ಮೂರನೇ ಕಣ್ಣು : ಗಬ್ಬೂರಿನ ಐತಿಹಾಸಿಕ ಸ್ಥಳಗಳು,ಸ್ಮಾರಕಗಳನ್ನು ರಕ್ಷಿಸುವುದು ನಾಗರಿಕರ ಸಾಂವಿಧಾನಿಕ ಹೊಣೆಗಾರಿಕೆ : ಮುಕ್ಕಣ್ಣ ಕರಿಗಾರ

ಗಬ್ಬೂರನ್ನು ಯುನೆಸ್ಕೋ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲು ಸರಕಾರದ ಗಮನಸೆಳೆಯುವ ಉದ್ದೇಶದಿಂದ 14.08.2023 ರಂದು ನಾನು ‘ ಗಬ್ಬೂರು– ಯುನೆಸ್ಕೊ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರುವ ಅರ್ಹತೆ ಪಡೆದ ಮಹತ್ವದ ಐತಿಹಾಸಿಕ ಗ್ರಾಮ’ ಎನ್ನುವ ಒಂದು ಲೇಖನವನ್ನು ಬರೆದು ಗಬ್ಬೂರಿನಲ್ಲಿ ಐತಿಹಾಸಿಕ ಮಹತ್ವದ ನೂರೈವತ್ತಕ್ಕೂ ಹೆಚ್ಚು ದೇವಸ್ಥಾನಗಳು ಹಾಗೂ ಸ್ಮಾರಕಗಳಿರುವ ಬಗ್ಗೆ ಸಾರ್ವಜನಿಕರ ಗಮನಸೆಳೆದಿದ್ದೆ.ಗಬ್ಬೂರಿನ ವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಅರ್ಚಕ ವರ್ಗದವರು ಸಾರ್ವಜನಿಕರ ನೆರವಿನೊಂದಿಗೆ ಶ್ರಮಿಸುತ್ತಿರಬಹುದು .ಐತಿಹಾಸಿಕ ಮಹತ್ವದ ಮೇಲುಶಂಕರ ದೇವಸ್ಥಾನದ ಮೂಲ ಶಂಕರಲಿಂಗವನ್ನು ಬದಲಿಸಿದ್ದು,ನಂದಿ ವಿಗ್ರಹವನ್ನು ಸ್ಥಾಪಿಸಿದ್ದು ಮತ್ತು ಗರುಡಗಂಬವನ್ನು ನಿರ್ಮಿಸುವ ಮೂಲಕ ದೇವಸ್ಥಾನದ ಪಾರಂಪರಿಕ ಮಹತ್ವಕ್ಕೆ ಧಕ್ಕೆ ತರಲಾಗಿದೆ.ಮತ್ತಷ್ಟು ಪ್ರಾಚೀನ ದೇವಸ್ಥಾನಗಳು ಕೆಲವರ ಸ್ವಾರ್ಥಸಾಧನೆಗೆ ಜೀರ್ಣೋದ್ಧಾರದ ಹೆಸರಿನಲ್ಲಿ ಹಾಳಾಗಬಾರದು ಎನ್ನುವ ಉದ್ದೇಶದಿಂದ ಕಾನೂನಿನ ಅರಿವನ್ನುಂಟು ಮಾಡುವ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ.

