ಮೂರನೇ ಕಣ್ಣು : ಸಂವಿಧಾನವನ್ನು ಒಪ್ಪದವರು ಸನಾತನ ಧರ್ಮವನ್ನು ಎತ್ತಿಹಿಡಿಯಬೇಕು ಎನ್ನುತ್ತಾರೆ ! : ಮುಕ್ಕಣ್ಣ ಕರಿಗಾರ

    ಈಗ ಎಲ್ಲೆಲ್ಲೂ ಸನಾತನ ಧರ್ಮದ ರಣಕಹಳೆ ಮೊಳಗಿದಂತೆ ಕಾಣಿಸುತ್ತದೆ.ಸ್ವತಃ ದೇಶವನ್ನಾಳುವ ಪ್ರಧಾನಮಂತ್ರಿಗಳೇ ‘ ಸನಾತನ ಧರ್ಮ ದ ರಕ್ಷಣೆ’ ದೇಶದ ಪ್ರಜೆಗಳ ಮೂಲಭೂತ ಕರ್ತವ್ಯ ಎನ್ನುವಂತೆ ಮಾತನಾಡುತ್ತಿರುವುದರಿಂದ ಪ್ರಧಾನ ಮಂತ್ರಿಗಳ ಆವೇಶದ ಭಾಷಣದ ಪ್ರಭಾವಕ್ಕೆ ಒಳಗಾದ ಅವರ ಅಸಂಖ್ಯಾತ ಅಭಿಮಾನಿಗಳು,ಬಿಜೆಪಿ ಪಕ್ಷದವರು ಸನಾತನಧರ್ಮದ ರಕ್ಷಣೆಗಾಗಿ ಯಾವ ತ್ಯಾಗಕ್ಕೂ ಸಿದ್ಧರಿರಬಹುದು.! ( ದುರ್ದೈವದ ಸಂಗತಿ ಎಂದರೆ ಸನಾತನ ಧರ್ಮದ ರಕ್ಷಣೆಗಾಗಿ ಯಾವ ತ್ಯಾಗಕ್ಕೂ ಸಿದ್ಧರಿರಬೇಕಾದ ಜನರು ಸನಾತನ ಧರ್ಮ ವಿರೋಧಿಗಳ ‘ತಲೆಕಡಿಯಿರಿ’, ‘ ನಾಲಿಗೆ ಕತ್ತರಿಸಿ’ ಎನ್ನುವ ಉತ್ತರ ಕುಮಾರನ ಪೌರುಷ ಪ್ರದರ್ಶನ ಮಾಡುತ್ತಿದ್ದಾರೆ)ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಗಳಾಗಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾದ ಸಾಂವಿಧಾನಿಕ ಜವಾಬ್ದಾರಿಯನ್ನುಳ್ಳವರು. ದೇಶದ ಪ್ರಜೆಗಳೆಲ್ಲರೂ ಸಮಾನರು ಎಂದು ಘೋಷಿಸುವ ನಮ್ಮ ಸಂವಿಧಾನವು’ ಜಾತ್ಯತೀತ ( secular) ಮೌಲ್ಯವನ್ನು ಪ್ರತಿಪಾದಿಸಿದೆಯೇ ಹೊರತು ಯಾವುದೇ ಧರ್ಮವನ್ನು ಭಾರತದ ರಾಷ್ಟ್ರೀಯಧರ್ಮ ಎಂದು ಒಪ್ಪಿಲ್ಲ.’ಸೆಕ್ಯೂಲರ್’ ಪದವು ಬರಿ ಜಾತ್ಯಾತೀತ ಎನ್ನುವ ಅರ್ಥವನ್ನು ಮಾತ್ರ ಧ್ವನಿಸದೆ ಧರ್ಮನಿರಪೇಕ್ಷತೆಯ ಅರ್ಥವನ್ನು ಹೊರಹೊಮ್ಮಿಸುತ್ತಿದೆ.’ ಧರ್ಮನಿರಪೇಕ್ಷತೆ’ ಎಂದರೆ ಧರ್ಮದ ಬಗೆಗೆ ಉದಾಸೀನಭಾವವಲ್ಲ,ನಿರ್ಲಿಪ್ತ ಮನೋಭಾವ.ಭಾರತದ ಪ್ರಧಾನಮಂತ್ರಿಗಳಾಗಿ ನರೇಂದ್ರ ಮೋದಿಯವರು ಇಂತಹ ಧಾರ್ಮಿಕ ನಿರ್ಲಿಪ್ತಭಾವವನ್ನು ಹೊಂದಿರಬೇಕೇ ಹೊರತು ಅವರು ಸನಾತನಧರ್ಮದ ಪರವಾಗಿ ವಕಾಲತ್ತು ವಹಿಸಬಾರದು.ಒಂದು ವಿಷಯವನ್ನು ಪ್ರಧಾನಮಂತ್ರಿಯವರು ಮರೆತಂತೆ ಇದೆ,ಅವರು ಭಾರತದ ಪ್ರಧಾನಮಂತ್ರಿಗಳು,ಬಿಜೆಪಿಯವರಿಗಷ್ಟೇ ಪ್ರಧಾನಮಂತ್ರಿಗಳಲ್ಲ! ಭಾರತ ಎಂದರೆ140 ಕೋಟಿ ಜನತೆಯನ್ನುಳ್ಳ ದೇಶ,ಕೇವಲ 3% ನಷ್ಟು ಇರುವ ಜನರ ಭೂಪ್ರದೇಶವಲ್ಲ.ಒಂದುನೂರಾ ನಲವತ್ತು ಕೋಟಿಗಳಲ್ಲಿ ಸಾವಿರಾರು ಜಾತಿಗಳು,ಹತ್ತಾರುಧರ್ಮಗಳು,ನೂರಾರು ಭಾಷೆಗಳನ್ನಾಡುವ ಜನರಿದ್ದಾರೆ.ಆ ಎಲ್ಲ ಜನರನ್ನು ಪ್ರಧಾನಮಂತ್ರಿಯವರು ಪ್ರತಿನಿಧಿಸಬೇಕು.

‘ ವೈವಿಧ್ಯತೆಯಲ್ಲಿ ಏಕತೆ’ ಎನ್ನುವುದು ನಮ್ಮ ದೇಶದ ವಿಶೇಷವಾದರೆ ಆ ವಿಶೇಷಕ್ಕೆ ಕಾರಣವಾದುದು ನಮ್ಮ ಸಂವಿಧಾನ.ಭಾರತೀಯರೆಲ್ಲರೂ ಸಮಾನರು ಎಂದು ಘೋಷಿಸುವ ಸಂವಿಧಾನವು ಭಾರತೀಯರೆಲ್ಲರನ್ನು ಭ್ರಾತೃತ್ವಭಾವನೆಯಲ್ಲಿ ಬೆಸೆದು,ಒಂದುಗೂಡಿಸಿದ್ದರಿಂದಲೇ ‘ವಿವಿಧತೆಯಲ್ಲಿ ಏಕತೆ’ ಯನ್ನು ಕಾಣಲು ಸಾಧ್ಯವಾಗಿದೆ.ಸ್ವತಂತ್ರ ಭಾರತದ ರಾಷ್ಟ್ರೀಯ ಗ್ರಂಥ ಎಂದರೆ ಅದು ಸಂವಿಧಾನವೇ.ಹಿಂದೂ,ಮುಸ್ಲಿಂ,ಕ್ರೈಸ್ತ,ಜೈನ,ಬೌದ್ಧ,ಪಾರ್ಸಿ,ಸಿಖ್ಖ ಮತಧರ್ಮೀಯರೂ ಸೇರಿದಂತೆ ಎಲ್ಲ ಭಾರತೀಯರಿಗೆ ಏಕರೂಪವಾಗಿ ಅನ್ವಯವಾಗುತ್ತದೆ ನಮ್ಮ ಸಂವಿಧಾನ.ಈ ದೇಶದಲ್ಲಿ ಖಾಸಗಿ ಬದುಕಿನಲ್ಲಿ ಯಾರು ಯಾವ ಮತಧರ್ಮವನ್ನಾದರೂ ಒಪ್ಪಿ,ಆರಾಧಿಸಬಹುದು ಆದರೆ ಸಾರ್ವಜನಿಕ ಬದುಕಿನಲ್ಲಿ ಸಂವಿಧಾನವೇ ಪರಮಾದರ್ಶ,ಪರಮಪ್ರಮಾಣ.