ಪುರಾಣ : ‘ಶ್ರೀದೇವಿಪುರಾಣದ ‘ ಪ್ರವೇಶದ್ವಾರ ಪೀಠಿಕಾ ಅಧ್ಯಾಯ : ಮುಕ್ಕಣ್ಣ ಕರಿಗಾರ

ಪುರಾಣ : ‘ಶ್ರೀದೇವಿಪುರಾಣದ ‘ ಪ್ರವೇಶದ್ವಾರ ಪೀಠಿಕಾ ಅಧ್ಯಾಯ : ಮುಕ್ಕಣ್ಣ ಕರಿಗಾರ

( ನಿನ್ನೆಯಿಂದ ಮುಂದುವರೆದಿದೆ )

ಜ್ಞಾನಮಾರ್ಗವ ತಿಳಿವೆನೆಂದಡೆ
ಜ್ಞಾನಸಿಂಧುವ ಹೇಳಿರುವೆನಾ
ಜ್ಞಾನಸಿಂಧುವಿನೊಳಗೆ ಸರ್ವಾ ತತ್ವ ತಿಳಕೊಳ್ಳೀ//
ಏನು ಕಾಮ್ಯವು ಬೇಡ್ದಡೆಯು ನೀವ್
ಧ್ಯಾನಿಸಿರಿ ಈ ದೇವಿಚರಿತವ
ನ್ಯೂನವಿಲ್ಲದೆ ಸಿದ್ಧಿಯಾಹುದು ಸತ್ಯಸತ್ಯವಿದೂ // ೫//

‌ಚಿದಾನಂದಾವಧೂತರು ಈ ಪದ್ಯದಲ್ಲಿ ಪರಮಾತ್ಮನ ಅನುಗ್ರಹವನ್ನು ಪಡೆಯಲು ಜ್ಞಾನ ಮತ್ತು ಕರ್ಮ ಮಾರ್ಗಗಳೆರಡರ ಅಗತ್ಯದ ಬಗ್ಗೆ ಪ್ರಸ್ತಾಪಿಸುತ್ತ ಜ್ಞಾನಮಾರ್ಗದಿಂದ ಪರಮಾತ್ಮನಪ್ರಾಪ್ತಿಗಾಗಿ ‘ಜ್ಞಾನಸಿಂಧು’ ಎಂಬ ಗ್ರಂಥ ರಚಿಸಿದ್ದೇನೆ ಅದನ್ನು ಓದಿರಿ.ಕಾಮ್ಯಪ್ರಾಪ್ತಿಯ ಇಚ್ಛೆಯುಳ್ಳವರು ಈ ದೇವಿಚರಿತ್ರೆಯನ್ನು ಓದಿ ನಿಮ್ಮ ಮನದ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ ಎಂದಿದ್ದಾರೆ.ಈ ದೇವಿಪುರಾಣದ ಪಾರಾಯಣದಿಂದ ಮನದ ಅಭೀಷ್ಟಗಳು ತಪ್ಪದೆ ಕೈಗೂಡುತ್ತವೆ ಎಂದಿದ್ದಾರೆ.

‘ಜ್ಞಾನಸಿಂಧು’ ಎನ್ನುವ ಕೃತಿಯನ್ನು ಚಿದಾನಂದಾವಧೂತರು ಯೋಗಸಾಧಕರುಗಳಿಗಾಗಿ ರಚಿಸಿದ್ದು ಅದರಲ್ಲಿ ಹಠಯೋಗ,ಲಯಯೋಗ,ರಾಜಯೋಗ ಮೊದಲಾದ ಯೋಗಸಾಧನಾ ಕ್ರಮವನ್ನು ಶಿವನು ತನ್ನ ಮಗ ಗುಹ( ಷಣ್ಮುಖ)ನಿಗೆ ಹೇಳಿದಂತೆ ನಿರೂಪಿಸಲಾಗಿದೆ.ಯೋಗಸಾಧನೆ ಮಾಡುವವರು ಆ ಪುಸ್ತಕವನ್ನು ಓದಬೇಕು.ಜ್ಞಾನಮಾರ್ಗ ಬೇಡ ಕರ್ಮಮಾರ್ಗದಿಂದ ನಾವು ದೇವಿಯನ್ನು ಕಾಣಬೇಕು,ಶ್ರೀದೇವಿಯ ಅನುಗ್ರಹವನ್ನು ಪಡೆಯಬೇಕು ಎನ್ನುವವರು ಈದೇವಿ ಚರಿತೆಯನ್ನು ಓದಬೇಕು ಎಂದಿರುವ ಚಿದಾನಂದಾವಧೂತರು ದೇವಿಚರಿತೆಯ ಪಠಣ- ಪಾರಾಯಣದಿಂದ ಭಕ್ತಜನರ ಮನೋಭಿಷ್ಟಗಳು ಖಂಡಿತವಾಗಿಯೂ ಕೈಗೂಡುತ್ತವೆ ಎಂದಿದ್ದಾರೆ.

ಮೋಕ್ಷಕಾಮ್ಯವದಾವುದಿಹುದಾ
ಪೇಕ್ಷಿಸಿದಡದು ಸಿದ್ಧಿಯಾಹುದು
ಈಕ್ಷಿಸಿಯೆ ಮನದಲ್ಲಿ ದೇವಿಯ ಮಹಿಮೆ ಸ್ಮರಿಸಿದೊಡೇ//
ತಕ್ಷಕವು ವೃಶ್ಚಿಕವು ಭೂತವು
ರಾಕ್ಷಸರು ವೃಕವ್ಯಾಘ್ರಗಳ ಭಯ
ವಾಕ್ಷಣದಿ ಹರಿಯುತ್ತಿಹುದು ಶ್ರೀದೇವಿ ಚರಿತೆಯಲೀ //೬//