ಇತಿಹಾಸ ಪ್ರಸಿದ್ಧ ಗ್ರಾಮವಾಗಿರುವ ಗಬ್ಬೂರಿನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ,ಮೇಲುಶಂಕರ ದೇವಸ್ಥಾನಗಳು ಸೇರಿದಂತೆ ಐತಿಹಾಸಿಕ ದೇವಸ್ಥಾನಗಳೆಲ್ಲವೂ ಗಬ್ಬೂರಿನ ಸಾರ್ವಜನಿಕ ಆಸ್ತಿ,ಯಾರೊಬ್ಬರ ಅಥವಾ ಯಾವುದೇ ಜಾತಿಯ ಖಾಸಗಿ ಆಸ್ತಿ ಅಲ್ಲ.ಖಾಸಗಿಯಾಗಿ ಸ್ಥಾಪಿಸಲ್ಪಟ್ಟ ಮಠ- ಮಂದಿರಗಳು ಮಾತ್ರ ಸಾರ್ವಜನಿಕ ಆಸ್ತಿಯ ಅರ್ಥ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತವೆ.ಗಬ್ಬೂರಿನ ಎಲ್ಲ ಪುರಾತನ ದೇವಸ್ಥಾನಗಳು,ಪುಷ್ಕರಣಿಗಳು,ಸ್ಮಾರಕಗಳು “ಐತಿಹಾಸಿಕ ಮಹತ್ವದ ಸ್ಥಳ” ಗಳ ಪಟ್ಟಿಯಲ್ಲಿ ಬರುತ್ತವೆ.ಐತಿಹಾಸಿಕ ಮಹತ್ವದ ಸ್ಥಳಗಳನ್ನು ಸಂರಕ್ಷಿಸುವುದು ಗಬ್ಬೂರಿನ ನಾಗರಿಕರೆಲ್ಲರ ಕರ್ತವ್ಯ.ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥವಾಗಿದ್ದು ಈ ದೇಶದಲ್ಲಿ ಸಂವಿಧಾನಕ್ಕಿಂತ ಯಾರೂ ದೊಡ್ಡವರಿಲ್ಲ.ಸಂವಿಧಾನದ ವಿಧಿ- ನಿಯಮಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ.ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಮಾನತೆಯ ಹಕ್ಕನ್ನು ಪ್ರತಿಪಾದಿಸಿ ಭಾರತೀಯ ನಾಗರಿಕರೆಲ್ಲರೂ ಸಮಾನರು ಎಂದು ಸಾರಿದ್ದಲ್ಲದೆ ಐತಿಹಾಸಿಕ ಮಹತ್ವದ ದೇವಸ್ಥಾನ,ಸ್ಮಾರಕಗಳ ರಕ್ಷಣೆಯೂ ಮಹತ್ವದ ಕಾರ್ಯವೆಂದು ಬಗೆದು ಐತಿಹಾಸಿಕ ಸ್ಥಳಗಳ ಸಂರಕ್ಷಣೆಯ ಬಗ್ಗೆ ಸಂವಿಧಾನದಲ್ಲಿಯೇ ಅವಕಾಶ ಕಲ್ಪಿಸಿದ್ದಾರೆ ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ.ಹಾಗಾಗಿ ಗಬ್ಬೂರಿನಲ್ಲಿ ಕೆಲವರು ಗಬ್ಬೂರಿನ ಸಾರ್ವಜನಿಕರೆಲ್ಲರ ಸ್ವತ್ತು ಆಗಿರುವ ಐತಿಹಾಸಿಕ ಮಹತ್ವದ ಸ್ಥಳಗಳನ್ನು ತಮ್ಮ ಮನಸ್ಸಿಗೆ ಬಂದಂತೆ ಮಾರ್ಪಾಟು ಮಾಡುವ,ವಿರೂಪಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.ಇಂತಹ ದುಸ್ಸಾಹಸವು ಸಂವಿಧಾನ ಬಾಹಿರ ಕೃತ್ಯವೆಂದೂ ಸಂವಿಧಾನದ ನಿಯಮಗಳಡಿ ರಚಿಸಲ್ಪಟ್ಟ ಭಾರತೀಯ ದಂಡಸಂಹಿತೆ( Indian Penal Code) ನ ನಿಯಮಗಳಂತೆ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಸಾರ್ವಜನಿಕರ ಗಮನಕ್ಕೆ ತಂದು,ಇಂತಹ ದುಸ್ಸಾಹಸವನ್ನು ಮುಂದುವರೆಸದೆ ಇರಲು ತಿಳಿವಳಿಕೆ ನೀಡುತ್ತಿದ್ದೇನೆ.ನೆಲದ ಕಾನೂನನ್ನು ಗೌರವಿಸುವುದು ಎಲ್ಲರ ಕರ್ತವ್ಯ.

