ಮೂರನೇ ಕಣ್ಣು : ಹಿಂದುಳಿದ ವರ್ಗಗಳು,ತಳಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲೆಂದೇ ‘ ಶೂದ್ರ ಭಾರತ ಪಕ್ಷ’ ವನ್ನು ಸ್ಥಾಪಿಸಲಾಗಿದೆ : ಮುಕ್ಕಣ್ಣ ಕರಿಗಾರ

 ಬರುವ ಡಿಸೆಂಬರ್ ನಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಹಿಂದುಳಿದ ವರ್ಗಗಳಿಗೆ ಸೇರಿದ ಆ ರಾಜ್ಯದ ರಾಜಕೀಯ ಮುಖಂಡರುಗಳು ಆಗ್ರಹಿಸುತ್ತಿದ್ದಾರೆ.ತೆಲಂಗಾಣದ 119 ವಿಧಾನಸಭೆಯ ಸದಸ್ಯತ್ವದ ಬಲದಲ್ಲಿ ಆಡಳಿತಾರೂಢ ಬಿ ಆರ್ ಎಸ್ ಪಕ್ಷವು ಈಗಾಗಲೆ 23 ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ನೀಡಿದೆ.ಕಾಂಗ್ರೆಸ್ ಪಕ್ಷವು 2018 ರ ವಿಧಾನಸಭಾ ಚುನಾವಣೆಯಲ್ಲಿ 24 ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ನೀಡಿತ್ತು.ತೆಲಂಗಾಣದ ಪ್ರಸ್ತುತ ವಿಧಾನಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ 21 ಶಾಸಕರುಗಳಿದ್ದಾರೆ.ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ( TPCC) ಯ ಅಧ್ಯಕ್ಷರಾದ ಎ.ರೇವಂತರೆಡ್ಡಿಯವರು ಕಾಂಗ್ರೆಸ್ ಪಕ್ಷವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ‌ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಎರಡರಂತೆ 34 ಎಂ ಎಲ್ ಎ ಸ್ಥಾನಗಳನ್ನು ಹಿಂದುಳಿದವರ್ಗಗಳಿಗೆ ನೀಡಬೇಕು ಎನ್ನುವ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡಿನ ಮುಂದೆ ಇಟ್ಟಿದ್ದಾರೆ.

‌ತೆಲಂಗಾಣ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ 130 ಜಾತಿಗಳು ಸೇರಿ 52% ಹಿಂದುಳಿದ ವರ್ಗದ ಜಾತಿಗಳ ಜನಸಂಖ್ಯೆ ಇದೆ.ಗೊಲ್ಲಕುರುಬರು,ಮುದಿರಾಜಾಸ್,ಗೌಡರು ಮತ್ತು ಪದ್ಮಶಾಲಿಗಳ ಪ್ರಮಾಣವು ರಾಜ್ಯದ ಜನಸಂಖ್ಯೆಯಲ್ಲಿ ಕ್ರಮವಾಗಿ 30 ಲಕ್ಷ,29 ಲಕ್ಷ,20 ಲಕ್ಷ ಹಾಗೂ 14 ಲಕ್ಷಗಳಷ್ಟಿದೆ.ತೆಲಂಗಾಣ ರಾಜ್ಯದ ಹಿಂದುಳಿದ ವರ್ಗಗಳ‌ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಟ 64 ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿರಿಸಬೇಕು.ಆದರೆ ತೆಲಂಗಾಣ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಅನುಗುಣವಾದ ರಾಜಕೀಯ‌ಪ್ರಾತಿನಿಧ್ಯವನ್ನು ನೀಡುತ್ತಿಲ್ಲವೆನ್ನುವುದು ಆ ರಾಜ್ಯದ ಹಿಂದುಳಿದ ವರ್ಗಗಳ ನಾಯಕರ ಕೊರಗು ಆಗಿದೆ.ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ನೋಡಿ ಜಾತಿವಾರು ಟಿಕೆಟುಗಳನ್ನು ಹಂಚುತ್ತಿರುವುದರಿಂದ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ ಎನ್ನುವ ಅಸಮಾಧಾನ ತೆಲಂಗಾಣ ರಾಜ್ಯದ ಹಿಂದುಳಿದ ವರ್ಗದ ನಾಯಕರುಗಳಲ್ಲಿದೆ.ಈ ಕಾರಣದಿಂದಾಗಿ ತೆಲಂಗಾಣದ ರಾಜ್ಯಸಭಾ ಸದಸ್ಯ ಮತ್ತು ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಂಘಟನೆಯ ಅಧ್ಯಕ್ಷರಾದ ಆರ್ ಕೃಷ್ಣಯ್ಯನವರು ರಾಜ್ಯ ವಿಧಾನಸಭಾ ಸ್ಥಾನಗಳಲ್ಲಿ ಪರಿಶಿಷ್ಟಜಾತಿ( SC) ಮತ್ತು‌ಪರಿಶಿಷ್ಟಪಂಗಡ( ST) ಗಳ ಜನಾಂಗಕ್ಕೆ ನೀಡಿರುವ ಸ್ಥಾನಗಳ ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೂ ವಿಸ್ತರಿಸಿ,ಹಿಂದುಳಿದ ವರ್ಗಗಳಿಗೂ ಸ್ಥಾನ‌ಮೀಸಲಿರಸಬೇಕು ಎಂದು ಆಗ್ರಹಿಸುತ್ತಿದ್ದಾರೆ.ಕೇಂದ್ರ ಸರಕಾರವು ಈ ಕುರಿತು ಲೋಕಸಭೆಯಲ್ಲಿ ವಿಧೇಯಕ ಒಂದನ್ನು ಮಂಡಿಸಿ ಅದನ್ನು ಕಾನೂನಾಗಿ‌ ಜಾರಿಗೆ ತರಬೇಕಾಗುತ್ತದೆ.ತೆಲಂಗಾಣ ರಾಜ್ಯದ ಜನಸಂಖ್ಯೆಯ 52% ರಷ್ಟಿರುವ ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಕೇವಲ 23 ರಿಂದ 25 ರವರೆಗೆ ಎಂ ಎಲ್ ಎ ಸ್ಥಾನಗಳು ದೊರೆಯುತ್ತವೆ ಎಂದರೆ ಅದು ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯವೇ ಸರಿ.

