ರಾಷ್ಟ್ರೀಯ ಜಾತಿ ಗಣತಿಗೆ ಇದು ಸಕಾಲ : ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು : ರಾಷ್ಟ್ರೀಯ ಜಾತಿ ಗಣತಿಗೆ ಇದು ಸಕಾಲ : ಮುಕ್ಕಣ್ಣ ಕರಿಗಾರ

ಮಹಾತ್ಮಾ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2 ರಂದೇ ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರು ಬಿಹಾರ ರಾಜ್ಯದ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿದ್ದಾರೆ.ಆ ವರದಿಯಂತೆ ಬಿಹಾರ ರಾಜ್ಯದ ಒಟ್ಟು ಜನ ಸಂಖ್ಯೆ 13.07 ಕೋಟಿ ಇದ್ದು ಅದರಲ್ಲಿ 3.54 ಕೋಟಿ ಹಿಂದುಳಿದ ವರ್ಗದ ಜನಸಂಖ್ಯೆಯಾಗಿದ್ದರೆ 4.70 ಕೋಟಿಯಷ್ಟು ಅತ್ಯಂತ ಹಿಂದುಳಿದ ವರ್ಗದ ಜನಸಂಖ್ಯೆ ಇದೆ‌.ಬಿಹಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 2.56 ಕೋಟಿಯಷ್ಟು ಪರಿಶಿಷ್ಟಜನಾಂಗದವರಿದ್ದರೆ ಪರಿಶಿಷ್ಟಪಂಗಡದ ಜನಸಂಖ್ಯೆ 21.99ಲಕ್ಷ.ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಬ್ರಾಹ್ಮಣರು ಸೇರಿದಂತೆ ಸಾಮಾನ್ಯವರ್ಗದ ಜನಸಂಖ್ಯೆ 2.02 ಕೋಟಿಯಷ್ಟಿದೆ.ಇದರ ಜೊತೆಗೆ ಬಿಹಾರದ ಪ್ರಮುಖ ಜಾತಿಗಳ ಜನಸಂಖ್ಯೆಯ ವಿವರಗಳೂ ಬಹಿರಂಗಗೊಂಡಿವೆ ಹಾಗೂ ಹಿಂದೂ,ಮುಸ್ಲಿಂ,ಕ್ರೈಸ್ತ,ಸಿಖ್,ಬೌದ್ಧ,ಜೈನ ಮತಾವಲಂಬಿಗಳ ಜನರ ಪ್ರಮಾಣವು ಗೊತ್ತಾಗಿದೆ.ಈ ವರದಿಯಿಂದ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ನಿರ್ಧಾರಕ್ಕೆ ಅನುಕೂಲವಾಗಲಿದೆ.

ಬಿಹಾರ ರಾಜ್ಯದ ಮಾದರಿಯಲ್ಲಿಯೇ ಕೇಂದ್ರ ಸರಕಾರವು ಸಹ ದೇಶದಾದ್ಯಂತ ಜಾತಿ ಗಣತಿ ನಡೆಸಬೇಕು.ಇತ್ತೀಚೆಗೆ ಜಾತಿಗಣತಿ ನಡೆಸುವುದು ಕೇಂದ್ರಸರಕಾರದ ಅಧಿಕಾರ ಎಂದು ಕೇಂದ್ರಸರಕಾರವು ಸುಪ್ರೀಂಕೋರ್ಟಿನಲ್ಲಿ ವಾದಿಸಿತ್ತು.ಜಾತಿಗಣತಿ ನಡೆಸುವುದು ಕೇಂದ್ರಸರಕಾದ ಹಕ್ಕು ಆಗಿದ್ದರೆ ವಿಳಂಬ ಮಾಡದೆ ದೇಶದಾದ್ಯಂತ ಜಾತಿಗಣತಿ ನಡೆಸಬೇಕು.