‌ ಸಂವಿಧಾನದ ಅನುಚ್ಛೇದಗಳನ್ನು ವಿವರಿಸುವ ಮುಂಚೆ ಗಬ್ಬೂರಿನ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ,ಮೇಲುಶಂಕರ ದೇವಸ್ಥಾನ,ನೀಲಕಂಠೇಶ್ವರ ದೇವಸ್ಥಾನ,ಆಂಜನೇಯ ದೇವಸ್ಥಾನ,ವೀರಭದ್ರೇಶ್ವರ ದೇವಸ್ಥಾನಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ದೇವಸ್ಥಾನಗಳ ಪೂಜಾದಿ ಕಾರ್ಯಗಳು ಸುಗಮವಾಗಿ ನಡೆಯಲಿ ಎಂದು ಆ ದೇವಸ್ಥಾನಗಳ ಅರ್ಚಕ ವರ್ಗದವರಿಗೆ ದೇವಸ್ಥಾನಗಳ ಹೆಸರಿನಲ್ಲಿ ಇನಾಂ ಭೂಮಿಯನ್ನು ನೀಡಲಾಗಿದೆ.ಇಂತಹ ಇನಾಂ ಭೂಮಿಯ ಬಗ್ಗೆ ಸರಕಾರಿ ದಾಖಲೆಗಳಲ್ಲಿ ಉಲ್ಲೇಖವಿದೆ.ದೇವಸ್ಥಾನಗಳ ಹೆಸರಿನಲ್ಲಿ ನೀಡಿರುವ ಇನಾಂ ಭೂಮಿಯನ್ನು ಮಾರಾಟಮಾಡುವುದಕ್ಕಾಗಲಿ ಇಲ್ಲವೆ ಸ್ವಂತ ಹೆಸರಿಗೆ ಹಕ್ಕು ವರ್ಗಾವಣೆ ಮಾಡಿಕೊಳ್ಳುವುದಕ್ಕಾಗಿ ನಿಯಮಗಳಲ್ಲಿ ಅವಕಾಶವಿಲ್ಲ.ಹಾಗಾಗಿ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಅರ್ಚಕ ವರ್ಗದವರಾಗಲಿ ಅಥವಾ ಮೇಲುಶಂಕರ ದೇವಸ್ಥಾನದ ಅನಧಿಕೃತ ವ್ಯವಸ್ಥಾಪಕ ಮಂಡಳಿಯವರಾಗಲಿ ದೇವಸ್ಥಾನಕ್ಕಾಗಲಿ ಊರಿನ ಸಾರ್ವಜನಿಕರಿಗಾಗಿ ಯಾವ ಉಪಕಾರವನ್ನು ಮಾಡುತ್ತಿಲ್ಲ,ಬದಲಿಗೆ ದೇವಸ್ಥಾನದ ಹೆಸರಿನಲ್ಲಿ ಸರಕಾರವು( ನಿಜಾಂ ಸರ್ಕಾರ) ನೀಡಿದ ಭೂಮಿಯನ್ನು ಅನುಭವಿಸುತ್ತ ಪೂಜಾ ಸೇವಾದಿ ಕೈಂಕರ್ಯಗಳನ್ನು ನಡೆಸುತ್ತಿದ್ದೇವೆ ಎಂದು ತಿಳಿದುಕೊಂಡರೆ ಸಾಕು.

ಭಾರತದ ಸಂವಿಧಾನದ ಅನುಚ್ಛೇದ 49 ರಂತೆ ಐತಿಹಾಸಿಕ,ಪಾರಂಪರಿಕ ಕಟ್ಟಡಗಳನ್ನು ರಕ್ಷಿಸುವುದು ರಾಜ್ಯದ ಅಂದರೆ ಸರ್ಕಾರದ ಕರ್ತವ್ಯ. ಸಂವಿಧಾನದ 49ನೆಯ ಅನುಚ್ಛೇದವು “ಕಲಾತ್ಮಕ ಅಥವಾ ಐತಿಹಾಸಿಕ ಆಸಕ್ತಿ ಹುಟ್ಟಿಸುವ ಪ್ರತಿಯೊಂದು ಸ್ಮಾರಕವನ್ನು ಅಥವಾ ಸ್ಥಳವನ್ನು ಅಥವಾ ವಸ್ತುವನ್ನು,ಸಂದರ್ಭಾನುಸಾರ,ಅಪಹರಿಸದಂತೆ,ವಿರೂಪಗೊಳಿಸದಂತೆ,ನಾಶಗೊಳಿಸದಂತೆ,ತೆಗೆದುಕೊಂಡು ಹೋಗದಂತೆ,ವಿಲೇ ಮಾಡದಂತೆ ಅಥವಾ ರಫ್ತು ಮಾಡದಂತೆ ಸಂರಕ್ಷಿಸುವುದು ರಾಜ್ಯದ ಹೊಣೆಯಾಗಿರತಕ್ಕದ್ದು” ಎನ್ನುತ್ತದೆ. ಸಂವಿಧಾನದ ಮೂಲಭೂತ ಕರ್ತವ್ಯಗಳು ಭಾಗದ 51 ಎ ನಿಯಮದ 51 ಎ ( ಐ) ಉಪನಿಯಮವು” ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು” ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರತಕ್ಕದ್ದು ಎಂದು ನಿಯಮಿಸಿದೆ.