ಸಂವಿಧಾನವನ್ನು ಒಪ್ಪುವುದಿಲ್ಲ ಎನ್ನುವುದು ಸಣ್ಣತನ,ರಾಷ್ಟ್ರೀಯ ವಿರೋಧಿ ಭಾವನೆ.ಭಾರತದ ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಬೇಕು ಎನ್ನುವವರಿಗೆ ಸಂವಿಧಾನದ ಹೊರತು ಬೇರೊಂದು ಸಾಧನವೇ ಇಲ್ಲ.ಸಂವಿಧಾನದ ಬಲದಿಂದ ಮಾತ್ರ ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿಯಲು ಸಾಧ್ಯ.ಸಂವಿಧಾನವನ್ನು ಗೌರವಿಸದೆ ದೇಶ ಕಟ್ಟುತ್ತೇನೆ ಎಂದರೆ ಸಾಧ್ಯವಿಲ್ಲ.ಸಂವಿಧಾನವನ್ನು ಗೌರವಿಸದೆ ದೇಶದ ಜನಸಮಸ್ತರ ಗೌರವಾದರಗಳಿಗೆ‌ ಪಾತ್ರರಾಗಲು ಸಾಧ್ಯವಿಲ್ಲ.

ಭಾರತದ ಸಂವಿಧಾನದಲ್ಲಿ ಅಡಕಗೊಳಿಸಿದ ‘ ಧರ್ಮನಿರಪೇಕ್ಷತೆ’ ಯ ತತ್ತ್ವವು ಭಾರತದ ಮೂಲಮೌಲ್ಯ,ಆದಿ ಸಿದ್ಧಾಂತ.ಸನಾತನಧರ್ಮವಾದಿಗಳು ವೇದಸಂಸ್ಕೃತಿಯನ್ನು ಅರ್ಥಮಾಡಿಕೊಂಡಿಲ್ಲ.ವೇದ ಸಂಸ್ಕೃತಿಯು ‘ಏಕತೆಯಲ್ಲಿ ವೈವಿಧ್ಯತೆ’ಯನ್ನು ಪ್ರತಿಪಾದಿಸಿದ ಋಷಿಗಳ ಆದರ್ಶ ಸಂಸ್ಕೃತಿಯೇ ಹೊರತು ಏಕೇಶ್ವರವಾದ,ಏಕಗ್ರಂಥದ ಪಾರಮ್ಯದ ವಿಭಜಿಸುವ ಸಂಸ್ಕೃತಿಯಲ್ಲ.ಸನಾತನವಾದಿಗಳು ಸಾರಹೊರಟಿರುವ ಮನುಸ್ಮೃತಿ ಮತ್ತು ಭಗವದ್ಗೀತೆಗಳು ವೇದಕ್ಕೆ ವಿರುದ್ಧವಾದವುಗಳು .ಬಹಳಷ್ಟು ಜನ ಸನಾತನವಾದಿಗಳು ವೇದವನ್ನು,ಉಪನಿಷತ್ತುಗಳನ್ನು ಓದಿಲ್ಲ.ವೇದ- ಉಪನಿಷತ್ತುಗಳು ಓದಿ,ಅರ್ಥೈಸಿಕೊಂಡ ಯಾರೇ ಆಗಲಿ ಸನಾತನಧರ್ಮವೆಂದರೆ ಹಿಂದೂ ಧರ್ಮ ಎಂದು ಅರ್ಥೈಸುವ ಅನರ್ಥಪರಂಪರೆಯನ್ನು ಬೆಂಬಲಿಸಲಾರರು.ವೇದ ಪ್ರಮಾಣವನ್ನು ಒಪ್ಪುವವರು ಮನುಸ್ಮೃತಿಯನ್ನು ಆದರ್ಶಗ್ರಂಥ ಎಂದಾಗಲಿ,ಭಗವದ್ಗೀತೆಯು ನಮ್ಮ ರಾಷ್ಟ್ರೀಯ ಗ್ರಂಥ ಎಂದಾಗಲಿ ಒಪ್ಪಲುಸಾಧ್ಯವೇ ಇಲ್ಲ.