ಶ್ರೀದೇವಿಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ : ಮುಕ್ಕಣ್ಣ ಕರಿಗಾರ

ಶ್ರೀದೇವಿಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ : ಮುಕ್ಕಣ್ಣ ಕರಿಗಾರ

ಮುಂದುವರಿದ ಭಾಗ)

ಆವಶಕ್ತಿಯ ಮಂತ್ರವಾಗಲಿ
ತಾವು ನ್ಯಾಸವ ಮಾಡಿ ಬಳಿಕಲಿ
ದೇವಿಚರಿತವನಿದನು ನಿತ್ಯದಲೋದಿಕೊಂಡಿರಲೂ /
ಈವಳೈ ಬೇಡಿದ್ದ ಬಯಕೆಗ
ಳಾವ ಪ್ರಯೋಗಗಳಾದರು
ತಾವು ಶೀಘ್ರದಲಹವು ದೃಢಸಾಧನದಿ ಪಠಿಸುವುದೂ //೧೮//

ಚಿದಾನಂದಾವಧೂತರು ಈ ಪಷ್ಟದಿಯಲ್ಲಿ ಶ್ರೀದೇವಿ ಸಾಕ್ಷಾತ್ಕಾರದ ರಹಸ್ಯವನ್ನು ಸೂತ್ರರೂಪದಲ್ಲಿಟ್ಟಿದ್ದಾರೆ .ದೇವಿಪುರಾಣವನ್ನಷ್ಟೇ ಓದಿದರೆ ಸಾಲದು,ದೇವಿಗೆ ಸಂಬಂಧಿಸಿದ ಯಾವುದಾದರೂ ಶಕ್ತಿ ಮಂತ್ರವನ್ನು ನ್ಯಾಸಪೂರ್ವಕವಾಗಿ ಸಾಧನೆ ಮಾಡಬೇಕು,ಬಳಿಕ ಪುರಾಣವನ್ನು ಓದಬೇಕು.ಅಂದರೆ ಮಾತ್ರ ದೇವಿಯು ಬೇಡಿದ ಫಲ ಪದವಿಗಳನ್ನು ನೀಡಿ ಭಕ್ತರನ್ನು ಉದ್ಧರಿಸುತ್ತಾಳೆ.ದೃಢಚಿತ್ತದಿಂದ ದೇವಿಪುರಾಣವನ್ನು ಓದುವವರಿಗೆ ಸರ್ವೇಷ್ಟಸಿದ್ಧಿ ಲಭಿಸುವುದು.

ಮಂತ್ರ ಮತ್ತು ನ್ಯಾಸದ ಮಹತ್ವವನ್ನು ತಿಳಿದುಕೊಳ್ಳಬೇಕು. ” ಓಂ” ಎನ್ನುವದು ಪರಶಿವವಾಚಕ,ಪರಬ್ರಹ್ಮವಾಚವಾದ ಪ್ರಣವ ಮಂತ್ರ ಎನ್ನಿಸಿಕೊಂಡಿದೆ.ಪರಶಿವನಿಗೆ” ಓಂ” ಪ್ರಣವವು ಬೀಜಾಕ್ಷರವಾದಂತೆ ” ಹ್ರೀಂ” ಕಾರವು ಶಕ್ತಿಯ ಬೀಜಾಕ್ಷರವಾಗಿದೆ.ಓಂಕಾರದಿಂದ ಪರಶಿವನನ್ನು ಒಲಿಸಿದಂತೆ ಹ್ರೀಂಕಾರದಿಂದ ಪರಾಶಕ್ತಿ,ಪರಬ್ರಹ್ಮೆಯನ್ನು ಒಲಿಸಿಕೊಳ್ಳಬಹುದು.ಯಾವುದೇ ದೇವಿಯ ಮಂತ್ರವನ್ನು ಜಪಿಸುವಾಗ ಅದಕ್ಕೆ ಹ್ರೀಂ ಕಾರವನ್ನು ಸೇರಿಸಲೇಬೇಕು.ಹ್ರೀಂಕಾರಯುಕ್ತ ಶಕ್ತಿಮಂತ್ರವು ಶಕ್ತಿದಾಯಕವಾದರೆ ಹ್ರೀಂಕಾರ ರಹಿತ ಶಕ್ತಿ ಮಂತ್ರದಿಂದ ಫಲವಿಲ್ಲ.ದೇವಿಪುರಾಣವನ್ನು ಓದುವ ಭಕ್ತರು ತಾವು ಯಾವ ಸ್ವರೂಪದಿಂದ ದೇವಿಯನ್ನು ಆರಾಧಿಸುತ್ತಿದ್ದೇವೆ,ಯಾವ ಉದ್ದೇಶದಿಂದ ದೇವಿ ಪುರಾಣವನ್ನು ಓದುತ್ತಿದ್ದೇವೆ ಎನ್ನುವುದನ್ನು ಮೊದಲು ನಿಶ್ಚಯಿಸಿಕೊಂಡು ಅದಕ್ಕನುಗುಣವಾದ ದೇವಿಯ ಸ್ವರೂಪ ನಿರ್ಣಯ ಮಾಡಿಕೊಂಡು ಓದಬೇಕಾಗುತ್ತದೆ.