ಸಂವಿಧಾನದ ಈ ಅನುಚ್ಛೇದಗಳಂತೆ ದೇಶದ ಲಕ್ಷಾಂತರ ದೇವಸ್ಥಾನಗಳ ನಿರ್ವಹಣೆಯ ಹೊಣೆ ಹೊತ್ತಿರುವ ನವದೆಹಲಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಭಾರತೀಯ ಪುರಾತತ್ವ ಇಲಾಖೆ( ASI) ಯ ಪ್ರಾಚೀನ ದೇವಸ್ಥಾನಗಳು,ಸ್ಮಾರಕಗಳ ಸುದೀರ್ಘ ಪಟ್ಟಿಯನ್ನು ತನ್ನ ಬಳಿ ಇಟ್ಟುಕೊಂಡಿದೆ. ಎ ಎಸ್ ಐ ಯ ಪಟ್ಟಿಯಲ್ಲಿರುವ ಪ್ರಾಚೀನ,ಐತಿಹಾಸಿಕ ದೇವಸ್ಥಾನಗಳ ಪಟ್ಟಿಯಲ್ಲಿ ಗಬ್ಬೂರಿನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಮತ್ತು ಮೇಲುಶಂಕರ ದೇವಸ್ಥಾನಗಳಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು.ಇಂತಹ ಪ್ರಾಚೀನ ,ಐತಿಹಾಸಿಕ ದೇವಸ್ಥಾನಗಳ ಮೂಲಸ್ವರೂಪಕ್ಕೆ ಧಕ್ಕೆ ತರುವುದಾಗಲಿ,ಮಾರ್ಪಾಟು ಮಾಡುವುದಾಗಲಿ ಇಲ್ಲವೆ ಅವುಗಳನ್ನು ವಿರೂಪಗೊಳಿಸುವುದಾಗಲಿ ಭಾರತದ ದಂಡ ಸಂಹಿತೆ ( Indian Penal Code) ನ‌ ನಿಯಮ 295 ರಂತೆ ಶಿಕ್ಷಾರ್ಹ ಅಪರಾಧವಾಗಿದ್ದು ಈ ನಿಯಮವನ್ನು ಉಲ್ಲಂಘಿಸಿದ ಯಾರೇ ಆಗಿರಲಿ” ಗರಿಷ್ಠ ಎರಡು ವರ್ಷಗಳ ಸೆರೆಮನೆವಾಸದಿಂದ ದಂಡಿತರಾಗತಕ್ಕದ್ದು”ಎಂದು ವಿಧಿಸಲಾಗಿದೆ.ಐಪಿಸಿಯ ಈ ನಿಯಮದಂತೆ ಗಬ್ಬೂರಿನ ಸಾರ್ವಜನಿಕ ಆಸ್ತಿಯಾಗಿರುವ,ಐತಿಹಾಸಿಕ ದೇವಸ್ಥಾನಗಳ ಜೀರ್ಣೋದ್ಧಾರ,ಪುನರ್ ವಿನ್ಯಾಸ,ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕಿದೆ.ಸ್ಥಳೀಯ ಸ್ವಯಂ ಆಡಳಿತದ ಘಟಕವಾಗಿರುವ ಗ್ರಾಮ ಪಂಚಾಯತಿಯೂ ಐತಿಹಾಸಿಕ ಸ್ಥಳಗಳ ಸಂರಕ್ಷಣೆಯ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ! ‘ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಅಧ್ಯಾಯ ನಾಲ್ಕರ ನಿಯಮ 58ರಂತೆ ಗ್ರಾಮ ಪಂಚಾಯತಿಯ ಪ್ರಕಾರ್ಯಗಳನ್ನು ನಿರ್ದಿಷ್ಟಪಡಿಸಲಾಗಿದೆ ಮತ್ತು ನಿಯಮ 58(1) ರ ಅನುಸೂಚಿಯಲ್ಲಿ ಗ್ರಾಮ ಪಂಚಾಯತಿಯು ನೆರವೇರಿಸಲೇಬೇಕಾದ ( ಕಡ್ಡಾಯ, ಐಚ್ಛಿಕವಲ್ಲ.ನಿಯಮವು ” ಗ್ರಾಮ ಪಂಚಾಯತಿಯು ಅನುಸೂಚಿ 1 ರಲ್ಲಿ ನಿರ್ದಿಷ್ಟ ಪಡಿಸಿದ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು” ಎನ್ನುತ್ತದೆ) ಪ್ರಕಾರ್ಯಗಳನ್ನು ಪಟ್ಟಿ ಮಾಡಿದ್ದು ಅವುಗಳನ್ನು ಗ್ರಾಮ ಪಂಚಾಯತಿಯು ಕಡ್ಡಾಯವಾಗಿ ನೆರವೇರಿಸಬೇಕಾಗುತ್ತದೆ.ನಿಯಮ‌ 58 ರ ಅನುಸೂಚಿಯ 1 ರ ಸಾಮಾನ್ಯ ಪ್ರಕಾರ್ಯಗಳಡಿ 4 ನೆಯ ಉಪನಿಯಮವು” ಸಾರ್ವಜನಿಕ ಸ್ವತ್ತುಗಳಲ್ಲಿನ ಅತಿಕ್ರಮಣವನ್ನು ತೊಡೆದು ಹಾಕುವುದು” ಅದರ ಕಡ್ಡಾಯ ಪ್ರಕಾರ್ಯ ಎನ್ನುತ್ತದೆ.ನಿಯಮ 58 ರ ಅನುಸೂಚಿ 1 ರ24 ನೆಯ ನಿಯಮವು ಸಮುದಾಯ ಸ್ವತ್ತುಗಳ ನಿರ್ವಹಣೆಯ ಬಗ್ಗೆ ವಿವರಿಸುತ್ತಿದ್ದು ಅದರಲ್ಲಿ ಎರಡು ಉಪನಿಯಮಗಳಿವೆ. 24(1) ಸಮುದಾಯ ಸ್ವತ್ತುಗಳ ನಿರ್ವಹಣೆ.