ಶ್ರೀದೇವಿ ಚರಿತೆಯು ಎಲ್ಲ ಬಗೆಯ ಮನೋಬಯಕೆಗಳನ್ನು ಈಡೇರಿಸುವುದಲ್ಲದೆ ಸರ್ವವಿಧದ ರಕ್ಷಣೆಯನ್ನು ನೀಡುತ್ತದೆ ಎನ್ನುವ ಭಾವವು ಈ ಪದ್ಯದಲ್ಲಿ ಪ್ರಕಟಗೊಂಡಿದೆ.ಶ್ರೀದೇವಿ ಪುರಾಣವು ಭೋಗ ಮತ್ತು ಮೋಕ್ಷಗಳೆರಡನ್ನು ಅನುಗ್ರಹಿಸುತ್ತದೆ.ಮೋಕ್ಷವನ್ನು ಬಯಸುವವರು ಮೋಕ್ಷಾಪೇಕ್ಷಿಗಳಾಗಿ ಈ ಕೃತಿಯನ್ನು ಓದಲಿ.ಅಷ್ಟೈಶ್ವರ್ಯವಾದಿ ಸಕಲ ಭೋಗ ಭಾಗ್ಯವನ್ನು ಬಯಸುವವರು ಅದೇ ಬಯಕೆಯಿಂದ ಓದಿದರೆ ಅವರಿಗೆ ಸಕಲಭೋಗಭಾಗ್ಯಗಳು ಲಭಿಸುತ್ತವೆ.ದುಷ್ಟಜಂತುಗಳು,ಕ್ರೂರಮೃಗಗಳ ಭಯವು ಇಲ್ಲವಾಗುತ್ತದೆ .ಶ್ರೀದೇವಿ ಪುರಾಣದ ಸ್ಮರಣೆ ಮಾತ್ರದಿಂದ ಭಕ್ತನು ಸರ್ವಸಂಕಟ ಮುಕ್ತನಾಗುತ್ತಾನೆ.

ತಕ್ಷಕವು ಭಯಂಕರವಿಷವನ್ನುಳ್ಳ ಸರ್ಪವಾಗಿದ್ದು ಅದನ್ನು ಕಂಡು ಭಯವಾದೊಡನೆ ಶ್ರೀದೇವಿಯನ್ನು ಸ್ಮರಿಸಬೇಕು.ವೃಶ್ಚಿಕ ಎಂದರೆ ಚೇಳು.ಚೇಳು ಕಂಡಾಗಲೂ ದೇವಿಯನ್ನು ಸ್ಮರಿಸಿದೊಡೆ ಚೇಳಿನ ಭಯ ಇರದು.ಗ್ರಹ- ಭೂತಗಳ ಭಯವಾದಾಗಲೂ ಬ್ರಹ್ಮರಾಕ್ಷಸನ ಪೀಡೆಯುಂಟಾದಾಗಲೂ ತೋಳ ಹುಲಿಗಳಂತಹ ಕ್ರೂರ ಪ್ರಾಣಿಗಳನ್ನು ಕಂಡು ಭಯವಾದಾಗಲೂ ಶ್ರೀದೇವಿಯ ಚರಿತೆಯನ್ನು ಸ್ಮರಿಸಿದೊಡೆ ತಕ್ಷಣದಲ್ಲಿಯೇ ಉಂಟಾದ ಭಯ ನಿವಾರಣೆಯಾಗುತ್ತದೆ.ಹಿಂದಿನ ಕಾಲದಲ್ಲಿ ಜನರು ಊರಿಂದ ಊರಿಗೆ ಹೋಗಬೇಕಾದರೆ ನಡೆದೋ ಇಲ್ಲವೆ ರಥ ಅಥವಾ ಬಂಡಿಗಳ ಮೂಲಕ ಕಾಡುದಾರಿಯನ್ನು ಬಳಸಿ ಹೋಗಬೇಕಿತ್ತು.ಈಗಿನಂತೆ ಆಗ ಸಾರಿಗೆ ಸಂಪರ್ಕ ವ್ಯವಸ್ಥೆ ಇರಲಿಲ್ಲ.ಹೀಗೆ ಊರಿಂದ ಊರಿಗೆ‌ಪ್ರಯಾಣಿಸಲು ಹಲವು ದಿನಗಳೇ ಹಿಡಿಯುತ್ತಿತ್ತು.ಪ್ರಯಾಣದ ದಾರಿಯಲ್ಲಿ ಕಳ್ಳಕಾಕರ ಭಯವಿತ್ತು,ದುಷ್ಟಮೃಗಗಳಾದ ತೋಳ,ಹುಲಿ ಸಿಂಹ ಚಿರತೆಗಳಂತಹ ಕ್ರೂರಪ್ರಾಣಿಗಳ ಭಯವಿತ್ತು.ಭೂತ ಬ್ರಹ್ಮರಾಕ್ಷಸಗಳ ಬಾಧೆಯೂ ಇತ್ತು.ದಾರಿಯಲ್ಲಿ ಭಯಂಕರ ವಿಷಸರ್ಪಗಳು,ಚೇಳುಗಳು ಕಾಣಿಸಿಕೊಳ್ಳುತ್ತಿದ್ದವು.ಇವೆಲ್ಲವುಗಳ ಭಯಮುಕ್ತರಾಗಲು ಶ್ರೀದೇವಿ ಚರಿತ್ರೆಯ ಪಾರಾಯಣ ಮಾಡಬೇಕು ಮತ್ತು ಈ ಚರಿತ್ರೆಯನ್ನು ಸ್ಮರಿಸುತ್ತ ಪಯಣಕೈಗೊಂಡರೆ ಯಾವ ವಿಘ್ನಗಳು ಬರದೆ ಪ್ರಯಾಣವು ನಿರಾಂತಕವಾಗಿ ಮುಂದುವರೆಯುತ್ತದೆ ಎಂದಿದ್ದಾರೆ ಚಿದಾನಂದಾವಧೂತರು.

