ಮಹಾಶೈವೋಪದೇಶ –೧೦ : ದೀಕ್ಷೆ ಗಳು : ಮುಕ್ಕಣ್ಣ ಕರಿಗಾರ

ಕೈಲಾಸದಧಿಪತಿಯು ತನ್ನ ಅರ್ಧಾಂಗಿನಿಯಾದ ಪರಾಶಕ್ತಿಯು ಕೇಳಬಹುದಾದ ಪ್ರಶ್ನೆಯ ಬಗ್ಗೆ ಕುತೂಹಲಮನಸ್ಕನಾಗಿರುವನು.ಪರಬ್ರಹ್ಮೆಯು ಪರಶಿವನನ್ನು ಪ್ರಶ್ನಿಸುವಳು; ‘ ಜಗದೊಡೆಯನೆ,ಮಂತ್ರಗಳ ಪ್ರಕಾರಗಳನ್ನು ಹೇಳಿದಿರಿ.ಮಂತ್ರವನ್ನು ಉಪದೇಶಿಸುವ ಬಗೆಯಾಗುವುದು? ಗುರುವು ತನ್ನ ಶಿಷ್ಯರಿಗೆ ಹೇಗೆ ಬೋಧಿಸುವನು,ತಿಳಿಸಿ’ ಎಂದು ಪ್ರಾರ್ಥಿಸಲು ವಿಶ್ವೇಶ್ವರ ಶಿವನು‌ ನುಡಿಯಲುಪಕ್ರಮಿಸುವನು ,’ ದೇವಿ ವಿಶ್ವೇಶ್ವರಿ ದುರ್ಗೆಯೆ ,ದೀಕ್ಷೆಯ ಕುರಿತಾದ ನಿನ್ನ ಈ ಪ್ರಶ್ನೆಯು ಆತ್ಮಪಯಣಿಗರಾದ ಗುರುಶಿಷ್ಯರುಗಳಿಗೆ ಉಪಯುಕ್ತವಾದ ಪ್ರಶ್ನೆಯಾದ್ದರಿಂದ ವಿವರಿಸುವೆನು ಕೇಳು.ಜಗದಂಬೆಯೆ, ಲೋಕದಲ್ಲಿ ಜನರು ಅವರವರ ಮತಾನುಸಾರ ದೀಕ್ಷಾಕ್ರಮಗಳನ್ನು ರೂಢಿಸಿಕೊಂಡಿಹರು.ಮತಕ್ಕನುಗುಣವಾದ ದೀಕ್ಷಾಕ್ರಮವನ್ನಾಚರಿಸುತ್ತಿಹರು.ಆದರೆ ನನ್ನ ಅನುಗ್ರಹವನ್ನು ಸಂಪಾದಿಸಲು ನೆರವಾಗುವ ಬಹುಪುರಾತನ ಕಾಲದಿಂದಲೂ ಋಷಿ ಮುನಿಗಳು,ಸಿದ್ಧರುಗಳು ಆಚರಿಸಿದ ರೂಢಿಯಲ್ಲಿರುವ ಮೂರು ಮುಖ್ಯಪ್ರಕಾರಗಳುಂಟು,ಸ್ಪರ್ಶದೀಕ್ಷಾ,ದೃಗ್ದೀಕ್ಷಾ ಮತ್ತು ಧ್ಯಾನದೀಕ್ಷೆಗಳೆಂದು ಅವುಗಳ ಹೆಸರು.

