ಮೂರನೇ ಕಣ್ಣು : ಉರ್ದುಕವಿಗೋಷ್ಠಿ ನಡೆಸಿದರೆ ತಪ್ಪೇನು ? : ಮುಕ್ಕಣ್ಣ ಕರಿಗಾರ

ಮೈಸೂರು ದಸರಾ ಅಂಗವಾಗಿ ಆಯೋಜಿಸಿರುವ ಉರ್ದುಕವಿಗೋಷ್ಠಿಯ ಬಗ್ಗೆ ಬಿಜೆಪಿಯ ಕೆಲವು ನಾಯಕರು ಅಪಸ್ವರ ಎತ್ತಿದ್ದಾರೆ.ಉರ್ದುಕವಿಗೋಷ್ಠಿಯಿಂದ ‘ ಟಿಪ್ಪು ಸಂಸ್ಕೃತಿಯ ವೈಭವೀಕರಣ’ ಆಗುತ್ತದೆ ಎನ್ನುವ ಅತಿರೇಕದ ಮಾತುಗಳೂ ಕೇಳಿಬಂದಿವೆ.ಹೃದಯಹೀನರಿಗೆ ಎಲ್ಲೆಲ್ಲೂ ದೋಷವೇ ಕಾಣಿಸುತ್ತದೆ.ಅಷ್ಟಕ್ಕೂ ಉರ್ದುಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವವರು ರಾಜ್ಯದ ನಾಲ್ವರು ಸೇರಿದಂತೆ ಉರ್ದುಭಾಷೆ- ಸಾಹಿತ್ಯದಲ್ಲಿ ಹೆಸರುಮಾಡಿದ 20 ಜನ ಕವಿಗಳೇ ಹೊರತು ಅವರು ಭಯೋತ್ಪಾಕರು,ದೇಶದ್ರೋಹಿಗಳೇನಲ್ಲ .ಮನಸ್ಸುಗಳು ಒಡೆಯುವುದರಲ್ಲಿ ನಿಪುಣರಾಗಿರುವ ರಾಜಕಾರಣಿಗಳಿಗೆ ಕಾವ್ಯವು ಮನಸ್ಸು ಮನಸ್ಸುಗಳನ್ನು ಬೆಸೆಯುತ್ತಿದೆ,ಒಂದುಗೂಡಿಸುತ್ತಿದೆ ಎನ್ನುವ ಸತ್ಯ,ಕಾವ್ಯಶಕ್ತಿ ಅರ್ಥವಾಗುವುದಿಲ್ಲ.ವಿ.ಸುನೀಲ್ ಕುಮಾರ ಆಕ್ಷೇಪಿಸಿದರೆ ಅವರಿಗೆ ಉರ್ದು ಭಾಷೆಯ ಪರಿಚಯವಿಲ್ಲ,ಆಕ್ಷೇಪಿಸಿದ್ದಾರೆ ಎನ್ನಬಹುದು.ಆದರೆ ವಿಜಯಪುರ ಶಾಸಕರಾದ ಬಸನಗೌಡ ಯತ್ನಾಳ ಅವರು ಉರ್ದುಕವಿಗೋಷ್ಠಿಯನ್ನು ವಿರೋಧಿಸಿದ್ದು ಮಾತ್ರ ವಿಚಿತ್ರವಾಗಿದೆ. ಅವರ ತಂದೆ- ತಾತಂದಿರು ಉರ್ದು ಭಾಷೆಯಲ್ಲಿಯೇ ಶಿಕ್ಷಣಪಡೆದಿದ್ದರು ಎನ್ನುವುದನ್ನು ಬಸನಗೌಡ ಪಾಟೀಲ್ ಯತ್ನಾಳ ಅವರು ಮರೆತಿದ್ದಾರೆ.ನಿಜಾಮರ ಭಾಷೆ ಎಂದು ಉರ್ದನ್ನು ವಿರೋಧಿಸಬೇಕಿಲ್ಲ; ಉರ್ದು ಜಗತ್ತಿನ ಅತ್ಯಂತ ಸುಂದರ ಭಾಷೆಗಳಲ್ಲಿ ಒಂದು ಎನ್ನುವ ಅದರ ಸತ್ತ್ವದಿಂದ ಅದನ್ನು ಪ್ರೀತಿಸಬೇಕು.ಇಂದಿನ ಗೌಡ,ಪಟೇಲರುಗಳ ತಾತ ಮುತ್ತಾತಂದಿರುಗಳು ಉರ್ದು ಭಾಷೆಯನ್ನು ಕಲಿತೇ ನಿಜಾಮರ ಕಾಲದಲ್ಲಿ ಗೌಡಕಿ,ಪಟೇಲಗಿರಿಯನ್ನು ಪಡೆದಿದ್ದರು ಎನ್ನುವುದನ್ನು ಮರೆಯಬಾರದು.