ಶ್ರೀದೇವಿಯು ಸಿಂಹ ಇಲ್ಲವೆ ಹುಲಿಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾಳೆ.ಸಿಂಹ ಮತ್ತು ಹುಲಿಗಳು ಕ್ರೂರ ಪ್ರಾಣಿಗಳಾಗಿದ್ದು ಅವುಗಳನ್ನು ನಿಗ್ರಹಿಸಿ,ನನ್ನ ಭಕ್ತರಿಗೆ ರಕ್ಷಣೆ ನೀಡುತ್ತೇನೆ ಎನ್ನುವದೇ ದೇವಿಯು ಮೃಗವಾಹನೆಯಾದುದರ ಸಂಕೇತ.ಹಾಗೆಯೇ ತನ್ನ ಉಪಾಸಕರನ್ನು ಕಾಡುತ್ತಿರುವ ಕ್ರೂರಗುಣಗಳಿಂದ ಮುಕ್ತರನ್ನಾಗಿಸಿ ಅವರನ್ನು ಶಿಷ್ಟರನ್ನಾಗಿಸುತ್ತೇನೆ,ಸತ್ಪುರುಷರನ್ನಾಗಿಸುತ್ತೇನೆ ಎನ್ನುವ ಅರ್ಥವೂ ಹೊರಹೊಮ್ಮಿಸುತ್ತದೆ ದೇವಿಯು ಸಿಂಹ ಅಥವಾ ಹುಲಿಯ ಮೇಲೆ ಕುಳಿತಿರುವ ದೃಶ್ಯವು.

ನಡೆಯುತಲಿ ಈ ಚರಿತೆ ಸ್ಮರಿಸಲಿ
ನುಡಿಯುತಲಿ ಈ ಚರಿತೆ ಸ್ಮರಿಸಲಿ
ಕೊಡುವ ಕೊಂಬಾಗಲೆಯು ಈ ಚರಿತೆಯನು ಸ್ಮರಿಸಿದೊಡೆ //
ಬಿಡಳವನನೀ ದೇವಿಯವನಿಗೆ
ಕೊಡುವಳೈ ಬೇಡಿದ್ದ ಪದಗಳ
ನೆಡೆಬಿಡದೆ ದಯಸಾಗರಲ್ಲವೆ ದೇವಿ ಭಕ್ತರಿಗೇ ? //೭//

ನಮ್ಮ ನಿತ್ಯದ ವ್ಯವಹಾರವೆಲ್ಲವೂ ದೇವಿಮಯವಾಗಬೇಕು.ಈ ದೇಹದಿಂದ ಮಾಡಲ್ಪಡುವ ಎಲ್ಲ ಕ್ರಿಯೆ,ಕರ್ಮಗಳಲ್ಲಿ ದೇವಿಯನ್ನೇ ಕಾಣಬೇಕು.ಬದುಕು ಭಗವತಿಗೆ ಅರ್ಪಣೆಯಾಗಬೇಕು.ಸರ್ವಸಮರ್ಪಣಾ ಭಾವದಿಂದ ತನ್ನಲ್ಲಿ ಶರಣುಬಂದವರ ಬದುಕಿನ ಹೊಣೆಯನ್ನು ತಾನೇ ಹೊತ್ತು ನಿರ್ವಹಿಸುತ್ತಾಳೆ ಶಾಂಭವಿಯು ಎನ್ನುವ ಅರ್ಥ ಹೊರಹೊಮ್ಮಿದೆ ಈ ಪದ್ಯದಲ್ಲಿ.ನಡೆಯುವಾಗ,ನುಡಿಯುವಾಗ,ಕೊಡುವಾಗ ಕೊಂಬುವಾಗ ದೇವಿ ಚರಿತ್ರೆಯನ್ನು ಸ್ಮರಿಸುತ್ತಿದ್ದರೆ ಶ್ರೀದೇವಿಯು ಅನವರತವೂ ತನ್ನ ಭಕ್ತರ ಬೆನ್ನಹಿಂದೆ ಇದ್ದು ಕಾಯುತ್ತಾಳೆ.ದಯಾಸಾಗರೆಯಾದ ದೇವಿ ದುರ್ಗೆಯು ಎಡೆಬಿಡದೆ ತನ್ನನ್ನು ನುತಿಪರ ಬೆನ್ನಹಿಂದೆ ಇದ್ದು ಅವರ ಸಕಲ ಬಯಕೆಗಳನ್ನು ಆಗುಮಾಡಿಕೊಡುತ್ತಾಳೆ.