‘ ದೇವಿ ಪಾರ್ವತಿಯೆ ಸ್ಪರ್ಶದೀಕ್ಷೆಯನ್ನು ವಿವರಿಸುವೆನು,ಕೇಳು;

ಯಥಾ ಪಕ್ಷೀಸ್ವಪಕ್ಷಾಭ್ಯಾಂ ಶಿಶೂನ್ ಸಂವರ್ಧಯೈಚ್ಛನೈಃ/
ಸ್ಪರ್ಶದೀಕ್ಷೋಪದೇಶಸ್ತು ತಾದೃಶಃ ಕಥಿತ ಪ್ರಿಯೇ//

ಯಾವರೀತಿಯಲ್ಲಿ ಪಕ್ಷಿಯು ತನ್ನ ಚಿಕ್ಕಮರಿಗಳನ್ನು ಪ್ರೀತಿ,ವಿಶ್ವಾಸಗಳಿಂದ ಲಾಲನೆ ಪಾಲನೆಯನ್ನು ಮಾಡುವುದೋ ಅದೇರೀತಿಯಲ್ಲಿ ಗುರುವು ಸ್ಪರ್ಶದೀಕ್ಷೆಯಿಂದ ತನ್ನ ಶಿಷ್ಯನನ್ನು ಅನುಗ್ರಹಿಸುವನು.

ಪ್ರಣವಾರ್ಥವಾಚಕಳೆ,ಈಗ ದೃಗ್ದೀಕ್ಷೆಯನ್ನು ವಿವರಿಸುವೆನು ಕೇಳು,

ಸ್ವಾಪತ್ಯಾನಿ ಯಥಾ ಕೂರ್ಮೀವೀಕ್ಷಣೇನೈವ ಪೋಷಯೇತ್/
ದೃಗ್ದೀಕ್ಷಾಖ್ಯೋಪದೇಶಸ್ತು ತಾದೃಶಃ ಕಥಿತಪ್ರಿಯೇ//

ಆಮೆಯು ತನ್ನ ದೃಷ್ಟಿಮಾತ್ರದಿಂದಲೇ ಹೇಗೆ ತನ್ನ ಮರಿಗಳ ಪಾಲನೆ- ಪೋಷಣೆಗಳನ್ನು ಮಾಡುವುದೋ ಅದೇರೀತಿಯಲ್ಲಿರುತ್ತದೆ ದೃಗ್ದೀಕ್ಷೆಯು.

ಮಂತ್ರರೂಳೆ,ಇನ್ನು ಮೂರನೆಯದಾದ ಧ್ಯಾನದೀಕ್ಷೆಯನ್ನು ವಿವರಿಸುವೆನು ಕೇಳು;

ಯಥಾ ಮತ್ಸೀ ಸ್ವತನಯಾನ್ ಧ್ಯಾನ ಮಾತ್ರೇಣ ಪೋಷಯೇತ್/
ವೇಧದೀಕ್ಷೋಪದೇಶಸ್ತು ಮನಸಃ ಸ್ಯಾತ್ತಥಾವಿಧಿಃ//

ಮೀನು ತನ್ನ ಮರಿಗಳನ್ನು ಹೇಗೆ ಧ್ಯಾನ ಮಾತ್ರದಿಂದಲೇ ಪಾಲನೆ- ಪೋಷಣೆ ಮಾಡುವುದೋ ಆ ತೆರನಾಗಿ ಗುರುವು ಧ್ಯಾನದೀಕ್ಷಾ ಮಾರ್ಗದಿಂದ ಶಿಷ್ಯನನ್ನು ಉದ್ಧರಿಸುವನು’.