ಚಿದಾನಂದಾವಧೂತರು ” ದುರ್ಗಾಸಪ್ತಶತಿ” ಮತ್ತು ” ಕಾಳಿಕಾ ಪುರಾಣ” ವನ್ನು ಅನುಸರಿಸಿ ಶ್ರೀಪಾರ್ವತಿದೇವಿ ಮಹಾತ್ಮೆ” ಎನ್ನುವ ಈ ದೇವಿ ಪುರಾಣವನ್ನು ರಚಿಸಿದ್ದಾರೆ.ದುರ್ಗಾಸಪ್ತಶತಿಯು ಶಾಕ್ತರ ಪ್ರಮಾಣಗ್ರಂಥವಾಗಿದ್ದು ಅದರ ನಿತ್ಯ ಪಠಣೆ ಪಾರಾಯಣದಿಂದ ಅತ್ಯದ್ಭುತ ಫಲಗಳನ್ನು ಪಡೆಯಬಹುದು.ದುರ್ಗಾದೇವಿಯ ಉಪಾಸನೆಯು ವೇದಪೂರ್ವಕಾಲದಿಂದಲೂ ಅಸ್ತಿತ್ವದಲ್ಲಿತ್ತು.ವೇದದಲ್ಲಿ ಬರುವ ದುರ್ಗಾಸೂಕ್ತವು ದುರ್ಗಾದೇವಿಯ ಮೊದಲ ಸ್ತುತಿ.ಅಲ್ಲಿ ದುರ್ಗಾದೇವಿಯನ್ನು ಜಾತವೇದಸ್ವರೂಪಳು ಅಂದರೆ ಅಗ್ನಿಸ್ವರೂಪಳು ,ಜಗತ್ತಿನಲ್ಲಿ ಹುಟ್ಟಿರುವ ಎಲ್ಲವನ್ನೂ ಬಲ್ಲವಳು ಎಂದು ಉಪಾಸಿಸಲಾಗಿದೆ.ರುದ್ರನು ಅಗ್ನಿಸ್ವರೂಪನಾಗಿದ್ದು ಆತನ ಶಕ್ತಿಯಾದ ರುದ್ರಾಣಿಯು ಅಗ್ನಿಸ್ವರೂಪಳಾಗಿರುವುದು ಸಹಜವೆ.

