ಗೆಳೆಯ ಬಸವರಾಜ ಕುಂಬಾರ ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡ ಸಂತಸದ ಕ್ಷಣಗಳು:ಮುಕ್ಕಣ್ಣ ಕರಿಗಾರ

ಇಂದು ಗೆಳೆಯ ಬಸವರಾಜ ಕುಂಬಾರ ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದೆ.ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಹಳೆಯ ಗೆಳೆಯರು ಮತ್ತು ಶಿಷ್ಯ ಬಳಗದೊಂದಿಗೆ ಭಾಗವಹಿಸಿದ್ದೆ. ಮಗಳು ವಿಂಧ್ಯಾಳು ಕೂಡ ಈ ಮದುವೆಯಲ್ಲಿ ಪಾಲ್ಗೊಂಡಿದ್ದು ಸ್ನೇಹಿತರೆಲ್ಲರ ಸಂತಸದ ಕಾರಣವಾಗಿತ್ತು.ಬಸವರಾಜ ಕುಂಬಾರ ನನ್ನ ಸ್ನೇಹಿತರು,ಮೂರು ದಶಕಗಳಿಂದ ಸಾಗಿಬಂದಿದೆ ಸ್ನೆಹಯಾತ್ರೆ.ವಯಸ್ಸಿನಿಂದ ನನಗಿಂತ ಹಿರಿಯರಾದ ಬಸವರಾಜ ಕುಂಬಾರ,ಡಾ.ಜಕ್ಕಣ್ಣಾಚಾರಿಯವರೆಲ್ಲ ನನ್ನ ಸ್ನೇಹಿತರು ಆಗಿದ್ದು ನಮ್ಮೂರಿನ ಪದವಿಪೂರ್ವ ಕಾಲೇಜನ್ನು ಉಳಿಸುವ ನಾಗಯ್ಯ ತಾತನವರ ಪ್ರಯತ್ನದ ಫಲವಾಗಿ.ನಮ್ಮೂರಿನ ಶೈಕ್ಷಣಿಕ ಇತಿಹಾಸದಲ್ಲಿ ಗುರುವಿನ ನಾಗಯ್ಯ ತಾತನವರ ಹೆಸರು ಚಿರಸ್ಮರಣೀಯ.ತಮಗೆ ಸ್ವಂತ ಮಕ್ಕಳು ಇಲ್ಲದಿದ್ದರೂ ನಾಗಯ್ಯ ತಾತನವರು ನಮ್ಮೂರು ಗಬ್ಬೂರಿನಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗಾಗಿ ಸುದೀರ್ಘಕಾಲ ಪ್ರಯತ್ನಿಸಿ,ಹೋರಾಡಿ ಯಶಸ್ವಿಯಾದವರು.ನಾಗಯ್ಯ ತಾತನವರ ಶಿಕ್ಷಣ ಪ್ರೇಮ,ಬಡಮಕ್ಕಳ ಶಿಕ್ಷಣದ ಕಾಳಜಿ ಕಳಕಳಿಯಿಂದಾಗಿ ನಮ್ಮೂರಿನಲ್ಲಿಂದು ಸರಕಾರಿ ಪ್ರಾಥಮಿಕ ಶಾಲೆಗಳು,ಪ್ರೌಢಶಾಲೆ ಮತ್ತು ಸರಕಾರಿ ಪದವಿಪೂರ್ವ ಕಾಲೇಜುಗಳಿವೆ.