ದೀಕ್ಷೆಯನ್ನು ನೀಡುವ ಗುರುಗಳು,ದೀಕ್ಷೆಯನ್ನು ಪಡೆಯಲಪೇಕ್ಷಿಸುವ ಶಿಷ್ಯರು‌ ಪರಶಿವನು ಪಾರ್ವತಿದೇವಿಗೆ ಉಪದೇಶಿಸಿದ ಈ ದೀಕ್ಷಾಭೇದಗಳನ್ನು ಅರಿತುಕೊಳ್ಳಬೇಕು.ದೀಕ್ಷೆಯು ಗುರುವು ಶಿಷ್ಯನನ್ನು ಉದ್ಧರಿಸಿ,ಆಧ್ಯಾತ್ಮಿಕ ಪಥದಲ್ಲಿ ಅವನನ್ನು ಮುನ್ನಡೆಸುವ ಕ್ರಮವು.ಲೋಕದಲ್ಲಿ ಜನರು ಅವರವರ ಮತಗಳಿಗನುಗುಣವಾಗಿ ದೀಕ್ಷಾಕ್ರಮವನ್ನು ಕಲ್ಪಿಸಿಕೊಂಡಿಹರು ಎನ್ನುವ ಪರಶಿವನು ಬಹುಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಸ್ಪರ್ಶದೀಕ್ಷಾ,ದೃಗ್ದೀಕ್ಷಾ ಮತ್ತು ಧ್ಯಾನದೀಕ್ಷೆಗಳೆಂಬ ಮೂರು ಪ್ರಕಾರದ ದೀಕ್ಷಾಕ್ರಮಗಳನ್ನು ಲೋಕಕಲ್ಯಾಣಾರ್ಥವಾಗಿ ಪಾರ್ವತಿಯ ಮೂಲಕ ಉಪದೇಶಿಸಿರುವನು.

ಸ್ಪರ್ಶದೀಕ್ಷೆಯು ಗುರುವು ಶಿಷ್ಯನಿಗೆ ಅನುಗ್ರಹಿಸುವ ನೇರದೀಕ್ಷೆಯಾಗಿದೆ.ಪಕ್ಷಿಯು ತನ್ನ ಮರಿಯನ್ನು ತನ್ನ ರೆಕ್ಕೆಯಲ್ಲಿಟ್ಟುಕೊಂಡು ಪೋಷಿಸುವಂತೆ ಗುರುವು ಶಿಷ್ಯನನ್ನು ತನ್ನ ಬಳಿ ಕರೆದು ಅವನ ಕರ್ಣದಲ್ಲಿ ಮಂತ್ರೋಪದೇಶ ಮಾಡಿ ಅವನ ಶಿರದ ಮೇಲೆ ತನ್ನ ವರದಹಸ್ತವನ್ನಿಟ್ಟು ಅನುಗ್ರಹಿಸುವನು.ಗುರುವು ಶಿಷ್ಯನ ಶಿರ,ಕರ್ಣಾದಿಗಳನ್ನು ಸ್ಪರ್ಶಿಸಿ ಉಪದೇಶಿಸುವುದರಿಂದ ಇದು ಸ್ಪರ್ಶದೀಕ್ಷೆ ಎನ್ನಿಸಿಕೊಂಡಿದ್ದು ಈ ದೀಕ್ಷಾಕ್ರಮವನ್ನೇ ಬಹಳಷ್ಟು ಜನರು ಅನುಸರಿಸುತ್ತಿದ್ದಾರೆ.