‌ದೇವಿಪುರಾಣದ ದೇವಿಮಹಿಮೆಯ ಪದ್ಯಗಳನ್ನು ಕಂಠಪಾಠ ಮಾಡಿಕೊಂಡು ನಡೆಯುತ್ತಿರುವಾಗ,ಯಾರೊಡನಾದರೂ ಮಾತನಾಡುತ್ತಿರುವಾಗ,ಯಾರಿಗಾದರೂ ವಸ್ತು ಅಥವಾ ಹಣವನ್ನು ಕೊಡುತ್ತಿರುವಾಗ ಇಲ್ಲವೆ ವಸ್ತು ಹಣ ಒಡವೆಗಳನ್ನು ಇತರರಿಂದ ಪಡೆಯುತ್ತಾಗ ಶ್ರೀದೇವಿ ಚರಿತ್ರೆಯೊಳಗಣ ಆ ಮಹಿಮಾ ಪದ್ಯಗಳನ್ನು ಹಾಡುತ್ತಿರಬೇಕು.ಇದರಿಂದ ಕೆಲಸ ಕಾರ್ಯಗಳಲ್ಲಿ ಉಂಟಾಗುವ ವಿಘ್ನ,ಹಾನಿಗಳು ನಿವಾರಣೆಯಾಗಿ ಕೆಲಸ- ಕಾರ್ಯಗಳು ನಿರಾಂತಕವಾಗಿ,ನಿರ್ವಿಘ್ನವಾಗಿ ಮುಗಿಯುತ್ತವೆ.ನಡೆಯುತ್ತಿರುವಾಗ ದೇವಿ ಮಹಾತ್ಮೆಯನ್ನು ಸ್ಮರಿಸಿದರೆ ಬೀಳುವ ಭಯವಿಯಲ್ಲ.ನಡೆಯುವುದು ಎಂದರೆ ಇಲ್ಲಿ ಯಾವುದಾದರೂ ಕಾರ್ಯಸಾಧನೆಗೆ ಪ್ರಾರಂಭಿಸಿದಾಗ ಎಂದೂ ಅರ್ಥವಾಗುತ್ತಿದ್ದು ಓದು-ಉದ್ಯೋಗ- ಸಾಧನೆಗಳ ಕಾಲದಲ್ಲಿ ದುರ್ಗಾದೇವಿಯನ್ನು ಸ್ಮರಿಸಿದರೆ ನಾವು ಕೈಗೊಂಡ ಕಾರ್ಯವು ಯಶಸ್ವಿಯಾಗಿ ಮುಗಿಯುತ್ತದೆ.ನುಡಿಯುವಾಗ ಎಂದರೆ ಮಾತನಾಡುವಾಗ ಆ ಮಾತಿನಿಂದ ಬಂದೊದಗುವ ದೋಷ ಇಲ್ಲವೆ ಆಪತ್ತು ದೇವಿಯ ಸ್ಮರಣೆಯಿಂದ ಇಲ್ಲವಾಗುತ್ತದೆ.ಮಾತಿನಿಂದ ಮತ್ತೊಬ್ಬರಿಗೆ ಕೆಟ್ಟದ್ದನ್ನು ಬಯಸಬಾರದು,ಮತ್ತೊಬ್ಬರ ಕುರಿತು ಕೆಟ್ಟಪದಗಳನ್ನು ಬಳಸಬಾರದು,ಸುಳ್ಳನ್ನು ಆಡಬಾರದು.ನಾಲಗೆಯಲ್ಲಿ ಸದಾ ದೇವಿ ಸ್ಮರಣೆ ಇದ್ದರೆ ಮಾತಿನಸೂತಕಕ್ಕೆ ಮತ್ತು ಮಾತಿನಿಂದೊದಗುವ ಪಾತಕಕ್ಕೆ ಅವಕಾಶ ಇರುವುದಿಲ್ಲ.ಕವಿಸರ್ವಜ್ಞ ಹೇಳಿಲ್ಲವೆ ‘ ಮಾತಿನಿಂ ನಗೆನುಡಿಯು,ಮಾತಿನಿಂ ಹಗೆ ನುಡಿಯು’. ನಮ್ಮ ಮಾತೇ ನಗುವಿಗೂ ಮತ್ತು ಹಗೆಗಳು ಅಂದರೆ ಶತ್ರುಗಳು ಉಂಟಾಗಲು ಕಾರಣವಾಗುತ್ತಿದ್ದು ಮಾತಿನ ಮೇಲೆ ಹಿಡಿತ ಇರಬೇಕು.ದೇವಿಯು ವಾಗ್ದೇವಿಯೂ ಅಹುದಾದ್ದರಿಂದ ಆಕೆಯನ್ನು ಸ್ಮರಿಸುವುದರಿಂದ ವಾಗ್ದೇವಿ ಇಲ್ಲವೆ ವಾಣಿಯ ರೂಪದಲ್ಲಿ ನಮ್ಮ‌ನಾಲಗೆಯ ಮೇಲೆ ಸದಾ ನೆಲೆಸಿ ಕಲ್ಯಾಣಕಾರವಾದ ಮಾತುಗಳನ್ನೇ ಆಡಿಸುತ್ತಾಳೆ ನಮ್ಮಿಂದ.ಕೊಡುವ ತೆಗೆದುಕೊಳ್ಳುವ ವ್ಯವಹಾರ ಮಾಡುವಾಗಲೂ ದುರ್ಗಾದೇವಿಯನ್ನು ನೆನೆಯುತ್ತಿದ್ದರೆ ಆ ವ್ಯವಹಾರದಿಂದ ನಮಗೆ ಪ್ರತಿಕೂಲ ಪರಿಣಾಮವಾಗದೆ ಅನುಕೂಲವೇ ಆಗುತ್ತದೆ ಅಂದರೆ ದೇವಿಯನ್ನು ಸ್ಮರಿಸಿಕೊಂಡು ಮಾಡುವ ಉದ್ಯೋಗ,ವ್ಯಾಪಾರ,ವ್ಯವಹಾರಗಳು ನಷ್ಟವನ್ನುಂಟು ಮಾಡದೆ ಲಾಭವನ್ನೇ ತರುತ್ತವೆ.ನಾವು ಹಣ ,ಒಡವೆ ಅಥವಾ ವಸ್ತುವನ್ನು ಯಾರಿಗಾದರೂ ಕೊಟ್ಟರೆ ಅವರು ಮರಳಿಸದೆ ಇರಬಹುದು.ಅಥವಾ ನಾವು ಯಾರಿಂದಲಾದರೂ ಹಣ ಪಡೆದಿದ್ದರೆ ಅವರು ಬಡ್ಡಿಗೆ ಚಕ್ರಬಡ್ಡಿ ಸೇರಿಸಿ ನಮಗೆ ಅನ್ಯಾಯ ಮಾಡಬಹುದು.ವ್ಯವಹಾರದ ಸಂದರ್ಭದಲ್ಲಿ ನಾವು ಶ್ರೀದೇವಿಯನ್ನು ಸ್ಮರಿಸುತ್ತ ವ್ಯವಹಾರವನ್ನು ಪ್ರಾರಂಭಿಸಿದರೆ ಇತರರು ನಮಗೆ ಮೋಸಮಾಡಲಾರರು.

