ಶ್ರೀದೇವಿಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ : ಮುಕ್ಕಣ್ಣ ಕರಿಗಾರ

ಶ್ರೀದೇವಿಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ : ಮುಕ್ಕಣ್ಣ ಕರಿಗಾರ

( ಮುಂದುವರಿದ ಭಾಗ)

ನ್ಯಾಸದ ಬಗೆಗೆ ತಿಳಿದುಕೊಳ್ಳೋಣ.’ ನ್ಯಾಸ’ ಎಂದರೆ ಇಡು,ಧರಿಸು ಎನ್ನುವ ಅರ್ಥಗಳಿವೆ.ದೇವಿಯ ಶಕ್ತಿಯನ್ನು ಮಂತ್ರಗಳ ಮೂಲಕಶರೀರದಾದ್ಯಂತ ಆಹ್ವಾಹಿಸಿಕೊಳ್ಳುವುದೇ ನ್ಯಾಸದ ಉದ್ದೇಶ.ನಮ್ಮ ಶರೀರವನ್ನು ಮಂತ್ರಮಯವಾಗಿ ಮಾಡಿಕೊಳ್ಳುವ ಮೂಲಕ ದೇವಿಶಕ್ತಿಯನ್ನು ಆಹ್ವಾನಿಸಿಕೊಳ್ಳುವುದು,ದೇವಿಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವುದು ನ್ಯಾಸದ ಅರ್ಥ,ಉದ್ದೇಶ.ನಮ್ಮ ದೇಹದ ಸರ್ವಾವಯವಗಳಲ್ಲಿಯೂ ದೇವಿಯನ್ನು ಆಹ್ವಾನ ಮಾಡಿಕೊಳ್ಳುವ ಮೂಲಕ ಅಂತರ್ಗತ ಪರಾಶಕ್ತಿಯನ್ನು ಜಾಗೃತಗೊಳಿಸುವುದೇ ನ್ಯಾಸದ ಉದ್ದೇಶ.

ನ್ಯಾಸವನ್ನು ಮೂರು ಕ್ರಮಗಳಲ್ಲಿ ಮಾಡಲಾಗುತ್ತದೆ.ಮೊದಲನೆಯದು ವಿನಿಯೋಗ ಮಂತ್ರ,ಎರಡನೆಯದು ಕರನ್ಯಾಸ ಮತ್ತು ಮೂರನೆಯದು ಅಂಗನ್ಯಾಸ.ವಿನಿಯೋಗವು ಯಾವ ಉದ್ದೇಶದಿಂದ ನ್ಯಾಸವನ್ನು ಮಾಡುತ್ತಿದ್ದೇವೆ ಎನ್ನುವ ಭಾಗವಾಗಿದ್ದರೆ ಕರನ್ಯಾಸವು ನಮ್ಮ ಕೈಗಳ ಐದು ಬೆರಳುಗಳಲ್ಲಿ ದೈವೀಶಕ್ತಿಯನ್ನು ಆಹ್ವಾನಿಸುವ ಕ್ರಮ.ನಮ್ಮ ದೇಹದ ವಿವಿಧ ಅಂಗಗಳಾದ ಅಳನೆತ್ತಿ,ತಲೆ,ಕಣ್ಣು,ಕಿವಿ,ಮೂಗು,ನಾಲಗೆ,ಕೈಕಾಲುಗಳು,ಹೊಟ್ಟೆ ಮೊದಲಾದ ಎಲ್ಲ ಭಾಗಗಳನ್ನು ದೇವಿಶಕ್ತಿಯಿಂದ ಆವರಿಸಿಕೊಳ್ಳುವ ಕ್ರಮವೇ ಅಂಗನ್ಯಾಸವಾಗಿದೆ.

