ಶ್ರೀದೇವಿ ಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ

ಶ್ರೀದೇವಿ ಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ
ಮುಕ್ಕಣ್ಣ ಕರಿಗಾರ

 ( ನಿನ್ನೆಯಿಂದ ಮುಂದುವರೆದಿದೆ )

ವಶಕರವು ಬೇಕಾಗಲವನಿಗೆ
ಹುಸಿಯು ಹೋಗದೆ ಪೂರ್ಣಗ್ರಂಥವ
ಎಸಗಿ ನಿತ್ಯದಿ ಪಠಿಸಿದಂದದಿ ತ್ರಿಂಶತಿಯ ದಿನದೀ //
ಘಸಣಿಸದೆ ನಿಜಚಿತ್ತವಗಲದೆ
ದೆಸೆಯನೋಡ್ಯೋದಿದವನಾದಡೆ
ಅಸಮ ವಶಕರವವನಿಗಾಹುದು ನೆನೆದ ಪರಿಯಲ್ಲೀ //೧೨//

ಜನರು ಮತ್ತು ಜಗತ್ತು ತನ್ನ ಸ್ವಾಧೀನದಲ್ಲಿರಬೇಕೆಂದು ಬಯಸುವವರು ಶ್ರೀದೇವಿ ಚರಿತ್ರೆಯನ್ನು ಬೇಸರಿಸದೆ,ಒಂದು ದಿನವೂ ತಪ್ಪದಂತೆ ಮುವ್ವತ್ತು ದಿನಗಳ ಕಾಲ ನಿರಂತರವಾಗಿ ಓದಿದರೆ ಜನರು ಅವನತ್ತ ಆಕರ್ಷಿತರಾಗುವರು.ಈ ಪರಿಯಲ್ಲಿ ಮುವ್ವತ್ತು ದಿನಗಳ ಕಾಲ ದೇವಿಪುರಾಣವನ್ನು ಓದಿದರೆ ಎಂಥವರು ಕೂಡ ಪುರಾಣ ಓದುವವನತ್ತ ಆಕರ್ಷಿತರಾಗುತ್ತಾರೆ,ಊರು ಕೇರಿಗಳು ಅವನ ಸ್ವಾಧೀನದಲ್ಲಿರುತ್ತವೆ.

ಕೆಲವರು ತಮಗೆ ಜನವಶೀಕರಣವಾಗಬೇಕೆಂದು ತಾಂತ್ರಿಕ ವಿದ್ಯೆಗಳ ಮೊರೆಹೋಗುತ್ತಾರೆ.ಅದರ ಬದಲಿಗೆ ದೇವಿಪುರಾಣವನ್ನು ಆಶ್ರಯಿಸುವುದರಿಂದ ವಿಶ್ವವನ್ನೇ ವಶೀಕರಿಸಿಕೊಳ್ಳಬಹುದು ಎನ್ನುತ್ತಾರೆ ಚಿದಾನಂದಾವಧೂತರು.ತಾಂತ್ರಿಕ ವಿದ್ಯೆಯಲ್ಲಿ ಮೋಹನ, ಆಕರ್ಷಣ,ವಶೀಕರಣ ವಿದ್ವೇಷಣ,ಸ್ತಂಭನ, ಮಾರಣ, ಎನ್ನುವ ಆರುಕರ್ಮಗಳಿದ್ದು ಅವುಗಳನ್ನು ಷಟ್ಕರ್ಮಗಳು ಎನ್ನುತ್ತಾರೆ.ತಾಂತ್ರಿಕರು ಇಂತಹ ವಿದ್ಯಾಪ್ರಯೋಗದಿಂದ ಜನರನ್ನು ಭಯಭೀತರನ್ನಾಗಿಸಿ ತಮ್ಮ ಹಿತರಕ್ಷಣೆ ಮಾಡಿಕೊಳ್ಳುತ್ತಾರೆ.ಆದರೆ ಸಾತ್ವಿಕೋಪಾಸಕರಿಗೆ ಇಂತಹ ತಾಂತ್ರಿಕ ಸಿದ್ಧಿಗಳ ಅಗತ್ಯ ಇರುವುದಿಲ್ಲ.ಅವರು ದೇವಿ ಪುರಾಣವನ್ನು ನಿತ್ಯ ಪಠಿಸಿದರೆ ಸಾಕು ಅವರ ಇಷ್ಟಾರ್ಥಗಳೆಲ್ಲ ಸಿದ್ಧಿಸುತ್ತವೆ.