ನಾನು ವೇದಸಂಸ್ಕೃತಿಯು ಭೇದರಹಿತ ಸಂಸ್ಕೃತಿ ಎಂದು ಸಾರುವುದನ್ನು ಅರೆಜ್ಞಾನಿಗಳಾದ ಕೆಲವರು ಆಕ್ಷೇಪಿಸಿದ್ದೂ ಉಂಟು.ಅವರ ‘ಭೀಕರಬರಪೀಡಿತಬುದ್ಧಿ’ಯ ಬಗ್ಗೆ ನನ್ನಲ್ಲಿ ಅನುಕಂಪ ಇದೆ.ವೇದವನ್ನು,ಉಪನಿಷತ್ತುಗಳನ್ನು ಓದದೆ,ವಾಟ್ಸಾಪ್ ಗಳಲ್ಲಿ ‘ಉಪದ್ರವಜೀವಿಗಳು’ ಹಂಚಿಕೊಳ್ಳುವ ಬರಹಗಳನ್ನೇ ಪ್ರಮಾಣ ಎಂದು ಒಪ್ಪುವವರ ಅಜ್ಞಾನಕ್ಕೆ ಅನುಕಂಪದ ಹೊರತು ಬೇರೆ ಪ್ರತಿಕ್ರಿಯೆಯ ಅಗತ್ಯವಿಲ್ಲ.ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ ಅವರು ಭಾರತದ ಪುರಾಣಗಳನ್ನು,ಮನುಸ್ಮೃತಿಯಾದಿ ಸ್ಮೃತಿ,ಸಂಹಿತೆಗಳನ್ನು,ರಾಮಾಯಣ- ಮಹಾಭಾರತ ಕಾವ್ಯಗಳನ್ನು ಆಮೂಲಾಗ್ರವಾಗಿ ಓದಿದ್ದರೆಂದೇ ಅವುಗಳ ಟೊಳ್ಳುತನವನ್ನು ಬಯಲಿಗೆ ಎಳೆದರು.ವೇದ ಉಪನಿಷತ್ತುಗಳನ್ನು ಓದಿದವರಿಗೆ ಭಾರತದ ಮೂಲಸಂಸ್ಕೃತಿಯು ಭಾರತದ ಮೂಲನಿವಾಸಿಗಳಾದ ಶೂದ್ರರ ಸಮಾನತೆ,ಸಹೋದರತೆಯ ‘ ವಸುದೈವ ಕುಟುಂಬಕಂ’ ಸಂಸ್ಕೃತಿಯಾಗಿತ್ತು ಎನ್ನುವುದು ಅರ್ಥವಾಗುತ್ತದೆ.ವೇದ,ಉಪನಿಷತ್ತುಗಳಲ್ಲಿ ಪ್ರವಹಿಸುತ್ತ ಬಂದಿದ್ದ ಭಾರತೀಯ ಋಷಿಗಳ ಉನ್ನತ ಜೀವನಾದರ್ಶಗಳು,ಮಹಾಮೌಲ್ಯಗಳು ನಮ್ಮ ಸಂವಿಧಾನದಲ್ಲಿ ಅಭಿವ್ಯಕ್ತಿಗೊಂಡಿವೆ.ವೇದದ ಋಷಿಗಳು ಪ್ರಾಚೀನ ಋಷಿಗಳಾದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಅರ್ವಾಚೀನ ಋಷಿಗಳು.ವೇದದ ಋಷಿಗಳಷ್ಟೇ ದಾರ್ಶನಿಕರಾಗಿದ್ದರು ಬಾಬಾಸಾಹೇಬ ಅಂಬೇಡ್ಕರ್ ಅವರು.ವೇದಗಳು ಪ್ರಾಚೀನರ ಆದರ್ಶವಾಗಿದ್ದರೆ ಸಂವಿಧಾನವು ಇಂದಿನವರಾದ ನಮ್ಮ ಅಗತ್ಯ,ಅನಿವಾರ್ಯ.