ನಾಗಯ್ಯ ತಾತನವರ ಶಿಕ್ಷಣ ಪ್ರೇಮದಿಂದಾಗಿಯೇ ನನ್ನಂತಹ‌ ಪ್ರತಿಭಾವಂತ ವಿದ್ಯಾರ್ಥಿಗಳು ಸಹ ಉತ್ತಮಶೈಕ್ಷಣಿಕ ವಾತಾವರಣದಿಂದ ವಂಚಿತರಾಗಿ ನಮ್ಮೂರಿನ ಸರಕಾರಿ ಜೂನಿಯರ್ ಕಾಲೇಜಿನಲ್ಲಿಯೇ ಓದಬೇಕಾದ ಅನಿವಾರ್ಯತೆ ಬಂದೊದಗಿತ್ತು. ಮೊದಮೊದಲು ರಾಯಚೂರು,ಧಾರವಾಡದಂತಹ ಸ್ಥಳಗಳಲ್ಲಿ ಓದುವ ಅವಕಾಶ ತಪ್ಪಿಸಿದರಲ್ಲ ಎಂದು ನಾಗಯ್ಯ ತಾತನವರ ಮೇಲೆ ನನಗೆ ಸಿಟ್ಟು ಇತ್ತು ಆದರೂ ಬರಬರುತ್ತ ಅವರು ನಮ್ಮೂರಿನ ಕಾಲೇಜನ್ನು ಉಳಿಸಲು ಈ ಪ್ರಯತ್ನ ಮಾಡುತ್ತಿದ್ದಾರೆ ಎಂದರಿವಾಗಿ ಅವರ ಬಗ್ಗೆ ಗೌರವಾಭಿಮಾನಗಳು ಮೂಡಿದವು.ನಾನು 1987 ರಲ್ಲಿ ನಮ್ಮೂರಿನ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 408 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದೆ.ಧಾರವಾಡದ ಕೆ ಸಿ ಡಿ ಕಾಲೇಜಿನಲ್ಲಿ ಓದುವ ಬಯಕೆ; ಅದಾಗದಿದ್ದರೆ ರಾಯಚೂರಿನ ಟ್ಯಾಗೋರ ಕಾಲೇಜಿನಲ್ಲಿ ಓದಬೇಕು ಎಂದುಕೊಂಡಿದ್ದೆ.ಧಾರವಾಡದ ಕೆ ಸಿ ಡಿ ಕಾಲೇಜಿಗೆ ಪ್ರವೇಶಾತಿಯೂ ಸಿಕ್ಕಿತ್ತು.ಆದರೆ ನಾಗಯ್ಯ ತಾತನವರು ನಮ್ಮ ಟಿ ಸಿ ಕೊಡಿಸಲಿಲ್ಲ ! ಆ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿದ್ದು ಕೇವಲ ಎಂಟು ಜನರು ಮಾತ್ರ! ಈ ಎಂಟೂ ಜನರಿಗೆ ಟಿ ಸಿ ಕೊಟ್ಟರೆ ಕಾಲೇಜು ಮುಚ್ಚುತ್ತದೆ ಎಂಬುದು ನಾಗಯ್ಯ ತಾತನವರ ಯೋಚನೆ.

ಎಸ್ ಎಸ್ ಎಲ್ ಸಿ ಯಲ್ಲಿ‌ಪಾಸಾಗಿದ್ದ ನಾವು ಎಂಟು ಜನರು ಟಿ ಸಿ ಕೇಳಲು ಹೋದಾಗ ನಮ್ಮ ಪ್ರಾಂಶುಪಾಲರಾಗಿದ್ದ ಕೆ ಎನ್ ಗಡಚಿಂತಿಯವರು ‘ ನಾಗಯ್ಯ ತಾತನವರನ್ನು ಕೇಳಿ’ ಎಂದರು.ನಮ್ಮೂರಿನ ಹಿರಿಯರೂ ಸರ್ವಜನರ ಗೌರವಾದರಗಳಿಗೆ ಪಾತ್ರರಾಗಿದ್ದ ನಾಗಯ್ಯ ತಾತನವರು ನಮ್ಮ ಕಾಲೇಜಿನ ಶಾಲಾ ಸುಧಾರಕ ಸಮಿತಿಯ ಅಧ್ಯಕ್ಷರಾಗಿದ್ದರು.ಅವರಿಗೆ ಎದುರು ಮಾತನಾಡುವ ಧೈರ್ಯ ಆಗ ನಮ್ಮೂರಲ್ಲಿ ಯಾರಿಗೂ ಇರಲಿಲ್ಲ.ನಾವು ಎಂಟು ಜನ ಮೊಂಡು ಧೈರ್ಯ ಮಾಡಿ ನಾಗಯ್ಯ ತಾತನವರ ಮನೆಗೆ ಹೋಗಿ ಟಿ ಸಿ ಕೇಳಿ ಬಯ್ಯಿಸಿಕೊಂಡು ಬಂದಿದ್ದೆವು!

