ಮೂರನೇ ಕಣ್ಣು : ಗಬ್ಬೂರು– ಯುನೆಸ್ಕೊ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರುವ ಅರ್ಹತೆ ಪಡೆದಿದೆ : ಮುಕ್ಕಣ್ಣ ಕರಿಗಾರ

ಕಾನೂನು ,ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್ .ಕೆ.ಪಾಟೀಲ್ ಅವರು ಲಕ್ಕುಂಡಿಯನ್ನು ಯುನೆಸ್ಕೊದ ಸಾಂಸ್ಕೃತಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲು ಆಸಕ್ತರಾಗಿರುವುದಾಗಿ ಪತ್ರಿಕೆ ಒಂದರಲ್ಲಿ ವರದಿಯಾಗಿದೆ.( ಡೆಕ್ಕನ್ ಹೆರಾಲ್ಡ್ ಅಗಸ್ಟ್ 14,2023 ಸಂಚಿಕೆಯ ಪುಟ 3) ಐವತ್ತು ದೇವಸ್ಥಾನಗಳಿರುವ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲು ಎಲ್ಲ ರೀತಿಯ ಕ್ರಮವಹಿಸುವುದಾಗಿ ತಿಳಿಸಿರುವ ಹೆಚ್.ಕೆ.ಪಾಟೀಲ್ ಅವರ ಇತಿಹಾಸ ಮತ್ತು ಪರಂಪರೆಗಳ ಬಗೆಗಿನ ಕಾಳಜಿಯು ಅಭಿನಂದನಾರ್ಹವಾದುದು.ಆದರೆ ಲಕ್ಕುಂಡಿಗಿಂತಲೂ ಮಿಗಿಲಾದ ಐತಿಹಾಸಿಕ,ಪಾರಂಪರಿಕ ಮಹತ್ವವನ್ನು ಹೊಂದಿರುವ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮವನ್ನು ವಿಶ್ವಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಯಾರೂ ಆಸಕ್ತಿ ವಹಿಸುತ್ತಿಲ್ಲ.’ ಎರಡನೆಯ ಹಂಪೆ’ ಎಂದೇ ಹೆಸರಾಗುವ ಐತಿಹಾಸಿಕ ಮಹತ್ವದ ಗಬ್ಬೂರಿನಲ್ಲಿ ನೂರೈವತ್ತಕ್ಕೂ ಹೆಚ್ಚು ದೇವಸ್ಥಾನಗಳಿವೆ.’ಗಬ್ಬೂರಿನಲ್ಲಿರುವ ದೇವಸ್ಥಾನಗಳನ್ನು ಎಣಿಕೆ ಮಾಡುವ ಉದ್ದೇಶದಿಂದ ‘ಸೊಲಗಿ( ಎರಡುವರೆ ಸೇರು) ಅವರೆ ಕಾಳನ್ನು ಒಂದೊಂದು ದೇವರ ಮುಂದೆ ಇಡುತ್ತ ಬರಲಾಗಿ ಕೊನೆಗೊಂದು ದೇವರಿಗೆ ಕಾಳು ಕಡಿಮೆಯಾಗಿ ಆ ದೇವರು ಸಿಟ್ಟಾಗಿ ಮುಖ ತಿರುಗಿಸಿಕೊಂಡ’ ಎಂದು ಖಾನಾಪುರ ರಸ್ತೆಯ ಬಾಲಾಂಜನೇಯ ದೇವರ ಬಗ್ಗೆ ಹೇಳುವ ಮಾತು ಬಹು ಹಿಂದಿನಿಂದಲೂ ರೂಢಿಯಲ್ಲಿದೆ.ಎರಡುವರೆ ಸೇರು ಅವರೆ ಕಾಳುಗಳು ಎಂದರೆ ಸಾವಿರಾರು ದೇವಸ್ಥಾನಗಳಾಗುತ್ತವೆ.ಇದು ಉತ್ಪ್ರೇಕ್ಷೆಯ ಮಾತು ಎನ್ನಿಸಬಹುದಾದರೂ ಗಬ್ಬೂರಿನಲ್ಲಿ ನೂರೈವತ್ತಕ್ಕೂ ಹೆಚ್ಚು ಐತಿಹಾಸಿಕ ಮಹತ್ವದ ಸ್ಥಳಗಳಿರುವುದಂತೂ ದಿಟವೆ.