ಋಗ್ವೇದದಲ್ಲಿರುವ ದುರ್ಗಾಸೂಕ್ತವು ದುರ್ಗಾದೇವಿಯನ್ನು ಜಗದ್ರಕ್ಷಕಳಾದ ಮಹಾದೇವಿಯನ್ನಾಗಿ ಕಂಡು ಸ್ತುತಿಸಿದ ದುರ್ಗಾ ಮಂತ್ರವಾಗಿದೆ.ವೇದಕಾಲದ ಋಷಿಗಳಿಂದ ಜಗದ್ರಕ್ಷಕಳಾಗಿ ಪೂಜಿಸಲ್ಪಟ್ಟ ದುರ್ಗಾದೇವಿಯು ರಾಜ ಮಹಾರಾಜರುಗಳ ಸಾಮ್ರಾಜ್ಯರಕ್ಷಕದೇವಿಯಾಗಿ ಪೂಜಿಸಲ್ಪಟ್ಟಿದ್ದಾಳೆ.ರಾಜರುಗಳು ತಮ್ಮ ಅರಮನೆಗಳಲ್ಲಿ ದುರ್ಗಾದೇವಿಯ ಗುಡಿಗಳನ್ನು ಕಟ್ಟಿ ಪೂಜಿಸುತ್ತಿದ್ದರಲ್ಲದೆ ಕೋಟೆಗಳಲ್ಲಿ ದುರ್ಗಾದೇವಿಯ ದೇವಸ್ಥಾನಗಳನ್ನು ಕಟ್ಟಿಸಿ,ಶತ್ರುಗಳು ದಾಳಿ ಇಡದಂತೆ ರಕ್ಷಿಸಲು ಒಂದು ವೇಳೆ ಶತ್ರುಗಳು ದಾಳಿ ಮಾಡಿದರೆ ಶತ್ರುಗಳಿಗೆ ಪರಾಜಯವಾಗುವಂತೆ ನಿತ್ಯ ಪ್ರಾರ್ಥನೆ,ಪೂಜೆಗಳನ್ನು ಸಲ್ಲಿಸುತ್ತಿದ್ದರು.’ ದುರ್ಗಾ’ ಎಂದರೆ ದುರಿತನಿವಾರಕಿ,ಸಂಕಟ ಪರಿಹಾರಕಿ ಎಂದರ್ಥವಿದ್ದು ದುರ್ಗಾದೇವಿಯು ತನ್ನ ಭಕ್ತರ ಸರ್ವ ಅನಿಷ್ಟವನ್ನು ನಿವಾರಿಸಿ ಉದ್ಧರಿಸುತ್ತಾಳೆ.ಈ ಕಾರಣದಲ್ಲಿ ಕಲಿಯುಗದಲ್ಲಿ ಗಣಪತಿ ಮತ್ತು ದುರ್ಗಾಪೂಜೆಯನ್ನು ಯುಗದೇವತೆಗಳ ಪೂಜೆಯನ್ನಾಗಿ ನಿರ್ಣಯಿಸಲಾಗಿದೆ.ಕಲಿಯುಗದಲ್ಲಿ ಇತರ ದೇವತೆಗಳ ಪೂಜೆಗಿಂತ ಗಣಪತಿ ಮತ್ತು ದುರ್ಗಾದೇವಿಯರ ಪೂಜೆಯು ಶೀಘ್ರಫಲಕಾರಿಯಾಗಿದ್ದು ಗಣಪತಿ ಮತ್ತು ದುರ್ಗಾದೇವಿಯರನ್ನು ಜಾತಿ,ಮತಗಳ ಭೇದವಿಲ್ಲದೆ ಸರ್ವರೂ ಪೂಜಿಸಬಹುದಾಗಿದೆಯಾದ್ದರಿಂದ ಗಣಪತಿ ಮತ್ತು ದುರ್ಗಾದೇವಿಯರು ಕಲಿಯುಗದ ಯುಗದೇವತೆಗಳೆನ್ನಿಸಿಕೊಂಡಿದ್ದಾರೆ.