ನಾಗಯ್ಯ ತಾತನವರ‌ ಪ್ರಾಮಾಣಿಕ ಕಾಳಜಿ ಕಳಕಳಿಯ ಕಾರಣದಿಂದ 1984 ರಲ್ಲಿ ನಮ್ಮೂರಿಗೆ ಸರಕಾರಿ ಪದವಿಪೂರ್ವ ಕಾಲೇಜು ಮಂಜೂರು ಆಗಿತ್ತು ಆದರೂ ವಿದ್ಯಾರ್ಥಿಗಳ ಕೊರತೆಯಿಂದ ಅದು ಮುಳುಗಿ ಏಳುವ ಹಡಗಿನ ಸ್ಥಿತಿಯಲ್ಲಿತ್ತು.ವಿದ್ಯಾರ್ಥಿಗಳು ಇಲ್ಲ ಎನ್ನುವ ಕಾರಣದಿಂದ ಸರಕಾರ ಕಾಲೇಜು ರದ್ದುಪಡಿಸುವುದು,ನಾಗಯ್ಯ ತಾತನವರು ಬೆಂಗಳೂರಿಗೆ ಹೋಗಿ ಮತ್ತೆ ಮಂಜೂರು ಮಾಡಿಸುವುದು ಆ ದಿನಗಳ ಸಾಮಾನ್ಯ ಸಂಗತಿಯಾಗಿತ್ತು.ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರೊಡನೆ ನಾಗಯ್ಯ ತಾತನವರು ಉತ್ತಮ ಬಾಂಧವ್ಯ ಹೊಂದಿದ್ದರಿಂದ ಪ್ರತಿವರ್ಷ ರದ್ದು ಆದ ನಮ್ಮೂರ ಪಿಯು ಕಾಲೇಜು ಮುಂದುವರೆಯುತ್ತಿತ್ತು.ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ ನಾಗಯ್ಯ ತಾತನವರ ಊರ ಹಿರಿಯರೆಲ್ಲರ ಸಭೆ ಕರೆದು ‘ನಮ್ಮೂರ ಹೈಸ್ಕೂಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆದ ಯಾರಿಗೂ ಟಿ ಸಿ ಕೊಡಬಾರದು ,ಊರ ಕಾಲೇಜನ್ನು ಉಳಿಸುವ ದೃಷ್ಟಿಯಿಂದ’ ಅಂತ ನಿರ್ಣಯಿಸಿದ್ದರು.ನಮ್ಮ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾಗಿದ್ದ ಕೆ ಎನ್ ಗಡಚಿಂತಿಯವರು ಕೂಡ ಕಾಲೇಜನ್ನು ಉಳಿಸಲು ನಾಗಯ್ಯ ತಾತನವರೊಂದಿಗೆ ಹೆಗಲೆಣೆಯಾಗಿ ದುಡಿಯುತ್ತಿದ್ದರು.ನಾನೊಬ್ಬನೇ ಪ್ರಥಮದರ್ಜೆಯಲ್ಲಿ ಪಾಸಾದವನು ಆಗಿದ್ದರಿಂದ ನನ್ನೊಬ್ಬನ ಟಿ ಸಿಯನ್ನಾದರೂ ಕೊಡಿ ಎಂದು ನಾನು ಆಗ್ರಹಿಸಿದ್ದರೂ ಸಿಗಲಿಲ್ಲ ಟಿಸಿ.ಬೇರೆ ದಾರಿಯಿಲ್ಲದೆ ನಮ್ಮೂರ ಜೂನಿಯರ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿ ಅಡ್ಮಿಶನ್ ಮಾಡಿಸಬೇಕಾಯಿತು.

ಸರಕಾರವು ಕಾಲೇಜು ಉಳಿಯಬೇಕಾದರೆ ಕನಿಷ್ಟ ಇಪ್ಪತ್ತು ಜನ ವಿದ್ಯಾರ್ಥಿಗಳು ಇರಬೇಕು ಎಂದು ಷರತ್ತು ವಿಧಿಸಿತ್ತಂತೆ.ಪಾಸಾದ ಎಂಟು ಜನರಲ್ಲಿ ಇಬ್ಬರು ಪರಿಶಿಷ್ಟ ಜನಾಂಗಕ್ಕೆ ಸೇರಿದವರಾಗಿದ್ದರಿಂದ ಟಿ ಸಿ ಎಚ್ ಮಾಡಲು ಅವರಿಬ್ಬರಿಗೆ ಟಿ ಸಿ ನೀಡಲಾಗಿತ್ತು.ಉಳಿದವರು ಆರು ಜನ; ಅದರಲ್ಲಿ ಇಬ್ಬರು ವಿದ್ಯಾರ್ಥಿನಿಯರು,ನಾಲ್ಕು ಜನ ವಿದ್ಯಾರ್ಥಿಗಳು.ಆರು ಜನ ಕಾಲೇಜಿಗೆ ಸೇರಿದೆವು.ಇನ್ನು ಹದಿನಾಲ್ಕು ವಿದ್ಯಾರ್ಥಿಗಳು ಬೇಕಲ್ಲ!