ಆದರೆ ಊರವರಲ್ಲಿ ಇತಿಹಾಸ ಮತ್ತು ಪರಂಪರೆಯ ಪ್ರಜ್ಞೆ ಇಲ್ಲವಾದ್ದರಿಂದ ಐತಿಹಾಸಿಕ ಮಹತ್ವದ ಸ್ಥಳಗಳು ಹಾಳಾಗುತ್ತಿವೆ.ಕೆಲವರು ದೇವಸ್ಥಾನಗಳನ್ನು ಮನೆಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.ಮತ್ತೆ ಕೆಲವರು ಪಾರಂಪರಿಕ ಕಟ್ಟಡಗಳನ್ನು ಕೆಡಹಿ ಮಠ,ಸಮಾಧಿಗಳನ್ನು ನಿರ್ಮಿಸಿಕೊಂಡಿದ್ದಾರೆ.ಊರ ನಾಲ್ಕೂ ಕಡೆ ಇದ್ದ ಐತಿಹಾಸಿಕ ಕೋಟೆಯು ಅತಿಕ್ರಮಣದಿಂದ ನಾಶವಾಗಿದ್ದು ಈಗ ಅಲ್ಲಲ್ಲಿ ಸ್ವಲ್ಪ ಮಾತ್ರವೇ ಉಳಿದಿದೆ.ಇನ್ನೂ ಕೆಲವರು ಪ್ರಾಚೀನ ದೇವಸ್ಥಾನ ಒಂದರ ಜೀರ್ಣೋದ್ಧಾರದ ನೆಪದಲ್ಲಿ ಅದರ ಐತಿಹಾಸಿಕ ಮಹತ್ವಕ್ಕೆ ಧಕ್ಕೆ ತಂದಿದ್ದಾರೆ.ಗಬ್ಬೂರಿನ ಪ್ರಮುಖ ಐತಿಹಾಸಿಕ ಮಹತ್ವದ ಸ್ಥಳವಾದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನವನ್ನು ‘ವೆಂಕಟೇಶ್ವರನಿಗೆ ಬಿಸಿನೀರು ಹಾಕಿದರೆ ತಣ್ಣಗೆ ಆಗುತ್ತದೆ’ ಎನ್ನುವ ಪವಾಡದ ಹೆಸರಿನಲ್ಲಿ ಅರ್ಚಕ ಗುಡಿ ಕುಟುಂಬದವರು ಅದನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ.ಅದೇ ದೇವಸ್ಥಾನದ ಹೊರವಲಯದಲ್ಲಿರುವ ಶಿಲಾಶಾಸನವು ಗಬ್ಬೂರಿನ ಐತಿಹಾಸಿಕ ಮಹತ್ವವನ್ನು ಸಾರುತ್ತಿದ್ದು ಆ ದೇವಸ್ಥಾನವು ಸೋಮೇಶ್ವರ ದೇವಸ್ಥಾನ ಎಂದು ಒತ್ತಿಹೇಳುತ್ತಿದೆ.ಗುಡಿ ಕುಟುಂಬದವರು ದೇವರ ಪೂಜೆ ಸೇವೆಗಳ ಮಾಡಲು ಯಾರ ಆಕ್ಷೇಪವೂ ಇಲ್ಲ.ಆದರೆ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ತರುವುದು ಸರಿಯಲ್ಲ.ಇತ್ತೀಚೆಗೆ ಸುಧಾ ಮೂರ್ತಿಯವರು ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ 35 ಲಕ್ಷಗಳ ದೇಣಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಸುಧಾ ಮೂರ್ತಿಯವರಿಗೆ ಇತಿಹಾಸ,ಸಂಸ್ಕೃತಿ ಮತ್ತು ಪರಂಪರೆಗಳ ಪ್ರಜ್ಞೆ ಇದ್ದಂತೆ ಇಲ್ಲ.ಚಾಲುಕ್ಯರ ಕಾಲದಲ್ಲಿ ಗಬ್ಬೂರು’ ಹಿರಿಯಗೊಬ್ಬೂರು’ ಎನ್ನುವ ಸಂಸ್ಕೃತ ವಿದ್ಯಾಪೀಠವಿದ್ದ ಅಗ್ರಹಾರವಾಗಿತ್ತು.ಗೋರಖಪುರ ಮತ್ತು ಗೋಪುರಗ್ರಾಮಗಳು ಗಬ್ಬೂರಿನ ತುಂಬ ಪುರಾತನ ಹೆಸರುಗಳು.