ದೃಗ್ದೀಕ್ಷೆಯು ಶ್ರೀಗುರುವು ತನ್ನ ಶಿಷ್ಯನನ್ನು ಅನುಗ್ರಹಿಸುವ ವಿಶೇಷದೀಕ್ಷಾಕ್ರಮವಾಗಿದ್ದು ಇಲ್ಲಿ ಗುರುವು ಶಿಷ್ಯನನ್ನು ಸ್ಪರ್ಶಿಸದೆ ತನ್ನ ಅನುಗ್ರಹದೃಷ್ಟಿಯನ್ನು ಶಿಷ್ಯನತ್ತ ಬೀರಿ ಅವನನ್ನು ಉದ್ಧರಿಸುವನು.ತಾಯಿ ಆಮೆಯು ತನ್ನ ಮರಿಗಳತ್ತ ತನ್ನ ವಾತ್ಸಲ್ಯದೃಷ್ಟಿಯನ್ನು ಬೀರುವುದರಿಂದಲೇ ಮರಿಗಳ ಹೊಟ್ಟೆ ತುಂಬುತ್ತದೆ.ತಾಯಿ‌ ಆಮೆಯ ಕಣ್ಣಿನಲ್ಲಿ ಅಂತಹ ಶಕ್ತಿ ಇರುತ್ತದೆ.ಹಾಗೆಯೇ ಸಮರ್ಥಗುರುವು ತನ್ನ ಕಣ್ಣೋಟದಿಂದಲೇ ತನ್ನ ಶಿಷ್ಯನನ್ನು ಅನುಗ್ರಹಿಸುವನು.ತನ್ನದೃಷ್ಟಿಯಿಂದಲೇ ಶಿಷ್ಯನನ್ನು ಶುದ್ಧನನ್ನಾಗಿಸಿ ತನ್ನ ದೃಷ್ಟಿಮೂಲಕವಾಗಿಯೇ ಶಿಷ್ಯನಿಗೆ ಬೇಕಾದ ಮಂತ್ರ,ಯೋಗಸಾಧನೆ ಕ್ರಮಗಳನ್ನು ಶಿಷ್ಯನದೇಹದಲ್ಲಿ ಪ್ರವಹಿಸುವಂತೆ ಮಾಡಿ ಶಿಷ್ಯನನ್ನು ಮುಕ್ತನನ್ನಾಗಿಸುವನು ಅನಿಮಿಷದೃಷ್ಟಿಯನ್ನಳವಡಿಸಿಕೊಂಡ ಯೋಗಿಗುರುವು.

ಧ್ಯಾನದೀಕ್ಷೆಯೂ ಸಹ ಒಂದು ವಿಶೇಷದೀಕ್ಷೆಯಾಗಿದ್ದು ನದಿ ಸರೋವರದಲ್ಲಿರುವ ತಾಯಿ ಮೀನುಗಳು ತಮ್ಮ ಮರಿಗಳಿಗೆ ಎದೆಹಾಲನ್ನು ಉಣಿಸುವುದಿಲ್ಲ ಇಲ್ಲವೆ ಆಹಾರವನ್ನು ಸಣ್ಣ ಸಣ್ಣ ತುಣುಕುಗಳನ್ನಾಗಿಸಿ ಮರಿಗಳಿಗೆ‌ ಉಣಬಡಿಸುವುದಿಲ್ಲ.ತನ್ನ ಮರಿಗೆ ಹಸಿವಾಗಿದೆ ಎಂದರಿತ ತಾಯಿ‌ಮೀನು ತನ್ನ ಮರಿಯನ್ನು ಸ್ಮರಿಸಿದರೆ ಇಲ್ಲವೆ ನೆನೆದರೆ ಮರಿಮೀನಿನ ಹೊಟ್ಟೆತುಂಬುತ್ತದೆ.ಹಾಗೆಯೇ ಗುರುವು ತನ್ನ ಶಿಷ್ಯನನ್ನು ಸ್ಮರಿಸಿಕೊಳ್ಳುವ ಮೂಲಕ ಅವನಲ್ಲಿ ಆತ್ಮಭಾವವನ್ನು ಜಾಗೃತಗೊಳಿಸುವನು.ಶಿಷ್ಯನು ಎಷ್ಟೇ ದೂರದಲ್ಲಿರಲಿ ಗುರು ಕರುಣೆಯು ಸ್ಮರಣೆಯ ಮೂಲಕ ಶಿಷ್ಯನನ್ನು ತಲುಪಿ ಅವನನ್ನು ಉದ್ಧರಿಸುತ್ತದೆ.ತನ್ನನ್ನು ಗುರುವೆಂದು ನಂಬಿದವನನ್ನು ಸಮರ್ಥನಾದ ಗುರುವು ನೇರವಾಗಿ ಬೋಧಿಸದೆ ಇದ್ದರೂ ಅಂತರಂಗದಲ್ಲಿ ಅವನನ್ನು ಶಿಷ್ಯನೆಂದು ಪರಿಗ್ರಹಿಸಿ ಅವನಿಗೆ ಬೇಕಾದ ಮಂತ್ರ,ಶಕ್ತಿ,ಯೋಗಸಾಮರ್ಥ್ಯವನ್ನು‌ ಕರುಣಿಸುವನು ತಾನಿದ್ದ ಸ್ಥಳದಲ್ಲಿಯೇ ಶಿಷ್ಯನನ್ನು ಸ್ಮರಿಸುವ ಮೂಲಕ.