ನಮ್ಮದು ಜಾತ್ಯತೀತ ರಾಷ್ಟ್ರವಾದರೂ ಇಲ್ಲಿ ಎಲ್ಲವೂ ನಿರ್ಧಾರವಾಗುತ್ತಿರುವುದು ಜಾತಿಯ ಆಧಾರದ ಮೇಲೆಯೇ.ಹಾಗಾಗಿ ದೇಶದ ಜನಸಂಖ್ಯೆಯಲ್ಲಿ ವಿವಿಧ ಜಾತಿಗಳಿಗೆ ಸೇರಿದ ಜನರ ಸಂಖ್ಯೆ ಎಷ್ಟು,ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಆ ಜಾತಿಗಳಿಗೆ ಸಿಕ್ಕಪಾಲು ಎಷ್ಟು,ಸರಕಾರದ ಉನ್ನತ ಅಧಿಕಾರಿ ಹುದ್ದೆಗಳಲ್ಲಿ ಆಯಾ ಜಾತಿಯ ಪ್ರಾತಿನಿಧ್ಯ ಎಷ್ಟು ಎಂದು ನಿಖರವಾಗಿ ಗೊತ್ತಾಗುತ್ತದೆ.ಇದರಿಂದ ಶೂದ್ರಸಮುದಾಯಗಳು ಅಭಿವೃದ್ದಿ ಯೋಜನೆಗಳು ಮತ್ತು ಸರಕಾರಿ ಹುದ್ದೆಗಳಲ್ಲಿ ತಮ್ಮ ಹಕ್ಕು ಮಂಡಿಸಲು ಅವಕಾಶವಾಗುತ್ತದೆ.ದೇಶದಲ್ಲಿ ಶೂದ್ರಸಮುದಾಯಗಳು ಮತ್ತು ದಲಿತರ ಜನಸಂಖ್ಯೆಯೇ ಹೆಚ್ಚು ಇದ್ದರೂ ರಾಜಕೀಯ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಅವರಿಗೆ ಸಿಕ್ಕ ಅವಕಾಶಗಳು ಅತ್ಯಲ್ಪ.ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಆಗಾಗ ಹೇಳುತ್ತಿರುವ ಮಾತು ಇಲ್ಲಿ ಸ್ಮರಣಾರ್ಹ.’ ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗದವರು,ಪರಿಶಿಷ್ಟ ಜಾತಿಗಳು,ಪರಿಶಿಷ್ಟ ಪಂಗಡಗಳ ಪ್ರಮಾಣ ಶೇಕಡಾ 84ರಷ್ಟಿದೆ.ಕೇಂದ್ರ ಸರ್ಕಾರದ 90ಕಾರ್ಯದರ್ಶಿಗಳ ಪೈಕಿ ಹಿಂದುಳಿದ ವರ್ಗಗಳಿಗೆ ಸೇರಿದವರು ಮೂವರು ಮಾತ್ರ’ ಎನ್ನುವ ರಾಹುಲ್ ಗಾಂಧಿಯವರ ಅಭಿಪ್ರಾಯವು ನಿಜವಾಗಿದ್ದರೆ ಅದು ದೇಶದ ಶೂದ್ರಸಮುದಾಯಗಳು ಮತ್ತು ದಲಿತ ಸಮುದಾಯಗಳಿಗೆ ಆಗಿರುವ ಘೋರ ಅನ್ಯಾಯವೇ ಸರಿ.ಇಂತಹ ಅನ್ಯಾಯಗಳು ಘಟಿಸಬಾರದು ಎಂದರೆ ಕೇಂದ್ರಸರಕಾರವು ಜಾತಿಗಳ ಗಣತಿ ನಡೆಸಬೇಕು.ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಮತ್ತು ಸರಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯ ನೀಡಬೇಕು.ಹಿಂದುಳಿದ ವರ್ಗಗಳಲ್ಲಿಯೂ ಅತಿಕಡಿಮೆ ಜನಸಂಖ್ಯೆಯ ಅವಕಾಶವಂಚಿತ ಸಮುದಾಯಗಳು ಮುಂಚೂಣಿಗೆ ಬರಲು ಜಾತಿಗಣತಿಯು ಸಹಾಯಕವಾಗುತ್ತದೆ.