24(2) ಇತರ ಸಮುದಾಯ ಸ್ವತ್ತುಗಳ ಸಂರಕ್ಷಣೆ ಮತ್ತು ನಿರ್ವಹಣೆಯು ಗ್ರಾಮ ಪಂಚಾಯತಿಯು ಕಡ್ಡಾಯವಾಗಿ ನಿರ್ವಹಿಸಬೇಕಾದ ಪ್ರಕಾರ್ಯಗಳು ಎನ್ನುತ್ತದೆ.ಗಬ್ಬೂರಿನ ಎಲ್ಲ ಐತಿಹಾಸಿಕ ದೇವಸ್ಥಾನಗಳು,ಸ್ಮಾರಕಗಳು,ಪಾರಂಪರಿಕ ಕಟ್ಟಡಗಳು ಸಾರ್ವಜನಿಕ ಸ್ವತ್ತು ಆಗಿದ್ದು ಅವುಗಳ ನಿರ್ವಹಣೆ ಮತ್ತು ಸಂರಕ್ಷಣೆಯು ಗ್ರಾಮ ಪಂಚಾಯತಿಯ ಕರ್ತವ್ಯ.ಗಬ್ಬೂರು ಗ್ರಾಮ ಪಂಚಾಯತಿಯು ಸಂವಿಧಾನದ 49 ನೆಯ ಹಾಗೂ 51 ಎ(ಐ) ಅನುಚ್ಚೇದಗಳನ್ನು ಪಾಲಿಸಲೇಬೇಕಾದ ಸ್ಥಳೀಯಾಡಳಿತ ಸಂಸ್ಥೆ.ಇಂತಹ ಸ್ಥಳೀಯಾಡಳಿತ ಸಂಸ್ಥೆಯು ಐತಿಹಾಸಿಕ ಸ್ಥಳಗಳ ಪುನರ್ ನವೀಕರಣ,ಜೀರ್ಣೋದ್ಧಾರಕ್ಕೆ ಅನುಮತಿ ನೀಡುವುದಾಗಲಿ ಅಥವಾ ಅನಧಿಕೃತ ವ್ಯಕ್ತಿಗಳು ಯಾವುದೇ ದೇವಸ್ಥಾನದ ಜೀರ್ಣೋದ್ಧಾರದ ಹೆಸರಿನಲ್ಲಿ ಮೂಲಲಿಂಗ,ವಿಗ್ರಹದ ಬದಲಾವಣೆ,ಹೊಸ ವಿಗ್ರಹ,ಕೆತ್ತನೆಗಳ ಸ್ಥಾಪನೆ ಮಾಡಿರುವುದನ್ನು ಕಣ್ಮುಚ್ಚಿಕೊಂಡು ಸಮರ್ಥಿಸುವುದಾಗಲಿ ಅದರ ಸಾಂವಿಧಾನಿಕ ಕರ್ತವ್ಯ ಲೋಪವಾಗಿದ್ದು ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು‌ ಇತರ ಸರ್ಕಾರಿ ಸಿಬ್ಬಂದಿಯವರು ಈ ಸಾಂವಿಧಾನಿಕ ಕರ್ತವ್ಯಲೋಪಕ್ಕೆ ಹೊಣೆಗಾರರಾಗಬೇಕಾಗುತ್ತದೆ.

About The Author