ಕಲ್ಯಾಣಕರ್ನಾಟಕದ ಹೆಸರಾಂತ ಕವಿಗಳನೇಕರು ಉರ್ದುಭಾಷೆಯನ್ನು ಕಲಿತೋ ಇಲ್ಲವೆ ಉರ್ದು ಭಾಷೆಯ ಪ್ರಭಾವಕ್ಕೆ ಒಳಗಾಗಿಯೋ ತಮ್ಮ ಕಾವ್ಯ- ಸಾಹಿತ್ಯದ ಸತ್ತ್ವವನ್ನು ಹೆಚ್ಚಿಸಿಕೊಂಡಿದ್ದಾರೆ.ಸಿದ್ಧಯ್ಯಪುರಾಣಿಕ,ಪ್ರೊ.ವಸಂತಕುಷ್ಟಗಿ ಮತ್ತು ಶಾಂತರಸರು ಪ್ರಾಥಮಿಕ ಶಾಲಾ ಹಂತದಲ್ಲಿ ಉರ್ದುವನ್ನು ಕಲಿತು,ಉರ್ದು ಕಾವ್ಯ ಸಾಹಿತ್ಯವನ್ನು ಅಧ್ಯಯನ ಮಾಡಿಯೇ ಬೆಳೆದವರು.ಶಾಂತರಸರ ಸಾಹಿತ್ಯಸತ್ವದ ಹಿನ್ನೆಲೆಯಲ್ಲಿ ಉರ್ದುಭಾಷೆಯ ಪ್ರಭಾವ ದಟ್ಟವಾಗಿದೆ.ಶಾಂತರಸರ ದಾರಿಯಲ್ಲಿ ಇಂದಿಗೂ ರಾಯಚೂರು ಜಿಲ್ಲೆಯಲ್ಲಿ ಸಾಕಷ್ಟುಜನ ಕವಿಗಳು ಗಜಲ್ ಗಳನ್ನು ಬರೆಯುತ್ತಿದ್ದಾರೆ.ಗಜಲ್ ಉರ್ದು ಸಾಹಿತ್ಯದ ಸರಳ,ಜನಪ್ರಿಯ ವಿಶಿಷ್ಟ ಕಾವ್ಯ ಪ್ರಕಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಕಲ್ಬುರ್ಗಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿಯೂ ಗಜಲ್ ಗಳನ್ನು ಬರೆಯುತ್ತಿರುವ ಕವಿಗಳಿದ್ದಾರೆ.ನನ್ನ ಆತ್ಮೀಯರಲ್ಲೊಬ್ಬರಾಗಿರುವ ಶಹಾಪುರದ ಕವಿಮಿತ್ರ ಮತ್ತು ಕಲ್ಯಾಣಕರ್ನಾಟಕದ ಬಹುಮುಖ ಪ್ರತಿಭೆಯ ಕವಿ ಸಾಹಿತಿ ಸಿದ್ಧರಾಮ ಹೊನ್ಕಲ್ ಅವರು ಹಲವು ಗಜಲ್ ಸಂಕಲನಗಳನ್ನು ಪ್ರಕಟಿಸಿ ಗಜಲ್ ಗಳ ಸತ್ವ ತತ್ತ್ವವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ.

ಭಾಷೆ ಯಾವುದಾದರೇನು ಕವಿಗಳು ವಿಶ್ವಮಾನವರು,ವಸುದೈವ ಕುಟುಂಬಕಂ ತತ್ತ್ವದಲ್ಲಿ ನಂಬಿಕೆಯುಳ್ಳವರು.ಔರಂಗಜೇಬನೇ ಬೇರೆ ಉರ್ದು ಕವಿಗಳೇ ಬೇರೆ.ಹಿಂದುವಾದಿಗಳು ಬೇಕಿದ್ದರೆ ಔರಂಗಜೇಬನನ್ನು ದ್ವೇಷಿಸಲಿ.ಆದರೆ ಕನ್ನಡ ಭಾಷೆ ಸಂಸ್ಕೃತಿಗೆ ತನ್ನದೆ ಕೊಡುಗೆಯನ್ನು ನೀಡಿದ ಟಿಪ್ಪುವನ್ನು ಮತಾಂಧ ಎಂದು ಬಿಂಬಿಸುವುದು,ಉರ್ದುಕವಿಗೋಷ್ಠಿಯನ್ನು ಟಿಪ್ಪುವಿನ ವೈಭವೀಕರಣ ಎಂದು ಟೀಕಿಸುವುದು ಹೃದಯವಿಕಾರತೆಯೇ ಹೊರತು ಹೃದಯವೈಶಾಲ್ಯಕ್ಕೆ ಹೆಸರಾದ ಕನ್ನಡ ಸಂಸ್ಕೃತಿಯ ಲಕ್ಷಣವಲ್ಲ.

‌ಉರ್ದುಕವಿಗೋಷ್ಠಿಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರುಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂಬಂತೆ ಬಿಂಬಿಸಿ,ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿಹೇರಿಕೆ ಮಾಡುತ್ತಿರುವ ಕ್ರಮವನ್ನು ಏಕೆ ಆಕ್ಷೇಪಿಸುವುದಿಲ್ಲ ? ಕನ್ನಡಕ್ಕೆ ಸಿಕ್ಕಿರುವ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಅಗತ್ಯವಾದ ಅನುದಾನ,ಪ್ರತಿಷ್ಠೆಯನ್ನು ಒದಗಿಸಿ ಕೊಡಲು ಏಕೆ ಪ್ರಯತ್ನಿಸುತ್ತಿಲ್ಲ?ಉರ್ದುಕವಿಗೋಷ್ಠಿಯನ್ನು ವಿರೋಧಿಸುವ ಬಿಜೆಪಿ ನಾಯಕರುಗಳು ಭಾರತದ ಸಂವಿಧಾನದ ಅನುಚ್ಛೇದ 344(1) ಮತ್ತು 351ಗಳಿಗೆ ಅನುಗುಣವಾಗಿ ಸಂವಿಧಾನವು ಮಾನ್ಯತೆ ಮಾಡಿದ ಎಂಟನೆಯ ಅನುಸೂಚಿಯಲ್ಲಿರುವ 22 ಭಾಷೆಗಳಲ್ಲಿ ಉರ್ದುಕೂಡ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ಸಂವಿಧಾನವೇ ಮಾನ್ಯಮಾಡಿದ ಉರ್ದುಭಾಷೆಯ ಕವಿಗೋಷ್ಠಿಯ ಆಯೋಜನೆಯನ್ನು ವಿರೋಧಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆಯಲ್ಲವೆ?

About The Author