ಚಾಮುಂಡಿ ನವಾರ್ಣ ಮಂತ್ರವಾದ ” ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೆ” ಎನ್ನುವ ಮಂತ್ರದಿಂದ ನ್ಯಾಸ ಮಾಡುವ ಕ್ರಮವು ಈ ರೀತಿಯಾಗಿದೆ ;

ನವಾರ್ಣ ಮಂತ್ರ ನ್ಯಾಸ
ವಿನಿಯೋಗ — ಓಂ ಅಸ್ಯ ಶ್ರೀ ನವಾರ್ಣವ ಮಂತ್ರಸ್ಯ ಬ್ರಹ್ಮವಿಷ್ಣುರುದ್ರಾ ಋಷಯ ಗಾಯತ್ರ್ಯುಷ್ಣಿಗ ನಷ್ಟುಪ್ ಛಂದಾಸಿ/ ಶ್ರೀ ಮಹಾಕಾಲೀ ಮಹಾಲಕ್ಷ್ಮೀ ಮಹಾಸರಸ್ವತ್ಯೋ ದೇವತಾ// ಐಂ ಬೀಜಂ/ ಹ್ರೀಂ ಶಕ್ತಿಃ/ ಕ್ಲೀಂ ಕೀಲಕಂ/ ಶ್ರೀಮಹಾಕಾಲೀ ಮಹಾಲಕ್ಷ್ಮೀ ಮಹಾಸರಸ್ವತೀ ಪ್ರೀತ್ಯರ್ಥಂ ಜಪೇ ವಿನಿಯೋಗಃ// ಎಂದು ದೇವಿಯನ್ನು ಸ್ಮರಿಸುತ್ತಾಬಲಗೈಯ ನಡುವಿನ ಮೂರು ಬೆರಳುಗಳಿಗೆ ವಿಭೂತಿಯನ್ನು ಲೇಪಿಸಿ ‘ ಬ್ರಹ್ಮವಿಷ್ಣುರುದ್ರ ಋಷಿಭ್ಯೋ ನಮಃ’ ಎಂದು ಅಭಿಮಂತ್ರಿಸಿ ಹಣೆಗೆ ಧರಿಸಬೇಕು.ಗಾಯತ್ರ್ಯುಷ್ಣಿಗನುಷ್ಟುಪ ಛಂದೋಭ್ಯೋ ನಮಃ/ ಎಂದು ಮುಖಕ್ಕೆ,ಮಹಾಕಾಲೀ ಮಹಾಲಕ್ಷ್ಮೀ ಮಹಾಸರಸ್ವತೀ ದೇವತಾಭ್ಯೋ ನಮಃ / ಎನ್ನುತ್ತಾ ಎದೆಗೆ,ಐಂ ಬೀಜಾಯ ನಮಃ ಎನ್ನುತ್ತಾ ಹೊಕ್ಕಳಿಗೆ,ಹ್ರೀಂ ಶಕ್ತಿಯೇ ನಮಃ ಎಂದು ಬದ್ದಿಗೆ, ಕ್ಲೀಂ ಕೀಲಕಾಯ ನಮಃ ಎಂದು ಎರಡೂ ಪಾದಗಳಿಗೆ ವಿಭೂತಿಯನ್ನು ಹಚ್ಚಬೇಕು.
ಕರನ್ಯಾಸ –ಅಂಗೈಯ ಐದು ಬೆರಳುಗಳಲ್ಲಿ ಆಯಾ ಬೆರಳುಗಳನ್ನು ಹೆಬ್ಬೆರಳು ಮತ್ತು ತೋರು ಬೆರಳುಗಳ ಮೂಲಕ ಸ್ಪರ್ಶಿಸುವುದೇ ಕರನ್ಯಾಸವಾಗಿದೆ.
ಓಂ ಐಂ ಅಂಗುಷ್ಠಾಭ್ಯಾಂ ನಮಃ ಎಂದು ಹೆಬ್ಬೆರಳನ್ನು
ಓಂ ಹ್ರೀಂ ತರ್ಜನಿಭ್ಯಾಂ ನಮಃ
ಎಂದು ತೋರು ಬೆರಳನ್ನು
ಓಂ ಕ್ಲೀಂ ಮಧ್ಯಮಾಭ್ಯಾಂ ನಮಃ
ಎಂದು ನಡುವಿನ ಬೆರಳನ್ನು
ಓಂ ಚಾಮುಂಡಾಯೈ ನಮಃ
ಎಂದು ಅನಾಮಿಕ ಬೆರಳನ್ನು
ಓಂ ವಿಚ್ಚೇ ಕನಿಷ್ಟಿಕಾಭ್ಯಾನಮಃ