ನಮ್ಮ ರಾಜ್ಯದಲ್ಲೂ 2015 ರಲ್ಲಿ ಜಾತಿಗಣತಿ ನಡೆಸಲಾಗಿತ್ತು.ಆಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು.ಈಗಲೂ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾರೆ.ಈಗ ಅವರೇ ಆಸಕ್ತಿ ವಹಿಸಿ ಜಾತಿಗಣತಿ ವರದಿಯ ವಿವರಗಳನ್ನು ಬಹಿರಂಗಪಡಿಸಬೇಕು.ಇದರಿಂದ ಕರ್ನಾಟಕದಲ್ಲಿ ಯಾವ ಜಾತಿಯ ಜನಸಂಖ್ಯೆ ಎಷ್ಟಿದೆ,ಅವರು ರಾಜಕಾರಣ ಮತ್ತು ಇತರ ಕ್ಷೇತ್ರಗಳಲ್ಲಿ ಎಷ್ಟು ಪ್ರಾತಿನಿಧ್ಯ ಪಡೆದಿದ್ದಾರೆ ಎಂದು ಗೊತ್ತಾಗಲಿದೆ.ಹಳೆಯ ಮೈಸೂರು ಭಾಗದ ನಾಲ್ಕಾರು ಜಿಲ್ಲೆಗಳಲ್ಲಿ ಮಾತ್ರ ಇರುವ ಒಕ್ಕಲಿಗರು ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯಲ್ಲಿದ್ದಾರೆಂದೂ ನಂತರ ಲಿಂಗಾಯತರು ಇದ್ದಾರೆಂದೂ ಜನಸಂಖ್ಯೆಯಲ್ಲಿ ಕುರುಬರು ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆಂದು ಹಳೆಯಕಾಲದ ಸುಳ್ಳನ್ನೇ ಅಧಿಕೃತವೆಂದು ಬಿಂಬಿಸಲಾಗುತ್ತಿದೆ.ಕೇವಲ ನಾಲ್ಕೈದು ಜಿಲ್ಲೆಗಳ ವ್ಯಾಪ್ತಿಯ ಒಕ್ಕಲಿಗರು ರಾಜ್ಯದ ಅತಿದೊಡ್ಡ ಜನಸಂಖ್ಯೆಯ ಸಮುದಾಯ ಹೇಗೆ ಆಗಲು ಸಾಧ್ಯ? ಕುರುಬರು ಮತ್ತು ದಲಿತರು ಮಾತ್ರ ರಾಜ್ಯದ ಎಲ್ಲಾ ಭಾಗಗಳಲ್ಲಿ ಕಾಣಬಹುದಾದ ಜನಸಮುದಾಯಗಳು.ಲಿಂಗಾಯತರಲ್ಲೂ ಪ್ರಾದೇಶಿಕ ಭಿನ್ನತೆ ಇದೆ.ಅವರಲ್ಲೇ ವೀರಶೈವರು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾರೆ.ಲಿಂಗಾಯತರಲ್ಲಿ ಒಕ್ಕಲಿಗರು,ಗೌಡರು,ಪಂಚಮಶಾಲಿಗಳು,ಬಣಜಿಗರು ಹೀಗೆ ಹತ್ತಾರು ಉಪಪಂಗಡಗಳಿವೆ.