳು ಅಮೇರಿಕಾ,ಇಂಗ್ಲಂಡ್ ದೇಶಗಳಲ್ಲಿ ಓದಿದರೂ ಪರವಾಯಿಲ್ಲ,ಬಡವರ ಮಕ್ಕಳು ಮಾತ್ರ ಹಳ್ಳಿಗಳ ಸರಕಾರಿ ಶಾಲೆಗಳಲ್ಲೇ ಓದಬೇಕು ಎಂದು ನಿರೀಕ್ಷಿಸುವುದು ಸಾಮಾಜಿಕ ಕ್ರೌರ್ಯವಲ್ಲವೆ? ಗ್ರಾಮೀಣ ಪ್ರದೇಶದ ಬಡವರ ಮಕ್ಕಳುಗಳ ಭವಿಷ್ಯ ಮಾತ್ರ ಕನ್ನಡದ ಹೆಸರಿನಲ್ಲಿ ಬಲಿಯಾಗಬೇಕೆ ? ಈ ಕಾರಣದಿಂದ ಹೈಕೋರ್ಟ್ ‘ಶಿಕ್ಷಣ ಮಾಧ್ಯಮ ಪೋಷಕರ ವಿವೇಚನೆಗೆ ಬಿಟ್ಟ ವಿಷಯ,ಸರಕಾರ ಒತ್ತಡ ಹೇರುವಂತಿಲ್ಲ’ ಎಂದು ತೀರ್ಪು ನೀಡಿದೆ.

ಕನ್ನಡ ಭಾಷೆ,ಮಾಧ್ಯಮದ ಹೆಸರಿನಲ್ಲಿ ಗ್ರಾಮೀಣ ಪ್ರದೇಶದ ಬಡವರ ಮಕ್ಕಳ ಭವಿಷ್ಯವನ್ನು ಮರಟುಗೊಳಿಸುವ ಬದಲು ಸರಕಾರವು ತನ್ನ ಶಿಕ್ಷಣ ಮತ್ತು ಉದ್ಯೋಗ ನೀತಿಯನ್ನು ಆಮೂಲಾಗ್ರವಾಗಿ ಬದಲಿಸಿಕೊಂಡು ಗ್ರಾಮಮುಖಿಯಾಗಿಸಬೇಕು.ಇದು ಸರಕಾರದ ಬದ್ಧತೆಯ ಪ್ರಶ್ನೆ.ಯಾವ ಸರಕಾರವೂ ಇಂತಹ ಕ್ರಾಂತಿಕಾರಕ ಯೋಜನೆಯನ್ನು ಅನುಷ್ಠಾನಗೊಳಿಸುವ ಭರವಸೆ ಇಲ್ಲ.ಸರಕಾರವನ್ನು ನಡೆಸುವವರಿಗೆ ಅವರದೆ ಆದ ಆಯ್ಕೆ ಮತ್ತು ಆದ್ಯತೆಗಳಿರುತ್ತವೆ.ಗ್ರಾಮೀಣ ಪ್ರದೇಶದ ಉದ್ಯೋಗಾಕಾಂಕ್ಷಿಗಳ ಕನಸುಗಳಿಗೆ ಕಸುವನ್ನು ತುಂಬುವ ಕೆಲಸ ಮಾಡುವ ರಾಜಕಾರಣಿಗಳಿಂದ ಮಾತ್ರ ಇಂತಹ ಕಾರ್ಯ ಸಾಧ್ಯ.

ಗ್ರಾಮೀಣ ಪ್ರದೇಶದ ಉದ್ಯೋಗಾಕಾಂಕ್ಷಿಗಳು,ನಿರುದ್ಯೋಗಿಗಳಿಗೆ ಉದ್ಯೋಗ ಕೊಡಬೇಕಾದರೆ ಕನ್ನಡವು ಅನ್ನದ ಭಾಷೆಯಾಗಿ ಮಾರ್ಪಡಬೇಕು.ಅಂತಹ ವ್ಯವಸ್ಥೆಯನ್ನು ಸರಕಾರ ರೂಪಿಸಬೇಕು.ಅಂದರೆ ಗ್ರಾಮೀಣಪ್ರದೇಶದಲ್ಲಿ ಗ್ರಾಮೀಣ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗಗಳು ದೊರಕುವಂತಹ ವ್ಯವಸ್ಥೆ ಸೃಷ್ಟಿಸಬೇಕು.ಉದ್ಯೋಗಾಕಾವಶಗಳು ಗ್ರಾಮಮುಖಿಯಾಗಿ ಸಂಚರಿಸಬೇಕು.ಕರ್ನಾಟಕ ಲೋಕಸೇವಾ,ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳ ಬದಲು ಗ್ರಾಮೀಣ ಪ್ರದೇಶದ ಉದ್ಯೋಗಾಕಾಂಕ್ಷಿಗಳಿಗಾಗಿಯೇ ‘ ಗ್ರಾಮೀಣ ಉದ್ಯೋಗ ಆಯೋಗ’ ರಚಿಸಬೇಕು‌.ವಿವಿಧ ಹುದ್ದೆಗಳಿಗೆ ಗ್ರಾಮ ಇಲ್ಲವೆ ಹೆಚ್ಚೆಂದರೆ ತಾಲೂಕನ್ನು ‘ ನೇಮಕಾತಿ ಘಟಕ’ ವನ್ನಾಗಿ ಮಾಡಬೇಕು.ಆ ಗ್ರಾಮ ಇಲ್ಲವೆ ತಾಲ್ಲೂಕಿನಲ್ಲಿ ಓದಿದವರಿಗೆ ಆ ತಾಲೂಕಾ ವ್ಯಾಪ್ತಿಯಲ್ಲೇ ಉದ್ಯೋಗ ದೊರಕುವಂತೆ ಆಗಬೇಕು.ಇದರಿಂದ ಸಹಜವಾಗಿಯೇ ಗ್ರಾಮೀಣ ಪ್ರದೇಶದ ನಿರುದ್ಯೋಗಿ ತರುಣ ತರುಣಿಯರಿಗೆ ಉದ್ಯೋಗಾವಕಾಶ ದೊರೆಯುತ್ತದೆ.ಬೆಂಗಳೂರು,ಮೈಸೂರುಗಳ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಓದಿದವರು ಗ್ರಾಮ,ತಾಲೂಕಾ ನೇಮಕಾತಿ ಘಟಕಗಳ ಹುದ್ದೆಗಳಿಗೆ ಅರ್ಜಿ ಹಾಕುವುದಿಲ್ಲ ! ಅಲ್ಲದೆ ಅವರ ಜಿಲ್ಲೆಗಳ ವ್ಯಾಪ್ತಿಯಲ್ಲೂ ಕೂಡ ಇಂತಹ ಸ್ಥಳೀಯ ನೇಮಕಾತಿ ಘಟಕಗಳಿರುವುದರಿಂದ ಅವರ ಸ್ಪರ್ಧೆ,ಪೈಪೋಟಿಯೂ ತಪ್ಪುತ್ತದೆ.