ಎಂದು ಕಿರಿಬೆರಳನ್ನು ಸ್ಪರ್ಶಿಸುವ ಮೂಲಕ ಕರನ್ಯಾಸ ಮಾಡಬೇಕು.
ಓಂ ಐಂ ಹ್ರೀಂ ಕ್ಲೀಂ ಚಾಮುಂಡಸಯೈ ವಿಚ್ಚೆ ಕರತಲಕರಪೃಷ್ಟಾಭ್ಯಾಂ ನಮಃ ಎಂದು ಚಿಟಿಕೆ ಹೊಡೆಯಬೇಕು.

ಅಂಗನ್ಯಾಸ — ಪ್ರತಿ ಮಂತ್ರವನ್ನು ಎಂಟು ಸಾರಿ ಜಪಿಸುವ ಮೂಲಕ ದೇಹದ ವಿವಿಧ ಅಂಗಗಳಿಗೆ ವಿಭೂತಿಯನ್ನು ಧರಿಸಬೇಕು.
ಓಂ ಐಂ ನಮಃ — ಅಳನೆತ್ತಿಗೆ
ಓಂ ಐಂ ಹ್ರೀಂ ನಮಃ –ಬಲಗಣ್ಣಿಗೆ
ಓಂ ಕ್ಲೀಂ ನಮಃ — ಎಡಗಣ್ಣಿಗೆ
ಓಂ ಚಾಂ ನಮಃ — ಬಲಗಿವಿಗೆ
ಓಂ ಯೈ ನಮಃ — ಎಡಗಿವಿಗೆ
ಓಂ ಡಾಂ ನಮಃ –ಬಲಮೂಗಿಗೆ
ಓಂ‌ ಯೈಂ ನಮಃ — ಎಡ ಮೂಗಿಗೆ
ಓಂ ವಿಂ ನಮಃ — ಮುಖಕ್ಕೆ
ಓಂ ಚ್ಚೇಂ ನಮಃ — ಬದ್ದಿಗೆ
ಹೀಗೆ ಎಂಟು ಎಂಟು ಸಾರೆ ವಿಭೂತಿಯನ್ನು ಮಂತ್ರಿಸಿ ಮೇಲೆ ಹೇಳಿದ ಅಂಗಗಳಿಗೆ ಧರಿಸಬೇಕು
ಷಡಂಗನ್ಯಾಸ –ಓಂ ಐಂ ಹೃದಯಾಯ ನಮಃ
ಓಂ ಹ್ರೀಂ ಶಿರಸೇಸ್ವಾಹಾ
ಓಂ ಕ್ಲೀಂ ಶಿಖಾಯೈ ವೌಷಟ್
ಓಂ ಚಾಮುಂಡಾಯೈ ಕವಚಾಯ ಹುಂ
ಓಂ ವಿಚ್ಚೆ ನೇತ್ರತ್ರಯಾಯ ವೌಷಟ್
ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೆ ಅಸ್ತ್ರಾಯ ಫಟ್.
ಎನ್ನುವ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟ ವಿಭೂತಿಯನ್ನು ಹೃದಯ,ಶಿರಸ್ಸು,ಶಿಖೆ( ಜಟೆ) ಎದೆ, ಬಲಗಣ್ಣು ಎಡಗಣ್ಣು ಮತ್ತು ಎರಡುಹುಬ್ಬುಗಳ ನಡುವೆ ಧರಿಸಬೇಕು.ಅಸ್ತ್ರಾಯಫಟ್ ಮಂತ್ರದಿಂದ ವಿಭೂತಿಯನ್ನು ಮಂತ್ರಿಸಿ ಎಂಟು ದಿಕ್ಕುಗಳಿಗೆ ಊದಬೇಕು.