ದುರ್ಗಾಸೂಕ್ತವು ದೇವಿಯು ತನ್ನನ್ನು ನಂಬಿದ ಭಕ್ತರನ್ನು ನಾವೆಯು ನಮ್ಮನ್ನು ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಸುರಕ್ಷಿತ ಮುಟ್ಟಿಸುವಂತೆ ನಮ್ಮನ್ನು ಭವದ ಬಹುವಿಧ ಸಂಕಟಗಳಿಂದ ಮುಕ್ತಳನ್ನಾಗಿಸುತ್ತಾಳೆ ಮತ್ತು ಭವಮುಕ್ತರನ್ನಾಗಿಸುತ್ತಾಳೆ ಎನ್ನುವ ಐಹಿಕ ಆಮುಷ್ಮಿಕ ಸಿದ್ಧಿಗಳೆರಡರ ದೃಷ್ಟಿಯಿಂದ ಆರಾಧಿಸಲ್ಪಡುವ ಸೂಕ್ತವಾಗಿದೆ.

ಜಾತವೇದಸೇ ಸುನವಾಮ ಸೋಮ ಮರಾತೀಯತೋ ನಿದಹಾತಿ ವೇದಃ/
ಸ ನಃ ಪರ್ ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧು ದುರಿತಾsತ್ಯಗ್ನಿಃ //
ತಾಮಗ್ನಿವರ್ಣಾಂ ತಪಸಾ ಜ್ವಲಂತೀ ವೈರೋಚನೀಂ ಕರ್ಮಫಲೇಷು ಜುಷ್ಟಾಮ್/
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ //
ಇದು ಋಗ್ವೇದೋಕ್ತ ದುರ್ಗಾಸೂಕ್ತವಾಗಿದ್ದು ‘ ತಾಯಿ ದುರ್ಗೆಯೆ,ನಾವು ನಿನ್ನ‌ಮಕ್ಕಳಿದ್ದು ಮಾತೃವಾತ್ಸಲ್ಯದಿಂದ ನಮ್ಮನ್ನು ಪೊರೆದು ರಕ್ಷಿಸು.ನಾವೆಯು ನದಿ ಇಲ್ಲವೆ ಸಮುದ್ರಲ್ಲಿ ಸುರಕ್ಷಿತವಾಗಿ ರಕ್ಷಿಸುವಂತೆ ಶರಣಾಗತರಾದ ನಮ್ಮನ್ನು ರಕ್ಷಿಸು’ ಎನ್ನುವ ಭಾವವು ಈ ಋಕ್ಕಿನಲ್ಲಿದೆ.ಋಗ್ವೇದದ ದುರ್ಗಾಸೂಕ್ತವನ್ನು ಜಪಾನುಷ್ಠಾನ ಮಾಡಿ ವಿರಾಟ್ ಸ್ವರೂಪಳಾದ ದುರ್ಗಾದೇವಿಯನ್ನು ಸಾಕ್ಷಾತ್ಕರಿಸಿಕೊಂಡ ಮಾರ್ಕಂಡೇಯ ಋಷಿಗಳು ದುರ್ಗಾದೇವಿಯನ್ನು ” ಮಹಾಕಾಲೀ ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯವರೆನ್ನುವ ತ್ರಿಗುಣಾತ್ಮಿಕೆ” ಯನ್ನಾಗಿ ಬಣ್ಣಿಸಿದ್ದಾರೆ ದುರ್ಗಾಸಪ್ತಶತಿಯಲ್ಲಿ.ಮಹಾಕಾಳಿ,ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರ ರೂಪದಲ್ಲಿರುವ ದುರ್ಗಾಸಪ್ತಶತಿಯಲ್ಲಿ ಅಂತರ್ಗತಳಾಗಿರುವ ದುರ್ಗಾದೇವಿಯ ಸಾಕ್ಷಾತ್ಕಾರಕ್ಕೆ ಎರಡು ಮೂಲ ಮಂತ್ರಗಳಿವೆ.ದುರ್ಗಾ ಅಷ್ಟಾಕ್ಷರಿ ಎಂದು ಪ್ರಸಿದ್ಧವಾದ ” ಓಂ ಹ್ರೀಂ ದುಂ ದುರ್ಗಾಯೈ ನಮಃ” ಎನ್ನುವುದು ಒಂದು ಮಂತ್ರವಾದರೆ ಚಂಡಿ ನವಾರ್ಣಮಂತ್ರವೆಂದು ಪ್ರಸಿದ್ದ ” ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೆ” ಎನ್ನುವುದು ಮತ್ತೊಂದು ಮಂತ್ರ.ವಿಶ್ವನಿಯಾಮಕಿಯೂ ವಿಶ್ವೇಶ್ವರಿಯೂ ಆಗಿರುವ ದುರ್ಗಾದೇವಿಯನ್ನು ಈ ಎರಡರಲ್ಲಿ ಯಾವುದಾದರೂ ಮಂತ್ರದಿಂದ ಜಪಾನುಷ್ಠಾನಗೈದರೆ ತಾಯಿಯ ದರ್ಶನವಾಗುತ್ತದೆ.