ಈ ಪದ್ಯದಲ್ಲಿ ಚಿದಾನಂದಾವಧೂತರು ‘ ‘ದೆಸೆಯನೋಡ್ಯೋದಿದವನಾದಡೆ’ ಎಂದಿದ್ದಾರೆ ಎನ್ನುವುದು ಗಮನಾರ್ಹವಾದುದು.ಆಧ್ಯಾತ್ಮಿಕ ಸಾಧನೆಯಲ್ಲಿಯೂ ಕೂಡ ದಿಕ್ಕುಗಳಿಗೆ ಮಹತ್ವ ಇದೆ.ಯಾವ ದಿಕ್ಕಿಗೆ ಕುಳಿತು ದೇವರನ್ನು ಪೂಜಿಸಿದರೆ ಯಾವ ಫಲ ಎನ್ನುವುದನ್ನು ನಿರ್ಣಯಿಸಲಾಗಿದೆ.ದೇವರ ಒಲುಮೆ,ಸಾಕ್ಷಾತ್ಕಾರಕ್ಕೆ ಪೂರ್ವಕ್ಕೆ ಮುಖಮಾಡಿ ಧ್ಯಾನ ಸಾಧನೆಗಳನ್ನು ಮಾಡಬೇಕು.ಮಂತ್ರಸಿದ್ಧಿಗೆ ಪಶ್ಚಿಮಕ್ಕೆ ಮುಖಮಾಡಿ ಧ್ಯಾನ ಸಾಧನೆಗಳನ್ನು ಮಾಡಬೇಕು.ಸಿರಿಸಂಪತ್ತುಗಳನ್ನು ಬಯಸುವವರು ಉತ್ತರದಿಕ್ಕಿನತ್ತ ಮುಖಮಾಡಿ ಧ್ಯಾನ ಸಾಧನೆಗಳನ್ನು ಮಾಡಬೇಕು.ಶತ್ರುಗಳ ಉಪಟಳ ನಿಗ್ರಹ ಮತ್ತು ಶತ್ರು ನಾಶಕ್ಕೆ ದಕ್ಷಿಣ ದಿಕ್ಕಿನತ್ತ ಮುಖಮಾಡಿ ಧ್ಯಾನ ಸಾಧನೆಗಳನ್ನು ಮಾಡಬೇಕು.ಇದೇ ಕ್ರಮದಲ್ಲಿ ತಮ್ಮ ಉದ್ದೇಶ ಸಾಧನೆಗೆ ದಿಕ್ಕುಗಳನ್ನು ಗುರುತಿಸಿಕೊಂಡು ದೇವಿ ಪುರಾಣ ಪಾರಾಯಣಮಾಡಬೇಕು.ಹೀಗೆ ನಿರಂತರವಾಗಿ ಮುವ್ವತ್ತು ದಿನಗಳ ಕಾಲ ದೇವಿಪುರಾಣವನ್ನು ಪೂರ್ಣ ಪಾರಾಯಣ ಮಾಡಿದರೆ ಉದ್ದೇಶ ಈಡೇರುತ್ತದೆ.