ಭಾರತದಲ್ಲಿ ಯಾವ ಕಾಲಕ್ಕೂ ಒಂದು ಧರ್ಮವು ರಾಷ್ಟ್ರೀಯ ಧರ್ಮವಾಗಿರಲಿಲ್ಲ; ಯಾವುದೇ ಒಂದು ಗ್ರಂಥವು ಧರ್ಮಗ್ರಂಥವಾಗಿರಲಿಲ್ಲ.ಆಧುನಿಕ ಯುಗಧರ್ಮಕ್ಕನುಗುಣವಾಗಿ ಎಲ್ಲ ದೇಶಗಳು ಆಯಾ ದೇಶಗಳಸಂವಿಧಾನಗಳನ್ನು ರಾಷ್ಟ್ರೀಯ ಗ್ರಂಥಗಳನ್ನಾಗಿ ಹೊಂದಿರುವಂತೆ ಭಾರತೀಯರಾದ ನಮಗೆಲ್ಲರಿಗೂ ನಮ್ಮ ಸಂವಿಧಾನವೇ ರಾಷ್ಟ್ರೀಯ ಗ್ರಂಥವಾಗಬೇಕು.ಮನುಸ್ಮೃತಿಯಾಗಲಿ,ಭಗವದ್ಗೀತೆಯಾಗಲಿ ಸಮಾನತೆಯನ್ನು ಎತ್ತಿ ಹಿಡಿಯುವುದಿಲ್ಲ.ಮನುಸ್ಮೃತಿಯಾಗಲಿ,ಭಗವದ್ಗೀತೆಯಾಗಲಿ ಶೂದ್ರರು,ದಲಿತರುಗಳು ಘನತೆಯಿಂದ ಬದುಕುವ ಹಕ್ಕನ್ನು ಪ್ರತಿಷ್ಠಾಪಿಸಿಲ್ಲ.’ಸ್ವಧರ್ಮಕ್ಕಾಗಿ ಸಾಯುವುದೇ ಶ್ರೇಷ್ಠ’ ಎಂದು ಸಾರುವ ಭಗವದ್ಗೀತೆಯು ಹಿಂದೂಗಳಲ್ಲದವರಿಗೆ ಹೇಗೆ ಆದರ್ಶವಾಗಲು ಸಾಧ್ಯ? ಶೂದ್ರರನ್ನು ಜೀವಚ್ಛವಗಳನ್ನಾಗಿಸಿದ ಮನುಸ್ಮೃತಿಯು ಅದು ಹೇಗೆ ರಾಷ್ಟ್ರೀಯ ಆದರ್ಶವಾಗಬಲ್ಲದು? ಎಲ್ಲರ ಅಭ್ಯುದಯವನ್ನು ಬಯಸುವ,ಎಲ್ಲರಿಗೂ ಉನ್ನತಿಕೆಯ,ಉತ್ತಮಿಕೆಯ ಅವಕಾಶಗಳನ್ನು ನೀಡುವ ನಮ್ಮ ಸಂವಿಧಾನವೇ ನಮ್ಮ ಸರ್ವೋತ್ಕೃಷ್ಟ ಆದರ್ಶ,ರಾಷ್ಟ್ರೀಯ ಗ್ರಂಥ.

About The Author