ಶ್ರೀದೇವಿಯನ್ನು‌ ಈ ‌ಪದ್ಯದಲ್ಲಿ ‘ ದಯಾಸಾಗರಿ’ ಎನ್ನುವ ವಿಶೇಷಣದಿಂದ ಕರೆಯಲಾಗಿದೆ.ಸಾಗರ ಎಂದರೆ ಸಮುದ್ರ.ಹಳ್ಳ,ಬಾವಿ,ಕೆರೆ,ನದಿಗಳಲ್ಲಿರುವ ನೀರಿಗೆ ಒಂದು ಮಿತಿ ಇದೆ ಆದರೆ ಸಮುದ್ರದ ನೀರಿಗೆ ಮಿತಿಯೇ ಇಲ್ಲವಾದ್ದರಿಂದ ಅದು ಅಪಾರವಾದ ಜಲಧಿ.ಹಾಗೆಯೇ ಭಕ್ತರು ಇತರ ದೇವರುಗಳನ್ನು ಪೂಜಿಸಿದರೆ ಅವರು ಕೊಡುವ ಫಲವು ಅಷ್ಟಕಷ್ಟೆ.ಬಾವಿಯ ನೀರು ಒಂದು ಕುಟುಂಬಕ್ಕೆ, ಒಂದು ಓಣಿಗೆ ಸಾಕಾಗಬಹುದು.ಕೆರೆಯನೀರು ಒಂದು ಊರಿಗೆ ಸಾಕಾಗಬಹುದು.ನದಿಯ ನೀರು ಹತ್ತಾರು ಗ್ರಾಮಗಳ ಜನಜಾನುವಾರುಗಳ ದಾಹ ತಣಿಸಬಹುದು.ಆದರೆ ಸಮುದ್ರವು ಇಡೀ ವಿಶ್ವವೇ ಬಳಸಿದರೂ ಅದರ ನೀರು ಖಾಲಿಯಾಗದೆ ಹಾಗೆಯೇ ಇರುತ್ತದೆ.ಸಣ್ಣಪುಟ್ಟ ದೇವರುಗಳು ತಮ್ಮ ಶಕ್ತ್ಯಾನುಸಾರ ವರವನ್ನು ಕೊಟ್ಟರೆ ದಯಾಸಮುದ್ರಳಾದ ದುರ್ಗಾದೇವಿಯು ಎಂತಹ ವರವನ್ನು ಬೇಕಾದರೂ ಕೊಡಬಲ್ಲಳು, ಎಷ್ಟು ಜನರಿಗೆ ಬೇಕಾದರೂ ವರವನ್ನು ನೀಡಬಲ್ಲಳು.ದುರ್ಗಾದೇವಿಯು ನೀಡದೆ ಇರುವಂತಹ ವರವೇ ಇಲ್ಲ.ಅವಳು ಜಗನ್ಮಾತೆಯಲ್ಲವೆ ? ಬ್ರಹ್ಮ ವಿಷ್ಣು ರುದ್ರಾದಿ ದೇವತೆಗಳ ತಾಯಿಯಾಗಿರುವ ಆ ಪರಾಶಕ್ತಿಯು ತ್ರಿಮೂರ್ತಿಗಳಿಗೆ ಫಲಪದವಿಗಳನ್ನಿತ್ತು ಪೊರೆದ ಮಹಾಮಾತೆ,ಸರ್ವಶಕ್ತಿ ಸಮನ್ವಿತೆ.ಮತ್ತೊಂದು ವಿಷಯವೂ ಇಲ್ಲಿ ಗಮನಾರ್ಹ.ಸಮುದ್ರದ ನೀರು ಬಾಷ್ಪೀಕರಣಗೊಂಡು ಮಳೆಯಾಗುತ್ತದೆ.ಆ ಮಳೆಯಿಂದಲೇ ಬಾವಿ ಕೆರೆ ಹಳ್ಳ ನದಿಗಳು ನೀರು ತುಂಬಿಕೊಳ್ಳುತ್ತವೆ.ಸಮುದ್ರವು ಮಳೆಯ ಮೂಲಕ ಹಳ್ಳ ನದಿಗಳ ನೀರಿಗೆ ಕಾರಣವಾಗಿ ಆ ನದಿಗಳು ಹರಿದು ಹರಿದು ಮತ್ತೆ ಸಮುದ್ರವನ್ನು ಸೇರುತ್ತವೆ.ಹಾಗೆಯೇ ಎಲ್ಲ ಜೀವರುಗಳು ದೇವರುಗಳ ಸೃಷ್ಟಿಗೆ ವಿಶ್ವಮಾತೆಯಾದ ದುರ್ಗಾದೇವಿಯು ಕಾರಣಗಳಾಗಿದ್ದು ಕೊನೆಗೆ ಅವರೆಲ್ಲರನ್ನೂ ತನ್ನಲ್ಲಿಯೇ ಅಡಗಿಸಿಕೊಳ್ಳುತ್ತಾಳೆ ಎನ್ನುವ ಅರ್ಥವೂ ಇಲ್ಲಿದೆ.

ಚಿಂತಿಗೆಯು ಚಿಂತಾಮಣಿಯು ಇದು
ಅಂತು ಕಾಮ್ಯಕೆ ಕಾಮಧೇನಿದು
ಇಂತು ಕಲ್ಪನೆಗಳಿಗೆ ಕಲ್ಪದ್ರುಮವು ತಾನೆ ಇದೂ //
ಸಂತತವು ಸುಖಭಾಗ್ಯಭೋಗವು
ಇಂತು ಮೆರೆವವು ದೇವಿ ಕರುಣದಿ
ಎಂತು ಪೇಳುವೆ ದೇವಿ ಚರಿತೆಯ ಗ್ರಂಥಮಹಿಮೆಯನೂ//೮//

ದೇವಿ ಚರಿತ್ರೆಯ ಈ ಗ್ರಂಥವು ಭಕ್ತರಿಗೆ ಚಿಂತಾಮಣಿ,ಕಾಮಧೇನು ಮತ್ತು ಕಲ್ಪವೃಕ್ಷದಂತೆ ಇದ್ದು ಭಕ್ತರ ಸರ್ವಮನೋಬಯಕೆಗಳನ್ನು ಈಡೇರಿಸುತ್ತದೆ ಎನ್ನುವುದನ್ನು ಈ ಪದ್ಯಭಾಗವು ವಿವರಿಸುತ್ತದೆ.ಅಂದರೆ ದೇವಿಪುರಾಣದ ಪಠಣ- ಪಾರಾಯಣದಿಂದ ಭಕ್ತರು ತಮ್ಮ ಸರ್ವ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು ಎಂದರ್ಥ.