ಒಂದು ದಿನದಿ ಸಮಗ್ರ ಗ್ರಂಥವ
ನಂದು ಓದಲಿಬೇಕು ಈ ಪರಿ
ಸಂದೇಹಿಲ್ಲದೆ ಒಂದು ಸಂವತ್ಸರವು ಓದಿದೊಡೇ //
ಅಂದು ಪ್ರತ್ಯಕ್ಷಹಳು ದೇವಿಯು
ಒಂದು ಕಂದಾವೋದಿದೊಡೆ ಕೋ
ಯೆಂದು ಕೊಡುವಳು ಫಲವನಿದ ನಂಬುವುದು ಜಗವೆಲ್ಲಾ //೧೩//

ಚಿದಾನಂದಾವಧೂತರು ಪೀಠಿಕಾ ಅಧ್ಯಾಯದ ಈ ಪದ್ಯದಲ್ಲಿ ತಾವು ರಚಿಸಿದ ಶ್ರೀದೇವಿ ಮಹಾತ್ಮೆಯ ವಿಶೇಷ ಏನು ಎಂಬುದನ್ನು ವಿವರಿಸಿದ್ದಾರೆ.ಇತರ ಪುರಾಣಗಳಲ್ಲಿ ಇಲ್ಲದ ಒಂದು ವಿಶೇಷ ಸಾಮರ್ಥ್ಯವು ಚಿದಾನಂದಾವಧೂತರಿಂದ ರಚಿಸಲ್ಪಟ್ಟ ಈ ದೇವಿ ಪುರಾಣದಲ್ಲಿದೆ.ಯಾರು ಈ ದೇವಿ ಪುರಾಣವನ್ನು ಒಂದು ವರ್ಷ ಅಖಂಡ ಪಾರಾಯಣ ಮಾಡುತ್ತಾರೋ ಅವರಿಗೆ ದೇವಿ ದುರ್ಗೆಯು ಪ್ರತ್ಯಕ್ಷಳಾಗುತ್ತಾಳೆ.ಇತರ ದೇವರ ಸಾಕ್ಷಾತ್ಕಾರಕ್ಕೆ ಹನ್ನೆರಡು ವರ್ಷಗಳ ತಪಸ್ಸು ಬೇಕು; ಆದರೆ ದುರ್ಗಾದೇವಿಯು ಪ್ರತ್ಯಕ್ಷಳಾಗಲು ಹನ್ನೆರಡು ತಿಂಗಳುಗಳ ಕಾಲ ಈ ಪುರಾಣವನ್ನು‌ ಓದಿದರೆ ಸಾಕು,ತಾಯಿಯು ಪ್ರತ್ಯಕ್ಷ ದರ್ಶನ ನೀಡಿ,ಉದ್ಧರಿಸುತ್ತಾಳೆ.ಸದಾ ತನ್ನ ಭಕ್ತನ ಹಿಂದೆ ಇದ್ದು ಆತನನ್ನು ಪೊರೆಯುತ್ತಾಳೆ.

ಒಂದು ವರ್ಷ ದೇವಿಪುರಾಣ ಓದಿದರೆ ದೇವಿಯ ಸಾಕ್ಷಾತ್ಕಾರವಾಗುತ್ತದೆ ಎಂದು ಕೆಲವರು ಮನಸ್ಸಿಗೆ ಬಂದ ಬೀಭತ್ಸ ಆಚರಣೆಗಳನ್ನು ಆಚರಿಸುತ್ತ ಪುರಾಣ ಓದಿದ್ದಾರೆ,ಓದುತ್ತಿದ್ದಾರೆ.ಅಂಥವರು ದೇವಿಯ ನೆರಳನ್ನು ಕೂಡ ಕಂಡಿಲ್ಲ,ಕಾಣಲಾರರು.ನಿಜನಿಷ್ಠೆಯಿಲ್ಲದೆ ಓದುವವರಿಗೆ ದೇವಿಯು ಕನಸಿನಲ್ಲಿಯೂ ಸಹ ದರ್ಶನ ನೀಡುವುದಿಲ್ಲ ಎನ್ನುವುದನ್ನು ಡಾಂಬಿಕ ಭಕ್ತರು ಗಮನಿಸಬೇಕು.