ಚಿತ್ರದುರ್ಗ ದಾವಣಗೆರೆ ಜಿಲ್ಲೆಗಳಲ್ಲಿ ಸಾಧುಲಿಂಗಾಯತರುಗಳಿದ್ದಾರೆ. ಉತ್ತರಕರ್ನಾಟಕದ ಲಿಂಗಾಯತರು ಸಾಧುಲಿಂಗಾಯತರನ್ನು ಲಿಂಗಾಯತರೆಂದೇ ಪರಿಗಣಿಸುವುದಿಲ್ಲ ಅವರು ದಲಿತಮೂಲದವರಾಗಿದ್ದು ಮರುಳಸಿದ್ಧರಿಂದಾಗಿ ಲಿಂಗಾಯತರು ಆದರು ಎನ್ನುವ ಕಾರಣಕ್ಕೆ.ಲಿಂಗಾಯತರಲ್ಲಿ ಸಾಕಷ್ಟು ಒಳ ಪಂಗಡಗಳಿವೆಯಾದ್ದರಿಂದ ಅವರದೂ ದೊಡ್ಡಜನಸಂಖ್ಯೆ ಎಂದು ಭಾವಿಸಲಾಗದು. ಕುರುಬರು ಮಾತ್ರ ಕರ್ನಾಟಕದ ಯಾವುದೇ ಜಿಲ್ಲೆಗೆ ಹೋದರೂ ಕಾಣಸಿಗುವ ಅತಿಪುರಾತನ ಜನಾಂಗವಾಗಿದ್ದು ಅವರಲ್ಲಿ ಪ್ರಮುಖವಾಗಿ ಉಣ್ಣೆಕಂಕಣ ಮತ್ತು ಹತ್ತಿಕಂಕಣ ಎನ್ನುವ ಎರಡೇ ಪಂಗಡಗಳಿವೆ.ಕಂಕಣ,ಬೆಡಗುಗಳು ಯಾವುದಾದರೇನು ಅವರು ಕುರುಬರು ಎಂದು ಗುರುತಿಸಿಕೊಳ್ಳುತ್ತಾರೆ.ದಲಿತರಲ್ಲೂ ಕೂಡ ಹಲವು ಪಂಗಡಗಳಿದ್ದರೂ ಎಲ್ಲ ಹಳ್ಳಿಗಳಲ್ಲಿ ಅಸ್ಪೃಶ್ಯರೆಂದು ಗುರುತಿಸಲ್ಪಟ್ಟ ಎಡಗೈ ಬಲಗೈ ಪಂಗಡಗಳಿಗೆ ಸೇರಿದ ದಲಿತರಂತೂ‌ ಇದ್ದೇ ಇರುತ್ತಾರೆ.ಒಂದು ಅಂದಾಜಿನಂತೆ ರಾಜ್ಯದ ಜನಸಂಖ್ಯೆಯಲ್ಲಿ ಎಲ್ಲ ಉಪಪಂಗಡಗಳನ್ನು ಒಳಗೊಂಡ ದಲಿತರು ಮೊದಲಸ್ಥಾನದಲ್ಲಿ ಇದ್ದರೆ ಕುರುಬರು ಎರಡನೇ ಸ್ಥಾನದಲ್ಲಿದ್ದಾರೆ.ಲಿಂಗಾಯತರು,ಒಕ್ಕಲಿಗರು,ಮುಸ್ಲಿಮರು ನಂತರದ ಸ್ಥಾನಗಳಲ್ಲಿದ್ದಾರೆ.ಈ ಕಾರಣದಿಂದಾಗಿಯೇ ಕರ್ನಾಟಕದಲ್ಲಿ ಜಾತಿಗಣತಿಯ ಸಮೀಕ್ಷೆಗಳು ಬಹಿರಂಗಗೊಳ್ಳುತ್ತಿಲ್ಲ ಎನ್ನುವ ಮಾತುಗಳಿವೆ.ಏನೇ ಇರಲಿ,ಸರಕಾರದ ಖರ್ಚಿನಲ್ಲಿ ಜಾತಿಗಣತಿ ನಡೆದಿದೆ,ಸರಕಾರವೇ ಜಾತಿಗಳ ಜನಸಂಖ್ಯೆಯನ್ನು ಘೋಷಿಸಬೇಕಾಗಿದೆ.