ಚಿಂತಾಮಣಿ ಎಂದರೆ ಮನದಲ್ಲಿ ಬಯಸಿದುದನ್ನು ಕೊಡುವ ಮಣಿ,ಶಿಲೆ.ಚಿಂತಾಮಣಿಯನ್ನು‌ಕೈಯಲ್ಲಿ ಹಿಡಿದುಕೊಂಡು’ ನನಗೆ‌ಇದು ಬೇಕು’ ಎಂದರೆ ಆ ವಸ್ತು ಆ ಕೂಡಲೆ ಅಲ್ಲಿ ಲಭ್ಯವಾಗುತ್ತದೆ.ಕಾಮಧೇನು ಎನ್ನುವುದು ದೇವಲೋಕದ ಹಸುವಾಗಿದ್ದು ಅದು ದೇವತೆಗಳ ಬಯಕೆಗಳೆಲ್ಲವನ್ನೂ ಪೂರೈಸುತ್ತದೆ.ದೇವತೆಗಳಿಗೆ ನಮ್ಮಂತೆ ಹಸಿವೆ ಬಾಯಾರಿಕೆಗಳು ಉಂಟಾಗುವುದಿಲ್ಲ.ಅವರ ಬಯಕೆಗಳೇ ಬೇರೆಯಾಗಿರುತ್ತವೆ.ಅವರ ಸಮಸ್ತಬಯಕೆಗಳು ಈಡೇರಿಸಲು ಶಕ್ತವಾಗಿದೆ ಕಾಮಧೇನು.ನಮ್ಮ ಲೋಕದ ಆಕಳುಗಳು ತಮ್ಮ ಕೆಚ್ಚಲಿನಿಂದ ಹಾಲನ್ನು ಸುರಿಸುವಂತೆ ಸುರಧೇನು ದೇವತೆಗಳು ಬೇಡಿದುದೆಲ್ಲವನ್ನು ನೀಡುತ್ತದೆ.ಕಲ್ಪವೃಕ್ಷವೂ ದೇವಲೋಕದ ಗಿಡವಾಗಿದ್ದು ಆ ಗಿಡವು ದೇವತೆಗಳು ಕೇಳಿದ ಎಲ್ಲವನ್ನೂ ನೀಡುತ್ತದೆ.

ಹಿಂದೆ ಋಷಿಗಳು ತಮ್ಮ ಸಿದ್ಧಿಯ ಬಲದಿಂದ ಚಿಂತಾಮಣಿ,ಕಾಮಧೇನು ಮತ್ತು ಕಲ್ಪವೃಕ್ಷಗಳನ್ನು ಪಡೆಯುತ್ತಿದ್ದರು ಎನ್ನುವ ಕಥೆಗಳು ಬರುತ್ತಿವೆ ಪುರಾಣಗಳಲ್ಲಿ.ಕಾರ್ಯವೀರ್ಯ ಮತ್ತು ಜಮದಗ್ನಿ ಋಷಿಯ ಕಥೆಯು ಎಲ್ಲರಿಗೂ ಗೊತ್ತಿರುವಂತಹದ್ದೆ.ಅರಣ್ಯಕ್ಕೆ ಬೇಟೆಗೆಂದು ಸೈನ್ಯಸಮೇತನಾಗಿ ಬಂದಿದ್ದ ಅರಸ ಕಾರ್ತವೀರ್ಯ ಮತ್ತು ಆತನ ಅಪರಿಮಿತ ಸೈನ್ಯಕ್ಕೆ ಜಮದಗ್ನಿ ಋಷಿ ಕಾಮಧೇನುವಿನ ಸಹಾಯದಿಂದ ತೃಪ್ತಿಯಾಗುವಂತೆ ಉಣಬಡಿಸುತ್ತಾನೆ.ಕಾಮಧೇನುವೇ ಅರಸ ಮತ್ತು ಋಷಿ ಜಮದಗ್ನಿಯರ ವಿರಸದ ಕಾರಣವಾಗಿ ಪ್ರಲೋಭಪೀಡಿತನಾದ ಕಾರ್ಯವೀರ್ಯಾರ್ಜುನನು ಋಷಿ ಜಮದಗ್ನಿಯನ್ನು ಕೊಲ್ಲುತ್ತಾನೆ.ತಂದೆಯ ಸಾವಿನಿಂದ ಸಿಟ್ಟಿಗೆದ್ದ ಪರಶುರಾಮನು ಶಿವನನ್ನು‌ಕುರಿತು ಘೋರತಪಸ್ಸು ಮಾಡಿ,ಶಿವನಿಂದ ಕೊಡಲಿಯನ್ನು ಪಡೆದು ಇಪ್ಪತ್ತೊಂದು ಸಲ ಭ್ರೂಪ್ರದಕ್ಷಿಣೆ ಮಾಡಿ ಕಾರ್ತವೀರ್ಯನು ಸೇರಿದಂತೆ ಕ್ಷತ್ರಿಯರ ಕುಲವನ್ನೇ ನಿರ್ನಾಮ ಮಾಡುತ್ತಾನೆ.ಕೊಡಲಿಯನ್ನು ಪರಶು,ಭರ್ಗ ಎಂದು ಕರೆಯುತ್ತಿದ್ದು ಕೊಡಲಿಯನ್ನು ಕೈಯಲ್ಲಿ ಹಿಡಿದ ರಾಮನೇ ಪರಶುರಾಮ ಇಲ್ಲವೆ ಭಾರ್ಗವರಾಮ.

ದುರ್ಗಾದೇವಿಯ ನಾಮಸ್ಮರಣೆ ಮತ್ತು ಆಕೆಯ ಮಹಿಮೆಯಾದ ಶ್ರೀದೇವಿ ಪುರಾಣವನ್ನು ಸದಾಕಾಲವು ಓದುತ್ತಿದ್ದರೆ ಭಕ್ತರು ತಮ್ಮ ಮನೋಭಿಷ್ಟಗಳು ಸುಲಭವಾಗಿ ಈಡೇರಿಸಿಕೊಳ್ಳಬಹುದು ಎನ್ನುವುದು ಈ ಷಟ್ಪದಿಯ ತಾತ್ಪರ್ಯ.