‌ಈ ದೇವಿಪುರಾಣದ ಪದ್ಯಭಾಗವನ್ನಷ್ಟೇ ಒಂದು ವರ್ಷಕಾಲ ಓದಬೇಕು,ಅರ್ಥ ಸಹಿತ ಓದಲು ಆಗುವುದಿಲ್ಲ.೭೯೬ ಪದ್ಯಗಳ ಪೂರ್ಣಗ್ರಂಥವನ್ನು ಓದಲು ಮೂರು ಘಂಟೆಗಳ ಅವಧಿ ಹಿಡಿಯುತ್ತದೆ .ಪ್ರತಿದಿನ ಬೆಳಿಗ್ಗೆ ಮೂರು ಘಂಟೆಗೆ ಎದ್ದು ಸ್ನಾನಾದಿ ನಿತ್ಯಕರ್ಮಗಳನ್ನು ತೀರಿಸಿಕೊಂಡು ನಾಲ್ಕುಘಂಟೆಗೆ ಪೂಜಾಸ್ಥಳದಲ್ಲಿ ಕುಳಿತುಕೊಂಡು ತನ್ನ ಗುರುವಿನ ಸ್ಮರಣೆ ಮಾಡಿ,ಗುರುವನುಗ್ರಹಿಸಿದ ಮಂತ್ರವನ್ನು ಧ್ಯಾನ ಮಾಡಿ ದೇವಿಯ ನವಾರ್ಣ ಮಂತ್ರದಿಂದ ನ್ಯಾಸ ಮಾಡಬೇಕು.ಆ ಬಳಿಕ ದೇವಿಯ ನವಾರ್ಣ ಮಂತ್ರವಾದ ” ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೆ” ಎನ್ನುವ ಮಂತ್ರವನ್ನು ಜಪಮಾಲೆಯಿಂದ ಹತ್ತುಮಾಲೆಯಾಗುವಷ್ಟು ಅಂದರೆ ೧೦೮೦ ಬಾರಿ ಈ ಮಂತ್ರವನ್ನು ಜಪಿಸಬೇಕು.ನಂತರ ಪುರಾಣವನ್ನು ಧೂಪ ದೀಪ ನೈವೇದ್ಯಗಳಿಂದ ಪೂಜಿಸಿ,ಓದಲು ಪ್ರಾರಂಭಿಸಬೇಕು.ಪುರಾಣವನ್ನು ಬೀದಿಯಲ್ಲಿ ತಿರುಗುವವರಿಗೆ ಕೇಳಿಸುವಷ್ಟು ಜೋರಾಗಿ ಓದಬಾರದು.ಮಾನಸಿಕವಾಗಿ ಓದುವುದು ಸರ್ವಶ್ರೇಷ್ಠ ಪಾರಾಯಣ ಕ್ರಮವಾಗಿದೆ.ಇಲ್ಲದಿದ್ದರೆ ತುಟಿಗಳು ಅಲುಗಾಡಿಸುವಷ್ಟು ಮೆಲ್ಲನೆಯ ಸ್ವರದಲ್ಲಿ ಓದಬೇಕು.ಪೂಜೆಗೆ ಕುಳಿತವರು ಪೂಜೆಮುಗಿಯುವವರೆಗೆ ಯಾವಕಾರಣಕ್ಕೂ ಎದ್ದು ಬರಬಾರದು ಅಂದರೆ ಯಾವ ಕಾರಣಕ್ಕೂ ಪೂಜೆಗೆ ಭಂಗವಾಗಬಾರದು.ಕಂಬಳಿಯ ಆಸನವು ಶ್ರೇಷ್ಠವಾಗಿದ್ದು ಕಪ್ಪು ಕಂಬಳಿಯಿಂದ ದುಷ್ಟಶಕ್ತಿಗಳಿಂದ ರಕ್ಷಣೆ ಒದಗುತ್ತದೆ.ಬಿಳಿಯ ಕಂಬಳಿಯನ್ನು ಬಳಸುವುದರಿಂದ ದುರ್ಗಾದೇವಿಯು ಬಹುಬೇಗನೆ ಪ್ರಸನ್ನಳಾಗುತ್ತಾಳೆ.ಸಂನ್ಯಾಸಿಗಳು ಜಿಂಕೆಯ ಚರ್ಮ ಇಲ್ಲವೆ ಹುಲಿಯ ಚರ್ಮವನ್ನು ಆಸನವಾಗಿ ಬಳಸಬೇಕು.