ಇದು ಸಾಧ್ಯವಾಗಬೇಕಾದರೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಶಿಕ್ಷಣ ಪದ್ಧತಿಯೂ ಬದಲಾಗಬೇಕು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಗ್ರಾಮಮುಖಿಯಾಗಬೇಕು.ಗ್ರಾಮೀಣ ಪ್ರದೇಶದಲ್ಲಿಯೇ ಉದ್ಯೋಗಾವಕಾಶಗಳ ಸೃಷ್ಟಿಗೆ ಪೂರಕವಾಗುವಂತಹ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.ಪ್ರತ್ಯೇಕ ಗ್ರಾಮೀಣ ಶಿಕ್ಷಣ ನಿರ್ದೇಶನಾಲಯ,ಆಯುಕ್ತಾಲಯಗಳನ್ನು ಸ್ಥಾಪಿಸಬೇಕು.ಶಿಕ್ಷಣ ಮತ್ತು ಶೈಕ್ಷಣಿಕ ಆಡಳಿತವು ಗ್ರಾಮ,ತಾಲುಕಾ ಕೇಂದ್ರಗಳಲ್ಲಿಯೇ ನಿರ್ವಹಿಸುವಂತೆ ಆಗಬೇಕು.ಸ್ಥಳೀಯ ಶಿಕ್ಷಣ,ಸ್ಥಳೀಯ ಪಠ್ಯಕ್ರಮ ಪದ್ಧತಿಯನ್ನು ಜಾರಿಗೊಳಿಸಬೇಕು.ಅಲ್ಲಿ ಕಲಿತವರು ಅಲ್ಲಿಯೇ ಉದ್ಯೋಗ ಪಡೆಯುತ್ತಾರೆ.ಇದರಿಂದ ಗ್ರಾಮೀಣ ಜನತೆ ನಗರಗಳತ್ತ ಮುಖ ಮಾಡುವುದು ತಪ್ಪುತ್ತದೆ,ಮಿತಿಮೀರಿದ ವಲಸೆಯ ಭಾರಕ್ಕೆ ನಗರಗಳು ತತ್ತರಿಸುವುದು ತಪ್ಪುತ್ತದೆ.ಶಿ ಗ್ರಾಮೀಣ ಪ್ರದೇಶದಲ್ಲಿಯೇ ಉದ್ಯೋಗ ಸಿಗುವಂತಾದರೆ ಬಡವರು ಮಕ್ಕಳು ಖಂಡಿತ ಸರಕಾರಿ ಕನ್ನಡ ಶಾಲೆಗಳಲ್ಲಿಯೇ ಓದುತ್ತಾರೆ.ಶಿಕ್ಷಣ ಮತ್ತು ಔದ್ಯೋಗಿಕ ನೀತಿಯ ವಿಕೇಂದ್ರೀಕರಣ ಇಂದಿನ ತುರ್ತು ಅಗತ್ಯವಾಗಿದೆ.ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ವಿಕೇಂದ್ರೀಕರಣವಾದರೆ ಕೋರ್ಟ್ಗಳ ಆದೇಶಗಳು ಅಡ್ಡಬರುವುದಿಲ್ಲ,ಗ್ರಾಮೀಣ ಪ್ರದೇಶದ ಉದ್ಯೋಗಾಸಕ್ತರುಗಳಿಗೆ ನೌಕರಿಯೂ ಸಿಗುತ್ತದೆ,ಕನ್ನಡವೂ ಉಳಿಯುತ್ತದೆ.

ಇದು ಕಷ್ಟದ ಕೆಲಸವೇನಲ್ಲ.ಆದರೆ ಗ್ರಾಮೀಣ ಪ್ರದೇಶದ ಜನರ ಬಗ್ಗೆ ಪ್ರಾಮಾಣಿಕ ಕಾಳಜಿ- ಕಳಕಳಿಗಳುಳ್ಳವರಿಂದ ಮಾತ್ರ ಇದು ಸಾಧ್ಯ.ಅಂಥವರು ಇದ್ದಾರೆಯೆ ಇಂದು ?

About The Author