ಯೋಗಿಗಳು,ಸಿದ್ಧರುಗಳು ತಮ್ಮ ಯೋಗಬಲದಿಂದ ಚಿಂತಾಮಣಿ,ಕಾಮಧೇನು ಮತ್ತು ಕಲ್ಪವೃಕ್ಷವನ್ನು ಸಂಪಾದಿಸಬಲ್ಲರು.ವಚನಕಾರ ಜೇಡರ ದಾಸಿಮಯ್ಯನವರ ಭಕ್ತಿಗೆ ಮೆಚ್ಚಿದ ಶಿವನು ದಾಸಿಮಯ್ಯನಿಗೆ ‘ ತವನಿಧಿ’ ಅಂದರೆ ಬೇಡಿದಷ್ಟು ನೀಡುವ ಎಂದೂ ಬರಿದಾಗದ ಅಕ್ಷಯಪಾತ್ರೆಯನ್ನು ನೀಡಿದ ಪ್ರಸಂಗವನ್ನು ಸ್ಮರಿಸಬಹುದು.ಯೋಗಿಯು ತನ್ನ ಯೋಗಬಲದಿಂದ ಪ್ರಕೃತಿಯ ಮೇಲೆ ಪ್ರಭುತ್ವವನ್ನು ಸಂಪಾದಿಸುವನು.ಪ್ರಕೃತಿಯ ಮೇಲಿನ ಪ್ರಭುತ್ವದಿಂದ ವಸ್ತುಗಳ ಗುಣಪರಿವರ್ತನೆ,ಮಾರ್ಪಾಟು ಮಾಡುವ ಸಾಮರ್ಥ್ಯವು ಯೋಗಿಗೆ ಲಭಿಸುತ್ತದೆ.ಯೋಗಸಾಮರ್ಥ್ಯದಿಂದ ಶೂನ್ಯದಿಂದ ಏನನ್ನು ಬೇಕಾದರೂ ಸೃಷ್ಟಿಸಬಹುದು.ವಿಜ್ಞಾನವು ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗುವುದಿಲ್ಲ ಎನ್ನುತ್ತದೆ.ಆದರೆ ಆಧ್ಯಾತ್ಮವು ಶೂನ್ಯವೇ ಸೃಷ್ಟಿಯ ಮೂಲ ಎನ್ನುತ್ತದೆ! ಜನರ ಕಣ್ಣಿಗೆ ಶೂನ್ಯವಾಗಿ ಕಾಣುವ ಬಯಲು ಯೋಗಿಯ ಕಣ್ಣಿಗೆ ಸಂಪತ್ತಾಗಿ ಕಾಣಿಸುತ್ತದೆ. ಅಲ್ಲಮ ಪ್ರಭುದೇವರ ಸಿಂಹಾಸನವು ‘ ಶೂನ್ಯಸಿಂಹಾಸನ’ ಎಂದು ಕರೆಯಲ್ಪಟ್ಟಿದ್ದು ಈ ಅರ್ಥದಲ್ಲಿ.ವಚನಕಾರರು ಸಂಪಾದಿಸಿದ್ದು ‘ಶೂನ್ಯ’ವನ್ನು.ಈ ಶೂನ್ಯವು ನಿರಾಕಾರ ಪರಬ್ರಹ್ಮನಾದ ಪರಶಿವನ ಸಂಕೇತವಾಗಿದ್ದು ಶೂನ್ಯಭೇದನ ಕ್ರಮವನ್ನರಿತ ಯೋಗಿಯು ಶೂನ್ಯದಿಂದ ಏನೆಲ್ಲವನ್ನು ಸೃಷ್ಟಿಸಬಲ್ಲನು.

ಕಾಮಧೇನು ಎಂದರೆ ಸಹಸ್ರಾರದಲ್ಲಿ ಮಧು ಇಲ್ಲವೆ ಅಮೃತವನ್ನು ಸ್ರವಿಸುವ ಯೋಗಧೇನು.ಯೋಗಿಯು ಕುಂಡಲಿನೀಯೋಗದ ಬಲದಿಂದ‌ಕುಂಡಲಿನೀ ಶಕ್ತಿಯನ್ನು ಸಹಸ್ರಾರ ಚಕ್ರಕ್ಕೆ ಏರಿಸಿದರೆ ಅಲ್ಲಿ ಸಹಸ್ರದಳ ಕಮಲದಲ್ಲಿ ಮಧ್ಯೆ ಇರುವ ಪರಶಿವನನ್ನು ಕಾಣುತ್ತಾನೆ.ಆ ಸಹಸ್ರಾರ ಕಮಲದ ಈಶಾನ್ಯ ತುದಿಯಲ್ಲಿ ಕೈಲಾಸಬಿಂದು ಎನ್ನುವ ಸಣ್ಣಬಿಂದು ಇದ್ದು ಅಲ್ಲಿಯೇ ಕಾಮಧೇನು ಎನ್ನುವ ಯೋಗಧೇನು ಇದೆ.ಅಲ್ಲಿಂದ ದಿನಕ್ಕೆ ಒಂದು ತೊಟ್ಟು ಮಧು ಸ್ರವಿಸುತ್ತದೆ.ಆ ಮಧುಪಾನದಿಂದ ಯೋಗಿಯ ಅವಯವಗಳು ಜರಾಮರಣಮುಕ್ತವಾಗುತ್ತವೆ.ಆ ಮಧುವೇ ಅಮೃತವಾಗಿದ್ದು ಆ ಅಮೃತಪಾನದಿಂದಯೋಗಿಯು ಎಷ್ಟುಸಾವಿರ ವರ್ಷಗಳ ಕಾಲವಾದರೂ ಸಾಯದೆ ಬದುಕುಳಿದು ಯೋಗಸಾಧನೆ ಮುಂದುವರೆಸಬಹುದು.ಹಿಮಾಲಯದ ಸುಮೇರು,ಸಿದ್ಧಾಶ್ರಮ ಮತ್ತು ಜ್ಞಾನಗಂಜಾಶ್ರಮ ಮುಂತಾದ‌ಎತ್ತರದ ಯೋಗತಾಣಗಳಲ್ಲಿ ಇಂದಿಗೂ ಋಷಿಗಳು ಯೋಗಬಲದ ಈ ಮಧುಪಾನ ಮಾಡುತ್ತ ಸಾವಿರಾರು ವರ್ಷಗಳಿಂದ ಹಾಗೆಯೇ ಬದುಕಿದ್ದಾರೆ.ಕಥೆಗಳಲ್ಲಿ ಶರಣರು,ಸಂತರು ತಪಸ್ಸು ಮಾಡುವಾಗ ಅವರ ಸುತ್ತ ಹುತ್ತ ಬೆಳೆದು ಕಾಮಧೇನು ಬಂದು ಹಾಲುಕೊಡುತ್ತಿತ್ತು ಎಂದು ಓದುತ್ತೇವಲ್ಲ ಆ ಕಾಮಧೇನುವಿನ ರಹಸ್ಯವೇ ಇದು.ಆ ಕಾಮಧೇನುವನ್ನು ಹೊರಗೆ ಹುಡಕಬೇಕಿಲ್ಲ ಅದು ನಮ್ಮೊಳಗೆ ಇದೆ.ಯೋಗಸಾಧನೆಯ ಬಲದಿಂದ ಕಾಮಧೇನುವನ್ನು ಜಾಗ್ರತಗೊಳಿಸಿಕೊಂಡು ನಾವು ಜರಾಮರಣಮುಕ್ತರಾಗಿ ಜನರಿಗೆ ಅವರು ಬೇಡಿದುದನ್ನು ಕೊಡುವ ಸಾಮರ್ಥ್ಯವನ್ನು ಪಡೆಯಬಲ್ಲೆವು.