ನಾಗಯ್ಯ ತಾತನವರು ವಿಚಾರ ಮಾಡಿ ಹಿಂದೆ ನಮ್ಮೂರಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದವರೆಲ್ಲರ ಪಟ್ಟಿ ಮಾಡಿಸಿದರು ಅವರೆಲ್ಲರನ್ನು ಪ್ರಥಮ ಪಿಯುಸಿಗೆ ಅಡ್ಮಿಶನ್ ಮಾಡಿಸುವ ಕಾರಣದಿಂದ.ನಮ್ಮೂರಿನಲ್ಲಿ ಹತ್ತಿಪತ್ತು ವರ್ಷಗಳ ಹಿಂದೆ ಎಸ್ ಎಸ್ ಎಲ್ ಸಿ ಪಾಸಾದವರು,ಹೆಂಡಿರು ಮಕ್ಕಳುಗಳುಳ್ಳವರು ನಮ್ಮೊಂದಿಗೆ ಪ್ರಥಮ ಪಿಯುಸಿಗೆ ಅಡ್ಮಿಶನ್ ಮಾಡಿಸಿ ನಮ್ಮ ಸ್ನೇಹಿತರಾದರು!ಹಾಗಾಗಿ ವಯಸ್ಸಿನಲ್ಲಿ ನನಗಿಂತ ತೀರ ಹಿರಿಯರಾಗಿದ್ದ ಬಸವರಾಜ ಕುಂಬಾರ,ಜಕ್ಕಣಾಚಾರಿ,ಗೌಸ್ ಮೊಹಿನುದ್ದೀನ್,ಶಾಲಂ ಸಾಬ್ ಮೊದಲಾದವರು ನನ್ನ ಸಹಪಾಠಿಗಳಾದರು,ಸ್ನೇಹಿತರಾದರು.ನನಗಿಂತ ಸ್ವಲ್ಪ ಹಿರಿಯರೆಂದರೆ ಬಾಬುಮಿಯಾ ಮತ್ತು ಸುಲ್ತಾನಪುರದ ಶಿವರಾಮರೆಡ್ಡಿ ಮಾತ್ರ.ಉಳಿದವರಿಗು ನನಗೂ ವಯಸ್ಸು,ವಿಚಾರ- ಭಾವನೆಗಳಲ್ಲಿ ಬಹಳ ಅಂತರ ಇತ್ತು.ಆ ಅಂತರದ ನಡುವೆಯೂ ಸಮಾನ ಮನಸ್ಕರಾಗಿ ನನ್ನೊಂದಿಗೆ ಆತ್ಮೀಯ ಸಖ್ಯ ಬೆಳೆಸಿಕೊಂಡವರು ಬಸವರಾಜ ಕುಂಬಾರ ಮತ್ತು ಡಾ.ಜಕ್ಕಣಾಚಾರಿಯವರು. ಹೆಚ್ಚಿನ ಅಂಕಗಳನ್ನು ಪಡೆದು Rank ಇಲ್ಲವೆ ಡಿಸ್ಟಿಂಕ್ಷನ್ ನಲ್ಲಿ ಆದರೂ ಉತ್ತೀರ್ಣನಾಗಬೇಕು ಎಂದಾಶಿಸಿದ್ದ ನಾನು ಉಪನ್ಯಾಸಕರ ಕೊರತೆ,ಪರಿಣಾಮಕಾರಿ ಬೋಧನೆಗಳ ಕೊರತೆಯ ಕಾರಣದಿಂದ ಎರಡನೇ ಪಿಯುಸಿ ಪರೀಕ್ಷೆಯಲ್ಲಿ 404 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೆ.ಮುಂದೆ ರಾಯಚೂರಿನ ಎಲ್ ವಿ ಡಿ ಕಾಲೇಜಿನಲ್ಲಿ ಪದವಿ,ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ ಎ ಗೆ ಸೇರಿದ ದಿನಗಳಲ್ಲಿ ಮತ್ತೆ ನಾನು ಕೆ ಎ ಎಸ್ ಪರೀಕ್ಷೆಗೆ ಸ್ವಯಂ ಅಧ್ಯಯನ ಮಾಡುತ್ತಿದ್ದ ದಿನಗಳಲ್ಲಿ ನನ್ನ ಜೊತೆಗೆ ನಿರಂತರ ಒಡನಾಟದಲ್ಲಿದ್ದವರು ಗೆಳೆಯರಾದ ಶಿವರಾಜ ಪವಾರ್,ಬಸವರಾಜ ಕುಂಬಾರ್ ಮತ್ತು ಡಾ.ಜಕ್ಕಣಾಚಾರಿ.ಇವರೆಲ್ಲರೂ ನಮ್ಮ ಕುಟುಂಬದ ಸದಸ್ಯರಂತೆಯೇ ಇದ್ದುದರಿಂದ ನಮ್ಮ ಅಪ್ಪ ಅಮ್ಮಂದಿರನ್ನು ದೊಡ್ಡಪ್ಪ,ದೊಡ್ಡಮ್ಮ ಎನ್ನುತ್ತಿದ್ದರು.ಬಸವರಾಜ ಕುಂಬಾರ ನಾನಿಲ್ಲದ ದಿನಗಳಲ್ಲೂ ನಮ್ಮ ಮನೆಗೆ ಹೋಗಿ ನನ್ನ ಅಪ್ಪ ಅಮ್ಮನವರೊಂದಿಗೆ ಘಂಟೆಗಟ್ಟಲೆ ಮಾತನಾಡಿ ಹೋಗುತ್ತಿದ್ದರು.ಅವರ ತಂದೆ ಈರಣ್ಣನವರು ಸಹ ಆಧ್ಯಾತ್ಮಿಕ ಪಥದಲ್ಲಿ ಆಸಕ್ತಿ ಉಳ್ಳವರು ಆಗಿದ್ದರಿಂದ ನಮ್ಮ ತಂದೆಯವರೊಂದಿಗೆ ಆಗಾಗ ಆಧ್ಯಾತ್ಮಿಕ ಸಂಗತಿಗಳ ಬಗ್ಗೆ ಚರ್ಚಿಸುತ್ತಿದ್ದರು.ಬಸವರಾಜ ಅವರ ಅಣ್ಣ ನರಸಪ್ಪನವರು ಸಹ ಆಧ್ಯಾತ್ಮದ ಒಲವು ಉಳ್ಳ ಕಾರಣದಿಂದ ಆಗಾಗ ನಮ್ಮ ಮನೆಗೆ ಬರುತ್ತಿದ್ದರು.ನಮ್ಮ ತಾತ ಮುಕ್ಕಣ್ಣ ಕರಿಗಾರ ಅವರ ಕಾಲದಿಂದಲೂ ನಮ್ಮದು ಆಧ್ಯಾತ್ಮಿಕ ಮನೆತನವಾಗಿದ್ದರಿಂದ ನಮ್ಮ ತಂದೆ ನಾಗಪ್ಪ ಕರಿಗಾರ ಮತ್ತು ನಮ್ಮ ಚಿಕ್ಕಪ್ಪ ಯಲ್ಲಪ್ಪ ಕರಿಗಾರ ಅವರಿಬ್ಬರೂ ನಮ್ಮೂರಿನ ಹಿರಿಯ ಆಧ್ಯಾತ್ಮಿಕ ಚೇತನ ಸೂಗಣ್ಣ ತಾತನವರ ಶಿಷ್ಯರಾಗಿದ್ದುದರಿಂದ ನಮ್ಮ ಮನೆಯಲ್ಲಿ ಯಾವಾಗಲೂ ಆಧ್ಯಾತ್ಮಿಕ ಚಿಂತನೆ,ಚರ್ಚೆಗಳು ನಡೆಯುತ್ತಲೇ ಇದ್ದವು.