ಸ್ಪರ್ಶದೀಕ್ಷೆಯು ಸಾಮಾನ್ಯದೀಕ್ಷೆಯಾಗಿದ್ದು ಅದನ್ನು ಲೋಕಸಾಮಾನ್ಯಗುರುಗಳೆನ್ನಿಸಿಕೊಂಡವರೆಲ್ಲರೂ ಮಾಡಬಲ್ಲರು.ಆದರೆ ದೃಗ್ದೀಕ್ಷಾ ಮತ್ತು ಧ್ಯಾನದೀಕ್ಷೆಗಳನ್ನು ಬಹು ಎತ್ತರದ ಯೋಗಸಾಧನೆಯನ್ನು ಮಾಡಿ,ಸಿದ್ಧಿಗಳನ್ನು ಕೈವಶಮಾಡಿಕೊಂಡು,ಪ್ರಕೃತಿಯ ಮೇಲೆ ಪ್ರಭುತ್ವವನ್ನು ಸಾಧಿಸಿದ ಯೋಗಿಶ್ರೇಷ್ಠರುಗಳು ಮಾತ್ರ ನೀಡಲು ಸಾಧ್ಯ.ಅಂತಹ ಅಪರೋಕ್ಷಜ್ಞಾನಿಗಳನ್ನು ಗುರುಗಳನ್ನಾಗಿ ಪಡೆದ ಶಿಷ್ಯರುಗಳೇ ಧನ್ಯರು.ಯೋಗಿಗಳು ತಮ್ಮ ಯೋಗಸಾಧನೆಯ ಸಿದ್ಧಿಯನ್ನೇ ತಮ್ಮ ಶಿಷ್ಯರದೇಹದಲ್ಲಿ ಪ್ರವಹಿಸುವಂತೆ ಮಾಡುವುದರಿಂದ ದೃಗ್ದೀಕ್ಷೆ ಮತ್ತು ಧ್ಯಾನದೀಕ್ಷೆಗಳು‌ ಲೋಕೋತ್ತರದೀಕ್ಷೆಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ.ಸಮರ್ಥನಾದ ಗುರುವು ತನಗೆ ಸರಿಯಾದ ಶಿಷ್ಯನನ್ನು ಗುರುತಿಸಿ ಅವನನ್ನು ವಿಶೇಷವಾಗಿ ಅನುಗ್ರಹಿಸುವ ದೀಕ್ಷಾಕ್ರಮ ವಿಶೇಷಗಳೆರಡು ದೃಗ್ದೀಕ್ಷಾ ಮತ್ತು ಧ್ಯಾನದೀಕ್ಷೆಗಳು.ದೃಗ್ದೀಕ್ಷಾ ಮತ್ತು ಧ್ಯಾನದೀಕ್ಷೆಗಳನ್ನು ಅನುಗ್ರಹಿಸುವ ಯೋಗಿಶ್ರೇಷ್ಠರುಗಳು ಶಿಷ್ಯನಲ್ಲಿ ಅಂತಃಸ್ಫುರಣಸಾಮರ್ಥ್ಯವನ್ನು ಜಾಗೃತಗೊಳಿಸಿ ಆ ಮೂಲಕ ಅವನಿಗೆ ಬೇಕಾದ ಮಂತ್ರ,ಸಾಧನಾ ಕ್ರಮವನ್ನು ಉಪದೇಶಿಸುವವರು.

About The Author