ಕಲ್ಪವೃಕ್ಷವು ಮಂತ್ರಸಿದ್ಧಿಯಿಂದ ಲಭಿಸುವ ಸಿದ್ಧಿವಿಶೇಷವು.ಬಸವಣ್ಣನವರು ಇಷ್ಟಲಿಂಗದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದರು.ಇಷ್ಟಲಿಂಗೋಪಾಸನೆಯು ಕರಸ್ಥಳವೇ ಕೈಲಾಸವಾಗುತ್ತದೆ,ಕಲ್ಪವೃಕ್ಷವಾಗುತ್ತದೆ ಎನ್ನುವ ಶಿವಸೂತ್ರವು.ಇಷ್ಟಲಿಂಗೋಪಾಸಕನು ಶಕ್ತಿಯ ನೆಲೆಯಾದ ಎಡಗೈಯ ಹಸ್ತದಲ್ಲಿ ಇಷ್ಟಲಿಂಗವನ್ನಿಟ್ಟುಕೊಂಡು ದೃಷ್ಟಿಯನ್ನಿಟ್ಟು ಅಮನಸ್ಕಯೋಗವನ್ನಾಚರಿಸುವುದರಿಂದ ‘ ಕರದಲ್ಲಿ ಚುಳುಕಾಗುವ’ ಇಷ್ಟಲಿಂಗದ ಶಕ್ತಿಯು ಭಕ್ತನ ಸರ್ವಾಂಗವ್ಯಾಪಿಯಾಗಿ ಅವನ ಬಲಹಸ್ತದಲ್ಲಿ ‘ಅನುಗ್ರಹಶಕ್ತಿ’ ಯಾಗಿ ಮಾರ್ಪಡುತ್ತದೆ.ಅಂತಹ ಲಿಂಗಾಂಗಸಾಮರಸ್ಯವನ್ನು ಸಾಧಿಸಿದ ಲಿಂಗೋಪಾಸಕನು ನುಡಿದದ್ದು ನಡೆಯುತ್ತದೆ,ಹಿಡಿದ ಕಾರ್ಯ ಫಲಿಸುತ್ತದೆ.
ಶ್ರೀಗುರುವು ತನ್ನ ಶಿಷ್ಯನ ಮಸ್ತಕದ ಮೇಲೆ ತನ್ನ ವರದಹಸ್ತವನ್ನಿರಿಸುವ ಮೂಲಕ ಶಿಷ್ಯನಲ್ಲಿ ಶಕ್ತಿಪಾತವನ್ನುಂಟು ಮಾಡುತ್ತಾನೆ.ಗುರು ಶಿಷ್ಯನ ಕರಸ್ಥಳವನ್ನೇ ತನ್ನ ನೆಲೆಯಾಗಿರಿಸಿಕೊಂಡು ಆ ಮೂಲಕ ಭಕ್ತರನ್ನು ಉದ್ಧರಿಸುತ್ತಾನೆ.ಬಲಗೈ ಹಸ್ತವನ್ನು ತೋರಿಸಿ,ಆಶೀರ್ವಾದ ಮಾಡುವುದು ‘ ಈ ಹಸ್ತವು ವರದಹಸ್ತವಾಗಿದೆ’ ಈ ಹಸ್ತವೇ ಕಲ್ಪವೃಕ್ಷವಾಗಿದ್ದು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಸಾಮರ್ಥ್ಯವನ್ನು ಹೊಂದಿದೆ’ ಎನ್ನುವುದರ ಸಂಕೇತ.ಗುರು ಶಿಷ್ಯರನ್ನು,ಗುರು ಭಕ್ತರನ್ನು ಅನುಗ್ರಹಿಸುವಾಗ ತನ್ನ ಬಲದ ಹಸ್ತವನ್ನು ತೋರಿ ಆಶೀರ್ವದಿಸುವುದು ಈ ಕಾರಣದಿಂದ.ನನ್ನ ಹಸ್ತದಲ್ಲಿ ಸಂಗ್ರಹವಾಗಿರುವ ಶಿವಶಕ್ತಿಯು ನಿಮ್ಮನ್ನು ಉದ್ಧರಿಸಲಿ,ಅನುಗ್ರಹಿಸಲಿ ಎಂದು ಗುರುವಾದವನು ಆಶೀರ್ವದಿಸುವನು.ಶ್ರೀಗುರುವಿನ ಕರಸ್ಥಲದಲ್ಲಿ ಸಂಚಯವಾಗಿರುವ ಯೋಗಶಕ್ತಿಯು ಸೂಕ್ಷ್ಮವಾಗಿ ಶಿಷ್ಯ ಇಲ್ಲವೆ ಭಕ್ತನ ಶರೀರದಲ್ಲಿ ಪ್ರವೇಶಿಸಿ ಅವನ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿಕೊಡುತ್ತದೆ.ಶ್ರೀದೇವಿ ಪುರಾಣದಲ್ಲಿ ಜಗನ್ಮಾತೆಯಾದ ದುರ್ಗಾದೇವಿಯು ನೆಲೆನಿಂತಿರುವುದರಿಂದ ಪುರಾಣದ ಪಠಣೆ ಪಾರಾಯಣದಿಂದ ಭಕ್ತರ ಸರ್ವಾಭಿಷ್ಟಗಳು ನಿಶ್ಚಯವಾಗಿ ಸಿದ್ಧಿಸುತ್ತವೆ.

( ಮುಂದುವರೆಯುತ್ತದೆ)

About The Author