ಕರ್ನಾಟಕದಲ್ಲಿ ಜಾತಿಗಣತಿಯನ್ನು ಪ್ರಕಟಗೊಳಿಸಲು ಕೆಲವರು ವಿರೋಧಿಸುತ್ತಿರುವ ಪ್ರಬಲ ಕಾರಣ ತಮ್ಮ ಜಾತಿಯ ಅಧಿಪತ್ಯ ಕಡಿಮೆ ಆಗುತ್ತದೆ ಎನ್ನುವುದು.ಪ್ರಜಾಪ್ರಭುತ್ವ ಭಾರತದ ಒಂದು ರಾಜ್ಯವಾಗಿರುವ ಕರ್ನಾಟಕದಲ್ಲಿ ಜಾತಿಗಳ ಜನಸಂಖ್ಯೆಯ ವಿವರಗಳು ಬಹಿರಂಗಗೊಂಡರೆ ಆಗಬಾರದ್ದು ಏನೂ ಆಗುವುದಿಲ್ಲ. ರಾಜಕೀಯ,ಶೈಕ್ಷಣಿಕ,ಸರಕಾರಿ ಉದ್ಯೋಗಗಳಲ್ಲಿ ಆಯಾ ಜಾತಿಗಳಿಗೆ ಸಿಕ್ಕ ಪ್ರಾತಿನಿಧ್ಯವೆಷ್ಟು,ಪ್ರಾತಿನಿಧ್ಯ ಸಿಗದೆ ಇರುವ ಜಾತಿಗಳೆಷ್ಟು,ಅವಕಾಶವಂಚಿತ ಸಮುದಾಯಗಳೆಷ್ಟು ಎನ್ನುವ ನಿಖರ ಮಾಹಿತಿ ಲಭ್ಯವಾಗಿ ಅವಕಾಶವಂಚಿತ ಸಮುದಾಯಗಳ ಅಭಿವೃದ್ಧಿಗೆ ಅವಕಾಶ ದೊರೆಯುತ್ತದೆ.ರಾಜಕಾರಣದಲ್ಲಿ ಕೆಲವೇ ಜಾತಿಗಳ ಪ್ರಾಬಲ್ಯವು ತಗ್ಗಿ ಶೂದ್ರಸಮುದಾಯಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯದ ಹಕ್ಕು ಮಂಡಿಸಲು ಅವಕಾಶವಾಗುತ್ತದೆ.ಆದ್ದರಿಂದ ಕರ್ನಾಟಕ ಸರಕಾರವೂ ಬಿಹಾರ ಸರಕಾರದ ಮಾದರಿಯಲ್ಲಿಯೇ ನವೆಂಬರ್ 01 ರ ಕರ್ನಾಟಕ ರಾಜ್ಯೋತ್ಸವದ ದಿನದಂದು ಕರ್ನಾಟಕ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಬಹುದು.

ಇತ್ತೀಚೆಗೆ ಬಿಜೆಪಿಯ ವಿರುದ್ಧವಾಗಿ ಹುಟ್ಟಿಕೊಂಡ ‘ ಇಂಡಿಯಾ’ ಎನ್ನುವ ಮಿತ್ರಪಕ್ಷಗಳ ಒಕ್ಕೂಟದ ಪಕ್ಷಗಳೇ ಬಿಹಾರದಲ್ಲಿ ಆಡಳಿತ ನಡೆಸುತ್ತಿವೆ.ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವೂ ಸಹ ‘ ಇಂಡಿಯಾ’ ಮೈತ್ರಿಕೂಟದ ಒಂದು ಮತ್ತು ಪ್ರಬಲ ಪಕ್ಷವೂ ಹೌದು.ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಿತೀಶ ಕುಮಾರ ಅವರ ನಡೆಯನ್ನು ಅನುಸರಿಸಿ ಕರ್ನಾಟಕ ರಾಜ್ಯೋತ್ಸವ ದಿನದಂದು ಜಾತಿಗಣತಿಯ ವಿವರಗಳನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸುತ್ತೇವೆ.

About The Author