ಚಿದಾನಂದಾವದೂತರು ಕನ್ನಡದ ಮಾರ್ಕಂಡೇಯ ಋಷಿಗಳಾಗಿದ್ದು ಅವರು ಕೂಡ ದೇವಿ ಪುರಾಣದಲ್ಲಿ ದುರ್ಗಾದೇವಿಯನ್ನು ಮಹಾಕಾಳಿ ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರ ರೂಪದಲ್ಲಿ ಪರಿಭಾವಿಸಿದ್ದಾರೆ.ಪುರಾಣದ ಹೆಸರು ‘ಪಾರ್ವತಿದೇವಿ ಮಹಾತ್ಮೆ’. ಶಿವನ ಸತಿಯು ಶಾಂತಸ್ವರೂಪಳಿದ್ದಾಗ ಪಾರ್ವತಿಯಾಗಿಯೂ ಉಗ್ರಭೀಕರಳಾದಾಗ ದುರ್ಗೆಯೂ ಆಗುತ್ತಾಳೆ.ಕರಾವಳಿ ತೀರದಲ್ಲಿ ಪಾರ್ವತಿಯನ್ನು ಶಾಂತಾದುರ್ಗಾ ಎನ್ನುವ ರೂಪದಿಂದ ಪೂಜಿಸಲಾಗುತ್ತಿದೆ.ದುರ್ಗಾದೇವಿಯು ಮಹಾಕಾಳಿ,ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರ ರೂಪದಲ್ಲಿ ಪ್ರಕಟಗೊಂಡಿರುವುದರಿಂದ ಭಕ್ತರು ತಮ್ಮ ಮನೋಬಯಕೆಗಳಿಗೆ ಅನುಗುಣವಾಗಿ ಈ ಮೂರು ರೂಪಗಳಲ್ಲಿ ತಮಗೆ ಇಷ್ಟವಾದ ಯಾವುದಾದರೂ ರೂಪದಿಂದ ದೇವಿಯನ್ನು ಪೂಜಿಸಬಹುದು.ಮಹಾಕಾಳಿಯನ್ನು ಪೂಜಿಸುವವರು ” ಓಂ ಕ್ರೀಂ ಮಹಾಕಾಳ್ಯೈ ನಮಃ” ಎನ್ನುವ ಮಹಾಕಾಳಿ ಅಷ್ಟಾಕ್ಷರಿ ಮಂತ್ರದಿಂದ ಪೂಜಿಸಬಹುದು.ಮಹಾಲಕ್ಷ್ಮೀಯನ್ನು ಪೂಜಿಸುವವರು ” ಓಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ ” ಎನ್ನುವ ಮಂತ್ರದಿಂದ ಪೂಜಿಸಬಹುದು.ಸರಸ್ವತಿಯನ್ನು ಪೂಜಿಸುವವರು ” ಓಂ ಐಂ ಹ್ರೀಂ ಸರಸ್ವತ್ಯೈ ನಮಃ” ಎನ್ನುವ ಸರಸ್ವತಿ ಮೂಲಮಂತ್ರದಿಂದ ಪೂಜಿಸಬಹುದು.” ಓಂ” ಪ್ರಣವವು ಪರಬ್ರಹ್ಮವಾಚಕವಾಗಿಯೂ ” ಹ್ರೀಂ” ಕಾರವು ಪರಾಶಕ್ತಿವಾಚಕವಾಗಿಯೂ ಇರುವಂತೆ ” ದುಂ” ಕಾರವು ದುರ್ಗಾದೇವಿಯ ಬೀಜಾಕ್ಷರವಾಗಿದೆ.”