ನಾನು ಪದವಿ ಮತ್ತು ಕೆ ಎ ಎಸ್ ಅಧ್ಯಯನದ ದಿನಗಳಲ್ಲಿ ಬಸವರಾಜ ಅವರ ಮನೆಗೆ ಆಗಾಗ ಹೋಗುತ್ತಿದ್ದೆ.ಅವರ ಮನೆಯವರೆಲ್ಲರೊಂದಿಗೆ ಆತ್ಮೀಯ ಒಡನಾಟವೂ ನನ್ನದಾಗಿತ್ತು.ಮುಂದೆ ಅಧಿಕಾರಿಯಾಗಿ ನಾನು ಊರಿಂದ ಊರಿಗೆ ಅಲೆದಾಡಬೇಕಾದ ಕಾರಣದಿಂದ ಊರಿನ ಸಂಪರ್ಕವು ಕಡಿಮೆಯಾಗುತ್ತ ಬಂದಂತೆ ಹಳೆಯ ಗೆಳೆಯರ ಸಂಪರ್ಕವೂ ಕಡಿತಗೊಂಡಿತು.ಆದರೆ ಊರಿಗೆ ಹೋದಾಗಲೆಲ್ಲ ಬಸವರಾಜ ಕುಂಬಾರ ಮತ್ತು ಜಕ್ಕಣಾಚಾರಿ ಅವರನ್ನು ಕರೆಯಿಸಿ ಘಂಟೆಗಟ್ಟಲೆ ಹರಟೆ ಹೊಡೆಯುತ್ತಿದೆ.ನಾನು ದೊಡ್ಡ ಅಧಿಕಾರಿ ಆಗಿದ್ದರೂ ನನ್ನ ಮತ್ತು ಅವರ ನಡುವೆ ಯಾವ ಅಡ್ಡಗೋಡೆಯೂ ಇರಲಿಲ್ಲ.ಸ್ನೇಹ ಸ್ನೇಹವೆ !ಮೊನ್ನೆ ಬೆಂಗಳೂರಿನಲ್ಲಿದ್ದಾಗ ಗೆಳೆಯ ಬಸವರಾಜ ಶಿವರಾಜ ಪವಾರ್ ನ ಮನೆಗೆ ಹೋಗಿ ನನಗೆ ಫೋನ್ ಮಾಡಿಸಿ ಮಗಳ ಮದುವೆಗೆ ಬರುವಂತೆ ಆಹ್ವಾನ ನೀಡಿದ.ಹಳೆಯ ಆತ್ಮೀಯ ಗೆಳೆಯನ ಮಗಳ ಮದುವೆ ಎನ್ನುವ ಕಾರಣದಿಂದ ಬೆಂಗಳೂರಿನ ಕೆಲಸ ಕಾರ್ಯಗಳನ್ನು ಮುಂದೂಡಿ ಊರಿಗೆ ಬಂದೆ.ಇಂದು ಬೆಳಿಗ್ಗೆ ಗೆಳೆಯ ಡಾ.ಜಕ್ಕಣಾಚಾರಿ ಅವರಿಗೆ ಫೋನ್ ಮಾಡಿ ಮದುವೆಗೆ ಬರುವಂತೆ ಕರೆದು ಮದುವೆಗೆ ಹೋದೆ.ಈ ಮದುವೆಯ ಕಾರಣದಿಂದ ಹಳೆಯ ಸ್ನೇಹಿತರು ಒಂದೆಡೆ ಸೇರಿದ ಸಂತೋಷ ನನಗಾಯಿತು. ನನ್ನ ಮತ್ತೊಬ್ಬ ಹಳೆಯ ಸ್ನೇಹಿತ ಬಸವರಾಜ ಕರಿಗಾರ ಮತ್ತು ಶಿಷ್ಯ ಬಿಬ್ಬಣ್ಣ ನನ್ನ ಜೊತೆಗೆ ಇದ್ದರು.