ಪೂರ್ವಕ್ಕೆ ಮುಖಮಾಡಿಕೊಂಡು ಪದ್ಮಾಸನ,ಸಿದ್ಧಾಸನ ಇಲ್ಲವೆ ಸುಖಾಸನ ಈ ಮೂರು ಆಸನಗಳಲ್ಲಿ ಯಾವ ಆಸನದಿಂದ ಸಾಧನೆ ಮಾಡಲು ಸಾಧ್ಯವೋ ಆ ಆಸನದಲ್ಲಿ ಕುಳಿತು ಪುರಾಣ ಪಾರಾಯಣ ಮಾಡಬೇಕು . ಪುರಾಣ ಪಾರಾಯಣ ಪ್ರಾರಂಭದ ಮೊದಲ ದಿನವೇ ದುರ್ಗಾದೇವಿಯನ್ನು ಸ್ಮರಿಸಿ, ‘ ಅಮ್ಮಾ ತಾಯಿ,ನಾನು ನಿನ್ನ ದರ್ಶನಾಕಾಂಕ್ಷಿಯಾಗಿ ಇಂದಿನಿಂದ ನಿನ್ನ ಸ್ವರೂಪವೇ ಆದ ನಿನ್ನ ಪುರಾಣವನ್ನು ಓದುತ್ತಿದ್ದೇನೆ.ನನ್ನನ್ನು ಅನುಗ್ರಹಿಸಿ,ಆಶೀರ್ವದಿಸು.ನಾನು ನಿನ್ನ ಪೂಜಾದಿ ಕರ್ಮಗಳನ್ನರಿಯೆ,ಭಕ್ತಿಯೂ ನನ್ನಲ್ಲಿ ಇಲ್ಲ.ಆದರೆ ಅನನ್ಯಮನಸ್ಸಿನಿಂದ ನಿನ್ನಲ್ಲಿ ಶರಣು ಬಂದಿದ್ದೇನೆ.ಶರಣಾಗತರಕ್ಷಕಳಾದ ಹೇ ಜಗಜ್ಜನನಿ,ನನ್ನ ಸಕಲ ದೋಷಗಳನ್ನು ಮನ್ನಿಸಿ,ಪೊರೆದು ನಿನ್ನ ದರ್ಶನಭಾಗ್ಯವನ್ನಿತ್ತು ಉದ್ಧರಿಸು’ ಎಂದು ಸಂಕಲ್ಪ ಮಾಡಿಯೇ ಪುರಾಣದ ಪಾರಾಯಣವನ್ನು ಪ್ರಾರಂಭಿಸಬೇಕು.ಪುರಾಣವನ್ನು ಒಂದೇ ಸ್ಥಳದಲ್ಲಿ ನಿಗದಿತ ಸಮಯಕ್ಕೆ ಓದಬೇಕು.ಪುರಾಣ ಓದುವವರು ಒಂದು ವರ್ಷದ ಅವಧಿಯಲ್ಲಿ ದೂರದ ಊರುಗಳಿಗೆ,ಪರಸ್ಥಳಗಳಿಗೆ ಹೋಗಬಾರದು.ಯಾವುದಾದರೂ ಊರಿಗೆ ಹೋಗುವಂತಿದ್ದರೆ ಬೆಳಿಗ್ಗೆ ಪಾರಾಯಣ ಮಾಡಿ ಹೋಗಿ ಸಂಜೆ ಊರಿಗೆ ಮರಳುವಂತಿದ್ದರೆ ಮಾತ್ರ ಹೋಗಬೇಕು.ಬೆಳಿಗ್ಗೆ ನಾಲ್ಕುಘಂಟೆಯಿಂದ ಏಳು ಘಂಟೆಯ ಒಳಗೆ ಪೂಜೆ ಮುಗಿಯಬೇಕು.ಈ ಕ್ರಮವನ್ನು ನಿತ್ಯ ಪಾಲಿಸಿ,ಒಂದು ವರ್ಷ ಓದಿದರೆ ೩೬೫ ನೇ ದಿನ ಬೆಳಗಿನ ಐದರಿಂದ ಆರು ಘಂಟೆಯ ಅವಧಿಯಲ್ಲಿ ದೇವಿಯು ಖಂಡಿತ ದರ್ಶನಕೊಟ್ಟು ಭಕ್ತನ ಮನೋಬಯಕೆಯನ್ನು ಈಡೇರಿಸುತ್ತಾಳೆ.ಇದೇನು ಸುಳ್ಳಲ್ಲ,ಕಲ್ಪನೆಯಲ್ಲ,ಪ್ರತ್ಯಕ್ಷ ಅನುಭವದ ಸಂಗತಿ.