‘ಬಬ್ರುವಾಹನ ಪಟ್ಟಣ’ ಎನ್ನುವ ಹಿರಿಮೆಯ ಸ್ಥಳಪುರಾಣವನ್ನು ಹೊಂದಿರುವ ಗಬ್ಬೂರಿನಲ್ಲಿ ಅರ್ಜುನನು ನೀರಲ್ಲಿ ಮುಳುಗಿ ಪಾತಾಳ ಸೇರಿದ ಎನ್ನಲಾಗುವ ಸುಬ್ಬಣ್ಣಬಾವಿಯು ಒಂದು ವಿಶಿಷ್ಟರಚನೆಯ ಬಾವಿಯಾಗಿದೆ.ಬಹುಶಃ ರಾಣಿಯರ ಸ್ನಾನಬಾವಿ ಆಗಿರುವ ಸುಬ್ಬಣ್ಣಬಾವಿ ಮತ್ತು ಅದಕ್ಕೆ ಸ್ವಲ್ಪ ದೂರದಲ್ಲಿ ಬಬ್ರುವಾಹನನು ಅರ್ಜುನನ ಕುದುರೆಯನ್ನು ಕಟ್ಟಿದ ಕಂಬ ಎನ್ನುವ ಕಂಬ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ವದ ಸ್ಥಳಗಳು.ಗಬ್ಬೂರಿನಿಂದ ಹಂಪೆಗೆ ಸಂಪರ್ಕಿಸುವ ಸುರಂಗ ಮಾರ್ಗವು ಇದ್ದು ಈಗ ಅದು ಅತಿಕ್ರಮಣಕ್ಕೆ ಒಳಗಾಗಿದೆ.ಏಳುಬಾವಿಯಲ್ಲಿರುವ ಐತಿಹಾಸಿಕ ಮಹತ್ವದ ಸ್ಥಳಗಳ ಸ್ವಾಧೀನಕ್ಕಾಗಿ ಕಚ್ಚಾಟ ಪ್ರಾರಂಭವಾಗಿದೆ.ಪುರಾತತ್ತ್ವ ಇಲಾಖೆಯ ಅಧಿಕಾರಿಗಳು ಇತ್ತಕಡೆ ಗಮನಿಸದೆ ಇರುವುದು ಬೇಸರದ ಸಂಗತಿ.

ಧಾರ್ಮಿಕವಾಗಿ ಕಾಳಾಮುಖ,ಕಾಪಾಲಿಕ,ನಾಥ ಪರಂಪರೆಗಳ ನೆಲೆವಿಡಾಗಿರುವ ಗಬ್ಬೂರಿನಲ್ಲಿರುವ ನಾಗರಬಾವಿ,ಸಿದ್ಧರಬಾವಿಯಂತಹ ಹಲವು ಬಾವಿಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.ಊರವರಲ್ಲಿ ಐತಿಹಾಸಿಕ ಪ್ರಜ್ಞೆ ಇಲ್ಲ ಎನ್ನುವುದರ ಜೊತೆಗೆ ಉಳ್ಳವರ ಅಟ್ಟಹಾಸವು ಊರಿನ ಇತಿಹಾಸ ಕೆಟ್ಟುಹೋಗಲು ಕಾರಣವಾಗಿದೆ.ಗಬ್ಬೂರು ಗ್ರಾಮ ಪಂಚಾಯತಿಯು ಕಂಡಕಂಡವರ ಹೆಸರಿನಲ್ಲಿ ಆಸ್ತಿನೊಂದಣಿ ಮಾಡಿದ ಪರಿಣಾಮ ಊರಿನ ಶ್ರೀಮಂತರುಗಳೇನಕರು ಪಾರಂಪರಿಕ ತಾಣಗಳನ್ನು ಕೆಡವಿ ಮನೆ- ಮಹಲುಗಳನ್ನು ಕಟ್ಟಿಕೊಂಡಿದ್ದಾರೆ,ಸರ್ಕಾರಿ ಜಾಗವನ್ನು ಅತಿಕ್ರಮಿಸಿದ್ದಾರೆ.ಸುಸಂಸ್ಕೃತ ಮನಸ್ಸಿನವರಾದ ಎಚ್ ಕೆ ಪಾಟೀಲರು ಗಬ್ಬೂರಿನ ಕಡೆ ಗಮನಹರಿಸಿದರೆ ಕರ್ನಾಟಕದ ಇತಿಹಾಸಕ್ಕೆ ಮಹತ್ವದ ಕೊಡುಗೆ ನೀಡುವ ಪಾರಂಪರಿಕ ತಾಣ ಒಂದು ಪ್ರಕಟಗೊಳ್ಳುತ್ತದೆ.ಗಬ್ಬೂರಿನ ಪ್ರಭಾವಿಗಳು ಅತಿಕ್ರಮಿಸಿರುವ ದೇವಸ್ಥಾನ,ಸ್ಮಾರಕ,ಪಾರಂಪರಿಕ ಸ್ಥಳಗಳನ್ನು ತೆರವುಗೊಳಿಸಿ ಅತಿಕ್ರಮಿತ ಸ್ಥಳಗಳಲ್ಲಿ ಉತ್ಖನನ ಮಾಡಿದರೆ ಅದ್ಭುತ ಐತಿಹಾಸಿಕ ನಗರ ಒಂದು ಹೊರಬರಲಿದೆ.

ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳುವಳಿಯಲ್ಲಿ ಅಲ್ಲಮ ಪ್ರಭುಗಳ ನಂತರ ಅತಿಹೆಚ್ಚು ಬೆಡಗಿನ ವಚನಗಳನ್ನು ರಚಿಸಿರುವ ಹಿರಿಮೆಗೆ ಪಾತ್ರರಾಗಿರುವ ಬಿಬ್ಬಿಬಾಚರಸರ ಯೋಗಭೂಮಿಯೂ ಗಬ್ಬೂರು.ಆದ್ಯ ವಚನಕಾರ ಜೇಡರ ದಾಸಿಮಯ್ಯನ ಷರತ್ತುಗಳನ್ನು ಪೂರೈಸಿ ಅವನನ್ನು ಮದುವೆಯಾದ ದುಗ್ಗಳೆಯೂ ಗಬ್ಬೂರಿನವಳೆ.ಜೇಡರ ದಾಸಿಮಯ್ಯ ಗಬ್ಬೂರಿನ ರಾಮನಾಥ ದೇವಸ್ಥಾನದಲ್ಲಿ ಕೆಲಕಾಲ ತಂಗಿದ್ದ.ರಾಮನಾಥ ದೇವಸ್ಥಾನವನ್ನು ಮಸೀದೆಯನ್ನಾಗಿ ಪರಿವರ್ತಿಸಲಾಗಿದೆ.ಚಾಲುಕ್ಯರ ಕಾಲದ ಕೆಲವು ಬಸದಿಗಳೂ ಗಬ್ಬೂರಿನಲ್ಲಿವೆ.

ಗಬ್ಬೂರಿನ ಯುವಕರು ಇತ್ತೀಚೆಗೆ ಗಬ್ಬೂರನ್ನು ತಾಲೂಕಾ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಇಳಿದಿದ್ದಾರೆ.ತಾಲೂಕಾ ಕೇಂದ್ರಕ್ಕಿಂತ ಗಬ್ಬೂರು ಯುನೆಸ್ಕೊ ಪಾರಂಪರಿಕ ತಾಣವಾಗಿ ಮಾರ್ಪಟ್ಟರೆ ಗಬ್ಬೂರು ವಿಶ್ವಪ್ರಸಿದ್ಧಿಯನ್ನು ಪಡೆಯಲಿದೆ.ತಾಲೂಕಿಗಾಗಿ ಹೋರಾಡುವುದಕ್ಕಿಂತ ಗಬ್ಬೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಪ್ರಯತ್ನಿಸುವುದು ಗಬ್ಬೂರನ್ನು ಯುನೆಸ್ಕೊ ಪಾರಂಪರಿಕ ಸ್ಥಳ ಪಟ್ಟಿಯಲ್ಲಿ ಸೇರಿಸುವ ಮೊದಲ ಪ್ರಯತ್ನವಾಗಬಹುದು.ಪ್ರಾಚ್ಯ ಇಲಾಖೆ ಈಗಲಾದರೂ ಗಬ್ಬೂರಿನ ಐತಿಹಾಸಿಕ ಮಹತ್ವದತ್ತ ಗಮನಹರಿಸುವುದೆ ಎಂದು ಕಾದು ನೋಡಬೇಕಿದೆ.ಸುಸಂಸ್ಕೃತಮನಸ್ಸಿನವರಾದ ಎಚ್ ಕೆ ಪಾಟೀಲ್ ಅವರ ಗಮನಸೆಳೆಯಲು ಈ ಲೇಖನ ಬರೆದಿದ್ದೇನೆ.

About The Author