ಗೆಳೆಯ ಬಸವರಾಜ ಕುಂಬಾರ ಅವರ ಕುಟುಂಬದೆಲ್ಲರೂ ನನ್ನ ಆಗಮನದಿಂದ ಸಂತಸಗೊಂಡಿದ್ದರು.ಸಾಮಾನ್ಯವಾಗಿ ಮದುವೆ ಮೊದಲಾದ ಜನದಟ್ಟಣಿಯ ಸಮಾರಂಭ- ಕಾರ್ಯಕ್ರಮಗಳಿಂದ ದೂರ ಉಳಿಯುವ ನಾನು ಸ್ನೇಹಿತನ ಮಗಳ ಮದುವೆಗೆ ಹಾಜರಾಗಿದ್ದೆ.ಗೆಳೆಯ ಬಸವರಾಜ ಕುಂಬಾರ ನನ್ನಂತೆಯೇ ಸ್ವಾಭಿಮಾನಿ ಮನುಷ್ಯ.ಯಾರ ಹಂಗು- ಮುಲಾಜಿಗೆ ಒಳಗಾಗದೆ ಸ್ವತಂತ್ರವಾಗಿ ಬದುಕುತ್ತಿರುವ ಮನುಷ್ಯ.ಇಬ್ಬರು ಹೆಣ್ಣುಮಕ್ಕಳು ಮತ್ತೊಬ್ಬ ಗಂಡುಮಗುವಿನ ತಂದೆಯಾದ ಬಸವರಾಜ ಕುಂಬಾರ ಇಂದು ಎರಡನೇ ಮಗಳು ನಿರ್ಮಲಾಳ ಮದುವೆ ಮಾಡಿದರು.’ ಭಾರ ಕಡಿಮೆ ಆಯಿತಲ್ಲಪ್ಪ’ ಎಂದು ನಾನು ನುಡಿದಾಗ ದುಃಖ ಉಮ್ಮಳಿಸಿ ಅತ್ತ ಗೆಳೆಯ ಹೆಣ್ಣುಮಕ್ಕಳನ್ನು ಪರರ ಮನೆಗೆ ಕಳಿಸುವ ದುಃಖದಲ್ಲಿ.

ಮಸರಕಲ್ಲಿನಲ್ಲಿ ಬಹಳಷ್ಟು ಜನರು ಹಳೆಯ ಪರಿಚಿತರು ಮಾತನಾಡಿಸಿ ಕುಶಲ ವಿಚಾರಿಸಿದರು.ಸುಮಾರು ಹತ್ತೊಂಬತ್ತು ವರ್ಷಗಳ ಹಿಂದೆ ನಾನು ದೇವದುರ್ಗ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ ದಿನಗಳಲ್ಲಿ ವಸತಿ ಯೋಜನೆಗಳ ಮನೆ ಮಂಜೂರಾತಿ,ಪರಿಶೀಲನೆಗೆಂದು ಹಲವು ಬಾರಿ ಮಸರಕಲ್ ಗೆ ಭೇಟಿ ನೀಡಿದ್ದೆ.ಆಗಿನಿಂದಲೂ ಜನ ನನ್ನನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ,ಆತ್ಮೀಯವಾಗಿ ಮಾತನಾಡಿಸುತ್ತಾರೆ ಎಂದರೆ ಜನಪರ ಕಾಳಜಿಯುಳ್ಳ ಅಧಿಕಾರಿಗಳನ್ನು ನಮ್ಮ ಗ್ರಾಮ ಸಮುದಾಯ ಮರೆಯುವುದಿಲ್ಲ ಎನ್ನುವುದಕ್ಕೆ ಸಾಕ್ಷಿ.ಬಹಳಷ್ಟು ಜನರು ನನ್ನನ್ನು ಮಾತನಾಡಿಸಿ,ಎಲ್ಲಿದ್ದೀರಿ ಸರ್ ಈಗ? ಹೇಗಿದ್ದೀರಿ ಎಂದೆಲ್ಲ ವಿಚಾರಿಸಿ ಪ್ರೀತಿ,ಅಭಿಮಾನಗಳ ಮಳೆಗರೆದರು.ಗೆಳೆಯನ ಮಗಳ ಮದುವೆಯಲ್ಲಿ ಪಾಲ್ಗೊಂಡ ಸಂತಸ ಮತ್ತು ಮಸರಕಲ್ಲಿನಂತಹ ಜೀವಂತ ಮಾನವೀಯ ಮೌಲ್ಯಗಳ ಮೂರ್ತರೂಪವಾದ ಗ್ರಾಮಭಾರತವನ್ನು ನೆನೆಯುತ್ತ ಕಾರು ಹತ್ತಿದೆ ಊರಿನತ್ತ ಮುಖಮಾಡಿ.

 

About The Author