‌ ಇದು ತೆಲಂಗಾಣ ರಾಜ್ಯ ಒಂದರ ಕಥೆ ಮಾತ್ರವಲ್ಲ,ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಹಿಂದುಳಿದ ವರ್ಗಗಳ ಜನತೆಗೆ ಸಿಗಬೇಕಾದ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ.ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸದೆ ಆ ಜನಾಂಗದ ಸಮಗ್ರ ಉನ್ನತಿಯನ್ನು ಸಾಧಿಸುವುದು ಸಾಧ್ಯವಿಲ್ಲ.ಆರ್ಥಿಕವಾಗಿ ಪ್ರಬಲರಾಗಿರುವ ಮೇಲ್ವರ್ಗದ ಜನತೆಗೆ ಹೆಚ್ಚು ಹೆಚ್ಚು ವಿಧಾನಸಭಾ ಸ್ಥಾನಗಳನ್ನು ನೀಡುತ್ತಿರುವುದರಿಂದ ಮೇಲ್ವರ್ಗದ ಜನಾಂಗಗಳ ಪ್ರಾಬಲ್ಯ ವರ್ಧಿಸುತ್ತಿದೆ.ಅತ್ಯಂತ ಕಡಿಮೆ ಸಂಖ್ಯೆಯ ಜನಸಂಖ್ಯೆಯನ್ನು ಹೊಂದಿರುವ ಅವಕಾಶವಂಚಿತ ಹಿಂದುಳಿದ ಸಮುದಾಯಗಳು ರಾಜಕೀಯ ಅವಕಾಶವಂಚಿತ ಸಮುದಾಯಗಳಾಗಿಯೇ ಮುಂದುವರೆಯಬೇಕಾಗುತ್ತದೆ.

‌ ಇಂತಹ ಅಸಮತೋಲನವನ್ನು ಹೋಗಲಾಡಿಸಿ ಹಿಂದುಳಿದ ವರ್ಗಗಳ ಎಲ್ಲ ಜಾತಿ,ಜನಾಂಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸಬೇಕು ಎನ್ನುವ ಕಾರಣದಿಂದ ‘ ಶೂದ್ರ ಭಾರತ ಪಕ್ಷ’ ವನ್ನು ಕಟ್ಟಲಾಗಿದೆ.ಹಿಂದುಳಿದ ವರ್ಗಗಳ ಜನತೆಗೆ ರಾಜಕೀಯ ಪ್ರಾತಿನಿಧ್ಯದಲ್ಲಿ ಸಿಂಹಪಾಲು ಸಿಗಬೇಕು ಎನ್ನುವುದು ನಮ್ಮ ಆಶಯ.ಹಾಗಾಗಿ ಅವಕಾಶವಂಚಿತ ಸಣ್ಣ ಸಣ್ಣ ಸಮುದಾಯಗಳು ಸೇರಿದಂತೆ ಹಿಂದುಳಿದ ವರ್ಗಗಳ ಜಾತಿಗಳಿಗೆ ಸೇರಿದ ಜನರು ‘ ಶೂದ್ರ ಭಾರತ ಪಕ್ಷ’ ವನ್ನು ಸೇರುವ ಮೂಲಕ ಅವರ ರಾಜಕೀಯ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು.

‌ ‌

About The Author