ಐಂ” ಎನ್ನುವುದು ಸರಸ್ವತಿಯ ಬೀಜಾಕ್ಷರ.” ಶ್ರೀಂ” ಎನ್ನುವುದು ಲಕ್ಷ್ಮೀಯ ಬೀಜಾಕ್ಷರ.ಈ ಬೀಜಾಕ್ಷರಗಳನ್ನೇ ಒಂದು ಲಕ್ಷ ಜಪಿಸಿದರೆ ಸಿದ್ಧಿಯಾಗುತ್ತದೆ.ನವಾರ್ಣ ಮಂತ್ರದಲ್ಲಿ ” ಕ್ಲೀಂ” ಕಾರವನ್ನು ಕಾಳಿಯ ಬೀಜಾಕ್ಷರವಾಗಿ ಪರಿಗಣಿಸಲಾಗಿದೆಯಾದರೂ ಪ್ರತ್ಯೇಕವಾಗಿ ಮಹಾಕಾಳಿಯನ್ನು ಉಪಾಸಿಸುವವರು ಅವಳನ್ನು ” ಕ್ರೀಂ” ಕಾರ ಸ್ವರೂಪಿಣಿಯನ್ನಾಗಿ ಧ್ಯಾನಿಸಬೇಕು.ಕ್ರೀಂ ಎನ್ನುವುದು ಮಹಾಕಾಳಿಯು ಸೃಷ್ಟಿ,ಸ್ಥಿತಿ ಲಯಗಳ ಸಾಮರ್ಥವುಳ್ಳ ಶಿವಶಕ್ತಿ ಎನ್ನುವ ತತ್ತ್ವಾರ್ಥವಾಗಿದ್ದು ಮಹಾಕಾಳಿ ಉಪಾಸಕರು ಇದೇ ಮಂತ್ರದಿಂದ ಕಾಳಿ ಉಪಾಸನೆ ಮಾಡಬೇಕು.ಮಹಾಕಾಳಿಯು ಕಾಳಿದಾಸನ ನಾಲಗೆಯ ಮೇಲೆ ತನ್ನ ಬೀಜಾಕ್ಷರ ” ಕ್ರೀಂ” ಕಾರವನ್ನು ಬರೆದು ಅವನನ್ನು ಮಹಾಕವಿಯನ್ನಾಗಿಸಿದಳು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
ದೇವಿಯನ್ನು ಶಕ್ತಿಸ್ವರೂಪಿಣಿಯಾಗಿ ನೋಡುವವರು ” ಓಂ ನಮಃ ಶಕ್ತೈಃ” ಎನ್ನುವ ಮಂತ್ರದಿಂದಾಗಲಿ ಇಲ್ಲವೆ ” ಓಂ ನಮಃ ಶಕ್ತಿ” ಎನ್ನುವ ಮಂತ್ರದಿಂದಾಗಲಿ ಧ್ಯಾನಿಸಬೇಕು.ಚಂಡಿದೇವಿಯನ್ನು ಪೂಜಿಸುವವರು ” ಓಂ ಹ್ರೀಂ ಚಂಡಿಕಾಯೈ ನಮಃ ” ಮಂತ್ರದಿಂದ ಪೂಜಿಸಬೇಕು.

ಮುಂದುವರೆಯುತ್ತದೆ

About The Author