ಒಂದೆರಡು ಅಧ್ಯಾಯ ಓದಿದ
ಡಂದು ಪುಣ್ಯವು ದೊರಕುತಿಹುದು
ಒಂದೆರಡು ನಾಲ್ಕಾಗೆ ದೇವಿಯ ಕರುಣ ಬಹಳಿಹುದೂ/
ಇಂದು ಕೇಳಿರಿ ಜನಗಳೀಯ
ಪ್ಪಂದೆ ನಿತ್ಯದಲೋದಿಕೊಳ್ಳಿರಿ
ಸಂದೇಹವಿಲ್ಲವು ಗುರುಚಿದಾನಂದ ದಯವಿಹುದೂ //೧೯//

‌ಪೀಠಿಕಾ ಅಧ್ಯಾಯವನ್ನು ಸಮಾಪ್ತಿಗೊಳಿಸುತ್ತ ಚಿದಾನಂದಾವಧೂತರು ಪೂರ್ಣ ಪುರಾಣವನ್ನು ಓದಲಾಗದಿದ್ದವರು ದಿನಕ್ಕೆ ಒಂದೆರಡು ಅಧ್ಯಾಯಗಳನ್ನಾದರೂ ಓದಿರಿ. ಪ್ರತಿದಿನ ನಾಲ್ಕು ಅಧ್ಯಾಯಗಳನ್ನು ಓದಿದರೆ ದೇವಿಯು ಸಂತುಷ್ಟಳಾಗಿ ನಿಮಗೆ ಒಲಿಯುವಳು.ಈ ತೆರನಾಗಿ ದೇವಿ ಪುರಾಣವನ್ನು ಓದಿರಿ ಎನ್ನುತ್ತಾರೆ.

ಪ್ರತಿದಿನ ಪೂರ್ಣಪುರಾಣವನ್ನು‌ಓದಲಾಗದೆ ಇರುವ ಬಹಳಷ್ಟು ಜನರು ಪ್ರತಿದಿನ ಪುರಾಣದ ಎರಡು ಅಧ್ಯಾಯಗಳನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದಾರೆ.ಅದು ಕೂಡ ಒಳ್ಳೆಯದೆ.ನಿತ್ಯ ನಿರಂತರ ಪುರಾಣ ಪಾರಾಯಣ ಮಾಡುವವರನ್ನು ಶ್ರೀದೇವಿಯು ತಪ್ಪದೆ ಉದ್ಧರಿಸುತ್ತಾಳೆ ಎನ್ನುವಲ್ಲಿಗೆ ಶ್ರೀ ಚಿದಾನಂದಾವಧೂತರಿಂದ ರಚಿಸಲ್ಪಟ್ಟ ‘ ಶ್ರೀ ದೇವಿ ಮಹಾತ್ಮೆ’ ಎನ್ನುವ ಶ್ರೀದೇವಿಪುರಾಣದ ಪೀಠಿಕಾ ಅಧ್ಯಾಯಕ್ಕೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಬರೆದ ‘ ‘ಶ್ರೀದೇವಿ ಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ ಎನ್ನುವ ಪೀಠಿಕಾ ಅಧ್ಯಾಯದ ವಿವರಣಗ್ರಂಥವು ಶೋಭನ ಸಂವತ್ಸರದ ಭಾದ್ರಪದ ಮಾಸದ ಕೃತ್ತಿಕಾ ನಕ್ಷತ್ರದ ಪಂಚಮಿ ತಿಥಿಯ ಮಂಗಳವಾರದಂದು ಸಂಜೆ ಮಂಗಳಗೊಂಡಿತು.

ಮುಕ್ತಾಯ

About The Author