ಆದರೆ ಸಂಕಲ್ಪ ಸಹಿತ ದೇವಿ ಪುರಾಣ ಪಾರಾಯಣ ಪ್ರಾರಂಭಿಸೆ ಆರಂಭದಲ್ಲಿ ವಿಘ್ನಗಳು ಬರುತ್ತವೆ.ಓದುವಾಗ ಭಯವಾಗುತ್ತದೆ.ಹಾವು ಚೇಳುಗಳು ಕಾಣಿಸಿಕೊಳ್ಳುತ್ತವೆ.ವಿಚಿತ್ರವಾದ ಕೂಗು ಕೇಕೆಗಳು ಕೇಳಿಸುತ್ತವೆ.ಈ ಯಾವ ಶಬ್ದ,ಗದ್ದಲ,ಗೊಂದಲಗಳಿಗೂ ಸಾಧಕರು ಹೆದರಬಾರದು.ಒಂದು ವೇಳೆ ಬಂಧು,ಸಂಬಂಧಿಕರು ಅಥವಾ ತಮ್ಮ ಮನೆಯಲ್ಲಿಯೇ ಯಾರಾದರೂ ಸತ್ತರೂ ಸಹ ಪೂಜೆಯನ್ನು ನಿಲ್ಲಿಸಬಾರದು.ಅದಕ್ಕಾಗಿ ದೇವಿಪುರಾಣ ಪಾರಾಯಣವನ್ನು ಮನೆಯ ಹೊರಭಾಗದ ಏಕಾಂತ ಸ್ಥಳದಲ್ಲಿ ಇಲ್ಲವೆ ಮನೆಯಲ್ಲಿ ಯಾರಿಗೂ ಕಾಣಿಸದ ಸ್ಥಳದಲ್ಲಿ ಮಾಡಬೇಕು.ಈ ಕ್ರಮದಲ್ಲಿ ಓದಿದರೆ ಒಂದು ವರ್ಷದಲ್ಲಿ ದೇವಿಯು ಖಂಡಿತ ದರ್ಶನ ಕೊಡುತ್ತಾಳೆ.

ಪೂರ್ಣಪುರಾಣವನ್ನು ಓದಲಾಗದವರು ಪುರಾಣದ ಒಂದು ಕಂದ ಅಂದರೆ ದಿನಕ್ಕೆ ಒಂದು ಷಟ್ಪದಿಯನ್ನಷ್ಟೇ ಓದಿದರೆ ಸಾಕು,ಅಷ್ಟರಿಂದಲೇ ದೇವಿಯು ಪ್ರಸನ್ನಳಾಗಿ ಅವರ ಇಷ್ಟಾರ್ಥ ಈಡೇರಿಸುತ್ತಾಳೆ ಎಂದಿದ್ದಾರೆ ಚಿದಾನಂದಾವಧೂತರು.

( ಮುಂದುವರೆಯುತ್ತದೆ)

About The Author